ಕನಕದಾಸರು ಮತ್ತು ವೈಕುಂಠದಾಸರು

ಕನಕದಾಸರು ಮತ್ತು ವೈಕುಂಠದಾಸರು

ಡಾ|| ಸಿ.ವಿ. ಮಧುಸೂದನ

 

ಕನಕದಾಸರು ಉಡುಪಿಯಲ್ಲಿ ಅನೇಕ ವರ್ಷಗಳನ್ನು ಕಳೆದದ್ದು ಮಾತ್ರವಲ್ಲದೆ, ಬೇಲೂರಿನಲ್ಲಿಯೂ ಹಲವು ಕಾಲವಿದ್ದರು. ಅಲ್ಲಿದ್ದ ವೈಕುಂಠದಾಸರಿಗೂ, ಕನಕದಾಸರಿಗೂ ನಿಕಟ ಸ್ನೇಹ ಮತ್ತು ಪರಸ್ಪರ ಗೌರವ. ಇದೇ ಬಗೆಯ ಸ್ನೇಹ ವೈಕುಂಠ ದಾಸರಿಗೆ ಪುರಂದರ ದಾಸರಲ್ಲಿಯೂ, ಶ್ರೀ ವಾದಿರಾಜರಲ್ಲೂ ಇತ್ತೆಂದು ಕೀರ್ತನೆಗಳಿಂದ ತಿಳಿಯ ಬರುತ್ತದೆ. 

ವೈಕುಂಠದಾಸರು ಜನ್ಮತಃ ಹೆಬ್ಬಾರ್ ಅಯ್ಯಂಗಾರ್ ಎಂಬ ಸಮುದಾಯಕ್ಕೆ ಸೇರಿದ ಶ್ರೀ ವೈಷ್ಣವ ಬ್ರಾಹ್ಮಣರು. ಕನಕದಾಸರೂ ಶ್ರೀವೈಷ್ಣವ ದೀಕ್ಷೆಯನ್ನು ಸ್ವೀಕರಿಸಿದ್ದರು ಎಂಬುದನ್ನು ನಾವಿಲ್ಲಿ ನೆನೆಯಬಹುದು. 

ವೈಕುಂಠದಾಸರ ಪೂರ್ವಾಶ್ರಮದ ಹೆಸರು ಕೇಶವ ಅಯ್ಯಂಗಾರ್ಯ. ಇವರ ಧರ್ಮಪತ್ನಿಯ ಹೆಸರು ಸೌಮ್ಯನಾಯಕಿ. ವೈಕುಂಠದಾಸರು ಅರ್ಜುನನ ಅಂಶದಿಂದಲೂ, ಸೌಮ್ಯನಾಯಕಿಯು ಉಲೂಪಿಯ ಅಂಶದಿಂದಲೂ ಹುಟ್ಟಿದವರೆಂದು ನಂಬಿಕೆ ಇದೆ.

ಇವರಿಗೆ ಒಬ್ಬ ಹೆಣ್ಣು ಮಗಳು ಮಾತ್ರ ಇದ್ದಳು. ತಮ್ಮ ಪೂರ್ತಿ ಜೀವನವನ್ನು ಚೆನ್ನಕೇಶವನ ಸನ್ನಿಧಿಯಾದ ಬೇಲೂರಿನಲ್ಲೇ ಕಳೆದರು. ಇತರ ದಾಸರಂತೆ ತೀರ್ಥಯಾತ್ರೆ ಅಥವಾ ದೇಶ ಪರ್ಯಟನೆ ಮಾಡಲಿಲ್ಲ. 

ದಂಪತಿಗಳು ಅಸೀಮ ಭಗವದ್ಭಕ್ತರು. ವೈಕುಂಠದಾಸರಿಗೆ ಕೇಶವನು ಅನೇಕ ಬಾರಿ ಶಂಖ ಚಕ್ರ ಗದಾ ಪದ್ಮ ಧಾರಿಯಾಗಿ ಪ್ರತ್ಯಕ್ಷವಾಗಿದ್ದನಂತೆ. ಮಾತ್ರವಲ್ಲ, ಅವನು ಹಾಗೆ ತನಗೆ ಮೊದಲು ಪ್ರತ್ಯಕ್ಷವಾಗುವವರೆಗೂ, ಮದುವೆಯಾಗಿದ್ದರೂ ಬ್ರಹ್ಮಚಾರಿಯಾಗಿಯೇ ಉಳಿದು ಬಿಟ್ಟಿದ್ದರು. ಕೊನೆಗೆ ದಂಪತಿಗಳ ಅನನ್ಯ ಭಕ್ತಿಯಿಂದ ಮದುವೆಯಾದ ಹತ್ತು ವರ್ಷಗಳ ಮೇಲೆ ದೇವ ದರ್ಶನವಾಯಿತು, ದಾಂಪತ್ಯ ಜೀವನ ನಡೆಸಲು ಸಾಧ್ಯವಾಯಿತು. 


ಕೇಶವನು ಇವರನ್ನು ಎಷ್ಟು ಮೆಚ್ಚಿದ್ದನೆಂದರೆ ಅನೇಕ ಕಷ್ಟಕಾಲದಲ್ಲಿ ಅವರಿಗೆ ಸಖನಾಗಿ, ಸೇವಕನಾಗಿ ನೆರವಿತ್ತನಂತೆ. ಒಮ್ಮೆ ಕಾರಣಾಂತರದಿಂದ ಬ್ರಾಹ್ಮಣ ಸಮುದಾಯದವರೆಲ್ಲರೂ ಕೇಶವ ಅಯ್ಯಂಗಾರರಿಗೆ ಬಹಿಷ್ಕಾರ ಹಾಕಿದ್ದರು. ಆಗ ಅವರಿಗೆ ಪಿತೃಗಳ ಶ್ರಾದ್ಧ ಮಾಡಬೇಕಾಯಿತು. ಆದರೆ ಯಾವ ಬ್ರಾಹ್ಮಣನೂ ಶ್ರಾದ್ಧಕ್ಕೆ ಬರಲು ಒಪ್ಪಲಿಲ್ಲ. ಇವರು ಏನು ಮಾಡುವುದೆಂದು ದಿಕ್ಕು ತೋಚದೆ ಕುಳಿತಿದ್ದಾಗ, ಕೇಶವನೇ ಒಬ್ಬ ದಕ್ಷಿಣ ದೇಶದ ಬ್ರಾಹ್ಮಣನ ವೇಷದಲ್ಲಿ ಬಂದು ಕರ್ಮಗಳನ್ನು ನೆರವೇರಿಸಿಕೊಟ್ಟನಂತೆ. ಈ ಘಟನೆಯನ್ನು ದಾಸರು ತಮ್ಮ ಒಂದು ಕಲ್ಯಾಣಿ ರಾಗದ ಕೀರ್ತನೆಯಲ್ಲಿ ಬಣ್ಣಿಸಿದ್ದಾರೆ:

ನೀನೇ ಶ್ರಾದ್ಧಕ್ಕೆ ಬಂದವ, ದೇವರ ದೇವ | ನಾನರಿಯೆ ಎನ್ನ ಗೃಹಕೆ ವೈಷ್ಣವನಾಗಿ

ಇನ್ನೊಮ್ಮೆ ಕತ್ತಲೆಯಲ್ಲಿ ಮಳೆ, ಗಾಳಿಗೆ ಸಿಕ್ಕಿ ಮನೆಗೆ ಹಿಂತಿರುಗಲು ದಾರಿ ತೋರದೆ ಕಷ್ಟಕ್ಕೆ ಸಿಕ್ಕಿದ್ದಾಗ, ಕೇಶವನೇ ದೀವಟಿಗೆಯೊಡನೆ ಬಂದು ಮನೆಗೆ ಕರೆತಂದನಂತೆ. ಮನೆಗೆ ತಲುಪಿದ ನಂತರ ಕುಡಿಯಲು ನೀರು ಕೇಳಿದನಂತೆ. ಅವರು ಒಳಗೆಹೋಗಿ ನೀರು ತರುವಷ್ಟರಲ್ಲಿ ಕಾಣೆಯಾಗಿದ್ದನಂತೆ. ಆಶ್ಚರ್ಯಚಕಿತರಾದ ದಾಸರು ಹೀಗೆ ಉದ್ಗರಿಸಿದರು;

ಏನು ಕಾರಣವೆನಗೆ ತಿಳಿಯದೋ, ಇದು ದೇವ| ನೀನುದ್ಧರಿಸುವುದಕೋ, ಕೆಡಪುದಕೊ ಹರಿಯೇ ||

ದುರಿತ ಭಯ ತಿಮಿರ ಶರಧಿಯನು ದಾಂಟಿಸುವೋಲ್ | ಸುರಿವ ಮಳೆಗತ್ತಲೋಳ್ ಬೋಯಿಯಾಗಿ |

ಕರದಲ್ಲಿ ದೀವಟಿಗೆ ಪಿಡಿದು ಸದನದ ಬಳಿಗೆ | ಕರೆತಂದು ತೃಷೆಯಾಯ್ತು ಎಂದು ಹೇಳುವುದು ||

ಈ ಬಗೆಯ ಇನ್ನೂ ಅನೇಕ ಪವಾಡಗಳು ಅವರ ಜೀವನದಲ್ಲಿ ನಡೆದು ಹೋದುವು. ಇವುಗಳ ವಿಷಯವನ್ನು ಬೇಲೂರು ಕೇಶವದಾಸರ ‘ಶ್ರೀ ಕರ್ನಾಟಕ ಭಕ್ತ ವಿಜಯ’ ಎಂಬ ಗ್ರಂಥದಲ್ಲಿ ಓದಬಹುದು.

ಕನಕದಾಸರು ಬೇಲೂರಿಗೆ ಒಮ್ಮೆ ಬಂದಿದ್ದಾಗ ಅವರು ತಮ್ಮ ಮನೆಯ ಬಾಗಿಲಲ್ಲೇ ಕುಳಿತಿದ್ದರೂ  ವೈಕುಂಠದಾಸರಿಗೆ ತಿಳಿಯಲಿಲ್ಲ. ಏಕೆಂದರೆ ಕನಕದಾಸರು ಕೈಯಲ್ಲಿ ಕೋಲನ್ನು ಹಿಡಿದು ಕೊಂಡು ಕಂಬಳಿಯಿಂದ ತಮ್ಮ ಮುಖವನ್ನು ಮರೆಮಾಚಿಕೊಂಡಿದ್ದರು. ಇದಲ್ಲದೆ ವೈಕುಂಠದಾಸರು ದೇವಾಲಯಕ್ಕೆ ಹೋಗುವಾಗ ದೀವಟಿಗೆಯನ್ನು ಹಿಡಿಯುತ್ತಿದ್ದರು. ಮನೆಯಲ್ಲಿ ಊಳಿಗದ ಕೆಲಸವನ್ನೂ ಮಾಡಿದರು. ಆದರೆ ಊಟದ ಸಮಯಕ್ಕೆ ಸರಿಯಾಗಿ ಕಾಣದಾಗುತ್ತಿದ್ದರು. ಹೀಗೆ ಕೆಲವು ದಿನಗಳು ನಡೆದನಂತರ, ವೈಕುಂಠದಾಸರ ಶಿಷ್ಯನಾದ ವರದನು ನೀನಾರೆಂದು ಅವರನ್ನು ವಿಚಾರಿಸಿದನು. ಕನಕದಾಸರ ಉತ್ತರವೇ ಒಂದು ಕೀರ್ತನೆ:

ಬಂಟನಾಗಿ ಬಾಗಿಲ ಕಾಯುವೆ ವೈ |ಕುಂಠದಾಸೋತ್ತಮ ದಾಸರ ಮನೆಯ ||

....

ಮೀಸಲು ಊಳಿಗವನ್ನು ಮಾಡುವೆನು | ಶೇಷ ಬ್ರಹ್ಮಾದಿ ವಂದಿತನಾದ ನಮ್ಮ ||

ವಾಸುದೇವ ಆದಿಕೇಶವರಾಯನ | ದಾಸ ದಾಸ ದಾಸ ದಾಸರ ಮನೆಯ ||

ಈ ಹಾಡನ್ನು ಮನೆಯ ಒಳಗಿನಿಂದ ಕೇಳುತ್ತಿದ್ದ ವೈಕುಂಠದಾಸರ ಕಿವಿಗೆ ಆದಿಕೇಶವ ಎಂಬ ಮುದ್ರಿಕೆಯು ಕೇಳಿದ ಒಡನೆಯೇ ಹಾಡುತ್ತಿರುವುದು ಯಾರೆಂದು ತಿಳಿಯಿತು. ಕನಕದಾಸರಂಥ ಮಹಾನುಭಾವರು ತಮ್ಮ ಮನೆಯಲ್ಲಿ ಸೇವಕನಂತೆ ಕೆಲಸ ಮಾಡಿದ್ದು ತಮ್ಮಿಂದಾದ ಎಷ್ಟು ದೊಡ್ಡ ಅಪಚಾರ. ಈ ಪಾಪಕ್ಕೆ ಪ್ರಾಯಶ್ಚಿತ್ತವೇನು ಎಂದು ಕನಕದಾಸರನ್ನೇ ಬೇಡಿಕೊಂಡರು. ಆಗ ಕನಕದಾಸರು ‘ದೇವರ ಊಳಿಗ ಎಲ್ಲೆಲ್ಲೂ ದೊರಕುವುದು, ಆದರೆ ದಾಸರ ಮನೆಯ ಊಳಿಗ ಸಿಗುವುದು ದುರ್ಲಭ. ಆದ್ದರಿಂದ ಹೀಗೆ ಮಾಡಿದೆ. ಎಷ್ಟಾದರೂ ಕೇಶವನೇ ನಿಮ್ಮ ಊಳಿಗದವನಲ್ಲವೇ?’ ಎಂದು ಸಮಾಧಾನ ಮಾಡಿದರು. 

ವಿದ್ವಾನ್ ಪದ್ಮನಾಭ ಶರ್ಮಾ ಅವರು ಕನಕದಾಸರ ಶ್ರೀಹರಿಭಕ್ತಿಸಾರವನ್ನು ಅನುವಾದ ಸಹಿತವಾಗಿ ಬರೆದು ಪ್ರಕಟಿಸಿದ್ದಾರೆ. ಈ ಗ್ರಂಥದ  ಪ್ರಸ್ತಾವನೆಯಿಂದ  ಕನಕದಾಸರು ಬೇಲೂರಿನಲ್ಲಿ ಹತ್ತು ವರ್ಷಗಳು ಇದ್ದರೆಂದು ತಿಳಿದು ಬರುತ್ತದೆ.. ಅವರು ಅಲ್ಲಿದ್ದಷ್ಟು ದಿನವೂ ಅಲ್ಲಿನ ಜನರಿಗೆ ಈ ಇಬ್ಬರು ದಾಸೋತ್ತಮರಿಂದ ಕೀರ್ತನೆಗಳ, ಭಕ್ತಿ ಪ್ರವಚನಗಳ ರಸದೌತಣ. ಕನಕದಾಸರು ತಮ್ಮ ಪ್ರಸಿದ್ಧ ಕಾವ್ಯವಾದ ಹರಿಭಕ್ತಿಸಾರ ವನ್ನೂ ಬೇಲೂರಿನಲ್ಲಿದ್ದಾಗಲೇ ರಚಿಸಿದರೆಂದು ಆ ಗ್ರಂಥ ಮೊದಲನೆಯ ಮತ್ತು ಕೊನೆಯ ಮಂಗಳ ಸ್ತುತಿಗಳ ಎರಡು ಪದ್ಯಗಳಿಂದ ಊಹಿಸಬಹುದು. 

ಶ್ರೀಯರಸ ಗಾಂಗೇಯನುತ ಕೌಂ

ತೇಯವಂದಿತ ಚರಣ ಕಮಲದ

ಳಾಯತಾಂಬಕ ರೂಪ ಚಿನ್ಮಯ ದೇವಕೀ ತನಯ |

ರಾಯ ರಘುಕುಲವರ್ಯ ಭೂಸುರ

ಪ್ರೀಯ ಸುರಪುರ ನಿಲಯ ಚೆನ್ನಿಗ

ರಾಯ ಚತುರೋಪಾಯ ರಕ್ಷಿಸು ನಮ್ಮನನವರತ ||

(ಸುರಪುರ = ಬೇಲೂರು)

ಮಂಗಳಂ ಸರ್ವಾದಿಭೂತಗೆ 

ಮಂಗಳಂ ಸರ್ವವನು ಪೊರೆವಗೆ

ಮಂಗಳಂ ತನ್ನೊಳಗೆ ಲೋಕವ ಲಯಿಸಿಕೊಮ್ಬವೆ |

ಮಂಗಳಂ ಸರ್ವತಂತ್ರಗೆ 

ಮಂಗಳಂ ಸತ್ಯ ಸ್ವರೂಪಗೆ 

ಮಂಗಳಂ ಸಿರಿಗೊಡೆಯ ಚೆನ್ನಿಗರಾಯ ಕೇಶವಗೆ ||

ಮಂಗಳಂ ಜಗದಾದಿ ಮೂರ್ತಿಗೆ

ಮಂಗಳಂ ಶ್ರಿತಪುಣ್ಯಕೀರ್ತಿಗೆ

ಮಂಗಳಂ ಕರಕಲಿತಚಕ್ರವಿದಳಿತ ನಕ್ರಗೆ |

ಮಂಗಳಂ ದ್ರೌಪದಿಯ ಪೊರೆದಗೆ

ಮಂಗಳಂ ಧ್ರುವರಾಜಗೊಲಿದಗೆ

ಮಂಗಳಂ ಬೇಲೂರ ಚೆನ್ನಿಗರಾಯ ಕೇಶವಗೆ ||


ಕನಕದಾಸರು ಕೊನೆಗೆ ಬೇಲೂರನ್ನು ಬಿಟ್ಟು ಮೇಲುಕೋಟೆಗೆ ಹೊರಟಾಗ, ವೈಕುಂಠದಾಸರು ಅವರನ್ನು ಬಹುದೂರ ಕಾಲ್ನಡಿಗೆಯಲ್ಲಿ ಹಿಂಬಾಲಿಸಿ ಬೀಳ್ಕೊಟ್ಟರೆಂದು ಹೇಳುತ್ತಾರೆ.

ವೈಕುಂಠದಾಸರು ಸುಮಾರು ಎಪ್ಪತ್ತು ವರ್ಷಗಳ ಕಾಲ ಬಾಳಿದರು. ಅವರು ಎಷ್ಟು ಕೃತಿಗಳನ್ನು ರಚಿಸಿದರೋ ತಿಳಿಯದು – ಸುಮಾರು ನೂರು ಮಾತ್ರ ಲಭ್ಯವಿದೆ. ಇವರ ಅಂಕಿತ ವೈಕುಂಠ ಕೇಶವ, ವೈಕುಂಠದರಸ, ವೈಕುಂಠರಮಣ ಎಂದಿವೆ.


Comments

  1. ಎಂದಿನಂತೆ ತಮ್ಮ ಲೇಖನ ವಿಭಿನ್ನತೆ ಮತ್ತು ಮೌಲ್ಯಾತ್ಮಕವಾಗಿರುತ್ತದೆ. ಈ ಲೇಖನದ ಮೂಲಕ ವೈಕುಂಠದಾಸರ ಪರಿಚಯ ಮಾಡಿದ್ದು ತುಂಬಾ ಸಂತೋಷದ ವಿಚಾರ. ತಂದೆಯ ಶ್ರಾದ್ಧಕ್ಕೆ ಬಾರದ ಬ್ರಾಹ್ಮಣರು, ಕನಕದಾಸರು ಅವರ ಮನೆಯಲ್ಲೇ ಇದ್ದದ್ದು, ಮೇಲುಕೋಟೆಗೆ ಹೊರಟಾಗ ಬಹುದೂರ ಬೀಳ್ಕೊಟ್ಟ ದೃಶ್ಯಗಳು ಊಹಿಸಿಕೊಂಡರೆ ಮನಮುಟ್ಟುತ್ತವೆ. ಧನ್ಯವಾದಗಳು ಡಾ ಮಧುಸೂದನ ಸಾರ್

    ReplyDelete
  2. I was not aware of shri vaishnava dasa. Thanks for introducing such a nice article about Dasa sahithya. Kanaka dasa involved in his lie is something amazing thing to know.

    ReplyDelete

Post a Comment