ಕುಕ್ಕೂಬರಾ ಮತ್ತು ಗೂಲಾಗೂಲ್ ಮರ

ಕುಕ್ಕೂಬರಾ ಮತ್ತು ಗೂಲಾಗೂಲ್ ಮರ  

(ಆಸ್ಟ್ರೇಲಿಯಾದ ನೂಂಗಾಬುರಾ ಜನರ ಜಾನಪದ ಕತೆ) 

ಸಿಡ್ನಿ  ಶ್ರೀನಿವಾಸ್

ಹಲ್ಲಿ ಗೂಗ್ರಾಗೆ ( Googarh ) ಇಬ್ಬರು ಹೆಂಡಿರು. ಮೊದಲನೆಯವಳು ಪೋಸಮ್ (opposum ) ಆದ ಮೂದೈ (Moodai ) ಮತ್ತು ಎರಡನೆಯವಳು ನಗುವ ಜಾಕಾಸ್ ( laughing jackass) ಆದ  ಕುಕ್ಕೂಬರಾ ( Cookooburrah). ಕುಕ್ಕೂಬರಾಳಿಗೆ ಮೂರು ಗಂಡು ಮಕ್ಕ
ಳು. ಮೊದಲನೆಯವನು ದೊಡ್ದವನಾಗಿದ್ದು ತಾನಾಗಿಯೇ ದೂರ ವಾಸಿಸುತ್ತಿದ್ದ. ಮಿಕ್ಕ ಇಬ್ಬರೂ ಇನ್ನೂ ಚಿಕ್ಕವರು, ತಾಯಿಯ ಜೊತೆಗೇ ಇದ್ದರು. ಅವರ ಬಿಡಾರ ಒಂದು ಗೂಲಾಗೂಲ್ (Goolahgool) ಮರದ ಬಳಿ ಇತ್ತು. ಅವರು ತಮಗೆ ಬೇಕಾದ ನೀರನ್ನು ಆ ಮರದಿಂದಲೇ ಪಡೆಯುತ್ತಿದ್ದರು. ಗೂಲಾಗೂಲ್ ಮರ ಗಟ್ಟಿ ತೊಗಟೆಯಿಂದ ಮಾಡಲ್ಪಟ್ಟಿದ್ದು ಅದಕ್ಕೆ ನೀರನ್ನು ಶೇಕರಿಸಿ ಇಟ್ಟುಕೊಳ್ಳುವ ಸಾಮರ್ಥ್ಯವಿತ್ತು. ಕೆಳಗೆ ಮರದ ಕಾಂಡ. ಮೇಲೆ ಅದು ಎರಡು ಕವಲಾಗಿ  ಬೆಳೆದಿತ್ತು. ಕವಲಿನ ಕೆಳಗೆ ಕಾಂಡ ಪೊಳ್ಳಾಗಿದ್ದು,  ಮಳೆ ಬಂದಾಗ ನೀರು ಕವಲಿನಲ್ಲಿರುವ ಬಿರುಕಿನ ಮೂಲಕ ಕಾಂಡವನ್ನು ಪ್ರವೇಶಿಸುತ್ತಿತ್ತು. ಆ ನೀರು ಅಲ್ಲಿಯೇ ಬಹುಕಾಲದ ವರೆಗೂ ಇರುತ್ತಿತ್ತು. ಅಲ್ಲಿದ್ದ ಕರಿಜನರಿಗೆ ಯಾವ ಯಾವ ಗೂಲಾಗೂಲ್ ಮರದಲ್ಲಿ ಎಷ್ಟೆಷ್ಟು ನೀರು ಸಂಗ್ರಹವಾಗಿದೆ ಎಂಬುದನ್ನು ತಿಳಿಯುವುದು ರೂಢಿಯಾಗಿತ್ತು. ನೀರಿದ್ದ ಕಾಂಡದ ಬಣ್ಣವೇ ಬೇರೆ ಅಲ್ಲವೇ?


ಒಂದು ದಿನ ಗೂಗ್ರಾ ಮತ್ತು ಅವನ ಹೆಂಡತಿಯರು ಬೇಟೆಗೆ ಹೊರಟರು. ತಮ್ಮ ಇಬ್ಬರು ಎಳೆಯ ಮಕ್ಕಳನ್ನು ಗೂಡಿನಲ್ಲಿಯೇ ಬಿಟ್ಟರು. ಹೊರಟಾಗ ಅವರು ತಮಗೆ ಬೇಕಾಗಿದ್ದಷ್ಟು  ನೀರನ್ನು ತಮ್ಮ ಪೋಸಮ್ ಚರ್ಮದ ಚೀಲಗಳಲ್ಲಿ ಇಟ್ಟುಕೊಂಡಿದ್ದರು. ಆದರೆ ಮಕ್ಕಳಿಗೆ ನೀರನ್ನು ಇಡುವುದನ್ನು ಮರೆತರು. ಮಕ್ಕಳೋ ಇನ್ನೂ ಚಿಕ್ಕವರು. ಅವರಿಗೆ ಗೂಲಾಗೂಲಿಗೆ ಹೋಗಿ ನೀರನ್ನು ಪಡೆಯುದು ಹೇಗೆ ಎಂಬುದು ತಿಳಿದಿರಲಿಲ್ಲ. ಹೀಗಾಗಿ ಅವರಿಬ್ಬರೂ ಬಾಯಾರಿಕೆಯಿಂದ ನಶಿಸಿ ಹೋಗುವ ಮಟ್ಟಕ್ಕೆ ಬಂದಿದ್ದರು. ಅವರ ನಾಲಿಗೆಗಳು ಊದಿಕೊಂಡು ಅವರಿಗೆ ಮಾತನಾಡುವುದು ಅಸಾಧ್ಯವಾಯಿತು. ಆಗ ಅಲ್ಲಿಗೆ ಓರ್ವ ವ್ಯಕ್ತಿ ನಡೆದುಬಂದ. ಅವನು ಹತ್ತಿರವಾದಾಗ ಮಕ್ಕಳಿಗೆ ಅರಿವಾಯಿತು- ಅವನು ಅವರಿಬ್ಬರ ದೊಡ್ದ ಅಣ್ಣ ಕುಕ್ಕೂಬರಾ. ಅವರಿಗೆ ಅವನೊಡನೆ ಮಾತನಾಡುವುದು ಆಗಲೇ ಇಲ್ಲ. ಅವನು

 “ಅಮ್ಮ ಎಲ್ಲಿ?” 

ಎಂದು ಕೇಳಿತ್ತಿದ್ದ. ಇವರಿಗೆ ಉತ್ತರಕೊಡುವುದು ಸಾಧ್ಯವಾಗಲಿಲ್ಲ. ಆಗ ಅವನು ಕೇಳಿದ,

”ಏನಾಗಿದೆ ನಿಮಗೆ?” 

ಇಬ್ಬರೂ ಗೂಲಾಗೂಲ್ ಮರದತ್ತ ಕೈಮಾಡಿ ತೋರಿಸಿದರು. ಅವನು ಮರದತ್ತ ನೋಡಿ ಪರಿಸ್ಥಿತಿ ಏನಿರಬಹುದು ಎಂಬುದನ್ನು ಊಹಿಸಿದ.

 “ಅಮ್ಮಾ ನಿಮಗೆ ನೀರನ್ನು ಇಟ್ಟು ಹೋಗಿಲ್ಲವೇ?” 

ಇಬ್ಬರೂ ತಲೆ ಅಲ್ಲಾಡಿಸಿದರು. 

“ನೀವಿಬ್ಬರೂ ನೀರಿಲ್ಲದೇ ಸಾಯುತ್ತಿದ್ದೀರಾ ಹಾಗಾದರೆ?”

ಮತ್ತೆ ಇಬ್ಬರೂ ತಲೆ ಅಲ್ಲಾಡಿಸಿದರು. 

“ತಡೆಯಿರಿ. ನನ್ನ ತಮ್ಮಂದಿರನ್ನು ನೀರಿಲ್ಲದೇ ಸಾಯುವಂತೆ ಮಾಡಿರುವರಿಗೆ ನಾನು ತಕ್ಕ ಶಾಸ್ತಿಮಾಡುತ್ತೇನೆ.”

ಕೂಡಲೇ ಕುಕ್ಕೂಬರಾ ಮರದ ಬಳಿಗೆ ನಡೆದು, ಅದನ್ನು ಹತ್ತಿ, ಅದನ್ನು ಕೆಳಗಿನ ವರೆಗೂ ಸೀಳಿದ. ಕ್ಷಣಮಾತ್ರದಲ್ಲಿ ಅಲ್ಲಿದ್ದ ನೀರೆಲ್ಲಾ ವೇಗದ ತೊರೆಯಂತೆ ಹರಿಯಲಾರಂಭಿಸಿತು. ಚಿಕ್ಕ ಮಕ್ಕಳಿಬ್ಬರೂ ಅಲ್ಲಿಗೆ ಹೋಗಿ ಮನಸಾರೆ ನೀರು ಕುಡಿದರು. ನೀರಿನಲ್ಲಿ ಆಟವಾಡಿದರು, ಸ್ನಾನ ಮಾಡಿದರು. ನೀರು ಹೆಚ್ಚಾಗುತ್ತಾ ಹೋಗಿ ಅದರ ಮಟ್ಟ ಏರುತ್ತಲೇ ಇತ್ತು. 

ಅತ್ತ ಬೇಟೆಹೋಗಿದ್ದವರು ತಮ್ಮ ಕೆಲಸ ಮುಗಿಸಿ ಹಿಂತಿರುಗುತ್ತಿದ್ದರು. ದಾರಿಯಲ್ಲಿ ಮಹಾ ಪ್ರವಾಹದಂತೆ ನೀರು ಹರಿಯುತ್ತಿತ್ತು. 

“ಏನಿದು? ನಮ್ಮ ಗೂಲಾಗೂಲ್ ಒಡೆದು ಹೋಗಿದೆಯೇ?”

ನೀರನ್ನು ನಿಲ್ಲಿಸ ಹೋದರು. ಆದರೆ ಅದರ ರಭಸ ವಿಪರೀತವಾಗಿತ್ತು. ನಿಲ್ಲಿಸುವ ಪ್ರಯತ್ನವನ್ನು ಬಿಟ್ಟು ತಮ್ಮ ಮನೆಯತ್ತ ಹೊರಟರು. ಆದರೆ ಮನೆಯ ಮುಂದೆ ದೊಡ್ದ ತೊರೆಯ ನಿರ್ಮಾಣವಾಗಿತ್ತು. ತೊರೆಯ ಮತ್ತೊಂದು ಪಕ್ಕದಲ್ಲಿ ತಮ್ಮ ಮೂರೂ ಮಕ್ಕಳು ನಿಂತಿದ್ದರು. ಹಿರಿಯ ಮಗ ತಮ್ಮಂದಿರಿಗೆ ಹೇಳಿದ,

“ಅವರಿಗೆ ಕೂಗಿ ಹೇಳಿ. ಅತ್ತ ಆಳ ಕಡಿಮೆ ಇದೆ. ಅಲ್ಲಿ ಅವರು ಸುಲಭವಾಗಿ ದಾಟಬಹುದು.” 

ತಮ್ಮಂದಿರು ಹಾಗೆಯೇ ಮಾಡಿದರು. ಗೂಗ್ರಾ ಮತ್ತು ಅವನ ಹೆಂಡಿರಿಬ್ಬರೂ ಮಕ್ಕಳು ಹೇಳಿದ ಸ್ಥಳಕ್ಕೆ ಹೋಗಿ, ದಾಟಲು ನೀರಿಗಿಳಿದರು. ಕಷ್ಟವಾಯಿತು. ಮೂದೈ ನೀರಿನಿಂದ ಏಳಲು ಯತ್ನಿಸುತ್ತಿದ್ದಂತೆ  ಅದನ್ನು ನೋಡಿದ ಜಾಕಾಸ್ ಕುಕ್ಕೂಬರಾ ಕೂಗಿಕೊಂಡಳು.

“ಗುಗ್ ಗೂರ್ ಗಾ ಗಾ,  ಗುಗ್ ಗೂರ್ ಗಾ ಗಾ, ನನಗೊಂದು ಕೋಲನ್ನು ತಂದುಕೊಡು.” 

ಆದರೆ ದಡದಿಂದ ಅವಳ ಮೂರೂ ಮಕ್ಕಳು ಒಕ್ಕಂಠದಿಂದ ಉತ್ತರಿಸಿದರು,

“ಗುಗ್ ಗೂರ್ ಗಾ ಗಾ. ಗುಗ್ ಗೂರ್ ಗಾ ಗಾ.”

ಮೂರು ಬೇಟೆಗಾರರ ಸುತ್ತಲೂ ನೀರು ಆವರಿಸಿತು. ನೀರೊಳಗಿನ ಸುಳಿ ಅವರನ್ನು ಸೆಳೆದುಕೊಂಡು ಮುಳುಗಿಸಿತು. ಅಂತೂ ಹಿರಿಯಮಗ ಸೆಡು ತೀರಿಸಿಕೊಂಡ. 

(ಆಧಾರ -  K, Langloh Parker, Australian Legendary Tales, David Nutt, 270-271 Strand, Melbourne, Melville, Mullen & Slade, 1896 .)

ಟಿಪ್ಪಣಿ : 

ಗೂಗ್ರಾ: ( Googarh )  ಇಗ್ವಾನಾ, ದೊಡ್ದ ಅಳಿಲಿನಂತಹ ಪ್ರಾಣಿ, ಮರಗಳ ಮೇಲೆ ಮತ್ತು ಭೂಮಿಯ ಮೇಲೆ ವಾಸಿಸುತ್ತವೆ. 

ಪೋಸಮ್ : (opposum ): 

ಕುಕ್ಕೂಬರಾ : ( laughing jackass)  ನಗುವ ಜಾಕಾಸ್ 

ಗೂಲಾಗೂಲ್ ( Goolahgool): ನೀರನ್ನು ಶೇಕರಿಸಿ ಹಿಡಿಯುವ ಮರ 

Comments

  1. ಈ ಕಥೆ ಓದಿದ ನಂತರ ದಿನಾ ಮನೆಯ ಹತ್ತಿರದ ಪುಟ್ಟ ಕಾಡಿನಲ್ಲಿ ವಾಕಿಂಗ್ ಹೋದಾಗ ಆ ಥರದ ಮರ ಪೊಟರೆ, ಕುಕ್ಕುಬಾರಗಳನ್ನೂ ನೋಡಿದಾಗ ಈ ಕಥೆ ನೆನಪಿಗೆ ಬರುತ್ತದೆ. ಪುಟ್ಟದಾದರೂ ಕೆಲವು ಸನ್ನಿವೇಶ ಮನ ಮುಟ್ಟುತ್ತದೆ. ಧನ್ಯವಾದಗಳು ಶ್ರೀನಿವಾಸ್ ಸಾರ್

    ReplyDelete
  2. Found this as a very special short story. It is small but very interesting.

    ReplyDelete

Post a Comment