ಆಹಾರವೇ ಔಷಧಿ - ಕಡ್ಲೇಕಾಯಿ ಎಣ್ಣೆ

ಆಹಾರವೇ ಔಷಧಿ  

ಕಡ್ಲೇಕಾಯಿ ಎಣ್ಣೆ (ಶೇಂಗಾ ಎಣ್ಣೆ, ಒಳ್ಳೆಣ್ಣೆ)

Article by Raji Jayadev
Accredited Practicing Dietitian, 
Sydney



ಕಡ್ಲೇಕಾಯಿ ಗಿಡದ ವೈಜ್ಞಾನಿಕ ಹೆಸರು ಆರೇಕಿಸ್ ಹೈಪೋಜಿಯ (Arachis hypogaea), ಲೆಗ್ಗ್ಯೂಮಿನೊಸಿ (Leguminosae) ಕುಟುಂಬಕ್ಕೆ ಸೇರಿದ್ದು. ಕಡ್ಲೇಕಾಯಿಯ ಇತರ ಹೆಸರುಗಳು – ಶೇಂಗಾ, ನೆಲಗಡಲೆ, ಅರ್ತ್-ನಟ್, ಗ್ರೌಂಡ್-ನಟ್, ಪೀನಟ್ ಮತ್ತು ಮಂಕಿನಟ್. ಇದು ವಾರ್ಷಿಕ ಬೆಳೆ, ತವರು ಮಧ್ಯ ಅಮೇರಿಕಾ, ಕಾಲಾಂತರದಲ್ಲಿ ಪ್ರಪಂಚದ ಇತರ ಭಾಗಗಳಿಗೆ ಹರಡಿದೆಯೆಂದು ನಂಬಿಕೆ.  ಈ ಕೊಬ್ಬಿನ ಬೀಜವನ್ನು ವಾಣಿಜ್ಯ ಬೆಳೆಯಾಗಿ ಚೈನಾ, ಭಾರತ, ಯುನೈಟೆಡ್ ಸ್ಟೇಟ್ಸ್ ಮತ್ತು ಆಫ್ರಿಕಾದ ಹಲವಾರು ದೇಶಗಳಲ್ಲಿ ಬೆಳೆಯುತ್ತಾರೆ ಮತ್ತು ಎಣ್ಣೆಯನ್ನು ಉತ್ಪಾದಿಸುತ್ತಾರೆ.

ಪೋಷಕಾಂಶಗಳು

ಕಡ್ಲೇಕಾಯಿ ಎಣ್ಣೆಯಲ್ಲಿ ಆರೋಗ್ಯಪೂರಕವಾದ ಮಾನೋ-ಅನ್ಸ್ಯಾಚುರೇಟೆಡ್ ಕೊಬ್ಬು (monounsaturated fat) ಶೇಕಡಾ 49ರಷ್ಟು ಮತ್ತು ಪಾಲಿ-ಅನ್ಸ್ಯಾಚುರೇಟೆಡ್ ಕೊಬ್ಬು (polyunsaturated fat) ಶೇಕಡಾ 33ರಷ್ಟು ಇದೆ. ಅಲ್ಲದೆ ದೇಹರಕ್ಷಕ ಆಂಟಿ-ಆಕ್ಸಿಡೆಂಟ್ (anti-oxidant) ಗಳಾದ ವಿಟಮಿನ್ ‘ಇ’, ಫೈಟೊಸ್ಟಿರಾಲ್ (phytosterol), ರೆಸ್ವೆರಟ್ರಾಲ್ (Resveratrol) ಕೂಡ ಗಣನೀಯ ಪ್ರಮಾಣದಲ್ಲಿವೆ. ಅನಾರೋಗ್ಯಕರವಾದ ಸಾಂದ್ರೀಕೃತ ಕೊಬ್ಬು (saturated fat) ಅತಿ ಕಡಿಮೆ ಪ್ರಮಾಣದಲ್ಲಿದೆ (ಶೇಕಡಾ 18). ಕೊಲೆಸ್ಟಿರಾಲ್ ಇಲ್ಲ  (ಸಸ್ಯಜನ್ಯ ಆಹಾರಪದಾರ್ಥಗಳಲ್ಲಿ ಕೊಲೆಸ್ಟಿರಾಲ್ ಇರುವುದಿಲ್ಲ). 

ಆರೋಗ್ಯದಾಯಕ ಮತ್ತು ಆರೋಗ್ಯಪೂರಕ ಗುಣಗಳು  

ಕಡ್ಲೇಕಾಯಿ, ಕಡ್ಲೇಕಾಯಿ ಹಿಟ್ಟು, ಕಡ್ಲೇಕಾಯಿ ಎಣ್ಣೆ ಬಳಸುವುದರಿಂದ - 

ಹೃದಯರೋಗ, ಹೃದಯಾಘಾತ, ಪಾರ್ಶ್ವವಾಯು (ಲಕ್ವ) ಮುಂತಾದ ರೋಗಗಳನ್ನು ತಡೆಹಿಡಿಯಬಹುದು.

ರಕ್ತದಲ್ಲಿನ ಒಳ್ಳೆಯ ಕೊಲೆಸ್ಟಿರಾಲನ್ನು (HDL) ಹೆಚ್ಚಿಸಬಹುದು, ಕೆಟ್ಟ ಕೊಲೆಸ್ಟಿರಾಲನ್ನು (LDL) ತಗ್ಗಿಸಬಹುದು. 

ಆಂಟಿ-ಆಕ್ಸಿಡೆಂಟ್ ವಿಟಮಿನ್ ‘ಇ’ ಜೀವಕೋಶಗಳನ್ನು ರಕ್ಷಿಸಿ, ಕೆಲ ಬಗೆಯ ಕ್ಯಾನ್ಸರ್ ಗಳನ್ನು ತಡೆಹಿಡಿಯುತ್ತದೆ. 

ರೆಸ್ವೆರಟ್ರಾಲ್ ಎಂಬ (ರೆಡ್ ವೈನ್ ನಲ್ಲಿರುವ ) ಆಂಟಿ-ಆಕ್ಸಿಡೆಂಟ್ ಕ್ಯಾನ್ಸರ್ ಗಳಿಂದ, ಹೃದಯರೋಗಗಳಿಂದ, ಆಲ್ಜೈಮರ್ಸ್ (Alzheimer’s) ಖಾಯಿಲೆಯಿಂದ ರಕ್ಷಣೆ ನೀಡುತ್ತದೆ ಎಂದು ತಿಳಿದುಬಂದಿದೆ.  

ಪೆನ್ ಸ್ಟೇಟ್ ಯುನಿವರ್ಸಿಟಿ (Penn State University) ಯಲ್ಲಿ ನಡೆಸಿದ ಒಂದು ಅಧ್ಯಯನದ ಬಗ್ಗೆ ಇಲ್ಲಿ ತಿಳಿಸುತ್ತೇನೆ 1. ಈ ಅಧ್ಯಯನದ ಗುರಿ – ಕಡ್ಲೆಕಾಯಿಯ ಉತ್ಪನ್ನಗಳು ರಕ್ತದಲ್ಲಿನ ಕೊಲೆಸ್ಟಿರಾಲನ್ನು ತಗ್ಗಿಸುವುದರಲ್ಲಿ ಆಲಿವ್ ಎಣ್ಣೆಯಷ್ಟೇ ಪರಿಣಾಮಕಾರಿಯೇ? ಎಂದು ತಿಳಿಯುವುದು.

ಈ ಅಧ್ಯಯನದಲ್ಲಿ ಭಾಗವಹಿಸಿದ್ದ 22 ಜನರಿಗೆ 5 ವಿಧದ ಆಹಾರಕ್ರಮವನ್ನು (diet) ಪಾಲಿಸುವಂತೆ ಹೇಳಲಾಯಿತು ಮತ್ತು ಆಹಾರವನ್ನು ತಯಾರಿಸಿ ನೀಡಲಾಯಿತು. 3 ವಿಧದ ಆಹಾರಕ್ರಮ ಪಾಲಿಸಿದವರ ಫಲಿತಾಂಶದ ಬಗ್ಗೆ ಮಾತ್ರ ಇಲ್ಲಿ ಹೇಳುತ್ತೇನೆ. 

1.  ಆಲಿವ್ ಎಣ್ಣೆ ಹೊಂದಿದ ಆಹಾರಕ್ರಮ. 

2. ಕಡ್ಲೇಕಾಯಿ ಎಣ್ಣೆ ಹೊಂದಿದ ಆಹಾರಕ್ರಮ. 

3. ಕಡ್ಲೇಕಾಯಿ ಮತ್ತು ಪೀನಟ್ ಬಟರ್ ಹೊಂದಿದ ಆಹಾರಕ್ರಮ. 

ಈ ಎಲ್ಲ ಆಹಾರಕ್ರಮಗಳಲ್ಲೂ ಇದ್ದ ಒಟ್ಟು ಕೊಬ್ಬಿನ (total fat) ಅಂಶ ಶೇಕಡಾ 35 ಮತ್ತು ಮಾನೋ-ಅನ್ಸ್ಯಾಚುರೇಟೆಡ್ ಕೊಬ್ಬಿನ ಅಂಶ ಶೇಕಡಾ 17 ರಿಂದ 21. ಫಲಿತಾಂಶ: ಎಲ್ಲರಲ್ಲಿಯೂ ಒಟ್ಟು ಕೊಲೆಸ್ಟಿರಾಲ್ ಅಂಶ ಶೇಕಡಾ 10, ಕೆಟ್ಟ ಕೊಲೆಸ್ಟಿರಾಲ್ ಅಂಶ ಶೇಕಡಾ 14 ರಷ್ಟು ಇಳಿದಿತ್ತು.  ಹೃದಯ ರಕ್ತ ಪರಿಚಲನಾ ಸಂಬಂಧಿ ರೋಗಗಳ ಅಪಾಯ ಶೇಕಡಾ 16 ರಿಂದ 25 ರಷ್ಟು ಇಳಿದಿತ್ತು.

ಈ ಅಧ್ಯಯನದಿಂದ ತಿಳಿದು ಬಂದಿರುವುದೇನೆಂದರೆ ಕಡ್ಲೆಕಾಯಿಯ ಉತ್ಪನ್ನಗಳು ರಕ್ತದಲ್ಲಿನ ಕೊಲೆಸ್ಟಿರಾಲನ್ನು ತಗ್ಗಿಸುವುದರಲ್ಲಿ ಮತ್ತು ಹೃದಯ ರಕ್ತ ಪರಿಚಲನಾ ಸಂಬಂಧಿ ರೋಗಗಳನ್ನು ತಡೆಹಿಡಿಯುವುದರಲ್ಲಿ ಆಲಿವ್ ಎಣ್ಣೆಯಷ್ಟೇ ಪರಿಣಾಮಕಾರಿ ಎಂದು. 

ಉಪಯೋಗಗಳು

ಕಡ್ಲೇಕಾಯಿ ಎಣ್ಣೆಯನ್ನು ದಕ್ಷಿಣ ಮತ್ತು ದಕ್ಷಿಣ ಪೂರ್ವ ಏಷ್ಯಾದ ಹಲವಾರು ದೇಶಗಳಲ್ಲಿ ಅಡಿಗೆಗೆ ಬಳಸುತ್ತಾರೆ. ಮಾರ್ಜರೀನ್ (margarine) ಮತ್ತು ಸಲಾಡ್ ಡ್ರೆಸ್ಸಿಂಗ್ (salad dressing) ತಯಾರಿಕೆಯಲ್ಲೂ ಉಪಯೋಗಿಸುತ್ತಾರೆ. ಆಹಾರ ಪದಾರ್ಥಗಳನ್ನು ಕರಿಯಲು ಇದು ಅತ್ಯಂತ ಸೂಕ್ತವಾದ ಎಣ್ಣೆ. ಕಾರಣ: ಇದನ್ನು ಹೆಚ್ಚು ಉಷ್ಣಮಾನಕ್ಕೆ ಕಾಯಿಸಿದರೂ ಹೊಗೆಯಾಡುವುದಿಲ್ಲ (ಹೊಗೆ ಬಿಂದು 225°C), ಪದಾರ್ಥಗಳು ಹೆಚ್ಚು ಎಣ್ಣೆಯನ್ನು ಹೀರಿಕೊಳ್ಳುವುದಿಲ್ಲ.  ಒಮ್ಮೆ ಕರಿಯಲು ಉಪಯೋಗಿಸಿದ ಎಣ್ಣೆಯನ್ನು ಮತ್ತೆರೆಡು ಸಲ ಮಾತ್ರ   ಉಪಯೋಗಿಸಬಹುದು. ಆದರೆ ಒಂದು ಚೊಕ್ಕಟವಾದ ಬಟ್ಟೆಯಲ್ಲಿ ಶೋಧಿಸಿ, ಶೀಸೆಯಲ್ಲಿ ಹಾಕಿ, ಬಿಗಿಯಾಗಿ ಮುಚ್ಚಳ ಮುಚ್ಚಿ ರೆಫ್ರಿಜರೇಟರಿನಲ್ಲಿಟ್ಟಿರಬೇಕು.   

ಕಡ್ಲೇಕಾಯಿ ಎಣ್ಣೆ ಆರೋಗ್ಯಪೂರಕ, ಭಾರತೀಯ ಅಡಿಗೆಗೆ ಚೆನ್ನಾಗಿ ಹೊಂದುತ್ತದೆ ಎನ್ನುವುದು ನಿಜ. ಹಾಗೆಂದು ಹೆಚ್ಚು ಬಳಸಬೇಡಿ. ದಿನಕ್ಕೆ ಒಬ್ಬರಿಗೆ 4 ರಿಂದ  8 ಟೀ ಚಮಚೆ ಎಣ್ಣೆ ಸಾಕು. ನೆನಪಿಡಿ: ಒಂದು ಟೀ ಚಮಚೆ ಎಣ್ಣೆಯಲ್ಲಿ 36 ಕ್ಯಾಲೋರಿಗಳಿವೆ. ಎಣ್ಣೆಯನ್ನು ಒಗ್ಗರಣೆಗೆ ಮಾತ್ರ ಬಳಸಿ. ಕರಿದ ತಿನಿಸುಗಳನ್ನು ವಿಶೇಷ ಸಮಾರಂಭಗಳಲ್ಲಿ ಮಾತ್ರ ಬಳಸಿ. ಕಡ್ಲೆಕಾಯಿ ಭಾರತೀಯರಿಗೆ ಬಲು ಪ್ರಿಯ. ಅಲ್ಲದೆ ಕಡ್ಲೇಕಾಯಿಯಲ್ಲಿ ಸಸ್ಯಾಹಾರಿಗಳಿಗೆ ಬಲು ಅವಶ್ಯಕವಾದ ಪ್ರೋಟೀನ್ ಮತ್ತು ಇತರ ಅನೇಕ ಪೋಷಕಾಂಶಗಳಿವೆ. ಕೊಲೆಸ್ಟಿರಾಲನ್ನು ನಿಯಂತ್ರಣದಲ್ಲಿಡಲು, ಹೃದಯರೋಗಗಳನ್ನು ತಡೆಹಿಡಿಯಲು ಪ್ರತಿದಿನ 25 – 30 ಗ್ರಾಮ್ ಕಡ್ಲೇಕಾಯಿ ಸೇವಿಸಿ. 

ಯಾವ ಬಗೆಯ ಎಣ್ಣೆ?

ಮುಖ್ಯವಾಗಿ ಎರಡು ಬಗೆಯ ಕಡ್ಲೇಕಾಯಿ ಎಣ್ಣೆಗಳಿವೆ. 

1. ಸಂಸ್ಕರಿಸದ (unrefined) ಎಣ್ಣೆ - ಎಣ್ಣೆ ತೆಗೆಯುವಾಗ ರಾಸಾಯನಿಕಗಳನ್ನೂ, ಶಾಖವನ್ನೂ ಉಪಯೋಗಿಸುವುದಿಲ್ಲ. ಇದರಲ್ಲಿ ಮೂರು ವಿದ. 

ವರ್ಜಿನ್ ಎಣ್ಣೆ - ತಿಳಿ ಹಳದಿ ಬಣ್ಣ, ಸಿಹಿ ಎನಿಸುವಂತ ರುಚಿ, ಸುವಾಸನೆ ಹೊಂದಿರುತ್ತದೆ . 

ಕಡ್ಲೇಕಾಯಿ ಬೀಜಗಳನ್ನು ಹುರಿದು ತೆಗೆದ ಎಣ್ಣೆ - ಹೊಂಬಣ್ಣದ ಈ ಎಣ್ಣೆ ಸುವಾಸನಾಭರಿತವಾಗಿರುತ್ತದೆ. ಇದನ್ನು ಅಡಿಗೆಗೆ ಉಪಯೋಗಿಸುವುದಿಲ್ಲ. ಸಾಲಡ್ ಡ್ರೆಸ್ಸಿಂಗ್, ಸಾಸ್ ಮತ್ತು ಮ್ಯಾರಿನೇಡ್ ತಯಾರಿಸುವುದಕ್ಕೆ ಬಳಸುತ್ತಾರೆ.  

ಕೋಲ್ಡ್ ಪ್ರೆಸ್ಸ್ಡ್ ಕಡ್ಲೇಕಾಯಿ ಎಣ್ಣೆ (cold pressed peanut oil) 

2. ಸಂಸ್ಕರಿಸಿದ (refined) ಎಣ್ಣೆ – ರಾಸಾಯನಿಕಗಳನ್ನೂ, ಶಾಖವನ್ನೂ ಉಪಯೋಗಿಸಿ ತೆಗೆದ ಎಣ್ಣೆ. ಬಣ್ಣವನ್ನೂ, ವಾಸನೆಯನ್ನೂ, ಅಲರ್ಜಿಯನ್ನುಂಟು ಮಾಡುವ ಅಂಶಗಳನ್ನು ಕಳೆದುಕೊಂಡಿರುತ್ತದೆ. ಸಾಮಾನ್ಯವಾಗಿ ಎಲ್ಲ ಸೂಪರ್ ಮಾರ್ಕೆಟ್ಟಿನಲ್ಲಿ ದೊರಕುತ್ತದೆ. ಇದರಲ್ಲಿ ಎರಡು ವಿದ. 

ಪ್ಯೂರ್ ಅಥವಾ 100% ಪೀನಟ್ ಎಣ್ಣೆ (pure or 100% peanut oil) – ಶೀಸೆಯ ಮೇಲೆ 100% ಅಥವಾ ಘಟಕ ಸಾಮಗ್ರಿಗಳು (ingredients) ಎಂಬಲ್ಲಿ ಕಡ್ಲೇಕಾಯಿ ಎಣ್ಣೆ ಎಂದು ಮಾತ್ರ ಬರೆದಿದೆ ಎಂದು ಖಚಿತಪಡಿಸಿಕೊಳ್ಳಿ. 

ಪೀನಟ್ ಎಣ್ಣೆ (peanut oil, blended peanut oil) – ಅಗ್ಗಬೆಲೆಯಲ್ಲಿ ದೊರಕುವ ಸೋಯಾ ಅಥವಾ ಕೆನೋಲ ಎಣ್ಣೆಯನ್ನು ಬೆರಕೆ ಮಾಡಿರುತ್ತಾರೆ. 

ಶೇಖರಿಸಿಡುವುದು ಹೇಗೆ? 

ಎಣ್ಣೆ ತಯಾರಿಸಿದ ಒಂದೆರಡು ವರ್ಷದೊಳಗೆ ಉಪಯೋಗಿಸುವುದು ಉತ್ತಮ. ಶೀಸೆಯ ಮೇಲೆ ಎಣ್ಣೆ ತಯಾರಿಸಿದ ತಾರೀಕನ್ನು ನಮೂದಿಸಿರುತ್ತಾರೆ. ಗಾಳಿ, ಬೆಳಕು ಮತ್ತು ಶಾಖ ತಗಲಿದರೆ ಎಣ್ಣೆಯ ಗುಣಮಟ್ಟ ಕ್ಷೀಣಿಸುತ್ತದೆ. ರುಚಿ ಕೆಡುತ್ತದೆ. ಆದ್ದರಿಂದ ಗಾಳಿಯಾಡದಂತೆ ಬಿಗಿಯಾಗಿ ಮುಚ್ಚಳ ಮುಚ್ಚಿ, ತಂಪಾದ, ಬೆಳಕಿಲ್ಲದ ಸ್ಥಳದಲ್ಲಿಡಿ. 

ಅಪಾಯ ಮತ್ತು ಮುನ್ನೆಚ್ಚರಿಕೆ 

ನೀವು ಪೀನಟ್ ಅಲರ್ಜಿಯ ಬಗ್ಗೆ ಕೇಳಿರಬಹುದು. ಈ ಸಮಸ್ಯೆ ನಿಮಗಿದ್ದಲ್ಲಿ ಸಂಸ್ಕರಿಸಿದ (refined) ಕಡ್ಲೇಕಾಯಿ ಎಣ್ಣೆಯನ್ನೇ ಉಪಯೋಗಿಸಿ. 

ಅಫ್ಲಟಾಕ್ಸಿನ್ (aflatoxin) ಎಂಬುದು ನಾಯಿಕೊಡೆ ಅಥವಾ ಅಣಬೆಗಳಲ್ಲಿ ಉತ್ಪನ್ನವಾಗುವ ವಿಷ. ಈ ವಿಷ ಕ್ಯಾನ್ಸರ್ ಉಂಟುಮಾಡಬಹುದು. ವಾಣಿಜ್ಯ ಬೆಳೆಗಳಾದ ಕಡ್ಲೇಕಾಯಿ, ಜೋಳ ಇತ್ಯಾದಿ ಮತ್ತು ಅಡಿಗೆಗೆ ಬಳಸುವ ಎಣ್ಣೆಗಳು (ಉದಾ: ಆಲಿವ್, ಕಡ್ಲೇಕಾಯಿ ಮತ್ತು ಎಳ್ಳೆಣ್ಣೆ) ಮುಂತಾದುವುಗಳಿಗೆ ಅಫ್ಲಟಾಕ್ಸಿನ್  ಸೋಂಕು ಉಂಟಾಗಬಹುದು. ಯುನೈಟೆಡ್ ಸ್ಟೇಟ್ಸ್ ಮತ್ತು ಇತರ ಅಭಿವೃದ್ದಿ ಹೊಂದಿದ ದೇಶಗಳಲ್ಲಿ ಕಡ್ಲೆಕಾಯಿಗಳನ್ನು ಪರೀಕ್ಷಿಸಿ, ಅಫ್ಲಟಾಕ್ಸಿನ್ ಸೋಂಕು ಇದ್ದವುಗಳನ್ನು ನಾಶಮಾಡಲಾಗುತ್ತದೆ. ಭಾರತದಲ್ಲಿ ಈ ಪರೀಕ್ಷೆ ನಡೆಯುತ್ತದೋ, ಇಲ್ಲವೋ ಎಂದು ತಿಳಿದಿಲ್ಲ. ಆದ್ದರಿಂದ ಪ್ರತಿಷ್ಠಿತ ಸಂಸ್ಥೆಗಳು (ಕಂಪನಿಗಳು) ತಯಾರಿಸಿದ ಎಣ್ಣೆಯನ್ನು ಖರೀದಿಸುವುದು ಉತ್ತಮ.

ಅತ್ಯಂತ ಹೆಚ್ಚು ಶಾಖ, ಅಲ್ಟ್ರ ವಾಯ್ಲೆಟ್ ಲೈಟ್ ಮತ್ತು ಮೈಕ್ರೋವೇವ್ ಶಾಖ ಅಫ್ಲಟಾಕ್ಸಿನ್ ಅನ್ನು ನಾಶಮಾಡುವುದಿಲ್ಲ. ಶಾಂತ ಮತ್ತು ಶ್ರೀನಿವಾಸಮೂರ್ತಿಯವರು (1975, 1977, 1980) ನಡೆಸಿದ ಸಂಶೋಧನೆಯಿಂದ, ಎಣ್ಣೆಯಿರುವ ಗಾಜಿನ ಶೀಸೆಯನ್ನು ಒಂದು ಘಂಟೆಯ ಕಾಲ ಪ್ರಖರ ಬಿಸಿಲಿನಲ್ಲಿಟ್ಟಲ್ಲಿ ಅಫ್ಲಟಾಕ್ಸಿನ್ ನಾಶವಾಗುತ್ತದೆ ಎಂದು ತಿಳಿದುಬಂದಿದೆ 2. ಬಿಸಿಲಿನಲ್ಲಿಟ್ಟಾಗ ಎಣ್ಣೆಯ ಗುಣಮಟ್ಟ ಕ್ಷೀಣಿಸುತ್ತದೆ ಎಂಬುದು ನಿಜ. ಆದರೆ ಅಫ್ಲಟಾಕ್ಸಿನ್ ಕ್ಯಾನ್ಸರ್ ಕಾರಕ. ಎಣ್ಣೆಯಲ್ಲಿರುವ ಪೋಷಕಾಂಶಗಳನ್ನು ಇತರ ಆಹಾರಗಳಿಂದ ಸುಲಭವಾಗಿ ಪಡೆಯಬಹುದು.  

ಕಡ್ಲೇಕಾಯಿ ಚಟ್ನಿಪುಡಿ

ಬೇಕಾಗುವ ಸಾಮಗ್ರಿಗಳು

250 ಗ್ರಾಂ ಕಡ್ಲೇಕಾಯಿ

1 - 2 ಟೀ ಚಮಚ ಅಚ್ಚ ಕಾರದ ಪುಡಿ

2 - 4 ಜಜ್ಜಿದ ಬೆಳ್ಳುಳ್ಳಿ ಎಸಳು  

2 - 4 ಟೀ ಚಮಚ ಅಮಚೂರ್ ಪುಡಿ ಅಥವಾ ಗೋಲಿ ಗಾತ್ರ ಹುಣಿಸೇಹಣ್ಣು  

1/4 ಟೀ ಚಮಚ ಉಪ್ಪು 

ಮಾಡುವ ವಿಧಾನ 

ಕಡ್ಲೇಕಾಯಿ ಬೀಜವನ್ನು ಸಣ್ಣ ಉರಿಯಲ್ಲಿ ಎಣ್ಣೆ ಹಾಕದೆ ಹುರಿಯಿರಿ. ಮೇಲೆ ಹೇಳಿದ ಎಲ್ಲ ಸಾಮಗ್ರಿಗಳೊಂದಿಗೆ ಸೇರಿಸಿ ಪುಡಿ ಮಾಡಿ, ಒಂದು ಡಬ್ಬಿಯಲ್ಲಿ ಹಾಕಿ ಬಿಗಿಯಾಗಿ ಮುಚ್ಚಿ ರೆಫ್ರಿಜರೇಟರ್ ನಲ್ಲಿಟ್ಟರೆ 6 ತಿಂಗಳುಗಳ ಕಾಲ ಚೆನ್ನಾಗಿರುತ್ತದೆ.  

ಈ ಚಟ್ನಿಪುಡಿಯನ್ನು ಎಣ್ಣೆ ಅಥವಾ ಮೊಸರಿನಲ್ಲಿ ಕಲಸಿ; ರೊಟ್ಟಿ, ಚಪಾತಿ, ದೋಸೆಯೊಂದಿಗೆ ಸೇವಿಸಬಹುದು. 

ಪಲ್ಯಗಳ ಮೇಲೆ ಉದುರಿಸಬಹುದು. 

ಈ ಚಟ್ನಿಪುಡಿ ಹಾಕಿ ಮಾಡಿದ ಚಪಾತಿ ಬಲು ರುಚಿ.  

ಕೊನೆಮಾತು: ಸಂಸ್ಕರಿಸದ (unrefined) ಎಣ್ಣೆಯನ್ನೇ ಉಪಯೋಗಿಸಿ.  ಕಲಬೆರಕೆ ಮಾಡಿದ ಕಡ್ಲೇಕಾಯಿ ಎಣ್ಣೆಯನ್ನು ಕೊಳ್ಳಬೇಡಿ.  ಕರಿದ ತಿನಿಸುಗಳನ್ನು ವಿಶೇಷ ಸಮಾರಂಭಗಳಲ್ಲಿ ಮಾತ್ರ ಬಳಸಿ. ಪ್ರತಿದಿನ 25 – 30 ಗ್ರಾಮ್ ಕಡ್ಲೇಕಾಯಿ ಸೇವಿಸಿ.

“ನೀವು ನಿಮ್ಮ ದೇಹವನ್ನು ಚೆನ್ನಾಗಿ ಪೋಷಿಸದಿದ್ದರೆ ನೀವೆಲ್ಲಿ ಇರಬಲ್ಲಿರಿ”?

-----------------------------------------------------------------------------------------------------------

Reference 1. 

Kris-Etherton et.al. High-monounsaturated fatty acid diets lower both plasma cholesterol and triacylglycerol concentrations. Am J Clin Nutr 1999; 70:1009-15 

Reference 2. 

Shantha, T., and Sreenivasamurthy, V .1975. Detoxification of ground nut oil. Journal of Food Science and Technology 12:20-22. 

Shantha, T., and Sreenivasamurthy, V. 1977. Photodestruction of aflatoxin in groundnut oil. Indian Journal of Technology 15:453-454. 

Shantha, T., and Sreenivasamurthy, V. 1980. Storage of groundnut oil detoxified by exposure to sunlight. Indian Journal of Technology 18(8):346-347



Comments

  1. ಎಂದಿನಂತೆ, ಶ್ರೀಮತಿ ರಾಜೇಶ್ವರಿಯವರ ಲೇಖನ ಬಹಳ ಉಪಯುಕ್ತವಾಗಿದೆ.
    ನಮ್ಮ ದಿನನಿತ್ಯದ ಆಹಾರದಲ್ಲಿ ಬಹಳ ಪ್ರಮುಖ ಪಾತ್ರವಹಿಸುವ ಕಡಲೇಕಾಯಿ ಎಣ್ಣೆಯ ಬಳಕೆಯ ಬಗ್ಗೆ ಚೆನ್ನಾಗಿ ತಿಳಿಸಿಕೊಟ್ಟಿದ್ದಾರೆ. ಇತ್ತೀಚೆಗೆ ಬೇರೆ ಹಲವಾರು ಎಣ್ಣೆಗಳು ಉಪಯೋಗ ಹೆಚ್ಚಾಗಿದ್ದರೂ, ನಮ್ಮ ಕೆಲವು ಸಾಂಪ್ರದಾಯಿಕ ಅಡುಗೆಗಳಿಗೆ ಕಡಲೆಕಾಯಿ ಎಣ್ಣೆಯೇ ಸ್ವಾದಿಷ್ಟ ರುಚಿ ನೀಡುವುದು. ಹಾಗಾಗಿ ಈ ಲೇಖನವು ಎಣ್ಣೆಯ ಆಯ್ಕೆ ಮತ್ತು ಬಳಕೆಯ ಸೂಕ್ತ ವಿಧಾನದ ಅರಿವು ನೀಡುತ್ತದೆ. ಇದಕ್ಕಾಗಿ ರಾಜೇಶ್ವರಿಯವರಿಗೆ ಧನ್ಯವಾದಗಳು. ಮುಂದೊಮ್ಮೆ ಹೆಚ್ಚಿನ ಬಳಕೆಯ ಹಣ್ಣುಗಳು ಮತ್ತು ಅವುಗಳ ಸೇವನಾ ಕ್ರಮವನ್ನು ತಿಳಿಸಿಕೊಡಬೇಕೆಂದು ಕೋರುತ್ತೇನೆ.

    ReplyDelete
  2. Not aware of so many good information about oil. Many many thanks to Raji Jayadev. Thanks for providing Chutney power recipe. One of the most awaited wonderful article

    ReplyDelete
  3. ಆಹಾರವೇ ಔಷಧಿ ವಿಭಾಗದಲ್ಲಿ ಬಹಳ ಮೆಚ್ಚುಗೆಯಾದ ಲೇಖನವಿದು. ನಮಗರಿಯದೆ ದಿನಾ ಬಳಸುವ ಎಣ್ಣೆ ಬಗ್ಗೆ ಎಷ್ಟು ವಿವರಗಳನ್ನು ಕೊಟ್ಟು ಎಚ್ಚರಿಸಿದ್ದೀರಿ. ಕಡ್ಲೆಕಾಯಿ ಎಣ್ಣೆಯ ಪ್ರಾಮುಖ್ಯತೆ, ಆರೋಗ್ಯಕರ ಗುಣ, ಸಂಶೋಧನೆ ಅದಲ್ಲದೆ ಚಟ್ನಿಪುಡಿ ಮಾಡುವ ವಿಧಾನವನ್ನೂ ತಿಳಿಸಿಕೊಟ್ಟಿದ್ದೀರಿ. ಧನ್ಯವಾದಗಳು

    ReplyDelete

Post a Comment