ಹೇಗೆ ಬಣ್ಣಿಸಲಿ ನಿನ್ನನ್ನು, ದೇವ!

 ಹೇಗೆ ಬಣ್ಣಿಸಲಿ ನಿನ್ನನ್ನು, ದೇವ!

ಕವನ  -    ಶ್ರೀ ರಾಘವೇಂದ್ರ 


ಹೇಗೆ ಬಣ್ಣಿಸಲಿ ನಿನ್ನನ್ನು 


ಹೇ ಸರ್ವಪ್ರದಾತ! 

ಬಣ್ಣಿಸದೇ ಬಿಡುವುದಾದರೂ ಹೇಗೆ!


ಭಾರೀ ಪರ್ವತಗಳ ತುಳಿತಗಳಿಗೆ ಸಿಕ್ಕಿದ್ದ,

ಗಾಡಾಂಧಕಾರದ ಲೋಹಮನೆಯಲ್ಲಿ ಬಂದಿತನಾಗಿದ್ದ,

ಬೆಳಕನ್ನೆ ನೋಡದ, ತಿಳಿಯದ,

ಕೊಚ್ಚೆಯನ್ನೆ ನೈಜವೆಂದರಿತ, 

ಹೊಲಸಿನ್ನಲ್ಲೆ ಮಿಂದು ಉಂಡು ಮಲಗಿದ್ದವನಲ್ಲಿಗೆ  

ನೀ ಬಂದೆ.


ಹೇಗೆ ಬಣ್ಣಿಸಲಿ ನಿನ್ನನ್ನು 

ಹೇ ರಕ್ಷಕ! 

ಬಣ್ಣಿಸದೇ ಬಿಡುವುದಾದರೂ ಹೇಗೆ!


ನೀ ಬಂದೆ, ನನ್ನ ಹೊಲಸಿನ ಲೋಕಕ್ಕೆ,

ದೇವ ಪೂಜ್ಯ ನಿನ್ನ ಪಾದವು ನನ್ನ ಮನೆಗೆ ಬೆಳೆಯಿತು. 

ನಿನ್ನ ಅನುರಾಗ ಪೂರ್ಣ ಹೃದಯದಿಂದ 

ನಿನ್ನ ಕರುಣೆ ತುಂಬಿದ ಕಂಗಳಿಂದ 

ನಿನ್ನ ಸಮರ್ಥ ಕೈಯನ್ನು ಚಾಚಿ 

ಕರಾವಲಂಬನ ಕೊಟ್ಟು 

'ಬಾ' ಎಂದೆ.


ಹೇಗೆ ಬಣ್ಣಿಸಲಿ ನಿನ್ನನ್ನು 

ಹೇ ಉದ್ಧಾರಕ! 

ಬಣ್ಣಿಸದೇ ಬಿಡುವುದಾದರೂ ಹೇಗೆ!


ನಿನ್ನ ಪ್ರೇಮದ ಬೆಚ್ಚು ನನ್ನ ಸ್ಪರ್ಶಿಸಿ

ನಿನ್ನ ಕರುಣಾರ್ದ್ರ ಕೂಗು 'ಬಾ' ಎನ್ನ ತಟ್ಟಿ ಎಬ್ಬಿಸಿ

ನಿನ್ನ ಕಂಗಳ ಬೆಳಕು ಎನ್ನ ಗ್ರಹಿಸಿ 

ಸತ್ತಿದ್ದ ಬೆಳಕಿನ ಕಿಡಿಯನ್ನು ಕುಡಿಯಾಯಿಸಿತು. 

ಅಚ್ಚರಿಯಾಯಿತು ಮನಕೆ! 

ಯಾರೀತ?

ಈತ ಆತನೇ. 

ಸುಗ್ಗಿಯಾಯಿತು.

ಹೃದಯ ಮಿಡಿಯಿತು, ಪುಟಿಯುತು,

ನಿನ್ನೊಂದಿಗೆ ನಾ ಬರಬೇಕು 

ನಿನ್ನೊಂದಿಗೆ ನಾ ಇರಬೇಕು 

ಎಂದು ಹಂಬಲಿಸಿತು. ಆದರೆ,

ಕಾಲುಗಳಲ್ಲಿ ಶಕ್ತಿಯಿಲ್ಲ, ನಡೆಯಲಾರೆ

ತೋಳುಗಳಲ್ಲಿ ಬಲವಿಲ್ಲ, ಬರಲಾರೆ

ಉಸಿರಿನಲ್ಲಿ ಪ್ರಾಣವಿಲ್ಲ, ಬಾಳಲಾರೆ

ನನ್ನಲ್ಲಿ ಚೈತನ್ಯವಿಲ್ಲ, ಎಂದೆ.


ಹೇಗೆ ಬಣ್ಣಿಸಲಿ ನಿನ್ನನ್ನು 

ಹೇ ಪ್ರಾಣಪ್ರದಾತ! 

ಬಣ್ಣಿಸದೇ ಜೀವ ತಣಿಯುವುದಾದರೂ ಹೇಗೆ!


ಹೇ ಪರಮಪುರುಷನೇ!

ಚಕ್ರವರ್ತಿ ನೀನು,

ಬೆಳಕಿನ ಪ್ರಭು ನೀನು,

ಶುಭ್ರತೆಯೇ ನೀನು, 

ನಿನ್ನ ಕೆಲಸಗಳನ್ನು ಬದಿಗಿರಿಸಿ,

ನಿನ್ನ ಒಳಿತಿಗೆ ಬರುವುದೆಲ್ಲವನ್ನು ಸರಿಸಿ,  

ಮಲಕೂಪದಲ್ಲಿ ಬಿದ್ದಿರುವ 

ಒಂದು ನಗಣ್ಯ ಭ್ರಷ್ಟ ಸತ್ತ ಜೀವಕ್ಕಾಗಿ

ಧಾವಿಸಿ ಬಂದು, 

ವಜ್ರ ಕಪ್ಪು ಪರ್ವತಗಳನ್ನು ಕರಗಿಸಿ,

ಹೊಲಸನ್ನು ತೊಳೆದು,

ಆವರಣಗಳನ್ನು ಭೇದಿಸಿ,

ನಿನ್ನ ಕಠಿಣ ತಪೋ ಸಂಪತ್ತನ್ನು ಮುಕ್ತವಾಗಿ ವ್ಯಯಿಸಿ, 

ಎನಗೆ ಪ್ರಾಣಸ್ಯ ಪ್ರಾಣವನ್ನು ಉಸರಿಸಿ,

ನವೀನ ಜನ್ಮ ಕರುಣಿಸಿದೆ. 


ಹೇಗೆ ಬಣ್ಣಿಸಲಿ ನಿನ್ನ ಕರುಣೆಯನ್ನು  

ಹೇ ದಯಾಮಯ! 

ಬಣ್ಣಿಸದೇ ನಿನ್ನ ಕಡೆ ತಿರುಗಿರುವುದಾದರೂ ಹೇಗೆ!


ನಿನ್ನ ಆತ್ತ್ಮೀಯ ನೋಟದಿಂದ ಮರು ಹುಟ್ಟು ಕರುಣಿಸಿ,

ಬೆಳಕಿನ ಸುಧೆಯಿಂದ ಎನ್ನ ತೋಯಿಸಿ,

ಬ್ರಹ್ಮನುಡಿಯಿಂದ ಮಾರ್ಜಿಸಿ,

ಶಕ್ತಿಗಳನ್ನು ವಿಫುಲವಾಗಿ ಧಾರೆ ಎರೆಸಿ,

ಅಂಗೋಪಾಂಗಗಳಿಗೆ ಚೈತನ್ಯ ತುಂಬಿತುಂಬಿಸಿ,

ಬದುಕಿಗಾಗಿ ರಾಜವೀಧಿಯನ್ನು ರಚಿಸಿ, 

ಕಣ್ಣುಕೊಟ್ಟು ಪರಮಗುರಿಯನ್ನು ತೋರಿಸಿ,

ತಂದೆಯಾಗಿ ಎತ್ತಿಕೊಂಡು ನೀ ನಡೆದೆ,

ತಾಯಿಯಾಗಿ ಪೋಷಿಸಿದೆ. 


ಹೇಗೆ ನುಡಿಯಾಗಿಸಲಿ ನಿನ್ನ ಕೃತಿಗಳನ್ನು 

ಹೇ ನಾಥ!

ನೆನೆಯದೇ ಕ್ಷಣಕಳೆವುದಾದರೂ ಹೇಗೆ!


ನಿನ್ನಾಶ್ರಯದಲ್ಲಿ ಅಂಬೆಗಾಲು ಹಾಕಿದೆ,

ನೀನು ಕೈ ಹಿಡಿದು ಏಳಿಸಿ ನಡೆಸಿದೆ,

ಮತ್ತೆ ಮತ್ತೆ ಬಿದ್ದೆ, 

ಮತ್ತೆ ಮತ್ತೆ ಕೊಚ್ಚೆ ಹಚ್ಚಿಸಿಕೊಂಡೆ,

ಮತ್ತೆ ಮತ್ತೆ ನಾ ನಡೆಯಲಾರೆ ಎಂದು ಅತ್ತೆ. 

ಮತ್ತೆ ಮತ್ತೆ ನೀ ಕೈಹಿಡಿದೆ.... ಎತ್ತಿಕೊಂಡೆ... ಮುದ್ದಿಸಿದೆ,

ಸಂತಾಪವನ್ನು ದೂರೀಕರಿಸಿದೆ,

ಹುರುಪನ್ನು ಭರಿಸಿದೆ,

ನಿನ್ನ ಸಂಪತ್ತನ್ನು ಪೋಲುಮಾಡಿದೆ,

ನಿನ್ನ ಆಯಾಸಗಳನ್ನು ನಾ ಎಣಿಸಲಿಲ್ಲ,

ನಿನ್ನ ಪರಿಶ್ರಮಗಳನ್ನು ನಾ ಲೆಕ್ಕಿಸಲಿಲ್ಲ,

ಮಹಾರಾಜನ್ ನೀನು, ನನ್ನ ಆಶೆಗಳಿಗೆ ದುಡಿದೆ.

ನೀನು ನನಗಾಗಿಯೇ ಇರುವೆ ಎಂದು ತಿಳಿದೆ.

ದೇವರಿಗಾಗಿ ಅಭ್ಯಾಸಿಯು ಇರಬೇಕು,

ಇಲ್ಲಿ ಎನೀ ಉತ್ತೊಮೊತ್ತಮ ಲೀಲೆ

ದೇವರು ನನಗಾಗಿಯೇ !!! 

ನಿನ್ನ ಎನೀ ಪ್ರೇಮ! ಎನೀ ವಾತ್ಸಲ್ಯ! ಎನೀ ಕಾರ್ಯದಕ್ಷತೆ!

ನನ್ನ ಎನೀ ಎಡವುಗಳ ಅಪರಾಧಗಳ ಸರಮಾಲೆ, 

ಎನೂ ಲೆಕ್ಕವೇ ಇಲ್ಲವೆ ನಿನಗೆ. 


ಹೇಗೆ ಭಜಿಸಲಿ ನಿನ್ನನ್ನು 

ದೇವಾ!

ಭಜಿಸದೇ ಮಾನವನಾಗಿ ಇರುವುದಾದರೂ ಹೇಗೆ! 


ರಕ್ಷಕ ನೀನು, ಬರೀ ರಕ್ಷಕನೇ ಅಲ್ಲ, 

ಮಾರ್ಗದರ್ಶಕ ನೀನು, ಬರೀ ಮಾರ್ಗದರ್ಶಕನೇ ಅಲ್ಲ,

ಯೋಗಿಯು ನೀನು, ಬರೀ ಯೋಗಿಯೇ ಅಲ್ಲ, 

ಜ್ಞಾನಿಯು ನೀನು, ಬರೀ ಜ್ಞಾನಿಯೇ ಅಲ್ಲ, 

ಗುರುವು ನೀನು, ಬರೀ ಗುರುವೇ ಅಲ್ಲ,

ತಂದೆಯು ನೀನು, ಬರೀ ತಂದೆಯೇ ಅಲ್ಲ,

ತಾಯಿಯು ನೀನು, ಬರೀ ತಾಯಿಯೇ ಅಲ್ಲ,

ಪ್ರಭುವು ನೀನು, ಬರೀ ಪ್ರಭುವೇ ಅಲ್ಲ, 

ಸ್ವಾಮಿಯು ನೀನು, ಬರೀ ಸ್ವಾಮಿಯೇ ಅಲ್ಲ, 

ದೇವರು ನೀನು, ಬರೀ ದೇವರೇ ಅಲ್ಲ,

ಸಖನು ನೀನು, ಬರೀ ಸಖನೇ ಅಲ್ಲ,

ಅಣ್ಣನು ನೀನು, ಬರಿ ಅಣ್ಣನೇ ಅಲ್ಲ.


ಹೇಗೆ ಹೆಸರಿಸಲಿ ನಿನ್ನ,

ನೀ ತೋರಿದ ಸ್ವರೂಪ ವಿರಾಟ್,

ನೀ ಮಾಡಿದ ಅಸಾಧ್ಯ ಕಾರ್ಯಗಳು ಸಹಸ್ರ, 

ಹೆಸರಿಸದೆ ನಿನ್ನ ಕಡೆಯೇ ತಿರುಗಿರಲಿ ಹೇಗೆ!


ನೀ ಮಾಡಿಸಿದ ಕಾರ್ಯಗಳು ಮಾತ್ರ ನಾ ಮಾಡಬೇಕು, 

ನೀ ತೋರಿಸಿದ್ದನ್ನು ಮಾತ್ರ ನಾ ನೋಡಬೇಕು, 

ನಿನ್ನಾಜ್ಞೆಯನ್ನು ಮಾತ್ರ ನಾ ಪಾಲಿಸಬೇಕು,

ನೀ ಸಂಕಲ್ಪಿಸಿದವ ನಾನಾಗಬೇಕು,

ನಿನ್ನ ಚರಣಾರವಿಂದದಲಿ ಸದಾ ನೀ ಇಟ್ಟ ಹಾಗೆಯೇ ಇರಬೇಕು.

ಆಲಿಸು ಎನ್ನ ಪ್ರಾರ್ಥನೆಯನ್ನು.


ಹೇಗೆ ಪ್ರಾರ್ಥಿಸಲಿ ನಿನ್ನನ್ನು, 

ಎಲ್ಲವೂ ಕೊಟ್ಟಿರುವೆ ಪ್ರಾರ್ಥನೆಗೆ ಮುಂಚಿತವೇ, 

ಪ್ರಾರ್ಥಿಸದೆ ಇರಲಿ ಹೇಗೆ!


ಲೇಖಕರು  - ಶ್ರೀ ರಾಘವೇಂದ್ರ 

Brisbane, Australia

Ph +61 434 972 953

raghavendra.kaundinya@gmail.com

Comments

  1. ಹೃದಯಾಂತರಾಳದಿಂದ ಹೊಮ್ಮಿರುವ ಅದ್ಭುತ ಭಕ್ತಿಗೀತೆ.

    ReplyDelete
  2. ಧನ್ಯತೆ ಮತ್ತು ಕೃತಾರ್ಥ ಭಾವ ತಮ್ಮ ಈ ಪದ್ಯರೂಪದ ಲೇಖನ ಚೆನ್ನಾಗಿದೆ.

    ReplyDelete

Post a Comment