ಚೆನ್ನಕೇಶವದೇವಾಲಯ ಅರಳಗುಪ್ಪೆ -1

ಚೆನ್ನಕೇಶವದೇವಾಲಯ ಅರಳಗುಪ್ಪೆ  ಭಾಗ ೧

ಲೇಖನ - ಮೈಸೂರು ಶ್ರೀನಿವಾಸ ಪುಟ್ಟಿ 



ತುಮಕೂರು ಜಿಲ್ಲೆ, ತಿಪಟೂರು ತಾಲೂಕಿನಲ್ಲಿರುವ ಅರಳಗುಪ್ಪೆ ಗ್ರಾಮವು ತುಮಕೂರಿನಿಂದ ತಿಪಟೂರು ರೈಲು ಮಾರ್ಗದಲ್ಲಿ ಸುಮಾರು 60 ಕಿ.ಮೀ. ದೂರದಲ್ಲೂ, ತಿಪಟೂರಿನಿಂದ, ತುಮಕೂರು ಮಾರ್ಗದಲ್ಲಿ 15 ಕಿ.ಮೀ. ದೂರದಲ್ಲೂ ಇದೆ. ಶಾಸನಗಳಲ್ಲಿ ಅಲರಿಗುಪ್ಪೆ ಎಂದು ಕರೆಯಲ್ಪಟ್ಟಿರುವ ಈ ಗ್ರಾಮದಲ್ಲಿ ಹಲವು ಪ್ರಾಚೀನ ಕಟ್ಟಡಗಳಿದ್ದು, ಅವುಗಳಲ್ಲಿ ಹೊಯ್ಸಳ ಶೈಲಿಯ ಕೇಶವ ದೇವಾಲಯ ಪ್ರಮುಖವಾದದ್ದಾಗಿದೆ. 

ಈ ದೇವಾಲಯಕ್ಕೆ ಸಂಬಂಧಿಸಿದಂತೆ ಶಾಸನಗಳು ದೊರೆತಿಲ್ಲವಾಗಿ ಇದು ಯಾವಾಗ ನಿರ್ಮಾಣವಾಯಿತೆಂದು ನಿಖರವಾಗಿ ಹೇಳುವುದು ಕಷ್ಟ. ಆದರೆ  ಈ ದೇವಾಲಯದ ಅನೇಕ ಭಾಗಗಳು 13 ನೇ ಶತಮಾನದ ಪೂರ್ವಾರ್ಧದಲ್ಲಿ ನಿರ್ಮಿತವಾದ ಹಳೇಬೀಡಿನ ಕೇದಾರೇಶ್ವರ ದೇವಾಲಯ, ನುಗ್ಗೇಹಳ್ಳಿಯ ಲಕ್ಷ್ಮೀನರಸಿಂಹ ದೇವಾಲಯ ಮತ್ತು ಹೊಸಹೊಳಲಿನ ಲಕ್ಷ್ಮೀ ನಾರಾಯಣ ದೇವಾಲಯವನ್ನು ಹೋಲುವುದರಿಂದ,ಈ ದೇವಾಲಯವೂ (ಅಂದರೆ ಅರಳಗುಪ್ಪೆಯ ಕೇಶವ ದೇವಾಲಯವೂ) ಸಹ, 13 ನೇ ಶತಮಾನದ ಪ್ರಥಮಾರ್ಧ ಭಾಗದಲ್ಲಿ (1238-1243ರ ನಡುವೆ) ನಿರ್ಮಾಣವಾಗಿರಬಹುದೆಂದು ತಜ್ಞರು ಊಹಿಸುತ್ತಾರೆ. ಒಂದು ಗರ್ಭಗುಡಿಯನ್ನು ಮಾತ್ರ ಹೊಂದಿರುವ ಅರಳಗುಪ್ಪೆಯ ಕೇಶವ ದೇವಾಲಯವು ಒಂದು ಏಕಕೂಟಾಚಲ. 

ಕೇಶವ ದೇವಾಲಯವು ಸುಮಾರು ನಾಲ್ಕು ಅಡಿ ಎತ್ತರದ ಜಗತಿಯ ಮೇಲೆ ನಿರ್ಮಾಣವಾಗಿದೆ. ಜಗತಿಯು, ದೇವಾಲಯದ ಮುಂಚಾಚು ಹಿಂಚಾಚುಗಳನ್ನು ಅನುಸರಿಸಿರುವುದರಿಂದ, ನಕ್ಷತ್ರಾಕಾರವನ್ನು ಹೊಂದಿದೆ. ಹದಿನಾರು ಕೋನಗಳುಳ್ಳ ಜಗತಿಯ ಪ್ರತಿ ಕೋನಕ್ಕೂ ಹೊಂದಿಕೊಂಡಂತೆ ಒಂದು ಕಲ್ಲಿನ ಆನೆ ಇತ್ತೆಂದು ತಿಳಿದುಬಂದಿದೆ. ಆದರೆ ಈಗ ಕೆಲವು ಮೂಲೆಯಲ್ಲಿ ಮಾತ್ರ ಆನೆಯನ್ನು ಕಾಣಬಹುದು.

ಜಗತಿಗೆ ಪೂರ್ವದಿಂದ ಮೆಟ್ಟಿಲುಗಳಿದ್ದು , ಅದರ ಇಕ್ಕೆಲಗಳಲ್ಲಿ ಸುಂದರವಾದ ಶಿಖರಗಳಿವೆ.ಈ ದೇವಾಲಯವನ್ನು ಸರಿಯಾಗಿ ನೋಡಬಯಸುವವರು ಇವನ್ನು ಕೆಳಕಂಡಂತೆ ಎಂಟು ಭಾಗಗಳನ್ನಾಗಿ ವಿಂಗಡಿಸಿಕೊಂಡು ನೋಡುವುದು ಸೂಕ್ತ. 

 

I. ಅಧಿಷ್ಠಾನ 

II. ಹೊರಗೋಡೆ 

III. ಮೇಲ್ಚಾವಣಿ ಮತ್ತು ಕೈಪಿಡಿ ಗೋಡೆ 

IV. ಶಿಖರ 

V. ನವರಂಗ 

VI. ಭುವನೇಶ್ವರಿಗಳು 

VII. ಶುಕನಾಸಿ ಮತ್ತು

VIII. ಗರ್ಭಗೃಹ.

 

I.ಅಧಿಷ್ಠಾನ

 

ನವರಂಗ ಹಾಗೂ ಗರ್ಭಗೃಹದ ಹೊರಭಾಗಕ್ಕೆ ಹೊಂದಿಕೊಂಡಿರುವ ಅಧಿಷ್ಠಾನದ ಭಾಗದಲ್ಲಿ ಆರು ಚಿತ್ರಪಟ್ಟಿಕೆಗಳನ್ನು ಕಾಣಬಹುದು.  ಈ ಪಟ್ಟಿಕೆಗಳಲ್ಲಿ ಕೆಳಗಿನಿಂದ ಮೇಲಕ್ಕೆ ಕ್ರಮವಾಗಿ ಕಂಡುಬರುವ ಶಿಲ್ಪಗಳೆಂದರೆ ಅಲಂಕೃತ ಆನೆಗಳು, ಅಶ್ವದಳ, ಲತೆಗಳು, ಪೌರಾಣಿಕ ಶಿಲ್ಪಗಳು, ಮಕರಗಳು ಮತ್ತು ಹಂಸಗಳು.

ಅತ್ಯಂತ ಕೆಳಸಾಲಿನಲ್ಲಿರುವ ಆನೆಗಳಲ್ಲಿ ಕೆಲವುದರ ಮೇಲೆ ಮಾವುತರನ್ನು ಕಾಣಬಹುದು. ಕೆಲವು ಆನೆಗಳು ಯುದ್ಧಕ್ಕೆ ಹೋಗುವಂತೆ ಕಂಡುಬಂದರೆ, ಮತ್ತೆ ಕೆಲವು ಕ್ರೀಡೆಯಲ್ಲಿ ತೊಡಗಿದಂತೆ ಕಾಣುತ್ತದೆ. ಅಶ್ವದಳದಲ್ಲಿನ ಸಾಲಿನಲ್ಲಿ ಅಲ್ಲೊಂದು ಇಲ್ಲೊಂದು ಒಂಟೆಯನ್ನೂ ಕಾಣಬಹುದು. ಕುದುರೆಯ ಸವಾರರನ್ನು ಸೈನಿಕರಂತೆ ಚಿತ್ರಿಸಲಾಗಿದೆ.

 

ಪೌರಾಣಿಕ ಪಟ್ಟಿಕೆ

 

ದೇವಾಲಯದ ಅಧಿಷ್ಠಾನ ದಲ್ಲಿರುವ ಆರು ಪಟ್ಟಿಕೆಗಳಲ್ಲಿ ಪೌರಾಣಿಕ ಪಟ್ಟಿಕೆಯು ವಿಶಿಷ್ಟವಾಗಿದ್ದು,ಇದರಲ್ಲಿ ರಾಮಾಯಣ ಮತ್ತು ಭಾಗವತದ ಕೆಲವು ಪ್ರಸಂಗಗಳನ್ನು ಚಿತ್ರಿಸಲಾಗಿದೆ. ನವರಂಗದ ದ್ವಾರಕ್ಕೆ ದಕ್ಷಿಣದಲ್ಲಿ ಪೂರ್ವದ ಗೋಡೆಯ ಮೇಲೆ ರಾಮಾಯಣದ ಕಥೆ ಪ್ರಾರಂಭವಾಗಿ, ಶುಕನಾಸಿಯ ಉತ್ತರ ಗೋಡೆಯಲ್ಲಿ ಮುಕ್ತಾಯವಾಗುತ್ತದೆ. ಅಲ್ಲಿಂದ ಮುಂದೆ ಭಾಗವತದ ಕಥೆ - ಕೃಷ್ಣನ ಬಾಲಲೀಲೆಯವರೆಗೂ - ಮುಂದುವರೆಯುತ್ತದೆ.

ಈ ಪಟ್ಟಿಕೆಗಳಲ್ಲಿನ ಪೌರಾಣಿಕ ಶಿಲ್ಪಗಳು ಇಂತಿವೆ (ಇವುಗಳಲ್ಲಿ ಬಹುತೇಕ ಶಿಲ್ಪಗಳನ್ನು ಆಸಕ್ತರು ಗುರುತಿಸಬಹುದು):

 

1.ನವರಂಗ ದ್ವಾರದ ದಕ್ಷಿಣಕ್ಕಿರುವ ಪೂರ್ವ ಮುಖದ ಗೋಡೆ

 




ಚಿತ್ರ ೨ 


೧. ಸ್ತ್ರೀ ಪರಿಚಾರಿಕೆಯರು ಮತ್ತು ಸೈನಿಕರಿಂದ ಆವೃತವಾಗಿ, ಪೀಠಸ್ಥನಾಗಿರುವ ಒಬ್ಬರಾಜ (ಬಹುಶಃ ಇದು ದಶರಥನಿರಬಹುದು ಎಂದು ತಜ್ಞರು ಊಹಿಸುತ್ತಾರೆ)

2.ಮುಂಭಾಗದ ಅಂಕಣದ ದಕ್ಷಿಣ ಭಾಗ




ಚಿತ್ರ ೩  

೨. ಇಂದ್ರ ಮತ್ತು ಇತರ ದೇವತೆಗಳು ದಶರಥನನ್ನು ಸ್ವರ್ಗದಲ್ಲಿ ಬರಮಾಡಿಕೊಳ್ಳುತ್ತಿರುವುದು.(ಚಿತ್ರ ೩)

೩. ಪುತ್ರಕಾಮೇಷ್ಠಿ ಯಾಗ.

೪. ದಶರಥ ಮತ್ತು ಅವನ ರಾಣಿಯರಿಂದ ಪವಿತ್ರ ಪಾಯಸದ ಸ್ವೀಕಾರ. 

 

3. ನವರಂಗದ ಆಗ್ನೇಯ (Southeast of Navaranga)

೫. ರಾಮ ಮತ್ತು ಅವನ ಮೂವರು ಸಹೋದರರ ಜನನ

೬. ಮಕ್ಕಳ ಜನನದಿಂದ ಸಂಭ್ರಮಿಸುತ್ತಿರುವ ದಶರಥ

 

4. ನವರಂಗದ ದಕ್ಷಿಣ ಭಾಗ

೭.ದಶರಥ ಮತ್ತು ಅವನ ರಾಣಿಯರಿಂದ ನವಜಾತ ಶಿಶುಗಳ ನಾಮಕರಣ

೮.ತೊಟ್ಟಿಲಿನಲ್ಲಿ ಮಲಗಿರುವ ಶಿಶುಗಳು

 



ಚಿತ್ರ ೪

೯. ಅಂಬೆಗಾಲಿಡುತ್ತಿರುವ ಮಕ್ಕಳು.(ಚಿತ್ರ ೪)

೧೦. ಧನುರ್ವಿದ್ಯೆ ಕಲಿಯುತ್ತಿರುವ ಮಕ್ಕಳು.

೧೧. ಮಾರೀಚ ಮತ್ತು ಸುಬಾಹುವಿನ ನಾಶ. 

೧೨. ವಿಶ್ವಾಮಿತ್ರರಿಂದ ರಾಮ- ಲಕ್ಷ್ಮಣರಿಗಾಗಿ ಬೇಡಿಕೆ.

೧೩. ವಿಶ್ವಾಮಿತ್ರರನ್ನು ಹಿಂಬಾಲಿಸುತ್ತಿರುವ ರಾಮ-ಲಕ್ಷ್ಮಣರು.

 

 


ಚಿತ್ರ ೫ 



೧೪.ರಾಮ-ಲಕ್ಷಣರಿಂದ ತಾಟಕಾ ಸಂಹಾರ. (ಚಿತ್ರ ೫)

ಇಲ್ಲಿ ಗರ್ಭಗೃಹ ಮತ್ತು ಶುಕನಾಸಿಗೆ ಹೊಂದಿಕೊಂಡಿರುವ ಹೊರಗೋಡೆಗೆ ಅಡ್ಡಲಾಗಿ ನರಸಿಂಹರ ಆಲಯ ಬಂದಿದೆ.

........................
ಈ ಲೇಖನ ಭಾಗ ೨ ರಲ್ಲಿ ಮುಂದುವರೆಯುವುದು.............


Comments

  1. ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದೇನೆ.

    ReplyDelete
  2. ದೇವಾಲಯದ ವಿವರಣೆ ಸಂಕ್ಷಿಪ್ತ ವಾಗಿದ್ದರೂ ಸ್ಪಷ್ಟವಾಗಿ ಮೂಡಿ ಬಂದಿದೆ. ಎಂಟು ವಿಭಿನ್ನ ಭಾಗಗಳಾಗಿ ದೇವಸ್ಥಾನವನ್ನು ನೋಡಬೇಕೆಂಬ ಸಲಹೆ ಬಹಳ ಉಚಿತ.

    ReplyDelete
  3. ವಿವರಣೆ ಮತ್ತು ಸೊಗಸಾದ ಕ್ವಾಲಿಟಿ ಫೋಟೋಸ್ ತಮ್ಮ ಲೇಖನದಲ್ಲಿ ಇವೆ ಸಾರ್ ಧನ್ಯವಾದಗಳು

    ReplyDelete
  4. Nice collection of photos & information

    ReplyDelete

Post a Comment