ಸ್ಯಾಟಿಲೈಟ್ ಪುರಾಣವು ನೆಟ್ ಮತ್ತೆ ...

ಸ್ಯಾಟಿಲೈಟ್ ಪುರಾಣವು

ನೆಟ್ ಮತ್ತೆ ಸೊಟ್ ಆಯಿತು. 

ಹಾಸ್ಯ ಲೇಖನ - ಅಣುಕು ರಾಮನಾಥ್ 

                                        ಚಕ್ಕುಲಿಯ ಒರಳಿನಿಂದ ಸುರುಳಿಸುರುಳಿಯಾಗಿ ಬಾಂಡಲೆಯ ಎಣ್ಣೆಯಲ್ಲಿ ಉರುಳಿ ಚಕ್ಕುಲಿಯ ಆಕಾರವನ್ನು ಪಡೆಯುತ್ತಾ ಎಣ್ಣೆಯ ಕೊತಕೊತವನ್ನು ತಡೆಯಲಾಗದೆ ಇದ್ದ ಜಾಗದಲ್ಲೇ ಸಣ್ಣ ಕಂಪನಕ್ಕೊಳಗಾಗಿ, ತೂತುಮೊಗಚುವಕೈಯ ನೂಕಾಟದಿಂದ ಬಾಣಲೆಜಗತ್ತಿನಲ್ಲಿ ಸುತ್ತಿ ಸುತ್ತಿ ಕೆಂಪಾಗುವ ಚಕ್ಕುಲಿಯಂತೆ ಬಫರಿಂಗ್ ವರ್ತುಲ ಸುತ್ತುತ್ತಿತ್ತು. ಒಂದೇ ವ್ಯತ್ಯಾಸ – ಇಲ್ಲಿ ಅದು ಸುತ್ತುತ್ತಿತ್ತು, ನನ್ನ ಮುಖ ಅಸಹನೆಯಿಂದ ಕೆಂಪಾಗುತ್ತಿತ್ತು. ಆದರೆ ನೆಟ್ಟನ್ನು ದೂಷಿಸಲು ಸಾಧ್ಯವೇ? www ಎಂದರೆ world wide wait ಎಂಬ ರೆಪ್ಯುಟೇಷನ್ ಕಾಯ್ದುಕೊಳ್ಳುವ ಜವಾಬ್ದಾರಿ ಇರುವುದರಿಂದ ಅದು ಆಗಾಗ್ಗೆ ಬಫರ್ ಆಗುವುದು, ಬಳಸುವವರು ಡಫರ್ ಗಳಂತೆ ಕೂಡುವುದು ಅನಿವಾರ್ಯವೇ. ನೀವೇನೇ ಅನ್ನಿ, ಹಿಂದಿನ ಕಾಲವೇ ಚೆನ್ನ. ಅಂದಿನ ಟಾಪ್ ಲೆಸ್ ಇಂಟರ್ನ್ಯಾಷನಲ್ ಏರೋಪ್ಲೇನ್ (ಪುಷ್ಪಕ ವಿಮಾನ) ಈಗಿಲ್ಲ. ಅಂದಿನ ಬೇಕೆನಿಸಿದಾಗ ಹಿ/ಕುಗ್ಗಿಸಿಕೊಳ್ಳಬಲ್ಲ ಮಾರುತಿ ಬ್ರ್ಯಾಂಡ್ ದೇಹ ಈಗಿಲ್ಲ. ಅಂದಿನ ಟಾಪ್ ಕ್ವಾಲಿಟಿ ಸ್ಯಾಟಿಲೈಟುಗಳೂ ಈಗಿಲ್ಲ. 


ಗೊತ್ತು. ನಿಮ್ಮ ಹುಬ್ಬು ಮೇಲೇರಿದೆ. ಮುಂದಿನ ಹಂತ ಅವೇ ಹುಬ್ಬುಗಳು ‘ಲೈಟೇ ಇಲ್ಲದಿದ್ದ ಕಾಲದಲ್ಲಿ ಸ್ಯಾಟಿಲೈಟೇ?’ ಎನ್ನುತ್ತಾ ಗಂಟಿಕ್ಕುವುದು. ಮನುಷ್ಯನಿಗೆ ಸುಲಭವಾಗಿ ದೊರಕುವ ಗಂಟುಗಳು ಎರಡೇ – ತುರುಬು, ಹುಬ್ಬುಗಂಟು! ಕಸಿದುಕೊಳ್ಳುವ ಹಕ್ಕು ಎಂದಿದ್ರೂನೂ ಕೊಟ್ಟೋವ್ನ್ಗೇನೇ ತಾನೇ! ನಾನೇ ಕೊಟ್ಟ ಹುಬ್ಬುಗಂಟನ್ನು ನಾನೇ ವಿವರಗಳೊಂದಿಗೆ ಕಸಿದುಕೊಳ್ಳುತ್ತೇನೆ. ಮುಂಪರಾಂಬರಿಸುವಂಥವರಾಗಿ.   

ಸಮತಲಕ್ಕೆ ನಲವತ್ತೈದು ಡಿಗ್ರಿ ಕೋನದಲ್ಲಿ ಶಿರಗೊರಳ್ಗಳನ್ನು ಆನಿಸಿಕೊಂಡು, ಲಂಬಕೋನಕ್ಕೆ ಮೂವತ್ತು ಡಿಗ್ರಿ ಕೋನದಲ್ಲಿ ಕಶೇರುಕವನ್ನು ತಿರುಗಿಸಿ ಮಲಗಿದ್ದ ವಿಷ್ಣುವು, ಕಾಲಿಂಗ್ ಬೆಲ್ ಒತ್ತುವ ಅಭ್ಯಾಸವೇ ಇಲ್ಲದೆ ಒಳನುಗ್ಗುವ ಕ್ರಮವನ್ನು ಚರಣಗತ (ಕಾಲಿಗೆ ಸಂಬಂಧಿಸಿದ್ದರಿಂದ ಕರಗತ ಅಲ್ಲವಲ್ಲ) ಮಾಡಿಕೊಂಡು, ಗ್ರೀಕ್ ಶೂರನತ್ತ ನುಗ್ಗುವ ಗೂಳಿಯಂತೆ ವೈಕುಂಠದ ಸಪ್ತದ್ವಾರಗಳನ್ನು ಮಿಂಚಿನ ವೇಗದಲ್ಲಿ ದಾಟಿಕೊಂಡು ಒಳಬಂದಿದ್ದ ನಾರದರ ಮೊಗವನ್ನು ನೋಡಲೋಸುಗ, ಅರವತ್ತು ಡಿಗ್ರಿ ಕೋನಕ್ಕೆ ತನ್ನ ದೃಷ್ಟಿಯನ್ನೇರಿಸಿ ನೋಡಲು, ತಂಬೂರಿ ಮೀಟಿದವನು ‘ಶೇಷತಲ್ಪಶಯನಾ, ಭರತವರ್ಷದ ದಕ್ಷಿಣದ ಪೀಠದಂತಿರುವ ಲಂಕೆಯು ಪೀಡೆಯಂತೆ ಪರಿಣಮಿಸುತ್ತಿದೆ. ಲಂಕಾಧೀಶನ ಅಟಾಟೋಪವನ್ನು ಈಕ್ಷಿಸು’ ಎನ್ನುತ್ತಾ ತನ್ನಮೇಲಿನ ದೃಷ್ಟಿಯನ್ನು ಲಂಕೆಯತ್ತ ತಿರುಗಿಸಿದ. ದೇವನಾದರೇನು, ಸರ್ವವನ್ನೂ ವೀಕ್ಷಿಸಬಲ್ಲವನಾದರೇನು, ‘law of looking’ ಪ್ರಕಾರ ದೂರದ್ದು ಕಿರಿದಾಗಿಯೂ, ಹತ್ತಿರದ್ದು ಹಿರಿದಾಗಿಯೂ ಕಾಣಲೇಬೇಕೆನ್ನುವುದು ವಿಧಿನಿಯಮ; ದೇವನೂ ವಿಧಿಯ ಅಧೀನ. 


ಪರಿಸ್ಥಿತಿ ಇಂತಿರುವಾಗ ‘ನಾರದರ್ ತೋರ್ದರ್, ಅನಿಮೇಷನ್ ಕಂಡನ್’ ಎಂದು ಕಥೆ ಮುಂದುವರಿದಿರಬೇಕಾದರೆ ಆ ಕಾಲದಲ್ಲಿ ಮೋಸ್ಟ್ ಪವರ್ಫುಲ್ ಬೈನಾಕ್ಯುಲರ್ಗಳು ಇದ್ದಿರಬೇಕೆನಿಸಿದರೂ, ವೈಜ್ಞಾನಿಕವಾಗಿ ಇನ್ನಷ್ಟು ಹಿಂದೆ ಹೋಗಿ ಆಲೋಚಿಸಿದರೆ ಆಗ ಈಗಿನದಕ್ಕಿಂತ ‘ಆಧುನಿಕ’ವಾದ ಸ್ಯಾಟಿಲೈಟ್ ಇದ್ದಿತು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳು ದೊರಕುತ್ತವೆ.  

ಮೊದಲಿಗೆ ಫಾಲದೀಪ ಪ್ರಸಂಗವನ್ನೇ ತೆಗೆದುಕೊಳ್ಳೋಣ. ‘ನಾವೆಲ್ ಕರೋನಾ’ ಕಾಲದಲ್ಲಿಯೂ ಕರದಲ್ಲೊಂದು ನಾವೆಲ್ ಹಿಡಿಯದೆ ಹೊರಹೊರಡದ ಮಂದಿ ಇದ್ದಾರೆ. ರಿಕ್ಟರ್ ಮಾಪನದಲ್ಲಿ 6.5ರವರೆಗಿನ ಭೂಕಂಪ ಆಗುತ್ತಿದ್ದರೂ ಋಷಿಮುನಿಗಳ ತಪಸ್ಸಿನ ಏಕಾಗ್ರತೆಯಿಂದ ಪುಸ್ತಕದಲ್ಲಿ ಮುಳುಗಿ ‘ಆರ್ ಲೈಟಾಫು ಮಾಳ್ದೊಡೆಂ ತಿಮಿರನೆಲ್ಲೆಡೆ ಮೆರೆದೊಡೆಂ ಫಾಲದೊಳ್ ದೀಪ್ತಿದಾಯಕವಿರಲ್; ಆರಂಕುಶವಿಟ್ಟೊಡಂ ಪಠಿಸದಿರಲಸಾಧ್ಯಂ ಇಂಗ್ಲೀಷು ನಾವೆಲಂ’  ಎನ್ನುವ ಅಕ್ಷರಪ್ರಣಯಿಗಳಿಗೆ ಪ್ರಯಾಣಕಾಲದಲ್ಲಿ ಪುಟದ ಹಣೆಗೆ ಸೆಕ್ಕಿಸಬಲ್ಲ ‘ಪುಟಫಾಲದೀಪ’ ಅವಶ್ಯ, ಅನಿವಾರ್ಯ. ಪಯಣಿಗರ ಕಥೆ ಇಂತಾದರೆ ನೌಕರರ ಕಥೆ ಮತ್ತೊಂದು ರೀತಿಯದು. ಕೋಲಾರದ ಚಿನ್ನದಗಣಿಯಲ್ಲಿ ಕೆಲಸ ಮಾಡುವವರು ಬುರುಡೆಯ ಸುತ್ತಲೂ ಒಂದು ಸುತ್ತು ಬರುವ ದೀಪದ ಪಟ್ಟಿಯನ್ನು ಕಟ್ಟಿಕೊಳ್ಳುತ್ತಿದ್ದರು. ಸಿಡ್ನಿಯ ಬಳಿ ಇರುವ ಜೆನೋಲನ್ ಗವಿಯೊಳಕ್ಕೆ ಇಳಿಯಬೇಕಾದರೆ ಹಲ್ಲುಗಳ ಮಧ್ಯೆ ದೀಪವನ್ನು ಸೆಕ್ಕಿಸಿಕೊಂಡು ‘ರಜ್ಜುರೂಢ’ರಾಗಿ ಸಾಗುತ್ತಿದ್ದರು. ಇವೆಲ್ಲವೂ ಕಲಿಗಾಲದ ಆವಿಷ್ಕಾರಗಳು ಎಂದರೆ ‘ಶುದ್ಧ ತಪ್ಪು’ ಎನ್ನುತ್ತಾನೆ ಹಿಮಗಿರಿ ಅಳಿಯ ಶಿವ. ಮಂಡಿಮಧ್ಯಾಹ್ನವೇ (ನಡುಮಧ್ಯಾಹ್ನವೆಂದರೆ 12; ಮಧ್ಯಾಹ್ನದ ಮೂರೋ, ನಾಲ್ಕೋ ಗಂಟೆಯು ನಡುವಿನ ಕೆಳಗಿನದಾದ್ದರಿಂದ ‘ಮಂಡಿಮಧ್ಯಾಹ್ನ!’) ಮಬ್ಬಾಗುವ ಹಿಮಾಲಯ. ಕೊರಕಲುಗಳ ಹಾದಿ. ಅಂಧಕಾಸುರನ ಹಾದಿಯಲ್ಲಿ ಡುಬ್ಬದ ನಂದಿಯ ಮೇಲೆ ಸವಾರಿ ಮಾಡಬೇಕಾದರೆ ಎರಡು ಕೈಗಳಿಂದಲೂ ಭದ್ರವಾಗಿ ಅದರ ಬೆನ್ನನ್ನು ಅಪ್ಪಿ ಹಿಡಿಯಬೇಕು. ಕೈ ಖಾಲಿ ಇಲ್ಲ; ಬೆಳಕು ಇಲ್ಲದೆ ಸಾಗುವಂತಿಲ್ಲ. ಇಂತಿಪ್ಪ ಸ್ಥಿತಿಯೊಳ್ ತಿಮಿರಾಸುರನನ್ನು ಅರ್ಧಚಂದ್ರ ಪ್ರಯೋಗದಿಂದ ಮಣಿಸಲೆಂದೇ ಶಿವನು ತಲೆಯಲ್ಲಿ half moon ಧರಿಸಿದ. ಚಂದ್ರ sat on shiva’s ಹೆಡ್ಡು and gave ಲೈಟು. ಈ sat ಮತ್ತು ಲೈಟ್ ಗಳ combination ನಮ್ಮ ನೇಷನ್ನಿಗೆ ಸ್ಯಾಟಿಲೈಟನ್ನು ನೀಡಿದ್ದು. 

ಅಭಿಜ್ಞಾನ ಶಾಕುಂತಲದ ಕಥೆಯೂ ಈ ವಿಷಯದ ಬಗ್ಗೆ a big ಜ್ಞಾನವನ್ನು ನೀಡುತ್ತದೆ. ದುಷ್ಯಂತ ಬಂದ; ಶಕುಂತಲೆಯನ್ನು ಕಂಡ. ಮುಂದೆ ಹಿಂದಿ ಫಿಲ್ಮ್ ಗಳಲ್ಲಿ ಆಗುವಂತೆಯೇ ‘ಛೂಕರ್ ಮೇರಾ ಮನ್ ಕೋ...’, ‘ಕಹೋ ನಾ ಪ್ಯಾರ್ ಹೇಯ್....’, ‘ಅಕೇಲೇ ಹೂ, ಚಲೇ ಆವೋ ಕಹಾ ಹೋ...’, ‘ಛೋಡ್ ಗಯೇ ಬಾಲಮ್..’ ಗಳು ಸರದಿ ಪ್ರಕಾರ ನಡೆದವು. ಕಣ್ವರು ಬಂದರು. ಕುಟಿಲ ಕುಂತಳೆ ಶಕುಂತಳೆ ಸುಮ್ಮನೆ ಕುಂತಳೇ ನಿಂತಳೇ ವಿನಹ ತುಟಿ ಬಿಚ್ಚಲಿಲ್ಲ. ಕಣ್ವರು ದಿವ್ಯದೃಷ್ಟಿಯಿಂದ ನೋಡಿದರು. ಎಲ್ಲವೂ ಮನದ ಸ್ಕ್ರೀನ್ ಮೇಲೆ ಮರುಪ್ರಸಾರ ಆದವು. ಇದು ಸಾಧ್ಯವಾದದ್ದಾದರೂ ಹೇಗೆ ಎಂಬಿರೆ? ಕಣ್ವರ ಆಶ್ರಮದಲ್ಲಿ ಸಿಸಿ ಟಿವಿ ಇತ್ತು; ರಿಮೋಟ್ ಅವರ ಬಳಿಯೇ ಇತ್ತು. Scene shift to ಕಲಿಯುಗ – ಮೊದಲು ಟಿವಿ, ನಂತರ ಸ್ಯಾಟಿಲೈಟ್ ಟಿವಿ, ನಂತರ ಸಿಸಿಟಿವಿಗಳು ಬಂದವು; Back to ಕಣ್ವಾಶ್ರಮ ಕಾಲ – ಆಗಲೂ ಟಿವಿ, ಸ್ಯಾಟಿಲೈಟ್, ಸಿಸಿಟಿವಿಗಳೇ ಬಂದಿರಬೇಕು. ಕಣ್ವರು ಸಿಸಿಟಿವಿ ಕಂಡರೆಂದಮೇಲೆ ‘ಅನುಮಾನಾಲಂಕಾರ’ದ ಪ್ರಕಾರ ಅದಕ್ಕೂ ಮುನ್ನ ಸ್ಯಾಟಿಲೈಟ್ ಇದ್ದಿರಲೇಬೇಕು! 

                        

  ಸ್ಯಾಟಿಲೈಟಿನ ಮತ್ತೊಂದು ಪ್ರಸಂಗವನ್ನು ‘ಲಂಕಾ ಜಿಪಿಎಸ್ ಪ್ರಸಂಗವು’ ಎಂದು ಕರೆಯಲಾಗುತ್ತದೆ. ದಟ್ಟಡವಿ. ಅಲ್ಲೊಂದು ಆಶ್ರಮ; ರಾಮಲಕ್ಷ್ಮಣಸೀತೆಯರ ಬಳಿ ಶೂರ್ಪಣಖಿ ಫಾರ್ ದ ಫಸ್ಟ್ ಟೈಮ್ ಬರುತ್ತಾಳೆ. ಲಕ್ಷ್ಮಣ ಅವಳ ಕಿವಿಮೂಗುಗಳ ಪ್ಲಾಸ್ಟಿಕ್ ಸರ್ಜರಿ ಮಾಡಲು ಯತ್ನಿಸುತ್ತಾನೆ. ಪೇಷೆಂಟ್ ಅರ್ಧದಲ್ಲೇ ಹೆದರಿ ಪರಾರಿಯಾಗಿ ಲಕ್ಷ್ಮಣ world’s first plastic surgeon ಎಂದು ತನ್ನ ಹೆಸರನ್ನು ಗಿನ್ನೆಸ್ ಪುಸ್ತಕದಲ್ಲಿ ದಾಖಲಿಸಿಕೊಳ್ಳುವುದನ್ನು ತಪ್ಪಿಸಿಬಿಡುತ್ತಾಳೆ. ಶೂರ್ಪನಖಿಯ ವಿಶೇಷವೊಂದನ್ನು ಇಲ್ಲಿ ಗಮನಿಸಿ. ಮೂಗಿನ ಭರ್ತಿ ರಕ್ತ; ಹೇಗೆಹೇಗೋ ಅಲ್ಲಿಂದ ಓಡಿದಳವಳು. ಅಂತಹ ರಕ್ತಸಕ್ತ ನಾಸಿಕ ಹೊತ್ತು ಓಡಿದರೂ ಅವಳಿಗೆ ಜಾಗದ ವಾಸನೆ ತಪ್ಪಲಿಲ್ಲವೆಂದರೆ what a bloody nose she had! ಇಂತಹ ಶಾರ್ಪ್ ನಾಸಿಕಿ ಮೂಗು ಮುಂದಾಗಿಸಿಕೊಂಡು ರಾವಣನ ಬಳಿ ತೆರಳಿ ರಾಮನ ವಿಷಯದಲ್ಲಿ ಮೂಗು ತೂರಿಸಲು ಹೇಳಿದಳು. ‘ಎಲ್ಲಿ?’ ಎಂದರೆ ‘ಐದು ಮರಗಳ ವಿಶಿಷ್ಟ ವಾಸನೆ ಬರುವಲ್ಲಿ; ನಿತ್ಯವೂ ಸ್ನಾನ ಮಾಡಿದ ಮೂರು ಮೈಗಳ ವಾಸನೆ ಬರುವಲ್ಲಿ’ ಎಂದೆಲ್ಲ ಬಣ್ಣಿಸಿದಳು.  ರಾವಣನು ‘ರೂಟ್ ಮ್ಯಾಪ್ ಇಲ್ಲದೆ ಕಾಡಿನಲ್ಲಿ ಹುಡುಕೆಂಡು ಕಾಡಬೇಡ’ ಎಂದುಬಿಟ್ಟ. ಅವಳೇನಾದರೂ ‘ಅಪ್ರತಿಮ ಸುಂದರಿಯ ನಾಸಿಕಾಮೋದಕ ಗಂಧಭರಿತತೆ ಇರುವ ಸ್ಥಳ’ ಎಂದಿದ್ದರೆ ರಾವಣ ಛಕ್ಕನೆ ಕಂಡುಹಿಡಿಯುತ್ತಿದ್ದ. ಆದರೆ ಹಾಗೆ ಹೇಳುವ ಬದಲು ಜಾಗ ತಿಳಿಸಲು ಅವಳು ಬೇರೆ ದಾರಿಯನ್ನೇ ಹುಡುಕಿದಳು. ಕಲಿಗಾಲದಲ್ಲಿ ‘ಲೊಕೇಶನ್ ಷೇರ್’ ಮಾಡಿದರೂ ಅರಣ್ಯ ಪ್ರವೇಶಿಸುತ್ತಿದ್ದಂತೆಯೇ ‘ಜಿಪಿಎಸ್ ಸಿಗ್ನಲ್ ಲಾಸ್ಟ್’ ಎನ್ನುತ್ತದೆ ಫೋನು. ಅಂದಿನ ಯುಗದಲ್ಲಿ ರಾವಣನು ನೇರವಾಗಿ ಪರ್ಣಕುಟಿಯ ದ್ವಾರವನ್ನು ತಲುಪಿದನೆಂದರೆ ಶೂರ್ಪನಖಿ ಅದೆಂತಹ sure and without panicky ಜಿಪಿಎಸ್ ಅನ್ನು ರಾವಣನ ಪುಷ್ಪಕವಿಮಾನಕ್ಕೆ ಅಳವಡಿಸಿದ್ದಳೆಂಬುದು ಊಹಾತೀತ, ಅಂತಹ ಜಿಪಿಎಸ್ ಇರಬೇಕಾದರೆ ಕಾಡಿನಲ್ಲಿಯೂ ಕಟ್ ಆಗದ ನೆಟ್ ವರ್ಕ್ ಇರಬೇಕು; ಅದಕ್ಕೆ ಸೂಪರ್ ಆದ ಸ್ಯಾಟಿಲೈಟ್ ಇದ್ದಿರಲೇಬೇಕು.  

ಪಂಚಪತಿಯರನ್ನು ಪಂಚ್ ಡೈಲಾಗ್ಗಳ ಮೂಲಕ ಪಂಕ್ಚರ್ ಆಗಿಸುತ್ತಿದ್ದ ಪಾಂಚಾಲಿಯೂ, ಪಾಂಚಜನ್ಯದ ಪಾರ್ಥಸಾರಥಿಯೂ ಪಾಲ್ಗೊಂಡ ಪ್ರಕರಣವು ಸ್ಯಾಟಿಲೈಟ್ನ ಅಸ್ತಿತ್ವದ ಮೇಲೆ ಬೆಳಕು ಚೆಲ್ಲುತ್ತದೆ. ದುಶ್ಯಾಸನ ಸೀರೆ ಸೆಳೆದ. ದ್ರೌಪದಿ ‘ಕೃಷ್ಣಾ...’ ಎಂದಳು. ಅಪ್ರಮೇಯನು ಆರವರಂತೆ ‘ಅಪ್ಪರಂ’ ಎನ್ನುತ್ತಾ ಪ್ರಮೇಯವನ್ನು ಬೆಳೆಸದೆ, ಕೂಡಲೆ ಥಾನುಗಟ್ಟಲೆ ಸೀರೆ ಕಳುಹಿಸಿದ. ‘ಅವಳ ಕೂಗು ಅವನಿಗೆ ಕೇಳಿಸಿದ್ದಾದರೂ ಹೇಗೆ? ಹೀಗೂ ಉಂಟೆ?’ ಎಂಬ ಸಹಜ ಪ್ರಶ್ನೆಗೆ ಅಷ್ಟೇ ಸಹಜ ಉತ್ತರವೆಂದರೆ – ವಸ್ತ್ರಾಪಹರಣ ನಡೆದದ್ದು ರಾಜನ ಅರಮನೆಯಲ್ಲಿ. ದೊಡ್ಡವರ ಮನೆಯ ಮುಂದೆ ಕಾವಲುಗಾರ, ಭಿಕ್ಷುಕ, ನಾಯಿ, ದೇಣಿಗೆ ಕೇಳುವವರು, ವಾಹಿನಿಗಳ ವರದಿಗಾರರು ಸ್ವಂತ ವೇಷದಲ್ಲೋ, ಛದ್ಮವೇಷದಲ್ಲೋ ಇದ್ದೇ ಇರಬೇಕು. ಹಾಗಿರುವುದೇ ದೊಡ್ಡವರ ಮನೆಗಳಿಗೆ ಭೂಷಣ. ತತ್ಕಾರಣಂ ತದಾ ತಿಷ್ಠರಾಗಿದ್ದನೊಬ್ಬ ವರದಿಗಾರ. ‘ಹೋಗು ಸೆಳೆದು ತಾ ಪಾಂಚಾಲಿಯನ್ನು’ ಎಂದು ದುರ್ಯೋಧನ ಹೇಳಿ, ಚಾರನೊಬ್ಬ ಅತ್ತ ಹೋಗುತ್ತಿದ್ದಂತೆಯೇ ಆ ವರದಿಗಾರ ‘ಇಲ್ಲೊಂದು ಅಟೆಂಪ್ಟ್ ಟು ರೇಪ್ ಲೈವ್ ಕಾರ್ಯಕ್ರಮ ನಡೆಯಲಿದೆ ಬಾಸ್’ ಎಂದು ವಾಹಿನಿಯ ಮುಖ್ಯಸ್ಥನಿಗೆ ತಿಳಿಸಿದ. ಮುಖ್ಯಸ್ಥ ವಿಶೇಷ ‘ವ್ಯೂ ಇನ್ ಕಾರ್ಯಕ್ರಮ’ಕ್ಕೆ ಅಣಿ ಮಾಡಿಕೊಂಡ. ವಿಷಯ ಕೃಷ್ಣನಿಗೂ ಆನ್ ಲೈನ್ ತಲುಪಿ, ಕೈಗಾರಿಕೆಗಳ ಅಸೆಂಬ್ಲಿ ಯೂನಿಟ್ ನಲ್ಲಿ ಎಡೆಬಿಡದೆ ಉತ್ಪಾದನೆಗಳು ಹೊರಬೀಳುವ ರೀತಿಯಲ್ಲಿಯೇ, ಕೃಷ್ಣನು ಕುಳಿತಲ್ಲಿಂದಲೇ ಸೀರೆಯ ಅಸೆಂಬ್ಲಿ ಲೈನನ್ನೇ ವ್ಯವಸ್ಥೆ ಮಾಡಿಬಿಟ್ಟ. ಇವೆಲ್ಲವೂ ಹಸತೀ ನಾ (ನಗುವುದಿಲ್ಲ ಎಂಬರ್ಥ?) ಪುರದಲ್ಲಿ ‘ದುರ್ವೇದನಾ ಸ್ಯಾಟಿಲೈಟ್ ಸರ್ವೀಸ್’ ಇದ್ದಿದ್ದರಿಂದಲೇ ಸಾಧ್ಯವಾಯಿತೆಂದು ಬಲ್ಲ ಮೂಲಗಳು ತಿಳಿಸಿವೆ. 


ಸ್ಯಾಟಿಲೈಟ್ ಇಲ್ಲದಿದ್ದರೆ ಯಾವುದೋ ಕೊಳದಲ್ಲಿ ಯಾವುದೋ ಆನೆಯ ಕಾಲನ್ನು ಯಾವುದೋ ಮೊಸಳೆ ಹಿಡಿದಿರುವುದು ಕಾಲೊತ್ತಿಸಿಕೊಳ್ಳುತ್ತಾ semi-sleep mode ನಲ್ಲಿದ್ದ ಭಗವಂತನಿಗೆ ಕಾಣಲು ಸಾಧ್ಯವಾಗುತ್ತಿರಲಿಲ್ಲ. ‘ವಾತಾಪಿ ಜೀರ್ಣೋಭವ’ ಎಂದಾಗ ರಕ್ಕಸನು ಮುನಿಗಳ ಉದರದಲ್ಲಿ ಅಗುಳಗುಳಾಗಿ ಜೀರ್ಣವಾದುದು ಜಗತ್ತಿಗೆ ತಿಳಿಯುತ್ತಿರಲಿಲ್ಲ. ಅಗಸ್ತ್ಯರು ಏಳು ಸಮುದ್ರಗಳ ನೀರನ್ನು ಕುಡಿದರು ಎನ್ನಬೇಕಾದರೆ ಅಷ್ಟೂ ಸಮುದ್ರಗಳು ಖಾಲಿಯಾಗಿದ್ದುದರ ಲಾಂಗ್ ಶಾಟ್ ಸಿಗುತ್ತಿರಲಿಲ್ಲ. ಮಾರ್ಕಂಡೇಯ ಲಿಂಗವನ್ನು ತಬ್ಬಿದುದರ ಫಲವಾಗಿ ಶಿವ ಕೈಲಾಸ ಟು ವೇರೆವರ್ ಇಟ್ ವಾಸ್ ಬಂದು ಯಮನೊಡನೆ ಟಗ್ ಆಫ್ ವಾರ್ ಆಡಿದುದರ ನೇರಪ್ರಸಾರ ದೊರಕುತ್ತಿರಲಿಲ್ಲ. ಕರ್ಣ ಭಾನುಮತಿಯ ಸರವನ್ನು ಸೆಳೆದಾಗ ಬಿದ್ದ ಮಣಿಗಳನ್ನೆಲ್ಲ ದುರ್ಯೋಧನನು ಹೆಕ್ಕಿ ಕೊಟ್ಟಿದ್ದು ಯಾರಿಗೂ ತಿಳಿಯುತ್ತಿರಲಿಲ್ಲ. (ಈ ಪ್ರಸಂಗವನ್ನು ಕರ್ಣ, ಭಾನುಮತಿ, ದುರ್ಯೋಧನರು ತಾವಾಗಿಯೇ ಎಲ್ಲಿಯೂ ರಿಪೋರ್ಟ್ ಮಾಡಿದ ವರದಿ ಇಲ್ಲವೇ ಇಲ್ಲ.) ಅಂದು ಇಂದಿಗಿಂತಲೂ ಹೆಚ್ಚು ಪ್ರೈವೆಸಿ ನಾಶಕ ಸ್ಯಾಟಿಲೈಟ್ ಇದ್ದಿತು ಎನ್ನುವುದಕ್ಕೆ ಗೌತಮೇಂದ್ರಾಹಲ್ಯೆಯರ ಪ್ರಸಂಗ ಜಗತ್ತಿಗೇ ತಿಳಿದದ್ದೇ ಸಾಕ್ಷಿ.

‘ಆದ್ರೂ ಡೌಟು’ ಎನ್ನುವ ಗುಮಾನಿ ಗುಮ್ಮಯ್ಯರಿಗೆ ಇದೋ ಮತ್ತೊಂದು clinching evidence. ಕ್ರಿಸ್ತಪೂರ್ವ 5561ನೆಯ ಇಸವಿ. ಅಕ್ಟೋಬರ್ 16ನೆಯ ತಾರೀಖು. ಚಳಿಗಾಳಿ ಬೀಸುತ್ತಿದೆ. ಬೆಳಗಿನ ತಿಂಡಿ ತಿಂದು ಸೈನಿಕರೆಲ್ಲ ಅಂದಿನ ಯುದ್ಧಕ್ಕೆ ಸಿದ್ಧರಾಗಿ ನಿಂತಿದ್ದಾರೆ. ಯುದ್ಧದ ನಿಯಮಗಳು ಡೇ & ನೈಟ್ ಕ್ರಿಕೆಟ್ ಆರಂಭವಾಗುವುದಕ್ಕೆ ಮುಂಚಿನ ಟೆಸ್ಟ್ ಮ್ಯಾಚುಗಳಿಗೆ ಸಂಬಂಧಿಸಿದಂತಿವೆ – ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಯುದ್ಧ; 1ರಿಂದ 1:40 ರವರೆಗೆ ಲಂಚ್ ಬ್ರೇಕ್. 1:40ರಿಂದ 6ರ ವರೆಗೆ ಯುದ್ಧ. 6ಕ್ಕೆ ಯುದ್ಧಾಫೀಸ್ ಕ್ಲೋಸ್. ಮಧ್ಯದಲ್ಲಿ ಟೀ ಬ್ರೇಕ್ ಇರಲಿಲ್ಲ ಎನ್ನುವುದಕ್ಕೆ ಬಲವಾದ ಕಾರಣವೊಂದಿದೆ. ಈ ಯುದ್ಧ ನಡೆದದ್ದು ಇಂದಿಗೆ, ಎಂದರೆ 26-08-2020ಕ್ಕೆ  ಸರಿಯಾಗಿ 7580 ವರ್ಷ, 10 ತಿಂಗಳು, 20 ದಿನಗಳ ಹಿಂದೆ. ಯುದ್ಧ ಇನ್ನೇನು ಪ್ರಾರಂಭವಾಗಲಿದ್ದಾಗ ದೃತರಾಷ್ಟ್ರನು ‘ಮಾಮಕಾಃ ಪಾಂಡವಾಶ್ಚೈವ ಕುಮಕುರ್ವತ ಸಂಜಯ?’ ಎಂದ. ಸಂಜಯ ವಾಚಿಸುತ್ತಾ, ಉವಾಚಿಸುತ್ತಾ ಹೋದ. ನಮ್ಮ ಮುಂದೆ ಒಬ್ಬರು ನಿಂತರೆ ಅವರ ಮುಂದಿನವರು ನಮಗೆ ಕಾಣುವುದಿಲ್ಲ. ಹೀಗಿರುವಾಗ ತಮ್ಮ ಕಡೆಯ ಹನ್ನೊಂದು ಅಕ್ಷೋಹಿಣಿ ಎದುರಿನ ಏಳು ಅಕ್ಷೋಹಿಣಿಯೊಡನೆ ಎಲ್ಲೆಲ್ಲಿ, ಹೇಗೆಹೇಗೆ, ಯಾರ್ಯಾರೊಡನೆ ಕಾದಾಡಿತೆಂದು ಕಾಮೆಂಟರಿ ಹೇಳಬೇಕಾದರೆ ಸ್ಯಾಟಿಲೈಟ್ ನೆಟ್ವರ್ಕ್ ಇರದೆ ಸಾಧ್ಯವಾಗುತ್ತಿರಲಿಲ್ಲ. ಈಗ ಸ್ಟಂಪ್ ವಿಷನ್ ಕ್ಯಾಮರಾ, ಸ್ಯಾಟಿಲೈಟ್, ವೈಡ್ ಸ್ಕ್ರೀನ್ ಎಲ್ಲವೂ ಇದ್ದರೂ ‘Did the ball brush the glove or the bat? Does the ball tracker indicate it would have hit the stumps? Is he out LBW?’ ಎಂಬ ಪ್ರಶ್ನೆಗೆ ನಿಖರವಾದ ದೃಶ್ಯೋತ್ತರ ನೀಡುವುದು ಕಷ್ಟವಾಗಿ, ‘ಹಳೇ ಅಂಪೈರಿನ ಪಾದವೇ ಗತಿ’ ಎನ್ನುವಂತೆ ‘ಅಂಪೈರ್ಸ್ ಕಾಲ್’ ಹಿಡಿಯುವ ಈ ಕಾಲಕ್ಕಿಂತ, ಆ ಗೊಂದಲದ ನಡುವೆಯೂ ‘ಅಭಿಮನ್ಯುವನ್ನು ಜಯದ್ರಥನ ಬಾಣವೇ ಕೊಂದಿತು’ ‘ಕರ್ಣನ ರಥವು ಕೆಸರಿನಲ್ಲಿ ಸಿಲುಕಿದೆ’, ‘ಸರ್ಪಾಸ್ತ್ರವು ಇನ್ನೊಮ್ಮೆ ತನ್ನನ್ನು ಪ್ರಯೋಗಿಸೆಂದು ಕರ್ಣನ ಕರ್ಣದ ಬಳಿ ಬಂದು ಬೇಡುತ್ತಿದೆ’ ಎನ್ನುವುದನ್ನೆಲ್ಲಾ pin point accuracy ಯಿಂದ ಸಂಜಯ ಹೇಳಬೇಕಾದರೆ ಆಗ ‘ಬಾಣವಿಷನ್ ಕ್ಯಾಮರಾ’ನೋ, ‘ಚಕ್ರವಿಷನ್ ಕ್ಯಾಮರಾ’ನೋ ಅಥವಾ ‘ಗದೆವಿಷನ್ ಕ್ಯಾಮರಾ’ನೋ ಇದ್ದು, ಸಣ್ಣಾತಿಸಣ್ಣದ್ದನ್ನೂ ದೊಡ್ಡದಾಗಿ ತೋರಿಸುವ ಸ್ಕ್ರೀನ್ ಇರುವ ಐಪ್ಯಾಡ್ (ಇಂದ್ರಪ್ರಸ್ಥ ಪ್ಯಾಡ್ ನ ಹ್ರಸ್ವರೂಪವಂತೆ) ಇದ್ದು, ಮೋಸ್ಟ್ ಪವರ್ ಫುಲ್ ಸ್ಯಾಟಿಲೈಟ್ ಇದ್ದಿರಲೇಬೇಕೆಂದು ನೀವೂ ಒಪ್ಪಲೇಬೇಕು.  

ಮತ್ತೆ ವೈಕುಂಠಸಮಾರಾಧನೆಗೆ.... ಕ್ಷಮಿಸಿ.... ವೈಕುಂಠದ ಸಮಾಲೋಚನೆಗೆ ತೆರಳೋಣ. ‘look’ ಎಂದ ನಾರದ. ‘I see’ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡ ವಿಷ್ಣು. (ಈಗಿನ ಪರಿಸ್ಥಿತಿ ಆಗಿನದನ್ನು ಹೋಲಿಸಿಕೊಂಡು ಗೊಂದಲಕ್ಕೀಡಾಗದಿರಿ.  ಅಂದು ವೂಹಾನ್ ಇಂದ ವೈಕುಂಠಕ್ಕೆ ಡೈರೆಕ್ಟ್ ಫ್ಲೈಟ್ ಇರಲಿಲ್ಲ. ಆದ್ದರಿಂದ ಬೆರಳನ್ನು ಸ್ಯಾನಿಟೈಝರಲ್ಲಿ ಅದ್ದದೆಯೇ ಮೂಗಿನ ಮೇಲೆ ಇರಿಸಿಕೊಳ್ಳುವ ಸ್ವಾತಂತ್ರ್ಯವಿತ್ತು). ರಕ್ಕಸನಾದರೂ ಇಂದಿನ ವಾಹಿನಿಗಳಂತೆ 24/7 ಪೀಡಿಸುತ್ತಿರಲಿಲ್ಲ. ಒಂದಷ್ಟು ‘ಪರ್ಸನಲ್ ಬ್ರೇಕ್’ಗಳು ಇರುತ್ತಿದ್ದವು. ಹೀಗಿರುವಾಗ ನಾರದ ‘ಲುಕ್’ ಎಂದಾಗಲೇ ವಿಷ್ಣುವಿನ ಕಣ್ಣಿಗೆ ಹಿಂಸಾಚಾರ ಕಂಡಿರಬೇಕೆಂದರೆ ‘ಲಂಕಾ ವಾಹಿನಿ’ಯ ಪ್ರೋಗ್ರಾಂ ಟೈಂ ಟೇಬಲ್ ಕೂಡ ನಾರದನ ಬಳಿ ಇದ್ದಿತು ಮತ್ತು ಅದನ್ನು ನಾರದನು ತನ್ನ ತಂಬೂರಿಯಂತಹ ಮೊಬೈಲ್ ಸ್ಕ್ರೀನ್ ಮೇಲೆಯೇ ತೋರಿಸಿದನು ಎನ್ನುವುದು ಮಂಕರಿಗೂ ತಿಳಿದೀತು. 

  ಆಹಾ! ಬಫರಿಂಗ್ ನಿಂತಿತು. ಸಿಡ್ನಿಯ ಕನಕಾಪುರದ ನಾಣಿ ಒಂದು ಲೇಖನ ಕಳಿಸಿರೆಂದು ಅಪ್ಪಣೆ ಕೊಡಿಸಿದ್ದಾರೆ. ಬಫರಿಂಗ್ ಸುತ್ತುವಂತೆಯೇ ಅವರನ್ನೂ ಇಲ್ಲಿಯವರೆಗೆ ಸುತ್ತಿಸಿದ್ದೇನೆ. ನಮ್ಮಿಬ್ಬರ ನೆಟ್ ವರ್ಕ್ ಕಟ್ ಆಗುವುದಕ್ಕೆ ಮುಂಚೆ ಲೇಖನ ಕಳುಹಿಸಲೇಬೇಕು. ಇಲ್ಲದಿದ್ದರೆ ಸ್ವಸಹಾಯಶೂರರಾದ ಅವರು ತಾವೇ ಲೇಖನಿಸಿ ನನಗಿರುವ ಒಂದು ಉದ್ವೇಗವನ್ನೂ.... ಕ್ಷಮಿಸಿ... ಉದ್ಯೋಗವನ್ನೂ ಇಲ್ಲವಾಗಿಸಿಬಿಡುತ್ತಾರೆ. ಬಫರಿಂಗ್ ಮತ್ತೆ ಎಣ್ಣೆಯ ಬಾಣಲೆಯ ಚಕ್ಕುಲಿಯಂತೆ ಸುರುಳಿ ಸುತ್ತಿಕೊಳ್ಳಲು ಆರಂಭಿಸುವುದಕ್ಕೆ ಮುನ್ನ ಲೇಖನ ಕಳುಹಿಸಿಬಿಡುತ್ತೇನೆ. ಅಲ್ಲಿಯವರೆಗೆ ನೀವ್ ತೊಗೊಳಿ ಒಂದು ಪುಟ್ಟ ಬ್ರೇಕ್! 


Comments

  1. ಇದೇನ್ ತಮಾಷೆ ಸ್ವಾಮಿ ಯಪ್ಪಾ ಮೊದಲು ಬಫರಿಂಗ್ನ ಚಕ್ಕುಲಿಯಂತೆ ಸುತ್ತಿಸಿದಿರಿ. ಹೋಲಿಕೆಗಳಿಗೆ ಎಡೆಯೆ ಇಲ್ಲ ಬಿಡಿ. ಶಿವನ ಶಿರದ ಮೇಲಿನ ಚಂದ್ರ, ವಿಷ್ಣು ನಾರದರ ಮಾತು, ಲಂಕಾಪ್ರಸಂಗ ಇವೆಲ್ಲಾ ನಮ್ಮ ಹಿಂದೂ ದೇವತೆಗಳನೇ ತಮಾಷೆ ಮಾಡುತ್ತಿದ್ದೀರಿ ಅನ್ನಿಸಿದರೂ ಲಿಮಿಟ್ಟಿನಲ್ಲೇ ಹಾಸ್ಯ ಲೇಪಿಸಿದ್ದೀರಿ. ಶಿವ - ಚಂದ್ರರ ಹೋಲಿಕೆಗೆ ಅದೆಷ್ಟು ಹೊಗಳಿದರೂ ಸಾಲದು. super humor ಕಡೆಗೆ ನಾನು ಒತ್ತಡ ಹೇರಿಟ್ಟಿದ್ದೀನಿ ಎನ್ನುವಂತೆ ಗಿಲ್ಟು ಆಗುವ ಹಾಗೆ ನಗಿಸಿದ್ದೀರಿ. ನೀವ್ ಬಿಡಿ ಸಾರ್ great writer

    ReplyDelete
  2. Absolute delight to read such humorous comparison. Satellite, buffering , WWW & world`s first surgeon !!!! don`t know how can you link these points together to write such an article. wonderful Mr aNuku Ramanath Thanks

    ReplyDelete
  3. ಅಬ್ಬಬ್ಬಾ, ಚಕ್ಕುಲಿಯಂತೆ ಸುರುಳಿ ಸುತ್ತುತ್ತಾ ಆರಂಭವಾದದ್ದು, ಶ್ಯಾವಿಗೆಯಂತೆ ಒಂದರೊಳಗೊಂದು ತೂರಿಕೊಂಡು, ಎಲ್ಲಿಂದ ಸವಿಯಲಾರಂಭಿಸುವುದೆಂದು, ಎಲ್ಲಾ ಕೋನಗಳಲ್ಲೂ ಬಾಗಿನೋಡುತ್ತಾ, ಮುಗಿಸುವ ಹೊತ್ತಿಗೆ ನಾನೇ ತಲೆಕೆಳಗಾಗಿ ನಿಂತು ಬಿಟ್ಟಿದ್ದೆ. ಇನ್ನೂ ತಲೆ ಸುತ್ತುತ್ತಲೇ ಇದೆ.

    ReplyDelete
  4. ನಿಮ್ಮ ಶಬ್ದ ಸಂಪತ್ತಿಗೆ, ಹಾಸ್ಯಪ್ರಜ್ಞೆಗೆ ನಮಸ್ಕಾರ. ಉತ್ತಮ ಲೇಖನ👌👌

    ReplyDelete

Post a Comment