ನಾನಿಲ್ಲಿ ಅಮೇರಿಕದಾಗ-ಜೀವ ಎಲ್ಲಾ ಅಲ್ಲಿ ಧಾರವಾಡದಾಗ..

ನಾನಿಲ್ಲಿ ಅಮೇರಿಕದಾಗ - ಜೀವ ಎಲ್ಲಾ ಅಲ್ಲಿ ಧಾರವಾಡದಾಗ..

 ಲೇಖನ - ನಾಶ್ರೀ ಹೆಬ್ಳೀಕರ್
 
ಏರಿಕೇರಿಗಳ ಊರು ನಮ್ಮೂರ್ರೀ

ಕಣ್ಣು ಹಾಯ್ಸಿದಷ್ಟೂ ದಿನ್ನೆ ಕೊಳ್ಳಾರಿ
ಧಾರಾಕಾರ ಮಳೆ ಕೆಸರಿಗೆ
ಕಮ್ಮಿ ಏನಿಲ್ರಿ....
ಮಲೆನಾಡಂಚಿನ ಬಯಲು ಸೀಮೇರಿ
ಒಂದಾನೊಂದ್ ಕಾಲ್ದಾಗ ಕೆರೆಗಳ ಊರಂತ್ರಿ..
ಆದರೀಗ ಮಳೆ ಬಂದ್ರ
ಊರೆಲ್ಲಾ ಕೆರೆಯಂತ್ರೀ.. 

ಎತ್ತಿನಗುಡ್ಡ ಕಾಲೇಜ್ದಿಂದ ಹುಬ್ಳೀ ಕಡೆ ಹಳೆಹಾಯ್ವೇ ಹಿಡ್ದ ಹೊರಟ್ರ ಎಡಗಡೆ ಏರಿ ಮಣ್ಣರಿ ಬಲಕ್ಕ್ ಕೆಂಪಮಣ್ಣರಿ.. 


ನವಲೂರು ಅಂಚಿಂದ ಶುರು ಆಗೇದ್ರಿ
ಪ್ರಕೃತಿ ಸೊಬಗನ್ಯಾಗ ನವಿಲಿಲ್ಲಿ ನಲಿತ್ತಿದ್ದುರೀ.. ಹಂಗ ಅದನ್ನ ನೋಡಿ ಮನಷ್ಯಾರು ಕುಣದಾಡತ್ತಿದ್ದರೀ..
ಈಗೂ ನೀವು ಇಲ್ಲಿಯ ಪ್ಯಾರಲ, ಕಲಮಿ ತಿಂದ್ರ ಬಾಯಿ ಚಪ್ಪರಸ್ತೀರಿ...

ದಿನ್ನೇಮ್ಯಾಲೆ ಕಾಣೋದೇ ನರಿಮಡ್ಡಿ, ಅಂದ್ರ ಈಗಿನ ವಿದ್ಯಾಗಿರಿ'ರೀ
ವಿದ್ಯಾಕಾಶಿಯಲಿ ಕಣ್ಣು ಹಾಯಿಸಿದಲ್ಲೆಲ್ಲ ವಿದ್ಯಾರ್ಥಿಗಳೇರಿ. ಹಿಂಗಾಗೆ ಹೆಣ್ಣು ಮತ್ತ ಗಂಡ ಹುಡುಗುರದು ಪಿಜಿ'ಗಳ ತುಂಬ್ಯಾವರಿ...

ವಿಮಾನ ನಿಲ್ದಾಣದಿಂದ್ ನುಗ್ಗಿ ಬಂದ್ರ ನುಗ್ಗಿಕೇರಿ'ರಿ
ಹರಕೆ ಈಡೇರಿಸೋ ಬಲಭೀಮ ಹನುಮಪ್ಪ ಇಲ್ಲೇ
ನೆಲೆನಿಂತಾನ್ರಿ ..

ನುಗ್ಗಿಕೇರಿ ಮಗ್ಗಲದಾಗ ಸೋಮೇಶ್ವರ ಶಾಂತಾಗಿ ಕೊಂತಾನ್ರಿ,
ಅವನ ಎದರಗೆ ಶಾಲ್ಮಲಾ ನದಿ ಹುಟ್ಟ್ಯಾಳರಿ, ಆ ನಮ್ಮ ಶಿವಪ್ಪನ ಮ್ಯಾಲಿನ ಸಿಟ್ಟೋ ಅವನ ಭಕ್ತರ ಮ್ಯಾಲ ಸಿಟ್ಟೋ, ಅಲ್ಲೆ ಸ್ವಲ್ಪ ಮುಂದ ಹರದ ಗುಪ್ತ ಆಗ್ಯಾಳರೀ...

ಚುಕುಬುಕು ರೈಲಿಳ್ದ ಹೊರಬಿದ್ರ ಮಾಳಮಡ್ಡಿ`ರೀ
ಇಲ್ಲಿನ್ನೂ ಸಂಪ್ರದಾಯಸ್ಥ ಮಂದಿ ತುಂಬಿತುಳಕ್ಯಾವ್ರಿ ..
ಏರಿಳಿದರೊಂದ್ ಗೌಳ್ಯರ ದಡ್ಡಿರೀ
ಅದಕ್ ಹತ್ತಿ ಇರೋದ ೨೦-೩೦ ಗುಂಟೆ ಕಂಪೌಂಡ ಇರೊ ಸಾರಸ್ವತಪುರಾರೀ.. *ಗಿರೀಶ್ ಕಾರ್ನಾಡ್ ಮತ್ತ ರಾ ಯ ಧಾರವಾಡಕರ'ರವರು ಇಲ್ಲೇ ಇರತಿದ್ದರೀ...

ಇನ್ನೊಂದ್ ಬಗಲಿಗೆ
ವನವಾಸಿ ರಾಮಮಂದಿರಾರಿ
ಅದರಹಿಂದಿರೋದೇ ಕೆ ಇ ಬೋರ್ಡ್ ಶಾಲೇರಿ. ಇಲ್ಲೋದಿದವರು ವಿಶ್ವದ್ ಮೂಲಿಮೂಲ್ಯಾಗ ಧಾರ್ವಾಡ್ದ
ಹೆಸರಾ ಮೆರ್ಸ್ಯಾರ್ರೀ..

ಹಾಂಗ ಮುಂದ ಬಂದ್ರ ಎಮ್ಮಿಯೂ ಇಲ್ಲದ ಕೆರೆಯೂ ಕಾಣದ ಎಮ್ಮಿಕೇರಿ'ರಿ
ಉಳವಿ ಎಲ್ಲೈತಿ ಅಂತ ತಿಳಿಲಾರ್ದ್ ಬಸವಣ್ಣ ಕುಂತಾನ್ರಿ..

ಇನೊಂದ ದಿಕ್ಕಿನಿಂದ ಹೊರಟರ ಮದಿಹಾಳ ಹೆಬ್ಬಳ್ಳಿ ಅಗಸಿ ನಡು ಸಿಗೋದ ವಿಕ್ಟೋರಿಯಾ ಹೈಸ್ಕೂಲ್ರಿ ಅಂದ್ರ ಈಗಿನ ನಮ್ಮ ವಿದ್ಯಾರಣ್ಯ ಹೈಸ್ಕೂಲ್ರಿ...ಇಲ್ಲಿ ಕಲತ ದಲಾಲ ಅನ್ನೊ ಹುಡುಗಾ ಕೋಟ್ಯಾನಗಟ್ಟಲೆ ಹೊರ ದೇಶದಾಗ ಗಳಿಸಿ ಸಾಲಿ ಹೆಸರಲೆ ವಾರಸಾ ಬರದ ಹ್ವಾದಾರೀ... ಧಾರವಾಡದ ಜಿಗಟ ಮಣ್ಣ ಜೀವನಪರ್ಯಂತರ ಅಂಟಗೊಂಡ ಇರತದರಿ..

ಹಾವೇರಿ ಪ್ಯಾಟಿ, ಮರಾಠಾ ಕಾಲನಿ ಮ್ಯಾಲಿರೊದ ಕಿಲ್ಲಾರಿ.. ಅದರ ಎರಡ ಬಾಗಲ ಕಮಾನ ನಾವ್ ಇನ್ನೂ ಅದೆವಿ ಅಂತ ಹೆಳತಾ ಇರತಾವರೀ...
ಅದರ ಕೆಳಗ ಇರೋದ ಮಣ್ಣಿನ ಕಿಲ್ಲಾರಿ. ನಮ್ಮವರ ಬಾಯಾಗ ಸಿಕ್ಕ ಈಗ ಮಣಕಿಲ್ಲಾ ಆಗೆದರೀ...

ಅಲ್ಲೇ ಕೆ ಜಿ ನಾಡಗೀರಸರ್ ಕಟ್ಟಿದ ಮಲ್ಲಸಜ್ಜನ ವ್ಯಾಯಾಮಶಾಲಾರಿ..
ಅಲ್ಲಿ ಮಸ್ಕಿ ಹೊಡದ್ ಹೊರಟ್ರ ಮ್ಯಾಲ ಎರಕಿಗೆ ಕಾಣೋದೇ ಕಿತ್ತೂರ ಚನ್ನಮ್ಮಾ ಪಾರ್ಕ್'ರೀ.
ರಾಣಿ ಚನ್ನಮ್ಮಾ ಖಡ್ಗದಲೆ ಥ್ಯಾಕರೆನ ರುಂಡಾ ಹಾರ್ಸಿದ್ರ ಅದ ಇಲ್ಲಿ ಬಂದ ಬಿದ್ದಿತ್ತಂತರೀ ಅಲ್ಲೆ ಥ್ಯಾಕರೆನ ಗೋರಿ ಅದರಿ.. 


_ಮನದಾಗ ಹುಚ್ಚಹಿಡಿಸಿಕೊಂಡ ಬೆಳಗಾವ ರೋಡ್ ಆಸ್ಪತ್ರಿ ಬಲಕ್ಕ ಮಾಡಕೊಂಡ ಸಾಧನಕೆರಿ ತ್ಯಗ್ಗಿಗೆ ಇಳದರನ ನಾಕುತಂತಿ ಮರ್ಮ ಅರ್ಥ ಆಗೋದರೀ..._
ನಮ್ಮ ಬೇಂದ್ರೆ ಅಜ್ಜಾನೂ ಸಹ ಬಾಳಿನ್ಯಾಗ ಸಾಕಷ್ಟು ಬಿಸಿಲ್ಹಣ್ಣು ಉಂಡು ಮಾಗಿದವರಿ..
ಅವರ ಮಾತನ್ಯಾಗ ಹೆಳಬೇಕಂದರ,
ನಾಕುತಂತಿ ಕಂಡವರಿಗಲ್ಲೊ ಕಂಡವರಿಗಷ್ಟೆ ತಿಳಿತsದ ಇದರ ನೆಲೆಯು’ ಅಂತ ತಿಳಿಗನ್ನಡದಾಗ ಹೆಳ್ಯಾರಿ...
ಧಾರವಾಡಕ್ಕ ಬಂದ್ ಸಾಧನಕೇರಿ ನೋಡ್ದಿದ್ದ್ರ ಅದ್ಯಾವ ಸಾಧನೇರಿ...

ಈ ನಾಡಿಗೆಲ್ಲಾ ಖ್ಯಾತನಾಮರಗಳನ್ನ ಕೊಟ್ಟ ಕರ್ನಾಟಕ ಕಾಲೇಜ್ರಿ .. ಒಂದ ಕಾಲಕ್ಕ ಈ ಕಾಲೇಜ್ ರೈಲ್ವೆ ಕಚೇರಿ ಇತ್ತ ಅಂತರೀ ಹೊಸ್ತಾಗಿ ಮೀಟರ ಗ್ಯೆಜ್ ಸುರು ಆದಾಗ ಕಟ್ಟಿದ್ರಂತರಿ...

ಅಲ್ಲಿಂದ ಕಲ್ಲಳತೆ ದೂರಕಿರೋದೇ ಆಕಾಶವಾಣಿರಿ..ಅದರಿ ಗೀಳಿವಿಂಡ, ಅಕ್ಕಮ್ಮಾ ಕಾಕಾ ಸಣ್ಣಕ್ಕಾ...
ಯಮುನಾಮೂರ್ತಿಯವರ ನಡೆಸಿಕೊಡೊ ಬೆಕ್ಕಿನ ಕಣ್ಣು, ರಾಜಮರ್ಯಾದೆ, ಮುದ್ದಿನ ಜಿಂಕಿಮರಿ ಹೀಗೆ ನಾಟಕಗಳ ಸರಪಳಿ'ರಿ.. ಅದರಾಗ ನಮ್ಮ ಕನಡಾ ಮಾಸ್ತರ್ ಎನ ಕೆ ಕುಲಕರ್ಣಿಯವರು ಧ್ವನಿ ಸಂಮ್ಹೋನ ವಿದ್ಯೆಯನ್ನು ಅರಗಿಸಿಕೊಂಡ ವಿದ್ವಾನರು.
ನಾಟಕದುದ್ದಕ್ಕೂ ಮಾತಿನ ಮೋಡಿಯಲ್ಲಿ ನಮ್ಮನ್ನು ಮಾಯಾಲೋಕಕ್ಕ ಬಿಡವರ್ರಿ. ಇದಕ್ಕ ಹಿನ್ನೆಲೆಯಾಗಿ ಉಸ್ತಾದ್ ಬಾಲೇಖಾನರ ಸೀತಾರ,ಪಂಡಿತ್ ವಸಂತ ಕನಕಾಪೂರವರ ಹಾರಮೊನಿಯಮಂ, ನಿಂಬರಗಿಯವರ ವಾಯಲಿನ್, ನವರಸಗಳನ್ನ ತುಂಬವರೀ...

ಮೈಗೆ ಹೆಂಗೈತೆಲೇ ಮಗsನಾ
ಕಳಸಲೇನ ಬೆಳಗಾಂ ರೋಡಿಗೆ ಅಂದ್ರ ನಮಗಷ್ಟ ಗೊರ್ತರಿ...

ಅದನ್ನ ದಾಟಿ ಮುಂದ ಹೊದ್ರ ಅಲ್ಲಿ ಕಾಣೋದೇ ಎತ್ತಿನಗುಡ್ಡ ಕಾಲೇಜ್ ಅಂದ್ರ ಕೃಷಿ ವಿಶ್ವ ವಿದ್ಯಾನಿಲಯಾರ್ರೀ..

ಸಪ್ತಾಪುರಭಾವಿ, ಬಾರಾಕೂಟ್ರಿ ದಾಟಿದ್ರ್ ಪ್ರಕೃತಿ ಸೊಬಗಲಿ ಮಿಂದಿಹ ಕರ್ನಾಟಕ ವಿಶ್ವವಿದ್ಯಾನಿಲಯಾರ್ರೀ..

ನಮ್ಮೂರಾಗೊಂದು ಅಂಕುಡೊಂಕಿನ ರಸ್ತೆಕ್ಕೂ ಲೈನ್ಬಜಾರ್ ಅಂದಾರ್ರಿ ..
ಅಲ್ಲೇ ನೋಡ್ರಿ ವಿಶ್ವಖ್ಯಾತಿಯ ಬಾಬುಸಿಂಗ್ ಠಾಕೂರ ಫೇಢಾ ಹುಟ್ಟಿದ್ರಿ..
ಬಾಲಿವುಡ್ದಲ್ಲಿ ಹೆಸರ ಮಾಡಿರೊ ಧಾರವಾಡ-ಫೇಡಾ ಅದ ಲೀನಾ ಚಂದವರಕರ ಅವರೂ ನಮ್ಮವರರಿ..

ಹಂಗ ಅದ್ಕೊಂಡ ಸ್ವಲ್ಪ ಮುಂದ ಹೋದ್ರ ನೆನಪಿನ ಬುತ್ತಿ ಬಿಚ್ಚೊ ಸುಭಾಸ್ ರಸ್ತೆರೀ.
ಮ್ಯಾಲ ನೊಡಿದ್ರ ಕೆಸಿಸಿ ಬ್ಯಾಂಕ್ ಗಡಿಯಾರ'ರೀ. ಅದರ ಬಾಜುನ ನಮ್ಮ ಕಟ್ಟಿ ಮಾಸ್ತರದ ದುಗಸೋ ಗಾಡಿವಳಗ ಸಂಜಿಕ ಸಿಗೊ ಬಿಸಿ ಬಿಸಿ ಫಡ್ಡ್±ಚಟ್ಣಿ ರುಚಿನ ಬ್ಯಾರೆ'ರೀ...

ಅಲ್ಲೇ ಕೆರಿ ದಂಡಿ ಮ್ಯಾಲ ಹ್ಯಾಂಗ್ ಮರಿಲಿ ಆ ದಿನಗಳನ್ನ, _ಮಣಿ ಮ್ಯಾಲೆ ಕೂತು ಬಾಳಿ ಎಲಿವಳಗ ಚಪ್ಪರಿಸಿ ತಿಂದಿದ್ದ ಬಾಂಬೆ ರೆಸ್ಟರೆಂಟಿನ್ ತುಪ್ಪದ್ ದ್ವಾಸಿನ್ರೀ.._

ಹೌದರಿ, ಹಾಲಗೇರಿ ಹಣುಮಪ್ಪನ ಗುಡಿ ಹಿಂದಿನ ಬಾಗಲಾ ತಗದರ ದೊಡ್ಡ ಹಾಲಗೇರಿ`ರಿ, ಅಲ್ಲಿ ಇಡೀದಿವಸ ಅರಬಿಲೇ ಮೀನಾ ಹಿಡಿಲಿಕ್ಕೆ ಹೊಗತಿದ್ವಿರೀ..

ವಿಜಯಾ ಟಾಕೀಸ್ ಹಿಂದ ದೇಸಾಯಿ ಇಲೇಕ್ಟ್ರಿಕ್ ಕಂಪನಿರಿ. ಅಲ್ಲಿ ದಿನಾ ರಾತ್ರಿ ಒಂಬತ್ತಕ ಭೊಂಗಾ ಹೊಡಿಯೋದರಿ ಅದನ ಕೇಳ್ಯೆ ಮುಸಕ ಹಾಕೊದರಿ.

ಉತ್ತರ ಹಿಂದುಸ್ತಾನದ ವೇದ ಪಂಡಿತರವಳಗ ಶ್ರೀ ಬಾಲಚಂದ್ರ ಶಾಸ್ತಿಗಳ ಹೆಸರ ಕೇಳಿಬರೋದರಿ,
ಅವರ ನಮ್ಮ ಧಾರವಾಡದವರಿ.

ಮಂಗಳವಾರ ಸಂತಿ,ಅಮ್ಮಿನಗಡ್ಹ್- ನೆಲ್ಲಕಾಯಿ ಗೊಳಂಬ. ದತ್ತಾತ್ರೇಯ ಗುಡಿ ,ಸರಾಫ್ ಬಜಾರ್ ,ರಿಸ್ಪುಡ ಅಂಗಡಿ,ಕೆರಿತೆಳಗಿನ ಓಣಿ, ಚಾಪೇಕರ ಓಣ್ಯಾಗ ಹೊಕ್ಕರ ಚಕ್ರವ್ಯೂಹ ಭೇದಿಸಿ ಸಂದಿಗೊಂದ್ಯಾಗ ತಿರುಗಿ ಮಣಕಿಲ್ಲಾದಾಗ ಹೊರಗ ಬರತಿದ್ವಿರಿ..

ಲಕ್ಷ್ಮೀನಾರಾಯಣ ಗುಡಿ ಜಾತ್ರಿ ಮೀರ್ಚಿ-ಗಿರ್ಮಿಟ್, ಭೂಸಪ್ಯಾಟಿ ಗಾಂಭೀರ್ಯವಾಗಿ ಕುಳಿತ ರತಿದೇವಿ-ಕಾಮಣ್ಣ..,
ಮಾಸದ ನೆನಪುಗಳ್ರೀ..

ಮುರುಘಾಮಠಕೊಮ್ಮೆ ಅಡ್ಡಬಿದ್ದ ಮುಂದ ಸಾಗಿದ್ರ ಉಧೋ ಉಧೋ ಯಲ್ಲಮ್ಮ ನೊಡ್ರಿ..

ಒಮ್ಮೆ ಉಸಿರಾಡಿದವಾ ಮತ್ತ ಮತ್ತೆ ಇಲ್ಲೇ ಹುಟ್ಟಬೇಕಂತ ಬಯಸೋ ಊರಿದ್ರಿ. ಪಂಪಕವಿ ಇಲ್ಲಿ ಹುಟ್ಟಿದ್ರ.. *ಆರು ಅಂಕುಶ ವಿಟ್ಟಡೊಂ ನೆನೆಯುವದೆನ್ನ ಮನಂ ಧಾರವಾಡ ದೇಶಂ* ಅನ್ನತಿದ್ದನೆನೋ..ರಿ..

ಗಂಡುಮೆಟ್ಟಿನ ನಾಡಿನ ಬಗ್ಗೆ ಯೇಟ ಬರೆದ್ರು ಕಡಮಿನರೀ..
ಜನ್ಮದ ಪುಣ್ಯಾ`ಯೇನೋ ಇಲ್ಲೇ ಆಡಾಡ್ತ ಅಡ್ಯಾಡ್ತ ಬೆಳೆದೇನ್ರಿ...

- ನಾಶ್ರೀ ಹೆಬ್ಳೀಕರ್
ಸನ್ನಿವೇಲ್,
ಕ್ಯಾಲಿಫೋರ್ನಿಯಾ
ಜುಲೈ ೧೫ ಲಾಕ್'ಡೌನ ವರ್ಷ...


Comments

  1. ಬರಹ ಚೆಂದವಾಗಿದೆ.... ಓದ್ತಾ ಇದ್ರೆ ಧಾರವಾಡ ಭಾಷೆಯ ಸೊಗಡು ಸಿಗ್ತು..

    ReplyDelete
  2. ತುಂಬಾ ಚೆನ್ನಾಗಿದೆ ನಿಮ್ಮ ಬರಹ..
    ಹುಬ್ಬಳ್ಳಿ ಧಾರವಾಡ ಕುಂತಲ್ಲೇ ತೋರಿಸಿದಿರಿ
    ನಾನೂ ನಿಂಹಂಗ..ಜೀವ ಸವಣೂರಾಗ.. ಇರೋದು ಸಿಡಿನಿವೊಳಗ

    ReplyDelete
  3. ಚಲೋ ಧಾರವಾಡ. ಕೊರೋನ ಮುಗಿದ ಮೇಲೆ ಅಲ್ಲಿಗೆ ಪಯಣ ಕಾಯಂ. ಈ ಎಲ್ಲ ಜಾಗಗಳನ್ನು ನೋಡಲೇಬೇಕು ಇದನ್ನು ಓದಿದ ಮೇಲೆ.

    ReplyDelete
  4. ತುಂಬಾ ಸ್ವಾರಸ್ಯವಾಗಿದೆ

    ReplyDelete
  5. ತುಂಬಾ ಸ್ವಾರಸ್ಯವಾಗಿದೆ

    ReplyDelete
  6. ನಿಮ್ಮ ಧಾರವಾಡದ ಪರಿಚಯ ಓದಿ, ಬಾಯಿ ತುಂಬಾ ಪೇಡಾ ತುಂಬಿಕೊಂಡಷ್ಟು ಸಿಹಿಯಾಯ್ತು. ಕುಳಿತಲ್ಲೇ ಧಾರವಾಡವನ್ನು ಸುತ್ತಿಸಿಬಂದ ನಿಮಗೆ ಶರಣ್ರೀ.

    ReplyDelete
  7. ಲೇಖನ ಓದುತ್ತಿದ್ದರೆ ತಮ್ಮನ್ನು ಮಾತನಾಡಿಸಬೇಕು. ನಿಮ್ಮ ಧಾರವಾಡದ ಭಾಷೆಯಲ್ಲೇ ಸಂವಾದ ಮಾಡಬೇಕು ಏನುಸುತ್ತದೆ. ಲೇಖನ ಪದ್ಯ-ಗದ್ಯಗಳ ಮಿಶ್ರಣದಂತಿದೆ.

    ReplyDelete
  8. ನೀವು ಬರೆದಿರುವ ಲೇಖನ ಓದಿ ಬಹಳ ಖುಷಿ ಆತು❤️. ಧಾರವಾಡದ ಬಗ್ಗೆ ಇನ್ನೂ ಹೆಚ್ಚಿನ ಲೇಖನಗಳು ನಿಮ್ಮಿಂದ ಬರಲಿ ಆಂತ ಆಶಿಸುತ್ತೇನೆ. ಸಾಧ್ಯಾದ್ರ ನಿಮ್ಮ ಲೇಖನದಾಗ ನಮ್ಮ ಶುಕ್ರವಾರ ಪ್ಯಾಟಿದ (ಗಾಯನ ಕೋಗಿಲೆ ಗಂಗೂಬಾಯಿ ಹಾನಗಲ್), ಹೊಸಯಲ್ಲಾಪುರದ ಮಂಗ್ಯಾನ ಮಹಲ್ ಜಢಜಿ ಭಾವಿ ನುಚಂಬಲಿಭಾವಿ ಮತ್ತ ಶಿವಪ್ಪಾ ಕ್ಯಾಂಟನ್,ಗಾಂಧಿ ಚೌಕ ಫೇಮಿಲಾ ಆಯಿಸಕ್ರೀಮ ಬಗ್ಗೆ ಬರಿರಿಪಾ ಮತ್ತ 😊
    🙏🌹🙏

    ReplyDelete
  9. Amazing amazing
    Happy to read kannada
    Namma kannada

    ReplyDelete
    Replies
    1. ಧನ್ಯವಾದಗಳು..🙏ನೀವು ನಿಮ್ಮ ಅನಿಸಿಕೆಯಲ್ಲಿ ಬರೆದ Namma kannada'ದಲ್ಲಿರುವ ಭಾವನೆ ನಮಗೆ ಬಂದು ಮುಟ್ಟಿದೆ. ೭೦ರ ದಶಕದ ಧಾರವಾಡದ ಮೊದಲ ಮಳೆಯ ಮಣ್ಣಿನ ಮದವೆರಿಸುವ ಜಾನಪದ ಹಾಡು ತಮಗೆ ತಲುಪಲಿದೆ ಹೊರನಾಡ ಚಿಲುಮೆಯ ಯಿಂದ...

      Delete

Post a Comment