ಆಹಾರವೇ ಔಷಧಿ - ಇಂಗು

 ಆಹಾರವೇ ಔಷಧಿ ಇಂಗು

Article by Raji Jayadev
Accredited Practicing Dietitian, 
Sydney

ಇಂಗು ಎಂಬ ಹೆಸರು ಕೇಳಿದೊಡನೆ ನೆನಪಿಗೆ ಬರುವುದು ಅದರ ತೀಕ್ಷ್ಣ ಕಟು ವಾಸನೆ. ಕಹಿಯಾಗಿದ್ದರೂ ಒಗ್ಗರಣೆಗೆ ಹಾಕಿದೊಡನೆ ಸ್ವಾದಯುಕ್ತ ರುಚಿ ಕೊಡುತ್ತದೆ. ಇಂಗಿನ ಒಗ್ಗರಣೆ ಹಾಕಿದ ತಿಳಿಸಾರಿನ ಕಂಪು ಮನೆಯಲ್ಲೆಲ್ಲಾ ಹರಡಿ ಬಾಯಲ್ಲಿ ನೀರೂರಿಸುತ್ತದೆ. ಇದರ ತವರು ಪೂರ್ವ ಇರಾನ್ ಮತ್ತು ಪಶ್ಚಿಮ ಅಫ್ಘಾನಿಸ್ತಾನ. ಪಾಕಿಸ್ತಾನ ಮತ್ತು ಭಾರತದ ಎತ್ತರ ಪ್ರದೇಶಗಳಲ್ಲಿ ಬೆಳೆಯುತ್ತದೆ. 



ಸಸ್ಯಶಾಸ್ತ್ರೀಯ ಹೆಸರು ಫೆರುಲ ಅಸಫೀಟಿಡ (Ferula assa-foetida). ಅಸ ಎಂದರೆ ಗಿಡಮರಗಳ ಅಂಟು, ಫೀಟಿಡ ಎಂದರೆ ದುರ್ಗಂಧ. ಏಪಿಯೇಸಿ (Apiaceae) ಕುಟುಂಬಕ್ಕೆ ಸೇರಿದ್ದು. ಇಂಗ್ಲೀಷಿನಲ್ಲಿ ಅಸಫೀಟಿಡ ಎಂದೂ, ಹಿಂದಿಯಲ್ಲಿ ಹಿಂಗ್ ಎಂದೂ ಕರೆಯುತ್ತಾರೆ. ಇತರ ಹೆಸರುಗಳು – ಅಸಾಂಟ್, ಫುಡ್ ಆಫ್ ದ ಗಾಡ್ಸ್ (food of the Gods), ಸ್ಟಿಂಕಿಂಗ್ ಗಮ್ (stinking gum), ಡೆವಿಲ್ಸ್ ಡಂಗ್ (devils dung).

ಇಂಗು, ಬೇರಿನಿಂದ ಮತ್ತು ಕಾಂಡದಿಂದ ಒಸರುವ ಅಂಟು. ಎಳೆಯ ಕಾಂಡ ಮತ್ತು ಎಲೆಗಳನ್ನು ತರಕಾರಿಯಂತೆ ಉಪಯೋಗಿಸಬಹುದು. ಮಾರುಕಟ್ಟೆಯಲ್ಲಿ ದೊರಕುವ ಇಂಗಿನ ಉತ್ಪನ್ನಗಳು: ಇಂಗಿನ ಪುಡಿ, ಹರಳು, ಇಂಗಿನ ಎಣ್ಣೆ ಮತ್ತು ಇಂಗಿನ ನೀರು (asafoetida tincture). ಇಂಗಿನ ಹರಳು ಮತ್ತು ಪುಡಿಯಲ್ಲಿ ಶೇಕಡಾ 30ರಷ್ಟು ಇಂಗಿನ ಅಂಟು, 70ರಷ್ಟು ಅಕ್ಕಿ ಅಥವಾ ಗೋಧಿ ಹಿಟ್ಟು ಮತ್ತು ಅರೇಬಿಕಾ ಅಂಟು, ಎಣ್ಣೆಯಲ್ಲಿ ಅಸಫೀಟಿಡ ಡೈಸಲ್ಫೈ ಡ್ (asafoetida disulfide) ಮತ್ತು ಇತರ ರಾಸಾಯನಿಕಗಳು ಇರುತ್ತವೆ.

ಕ್ರಿಸ್ತಪೂರ್ವ ನಾಲ್ಕುನೂರರಲ್ಲಿ ಅಲೆಗ್ಜ್ಯಾಂಡರ್ ದ ಗ್ರೇಟ್, ಇತರ ಸಾಂಬಾರ ಪದಾರ್ಥಗಳೊಂದಿಗೆ ಇಂಗನ್ನು ಕೂಡ ಪರ್ಷಿಯಾದಿಂದ ಪಾಶ್ಚಿಮಾತ್ಯ ದೇಶಗಳಿಗೆ ಕೊಂಡೊಯ್ದನೆಂಬ ಉಲ್ಲೇಖ ಪುರಾತನ ದಾಖಲೆಗಳಲ್ಲಿದೆ. ಪುರಾತನ ರೋಮಿನಲ್ಲಿ ಇಂಗನ್ನು ಅಡಿಗೆಗೆ ಉಪಯೋಗಿಸುತ್ತಿದ್ದರಂತೆ. ಪ್ರಾಚೀನ ಗ್ರೀಸ್ ದೇಶದ ವಿಜ್ಞಾನಿ ಡಿಯೋಸ್ಕೊರಿಡೆಸ್ (Dioscorides), ಇಂಗನ್ನು ಅಡಿಗೆಗೆ ಮತ್ತು ಔಷಧಿಯಾಗಿ ಉಪಯೋಗಿಸುವ ಬಗ್ಗೆ ಒಂದನೇ ಶತಮಾನದಲ್ಲೇ ಬರೆದಿದ್ದಾನೆ.



ಉಪಯೋಗಗಳು

ಕೇವಲ ಬೆರಳೆಣಿಕೆಯಷ್ಟು ದೇಶಗಳಲ್ಲಿ ಮಾತ್ರ ಇಂಗನ್ನು ಅಡಿಗೆಗೆ ಬಳಸುತ್ತಾರೆ. ಇಂಗಿನ ಬಳಕೆ ಹೆಚ್ಚಾಗಿರುವುದು ಭಾರತದಲ್ಲಿ ಮತ್ತು ಸಸ್ಯಾಹಾರಿಗಳಲ್ಲಿ. ಕಟು ವಾಸನೆ ಇದ್ದರೂ ಬಿಸಿ ಎಣ್ಣೆ ಅಥವಾ ತುಪ್ಪಕ್ಕೆ ಹಾಕಿದೊಡನೆ ಕಟುತ್ವ ಕಳೆದುಕೊಳ್ಳುತ್ತದೆ, ರುಚಿ ಹುರಿದ ನೀರುಳ್ಳಿ ಮತ್ತು ಬೆಳ್ಳುಳ್ಳಿಯಂತಾಗುತ್ತದೆ. ಜೈನರಿಗೆ, ವೈಷ್ಣವರಿಗೆ ಮತ್ತು ಧಾರ್ಮಿಕ ಹಿಂದುಗಳಿಗೆ ನೀರುಳ್ಳಿ ಮತ್ತು ಬೆಳ್ಳುಳ್ಳಿ ನಿಷಿದ್ದ; ಬದಲು ಇಂಗನ್ನು ಉಪಯೋಗಿಸುತ್ತಾರೆ. ಬೌದ್ಧರು ಇಂಗನ್ನು ಉಪಯೋಗಿಸುವುದಿಲ್ಲ.

ಮಸಾಲೆ ಪುಡಿ, ಹಪ್ಪಳ ಮತ್ತು ಉಪ್ಪಿನಕಾಯಿ ತಯಾರಿಕೆಗೆ, ಬಗೆಬಗೆಯ ಅಡಿಗೆಗೆ ಇಂಗನ್ನು ಬಳಸುವುದು ನಿಮಗೆ ಗೊತ್ತೆ ಇದೆ. ಆದರೆ ವೋಸ್ಟರ್ಶೈರ್ ಸಾಸ್ ನ (Worcestershire sauce) ತಯಾರಿಕೆಗೆ ಇಂಗು ಬಹು ಮುಖ್ಯವೆಂದು ನಿಮಗೆ ತಿಳಿದಿದೆಯೇ? ವಿಚಿತ್ರವೆಂದರೆ, ಇಂಗನ್ನು ಸುವಾಸನೆಗಾಗಿ ಸೌಂದರ್ಯವರ್ಧಕಗಳ ತಯಾರಿಕೆಗೂ, ದುರ್ವಾಸನೆಗಾಗಿ ಕ್ರಿಮಿಕೀಟಗಳನ್ನು, ನಾಯಿ, ಬೆಕ್ಕು ಇತರ ಕಾಡುಪ್ರಾಣಿಗಳನ್ನು ಹಿಮ್ಮೆಟ್ಟಿಸುವ ಉತ್ಪನ್ನಗಳ ತಯಾರಿಕೆಗೂ ಉಪಯೋಗಿಸುತ್ತಾರೆ!

ವೈದ್ಯಕೀಯ ಉಪಯೋಗಗಳು

ಪರ್ಯಾಯ ವೈದ್ಯಕೀಯ ಚಿಕಿತ್ಸೆಯಲ್ಲಿ ಅಜೀರ್ಣ, ಹೊಟ್ಟೆ ನೋವು, ಮಲಬದ್ದತೆ, ವಾತ, ಅಸ್ತಮಾ, ಉಸಿರಾಟದ ತೊಂದರೆಗಳು ಮುಂತಾದುವುಗಳ ನಿವಾರಣೆಗೆ ಇಂಗನ್ನು ಉಪಯೋಗಿಸುತ್ತಾರೆ. ಮೂರ್ಛೆರೋಗ ತಡೆಹಿಡಿಯಲು, ಅಪೀಮು ಸೇವನೆಗೆ ಪ್ರತ್ಯೌಷಧಿಯಾಗಿಯೂ ಉಪಯೋಗಿಸುತ್ತಾರೆ. ಇವುಗಳಿಗೆ ವೈಜ್ಞಾನಿಕ ಪುರಾವೆ ಒದಗಿಸಲು ಸಂಶೋಧನೆಗಳು,  ಅಧ್ಯಯನಗಳು ನಡೆಯಬೇಕಾದ ಅಗತ್ಯವಿದೆ.

ಇಂಗು, ರಕ್ತದಲ್ಲಿನ ಕೊಲೆಸ್ಟಿರಾಲ್ ಮತ್ತು ಟ್ರೈಗ್ಲಿಸರೈಡ್ಸ್ (ಒಂದು ಬಗೆಯ ಕೊಬ್ಬು) ಪ್ರಮಾಣವನ್ನು ಕಡಿಮೆಗೊಳಿಸುತ್ತದೆ, ರಕ್ತದೊತ್ತಡವನ್ನು ತಗ್ಗಿಸುತ್ತದೆ, ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ, ರಕ್ತವನ್ನು ತೆಳುವಾಗಿಸಿ ರಕ್ತ ಪರಿಚಲನೆ ಸರಾಗವಾಗುವಂತೆ ಮಾಡುತ್ತದೆ ಎಂದು ಕೆಲ ವೈಜ್ಞಾನಿಕ ಸಂಶೋಧನೆ ಮತ್ತು ಅಧ್ಯಯನಗಳಿಂದ ತಿಳಿದುಬಂದಿದೆ. ಆದರೆ ಯಾರು, ಯಾವಾಗ, ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂದು ತಿಳಿದಿಲ್ಲ. 

ಇರಿಟಬಲ್ ಬವೆಲ್ ಸಿಂಡ್ರೋಮ್ (Irritable Bowel Syndrome) ಖಾಯಿಲೆ ಇರುವವರು ನೀರುಳ್ಳಿ ಮತ್ತು ಬೆಳ್ಳುಳ್ಳಿಯನ್ನು  ತಿನ್ನಬಾರದು. ನೀರುಳ್ಳಿ ಮತ್ತು ಬೆಳ್ಳುಳ್ಳಿಯ ಬದಲು ಇಂಗನ್ನು ಉಪಯೋಗಿಸಿ. ಇಂಗಿನಲ್ಲಿರುವ ರಾಸಾಯನಿಕಗಳು ಈ ಖಾಯಿಲೆಯ ಚಿಕಿತ್ಸೆಗೆ ಸಹಕಾರಿಯೆಂದು ಕೆಲ ವೈಜ್ಞಾನಿಕ ಅಧ್ಯಯನಗಳಿಂದ ತಿಳಿದುಬಂದಿದೆ.

ಅಪಾಯ ಮತ್ತು ಮುನ್ನೆಚ್ಚರಿಕೆ

ಇಂಗನ್ನು ಅಡಿಗೆಗೆ ಉಪಯೋಗಿಸುವುದರಿಂದ ಏನೂ ತೊಂದರೆ ಇಲ್ಲ, ಆರೋಗ್ಯಕ್ಕೂ ಒಳ್ಳೆಯದು. ಚಿಟಿಕೆ ಇಂಗನ್ನು ಒಂದು ಲೋಟ ಮಜ್ಜಿಗೆಗೆ ಹಾಕಿ ಕುಡಿದಲ್ಲಿ ವಾಯು ಮತ್ತು ಹೊಟ್ಟೆಯುಬ್ಬರ ನಿವಾರಣೆಯಾಗುತ್ತದೆ. ಆದರೆ ಇದರ ಸೇವನೆ ಮಿತಿಮೀರಿದಲ್ಲಿ ಅಪಾಯವಿದೆ. ಗರ್ಭಿಣಿಯರು, ಎದೆಹಾಲೂಡಿಸುವವರು, aspirin, heparin ಮತ್ತು warfarin ಮಾತ್ರೆ ಸೇವಿಸುವವರು, ಅಧಿಕ ರಕ್ತದೊತ್ತಡಕ್ಕೆ ಮಾತ್ರೆ ತೆಗೆದುಕೊಳ್ಳುವವರು, ಹೊಟ್ಟೆಹುಣ್ಣು (ulcers) ಮತ್ತು ಮೂರ್ಛೆರೋಗದಿಂದ ಬಳಲುತ್ತಿರುವವರು, ಇಂಗನ್ನು ಹಸಿಯಾಗಿ ಬಹುದಿನಗಳ ಕಾಲ ಸೇವಿಸುವುದು ಅಪಾಯಕಾರಿ. ಅತಿ ಹೆಚ್ಚು ಸೇವನೆಯಿಂದ ರಕ್ತಸ್ರಾವವಾಗಬಹುದು, ರಕ್ತದೊತ್ತಡ ಅಪಾಯಕಾರಿ ಮಟ್ಟಕ್ಕಿಳಿಯಬಹುದು, ವಾಂತಿ, ಬೇಧಿಯುಂಟಾಗಬಹುದು.

ನೆನಪಿಡಿ: ಪ್ರಕೃತಿ ಸಹಜ ಉತ್ಪನ್ನಗಳಿಂದ (natural products) ಅಪಾಯವಿಲ್ಲ ಎನ್ನುವುದು ಸತ್ಯವಲ್ಲ.

Comments

  1. ಇಂಗಿನ ಬಗ್ಗೆ ಅನೇಕ ವಿಷಯಗಳು ನನಗೆ ತಿಳಿದಿರಲಿಲ್ಲ. ಇಷ್ಟು ಸ್ವಾರಸ್ಯದ ಮಾಹಿತಿ ತಿಳಿಸಿಕೊಟ್ಟದ್ದಕ್ಕೆ ಶ್ರೀಮತಿ ರಾಜೇಶ್ವರಿ ಅವರಿಗೆ ಧನ್ಯವಾದಗಳು.

    ReplyDelete
  2. really I did not know that it comes from a plant. Few facts are really interesting.Thanks Madam

    ReplyDelete

Post a Comment