ಅಷ್ಟೈಶ್ವರ್ಯ

 ಅಷ್ಟೈಶ್ವರ್ಯ

ಆಧ್ಯಾತ್ಮ ಲೇಖನ - ಶ್ರೀ  ನಾರಾಯಣ 

                                         ಒಬ್ಬ ದನ ಕಾಯುವ ಗೊಲ್ಲ ಇದ್ದ. ಸಾಕಷ್ಟು ಗೋವುಗಳೊಡೆಯ ಆತ, ಬಲ್ಲಿದನೂ ಅಹುದು. ದಿನಾ ಗುಡ್ಡಗಾಡುಗಳಲ್ಲಿ ಅಲೆದಾಟ, ಗೋವುಗಳ ಜೊತೆಗೆ ಸಾಕಷ್ಟು ಗೆಳೆಯರ ಗುಂಪೇ ಇದ್ದರೂ ಆಪ್ತನಾಗಿ ಒಬ್ಬ ತನ್ನ ಸಾನ್ನಿಧ್ಯದಲ್ಲಿ ಅವನಿಗೆ ಸಂಗಡ ಬೇಕೆನಿಸಿತು. ಆ ಹುದ್ದೆಯ ಆಯ್ಕೆಗೆ ಅರ್ಜಿ ಕರೆದ. ಊರಿಗೇ ಹೆಸರು ಮಾಡಿರುವ ಗೊಲ್ಲ, ಸಾಕಷ್ಟು ಜನ ಅರ್ಜಿ ಸಲ್ಲಿಸಿದರು.ಕನಿಷ್ಠ ಅರ್ಹತೆ ಸಂಗೀತ ಮೈಗೂಡಿಸಿಕೊಂಡಿರಬೇಕು


                           ಒಬ್ಬೊಬ್ಬರನ್ನೂ ಪ್ರ್ಯತ್ಯೇಕ ಕರೆದು ಒಳನೋಟ ನೋಡಲಾಯಿತು. ಮೊದಲನೆಯವ "ನೋಡಿ ಸ್ವಾಮಿ ನಾನು ಮರ ಹಾಗೂ ಚರ್ಮಗಳಿಂದ ಪಕ್ಕ ವಾದ್ಯ ಮಾಡಬಲ್ಲೆ, ಶೃತಿ ತಾಳಗಳಿಗೆ ಬದ್ಧವಾಗಿ ಧ್ವನಿಗೆ ಜೊತೆಗೂಡಬಲ್ಲೆ" ಎಂದ. ಎರಡನೆಯವ "ನಾನು ಉತ್ತಮ ಮರ ಮತ್ತು ತಂತಿಗಳಿಂದ ಒಳ್ಳೆಯ ಶೃತಿಯಿಂದ ಇಂಪಾದ ನಾದ ಮೂಡಿಸಬಲ್ಲೆ ನನಗೆ ಒಂಟಿಯಾಗೂ ಸಂಗೀತ ಸುಧೆ ಹರಿಸುವ ಶಕ್ತಿ ಇದೆ" ಎಂದ. ಇನ್ನೂ ಸಾಲಿನಲ್ಲಿದ್ದವರೆಲ್ಲಾ ಒಬ್ಬೊಬ್ಬರೂ ತಮ್ಮ ಬಗ್ಗೆ ಸಾಕಷ್ಟು ವರ್ಣಿಸಿಕೊಂಡರು, ಗೊಲ್ಲನ ಮನಸ್ಸಿಗೆ ಯಾರೂ ಅಷ್ಟಾಗಿ ಹಿಡಿಸಲಿಲ್ಲ, ಇನ್ನೇನು ದಿನದ ಅಂತ್ಯಕ್ಕೆ ಪಟ್ಟಿಯಲ್ಲಿದ್ದ ಎಲ್ಲಾ ಅರ್ಜಿದಾರನ್ನು ಪರೀಕ್ಷಿಸಿ ಮನೆಗೆ ತೆರಳುವ ಸಮಯ ಒಬ್ಬ ಬಡಪಾಯಿ ಓಡೋಡಿ ಬಂದ, ಸ್ವಾಮೀ ಈ ಹುದ್ದೆಗೆ ನಾನೂ ಸೇರುವ ಆಸೆ ಆದರೆ ತಡವಾಗಿ ಬರಬೇಕಾಯ್ತು ದಯವಿಟ್ಟು........ಎಂದು ಗೋಗರೆದ. ಸರಿ ಹನ್ನೊಂದರಲ್ಲಿ ಇನ್ನೊಂದು ಹೋಗ್ಲಿ ಅಂತ ಅವನ ಬಗ್ಗೆಯೂ ಕೇಳಲಾಯಿತು.  "ನಿನಗೆ ಏನೇನು ಪಾಂಡಿತ್ಯವಿದೆ? ಏನು ನಿನ್ನ ಅನುಭವ?" ಎಂದಾಗ,  ಆತ ಕೈಜೋಡಿಸಿ  "ಸ್ವಾಮೀ ನಂದೇನೂ ಇಲ್ಲ ಸ್ವಾಮಿ ನನ್ನಲ್ಲಿದ್ದ ಅಷ್ಟೈಶ್ವರ್ಯ ಎಲ್ಲ ಕಳ್ಕೋಂಡಿದ್ದೀನಿ ಅದಕ್ಕೇ ನಿಮ್ಮಲ್ಲಿಗೆ ಬಂದಿದ್ದೇನೆ."   "ಏನದು ನಿನ್ನ ಅಷ್ಟೈಶ್ವರ್ಯ?" ಎಂದು ಗೊಲ್ಲ ಕೇಳಿದ. "ಏನೂಂತ ಹೇಳಲಿ ಸ್ವಾಮಿ,,,,,, 

  •  ಸುಂದರ ವಸ್ತುಗಳನ್ನು ನೋಡಿ ಮುದ ಪಡುತ್ತಿದ್ದೆ, ನನ್ನಲ್ಲೂ ಅವು ಇರಬೇಕು ಎಂದು ಅದಕ್ಕಾಗಿ ಸಕಲ ಪ್ರಯತ್ನ ಮಾಡಿ ವಿಫಲನಾದೆ, ಈಗ ಅವನ್ನು ನೋಡಲು ದೃಷ್ಟಿಶಕ್ತಿಯಾಗಿದ್ದ ಚಕ್ಷುಗಳನ್ನೇ ಕಸಿದುಕೊಂಡರು, 
  •  ಅವರಿವರ ವಿಷಯಕ್ಕೆ ಕಿವಿಕೊಟ್ಟು ಮನಸ್ಸು ಕೆಡಿಸಿಕೊಂಡೆ, ವಿಷಯಾಸಕ್ತಿ ಹೆಚ್ಚಾಗಿ ಅದೇ ವಿಷವಾಗಿ ನನ್ನ ಶ್ರವಣ ಶಕ್ತಿಯನ್ನೂ ಕಳೆದುಕೊಂಡೆ, 
  •  ನಾಲಿಗೆಯ ಚಪಲ ಹೆಚ್ಚಾಗಿತ್ತು, ರುಚಿಕರ ಆಹಾರದ ಆಸೆ ಅತಿಯಾಗಿ ಅನಾರೋಗ್ಯದಿಂದ ರಸಾನುಭವ ಕಳೆದುಕೊಂಡು ಜಿಹ್ವೆಯ ಶಕ್ತಿಯನ್ನೂ ಕಳೆದುಕೊಂಡೆ, 
  • ಸುಗಂಧ, ಪರಿಮಳಗಳ ಮತ್ತಿನಲ್ಲಿ ತೇಲುತಿದ್ದವ ಈಗ ಘ್ರಾಣ ಶಕ್ತಿಯನ್ನೂ ಕಳೆದುಕೊಂಡೆ, 
  •  ಮಾಂಸದ ಈ ದೇಹಕೆ ಹೊದಿಕೆಯಾಗಿರುವ ಈ ಚರ್ಮದ ಮರ್ಮ ಅರಿಯದೇ ಸ್ಪರ್ಶಸುಖಕ್ಕಾಗಿ ಹಾತೊರೆದು ಈಗ ಆ ಶಕ್ತಿಯೂ ಇಲ್ಲದಂತಾಗಿದೆ, 
  • ಇನ್ನು ಮೇಲಿನ ಶಕ್ತಿಗಳ ಮಾತು ಕೇಳಿ ನನ್ನ ಮನೋಬಲವನ್ನೂ ಹತೋಟಿಯಲ್ಲಿಡದವನಾದೆ, 
  • ಮಾತಿನ ಮಿತಿ ಅರಿಯದೆ ವಚನ ಶಕ್ತಿ ಕಳೆದುಕೊಂಡೆ. 
  • ಇವೆರಡೂ ಇಲ್ಲವಾದಮೇಲೆ ಮಾಡುವ ಕೆಲಸದಲ್ಲಿ ಶ್ರದ್ಧೆ ನಿಷ್ಟೆಗಳಿಲ್ಲದೆ ನನ್ನ ಕಾಯಾಶಕ್ತಿಯನ್ನೂ ಕಳೆದುಕೊಂಡೆ. 

"ಇವೆಲ್ಲಾ ಕಳೆದುಕೊಂಡ ಬಗೆಯಾದರೂ ಹೇಗೆ ? " ಎಂದು ಕೇಳಿದ ಗೊಲ್ಲ 

ಭಯಂಕರ ಅನುಭವ ಸ್ವಾಮೀ, ಕೆಂಪಾಗಿ ಕಾದ ಕಬ್ಬಿಣದ ಸಲಾಕೆಯಿಂದ ನನ್ನ ಮೈಮೇಲೆ ತೂತು ಬೀಳುವಂತೆ ಕಠೋರವಾಗಿ ಬರೆ ಎಳೆದು ಇವೆಲ್ಲವನ್ನೂ ನನ್ನಿಂದ ಕಸಿದುಕೊಂಡರು. ಈಗ ಮೈಎಲ್ಲಾ ತೂತುಗಳು, ಒಂದೇ ಎರಡೇ ಎಂಟು ! ಈಗ ನನ್ನಲ್ಲಿ ಏನೂ ಇಲ್ಲ,ನೀವೇ ನನ್ನನ್ನು ಉದ್ಧರಿಸಬೇಕು, ನನ್ನೊಳು ನೀವಾಗಿ, ಖಾಲಿ ಇರುವ ನನ್ನಲ್ಲಿ ವಾಯುವಾಗಿ ನುಸುಳಿ ನನಗೆ ಶಕ್ತಿ ತುಂಬಬೇಕು.ಆಗ ನಾನು ಮಧುರ ಮುರಳಿ ಗಾನವಾಗಿ ಹೊರಹೊಮ್ಮುವೆ, ದಯಮಾಡಿ ನನ್ನನ್ನು ನಿಮ್ಮ ಸೇವಕನಾಗಿ ಸ್ವೀಕರಿಸಿ ಎಂದು ಗೋಗರೆದ. ಗೊಲ್ಲನಿಗೆ ಇಂಥವನೇ ಬೇಕಿತ್ತು.ಮಿಕ್ಕವರು ಅವರ ಬಗ್ಗೆ ಏನೆಲ್ಲಾ ಹೇಳಿಕೊಂಡರು, ಆದರೆ ಈತ ನನ್ನಲ್ಲಿ ಏನೂ ಇಲ್ಲ, ಶರಣಾಗಿ ನಿಮ್ಮ ಪಾದದಡಿ ಬಾಗಿದ್ದೇನೆ ಎನ್ನುತ್ತಿದ್ದಾನೆ ! ಈತನೇ ನನಗೆ ಸರಿಯಾದ ಜೊತೆಗಾರ ಎಂದು ನಿರ್ಧರಿಸಿ "ಅಯ್ಯಾ ನೀನು ಇನ್ಮುಂದೆ ನನ್ನೊಡನೆಯೇ  ಇರು ಸದಾಕಾಲ, ಇನ್ಮುಂದೆ ನನ್ನಹೆಸರಿನ ಮೊದಲು ನಿನ್ನ ಹೆಸರು ಸೇರಿರುತ್ತದೆ, ಎಂದು ಅಭಯವಿತ್ತ. ಆ ಗೊಲ್ಲನೇ ಶ್ರೀಕೃಷ್ಣ, ಅಷ್ಟೈಶ್ವರ್ಯ ಕಳೆದುಕೊಂಡಾತನೇ ಕೊಳಲು. ಭಗವಂತನಿಗೆ ಶರಣಾಗಿ ಮೊರೆಹೋದವನು ಮುಂದೆ ಈತನ ಹೆಸರು ಗೊಲ್ಲನ ಹೆಸರಿನಮುಂಚೆ ಸೇರಿಹೋಯಿತು. ಮುರಳೀಲೋಲ, ವೇಣುಗೋಪಾಲ, ಮುರಳಿ ಮನೋಹರ, ಮುರಳೀಧರ....... ಹೀಗೆ ಇನ್ನೂ ಕೆಲವು ಕಥೆಗೆ ಉದಾಹರಿತವಾಗಿ ಹೊಂದುವುವು. 


                             ಪಂಚೇಂದ್ರೀಯಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳದಾದಾಗ ವಚನ,ಮನೋ ಶಕ್ತಿ ಇಲ್ಲವಾದಲ್ಲಿ ಕಾಯಾಶಕ್ತಿ ಸಹಜವಾಗೇ ಕಳೆದುಕೊಳ್ಳುವ ನಮಗೆ ಡಿ ವಿ ಜಿ ತಮ್ಮ ಕಗ್ಗವೊಂದರಲ್ಲಿ ಹೇಳುವಂತೆ "ಸ್ಮಿತವಿರಲಿ ವದನದಲಿ ಕಿವಿಗೆ ಕೇಳಿಸದಿರಲಿ, ಹಿತವಿರಲಿ ವಚನದಲಿ ಋತವ ಬಿಡದಿರಲಿ, ಮಿತವಿರಲಿ ಭೋಗದಲಿ ಮನಸಿನುದ್ವೇಗದಲಿ, ಅತಿಬೇಡ ಎಲ್ಲಿಯೂ ಮಂಕುತಿಮ್ಮ " ಎನ್ನುವ ಮಾತು ಎಷ್ಟು ಅನ್ವಯವಲ್ಲವೆ. ಒಳ್ಳೆಯ ಆಲೋಚನೆಯ ದೃಢ ಸಂಕಲ್ಪವೇ ಋತ, ಅದನ್ನು ಕಾರ್ಯರೂಪಕ್ಕೆ ತರುವ ವೃತ್ತಿಯೇ ಸತ್ಯ, ಇದುವೇ (ಎಲ್ಲರ) ಧರ್ಮ.

 

Comments

  1. ನಿಮ್ಮ ಬರಹ ಸ್ವಾರಸ್ಯವಾಗಿದೆ, ಅರ್ಥಗರ್ಭಿತ ವಾಗಿದೆ. ಚಿಂತನೆಯನ್ನು ಪ್ರಚೋದಿಸುತ್ತದೆ. ಇಷ್ಟು ಒಳ್ಳೆಯ ಕಥೆಯನ್ನು ಬರೆದಿದ್ದಕ್ಕೆ ನಿಮಗೆ ಅಭಿನಂದನೆಗಳು.
    ಲೇಖನದಲ್ಲಿ ಹಲವು ಮುದ್ರಣದೋಷಗಳಿವೆ. ಉದಾಹರಣೆ: ಕನಿಷ್ಟ ಅಲ್ಲ ಕನಿಷ್ಠ; ಗ್ರಹಣ ಅಲ್ಲ ಘ್ರಾಣ; ಸ್ಪರ್ಷ ಅಲ್ಲ ಸ್ಪರ್ಶ ; ಇತ್ಯಾದಿ

    ReplyDelete
    Replies
    1. ಡಾ ಮಧುಸೂದನ ಸಾರ್ ತಮ್ಮ ಪ್ರೋತ್ಸಾಹದ ನುಡಿಗಳಿಗೆ ಹೃನ್ಮನ ಧನ್ಯವಾದಗಳು. ತಾವು ಸಂಸ್ಕೃತ ,ಕನ್ನಡ, ಆಂಗ್ಲ ಭಾಷೆಗಳೆಲ್ಲವನ್ನೂ ಚೆನ್ನಾಗಿ ಅರಿತವರು. ತಮ್ಮಂತೆ ತಿಳಿದವರು ನನ್ನ ಲೇಖನ ಓದಿದಿರಿ ಅನ್ನುವ ಸಂತೋಷ ನನಗಾಗಿದೆ. ತಾವು ತಿಳಿಸಿದ ತಪ್ಪುಗಳನ್ನು ತಿದ್ದಲಾಗಿದೆ. ಧನ್ಯವಾದಗಳು

      Delete
  2. ಕೊಳಲಿಗೆ ಬೇರೆ ವಾದ್ಯಗಳಂತೆ ಟ್ಯೂನಿಂಗ್ ಮಾಡುವ ಕ್ರಮವೇ ಇಲ್ಲ. ತಂತಿ, ಚರ್ಮ ವಾದ್ಯಗಳಿಗೆ ಆಗಾಗ್ಗೆ ಟ್ಯೂನ್ ಮಾಡ್ತಾ ಇರ್ಬೇಕು.  ಭಗವಂತನ ಸಾನ್ನಿಧ್ಯದಲ್ಲಿ ಎಲ್ಲವೂ ಪರ್ಫೆಕ್ಟ್ ಅಲ್ಲವೇ? ಮನ ಮುಟ್ಟುವ ಲೇಖನ. 

    ReplyDelete
  3. Very interesting article and Vairagya on panchendriyas explained very well. thanks Narayan Kanakapur encourage you to keep writing more such articles.

    ReplyDelete
  4. ಸುಂದರ ವಾದ ಹಾಗೂ ಅರ್ಥಪೂರ್ಣ ವಾದ ಕಥೆ. ಅತ್ಯಂತ ಕ್ಲಿಷ್ಟಕರ ವೈರಾಗ್ಯದ ಸಂದೇಶವನ್ನು ಸುಲಭವಾಗಿ ತಿಳಿಸಿದ ಬಗೆ ಬಹಳ ಚೆನ್ನಾಗಿ ಮೂಡಿಬಂದಿದೆ!!

    ReplyDelete

Post a Comment