ಶ್ರದ್ಧೆ

ಶ್ರದ್ಧೆ 

ಲೇಖನ - ನಾಶ್ರೀ ಹೆಬ್ಳೀಕರ್                               

ಕೃಷ್ಣಾ ನದಿ ದಂಡಿಯ ಸಮೃದ್ಧಿಯ ಊರು ನವಲಿಚಿತ್ತಾಪೂರ. ನಾಲ್ಕ ಓಣಿ ಊರು. ಎಲ್ಲಾರೂ ತಮ್ಮ ಮನೆಯ ಹೊರಗಡೆ ನಿಂತರೆ ನದಿ ದಂಡೆಯ ದಿಬ್ಬದ ಮೇಲೆ ಕರಿಕಲ್ಲಿನಲ್ಲಿ ಕಟ್ಟಿದ ಹನಮಪ್ಪನ ಗುಡಿ ಕಾಣಸೊದು. ಹಣುಮಪ್ಪನ ಎದುರುಗೆ ಇರೊದೆ ಗರುಡಗಂಬ. ಅದರ ಹಿಂದಗಡೆ ದೊಡ್ಡ ಆಲದ ಗಿಡ, ವಿಸ್ತಾರವಾಗಿ ಹಾಸುಗಲ್ಲುಗಳನ್ನ ಹಾಕಿ ಕಟ್ಟಿದ ಆಲದಕಟ್ಟಿ. ಅದರೊಳಗ ಆರಡಿ ಎತ್ತರದ ಶಾಸನಗಲ್ಲು. ದೇವನಾಗರಿ ಲಿಪಿಯೊಳಗೆ ಬರೆದ, ೧೨ನೇ ಶತಮನದ ಚಾಲುಕ್ಯ ರಾಜರ ಶಾಸನ ಮಾಸಿದ ಅಕ್ಷರ ಕಾಣಿಸುತ್ತಿತ್ತು.

                              ಊರ ನಡುಓಣಿಯ ಕಡೆಯ ಮನೆಯೇ ಬಿರಮ್ಮಳದು, ವಯಸ್ಸಾದ ಹಣ್ಣು ಹಣ್ಣು ಮುದುಕಿ, ಅವಳಿಗೊಬ್ಬ ಅರವು ಮರುವ ಮಗ ಭರಮ. ಇವರಿಬ್ಬರೆ ಇರುವದು. ಗುಡಿಸಲಿನ ಹಿಂದೆ ಮುಂದೆ ಬೆಳೆದ ಹೂಗಳನ್ನು ಊರೊಳಗಿನ ಮನೆಗಳಿಗೆ ಮುಂಜಾನೆ ಕೊಟ್ಟು ಅವರು ಕೊಡುವ ದುಡ್ಡನ್ನೋ ಮತ್ತು ಕಾಳನ್ನೋ ತಂದು ಜೀವನ ನಡಸುತ್ತಿದ್ದಳು. ಭರಮನದೋ ಮುಂಜಾನೆ ಮಾರಿಗೆ ನೀರು ಗೊಜ್ಜಿಕೊಂಡು ನಡೆದರ ಬರುವದು ಸಂಜೆಗೆ. ಅವನ ಹೊಟ್ಟಿತುಂಬಿಸುವದು ಊರ ಮಂದಿಯ ಜವಾಬ್ದಾರಿ ಅಂತಿತ್ತು. ಕರೆದವರ ಮನೆ ಹೊಕ್ಕು ಹೇಳಿದ ಕೆಲಸಾ ಮಾಡುತ, ಹಕ್ಕಲೆ, ರೊಟ್ಟಿ ಇಸಗೊಂಡ ತಿನ್ನುವವಾ. ಬಿಸಲು ನೆತ್ತಿಗೆ ಎರತಂದ್ರೆ ಗುಡಿ ಕಟ್ಟಿಗೆ ಬಿದ್ದು ಗುರಕಿ ಹೊಡಿಯುವವಾ. ಸಂಜೆಗೆ ಆಲದಕಟ್ಟಿಗೆ ಕುಡೊ ಮಂದಿ ಹರಟಿ ಕೆಳಕೋತ್' ಕೂಡುವ. ಹನಮಂತ ದೇವರ ಪೂಜಾರಿ ಬಡಿಗ್ಯಾರ ಮಾಂತೆಶ, ಶಂಕಾ ಉಬಿದಾ ಅಂದರ ಊರ ಮಂದಿ ಎಲ್ಲಾ ಆ ಶಂಕನಾದಾ ಕೇಳಿ ಬರೊರು. ಭಜನಿ ಮಾಡುತ್ತ ಶಯನಾಆರತಿ ಮಾಡೊರು. ಆರತಿ ಆದಮ್ಯಾಲೆ ಭರಮಾ, ಸಿಗೊ ಕೊಬ್ಬರಿ ಸಕ್ಕರಿ ಪ್ರಸಾದ ಬಂದ ಮಂದಿಗೆಲ್ಲ ಹಂಚಿ ಉಳದದ್ದನ್ನ ತಿನ್ನುತ್ತ ಗುಡಸಲ ಹಾದಿ ಹಿಡಿಯುವವ. ಒಟ್ಟಿನ್ಯಾಗ ಹೆಳಬೆಕಂದ್ರ ಊರ ಮಂದಿ ಒಳಗ ಸಂಸ್ಕೃತಿ ಜ್ಯೊತಿಗ ಸುಸಂಸ್ಕೃತೀನು ಇತ್ತು.


                               ಹಿಂಗ ದಿನಾ ಉರಳುವಾಗ, ಒಂದ ದಿನಾ ನದಿ ಆ ಕಡೆಯ ದಂಡಿಯಿಂದ ಹರಗೊಲ್ದಾಗ ಜಂಗಮಸ್ವಾಮಿಗಳು ಬಂದರು. ಊರಾಗಿನ ಜನರೆಲ್ಲ ಸೇರಿ ಕರಡಿಮಜಲ ಬಾರಸುತ್ತ ಗುಡಿಗೆ ಕರಕೊಂಡ ಬಂದ್ರು. ಒಂದು ವಾರ ಮುಕ್ಕಾಮ ಇತ್ತು. ದಿನಾ ಒಬ್ಬ ಒಬ್ಬರ ಮನಿಗೆ ಬಿನ್ನಾಣ ಇರತಿತ್ತು. ಸಂಜಿ ಹೊತ್ತು ಪ್ರವಚನ ನಡಿಯುತಿತ್ತು. ಭಕ್ತ ಜನರಿಗೆ ಗುರುಗಳ ಹಿತವಚನ ಸವಿಪಾಯಸದಂತ್ತಿತ್ತು. ಭರಮ ನೆರಳಿನಾಂಗ ಅವರ ಹಿಂದ ಹಿಂದ ಇರತಿದ್ದಾ. ಆಲದಕಟ್ಟಿ ಮ್ಯಾಲ ಕುಡೊ ಮಂದಿ ಭರಮನ ಕರದ, ಸ್ವಾಮ್ಯಾರ ಮಹಾತ್ಮರ ಅದಾರ. ಅವರ ಕಡೆ ಉಪದೇಶದ ಮಂತ್ರಾ ತೊಗೊಂಡರ ಎನ್ ಬೆಕಾಗಿದ್ದ ಎಲ್ಲಾ ಸಿಗತದ. ಅವರ ಕೊಡಂಗಲ್ ಅಂತಾರ ನೀ ಬಿಡಾಕ ಹೊಗಬ್ಯಾಡ ಅಂತ ಹೇಳಿ ತಲ್ಯಾಗ ತುಂಬಿ ಕಳಸಿದ್ರ.

                                  ಭರಮಾ ಮಂತ್ರಾ ಹೇಳ್ರಿ ಅಂತ ಸ್ವಾಮ್ಯಾರಗೆ ತಲಿ ತಿನ್ನಾಕ ಸುರು ಮಾಡಿದ. ನನಗ ಅಂತಾ ಮಂತ್ರಾ ಬರಂಗಲೊ ಅಂತ ಹೇಳಿದರೂ ಕೆಳಲಿಕ್ಕೆ ತಯಾರ ಇಲ್ಲಾ. ಅನಕೊಂಡಹಂಗ ಕಡೆ ದಿವಸ ಬಂದಬಿಡ್ತು. ಇನ್ನೆನ ನದಿ ದಾಟಲಿಕ್ಕ ಸ್ವಾಮ್ಯಾರ ಹರಗೋಲ ಹತ್ರ ನಿಂತಿದ್ರ, ಭರಮ ಓಡಿ ಹೋಗಿ ಗಟ್ಟ್ಯಾಗಿ ಕಾಲ ಹಿಡಕೊಂಡ ನೀವ ಮಂತ್ರಾ ಹೆಳಲಿಲ್ಲಾ ಅಂತ ಅಂದ್ರ ಕಾಲ ಬಿಡಂಗಲ್ಲಾ ಅಂತ ಕೂತಾ. ಜನಕ್ಕ ಎನ್ ಮಾಡಬೇಕಂತ ತಿಳಿವಲತು, ಕಡೆಕ ಅವನಿಂದ ತಪ್ಪಿಸಿಕೊಳ್ಳಲಿಕ್ಕ, ಏಳ ನಿನ್ನ ಕಿವಿ ಕೊಡ ಅಂದ್ರು. ಸಣ್ಣ ಧನಿವಳಗ  ಸ್ವಾ ಸಯಂ ಸಹ..ಸ್ವಸ್....ಹಿಸ್ಸ್ ಇದನ್ನ ಹಗಲು ರಾತ್ರಿ ಮನಸ್ಸನ್ಯಾಗ ಹೆಳಕೊಂತ ಇರ ಅಂತ ಹೇಳಿ ಹರಗೋಲ ಹತ್ತಿದ್ರು.


                                 ಇತ್ತ ಹೇಳಿದವರ ಮನಿ ಕೆಲಸಾ ಮಾಡಕೊಂತ, ಮನಸ್ಸನ್ಯಾಗ ಮಂತ್ರಾ ಹೆಳಕೊಂತ ಇರತಿದ್ದಾ. ಹಿಂಗ ಹಿಂಗ ಅನ್ನೋದರಲ್ಲಿ ಎಂಟ ವರ್ಷ ಆಗಿತ್ತು. ಭರಮನ ತಾಯಿ ಮಣ್ಣ ಒಳಗ ಮಣ್ಣ ಆಗಿ ಹೊಗಿದ್ಲು. ಎಲ್ಲಾ ಮೊದಲಿನ ಹಂಗ ಜೀವನ ನಡದಿತ್ತು.


                               ಗುಡಸಲದಾಗ ಇದ್ದ ಭರಮಗ ಯಾರೊ ಬಂದ ಹೇಳಿದ್ರ, ಭರಮಾ ನಿನ್ನ ಸ್ವಾಮ್ಯಾರ ಬಂದಾರ, ಅರಳಿಕಟ್ಟಿ ಮ್ಯಾಲ ನದಿ ದಾಟಾಕ ಹರಗೋಲ ಕಾಯಕೊಂತ ಕೂಂತಾರ. ಇದನ್ನ ಕೇಳಿದ್ದ ತಡಾ ಸತ್ಯೋ ಇದ್ಯೋ ಅಂತ ಓಡಕೊಂತ ಬಂದಾ, ಆಗಲೇ ಹರಗೋಲ ಸ್ವಾಮಿಗಳನ್ನ ಹತ್ತಿಸಿಕೊಂಡ ನಡುನದಿಗ ಬಂದಿತ್ತ. ಸ್ವಾಮ್ಯಾರ... ಸ್ವಾಮ್ಯಾರ ಅನಕೊಂತ *ನದಿ ಮ್ಯಾಲ ಓಡಕೊಂತ ಹೊರಟಾ.* ಎರಡೂ ದಂಡಿ ಮ್ಯಾಲ ಇದ್ದ ಜನಾ ಇದನ್ನ ದಂಗ ಬಡದವರಂಗ ನೊಡಕೊಂತ ನಿಂತಿದ್ರ... ಭರಮಾ ಅಂದಾ, ನನ್ನಿಂದ ಎನ ತಪ್ಪಾಗೆದೆನ ಸ್ವಾಮ್ಯಾರ ಅನಕೊಂತ ನದಿ ನಡು ನೀರ ಮ್ಯಾಲ ಹೊರಟ ಹರಗೋಲ ಬಾಜು ಹೊಗಿ ನಿಂತಾ. ಸ್ವಾಮ್ಯಾರ ಸರಕನ ಅವನ ಕೈ ಹಿಡದ ಒಳಗ ಎಳಕೊಂಡ್ರು. ಭರಮಾ ಸಾಧಿಸಿಬಿಟ್ಟಿದ್ದಾ. ಅಲ್ಲೆ ಸ್ವಾಮಿಗಳು ಭರಮನ ಕಾಲ ಹಿಡಕೊಂಡಿದ್ರು. ಇದನ್ನೂ ಜನಾ ನೋಡತಿದ್ದರು. ತಪ್ಪಿನ ಅರಿವಾಗಿತ್ತು. ಮುಗ್ದ ಮನಸ್ಸನ ಶ್ರಧ್ದೆ ಸಾಧಿಸಲಾರದ್ದನ್ನು ಸಾಧಿಸಿತ್ತು. ಭರಮ ಅಗಾಧವಾಗಿ ಬೆಳೆದು ನಿಂತಿದ್ದಾ. ಸ್ವಾಮಿಗಳು ಕ್ಷುಬ್ದರಾಗಿದ್ದರು  ಅದೇ ನದಿಯ ನೀರು ಹಾಗೆ ಹರಿಯುತ್ತಲೇ ಇತ್ತು.


                                   ಭರಮ ನೀರ ಮೇಲೆ ನಡೆಯುವುದನ್ನು ಎಂದೂ ಬಯಸಿದವನಲ್ಲ. ಆದರೂ ಅದನ್ನು ಅವನು ಸಾಧಿಸಿದ್ದ. ಇದರ ಜೊತೆಗೆ ಮತ್ತೆನನ್ನು ಅರಗಿಸಿ ಕೊಂಡಿದ್ದನೋ. ಹಾಗಾದರೆ ನಿರಪೇಕ್ಷಿತ ಶ್ರದ್ಧೆಯಿಂದ ಮಾಡಿದ ಕಾಯಕ ಪಕ್ವವಾಗುವದೆ. ಭಗವದ್ಗೀತೆಯ ಜೀವನ ಉದ್ದಕ್ಕೂ ಓದಿ ತಿಳಿದುಕೊಳ್ಳುವದರಲ್ಲಿಯೇ ಹೊಯಿತೆ ಈ ಜನ್ಮ?  ಅರಿವೇ ಗುರು'ವಾದರೆ, ಶ್ರದ್ಧೆ ಬ್ರಹ್ಮ ಜ್ಞಾನವೇ....


ಈ ಯಕ್ಷ ಪ್ರಶ್ನೆಯನ್ನು ತಿಳಿಯುವ ಒಂದು ಸಣ್ಣ ಪ್ರಯತ್ನ.

ನಮಸ್ಕಾರ...


- ನಾ ಶ್ರೀ ಹೆಬ್ಳೀಕರ್

ಅಗಸ್ಟ ೫ - ಲಾಕಡೌನ ವರ್ಷ.

Comments

  1. ಉತ್ತರ ಕರ್ನಾಟಕದ ಭಾಷೆ, ಕತೆ ಹೇಳುವ ಶೈಲಿ ಸೊಗಸಾಗಿದೆ.

    ReplyDelete
  2. ನಾಶ್ರಿಯವರೇ ಭಾಷೆಯ ಸೊಗಡು, ಊರಿನ ಸೊಗಡು ಮತ್ತು ತಾವು ಬರೆದಿರುವ ಶೈಲಿ ಮೆಚ್ಚುಗೆಯಾಯಿತು.

    ReplyDelete
  3. ತುಂಬಾ ಚೆನ್ನಾಗಿ ಬರೆದಿರುವೆ .ಬರೆಯುತ್ತ ಸಾಗಲಿ ಬರವಣಿಗೆ.

    ReplyDelete
  4. Beautiful narration. Language is highlight in this article. Very nice.

    ReplyDelete
  5. ಧನ್ಯವಾದಗಳು...🙂

    ReplyDelete

Post a Comment