ಗಲಾ ಮತ್ತು ಹಲ್ಲಿ ಉಲಾ

ಗಲಾ ಮತ್ತು ಹಲ್ಲಿ ಉಲಾ 


(ಆಸ್ಟ್ರೇಲಿಯಾದ ನೂಂಗಾಬುರಾ ಜನರ ಜಾನಪದ ಕತೆ)
ಸಿಡ್ನಿ  ಶ್ರೀನಿವಾಸ್

 

ಬಿಸಿಲಲ್ಲಿ ಸದಾ ಕಾಲ ಮಲಗಿದ್ದ ಹಲ್ಲಿ ಉಲಾಗೆ (Oolah) ಬೇಸರವಾಗಿತ್ತು ಮತ್ತು ಹಾಗೇ ಸುಸ್ತಾಗಿತ್ತು. ಎದ್ದು ಏನಾದರೂ ಆಟವಾಡೋಣ ಎಂದುಕೊಂಡ. ತನ್ನ ಬೂಮೆರಾಂಗುಗಳನ್ನು (Boomerang ) ತೆಗೆದುಕೊಂಡು ಒಂದೆಡೆ ನಿಂತು ಎಸೆಯಲಾರಂಭಿಸಿದ. ಇವನು ಹೀಗೆ ತನ್ನ ಕ್ರೀಡೆಯಲ್ಲಿ ತೊಡಗಿದ್ದನ್ನು ಅಲ್ಲಿಯೇ ಇದ್ದ ಒಂದು ಗಲಾ (Galah, Cockatoo) ಮೆಚ್ಚಿ ಅಲ್ಲಿಯೇ ನಿಂತು ನೋಡುತ್ತಿದ್ದಳು. ಬೂಮೆರಾಂಗುಗಳು ಉಲಾನ ಬಳಿಗೇ ಹಿಂತಿರುಗಿ ಬರುತ್ತಿದ್ದವು. ಅವನು ಬಳಸುತ್ತಿದ್ದದ್ದು ಬುಬೆರಾ (Bubberah ) ಜಾತಿಯವು ಆಗಿದ್ದವು.  ಅವು ಗಾತ್ರದಲ್ಲಿ ಚಿಕ್ಕವಾಗಿದ್ದು, ಹೆಚ್ಚು ಡೊಂಕಾಗಿದ್ದವು. ಸದಾ ಅವನಲ್ಲಿಗೇ ವಾಪಸ್ ಬರುತ್ತಿದ್ದವು. ಎಲ್ಲಾ ಬೂಮೆರಾಂಗುಗಳೂ ಹೀಗೆ ಹಿಂತಿರುಗಿ ಬರುವುದಿಲ್ಲ.

ಪಕ್ಕದಲ್ಲಿ ಗಲಾ ತನ್ನ ಪ್ರದರ್ಶನವನ್ನು ನೋಡುತ್ತಿದುದನ್ನು ಕಂಡು ಉಲಾಗೆ ಮತ್ತಷ್ತು ಉತ್ಸಾಹ ಮತ್ತು ಜಂಭ ಬಂದವು. ಇರಲಿ ಎಂದು ಮುಂದಿನ ಬುಬೇರಾಗೆ ಮತ್ತಷ್ಟು ತಿರುವನ್ನು ಕೊಟ್ಟು, ತನ್ನ ಬಲವನ್ನೆಲ್ಲಾ ಬಿಟ್ಟು ಎಸೆದ. ಗಾಳಿಯಲ್ಲಿ ಬುಸುಗುಟ್ಟುತ್ತಾ ಅದು ಹಿಂತಿರುಗುವಾಗ ಗಲಾಳ ಬಳಿ ಬಂತು. ಬಂದದ್ದೇ ಅವಳ ತಲೆಯ ಮೇಲಿದ್ದ ಗರಿಗಳನ್ನು ಕತ್ತರಿಸಿ, ಅವಳ ತಲೆಯ ಮೇಲಿನ ಚರ್ಮವನ್ನು ತರಿದು ಹಾಕಿತು. ದೊಡ್ದ ಚೀತ್ಕಾರ ಹಾಕುತ್ತಾ ಗಲಾ ಒದ್ದಾಡುತ್ತಾ ಓಡಲಾರಂಭಿಸಿದಳು. ಹುಚ್ಚು ಹಕ್ಕಿಯಂತೆ ಪ್ರತಿ ನಿಮಿಷಕ್ಕೂ ನೆಲಕ್ಕೆ ತನ್ನ ತಲೆಯನ್ನು ಹೊಡೆದುಕೊಳ್ಳುತ್ತಿದ್ದಳು.   ಇದನ್ನು ನೋಡಿದ ಉಲಾಗೆ ವಿಪರೀತ ಗಾಬರಿಯಾಗಿ ಅವನು ಅಲ್ಲಿಂದ ಓಡಿ ಒಂದು ಬಿಂಡಿ (Bindeah)ಯ ಪೊದೆಯೊಂದರಲ್ಲಿ ಅವಿತುಕೊಂಡ. ಅವನನ್ನು ನೋಡಿದ ಗಲಾ  ಮುಂಚಿನ ಹಾಗೆಯೇ ಕಿರುಚಾಡುತ್ತಾ ಅವನನ್ನು ಹಿಂಬಾಲಿಸಿದಳು. ಪೊದೆಯಲ್ಲಿ ಅವನು ನೋಡಿದ ಕೂಡಲೇ ಅಲ್ಲಿಗೆ ಧಾವಿಸಿ ತನ್ನ ಕೊಕ್ಕಿನಿಂದ ಅವನನ್ನು ಹಿಡಿದು ಹೊರಗೆಳೆದಳು. ಆಗ ಅಲ್ಲಿದ್ದ ಮುಳ್ಳುಗಳೆಲ್ಲಾ ಉಲಾನ ಮೈಯ್ಯಿಗೆ ಚುಚ್ಚಿಕೊಂಡವು. ಅವನ ಚರ್ಮದಲ್ಲಿ ಅಪಾರ ತೂತುಗಳಾದವು. ಇದು ಸಾಲದು ಎಂಬಂತೆ ನಂತರ ಅವಳು ಅವನ ಮೈಯ್ಯ ಮೇಲೆಲ್ಲಾ ತನ್ನ ರಕ್ತ ಸಿಕಿತ ತಲೆಯನ್ನು ಸವರಿದಳು.   ನಂತರ ನುಡಿದಳು,


“ ನಿನ್ನ ಮೈಯ್ಯ ಮೇಲೆಲ್ಲಾ ಬಿಂಡಿ ಮುಳ್ಳು ಚುಚ್ಚಿರಲಿ ಮತ್ತು ನನ್ನ ರಕ್ತದ ಕಲೆ ಕೂಡ ಅಲ್ಲಿರಲಿ”

ಮುಳ್ಳು ಚುಚ್ಚಿದ ಗಾಯವನ್ನು ತಡೆಯಲಾರದೇ ಗೋಳಿಡುತ್ತಾ ಉಲಾ ಹೇಳಿದ

“ನಾನು ಕೆಂಪು ಮುಳ್ಳು ಹಲ್ಲಿಯಾಗಿರುವವರೆಗೂ ನೀನು ಬೋಡುತಲೆಯ ಹಕ್ಕಿಯಾಗಿರುತ್ತೀಯ.”

ಇಂದಿಗೂ ಗಲಾಳ ತಲೆಯ ಮೇಲೆ ಶಿಖರದ ಕೆಳಗೆ ನೀವು ಉಲಾ ಮಾಡಿದ ಒಂದು ಬೋಡನ್ನು ನೋಡಬಹುದು. ಗಲಾ ಇರುವ ಪ್ರದೇಶದಲ್ಲಿ ಹಲ್ಲಿಗಳು ಕೆಂಪಾಗಿರುತ್ತವೆ ಮತ್ತು ಬಿಂಡಿ ತರಹ ಮುಳ್ಳು ದೇಹವನ್ನು ಹೊಂದಿರುತ್ತವೆ. 

(ಆಧಾರ -  K, Langloh Parker, Australian Legendary Tales, David Nutt, 270-271 Strand, Melbourne, Melville, Mullen & Slade, 1896 .)


Comments