ಕಾಗ್ನಿಟಿವ್ ಬಿಹೇವಿಯೊರಲ್ ಪ್ರಾಫೆಸಿ

ಕಾಗ್ನಿಟಿವ್ ಬಿಹೇವಿಯೊರಲ್ ಪ್ರಾಫೆಸಿ

ಹಾಸ್ಯ ಲೇಖನ - ಅಣುಕು ರಾಮನಾಥ್ 

ಕಾಗ್ನಿಟಿವ್ ಬಿಹೇವಿಯೊರಲ್ ಪ್ರಾಫೆಸಿ - ಡಾ. ಆಸ್ಟ್ರೋರೀಬರ್ತೋ ತಿಬತ್ಎಂಬ ಬೋರ್ಡ್ ಕಂಡು ಚಕಿತನಾದೆ. ಒಳಹೋದರೆಹೊಸಚಿಗುರು ಹಳೆಬೇರುಕಂಬೈನ್ ಆಗಿರುವಂತಹ ವ್ಯಕ್ತಿಯೊಬ್ಬರು social distance maintain ಮಾಡುವಷ್ಟು ಅಗಲವಾದ ಟೇಬಲ್‌ನ ಬದಿಯಲ್ಲಿ ಕುಳಿತಿದ್ದರು. ಮುಖದ ಮೇಲೆ ಜ್ಯಾಮೆಟ್ರಿ ಮೇಷ್ಟ್ರಿಗೆ ಇಷ್ಟವಾಗುವಂತಹ ಕೋನ್, ಸರ್ಕಲ್‌ಗಳು ರಾರಾಜಿಸುತ್ತಿದ್ದವು. ತೊಟ್ಟ ಸೂಟ್‌ನೊಳಗಿಂದ ಬೇಕೋ ಬೇಡವೋ ಎನ್ನುವಂತೆ ಜನಿವಾರದ ಒಂದೇ ಒಂದು ಎಳೆ ಇಣುಕುತ್ತಿತ್ತು. ಹಳೆಯ ವಿದ್ವತ್ತಿನ ಮಡಿಗೆ ಇಂಗ್ಲೀಷಿನ ಮೈಲಿಗೆ ಸೇರಿಸಿದಂತಿದ್ದ ಅವರನ್ನು ಅವಾಕ್ಕಾಗಿ ನೋಡುತ್ತಾ ನಿಂತೆ.


ಗುರ್ತು ಸಿಗಲಿಲ್ಲವೇನೋ ಪಾಂಡು? ಶುದ್ಧ ಪಿಟಿಪಿಟಿಭೂಪಎಂದರು ವ್ಯಕ್ತಿ.
ತಿಪ್ಪಾಭಟ್ಟರು!
ಸಂದೇಹವೇ ಇಲ್ಲ. ಅದೇ ಜಾಗಟೆಯ ಕಂಠ. ನನ್ನನ್ನುಪಿಟಿಪಿಟಿಭೂಪಎಂದು ಕರೆಯುವವರು ಅವರೊಬ್ಬರೇ. ಐದಾರು ವರ್ಷಗಳ ಹಿಂದೆ ಮಡಿಯೇ ಮೂರ್ತಿವೆತ್ತಂತೆ ತ್ರಿಪುಂಡ್ರದ ಹಣೆ, ಮುದ್ರೆಯ ಮೈಯಾಗಿ ಕಾಣುತ್ತಿದ್ದ ಅವರು ಈಗ ಸೂಟ್‌ನಲ್ಲಿ!
ಏನೀ ಅವತಾರ ತಿಪ್ಪಾಭಟ್ಟರೆ?’ ಎಂದೆ.
ತಿಪ್ಪಾಭಟ್ಟ ಅಂತ ಕರೀತಿದ್ದಾಗ ನಮ್ಮ ಜನರೇ ತಿರುಗಿ ನೋಡಡ್ತಿರ‍್ಲಿಲ್ಲ ಪಾಂಡು. ಟಿ. ಭಟ್ ಅಂತ ಚೇಂಜ್ ಮಾಡ್ಕೊಂಡೆ. ‘ಇಲ್ಲಿ ಭವಿಷ್ಯ ಹೇಳಲಾಗುತ್ತದೆ - ಪಂಡಿತ ಭಟ್ಟಎಂದಾಗ ಕೊರೋನಾ ಸೀಲ್‌ಡೌನ್ ಪ್ರದೇಶದಂತೆ ನನ್ನ ಕೊಠಡಿ ಖಾಲಿಯೋ ಖಾಲಿ. ನನ್ನ ಸೊಸೆ, ಅದೇ, ಮಾಡ್ರನ್ ಪುನುಗಿನ ಬೆಕ್ಕು......’
ನೀವು ಮಡಿ ಇಲ್ಲ, ಮೈಲಿಗೆ ಇಲ್ಲ ಅಂತ ಸಿಡುಕ್ರಿದ್ರಲ್ಲಾ....?’
ಹೂಂ. ಅವಳೇ. ಒನ್ ಫೈನ್ ಡೇ ನನ್ನ ಕೂರಿಸ್ಕೊಂಡುಮಾವಂಕಲ್, ದಿಸ್ ವಿಲ್ ನಾಟ್ ಡೂ. ಪಂಡಿತ ಅನ್ನೋ ಬೋರ್ಡ್ನ ತ್ರೋ ಮಾಡಿಎಂದಳು. ‘ವ್ಯಾಪಾರ? ಎಂದೆ. ‘ಮಾವಂಕಲ್, ಈಗಿನ circumstance ನೋಡಿದರೆಇಲ್ಲಿ ನೊಣ ಹೊಡೆಯುವುದನ್ನು ಹೇಳಿಕೊಡಲಾಗುತ್ತದೆಅಂತ ಬೋರ್ಡ್ ಹಾಕೋಹಾಗಿದೆ. ಯೂ ಹ್ಯಾವ್ ಟು ಚೇಂಜ್ ಟು ಬಿ ಸಕ್ಸಸ್‌ಫುಲ್. ಕಾಲಕಾಲಕ್ಕೆ ಬದಲಾಗಬೇಕು ಅಂಕಲ್ಎಂದಳು.
ಏನ್ಮಾಡ್ಬೇಕು?’ ಸೊಸೆಗೆ ಶಿಷ್ಯನಾದೆ.
ಪಂಡಿತ್ ಬೋರ್ಡ್ ಬದಲು ಆಸ್ಟ್ರೋರಿಬರ್ತೋ ಅಂತ ಹಾಕ್ಕೊಳಿ. ಬಿಫೋರ್ ಯೂ ಆ್ಯಸ್ಕು ಮೇಸೆಲ್ಫ್ ವಿಲ್ ಟೆಲ್ಲು... ಆಸ್ಟ್ರೋ ಅಂದ್ರೆ ಅಸ್ಟ್ರಾಲಜಿ - ಭವಿಷ್ಯ. ರೀಬರ್ತೋ ಅಂದರೆ ಪುನರ್ಜನ್ಮ. ಲೈಫಲ್ಲೇ ಯಾರನ್ನೂ ನಂಬದಿರೋ ಜನ ಪುನರ್ಜನ್ಮಾನ ನಂಬ್ತಾರೆ ಮಾವಂಕಲ್
ಆದರೆ ಪುನರ್ಜನ್ಮದ ಬಗ್ಗೆ ನನಗೇನೂ ಗೊತ್ತಿಲ್ಲವಲ್ಲಾ?’
ಟಿವಿ ನೋಡಿ. ರೋಗದ ಲಕ್ಷಣ ಗೊತ್ತಿಲ್ಲದ ಡಾಕ್ಟರ್, ಕಾನೂನು ಗೊತ್ತಿಲ್ಲದ ಹೋಮ್ ಮಿನಿಸ್ಟರ್, ಅವಿದ್ಯೆಯ ವಿದ್ಯಾಮಂತ್ರಿ, ಚೋರ್‌ಗುರು ಪೊಲೀಸ್ ಇಂಸ್ಪೆಕ್ಟರ್ ಎಲ್ಲರೂ ಸಿಗ್ತಾರೆ. ವೊಕೇಷನ್‌ಗೂ ಡೆಸಿಗ್ನೇಷನ್‌ಗೂ ಸಂಬಂಧವಿಲ್ಲದ ನೇಷನ್ನು ನಮ್ಮದುಎಂದ ಸೊಸೆ ಪುನರ್ಜನ್ಮದ ಬಗ್ಗೆ ಕೆಲವು tips ಕೊಟ್ಟಳು. ಆದ್ದರಿಂದಲೇ ಸೆಟಪ್ಪು, ಗೆಟಪ್ಪು. ಈಗ ಆನ್‌ಲೈನ್, ಆಫ್‌ಲೈನ್ ಎಲ್ಲೆಡೆಯೂ ಜನವೋ ಜನ.’
ತಿಪ್ಪಾಭಟ್ಟರು ತಿಬತ್ ಆಗಿದ್ದು?’
ಟಿ.ಭಟ್ ಅನ್ನೋದನ್ನpronounce.comನಲ್ಲಿ ಸೊಸೆ ಹಾಕಿದಳು. ತಿಬತ್ ಎಂದಿತು. ‘ಟುಡೇಸ್ ಪೀಪಲ್ಲೂ ಲೈಕ್ ದಿಸ್ ಓನ್ಲೀ ಸ್ಪೀಕ್ತಾರೆ ಮಾವಂಕಲ್.  ಹಾಗೆಯೇ ಬೋರ್ಡ್ ಬರೆಸಿಎಂದಳು. ಬರೆಸಿದೆ
ಮಾಡ್ರನ್ ಡ್ರೆಸ್ ವಿತ್ ಮುದ್ರೆ?’
ಆನ್‌ಲೈನ್ ಬಂದವರದು ಮಾಡ್ರನ್ ಔಟ್‌ಲುಕ್ ಆದರೆ ಸೂಟ್ ಕಾಣುವಂತೆ ಕೂರುತ್ತೇನೆ. ಆರ್ಥಡಾಕ್ಸ್, ಓಲ್ಡ್ ಸ್ಕೂಲ್ ಆಫ್ ಥಾಟ್‌ಲೆಸ್‌ನೆಸ್ ಆದರೆ ಮುದ್ರೆ ಕಾಣುವಂತೆ ಕೂರುತ್ತೇನೆ. ಉದರನಿಮಿತ್ತಂ ಬಹು ಕೃತಕ ವೇಷಂಹೊಟ್ಟೆ ಕುಣಿಸಿ ನಕ್ಕರು ತಿಬತ್ ಉರುಫ್ ತಿಪ್ಪಾಭಟ್ಟರು.
ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ ಎಂದರೆ ಜನರ ನಡತೆ ನೋಡಿಕೊಂಡು ಅವರನ್ನು ದಾರಿಗೆ ತರುವ ಚಿಕಿತ್ಸೆ ಎಂದು ಗೊತ್ತು. ಆದರೆ ಕಾಗ್ನೆಟಿವ್ ಬಿಹೇವಿಯರಲ್ ಪ್ರಾಫೆಸಿ ಎಂದರೇನು?’
ಪ್ರಾಫೆಸಿ ಎಂದರೆ ಭವಿಷ್ಯ ಹೇಳೋದು. ನಿಮ್ಮ ನಡತೆಯನ್ನು ಆಧರಿಸಿ ಮುಂದಿನ ಜನ್ಮದಲ್ಲಿ ನೀವೇನಾಗುತ್ತೀರೆಂದು ಹೇಳುವುದು ನನ್ನ ಸ್ಪೆಷಾಲಿಟಿ ಕಣೋ ಪಿಟಿಪಿಟಿಭೂಪ
ಚೆನ್ನಾಗಿದೆ. ಏನಾದರೂ ಎಕ್ಸಾಂಪಲ್?’
ಆರ‍್ನಬ್ ಗೋಸ್ವಾಮಿಯನ್ನೇ ತೊಗೊ. ಪ್ರಪಂಚದಲ್ಲಿ ಹೆಂಡತಿಗೂ ಮಾತನಾಡಲು ಅವಕಾಶ ಕೊಡದ ಏಕೈಕ ಗಂಡು ಅವನು
ಪುನರ್ಜನ್ಮದಲ್ಲಿ?’
ಆಂಬುಲೆನ್ಸ್ನ ಗಂಟೆ ಆಗಿ ಹುಟ್ಟುತ್ತಾನೆ
ಹಾಗಾದರೆ ವಿಧಾನಸಭೆಗಳಲ್ಲಿ ಸ್ಪೀಕರ್‌ಗೆ ಮಾತನಾಡಲು ಅವಕಾಶ ನೀಡದೆ ಒಂದೇ ಸಮ ಒದರುವ ಮಿನಿ ಸ್ಟರ್‌ಗಳು?’
ಬೇರೆಲ್ಲಾ ವಾಹನಗಳ ಆರ್ಭಟವನ್ನು ನಿಲ್ಲಿಸಿ ತಾನೊಂದೇ ಅರಚುತ್ತಾ ಸಾಗುವ ಸಚಿವರ ಕಾರಿನ ಸೈರನ್‌ಗಳಾಗಿ ಜನ್ಮ ತಾಳುತ್ತಾರೆ
ಸಾಯುವವರೆಗೆ ತಾವೇ ರಾಷ್ಟ್ರಾಧ್ಯಕ್ಷರಾಗಿರಬೇಕೆಂದು ಬಯಸುವ ಪಕ್ಷಗಳ ಮುಖಂಡರು?’
ಅಂಟಿಕೊಂಡ ಕಡೆಯೇ ಅಂಟಿಕೊಳ್ಳುವ ನಡತೆಯಾದ್ದರಿಂದ ಕನ್ನಡಿಯ ಹಿಂದಿನ ಪಾದರಸವಾಗಿ ಮರುಜನ್ಮ ತಾಳುತ್ತಾರೆ
ಅದೇಕೆ?’
ಈಗಿನಂತೆಯೇ ಆಗಲೂ. ಕನ್ನಡಿ ಇರುವವರೆಗೆ ಪಾದರಸ ಇದ್ದೇ ಇರುತ್ತದೆ.’
ಬಂತು ಮಾರಿ, ಕೇಳಿ ಕೇಕೆ, ಮಾರಣಹೋಮ ಎಂದೆಲ್ಲಾ ಅರಚುವವರು?’
ಹ್ಯಾಲೋಯಿನ್ ಡೇ ಸ್ಟಿಕ್ಕರ್‌ಗಳಾಗಿ, ಹಾರರ್ ಹೌಸ್‌ನ ಮಾಸ್ಕುಗಳಾಗಿ ಯಥಾಶಕ್ತಿ ಹೆದರಿಸುವುದನ್ನು ಮುಂದುವರೆಸುತ್ತಾರೆ
ಸೀರಿಯಲ್ ತಯಾರಿಸಿ ಒಂದೇ ಸಮ ಕಣ್ಣೀರು ಸುರಿಸಲು ಕಾರಣರಾಗಿರುವವರು?’
ಕಥೆ ಬರೆದವರು ಈರುಳ್ಳಿ ಆಗಿ ಹುಟ್ಟಿ ಮನೆಮನೆಯಲ್ಲಿ ಕಣ್ಣೀರು ಹರಿಸುತ್ತಾರೆ. ನಿರ್ದೇಶಕರು ಗ್ಲಿಸರಿನ್ ಆಗಿ ಹುಟ್ಟಿ ಇತರರ ಕಣ್ಣಲ್ಲಿ ನೀರು ಬರಿಸುತ್ತಾರೆ.’
ನಿರ್ಮಾಪಕರು?’
ಬಡಪಾಯಿಗಳು. ಅವರಿಗೆ ಮತ್ತೆ ಮನುಷ್ಯ ಜನ್ಮ ಬರುತ್ತದೆ. ತಮ್ಮ ಹಣ ಹೂಡಿ ಇತರರ ಕಣ್ಣಲ್ಲಿ ನೀರು ಬರಿಸುವ ಜನರನ್ನು ಕೆಲಸಕ್ಕೆ ಇಟ್ಟುಕೊಳ್ಳುವಮಾವನ ಕಲ್ಯಾಣ ಇಲಾಖೆ ಮಂತ್ರಿಗಳಾಗಿ ಹುಟ್ಟುತ್ತಾರೆ
ರಸ್ತೆ ಖಾಲಿಖಾಲಿ ಇದ್ದರೂ ಭೋರೆಂದು ಹಾರ್ನ್ ಬಾರಿಸುತ್ತಾ ಸಾಗುವವರು?’
ಹೈವೇಗಳ ಮರಗಳಲ್ಲಿ ಜೀರುಗುಟ್ಟುವ ಜೀರುಂಡೆಗಳಾಗುತ್ತಾರೆ
ಮೊದಲಿಗೆ ಝೆಡ್ ಆಕಾರದಲ್ಲಿ, ನಂತರ ಹೈಪರ್‌ಬೋಲಾದಂತೆ, ಅದಾದಮೇಲೆ ಹೆಣ್ಣಿನ ಹುಬ್ಬಿನ ಆಕಾರದಲ್ಲಿ ಜಾರುಓಟದಲ್ಲಿ ಬೈಕ್ ಓಡಿಸುವ ಪಡ್ಡೆಗಳು?’
ಒಬ್ಬೊಬ್ಬರೂ ನೂರಾರು ದೀಪದ ಹುಳುಗಳಾಗಿ ಸಾಲುದೀಪಗಳ ಸುತ್ತಲೂ ರಾತ್ರಿಯೆಲ್ಲಾ ಸುತ್ತಾಡುತ್ತಿರುತ್ತಾರೆ
ಸಾಫ್ಟ್ವೇರ್ ಕಂಪನಿಗಳ ಮಾಲಿಕರು?’
ಬೀದಿಮೂಲೆಯಲ್ಲಿ ಕಳ್ಳೇಬೀಜ, ಪುರಿ ಇತ್ಯಾದಿಗಳನ್ನು ಹುರಿಯುವ ಬಾಂಡ್ಲಿ ಆಗಿ ಹುಟ್ಟುತ್ತಾರೆ
ಏಕೆ?’
ಮನುಷ್ಯ ಜನ್ಮದಲ್ಲಿಯೂ ಕೈಕೆಳಗಿನವರನ್ನು ಚೆನ್ನಾಗಿ ಹುರಿದಿರುತ್ತಾರಲ್ಲಾ.... ಹುಟ್ಟುಗುಣ ಸುಟ್ಟರೂ ಹೋಗದಿರುವುದರಿಂದ ಮುಂದಿನ ಜನ್ಮಕ್ಕೆ ಕ್ಯಾರಿಓವರ್ ಆಗುತ್ತದೆ
ಆನ್‌ಲೈನ್ ವರ್ಕ್ ಮಾಡುವ ಜನಗಳು?’
ಸಂಜೆ ಎಲೆಕ್ಟಿçಕ್ ವೈರ್‌ಗಳ ಮೇಲೆ ಸಾಲಾಗಿ ಕುಳಿತುಕೊಳ್ಳುವ ಪಕ್ಷಿಗಳಾಗಿ ಹುಟ್ಟುತ್ತಾರೆ
ಸಂಜೆಯೇ ಏಕೆ? ಪಕ್ಷಿಯೇ ಏಕೆ?’
ಜನ್ಮದಲ್ಲಿ ಹಗಲು ರಾತ್ರಿಗಳ ವ್ಯತ್ಯಾಸವೇ ತಿಳಿಯದೆ ಕೆಲಸ ಮಾಡುವ ಅವರು ಕೊಂಚ ಬ್ರೇಕ್ ತೆಗೆದುಕೊಳ್ಳುವ ಹೊತ್ತಿಗೆ ಸಂಜೆ ಆಗಿರುತ್ತದೆ. ಜನ್ಮದ ವಾಸನೆಯೇ ಕಂಟಿನ್ಯೂ ಆಗುವುದರಿಂದ ಆಗಲೂ ಸಂಜೆಯೇ ಸೇರುವುದು. ಈಗ ಆನ್‌ಲೈನ್ ವಟವಟ; ಆದ್ದರಿಂದ ಆಗಲೂ ಆನ್‌ಲೈನ್ ಚ್ಯಾಟಿಂಗ್. ಕ್ಯುಬಿಕಲ್ ಎಂದರೆ ಗೂಡು. ಗೂಡಿನಲ್ಲಿ ವಾಸಿಸುವವರು ಪಕ್ಷಿಗಳೇ ಅಲ್ಲವೇ!’  
ನಾನು?’ ಕೇಳಬಾರದಿತ್ತು. ನಾಲಿಗೆ ಜಾರಿಯೇಬಿಟ್ಟಿತಲ್ಲ!
ಸಿಕ್ಕಸಿಕ್ಕವರಿಗೆ ತಲೆ ಕೊರೆಯುವ ಗುಣ ಹೊಂದಿರುವುದರಿಂದ ಬೋರ್‌ವೆಲ್‌ನ ಡ್ರಿಲ್ ಬಿಟ್ ಆಗಿ ಹುಟ್ಟುತ್ತೀಯೆ
ಸೇಡಿಗಾಗಿಯಾದರೂ ಅವರ ಬಗ್ಗೆ ಕೇಳಬೇಕಾದ ಪರಿಸ್ಥಿತಿ ತಲುಪಿನೀವು?’ ಎಂದೆ.
ಯಾರಿಗೂ ಹೇಳದಿದ್ದರೆ ಹೇಳುತ್ತೇನೆ
ಬುದ್ಧಿಜೀವಿಗಳ ಬುದ್ಧಿಯ ಮೇಲಾಣೆ
ಇಲ್ಲದುದರ ಮೇಲೆ ಆಣೆ ಇಡುವಂತಿಲ್ಲ. ನಿನ್ನ ಹಾಸ್ಯಪ್ರಜ್ಞೆಯ ಮೇಲೆ ಆಣೆ ಇಡುವೆಯಾ?’
ಇದಲ್ಲವೇ ಹುಚ್ಚೆಂದರೆ! ಇಲ್ಲದುದರ ಮೇಲೆ ಆಣೆ ಇಡಲು ಅವರೇ ಕೇಳುತ್ತಿದ್ದಾರೆ. ಅಸ್ತು ಎಂದೆ.
ಜನರಲ್ಲಿ ಇಲ್ಲಸಲ್ಲದ ಭಯ ಹುಟ್ಟಿಸುವ ಕಾಯಕ ನಡೆಸುತ್ತಿರುವುದರಿಂದ ನನ್ನದು ವೂಹಾನ್‌ನಲ್ಲೇ ಮುಂದಿನ ಜನ್ಮ - Next generation virus ಆಗಿ
ತಿಪ್ಪಾಭಟ್ಟರ ಮುಖವನ್ನು ದಿಟ್ಟಿಸಿದೆ. ತಲೆಯ ಮೇಲೆ ಕಿರೀಟದ ರೂಪ ಮೂಡುತ್ತಿರುವಂತೆ ಕಂಡಿತು. ಮುಂದಿನ ಜನ್ಮಕ್ಕೆ ಈಗಲೇ ಬೀಜಾಂಕುರ?
ಬೆದರಿದ ಹುಲ್ಲೆಯಂತೆ social long distance ಸಾಧಿಸಲೆಂದು ತಿಬತ್ ಚೇಂಬರ್‌niM ಸರಸರನೆ ಹೊರನಡೆದೆ.


Comments