ಕಬ್ಬಜ್ಜಿಯ ಲೋಕಜ್ಞಾನ

 ಕಬ್ಬಜ್ಜಿಯ ಲೋಕಜ್ಞಾನ

 ಹಾಸ್ಯ ಲೇಖನ - ಅಣುಕು ರಾಮನಾಥ್


ಸಂಕ್ರಾಂತಿಯ ಹಿಂದಿನ ದಿನ. ನನ್ನ ಮನೆಯ ಮಾರ್ಕೆಟಿಂಗ್ ಡಿವಿಷನ್‌ನ ಲೆಗ್ (ಎಲ್ಲಕ್ಕೂ ಹೆಡ್ ಅವಳೇ) ಆದ ನಾನು ಮಾರುಕಟ್ಟೆಯ ಮುಖ್ಯರಸ್ತೆಯ ಫುಟ್‌ಪಾತಿನಲ್ಲಿ ಕಬ್ಬು ಮಾರುತ್ತಿದ್ದ ಕಬ್ಬಿನವಳ ಮುಂದೆ ನಿಂತು ಕಬ್ಬು ಹೇಗಮ್ಮಾ?’ ಎಂದೆ.

ನೀವು ಕೇಳಿದ್ದು ಬಹಳ ಸಂತೋಷ ಆಯ್ತು ಸ್ವಾಮಿ. ಕೊರೋನಾ ಕಾಲದಲ್ಲಿ ಎಲ್ಲದರ ಆರೋಗ್ಯ ನೀವು ಕೇಳಬೇಕುನಾನು ಹೇಳಬೇಕುಅದೇ ಧರ್ಮ. ಕಬ್ಬು ಆರೋಗ್ಯವಾಗಿದೆ ಸ್ವಾಮಿ

ಹಾಗೆಂದರೇನರ್ಥ?’

ಕಬ್ಬನ್ನು ಬೆಳೆದವರು ಆರ್ಗಾನಿಕ್ ಗೊಬ್ಬರ ಹಾಕಿದ್ದರು. ಇದರ ಮೇಲೆ ಯಾರೂ ಸೀನಿಲ್ಲಕೆಮ್ಮಿಲ್ಲ. ಎಲ್ಲ ಕಬ್ಬಿನ ಜಲ್ಲೆಗಳನ್ನೂ ಸ್ಯಾನಿಟೈಝರ್ ಹೊಂಡದಲ್ಲಿ ಅದ್ದಿ ತೆಗೆದಿದ್ದೇವೆ. ಆದ್ದರಿಂದ ಈ ಕಬ್ಬುಗಳು ಕೊರೋನಾಫ್ರೀ ಅಂತ ಅರ್ಥ ಸ್ವಾಮಿ.

ಓಕೆ. ಜೊತೆ ಹೇಗಮ್ಮ?’

ಹೇಳ್ಕೊಂಡೇನು ಭಾಗ್ಯ ಬಿಡಿ. ಬಿಳಿ ಜಿರಳೆ ತರಹ ಇದ್ದಾಳೆಕಟ್ಕೊಂಡ್ರೆ ಮೇಕಪ್ಪೇ ಮೇಂಟೇನ್ ಮಾಡಕ್ಕಾಗಲ್ವೋಂತ. ಕೇಳಲಿಲ್ಲ. ಈಗದೇನೋ ಡ್ರೈವರ್ಸ್ ಅಂತೆಅದಕ್ಕೆ ಅಪ್ಲಿಕೇಶನ್ ತತ್ತೀನೀಂತ ಹೋಗಿದಾಳೆ

ಡ್ರೈವರ್ಸ್ ಅಂದರೆಯಾರಾದರೂ ಡ್ರೈವರ್ ಜೊತೆ ಓಡ್ಹೋಗ್ತಿದಾಳೇನು ಅವಳು?’

ಬಿಡ್ತು ಅನ್ನಿ. ಬಂಗಾರದಂಥ ಗುಣ ಅವಳದು. ಸೋಡಾಚೀಟಿಗೆ ಇಂಗ್ಲಿಷವರು ಹಾಗಂತಾರಲ್ಲಾಅದು ಹೇಳಿದ್ದು

ಬಂಗಾರದಂಥ ಗುಣ ಇದ್ದರೆ ಡೈವರ್ಸ್ ಯಾಕಂತೆ?’

ಬಂಗಾರ ಗಟ್ಟಿ ರ‍್ತದೆ. ಅದನ್ನ ಕಾಯಿಸಿ ನಮಗೆ ಬೇಕಾದ ಆಕಾರಕ್ಕೆ ಅಚ್ಚು ಹಾಕ್ಕೊಂಡುತುದಿಗಳನ್ನೆಲ್ಲ ಸವರಿ ಸರಿ ಮಾಡ್ಕೊಂಡ್ರೆ ಆಭರಣ. ಅವಮ್ಮ ಬುದ್ಧಿ ಹೇಳ್ಕೊಡೋದ್ರ ಮೂಲಕ ಕಾಯಿಸ್ಲಿಲ್ಲಅವಳಪ್ಪ ಅಚ್ಚಿಗೆ ಹಾಕಲಿಲ್ಲ. ಅವಳ ವಿದ್ಯೆ ತುದಿಗಳನ್ನ ಸವರಲಿಲ್ಲ. ಗಟ್ಟಿ ಬಂಗಾರವಾಗೇ ಉಳಿದಳು. ಸೊಗ ಆದಳೇ ವಿನಹ ನಗ ಆಗಲಿಲ್ಲ’ 



ನಾನು ನಿನ್ನ ಮಗ-ಸೊಸೆಯ ಜೊತೆ ಬಗ್ಗೆ ಅಲ್ಲ ಕೇಳಿದ್ದು

ನಮ್ಮೆಜ್ಮಾನಪ್ಪನಾ... ಕುಡಿತ ಬಿಡೋದೇ ಇಲ್ಲ. ಆತ ನಮ್ಮ ರಸ್ತೆಗೆ ತಿರುಗಿದ್ದನ್ನ ದೂರದಿಂದಲೇ ಮೂಗಿನಿಂದಲೇ ತಿಳೀಬಹುದು

ನಿನ್ಮನೆ ಕಥೆ ಕಟ್ಕೊಂಡು ನಾನೇನು ಮಾಡಲಿ...

ನೀವ್ಯಾರೋ ನನಗೇನು ಗೊತ್ತು ಸ್ವಾಮಿ. ಒಂದ್ವೇಳೆ ಟಿವಿ ಸೀರಿಯಲ್ ಪ್ರೊಡ್ಯೂರ‍್ರೋ ಡಿರೆಕ್ಟ್ರೋ ಆಗಿದ್ರೆ ನನ್ನ ಕಥೆ ಕೇಳಿ ದುಡ್ಕೊಟ್ಟು ರೇಟ್ಸ್ ತೊಗೊಂಡು...

ರೇಟ್ಸು?’

ಹಕ್ಕುಗಳು ಸ್ವಾಮಿ. ಕಥೆಯ ಹಕ್ಕನ್ನ ತೊಗೊಂಡು ಹಣ ಕೊಡ್ತೀರೇನೋಹೀಗೆ ಬೀದಿ ಪಕ್ಕದ ವ್ಯಾಪಾರ ನಿಲ್ಲಿಸ್ಬಹುದೂಂತ ಯೋಚಿಸ್ದೆ. ನೀವೂ ನನ್ಹಾಗೇ ಮಾಮೂಲೀನ್ನಿ.

ನಾಲಿಗೆಯ ಮೇಲೆ ಹಿಡಿತ ಇರಲಿ. ನಾನು ಸರ್ಕಾರಿ ಅಧಿಕಾರಿ’ ಜರ್ಬಿನಿಂದ ಹೇಳಿದೆ.

ಓಹ್. ಕೊಂಚ ವ್ಯತ್ಯಾಸ ಇದೆ ಸ್ವಾಮಿ. ನಾನು ಮಾಮೂಲಿ ಮನುಷ್ಯಳು. ನೀವು ಮಾಮೂಲು’ ಪಡೆಯೋ ಮನುಷ್ಯರು. ನಿಮ್ಮನ್ನ ಮನುಷ್ಯರು ಅಂತ ಕರೆಯಬಹುದಾ ಸ್ವಾಮಿ?’

ಮಾನನಷ್ಟ ಮೊಕದ್ದಮೆ ಹೂಡಬೇಕು ಈಕೆಯ ಮೇಲೆ. ಅಜ್ಜಿಯನ್ನು ಬೈದೇಬಿಡಬೇಕೆಂದು ತೀರ್ಮಾನಿಸಿದೆ. ಅಷ್ಟರಲ್ಲಿ ಹೋದ ವಾರವಷ್ಟೇ ಪ್ಲ್ಯಾನ್ ಸ್ಯಾಂಕ್ಷನ್‌ಗೆಂದು ಬಂದವನು ಸಾಹೇಬರ ಸೈನಿಗೆ ಎಲ್ಲ ಫೈಲುಗಳಿಗಿಂತ ಮೇಲೆ ಇದನ್ನಿಡು’ ಎಂದು ಫೈಲಿನೊಡನೆ ಎರಡು ಸಾವಿರ ಕೊಟ್ಟವನು ಕೊಂಚ ದೂರದಲ್ಲೇ ನಿಂತಿದ್ದನ್ನು ಕಂಡೆ. ವಾದಕ್ಕೆ ವಿರುದ್ಧವಾದ ಸಾಕ್ಷಿ ಎದುರಿರುವಾಗ ವಾದ ಮಾಡುವುದು ಸೂಕ್ತವಲ್ಲವಲ್ಲ!

ಏಕೆ ಆ ಸಂದೇಹಆಕಾರ ಕಾಣುತ್ತಿಲ್ಲವೇನು?’ ಎಂದೆ ಸಿಟ್ಟು ನುಂಗಿಕೊಳ್ಳುತ್ತಾ.

ಆಕಾರವೇ ಬೇರೆಆಚಾರವೇ ಬೇರೆ. ಹೆಣಕ್ಕೂ ಕೈಕಾಲು ಮುಖ ಎಲ್ಲವೂ ಇರತ್ತೆ. ಸ್ಪಂದಿಸೋ ಹೃದಯ ಇರಲ್ಲ

ಏನೆಂದು ಉತ್ತರಿಸಲಿಮೊನ್ನೆ ಅಪ್ಪನ ಡೆತ್ ಸರ್ಟಿಫಿಕೇಟ್ ಪಡೆಯಲು ಬಂದ ಹರಕಲು ಬಟ್ಟೆಯವನಿಂದ ನೂರು ರೂಪಾಯಿ ವಸೂಲಿ ಮಾಡದೆ ಪತ್ರ ಕೊಡಲಿಲ್ಲ. ಬಾಗಿಲನ್ನು ದಾಟಿದ ತಕ್ಷಣ ಅವನು ಈ ಹೊತ್ತಿನ ಊಟಕ್ಕೆ ಕಲ್ಲು ಬಿತ್ತು. ಇದ್ದ ನೂರೂ ಹೋಯ್ತು’ ಎಂದದ್ದು ಕೇಳಿಯೂ ನೋಟನ್ನು ಜೇಬಿಗಿಳಿಸಿದ್ದೆ. ಹೃದಯ ಲಬ್‌ಡಬ್ ಎನ್ನುತ್ತಿದೆ. ಅದು ಸ್ಪಂದನವೇಹಾಗೆಂದು ಅದನ್ನು ಸಾರ್ವಜನಿಕವಾಗಿ ತಪ್ಪೆಂದು ಒಪ್ಪಿಕೊಳ್ಳಲು ಸಾಧ್ಯವೆಅದೂ ಫುಟ್‌ಪಾತಿನ ಈ ಯಃಕಶ್ಚಿತ್ ಅಜ್ಜಿಯ ಮುಂದೆ?

ಹೋದವಾರ ಕ್ಯಾನ್ಸರ್ ಸೊಸೈಟಿಗೆ ಮೂರು ಸಾವಿರ ದಾನ ಮಾಡಿದ್ದೀನಿ’ ಕಾಲರ್ ಮೇಲೆತ್ತಿಕೊಂಡೆ

ಕೋಟಿ ತಿಂದವರು ತಿಮ್ಮಪ್ಪನಿಗೆ ಕಿರೀಟ ಮಾಡಿಸ್ತಾರೆ. ಕಡಿಮೆ ತಿಂದವರು ಕ್ಯಾನ್ಸರ್ ಸೊಸೈಟಿಗೆ ಕೊಡ್ತಾರೆ ಅಲ್ಲಾ?’

ಅತಿಯಾಯಿತು ಈಕೆಯದು. ಬೈಯೋಣವೆಂದರೆ ಪ್ಲ್ಯಾನ್ ಸ್ಯಾಂಕ್ಷನ್‌ನವ ಭೂತದಂತೆ ನಿಂತು ನನ್ನತ್ತಲೇ ನೋಡುತ್ತಿದ್ದ.

ಜೊತೆ ಹೇಗಮ್ಮ?’ ಮಾತು ಜಾರಿಸಿ ಮೂಲೋದ್ದೇಶದ ಹಾದಿ ಹಿಡಿದೆ.

ಜೊತೆ ನೂರಿಪ್ಪತ್ತು ಸ್ವಾಮಿ

ಪಕ್ಕದವರು ನೂರು ಹೇಳ್ತಿದ್ದಾರಲ್ಲ...

ನಾನು ಹೆಮ್ಮೆಯ ಕಂದಾಯಪಾವತಿಕಾರ್ತಿ. ಅವನು ತೆರಿಗೆಚೋರ. ಜಿಎಸ್‌ಟಿ ಬಿಟ್ಟು ರೇಟ್ ಹೇಳ್ತಾನೆ. ನನ್ನದು ಇಂಕ್ಲೂಡಿಂಗ್ ಜಿಎಸ್‌ಟಿ ಸ್ವಾಮಿ

ರಸೀದಿ ಕೊಡುವೆಯೇನು?’

ಸರ್ಕಾರಿ ಅಧಿಕಾರಿಗಳು ಲಂಚಕ್ಕೆ ರಸೀದಿ ಕೊಟ್ಟ ದಿನವೇ ನಾನೂ ಕೊಡುತ್ತೇನೆ

ಮುಖ್ಯಮಂತ್ರಿಗಳೊಬ್ಬರು ಚೆಕ್ಕಲ್ಲೇ ಲಂಚವನ್ನು ಪಡೆದಿದ್ದರು’ ಎಂದೆ.

ದೊಡ್ಡವರು ಮಣ್ಣು ತಿಂದರೂ ಮಣ್ಣು ಪೌಷ್ಠಿಕ ಆಹಾರ. ಎಂತೆಂತಹ ತೆಂಗಿನ ಮರಗಳು ಬೆಳೆಯಲೂ ಮಣ್ಣೇ ಆಧಾರ. ನಾನೂ ಕಲ್ಪವೃಕ್ಷದಂತೆ ಆಗುವ ಆಲೋಚನೆಯಿಂದ ಮಣ್ಣು ತಿಂದೆ’ ಅಂತಾರೆ. ಅದನ್ನ ಟಿವಿಯವರೂ ಉಜ್ಜೀ ಉಜ್ಜೀ ತೋರಿಸಿ ಮಣ್ಣೇ ಬಂಗಾರಬಂಗಾರವೇ ಮಣ್ಣು ಅಂತ ಹೇಳಕ್ಕೆ ನಾಲ್ಕು ಜನ ಚರ್ಚೆ ಮಾಡವ್ರನ್ನೂ ಕೂಡಿಸ್ಕೋತಾರೆ. ಬ್ರಹ್ಮಾಸ್ತ್ರ ಹೊರಡೋದು ಹದ್ದಿನ ಮೇಲಲ್ಲಗುಬ್ಬಿಯ ಮೇಲೆ ಸ್ವಾಮಿ

ಸರಿಸರಿ. ನನಗೆ ರೇಟ್ ಕಡಿಮೆ ಇರಬೇಕಷ್ಟೆ. ನೂರಕ್ಕೆ ಕೊಡುವ ಅವನಿಂದಲೇ ಕೊಳ್ಳುವೆ

ಸರ್ಕಾರದ ಅಧಿಕಾರಿ ಅಂತೀರಿಸರ್ಕಾರದ ಆಚಾರಕ್ಕೆ ವಿರುದ್ಧವಾದ ಮಾತಾಡ್ತೀರಲ್ಲ ಸ್ವಾಮಿ...

ಅಜ್ಜಿಯ ಮಾತು ಒಗಟೆನಿಸಿತು. ಯಾವುದು ಅಂತಹ ಮಾತು?’ ಎಂದೆ.

ಈ ರಸ್ತೆಯ ಕಂಟ್ರಾಕ್ಟಿನ ಬಾಬ್ತೇ ಗಮನಿಸಿ. ಚದರ ಅಡಿಗೆ ಸಾವಿರ ರೂಪಾಯಿ ಆಗೋ ಬಾಬ್ತಿಗೆ ಮೂರು ಸಾವಿರ ಹಾಕಿಸಿಎರಡು ನಿಮಗೆ ಒಂದು ಕಂಟ್ರಾಕ್ಟರಿಗೆ ಭಾಗ ಮಾಡಿಕೊಂಡುಅವನು ಒಂದರಲ್ಲಿ ಅರ್ಧ ಮನೆಗೆಅರ್ಧ ರಸ್ತೆಗೆ ಹಾಕೋದ್ರಿಂದ್ಲೇ ಕಳಪೆ ಕೆಲಸ ಆಗೋದು ಅಂತೀನಿ. ಸಾವಿರದ ಕೆಲಸಕ್ಕೆ ಸಾವಿರದ ಕೊಟೇಷನ್ನುಟೆಂರ‍್ರು ಬಂದರೆ ಸ್ವೀಕರಿಸಲು ಅನರ್ಹವಾಗಿದೆ’ ಅಂತ ಪಕ್ಕಕ್ಕೆ ತಳ್ತಾರಲ್ಲಅನರ್ಹ ಆಗಿರೋದು ಟೆಂರ‍್ರೋವ್ಯಕ್ತಿಗಳೋ ಹೇಳಿ?’

ಪಿಡಬ್ಲ್ಯೂಡಿಯಲ್ಲಿ ಹಾಗೆ ಇರಬಹುದಷ್ಟೆ. ಮಿಕ್ಕವೆಲ್ಲಾ...

ಹೌದಾ ಸ್ವಾಮಿಪಕ್ಷದಲ್ಲಿ ಟಿಕೆಟ್ ಕೊಡಬೇಕಾದರೆ ಹೆಚ್ಚು ಹಣ ನೀಡಿದವರನ್ನೇ ಆರಿಸ್ಕೋತೀರಿ. ಸಂಪುಟ ವಿಸ್ತರಣೆ ಮಾಡಬೇಕಾದರೆ ಗುಡಾಣದಷ್ಟು ಹಣ ಕೊಡಕ್ಕೆ ತಾಕತ್ತಿರುವಂತಹಗೆಲ್ಲುವಷ್ಟು ಮತವನ್ನು ಕೊಂಡುಕೊಳ್ಳಲು ಶಕ್ತರಾದ ಅಭ್ಯರ್ಥಿಗಳನ್ನೇ ಆರಿಸ್ತೀರಿ. ಕಬ್ಬಿನ ಜೋಡಿಗೆ ಇಪ್ಪತ್ತು ಹೆಚ್ಚು ಹೇಳಿದರೆ ಆ ಕಡೆ ಕೊಂಡ್ಕೋತೀನಿ ಅಂತೀರಲ್ಲಇದು ನ್ಯಾಯವಾ?’

ಸರ್ಕಾರದ ಲೆಕ್ಕಕ್ಕೂ ವೈಯಕ್ತಿಕ ಲೆಕ್ಕಕ್ಕೂ ವ್ಯತ್ಯಾಸ ಇರತ್ತೆ ಅಜ್ಜಿ

ಸ್ವಾಮಿತಾವು ಕ್ವಾಲಿಟಿ ಕಂಟ್ರೋಲ್ ವಿಭಾಗದಲ್ಲಿ ಇದ್ದೀರೇನು?’

ಛೆ! ಎಂತಹ ಇರುಸುಮುರುಸಿನ ಪ್ರಸಂಗ. ಹೌದು’ ಎಂದರೆ ಪ್ಲ್ಯಾನ್ ಸ್ಯಾಂಕ್ಷನ್‌ನವನಿಗೆ ಕೇಳಿಸೀತೆಂಬ ಮುಜುಗರ. ಸಾಹೇಬರ ದರವಾನ’ ಎಂದು ಹೇಳಿಕೊಳ್ಳಲು ಮೊದಲೇ ಸರ್ಕಾರಿ ಅಧಿಕಾರಿ’ ಎಂದು ಕೊಚ್ಚಿಕೊಂಡಿರುವ ಸುಳ್ಳಿನ ಗೋಡೆ. ದೂರದವನಿಗೆ ಕೇಳಿಸದಂತೆ ಮೆಲುದನಿಯಲ್ಲಿ ನಿನಗೆ ಹೇಗೆ ತಿಳಿಯಿತು?’ ಎಂದು ಕೇಳಿದೆ.

ನನ್ನ ಜಲ್ಲೆಗಳು ಅಮಿತಾಭನಂತಿವೆಅವನವು ಅವನ ಹೆಂಡತಿಯಂತಿವೆ

ಅಜ್ಜಿ ಹೇಳಿದ್ದು ನಿಜವಿತ್ತು. ಇವೆಲ್ಲವೂ ಆರಡಿ ಮೀರಿದ್ದವು. ಅವುಗಳ ಮುಂದೆ ಜಯಾ ಬಾಧುರಿಯೇ ಎತ್ತರ ಕಂಡಾಳು.

ಆದರೆ ಆ ಜಲ್ಲೆಗಳಲ್ಲಿ ಗೆಣ್ಣುಗಳು ದೂರ ಇವೆ. ರಸದ ಭಾಗ ಹೆಚ್ಚಾಗಿದೆ. ನಿನ್ನ ಜಲ್ಲೆಗಳಲ್ಲಿ ಗೆಣ್ಣುಗಳು ಬಹಳ ಹತ್ತಿರ ಇವೆ

ಅದು ಖಾಸಗಿ ಕಬ್ಬುಇದು ಸರ್ಕಾರಿ ಕಬ್ಬು ಸ್ವಾಮಿ

ಅಂದರೆ?’

ಖಾಸಗಿ ಕಂಪನಿಗಳಲ್ಲಿ ನಿರ್ಬಂಧ ಕಡಿಮೆಕೆಲಸ ಜಾಸ್ತಿ. ಸರ್ಕಾರದಲ್ಲಿ.... ಹಹ್ಹ... ನಿಮಗೇ ಗೊತ್ತಲ್ಲ

ಸರ್ಕಾರಿ ಅಧಿಕಾರಿಯ ಎದುರೇ ಸರ್ಕಾರದ ಟೀಕೆ ಮಾಡುತ್ತೀಯಲ್ಲನಿನ್ನನ್ನು ಎತ್ತಂಗಡಿ ಮಾಡಿಸುತ್ತೇನೆಂಬ ಭಯ ಇಲ್ಲವೆ?’

ಸಾಧ್ಯವಿಲ್ಲ ಸ್ವಾಮಿ.

ಏಕೆ?’

ಅಜ್ಜಿ ತನ್ನ ಜಾತಿ ಸರ್ಟಿಫಿಕೇಟ್ ತೆಗೆದಳು. ಆ ಜಾತಿಯವರನ್ನು ಎತ್ತಂಗಡಿ ಮಾಡಲು ಹೋಗುವವರೇ ಕೆಲಸ ಕಳೆದುಕೊಂಡ ಪ್ರಸಂಗಗಳು ನನ್ನ ಕಣ್ಣಮುಂದೆ ನ್ಯೂಸ್‌ರೀಲ್‌ನಂತೆ ಹಾದುಹೋದವು.

ಎಲ್ಲವೂ ಸರಿಯೇ. ಗೆಣ್ಣುಗಳು ಹತ್ತಿರ ಇರುವುದರಿಂದ...’ ಅಲ್ಲಿಂದ ಸರಿಯತೊಡಗಿದೆ.

ತಿಳಿಯಿತು ಸ್ವಾಮಿ. ಹೆಂಡತಿ ಬೈಯುತ್ತಾಳೆ. ಇಗೊಳ್ಳಿ ಈ ಜೋಡಿ’ ಎನ್ನುತ್ತಾ ಜಲ್ಲೆಯ ರಾಶಿಯಲ್ಲಿ ಕೈ ತೂರಿಸಿ ದೂರದೂರ ಗೆಣ್ಣುಗಳಿರುವ ಜಲ್ಲೆಯನ್ನು ನನ್ನತ್ತ ಹಿಡಿದು ತೊಂಬತ್ತೇ ಕೊಡಿ’ ಎಂದಳು.

ಅದೇಕೆ ರಿಯಾಯಿತಿ?’ ಅಚ್ಚರಿಗೊಂಡೆ.

ನಿಮ್ಮ ಆಫೀಸಲ್ಲಿ ಕ್ಯಾಂಟೀನ್ ಇಟ್ಟಿರೋವ್ನು ನನ್ನ ಮಗನೇ ಸ್ವಾಮಿ. ನೀವ್ಯಾರೂಂತ ನನಗೆ ಗೊತ್ತು. ಸೀಟ್‌ಗೆ ತಕ್ಕ ರೇಟ್’ ಎಂದಳು.

ಕಬ್ಬಿನ ಜಲ್ಲೆ ಪಡೆದು ತಲೆ ತಗ್ಗಿಸಿ ಮನೆಯತ್ತ ನಡೆದೆ.

Comments

  1. ಕಬ್ಬಜ್ಜಿಯ ವಾಚಾಳಿತನದ ಮುಂದೆ ಎದುರು ಮಾತನಾಡಲು ನಮ್ಮ ಹರಟೆಗಾರರಿಗೇ ಸಾಧ್ಯವಾಗದ ಮೇಲೆ ನಮ್ಮ ನಿಮ್ಮಂಥವರ ಪಾಡೇನು?

    ReplyDelete
  2. ರಾಮನಾಥ್ ಅವರ ಹಾಸ್ಯ ಪ್ರಜ್ಞೆಗೆ ಎಲ್ಲೆಯುಂಟೇ? ಯಾರ್ಯಾರಿಂದಲೋ ಎಷ್ಟೊಂದು ವಿಷಯ ತಿಳಿಸುತ್ತಾರೆ ಈ ಬಾರಿ ಕಬ್ಬಜ್ಜಿ ಕೈಯಲ್ಲಿ(ಬಾಯಲ್ಲಿ) ಏನೆಲ್ಲಾ ಹೇಳಿಸಿದ್ದಾರೆ. ಅಬ್ಬಬ್ಬ ಬ್ಬ ಜಾಲ್ಲೆ, ಗಿಣ್ಣು, ಜಾತಿ ಸರ್ಟಿಫಿಕೇಟ್ ನಗುವಿನ ನಮ್ಮ ಹಳೆಯ ನೆನಪುಗಳನ್ನು ಜೊತೆಗೆ ಮೆಲಕುಹಾಕುವ ಬಗೆ ತುಂಬಾ ಚೆನ್ನಿದೆ

    ReplyDelete
  3. Very nice humor, Could not imagine kabbajji `s talent

    ReplyDelete

Post a Comment