ಮೊಸಳೆಯ ಅವಳಿ ದೇವಾಲಯಗಳು -1

ಮೊಸಳೆಯ ಅವಳಿ ದೇವಾಲಯಗಳು -1

ಲೇಖನ - ಮೈಸೂರು ಆರ್ ಶ್ರೀನಿವಾಸ ಪುಟ್ಟಿ

ಹಾಸನ ಜಿಲ್ಲೆಯ ಮೊಸಳೆ ಗ್ರಾಮವು ಜಿಲ್ಲಾಕೇಂದ್ರ ಹಾಸನದಿಂದ ಹೊಳೆ ನರಸೀಪುರ ಮಾರ್ಗದಲ್ಲಿ, ಸುಮಾರು ೨೦ ಕಿ.ಮೀ ದೂರದಲ್ಲಿದೆ. ಈ ಗ್ರಾಮದಲ್ಲಿ ಎರಡು ಹೊಯ್ಸಳ ಶೈಲಿಯ ದೇವಾಲಯಗಳಿದ್ದು, ಒಂದರ ಪಕ್ಕದಲ್ಲೊಂದು ಕಂಡುಬರುತ್ತದೆ. ಈ ದೇವಾಲಯಗಳಿಗೆ ಮುಖ ಮಾಡಿ ನಿಂತಿರೆ ಎಡಗಡೆಗೆ ಕಾಣುವುದು ನಾಗೇಶ್ವರ ದೇವಾಲಯ ಮತ್ತು ಬಲಗಡೆಯದು‌ ಚನ್ನಕೇಶವ ದೇವಾಲಯ. ಈ ದೇವಾಲಯಗಳು ಪ್ರತ್ಯೇಕವಾಗಿದ್ದರೂ ಒಂದೇ ರೀತಿಯ ತಲವಿನ್ಶಾಸ, ಗರ್ಭಗುಡಿ, ಶುಕನಾಸಿ, ನವರಂಗ ಮತ್ತು ಶಿಖರಗಳನ್ನು ಹೊಂದಿವೆ.

ಎರಡು ದೇವಾಲಯಗಳೂ ಪೂರ್ವಾಭಿಮುಖವಾಗಿವೆ ಮತ್ತು ಬಳಪದ ಕಲ್ಲಿನಿಂದ ನಿರ್ಮಿತವಾಗಿವೆ. ಈ ಕಾರಣಗಳಿಂದಾಗಿ ಈ ದೇವಾಲಯಗಳನ್ನು ಅವಳಿ ದೇವಾಲಯಗಳು ಎಂದು ಹೇಳಬಹುದು.


(ಚಿತ್ರ ಕೃಪೆ: http://www.wonderjourney.org/2012/12/hoysala-temples-of-mosale-and-anekere.html)

ಸರ್ವಾಲಂಕೃತವಾದ ಈ ದೇವಾಲಯಗಳ ನಿರ್ಮಾಣಕ್ಕೆ ಸಂಬಂಧಿಸಿದ ಶಾಸನಗಳು ದೊರೆತಿಲ್ಲವಾಗಿ, ಇವುಗಳ ನಿರ್ಮಾಣ ಯಾವಾಗ ಆಯಿತೆಂದು ನಿಖರವಾಗಿ ತೀರ್ಮಾನಿಸಲು ಸಾಧ್ಯವಾಗಿಲ್ಲ. ಆದರೆ ಈ ದೇವಾಲಯಗಳಲ್ಲಿನ ವಿಗ್ರಹಗಳು ಮತ್ತು ವಾಸ್ತು ವಿನ್ಯಾಸವನ್ನು ಗಮನಿಸಿ, ತಜ್ಞರುಗಳು ಈ ದೇವಾಲಯಗಳ ನಿರ್ಮಾಣ ಸುಮಾರು ೧೨೫೦ ರ ಆಸು-ಪಾಸಿನಲ್ಲಿ ಆಗಿರಬಹುದೆಂದು ಊಹಿಸುತ್ತಾರೆ. ಅಲ್ಲದೇ ಈ ಅವಳಿ ದೇವಾಲಯಗಳು ಬಹುಶಃ ನಾಗಣ್ಣ ದಂಡನಾಯಕ ನೆಂಬ ಶಿವ ಮತ್ತು ವಿಷ್ಣು ಭಕ್ತನಿಂದ ನಿರ್ಮಾಣ ವಾಗಿರಬಹುದೆಂದು ಸಹಾ‌ ಊಹಿಸುತ್ತಾರೆ.

 

ನಾಗೇಶ್ವರ ದೇವಾಲಯ

ಎತ್ತರದ ಜಗತಿಯೊಂದರ ಮೇಲೆ ಈ ದೇವಾಲಯವು ನಿರ್ಮಾಣವಾಗಿದ್ದು, ಈಗ  ಜಗತಿಯು ನೆಲದಲ್ಲಿ ಹೂತು ಹೋಗಿದೆ. ಆದರೆ ಜಗತಿಯ ಕುರುಹುಗಳನ್ನು ದೇವಾಲಯದ‌ ಸುತ್ತಲೂ ಕಾಣಬಹುದು. ಈ ದೇವಾಲಯವನ್ನು ಅಭ್ಯಸಿಸುವ ದೃಷ್ಟಿಯಿಂದ, ಇದನ್ನು ಈ ಕೆಳಕಂಡ ಏಳು ಭಾಗಗಳಾಗಿ ವಿಂಗಡಿಸಬಹುದು :

ಅಧಿಷ್ಠಾನ                                          ನವರಂಗ

ಹೊರಗೋಡೆ                                      ಶುಕನಾಸಿ

ಶಿಖರ ಅಥವಾ ವಿಮಾನ                      ಗರ್ಭಗುಡಿ.

ಮುಖ ಮಂಟಪ



೧. ಅಧಿಷ್ಠಾನ   

ಈ ದೇವಾಲಯದ ಅಧಿಷ್ಠಾನವು ನಾಲ್ಕೂವರೆ ಅಡಿ ಎತ್ತರವಿದ್ದು, ಐದು ಪಟ್ಟಿಕೆ ಗಳನ್ನು ಹೊಂದಿದೆಯಾದರೂ, ಅದನ್ನು ಅಲಂಕರಿಸಿಲ್ಲವಾಗಿ  ಅಧಿಷ್ಠಾನದ ಮೇಲೆ ವಿಶೇಷವಾದ ಗಮನ ಹರಿಸುವ ಅಗತ್ಯವಿಲ್ಲ .

 

೨.  ಹೊರಗೋಡೆ

ಅಧಿಷ್ಠಾನದ ಮೇಲ್ಭಾಗದ ಗೋಡೆಗಳು ಅನೇಕ ವಿಗ್ರಹಗಳಿಂದ ಅಲಂಕೃತ ವಾಗಿದೆ. ನವರಂಗದ ಗೋಡೆಯ ಮಧ್ಯದಲ್ಲಿ ಗೂಡುಗಳಿದ್ದು ಈಗ ಅವು ಖಾಲಿಯಾಗಿವೆ. ಈ ಗೂಡುಗಳ ಮೇಲೆ ನಾಲ್ಕು ಚಾವಣಿಗಳ ಸುಂದರವಾದ ಶಿಖರವಿದೆ.

ದೇವಾಲಯದ ಗೋಡೆಯನ್ನು ಫಲಕಗಳಾಗಿ ವಿಂಗಡಿಸಿ, ಎರಡು ಅಡಿ ಎತ್ತರದ ಅತ್ಯಂತ ಅಪರೂಪದ ವಿಗ್ರಹಗಳನ್ನು ಸುಂದರವಾದ ಹಾಗೂ ‌ವಿವಿಧ ಬಗೆಯ ತೋರಣಗಳ ನಡುವೆ ಇರಿಸಲಾಗಿದೆ. ಇಲ್ಲಿನ ವಿಗ್ರಹಗಳು ಶೈವ  ಹಾಗೂ ಶಾಕ್ತ ಗುಂಪಿಗೆ ಸೇರಿದವಾಗಿದೆ.   ವಿಗ್ರಹಗಳ ಕೆಳಗೆ ಅವುಗಳ ಹೆಸರುಗಳನ್ನು ಸೂಚಿಸಲಾಗಿರುವುದರಿಂದ, ಈ ವಿಗ್ರಹಗಳ ಲಕ್ಷಣಗಳನ್ನು ಅರಿಯಲು ಅನುಕೂಲವಾಗಿದೆ. ದುರ್ದೈವವೆಂದರೆ ಕೆಲವು ವಿಗ್ರಹಗಳು ಭಗ್ನವಾಗಿದೆ.

ಮುಖ ಮಂಟಪದ ದಕ್ಷಿಣದಿಂದ ಪ್ರದಕ್ಷಿಣಾಕಾರವಾಗಿ ಮುಂದುವರೆದರೆ ಕಾಣಬಹುದಾದ ವಿಗ್ರಹಗಳು ಇಂತಿವೆ:

 

ಪೂರ್ವ ಮುಖ

೧. ಆಸೀನ ಅಷ್ಟಭುಜದೇವಿ, ಕೆಳಗೆ ಸರ್ಪ

೨. ಸ್ಥಾನಕ ದುರ್ಗಾ

೩. ಸ್ಥಾನಕ ಶಿವ( ಎರಡು ಕೈಗಳು ಮುರಿದಿದೆ).

ವಿಗ್ರಹದ ಕೆಳಗೆ ನಂನ್ದ ಎಂಬ ಹೆಸರನ್ನು ಕಾಣಬಹುದು

 

ದಕ್ಷಿಣ ಮುಖ

೧. ಚತುರ್ಭುಜ ಸ್ಥಾನಕ ಶಿವ. ಶಿವನ ಪೀಠದ ಮೇಲೆ ದಕ್ಷಿಣದೇಶ ಪಾಳಕ ಎಂಬ ಒಕ್ಕಣೆಯನ್ನು ಕಾಣಬಹುದು 

೨. ಮಹಿಷನೊಂದಿಗೆ ಅಷ್ಟಭುಜ ಆಸೀನದೇವಿ

೩. ಭಗ್ನವಾಗಿರುವ ನಾಲ್ಕು ಶಾಕ್ತ ದೇವತೆಗಳು

೪. ದಕ್ಷಿಣದ ಗೂಡಿಗೆ ಆಸರೆಯಾಗಿ ಸಳ ವಿಗ್ರಹಗಳು

೫. ಶ್ರೀಯಾದೇವಿ* ಮತ್ತು ಗಜ

೬. ಲಕ್ಷ್ಮೀ ದೇವಿ*, ಗರುಡ

೭. ಪರಿಚಾರಿಕೆಯರು

೮. ನವಿಲಿನೊಂದಿಗೆ ಆಸೀನ ಕೌಮಾರಿ

೯. ಸ್ಥಾನಕ ಗೌರಿ*

೧೦. ನಂದಿಯೊಂದಿಗೆ ಆಸೀನ ಮಾಹೇಶ್ವರೀ*

೧೧. ಆಸೀನ ದೇವಿ

೧೨. ಸ್ಥಾನಕ ಮನೋಹರಿ*

೧೩. ಆಸೀನ ಅಷ್ಟಭುಜ ದುರ್ಗಾ - ಬಲದಲ್ಲಿ ಕಳಶ, ಎಡದಲ್ಲಿ ಸಿಂಹ

೧೪. ಭಗ್ನವಾಗಿರುವ ವೈಷ್ಣವೀ

೧೫. ಅಂಜಲಿಹಸ್ತನಾದ ಪುರುಷ

೧೬. ಬಲದಲ್ಲಿ ಭಕ್ತ ಮತ್ತು ಎಡದಲ್ಲಿ ಸಿಂಹದ ನಡುವೆ ದುರ್ಗೆ

೧೭. ಸ್ಥಾನಕ ದುರ್ಗೆ

೧೮. ವಜ್ರಭೂತನ ರೂಪದಲ್ಲಿ ನಿಂತಿರುವ ಶಿವ*

೧೯. ಮೂರು ಸ್ತ್ರೀ ವಿಗ್ರಹಗಳು

೨೦. ದಾಡಿರಹಿತ  ( beardless ) ತ್ರಿಮುಖ ಬ್ರಹ್ಮ*

೨೧. ಸ್ಥಾನಕ ತ್ರಿಮುಖ ಸರಸ್ವತೀ

೨೨. ಚಾಮರಧಾರಿಣಿ

೨೩. ಸ್ಥಾನಕ ಶಾರದಾ

೨೪. ಭಗ್ನವಾಗಿರುವ  ಚಿತ್ರಸೇನ*.



ಪಶ್ಚಿಮ ಮುಖ

೧. ಸ್ಥಾನಕ ಮಹಾಕಣ್ಠ*

೨. ಸ್ಥಾನಕ ದೇವಿ

೩. ಪರಿಚಾರಿಕೆ

೪. ಆಸೀನ ದುರ್ಗೆ

೫. ಪದ್ಮಾಸನದಲ್ಲಿ ಕುಳಿತಿರುವ ದಶಭುಜ, ಚತುರ್ಮುಖ ಸದಾಶಿವ ವಿಗ್ರಹ* (ನಾಲ್ಕು ಮುಖಗಳಲ್ಲಿ ಒಂದು ಕಿರೀಟದ ಬಳಿಯೂ ಮತ್ತು ಉಳಿದವು ಸಾಲಾಗಿಯೂ ಇವೆ )

೬. ಆಸೀನ ಲಕ್ಷ್ಮೀ, ಗಜ

೭. ಪರಿಚಾರಿಕೆ, ಖಾಲಿ, ಸ್ಥಾನಕ ಗಂಭೀರ ಶಿವ.



ಉತ್ತರ ಮುಖ

೧. ಹರಿಹರ

೨. ದೇವಿ

೩. ಸುಖಾಸನದಲ್ಲಿ ಕುಳಿತಿರುವ ನಾರಾಯಣ*, ಶ್ರೀಯಾದೇವಿ, ಚಾಮರಧಾರಿಣಿ, ಭೂಮಿದೇವಿ (ಭೂದೇವಿ), ಚಾಮರಧಾರಿಣಿ

೪. ಸ್ಥಾನಕ ವ್ಯೆಷ್ಣವೀ

೫. ಚಿತ್ರಧರನ ರೂಪದಲ್ಲಿ ನಿಂತಿರುವ ಶಿವ*

೬. ದೇವಿ

೭. ಆಸೀನ ಪಾರ್ವತೀ

೮. ದೇವಿ

೯. ಅಂಜಲಿ ಹಸ್ತನಾಗಿ ಮೊಳಕಾಲೂರಿ ಕುಳಿತಿರುವ ಗರುಡ (Garuda kneeling with folded hands)


ಪಶ್ಚಿಮ ಮುಖ 

೧. ಸ್ಥಾನಕ ದುರ್ಗಾ

೨. ಷಡ್ಭುಜ ಆಸೀನ ಚಕ್ರೇಶ್ವರಿ

೩. ಸ್ಥಾನಕ ದುರ್ಗಾ

೪. ಆಸೀನ ಶಿವ

 

ಉತ್ತರ ಮುಖ

೧. ಮೂರು ಮುಖದ ಆಸೀನ ದೇವಿ

೨. ಆಸೀನ ದುರ್ಗಾ

೩. ಆಸೀನ ದೇವಿ

೪. ವೈಷ್ಣವೀ

೫. ಸ್ಥಾನಕ ಶಿವ

೬. ಗದಾಹಸ್ತನಾದ ಪರಿಚಾರಕ

೭. ಚಾಮರಧಾರಿಣಿ

೮. ಸಳ ವಿಗ್ರಹಗಳ ಆಸರೆಯನ್ನು ಹೊಂದಿದ ಉತ್ತರದ ಗೂಡು

೯. ಪರಿಚಾರಿಕೆ

೧೦. ಗದಾ ಮತ್ತು ಅಭಯಹಸ್ತನಾದ ಪರಿಚಾರಕ

೧೧. ದೇವಿ

೧೨. ವರಾಹಮುರ್ತಿ (ಭಗ್ನ)

೧೩. ಪದ್ಮಾಸನದಲ್ಲಿ ಕುಳಿತಿರುವ ದೇವಿ

೧೪. ಸ್ಥಾನಕ ದೇವಿ



ಪೂರ್ವ ಮುಖ 

೧. ಮಹಾಕಾಲನ ರೂಪದಲ್ಲಿ ಸ್ಥಾನಕ ಶಿವ*

೨. ಮೂರು ಭಗ್ನ ವಿಗ್ರಹಗಳು


ದಕ್ಷಿಣ ಮುಖದ ಹೊರಗೋಡೆಯ ಮೇಲ್ಭಾಗ

ಶ್ರೀಯಾದೇವಿಯ ಮೇಲೆ ಲತಾಪಟ್ಟಿಕೆ, ವಜ್ರಭೂತನ ಮೇಲೆ ನಾಗರ ಶೈಲಿಯ ಗೋಪುರ, ಸದಾಶಿವ ವಿಗ್ರಹಯ‌‌ ಮೇಲೆ ಎಂಟು ಅಂತಸ್ತಿನ ಶಿಖರ, ಚಿತ್ರಧರನ ಮೇಲೆ ನಾಗರ ಶೈಲಿಯ ಗೋಪುರಗಳನ್ನು ಕಾಣಬಹುದು. ಗೋಡೆಯ ಮೇಲ್ಚಾವಣಿಯ ಬೋದಿಗೆಯನ್ನು (Eaves) ಕಪಿಗಳ ವಿಗ್ರಹಗಳಿಂದ ಅಲಂಕರಿಸಲಾಗಿದೆ. ಕೈಪಿಡಿ ಗೋಡೆ (parapet) ಯ ಮೇಲೆ ನಾಲ್ಕು ಸಾಲುಗಳಲ್ಲಿ ಹಂಸ, ಮಕರ, ಸಿಂಹ, ನರ್ತಕಿಯರು ಮುಂತಾದ ವಿಗ್ರಹಗಳನ್ನು ಕಾಣಬಹುದು. ಆದರ ಮೇಲಿನ ಸಾಲಿನಲ್ಲಿ ಅಪರೂಪವಾದ ಶೈವ ಶಾಕ್ತ- ವೈಷ್ಣವ ವಿಗ್ರಹಗಳನ್ನು ಕಾಣಬಹುದು. ಇವುಗಳಲ್ಲಿ ತಾಂಡವೇಶ್ವರ, ಗಜಾಸುರ ಮರ್ದನ, ಗಣೇಶ ಮತ್ತು ಯೋಗಾನರಸಿಂಹರ ವಿಗ್ರಹಗಳನ್ನು ಗುರುತಿಸಬಹುದು.


೩ ಶಿಖರ ಅಥವಾ ವಿಮಾನ 

ದೇವಾಲಯದ ವಿಮಾನವು ಚತುರಸ್ರವಾದ ನಾಲ್ಕು ಪಟ್ಟಿಕೆಗಳನ್ನು  ಹೊಂದಿದ್ದು, ಅವುಗಳ ಮಧ್ಯದಲ್ಲಿ ಶೈವ ವಿಗ್ರಹಗಳಿವೆ. ಶಿಖರದ ಕಳಶವು ಸುಂದರವಾಗಿದೆ. ಶುಕನಾಸಿಯ ಮೇಲೆ ಚಾಚಿರುವ ಭಾಗದಲ್ಲಿ ಮೋಹಕವಾದ ಸಳ ನ ವಿಗ್ರಹವಿದೆ.‌ ಶಿಖರದ ಪೂರ್ವ ಮುಖದಲ್ಲಿ ತಾಂಡವೇಶ್ವರ ನನ್ನು ಕಾಣಬಹುದು.


೪ ಮುಖ ಮಂಟಪ

ದೇವಾಲಯದ ಮುಖ ಮಂಟಪ ಶಿಥಿಲವಾಗಿದೆ ಇದರ ಪೀಠದಲ್ಲಿ ಯೋಧರು, ಕೀರ್ತಿ ಮುಖ, ಲತೆಗಳನ್ನು ಕಾಣಬಹುದು.‌ ಬಾಗಿರುವ ಕಟಾಂಜನದ ಮೇಲೆ (on the slanting railings) ಗಾಯಕರು ಹಾಗೂ ನರ್ತಕರ ವಿಗ್ರಹಗಳಿವೆ. ಮುಖ ಮಂಟಪಕ್ಕೆ ಎರಡು ದುಂಡಾದ ಕಂಬಗಳಿಂದ್ದು ಮೇಲ್ಚಾವಣಿಯಲ್ಲಿ ಅಷ್ಟದಿಕ್ಪಾಲಕರು, ತಾಂಡವೇಶ್ವರ ಮತ್ತು ನರ್ತಕರ ಶಿಲ್ಪಗಳನ್ನು ಕಾಣಬಹುದು. ಮುಖ ಮಂಟಪದ ಇಕ್ಕೆಲಗಳಲ್ಲಿ ಕಲ್ಲಿನ ಜಗಲಿ ಇದೆ.

೫ ನವರಂಗ

ಮುಖ ಮಂಟಪವನ್ನು ದಾಟಿದ ನಂತರ ಕಾಣುವುದೇ ನವರಂಗ. ಇದರ ದ್ವಾರದ ಇಕ್ಕೆಲಗಳಲ್ಲಿ ದ್ವಾರಪಾಲಕರು, ಚಾಮರಧಾರಿಣಿಯರು ಮತ್ತು ‌ಲತಾ ಪಟ್ಟಿಕೆಯನ್ನು‌ ಕಾಣಬಹುದು. ೨೦ ಅಡಿ ಚೌಕದ ನವರಂಗವು ಒಂಬತ್ತು ಭುವನೇಶ್ವರಿಗಳನ್ನು ಹೋಂದಿದ್ದು, ಮಧ್ಯದ ಭುವನೇಶ್ವರಿಯಲ್ಲಿ‌ ಶೈವ ವಿಗ್ರಹಗಳು, ಗಾಯಕರು,‌ ನರ್ತಕರು, ಸಳ ಮತ್ತು ಕಮಲದಳದ ಶಿಲ್ಪಗಳಿವೆ.‌

ನವರಂಗದ ಪಶ್ಚಿಮ ಭಾಗದಲ್ಲಿ ಸುಂದರವಾದ ಆರು ಮಂಟಪಗಳಿದ್ದು ಅವುಗಳಲ್ಲಿ ಕ್ರಮವಾಗಿ ಸಪ್ತಮಾತೃಕೆಯರು ( ಎಡದಲ್ಲಿ ವೀಣಾಪಾಣಿ‌ ವೀರಭದ್ರ ಮತ್ತು ಬಲಭಾಗದಲ್ಲಿ ಗಣೇಶ).

ಆಸೀನ ಶಾರದಾ, ಗಣೇಶ, ಅತಿ ಸುಂದರವಾದ ಅಷ್ಟಭುಜ ಮಹಿಷಾಸುರ ಮರ್ದಿನಿ, ಲಿಂಗ ಮತ್ತು ಸ್ಥಾನಕ ಕೇಶವ ವಿಗ್ರಹಗಳಿವೆ. ನವರಂಗದ ಮಧ್ಯದಲ್ಲಿ ಸುಂದರವಾದ ನಂದಿ ಇದೆ.

 

೬ ಶುಕನಾಸಿ

ನಾಗೇಶ್ವರ ದೇವಾಲಯವು ಏಕಕೂಟ (Single celled) ದೇವಾಲಯವಾಗಿದ್ದು, ನವರಂಗದ ನಂತರದಲ್ಲಿ ಶುಕನಾಸಿ ಇದೆ.‌ ಇದರ ದ್ವಾರಗಳು ಜಾಲಂದ್ರ ( perforated wall screen ) ವನ್ನು‌ ಹೊಂದಿವೆ. ದ್ವಾರದ ಕೆಳಭಾಗದಲ್ಲಿ ರತಿ- ಮನ್ಮಥ ಮತ್ತು ಮೇಲ್ಭಾಗದಲ್ಲಿ ಉಮಾಮಹೇಶ್ವರಿಯ‌ ಶಿಲ್ಪಗಳಿವೆ.‌ ಮೇಲ್ಚಾವಣಿಯಲ್ಲಿ ಒಂಬತ್ತು ಪದ್ಮಗಳ  ನಡುವೆ ತಾಂಡವ ಗಣೇಶ ಇದೆ.‌

 

೭ ಗರ್ಭಗುಡಿ

ಶುಕನಾಸಿಯ ನಂತರದ ಕೋಣೆಯೇ ಗರ್ಭಗುಡಿ. ಇದರ ದ್ವಾರವು ಸುಂದರವಾಗಿ‌ ಕೆತ್ತಲ್ಪಟ್ಟಿದ್ದು ಮೇಲೆ ಗಜಲಕ್ಷ್ಮಿಯನ್ನು ಹೊಂದಿದೆ. ಒಳಗೆ ಚಪ್ಪಟೆ ತಲೆಯುಳ್ಳ ಲಿಂಗವಿದೆ.

*ಈ ವಿಗ್ರಹಗಳ ಕೆಳಗೆ ವಿಗ್ರಹಯ ಹೆಸರನ್ನು ಸೂಚಿಸಲಾಗಿದೆ.

To be continued on part 2....



Comments

  1. After reading this intresting article ಮೊಸಳೆ ಗ್ರಾಮ is our first priority to visit upon next visit to India. Thanks for very detailed information

    ReplyDelete

Post a Comment