ಆಹಾರವೇ ಔಷಧಿ - ನಿಂಬೆಹಣ್ಣು

ಆಹಾರವೇ ಔಷಧಿ ನಿಂಬೆಹಣ್ಣು

Article by Raji Jayadev
Accredited Practicing Dietitian
Sydney
 

ಹಲವಾರು ಮಾರಕ ರೋಗಗಳಿಗೆ ಉತ್ತಮ ಜೀವನಶೈಲಿಯೇ ಅತಿ ಪ್ರಭಾವಶಾಲಿಯಾದ ಔಷಧಿ ಎಂದು ನಮಗೆಲ್ಲ ತಿಳಿದಿದೆ. ಇದರಲ್ಲಿ ಅತಿ ಮುಖ್ಯವಾದದ್ದು ಆರೋಗ್ಯಕರವಾದ ಆಹಾರ ಸೇವನೆ. ಉತ್ತಮ ಆಹಾರ ಸೇವನೆಯಿಂದ ಹಲವಾರು ಮಾರಕ ರೋಗಗಳನ್ನು ನಿಯಂತ್ರಣದಲ್ಲಿಡಬಹುದೆಂದು ವೈಜ್ಞಾನಿಕ ಅಧ್ಯಯನಗಳಿಂದ ತಿಳಿದುಬಂದಿದೆ. ಈ ನಿಟ್ಟಿನಲ್ಲಿ ನಿಂಬೆಹಣ್ಣನ್ನು ಔಷಧಿಯಾಗಿ ಬಳಸುವ ಬಗೆಯನ್ನು ತಿಳಿಯೋಣ.

 

ನಿಮಗೆ ತಿಳಿದಂತೆ ನಿಂಬೆಹಣ್ಣು ಅತಿ ಹೆಚ್ಚು ವಿಟಮಿನ್ C ಯನ್ನು ಹೊಂದಿದೆ. ನೂರಾರು ವರ್ಷಗಳ ಹಿಂದೆ ನಾವಿಕರಿಗೆ ದುಃಸ್ವಪ್ನವಾಗಿದ್ದ ಸ್ಕರ್ವಿ ರೋಗ ನಿವಾರಣೆಗೆ ನಿಂಬೆಹಣ್ಣು, ಕಿತ್ತಳೆಹಣ್ಣುಗಳನ್ನು ಬಳಸಿರುವುದು ಒಂದು ಚರಿತ್ರೆಯನ್ನೇ ಸೃಷ್ಟಿಸಿದೆ. ವಿಟಮಿನ್ C, ಒಂದು ಅತ್ಯಂತ ಪ್ರಬಲವಾದ ಆಂಟಿಆಕ್ಸಿಡೆಂಟ್ (antioxident). ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ (immune system ) ಸಬಲವಾಗಿರುವಂತೆ ನೋಡಿಕೊಳ್ಳುತ್ತದೆ. ಹೃದಯರೋಗಗಳನ್ನು ತಡೆಗಟ್ಟಲು ಸಹಾಯಮಾಡುತ್ತದೆ.  ಪ್ರತಿದಿನ ನಿಂಬೆರಸ ಕುಡಿಯುವದರಿಂದ ನಮಗೆ ದೊರೆಯುವ ಪ್ರಯೋಜನ ಹಲವಾರು.

 

ಒಂದು ಲೋಟ ನೀರಿಗೆ 1-2 ಟೇಬಲ್ ಸ್ಪೂನ್ ನಿಂಬೆ ರಸ ಸೇರಿಸಿ. ಪ್ರತಿದಿನ ಬೆಳಗಿನ ತಿಂಡಿ ತಿನ್ನುವಾಗ, ಮಧ್ಯಾಹ್ನ ಮತ್ತು ಸಂಜೆಯ ಊಟ ಮಾಡುವಾಗ ಕುಡಿಯಿರಿ.  ಇದು:

       ನಮ್ಮ ಆಹಾರದ ಗ್ಲೈಸಿಮಿಕ್ ಇಂಡೆಕ್ಸ್ (glycemic index) ಅನ್ನು ಕಡಿಮೆಗೊಳಿಸುತ್ತದೆ; ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹೆಚ್ಚು ಏರದಂತೆ ತಡೆಹಿಡಿಯುತ್ತದೆ ಎನ್ನುವುದಕ್ಕೆ ಸಾಕಷ್ಟು ವೈಜ್ಞಾನಿಕ ಪುರಾವೆಗಳಿವೆ. ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿಡಲು ಡಯಾಬಿಟಿಸ್ ರೋಗಿಗಳಿಗೆ ಇದೊಂದು ಸುಲಭ   ವಿಧಾನ.

       ನಾವು ಸೇವಿಸುವ ಆಹಾರದಲ್ಲಿರುವ ಕಬ್ಬಿಣದ ಅಂಶವನ್ನು ಹೀರಿಕೊಳ್ಳಲು ನಿಂಬೆರಸ ಸಹಕರಿಸುತ್ತದೆ. ಇದು ಸಸ್ಯಾಹಾರಿಗಳಿಗೆ ಬಹು ಮುಖ್ಯ. ಏಕೆಂದರೆ ಮಾಂಸಾಹಾರಕ್ಕೆ ಹೋಲಿಸಿದರೆ ಸಸ್ಯಾಹಾರದಲ್ಲಿರುವ ಕಬ್ಬಿಣದ ಅಂಶವನ್ನು ನಮ್ಮ ದೇಹ ಸಮರ್ಪಕವಾಗಿ ಹೀರಿಕೊಳ್ಳುವುದಿಲ್ಲ.

ಪ್ರತಿದಿನ ಒಂದೆರಡು ಚಮಚೆ ನಿಂಬೆರಸ ಸೇವನೆ:

       ಆಹಾರದ ಪೋಷಕಾಂಶಗಳನ್ನು ಹೆಚ್ಚಿಸುತ್ತದೆ.

       ಮೂತ್ರಪಿಂಡದಲ್ಲಿ ಕಲ್ಲು ಉಂಟಾಗುವುದನ್ನುತಡೆಹಿಡಿಯುತ್ತದೆ.

       ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಹಿಡಿಯುತ್ತದೆ.

ಅನೇಕ ಪೋಷಕಾಂಶಗಳ ಆಗರ ನಿಂಬೆಹಣ್ಣು.  ಬೆಲೆ ಅಗ್ಗ, ಉಪಯೋಗಿಸುವುದು ಸುಲಭ, ಪ್ರಯೋಜನ ಅಧಿಕ. 

ಆಹಾರವೇ ನಿನಗೆ ಔಷಧಿಯಾಗಲಿ, ಔಷಧಿಯೇ ನಿನ್ನ ಆಹಾರವಾಗಲಿ - ಹಿಪೋಕ್ರಟಿಸ್* (c. 460-370BCE )  


Comments