ಸ್ಟಾರ್ಟಪ್ ಇಂಡಿಯಾದ ತರಕಾರಿ ಒಯ್ಯಾರಿ.......

 ಸ್ಟಾರ್ಟಪ್ ಇಂಡಿಯಾದ ತರಕಾರಿ ಒಯ್ಯಾರಿ ಯೋಜನೆ

 ಹಾಸ್ಯ ಲೇಖನ - ಅಣುಕು ರಾಮನಾಥ್

‘ಸ್ಟಾರ್ಟಪ್ ಇಂಡಿಯಾ’ದ ಅಂಗವಾಗಿ ಹೊಸದೊಂದು ಜಾಹೀರಾತು ಕಂಪನಿ ಆರಂಭಿಸಲು ಸೀನುವಿಗೆ ಕರೆ ಬಂದಿತು. ‘ಮಾರುಕಟ್ಟೆಯ ತರಕಾರಿಗಳನ್ನು ಮಾರಲು ಜಿಂಗಲ್ಸ್ ಹಾಗೂ ಸ್ಲೋಗನ್‌ಗಳನ್ನು ಬರೆಯಿರಿ’ ಎಂದು ಜಾಬ್ ಡಿಸ್ಕ್ರಿಪ್ಷನ್ ನೀಡಿದರು. ಯುವ, ಮಧ್ಯಮ ಮತ್ತು ಹಿರಿಯ ವಯಸ್ಸಿನ ಗಂಡಸರನ್ನೇ ಮನಸ್ಸಿನಲ್ಲಿಟ್ಟುಕೊಂಡು ಜಾಹೀರಾತುಗಳನ್ನು ತಯಾರಿಸಲು ಆದೇಶ ನೀಡಲಾಯಿತು. ಸೀನು ಕಾರ್ಯೋನ್ಮುಖನಾದ. ಒಂದು ವಾರ ಕಳೆಯುವಷ್ಟರಲ್ಲಿ ತಾನು ಬರೆದದ್ದನ್ನೆಲ್ಲ ತೆಗೆದುಕೊಂಡು ಸ್ಟಾರ್ಟಪ್ ನಿರ್ದೇಶಕರ ಮುಂದಿರಿಸಿದ.

ಹಿಮದ ಬಿಳಿಯ ವಸ್ತ್ರ ಧರಿಸಿ

ಹೀರೋಯಿನ್‌ನ ಘಾಟು ಮೆರೆಸಿ

ಹೃದಯ ಬಡಿತ ತಪ್ಪಿದವರ

ಹೃದಯ ಸರಿಪಡಿಸುವ ಚೆಲುವೆ

ಕಾದಿರುವಳು ನಿಮ್ಮನೆ; ಕೈಹಿಡಿದು ಒಯ್ಯಿರಿ ಥಟ್ಟನೆ

ಎಂಬುದು ಮೊದಲ ಜಿಂಗಲ್ ಆಗಿತ್ತು. ‘ಯಾವುದರ ಬಗ್ಗೆ?’ ಪ್ರಶ್ನಿಸಿದರು ನಿರ್ದೇಶಕರು.

‘ಬೆಳ್ಳುಳ್ಳಿ ಸರ್’

ಮತ್ತೊಮ್ಮೆ ಕಣ್ಣಾಡಿಸಿದರು. ‘ಇದಕ್ಕೆ ಮಾಡೆಲ್ ಯಾರು?’

‘ಕಂಗನಾ ರನಾವಟ್’

‘ಏಕೆ?’

‘ಎಷ್ಟೇ ದೊಡ್ಡ ಮನುಷ್ಯರನ್ನಾದರೂ ಕೇರ್ ಮಾಡದೆ ಟೀಕಿಸಿ ಘಾಟೆಬ್ಬಿಸುವ ಗುಣ ಇರುವುದರಿಂದ ಆಕೆಯೇ ಸರಿ’

‘ಗಾರ್ಲಿಕ್ಕು ಈಸ್ ಗುಡ್ ಫಾರ್ ಹಾರ್ಟು ಅನ್ನೋದನ್ನ ಎಷ್ಟು ಚೆನ್ನಾಗಿ ವಿವರಿಸಿದ್ದೀರಿ! ಕಂಗನಾ ಆಲ್ಸೋ ಈಸ್ ಎ ಗುಡ್ ಚಾಯ್ಸ್ ’ ಎಂದು ಸಮ್ಮತಿಸುತ್ತಾ ಎರಡನೆಯದನ್ನು ಕೈಗೆತ್ತಿಕೊಂಡರು.

ಹೊರಗೆಲ್ಲ ಹಸಿರಿದ್ದು ಒಳಗೆಲ್ಲ ಕಹಿಯಿದ್ದು 


ಕಿರಿಕಿರಿಯು ಒಳಗಿರಲು ಗೊಜ್ಜುಗೊಜ್ಜಾಗಿಸಿದರೆ

ಕರುಳಿಗೂ ಚಂದ, ಮನಸಿಗೂ ಮುದ

‘ಇದು ಹಾಗಲಕಾಯಿಗೆ ತಾನೆ?’ ಕೇಳಿದರು ನಿರ್ದೇಶಕರು.

‘ಹೌದು’

‘ಮಾಡೆಲ್?’

“ಓಂಪುರಿ. ಕೆಲವು ಪಾತ್ರಗಳ ಆಧಾರದ ಮೇಲೆ ಅವರ ಮುಖ, ಮನಸ್ಸು ಎರಡೂ ಹಾಗಲಕಾಯಿಗೆ ಹೊಂದುತ್ತದೆ’

‘ಎನಿ ಸೆಕೆಂಡ್ ಚಾಯ್ಸ್?’

‘ಶತ್ರುಘನ್ ಸಿನ್ಹಾ ಆಗಬಹುದು. ಆದರೆ ರಾಜಕೀಯದ ಕಿರಿಕಿರಿ...’

‘ಓಂಪುರಿ ಇಟ್ ಶಲ್ ಬಿ’ ಎನ್ನುತ್ತಾ ಮುಂದಿನ ಜಿಂಗಲ್‌ನತ್ತ ಕಣ್ಣು ಹಾಯಿಸಿದರು.

ಕುರುಸಭೆಯ ದ್ಯೂತದಲ್ಲಿ ಸೆಳೆದು ತಂದ ಹೆಣ್ಣಿನಂತೆ

ಪರಪರನೆ ಸೆಳೆವರಿವಳ ಪದರ ಪದರ ವಸ್ತುಗಳನು

ಹರಿವುದಯ್ಯೊ ಅಶ್ರುಧಾರೆ ನೋಡುವವರ ಕಂಗಳಲ್ಲಿ

ಕರೆತನ್ನಿರೊ ನಿಮ್ಮ ಮನೆಗೆ ಕಲೆಸಿಕೊಳ್ಳಿ ಅಡುಗೆಯಲ್ಲಿ

ಪಾಂಚಾಲಿಯ ಘಾಟಿವಳದು ಪಂಚರೊಡನೆ ಹಂಚಿಕೊಳಲು

ಕೊಂಚ ಕೂಡ ವಿರೋಧಿಸದೆ ಹೊಂದಿಕೊಳುವಳೋ

ಎಂಬ ಜಿಂಗಲ್ಸ್ ಓದಿದ ಅವರ ಹುಬ್ಬು ಮೇಲೇರಿತು. ‘ವಿವರಣೆ ಬೇಕು’ ಎಂದರು.

‘ಈರುಳ್ಳಿ ಸರ್. ಪದರ ಪದರ ಬಿಡಿಸ್ತೀವಿ. ಹಚ್ಚೋವಾಗ ಕಣ್ಣೀರು ಸುರಿಯತ್ತೆ. ಹೊಟೇಲುಗಳಲ್ಲಿ ನಾರ್ತ್ ಇಂಡಿಯನ್ ಆರ್ಡರ್ ಮಾಡಿದ ನಾಲ್ಕೈದು ಜನಕ್ಕೆ ಒಂದು ಪ್ಲೇಟಿನಲ್ಲಿ ಈರುಳ್ಳಿ ಇಡ್ತಾರೆ. ಈರುಳ್ಳೀನೂ ಆಬ್ಜೆಕ್ಟ್ ಮಾಡಲ್ಲ, ಪಡೆದವರೂ ಆಬ್ಜೆಕ್ಟ್ ಮಾಡಲ್ಲ. ಈರುಳ್ಳಿಯದು ತರಕಾರಿಗಳಲ್ಲೇ ಸೊಗಸಾದ ರೂಪ, ಗುಣ’

‘ಮಾಡೆಲ್?’

‘ಕ್ಲಬ್ ಡ್ಯಾನ್ಸಿಗೂ ಸೈ, ಡೀಸೆಂಟ್ ನೃತ್ಯಕ್ಕೂ ಸೈ ಎಂದಿದ್ದ ಶ್ರೀದೇವಿ ಸರ್’

ನಿರ್ದೇಶಕರಿಗೆ ತಮಿಳು, ತೆಲುಗು ಸಿನೆಮಾಗಳೇ ಮನಃಪಟಲದಲ್ಲಿ ಹಾದುಹೋದಂತಾಯಿತು. ‘ಅಪ್ರೂವ್ಡ್ ವಿತೌಟ್ ಸೆಕೆಂಡ್ ಥಾಟ್’ ಎನ್ನುತ್ತಾ ಮುಂದಿನ ಜಿಂಗಲ್‌ನತ್ತ ದೃಷ್ಟಿ ಹರಿಸಿದರು.

ಕಾಶ್ಮೀರದ ಸುಂದರಿಯರ ಕೆನ್ನೆಗಳನು ನೆನಪಿಸುವಳೆ

ಹಮ್ಮೀರರು ಸಾಲಿಡ್ ಆಗಲು ಸಲಾಡಲ್ಲಿ ಬೆರೆಯುವವಳೆ

ಚಿಮ್ಮಿ ರಸವ ಬೇಲು ಪಾನಿ ಸೇವ್ ಪುರಿಯಲಿ ಸಲ್ಲುವವಳೆ

ಹೊಮ್ಮಿ ಹುಳಿಯ ಹುಣಿಸೆಯನ್ನು ಮೂಲೆಯತ್ತ ಸರಿಸುವವಳೆ

ಸಾಸ್ ಕೆಚಪ್ಪು ಸೂಪಿನಲ್ಲು ಸೊಗದಿ ಮಿಳಿತವಾದವಳೆ

ಬೇಸ್ ನೀನು ಅಡುಗೆಗೆಲ್ಲ ಮೆದು ಮೃದು ಮೈಯವಳೆ

‘ಟೊಮೆಟೊ?’ ಎಂದರು ನಿರ್ದೇಶಕರು. ಉದ್ದುದ್ದ ತಲೆಯಾಡಿಸಿದ ಸೀನು.

‘ಮಾಡೆಲ್?’

‘ರಾಧಿಕಾ ಆಗಬಹುದೆ ಸಾರ್?’

‘ಊಹೂಂ. ಕೆಂಪು ಸಾಲದು’

‘ಮಲೈಕಾ ಅರೋರಾ?’

‘ಮಲೈ ಕೋಫ್ತಾ, ಮಲೈ ಸ್ಯಾಂಡ್‌ವಿಚ್‌ಗಳಿಗೆ ಅವಳು ಸೂಕ್ತವಾಗಬಹುದು. ಬಿಳುಪು ಇಲ್ಲಿ ಸೂಕ್ತವಲ್ಲ. ಹೌ ಎಬೌಟ್ ಮಲ್ಲಿಕಾ ಶೆರಾವತ್?’

ಯಾವುದೋ ಕತ್ತಲೆಯ ದೃಶ್ಯದಲ್ಲಿ ಕೆಂಪುಕೆಂಪಾಗಿ ಕಾಣುತ್ತಿದ್ದ ಮಲ್ಲಿಕಾಳ ದೃಶ್ಯ ಸೀನುವಿನ ಕಣ್ಣ ಮುಂದೆ ಸುಳಿದಾಡಿತು. ಅವಳೇ ಮಾಡೆಲ್ ಎಂದು ಎರಡು ತಲೆಗಳೂ ಸಮ್ಮತಿಸಿದವು. ನಿರ್ದೆಶಕರ ಕಣ್ಣು ಮುಂದಿನ ಜಿಂಗಲ್‌ನತ್ತ ಸಾಗಿತು.

ರೆಡ್ಡು ಲೆಗ್ಗಿನ್ಸ್ ಶೇಪಿನಲ್ಲಿ ಫುಡ್ಡು ಐಟಮ್ಸ್ ಸಾಲಿನಲ್ಲಿ

ಗುಡ್ಡು ಫಾರ್ ಐಸ್ ಎನಿಸಿಕೊಳ್ವುದು ಗುಡ್ಡು ಟೇಸ್ಟಿನಲೂ

ಗೋಲ್ಡು ಗುಣವಿದೆ ಹೆಸರಿನಲ್ಲಿ ಶುಗರಿ ಸಿರಪಿದೆ ತನುವಿನಲ್ಲಿ

ಹೋಲ್ಡು ಮಾಡಿಹ ಈ ವೆಜಿಟೆಬಲ್ ಆಬ್ಸಲ್ಯೂಟ್ಲೀ ಲವ್ಲಿಯು

‘ಯಾವುದಿದು?’

‘ಕ್ಯಾರೆಟ್ ಸರ್. ಚಿನ್ನದ ೨೨, ೨೪, ೧೮ ಕ್ಯಾರೆಟ್ ಲೆಕ್ಕದಲ್ಲೇ ಸೆಗ್ರಿಗೇಟ್ ಮಾಡೋದಲ್ವ ಸಾರ್. ಹುಡುಗಿಯರ ಲೆಗ್ಗಿನ್ಸ್ ತರಹ ಮೇಲೆ ಅಗಲ ಕೆಳಗೆ ಸೊಣಕಲ...’

‘ರೈಟ್. ಇದರ ಮಾಡೆಲ್?’

‘ಶ್ರದ್ಧಾ ಕಪೂರ್ ಸರ್’

‘ಏಕೆ?’

‘ಬಣ್ಣದಲ್ಲೂ ಸಣ್ಣದಲ್ಲೂ ಹೋಲಿಕೆ ಆಗ್ತಾಳೆ’

ನಿರ್ದೇಶಕರು ‘ಸ್ಕಿನ್ನಿಯೆಸ್ಟ್ ಬಾಲಿವುಡ್ ಸ್ಟಾರ್ಸ್’ ಎಂದು ಗೂಗಲ್ ಸರ್ಚ್ ಮಾಡಿದರು. ಮೊದಲ ಹೆಸರೇ ಶ್ರದ್ಧಾಳದಾಗಿತ್ತು. ಸರಿಯೆಂದು ಸಮ್ಮತಿಸಿ ಮುಂದಿನ ಜಿಂಗಲ್‌ನತ್ತ ಸಾಗಿದರು.

ಗುಂಡು ಗುಂಡು ತೊಂಡು ತೊಂಡು

ಬೋಂಡ ಬಜ್ಜಿಯಲ್ಲು ಫೌಂಡು

ಫ್ರೆಷ್ ಆಗಿಯು ಕ್ರಷ್ ಆಗಿಯು

ಡಿಷ್ ಆಗಿಯು ಡೆಲಿಷಿಯಸ್ಸು

ಜಬ್ ತಕ್ ರಹೇಗಾ ಜಂಗಲ್ ಬೇ ಬಾಲೂ

ತಬ್ ತಕ್ ರಹೇಗಾ ಬಾಜೀ ಮೇ ಆಲೂ

ನೀನಿರಲು ಅಡುಗೆಯಲ್ಲಿ ಹೊಟ್ಟೆಯಂತು ಫುಲ್ಲೋ ಫುಲ್ಲು

ನೀನಿರದ ಅಡುಗೆಯದು ರುಚಿಸದಲ್ಲ ಡಲ್ಲೋ ಡಲ್ಲು

‘ಚೆನ್ನಾಗಿಲ್ಲ ಈ ಜಿಂಗಲ್ಲು’ ಎಂದರು ನಿರ್ದೇಶಕರು.

‘ಏಕೆ ಸರ್?’

‘ಎರಡನೆಯ ಲೈನಿನಲ್ಲೇ ರಹಸ್ಯ ಹೊರಬಿದ್ದುಬಿಡತ್ತೆ. ಆಲೂ ಅಂತ ಗೊತ್ತಾಗಿಬಿಡತ್ತೆ’

‘ಎನಿ ಸಜೆಷನ್ಸ್ ಸರ್?’

‘ಫ್ರೆಷ್ ಆಗಿಯು ಕ್ರಷ್ ಆಗಿಯು ಡಿಷ್ ಆಗಿಯು ಡೆಲಿಷಿಯಸ್ಸು; ಡ್ರೆಸ್ ಜಾಸ್ತಿಯು ಡ್ರೆಸ್ ಕಮ್ಮಿಯು ಇರುವ ಬಾಲಿವುಡ್ ಆಕ್ಟ್ರೆಸ್ಸು' ಅಂತ ಬರೆದರೆ ಸಾಕು ಅನ್ಸತ್ತೆ’

‘ಹೇಗೆ ಸರ್?’

‘ಆಲೂಗೆಡ್ಡೆಯ ಹಾಗೆಯೇ ಹೊರಗಿನ ಸಿಪ್ಪೆ ತೆಗೆದು (ಟೂ ಪೀಸ್), ತೆಗೆಯದೆ (ಚೂಡಿದಾರ್), ಕಟ್ ಮಾಡಿ (ಪ್ರೊಫೈಲ್ ಪಿಕ್ಚರ್), ನೇರವಾಗಿ (ಸ್ಟ್ರೈಟ್ ಪೋಸ್) ಫ್ರೆಷ್ ಆಗಿ (ಮಳೆ ಸೀನ್ಸ್) ಕ್ರಷ್ ಆಗಿ (ಯಾರದೋ ಪ್ರೀತಿಯಲ್ಲಿ ಸಿಲುಕಿದ ಸೀನ್) ಎಲ್ಲದರಲ್ಲೂ ಚೆನ್ನಾಗಿ ಕಾಣಿಸುವ ಬಾಲಿವುಡ್ ಬೆಡಗಿಯಂತೆ ಅನ್ನೋ ಅರ್ಥ ಬರತ್ತೆ. ಇದಕ್ಕೆ ವಿದ್ಯಾ ಬಾಲನ್ ಮಾಡೆಲ್ ಆಗೋದೇ ಸೂಕ್ತ’

‘ಏಕೆ?’

‘ಆಲೂಗೆಡ್ಡೆಯಂತೆಯೇ ಗುಂಡುಗುಂಡಾಗಿ ಬೆಳ್ಳಗಿದ್ದಾಳೆ. ಎಲ್ಲ ತರಕಾರಿಗಳ ಜೊತೆಯೂ ಹೊಂದಿಕೊಳ್ಳೋದೇ ಆಲೂಗೆಡ್ಡೆಯ ಗುಣ. ಹಾಗೆಯೇ ವಿದ್ಯಾ ಸಹ ಎಲ್ಲ ನಟರ ಜೊತೆಯೂ ಹೊಂದಿಕೊಳ್ತಾಳೆ’ ಎನ್ನುತ್ತಾ ಕಡೆಯ ಜಿಂಗಲ್‌ನತ್ತ ಕಣ್ಣುಹಾಯಿಸಿದರು.

ಆಂಧ್ರ ಚೆಲುವೆಯೆ ಹಸಿರುಡುಗೆಯಲಿ ನಿನ್ನ ಅಂದವೆ ಅಂದವು

ಸಂದಿತೆಂದರೆ ನಿನ್ನ ಸಂಗವು ಬಹಳ ನೆನೆಯುವ ಬಂಧವು

ಸಪ್ಪೆ ಜೀವನ ಸಾಕು ಎನ್ನುವ ಜನಕೆ ನೀನೇ ಜೀವವು

ಸಪ್ಪಳವು ಇಲ್ಲದೆಯೆ ನೆತ್ತಿಗೆ ಏರಿ ಕೂರ್ವುದೆ ಚೆಂದವು

ಬಳುಕು ರೂಪದ ಮಿರುಗು ಮೈಯಿನ ಹಾಟು ಹಾಟಿನ ಚೆಲುವೆಯೆ

ಬಳಿಗೆ ಬರುವಗೆ ಕೈಯ ಹಿಡಿವಗೆ ಚುರುಕು ಮುಟ್ಟಿಪ ಮಹಿಮೆಯೆ

‘ಇವಳು ಯಾರು?’

‘ಹಸಿಮೆಣಸಿನಕಾಯಿ ಸರ್’

‘ಮೆಚ್ಚಿದೆ. ಕಡೆಯವರೆಗೆ ಚುರುಕು ಕಾಪಾಡಿಕೊಂಡಿದ್ದೀಯೆ. ಇದಕ್ಕೆ ಮಾಡೆಲ್?’

‘ನಿತ್ಯಾ ಮೆನನ್ ಸರ್’

ಮತ್ತೊಂದು ಗೂಗಲ್ ಸರ್ಚ್; ಮತ್ತೊಂದು ಸಮ್ಮತಿ ದೊರಕಿತು.

ಈ ಎಲ್ಲ ಜಿಂಗಲ್‌ಗಳು ಈ ಎಲ್ಲ ಮಾಡೆಲ್‌ಗಳ ಕಾಂಟ್ರಾಕ್ಟ್ ಫೈನಲೈಸ್ ಆಗುತ್ತಿದ್ದಂತೆಯೇ ನಿಮ್ಮ ಮುಂದೆ ಬರಲಿವೆ. ವಿಷ್ ಯೂ ಆಲ್ ಎ ಗ್ರೇಟ್ ಅಡ್ವರ್ಟೈಸ್‌ಮೆಂಟ್ ವ್ಯೂಯಿಂಗ್ ಎಕ್ಸ್ಪೀರಿಯನ್ಸ್ ಫೋಕ್ಸ್.


Comments

  1. Replies
    1. ಸಾಧು ಕೋಕಿಲ ಸೆಕೆಂಡ್ ಚಾಯ್ಸ್ ಆಗಬಹುದಿತ್ತು!

      Delete
  2. ಟೊಮಾಟೊ ರಾಧಿಕಾ , ಮಲೈ ಕೋಫ್ತಾ ಏನೇನು ಹೋಲಿಗಳು ಸಾರ್ ಅದೆಲ್ಲಿಂದ ಹೊಳೆಯುತ್ತೆ ತಮಗೆ ಇವೇಲ್ಲಾ? ಎಲ್ಲರ ಹಾಗೆ ತಮಗೂ ಒಂದೇ ಮಿದಿಳು ತಾನೇ ಇರೋದು

    ReplyDelete
    Replies
    1. ha ha correct statement. every time its a new subject.

      Delete
    2. ಒಂದೇ ಮಿದುಳಾದರೂ, ಆ ಮಿದುಳಿಗೆ ಕೆಲಸ ಕೊಡದಿದ್ದರೆ ನೀವು ನನಗೆ ಕೆಲಸ ಕೊಡುವುದಿಲ್ಲವೆಂಬ ಭಯ! ಲೇಖಕ ಬರೆದುದು ಓದುಗನಿಗೆ ತೃಪ್ತಿ ತಂದಾಗಲೇ ಲೇಖನದ ಸಾರ್ಥಕ್ಯ.

      Delete
  3. wonder why majority is compared with ladies ?

    ReplyDelete
    Replies
    1. Because Woman nourishes the society as vegetables nourish the body.

      Delete

Post a Comment