ಅನಂತಗಾನ - ವರದಿ

"ಅನಂತಗಾನ" - ಭಾವಗೀತೆಗಳ ಗಾಯನ 

ವರದಿ - ಶ್ರೀಮತಿ ರಾಜಲಕ್ಷ್ಮಿ ನಾರಾಯಣ 

 ಪಿ ಕಾಳಿಂಗರಾವ್ ಸ್ಮೃತಿ ಮೆಲೋಡಿಸ್ ಆಯೋಜಿಸಿದ್ದ ಅನಂತಗಾನ ಭಾವಗೀತೆಗಳ ಗಾಯನ ಕಾರ್ಯಕ್ರಮ ಆನ್ಲೈನ್ ಫೇಸ್ಬುಕ್ ಮೂಲಕ ಪ್ರಪಚದೆಲ್ಲೆಡೆ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ನಮ್ಮ ಸಿಡ್ನಿಯ ಲತಾಮಂಗೇಶ್ಕರ್ ಎಂದೇ ಹೆಸರು ಮಾಡಿರುವ ಖ್ಯಾತ ಗಾಯಕಿ, ಅನಂತಸ್ವಾಮಿಯವರ ಶಿಷ್ಯೆ ಶ್ರೀಮತಿ ಪುಷ್ಪಾ ಜಗದೀಶ್ ನಡೆಸಿಕೊಟ್ಟ ೯೦ ನಿಮಿಷದ ಸುಮಧುರ ಸಂಜೆಯ ಪುಟ್ಟ ವರದಿ ಇಲ್ಲಿದೆ.  ನಮ್ಮ ಮನೆಯಲ್ಲೇ ನಡೆದಿದ್ದರಿಂದ ನನಗೆ ಈ ವರದಿ ಬರೆಯುವ ಸದಾವಕಾಶ ದೊರಕಿತು. ಇದು ನನ್ನ ಭಾಗ್ಯಾವೆ ಸರಿ. 



೧೧/೧೦/೨೦೨೦೨ ಸಂಜೆ ೪:೩೦ಕ್ಕೆ ಸರಿಯಾಗಿ ಶುರುವಾದ ಕಾರ್ಯಕ್ರಮ ವಾದ್ಯವೃಂದಗಳೊಂದಿಗೆ ಕೇಳುವುದೇ ಸಂಭ್ರಮವಾಗಿತ್ತು. ಮೊದಲ ಮಾತಿನೊಂದಿಗೆ ಶ್ರೀಮತಿ ಪುಷ್ಪಾರವರೇ ಅವರ ಗುರುಗಳ ಬಗೆಗೆ ಪರಿಚಯಿಸುತ್ತಾ ರಾಗವು ನಿನ್ನದೇ ಎಂದು ಅನಂತಸ್ವಾಮಿಯವರನ್ನೇ ಕುರಿತು ರಚಿತವಾದ ಹಾಡಿನೊಂದಿಗೆ ನಾಂದಿ ಹಾಡಿದರು. ಅದಾದ ನಂತರ ಒಂದರ ಮೇಲೊಂದು ಸುಂದರ ರಚನೆಗಳು ಸುಮಧುರ ಕಂಠದಲ್ಲಿ ಹೊರಹೊಮ್ಮಿತು. ಮುಚ್ಚು ಮರೆಯಿಲ್ಲದೆ, ತೇನವಿನಾ ತೃಣಮಪಿ ನಚಲತಿ, ಅದಾದ ನಂತರ ಹಾಡಿದ ಅಂದೆನು ಇಂದೇನು ಎಂದಾದರೊಮ್ಮೆ ಭಾವಗೀತೆಯ ಒಂದು ಇತಿಹಾಸ ದಾಖಲೆಯ ಪರಿಚಯವಾಯಿತು. ಕನ್ನಡದ ಮೊದಲ ಭಾವಗೀತೆ ಧ್ವನಿಸುರುಳಿ ನಿತ್ಯೋತ್ಸವ ಹಾಡುಗಳ ಸರಮಾಲೆಯಲ್ಲಿ ಈ ಹಾಡನ್ನು ಶ್ರೀಮತಿ ಪುಷ್ಪ ಶ್ರೀಮತಿ ಎಂ ಕೆ ಜಯಶ್ರೀ ಅವರ ಜೊತೆಗೂಡಿ ಹಾಡಿದ್ದರು ಎನ್ನುವ ವಿಷಯ ಅಂದು ಹಾಡಿದ ನೆನಪು ಇಂದು ಮಾಡಿಕೊಟ್ಟರು. 

 ನಂತರ ಹಾಡಿದ ನನ್ನೊಳು ನೀ  ನಿನ್ನೋಳು ನಾ (ಪು ತಿ  ನ ವಿರಚಿತ) ಕೇಳಲು ಎಷ್ಟು ಖುಷಿಯಾಯಿತೋ ಫೇಸ್ಬುಕ್ನ ಸಂದೇಶಗಳು, ಅಭಿನಂದನೆಗಳು, ಮೆಚ್ಚುಗೆಗಳು ಬರುತ್ತಿದ್ದುದು ಕಂಡು ಅಷ್ಟೇ ಸಂತಸವಾಗುತ್ತಿತ್ತು. ನಿತ್ಯೋತ್ಸವ - ಭಾವಗೀತೆಗಳ ಧ್ವನಿ ಮುದ್ರಣ ಪ್ರಭಾತ್ ಸ್ಟೂಡಿಯೋದಲ್ಲಿ ನಡೆದದ್ದು, ಅನಂತಸ್ವಾಮಿಯಯ ಮನೆಯಲ್ಲಿ ಹಾಡು ಅಭ್ಯಾಸ ಮಾಡುವಾಗ ಅವರ ಮಗ ಪುಟ್ಟ ಬಾಲಕ ರಾಜು ಅನಂತಸ್ವಾಮಿ ಬಾಗಿಲಬಳಿ ನಿಂತು ಇಣುಕಿ ನೋಡುತ್ತಿದ್ದಿದ್ದುದೂ, ಇನ್ನೂ ಕೆಲವು ಸನ್ನಿವೇಶಗಳನ್ನು ನೆನೆದು ಶ್ರೀಮತಿ ಪುಷ್ಪಾ ಕೊಂಚ ಭಾವುಕರಾಗಿ  ತಮ್ಮ ಅನುಭವ ಹಂಚಿಕೊಂಡರು. ಮಬ್ಬು ಕವಿದರೇನು - ಈ ಗೀತೆಯಂತೂ ಬಹಳ ಮೆಚ್ಚುಗೆ ಪಡೆಯಿತು. 

ಆ ನಂತರ ಹಾಡಿದ ಪಿ ಕಾಳಿಂಗರಾವ್ ಅವರ ರಚನೆಯ ಜಗಕೆ ಪೂಜಿಸಲೆಂದೆ ಅದ್ಭುತ ಎನ್ನುವಷ್ಟರಲ್ಲೇ ಅವರದ್ದೇ ರಚನೆಯಾದ ಬರಿಯ ಇಪ್ಪತ್ತು ಪದಗಳ ಕವನ ಕಡಲಿನಾಳವು ಅಚ್ಚರಿ ಎನಿಸುವಂತಿತ್ತು. ತದನಂತರ ತುಂಬು ಹೃದಯದಿಂದ ಪರಿಚಯಿಸಿ ಹಾಡಿದ ತತ್ವಪದ ನಾನಾ ಎಂಬುದು ನಾನಲ್ಲ ಶ್ರೀಮತಿ ಪುಷ್ಪಾ ಸಿಡ್ನಿಗೆ ಬರುವ ಮೊದಲು ೧೧/೧೦/೧೯೯೦ ರಲ್ಲಿ ಹಾಡಿದ್ದು ನಿಖರವಾಗಿ ಈ ದಿನಕ್ಕೆ ೩೦ ವರ್ಷಗಳೇ ಕಳೆದದ್ದು ನೆನೆಯುತ್ತ ಹೇಳಿದಾಗ ಖುಷಿಯಿಂದ ನಮಗೆಲ್ಲ ಒಬ್ಬರನ್ನೊಬ್ಬರು ಕಣ್ಣರಳಿಸಿ ಹುಬ್ಬೇರಿಸಿ ಮುಖ ನೋಡಿಕೊಳ್ಳುವಂತೆ ಮಾಡಿತು. ಕಾರ್ಯಕ್ರಮದ ನಂತರ ಶ್ರೀಮತಿ ಪುಷ್ಪಾ ಸ್ವತಃ ಅನಂತಸ್ವಾಮಿಯವರ ಕೈಬರಹದಲ್ಲೇ ಬರೆದ ಇದೆ ಹಾಡಿನ ಪ್ರತಿಯನ್ನೂ ನಮಗೆ ತೋರಿಸಿದರು.  



ಮುಂದೆ ನಾನೊಂದು ಜಡವೀಣೆ, ಯಾರವರು ಯಾರವರು ಯಾರೋ ಬಾಗಿಲಲಿ ಬಂದವರು(ಜಿ ಎಸ್  ಎಸ್  ರಚನೆ ), ಬಿ ಎಸ್  ಅನಂತಸ್ವಾಮಿ ರಾವ್ ಅವರ ಗೀತಾಂಜಲಿ ಅನುವಾದದ ವಿಕಸಿತ ಮಾಡೆನ್ನ ಆಂತರ್ಯವನ್ನು ಈ  ರಚನೆಗಳನ್ನು ವಾದ್ಯಗಳ ಸಹಾಯವಿಲ್ಲದೆ ಇಂಪಾಗಿ ಪ್ರಸ್ತುತ ಪಡಿಸಲಾಯಿತು.  ಪುಣ್ಯಕೋಟಿ ಚಿತ್ರಕ್ಕೆ ಅಳವಡಿಸಿರುವ ಸ್ನೇಹ ಅತಿ ಮಧುರಾ ಸ್ನೇಹ ಅದು ಅಮರ (ನಾ ಗು ಸತ್ಯನಾರಾಯಣ ಅವರ ರಚನೆ) ಈ ಹಾಡಿನ ಮೂಲ ಟ್ರಾಕ್ ಗಾಯನ ಶ್ರೀಮತಿ ಪುಷ್ಪಾ ಜಗದೀಶ್ರದ್ದೆ ಎಂದು ಕೇಳಿ ಮತ್ತಷ್ಟು ಸಂತಸವಾಯಿತು. ಈ ಹಾಡಿನೊಂದಿಗೆ ಕಾರ್ಯಕ್ರಮ ಮುಗಿದೇ ಬಿಟ್ಟಿತು. ಅವರ ಗಾಯನ ಸಾವಿರಾರು ಪ್ರೇಕ್ಷಗರಿಗೆ ಪ್ರಪಂಚದೆಲ್ಲೆಡೆ ಮುದ ನೀಡಿತು. ಮೈಸೂರು ಅನಂತ ಸ್ವಾಮಿಯವರ  ಶಿಷ್ಯೆ ಎನ್ನುವುದನ್ನು ಸಾಬೀತು ಮಾಡಿ ತೋರಿಸಿದರು. ಅವರ ಕಂಠಸಿರಿಗೆ ಭಾವ ಕೋಗಿಲೆ, ಗಾನ ಕೋಗಿಲೆ, ಮೆಲೋಡಿ ಕ್ವೀನ್ ಹೀಗೆ  ಬಿರುದುಗಳೂ ಹರಿದು ಬರುತ್ತಿದ್ದವು ಫೆಸ್ಬುಕ್ ಅಭಿಪ್ರಾಯಗಳಲ್ಲಿ.  

ಪಕ್ಕ ವಾದ್ಯಗಳ ಕಲಾವಿದರನ್ನು  ಶ್ರೀಮತಿ ಪುಷ್ಪಾರವರೇ ಪ್ರತಿಹಾಡಿನ ಮಧ್ಯೆ ಒಬ್ಬೊಬ್ಬರನ್ನೇ ಪರಿಚಯ ಮಾಡಿಕೊಡಲಾಯಿತು. ಕೀ  ಬೋರ್ಡ್ ವಾದಕರಾಗಿ ಶ್ರೀಯುತರಾದ  ಡಾ ರಾಜೇಶ್ ದಿನಕರ್ ಮತ್ತು ನರೇಶ್ ಅಚ್ಚುಕಟ್ಟಾಗಿ ನುಡಿಸಿದರೆ, ಗಿಟಾರ್ ವಾದಕ ಸಾಮ್ಯುಯಲ್ ಸಾಮ್ಸನ್ ಮತ್ತು ತಬಲಾ ವಾದಕ ವೆಂಕಟ್ ತಲ್ಲ ಪ್ರಗಡ ಅವರ ಜೊತೆಗೂಡಿ ಒಟ್ಟಾರೆ ವೃಂದದ ವಾತಾವರಣ ಸೃಷ್ಟಿಸಿದರು.  ತುಂಬು ತಿಂಗಳಿನ ಹಾಡಿನ ಸಮಯದಲ್ಲಂತೂ ಅದ್ಭುತ ಸಂಯೋಜನೆ ಕೇಳುಗರನ್ನು ಹುರಿದುಂಬಿಸಿತು. ಅಂತ್ಯದಲ್ಲಿ ಶ್ರೀಮತಿ ಪುಷ್ಪಾರವರು ಎದ್ದು ನಿಂತು ಎಲ್ಲ ಕಲಾವಿದರಿಗೂ, ಕೇಳುಗರಿಗೂ, ಸ್ಥಳೀಯ ಆಯೋಜಕರಾದ ಸುಗಮ ಗಾನ ಸಮಾಜ ಮತ್ತು ಸಿಡ್ನಿ ಕನ್ನಡ ಶಾಲೆಗೂ ಮನಃಪೂರ್ವಕ ವಂದನಾರ್ಪಣೆ ಸಲ್ಲಿಸಿದರು.


Comments

  1. ಉತ್ತಮ ವಾದ ಕಾರ್ಯಕ್ರಮದ ಚೊಕ್ಕವಾದ ವರದಿ. ಓದಿ ಸಂತೋಷ ವಾಯಿತು

    ReplyDelete
  2. we watched this in NewDelhi it was a nice program

    ReplyDelete

Post a Comment