ಕಾನ್ವೆಂಟ್‌ನವರಿಗೆ ಕಥೆ ಹೇಳೋದೂಂದ್ರೇ.....

ಕಾನ್ವೆಂಟ್‌ನವರಿಗೆ ಕಥೆ ಹೇಳೋದೂಂದ್ರೇ.....

ಹಾಸ್ಯ ಲೇಖನ - ಅಣುಕು ರಾಮನಾಥ್

ಒಂದೂರಲ್ಲಿ ಒಬ್ಬ ರಾಜ ಇದ್ದ

ಊರು ದೊಡ್ಡದೋ ಚಿಕ್ಕದೋ?’

ದೊಡ್ಡದೇ. ಅರಮನೆ ಇತ್ತಲ್ಲ

ಅರಮನೆ ಅಂದ್ರೆ?’

ಅರಮನೆ ಅಂದ್ರೆ ರಾಜ ಇರೋದು ಕಣೋ... ಪ್ಯಾಲೇಸ್

ಹೂಂ. ನೋಡಿದೀನಿ. ಅದಕ್ಕೆ ಚಕ್ರ ಇರತ್ತೆ ಅಲ್ವಾ?’

ಚಕ್ರವೇಪ್ಯಾಲೇಸ್ ನೆಲದ ಮೇಲಿರೋದು ಕಣೋ. ಅದಕ್ಕೆ ಚಕ್ರ ಇರಲ್ಲ

ನೀನು ಸುಳ್ಳು ಹೇಳ್ತೀಯ. ಪ್ಯಾಲೇಸ್‌ಗೆ ಚಕ್ರ ಇರತ್ತೆ

ಅದ್ಯಾವುದೋ ಅಂತಹ ಪ್ಯಾಲೇಸು?’

ಅವತ್ತು grandpa ಡ್ರಾಪ್ ಮಾಡಕ್ಕೇಂತ ರೈಲ್ವೇ ಸ್ಟೇಷನ್‌ಗೆ ಹೋಗಿದ್ವಲ್ಲಅಲ್ಲಿ ಪ್ಯಾಲೇಸ್ ಆನ್ ವೀಲ್ಸ್ ನಿಂತಿತ್ತು

ಜಾಹೀರಾತುಗಳ ಪ್ರಭಾವವೇ ಹೀಗೆ. ರೈಲನ್ನ ಪ್ಯಾಲೇಸೂಂತ ರೈಲ್ ಬಿಡ್ತಾರೆ. ಪ್ಯಾಲೇಸಿಗೆ ಚಕ್ರ ಇರತ್ತೇಂತ ಮಕ್ಕಳು ನಂಬತ್ವೆ.

ಸರಿ. ಅದು ಕಂಬಿ ಮೇಲಿನ ಪ್ಯಾಲೇಸು. ಈ ರಾಜ ಇದ್ದದ್ದು ನೆಲದ ಮೇಲಿನ ಪ್ಯಾಲೇಸು. ರಾಜನ ಹೆಸರು ಬಲೀ ಅಂತ

ಮುರಿದರೆ ಟಕ್ ಅಂತ ಶಬ್ದ ರ‍್ತಾ ಇದ್ನಾ?’


ಅವನನ್ನ ಯಾರೂ ಮುರಿದು ನೋಡಿಲ್ಲ. ಅದ್ಯಾಕೆ ಹಾಗೆ ಶಬ್ದ ಬರಬೇಕು

ಅನ್ನೋದು ನೀನು?’

ವೆಜಿಟೆಬಲ್ ಅಂಕಲ್ ಅವತ್ತು ಬೀನ್ಸ್ ತಂದಿದ್ರು. ನಿಮಗೆ ಶಮಾ ಆಂಟಿ ಗೊತ್ತಲ್ವಾ?’

ಯಾರಿಗೆ ಗೊತ್ತಿಲ್ಲ ಎಂದು ಕೇಳಬೇಕು. ಹಾಗಿದ್ದಾಳೆ ಶಮಾ. ದೀಪಾವಳಿಯ ಸಂಜೆ ಅವಳು ಆ ಕಡೆಯಿಂದ ಈ ಕಡೆಗೆ ಹಾದುಹೋದರೆ ಹಚ್ಚಿದ ಫ್ಲವರ್‌ಪಾಟುಗಳೂ ಮಂಕೆನಿಸುವಂತಹ ರೂಪ. ಅವಳನ್ನು ಕಂಡ ಹಣತೆಗ ಬತ್ತಿಗಳು ಮತ್ಸರದಿಂದ ಉರಿದು ಕಪ್ಪಾಗುತ್ತವಂತೆ.

ಗೊತ್ತು’ ಎಂದೆ.

ಶಮಾಂಟಿ ಬೀನ್ಸ್ ನ  ಕೈಯಲ್ಲಿ ತೊಗೊಂಡು ಟಕ್ ಅಂತ ಮುರಿಯೋದು, ಬಲಿ ಅನ್ನೋದು ಮಾಡ್ತಿದ್ರು. ಬಲಿ ಅಂದ್ರೆ ಟಕ್ ಅಂದ ಸೌಂಡ್ ಬರತ್ತೆ

ಶಮಾಳ ಧ್ವನಿ ಮೆದು. ಕಡೆಯ ಅಕ್ಷರಗಳು ಕೇಳಿಸುವುದಿಲ್ಲ. ಐ ಲವ್’ ಎಂದುದಷ್ಟೇ ಕೇಳಿಸಿಕೊಂಡು ಎಷ್ಟೋ ಹುಡುಗರು ಅವಳು ತಮ್ಮ ಹೆಸರನ್ನೇ ಹೇಳಿರಬೇಕೆಂದುಕೊಂಡು ಕನಸಿನ ಗೋಪುರಗಳನ್ನು ಕಟ್ಟಿದ್ದಾರೆ. ನಿಜಕ್ಕೂ ಅವಳು ಹೇಳುವುದು ಐ ಲವ್ ಐಸ್‌ಕ್ರೀಮ್’, ‘ಐ ಲವ್ ಬರ್ಗರ್’ ಇಂತಹ ಮಾತುಗಳನ್ನೇ. ಈ ಸಂದರ್ಭದಲ್ಲಿಯೂ ಬಲಿತಿದೆ’ ಎಂದಿರುತ್ತಾಳೆಇವನಿಗೆ ಬಲಿ ಮಾತ್ರ ಕೇಳಿಸಿರುತ್ತದೆ.

ಅವಳು ಹೇಳಿದ ಬಲಿ ಅಡ್ಜಕ್ಟಿವ್ವು. ನಾನು ಹೇಳ್ತಿರೋದು ನೌನು’ ಎಂದೆ.

ಐ ಅಂಡರ್‌ಸ್ಟುಡ್. ದ ಕಿಂಗ್ಸ್ ನೇಮ್ ಈಸ್ ಬಲಿ’ ಎಂದು ಘೋಷಿಸಿದ. ಕಡೆಗೂ ಕಥೆಗೆ ಚಾಲನೆ ಸಿಕ್ಕಿತು.

ಬಲಿ ಚಕ್ರವರ್ತಿ...

ಚಕ್ರವರ್ತಿ ಅಂದ್ರೆ ಗೊತ್ತು

ಏನು?’

ಹೀ ಈಸ್ ವರ್ತಿ ಆಫ್ ವೀಲ್ಸ್ ಅಂತ. ತುಂಬ ಕಾರುಗಳನ್ನ ಇಟ್ಕೊಂಡಿರೋವ್ನು. ಮಲ್ಯಅಂಬಾನಿಅದಾನಿ...

ಇವರುಗಳೆಲ್ಲ ಹೇಗೆ ಗೊತ್ತೋ ನಿನಗೆ?’

ನ್ಯೂಸ್ ಅಂಕಲ್‌ಗಳು ಹೇಳ್ತಿರ‍್ತಾರಲ್ಲ

ಹೂಂ. ಹಾಗೇ ಇಟ್ಕೋ. ಆಗೆಲ್ಲ ಕಾರ್ ಬದಲು ಚಾರಿಯೆಟ್ಸ್ ರ‍್ತಿದ್ವು. ಬಲಿಯ ಹತ್ರಾನೂ ತುಂಬಾ ಚಾರಿಯಟ್ಸ್ ಇದ್ವು. ಬಲಿ ಒಂದು ದಿವಸ ಯಾಗ ಮಾಡಿದ

ಯಾಗ ಅಂದ್ರೆ?’

ಯಾಗ ಅಂದ್ರೆ.... ಸುತ್ತ ಜನರೆಲ್ಲ ಸೇರಿ ಮಧ್ಯದಲ್ಲಿ ಇರೋ ಹೋಮಕುಂಡಕ್ಕೆ...

ಹೋಮಕುಂಡ ಅಂದ್ರೆ?’

ಹೋಮಕುಂಡ ಅಂದ್ರೆ... ಫೈರ್... ಫೈರ್ ರೈಸಿಂಗ್‌ಗೆ ಅಂತ ಇರೋ ಜಾಗ



ಗೊತ್ತಾಯಿತು

ಏನು?’

ಟೈರುಗಳು

ಹೋಮಕುಂಡ ಅಂದ್ರೆ ಟೈರಾ?’

ಹೂಂ. ಫೈರ್ ರೈಸಿಂಗ್‌ಗೆ ಅಂತ ಎಲ್ಲಾ ಸ್ಟ್ರೈಕಲ್ಲೂ ಅದನ್ನೇ ಯೂಸ್ ಮಾಡೋದು. ಟಿವಿಲಿ ನೋಡಿದೀನಿ

ಅದಲ್ಲವೋ... ಸ್ಕ್ವೇರೋ ರೆಕ್ಟ್ಯಾಂಗುಲರ್ರೋ ಶೇಪಲ್ಲಿರೋ ಒಂದು ಮೇಕ್‌ಶಿಫ್ಟ್ ಹಳ್ಳ. ಅದರಲ್ಲಿ ಉರುವಲು... ಐ ಮೀನ್ ಕಂಬಶ್ಚಿಬಲ್ ವುಡನ್ ಪೀಸಸ್ ಹಾಕಿ ಅವುಗಳ ಮೇಲೆ ಆಗಾಗ ಘೀ ಹಾಕಿ ಉರಿಸ್ತಾ ಉರಿಸ್ತಾ ಸುತ್ತಾ ಇರೋ ಸೇಜ್‌ಗಳು ಚ್ಯಾಂಟ್ ಮಾಡ್ತಾ ರ‍್ತಾರೆ

ಓ ಅದು! ಸೇಕ್ರೆಡ್ ಫೈರ್‌ಪ್ಲೇಸು! ನಾನು ರಾಮಾಯಣ ಸೀರಿಯಲ್ಲಲ್ಲಿ ನೋಡಿದ್ದೀನಿ. ಬಲೀಗೂ ಯಾರಾದರೂ ಪಾಯಸ ತಂದ್ಕೊಟ್ರಾ?’

ಇಲ್ಲವೋ. ಅದು ರಾಮಾಯಣದಲ್ಲಿ ಮಾತ್ರ

ಯಾಕೆಬಲಿಗೆ ಪಾಯಸ ಇಷ್ಟ ಇರಲಿಲ್ವಾ?’

ಬಲಿ ಏನೂ ಕೇಳಕ್ಕೆ ಯಾಗ ಮಾಡಿರಲಿಲ್ಲ ಕಣೋ

ಯಾಗ ಅಂದ್ರೆ?’

ಅದೇ ಕಣೋ... ಹೋಮಕುಂಡದ ಸುತ್ತ ಜನ ಕೂತು...

ಗೊತ್ತಾಯ್ತು. ಘೀ ಸರ್ವಿಂಗ್ ಟು ಪ್ಲೀಸ್ ಆಲ್ ಗಾಡ್ಸು

ನಿನಗೆ ಹೇಗೆ ಗೊತ್ತು?’

ವೈ ಸೋ ಮಚ್ ಘೀ ಪುಟಿಂಗ್ ಅಂತ ಶಮಾ ಆಂಟೀನ ಕೇಳಿದಾಗ ಹೇಳಿದ್ರು. ಸ್ಪಿರಿಚುಯಲ್ ಫೈರ್ ಮುಂದೆ ಕೂತು ಮಾಡೋ ವರ್ಷಿಪ್ ಆಫ್ ಗಾಡ್‌ನೇ ನೀನು ಯಾಗ ಅಂತಿರೋದು. ನಿನಗೆ ಕಥೆ ಹೇಳಕ್ಕೇ ಬರಲ್ಲ

ಸರ್ಟಿಫಿಕೇಟ್ ಸಿಕ್ಕಿತಲ್ಲ! ಮರ್ಯಾದೆ ಇದ್ದವನು ಎದ್ದುಹೋಗಬೇಕು. ನಾನುಮರಳಿಯತ್ನವ ಮಾಡು ಮನುಜ ಮಮ್ಮಿ ಬರುವ ತನಕ! ಹಬ್ಬಕ್ಕೆ ಸ್ಯಾರಿ ರ‍್ಬೇಕು. ಚಿಂಟೂನ ನಾನು ಬರೋರ‍್ಗೂ ಕಂಟ್ರೋಲ್ ಮಾಡು ಡಿಯರ್’ ಎಂದಿದ್ದಳು ಅವನ ಅಮ್ಮ. ನಾನು ಈ ಅಪಾರ್ಟ್ಮೆಂಟಿನ ಸೆಕ್ಯುರಿಟಿ ಆಫೀಸರ್ ಕಮ್ ಗಾರ್ಡಿಯನ್ ಏಂಜಲ್ ಫಾರ್ ಆಲ್ ಚಿಲ್ಡ್ರನ್ನು.

ಸರಿ. ಬಲಿ ಯಾಗ ಮಾಡಿದಮೇಲೆ ಬಂದವರು ಕೇಳಿದ್ದನ್ನೆಲ್ಲ ದಾನ ಕೊಟ್ಟ

ದಾನ ಅಂದ್ರೆ?’

ಕೊಡೋದು ಕಣೋ. ಫ್ರೀಯಾಗಿ ಕೊಡೋದು

ಓ! ಗ್ರ್ಯಾಂಡ್ ದೀಪಾವಳಿ ಆಫರ್ ಅಂತ ಕೊಡ್ತಾರಲ್ಲಹಾಗಾಬೈ ಒನ್ ಟೇಕ್ ಟೂ ಫ್ರೀ ಸ್ಕೀಮ್ ತರಹದ್ದಾಏನು ಕೊಂಡ್ಕೊಂಡ್ರೆ ಏನು ಫ್ರೀ ಕೊಡ್ತಿದ್ದಅವತ್ತಿನ ಪಾಂಪ್ಲೆಟ್ ಇದೆಯಾ ನಿನ್ನ ಹತ್ತಿರ?’

ಇವನ ಪ್ರಶ್ನೆಗಳ ಸ್ಪೀಡ್ ನೋಡಿದರೆ ಒಂದಲ್ಲ ಒಂದು ದಿನ ಇವನೂ ಆರ್ನಬ್ ಗೋಸ್ವಾಮಿ ಆಗುತ್ತಾನೆ ಅನಿಸಿತು.

ನೀನು ಹೇಳ್ತಿರೋದು ಸೇಲುರ‍್ರು. ನಾನು ಹೇಳ್ತಿರೋದು ಗಿಫ್ಟು...

ಯಾಕೆಅವತ್ತು ಅವನದು ಹ್ಯಾಪಿ ಬರ್ಡ್ಡೇನಾ?’

ಅಲ್ಲ

ವೆಡ್ಡಿಂಗ್ ಆನಿವರ್ಸರಿ?’

ಅಲ್ಲ

ಅಟ್‌ ಲೀಸ್ಟ್ ಡೈವೋರ್ಸ್ ಆನಿವರ್ಸರಿ?’

ಇದಪ್ಪ ವರಸೆ! ಮುಂದೊಂದು ದಿನ ಇದೂ ನಡೆಯಬಹುದು. ಅಥವಾ... ಈಗಲೇ ನಡೆದಿದೆಯೋಲೋಕೋ ಭಿನ್ನ ರುಚಿಃ. ಭಿನ್ನವಾದ ಸಂಸಾರವನ್ನೂ ಸಂತೋಷದಿಂದ ಕಾಣುತ್ತಾ ಡೈವೋರ್ಸೋತ್ಸವವನ್ನೂ ಅಚರಿಸುವುದಲ್ಲದೆ ಆ ಈ ಡೇ ಗಳಂತೆ ವರ್ಲ್ಡ್ ಡೈವೋರ್ಸ್ ಡೇ’ ಅಂತ ಒಂದು ದಿನ ಶುರುವಾಗಿ ವೆನ್ ಊರ್ವಶಿ ಲೆಫ್ಟ್ ವಿಶ್ವಾಮಿತ್ರ ಫಾರ್ ಗುಡ್ದ ಫಸ್ಟ್ ಎವರ್ ಡೈವೋರ್ಸ್ ಆನ್ ಮ್ಯೂಚುವಲ್ ಕಂಸೆಂಟ್ ವಾಸ್ ರೆಕಾರ್ಡೆಡ್’ ಎಂಬ ಕಥೆಯೂ ಚಾಲನೆಗೆ ಬಂದೀತು.

ಅದೆಲ್ಲ ಅಲ್ಲ ಕಣೋ. ರಿಚ್ ಪೀಪಲ್ಲು ಅವರಿಗೆ ಇಷ್ಟ ಬಂದಾಗ ಗಿಫ್ಟ್ ಕೊಡ್ತಿದ್ರು ಆಗಿನ ಕಾಲದಲ್ಲಿ

ನಾನ್‌ಸೆನ್ಸ್. ಮನಸ್ಸು ಬಂದಾಗೆಲ್ಲ ಗಿಫ್ಟ್ ಕೊಟ್ರೆ ರಿಚ್‌ಮ್ಯಾನ್ ಪೂರ್‌ಮ್ಯಾನ್ ಆಗ್ತಾನಷ್ಟೆ’ ಚಿಂಟುವಿನ ಬಾಯಲ್ಲಿ ಜೀವನಾನುಭವದ ಸಾರ!

ಸುಮ್ಮನೆ ಕಥೆ ಕೇಳಿಸ್ಕೊಳೋ...

ಊಹೂಂ. ಯಾವುದನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳಬೇಡ. ನಿನ್ನ ಒಪೀನಿಯನ್ನನ್ನು ಹೇಳಲು ಡೋಂಟ್ ಬಿ ಅಫ್ರೈ ಅಂತ ಜ್ಯಾನೆಟ್ ಆಂಟಿ ಹೇಳಿದಾರೆ

ಜ್ಯಾನೆಟ್ ಯಾರೋ?’

ಕಥೆ ಹೇಳು. ಅವಳು ಯಾರಾದರೆ ನಿನಗೇನು?’

ಅದೂ ಸರಿಯೇ. ಆದರೆ ಗಂಡಿಗೆ ಹೆಣ್ಣಿನ ಹೆಸರುನೆರಳು ಕಂಡಾಕ್ಷಣಕೇಳಿದಾಕ್ಷಣ ಕೆಟ್ಟ ಕುತೂಹಲ ಉಂಟಾಗುತ್ತದೆಂದು ಈ ಪೋರನಿಗೆ ಹೇಗೆ ತಿಳಿದೀತು.

ಓಕೆ. ಯಾಗ ಮಾಡಿದಾಗ ಗಿಫ್ಟ್ ಕೊಡಬೇಕೂಂತ ರೂಲ್ಸ್ ಇತ್ತು. ಅದಕ್ಕೇ ಗಿಫ್ಟ್ ಕೊಟ್ಟ

ನಿನ್ನ ವಿವರಣೆ ನನಗೆ ಒಪ್ಪಿಗೆ ಆಗಿದೆ

ಬಂದವರು ಕೇಳಿದ್ದನ್ನೆಲ್ಲ ಕೈತುಂಬ ಕೊಟ್ಟ

ಹಾರ್ಸ್ ಕೊಡಿ ಅಂತ ಯಾರಾದರೂ ಕೇಳಿದರಾ?’

ಹೂಂ. ಹಾರ್ಸೂ ಕೊಟ್ಟ

ಹಾರ್ಸನ್ನ ಕೈತುಂಬಾ ಹೇಗೆ ಕೊಡಕ್ಕಾಗತ್ತೆ?’ ಕಿಲಕಿಲ ನಗಲಾರಂಭಿಸಿದ.

ಸುಮ್ಮನೆ ಕಥೆ ಕೇಳೋ. ಆಗ ವಾಮನ ಅಂತ ಒಬ್ಬ ಕುಳ್ಳ ಕೈಲಿ ಛತ್ರಿ ಇಟ್ಕೊಂಡು ದಾನ ಕೇಳಕ್ಕೆ ಬಂದ

ಛತ್ರಿ ಅಂದ್ರೆ?’

ಅಂಬ್ರೆಲಾ

ಅಂಬ್ರೆಲಾ ಕಿತ್ಹೋಗಿತ್ತಾರಿಪೇರಿಗೆ ದುಡ್ಡು ಕೇಳಕ್ಕೆ ಬಂದನಾ?’

ತಲೆಹರಟೆ. ಸುಮ್ಮನೆ ಕೇಳೋ

ನನ್ನನ್ನೇ ಬಯ್ತೀಯಾ... ಮಮ್ಮೀ.... ಊಊಊ...

ಚಿಂಟೂ... ಐ ಯಾಮ್ ಸಾರಿ... ಬಯ್ಯಲ್ಲ... ಇದೋ ನಿನ್ನ ಫೇವರೈಟ್ ಚಾಕ್ಲೇಟ್... ಅಳಬೇಡ... ವಾಮನ ಬಡವ ಅಲ್ಲ. ಬಲಿ ಬಹಳ ಅರೋಗೆಂಟ್ ಆಗಿದ್ದ. ಅವನಿಗೆ ಬುದ್ಧಿ ಕಲಿಸಕ್ಕೇಂತ...

ಅಂಬ್ರೆಲಾಲಿ ಹೊಡೆದು ಬುದ್ಧಿ ಕಲಿಸಕ್ಕಾ?’ 

ಅಲ್ವೋ...

ವಾಮನ ಬಂದಿದ್ದು ಸಮ್ಮರ್ರೋರೈನಿ ಸೀಸನ್ನೋ?’

ಯಾಕೆ?’

ಅಂಬ್ರೆಲಾ ಬೇಕಾದ್ದು ಬಿಸಿಲಿಗೆ ಅಥವಾ ಮಳೆಗೆ ಮಾತ್ರ ಅಲ್ವಾ...



ಅವನು ಬಂದಿದ್ದು ವಿಂಟರಲ್ಲಿ ಕಣೋ’

‘ಹಾಗಾದರೆ ಅಂಬ್ರೆಲಾ ಯಾಕೆ?’

ಒಂದಾನೊಂದು ಕಾಲದಲ್ಲಿ ಇದೇ ಪ್ರಶ್ನೆ ಕೇಳಿದ್ದಿದ್ದರೆ ‘ಮೂರ್ಖ, ಉಡಾಳ, ತಲೆಹರಟೆ’ ಇತ್ಯಾದಿ ಮೈಲ್ಡ್ ಬಯ್ಗಳೋ, ‘...ಮಗನೆ’ ಎಂಬ ವಿಶೇಷ ಬಯ್ಗಳೋ  ಗ್ಯಾರಂಟಿ. ಈಗ ‘ಇಂಕ್ವಿಸಿಟಿವ್’, ‘ಇನ್ನೋವೇಟಿವ್’, ‘ಬ್ರಿಲಿಯಂಟ್’ ಹಣೆಪಟ್ಟಿಗಳ ಸರಮಾಲೆ!

‘ಬಲಿಯ ರಾಜ್ಯದಲ್ಲಿ ಕಚ್ಚೋ ನಾಯಿಗಳಿದ್ದವು. ಅವು ಅಟ್ಟಿಸ್ಕೊಂಡು ಬಂದರೆ ಹೊಡೆಯಕ್ಕೇಂತ ಇಟ್ಕೊಂಡಿದ್ದ ಅಂತ thinking on your feet and answering ನಿನಗೆ ಬರಲ್ಲ. ಪೂರ್ ಅಂಕಲ್’ ತನ್ನ ಸಮಸ್ಯೆಗೆ ತಾನೇ ಪರಿಹಾರ ನೀಡಿ ಕಥೆ ಮುಂದುವರಿಸಲು ಅನುಮತಿ ನೀಡಿದ.

‘ನನಗೆ ಮೂರು ಹೆಜ್ಜೆ ಭೂಮಿ ದಾನ ಕೊಡು ಅಂತ ವಾಮನ ಕೇಳಿದ’

‘ಹೆಜ್ಜೆ ಅಂದ್ರೆ?’

‘ಸ್ಟೆಪ್ಸ್’

‘steps ಅಂದರೆ stairsಆ?’

‘ಅಲ್ಲವೋ. Feet... Three feet’

‘ಟೇಪ್ ಇತ್ತಾ?’

‘ಗೊತ್ತಿಲ್ಲ ಕಣೋ’

ಚಿಂಟುವಿನ ಕೈ ಗಲ್ಲಕ್ಕೆ ಹೋಯಿತು, ಕಣ್ಣುಗಳು ಯೋಚನಾಲೋಕಕ್ಕೆ ಹೋದವು. ‘ಹ್ಞಾಂ! ಇತ್ತು’ ಎನ್ನುತ್ತಾ ಈ ಲೋಕಕ್ಕೆ ಮರಳಿದ ಅವನನ್ನು ‘ಹೇಗೆ ಹೇಳುತ್ತೀಯಾ?’ ಎಂದು ಕೇಳಿದೆ.

‘ಯಾಗ ಈಸ್ ಸೆಲಿಬ್ರೇಷನ್; ಸೆಲಿಬ್ರೇಷನ್ ಮೀನ್ಸ್ ನ್ಯೂ ಡ್ರೆಸ್; ನ್ಯೂಸ್ ಡ್ರೆಸ್ ಮೀನ್ಸ್ ಫ್ಯಾಷನ್ ಡಿಸೈನರ್; ಫ್ಯಾಷನ್ ಡಿಸೈನರ್ ಮೀನ್ಸ್ ಮೆಷರ್ಮೆಂಟ್ ವಿಚ್ ಮೀನ್ಸ್ ಟೇಪ್’ ಎಂದ.

ಟೇಪಿನಲ್ಲಿ ಅಳೆದರೆ ಕಥೆ ಸಾಗುವಂತಿಲ್ಲವಲ್ಲ! ‘ಯೂ ಆರ್ ರೈಟ್. ಆದರೆ ಹೇಳಿದ ಸಮಯಕ್ಕೆ ಸರಿಯಾಗಿ ಕೊಡದ ಕಾರಣ, ಹೊಲೆದ ಡ್ರೆಸ್ ತುಂಬಾ ಡಿಫೆಕ್ಟಿವ್ ಆಗಿ ಇದ್ದ ಕಾರಣ ಬಲಿ ಅವನನ್ನು ಚೆನ್ನಾಗಿ ಬಯ್ದಿದ್ದ. ಆದ್ದರಿಂದ ಅವನು ಫಂಕ್ಷನ್ ಗೆ ಬಂದಿರಲಿಲ್ಲ. Therefore ತ್ರೀ ಸ್ಟೆಪ್ಸ್ ಮೂಲಕ ಭೂಮಿ ಅಳೆದು ಕೊಡೋದೂಂತ ತೀರ್ಮಾನ ಆಯ್ತು’ ಎಂದು ತಿಪ್ಪೆ ಸಾರಿಸಿದೆ.

‘ಆಮೇಲೆ?’

‘ಬಲಿಯ ಗುರು ಶುಕ್ರಾಚಾರ್ಯನಿಗೆ ವಾಮನ ವಿಷ್ಣು ಅಂತ ಗೊತ್ತಾಗ್ಹೋಯ್ತು’

‘ವಿಷ್ಣು ಗೊತ್ತು. ಆಪ್ತಮಿತ್ರ... ರಾರಾ... ಸರಸಕು ರಾರಾ...’ ಎಂದು ಹಾಡಲಾರಂಭಿಸಿದ.

‘ಆ ವಿಷ್ಣು ಅಲ್ಲವೋ... ವೈಕುಂಠದಲ್ಲಿ ಮಲಗಿರ್ತಾನಲ್ಲಾ...’

‘ವೈಕುಂಠ ಅಂದ್ರೆ?’

‘ವೈಕುಂಠ ಅಂದ್ರೆ... ಹಾಲಿನ ಸಮುದ್ರ...’

‘ಬೆಂಗಳೂರು ಡೈರೀನಾ?’

‘ಅಲ್ಲವೋ... ಮಿಲ್ಕ್ ಸೀ... ಈಗ ಬ್ಲ್ಯಾಕ್ ಸೀ ಅಂತ ಇಲ್ವಾ, ಅದೇ ತರಹಾನೇ ಆಗ ಮಿಲ್ಕ್ ಸೀ ಅಂತ ಇತ್ತು. ಅದರ ಮಧ್ಯದಲ್ಲಿ ವಿಷ್ಣು ಮಲಗಿದ್ದ’

‘ಅಂದರೆ ವೈಕುಂಠ ಈಸ್ ಎನ್ ಐಲ್ಯಾಂಡ್’

‘ಸರಿ. ಹಾಗೇ ಇಟ್ಕೋ. ಆ ವಿಷ್ಣೂನೇ ಈಗ ಕುಳ್ಳನ ರೂಪದಲ್ಲಿ ಬಂದಿದ್ದ’

‘ಗೊತ್ತಾಯ್ತು... ಅಪೂರ್ವ ಸಹೋದರಂಗಳ್ ನಲ್ಲಿ ಕಮಲ ಹಾಸನ್ ಬಂದಹಾಗೆ’

‘ಹಾಗಲ್ವೋ... ಕಮಲಹಾಸನ್ ಆಕ್ಟರ್ರು... ವಿಷ್ಣು ದೇವರು... ಗಾಡ್’

‘ಗಾಡೂ ಆಕ್ಟರ್ರೇ’ ಮತ್ತೊಂದು ಬಾಂಬ್ ಎಸೆದ ಚಿಂಟು.

‘ಯಾರೋ ಹಾಗೆಲ್ಲ ಹೇಳಿದ್ದು?’ ಗಡುಸಾಯಿತು ನನ್ನ ಧ್ವನಿ.

‘ಕೂಲ್ ಡೌನ್. ಮಹಾಭಾರತ ಸೀರಿಯಲ್ಲಲ್ಲಿ ಗಾಡ್ ಕೃಷ್ಣನ್ನ ‘ಕಪಟನಾಟಕಸೂತ್ರಧಾರಿ’ ಅಂದ್ರು. ‘ಕೃಷ್ಣ ವಾಸ್ ಎ ಗುಡ್ ಡೈರೆಕ್ಟರ್ ಅಂಡ್ ಆಕ್ಟರ್’ ಅಂತ ಅದರ ಮೀನಿಂಗೂಂತ ಶಮಾಂಟಿ ಹೇಳಿದರು’

ಶಮಾ ಚಿಂಟುವಿನ ಪ್ರೈವೇಟ್ ಗೂಗಲ್ ಸರ್ಚ್!

‘ಕಥೆ ಕೇಳು. ಬಲಿ ವಾಮನನಿಗೆ ಮೂರು ಹೆಜ್ಜೆ ಭೂಮಿ ಕೊಡಕ್ಕೆ ಒಪ್ಪಿದ’

‘ಆಗಿನ ಕಾಲದಲ್ಲಿ ಸಬ್ ರಿಜಿಸ್ಟ್ರಾರ್ ಆಫೀಸ್ ಇತ್ತಾ?’

‘ಇಲ್ಲ ಕಣೋ’

‘ಮತ್ತೆ ಯಾರಾದರೂ ಎನ್ಕ್ರೋಚ್ ಮಾಡ್ಬಿಟ್ರೆ ಏನ್ಮಾಡೋವ್ರು?’

ಗೇಟಿನ ಬಳಿ ಪೋಂ ಸದ್ದು ಕೇಳಿಸಿತು. ಚಿಂಟು ‘ಮಮ್ಮೀ’ ಅನ್ನುತ್ತಾ ಓಡಿದ. ಬಲಿಯ ಕಥೆಯನ್ನು ಸಂಪೂರ್ಣ ಬಲಿ ಹಾಕುವುದು ಸದ್ಯಕ್ಕಂತೂ ನಿಂತಿತು. ಮುಂದೆ ಏನೇನು ಕಾದಿದೆಯೋ!!!

 

Comments

  1. Looks like this was published earlier but hilarious article. Can`t stop laughing. I amazes me how to switch to different scenarios without losing the track

    ReplyDelete
    Replies
    1. A shorter version was published in a paper. This is the full meal. Thank you for explaining your stance also in a reaction to the other article. I reiterate, feedback is the tonic for creativity.

      Delete
  2. ಬಲಿ ಅಂದ್ರೆ ಟಕ್ ಅಂದ ಸೌಂಡ್ is so true, sub register office ha ha ha good one sir. Linking Mythology for humor toooooooo good

    ReplyDelete

Post a Comment