ಕೂಸನ ಕೇಳೀರಾ.....

ಕೂಸನ ಕೇಳೀರಾ.....
ಅಳುವ ಕಂದನ ತುಟಿಯು ಹವಳದಾ ಕುಡಿಹಂಗ
ಕುಡಿಹುಬ್ಬು ಬೇವಿನೆಸಳಂಗ ಕಣ್ಣೋಟ
ಶಿವನ ಕೈಯಲಗು ಹೊಳೆದಂಗ
ಎಂದದ್ದೇನೋ ಸರಿ. ಆದರೆ ಮುಖ್ಯ ವಿಷಯವನ್ನೇ ಬಿಟ್ಟುಬಿಟ್ಟರಲ್ಲಾ.... ಅಳುವ ಕಂದನ ಕಂಠದ ಬಗ್ಗೆ ಏನೇನೂ ಹೇಳದೆ ತುಟಿಯ ಬಗ್ಗೆ ಮಾತ್ರ ಹೇಳಿದ್ದನ್ನು ಕಂಡರೆ ಇದು ಕಂದನ ಜಾಹೀರಾತೇ ಇರಬೇಕೆನಿಸುತ್ತದೆ. ಕಷ್ಟವನ್ನು ಮರೆಮಾಚಿ ಇಷ್ಟವನ್ನು ಮುಂಚಾಚುವ ವಿಷಯಸೂಚಿಯೇ ಜಾಹೀರಾತು!
ಕೋವಿಡನ ಕಾಲ. ಸಾಕಿದ ನಾಯಿಗಳು ವಾಕಿಂಗ್ ಹೋಗುವುದಕ್ಕಿಂತ ಕಡಿಮೆ ಸಮಯವೂ ಮುಖವಾಡ ಧರಿಸದೆ ಹೊರಹೋಗಲು ಮನುಜರಿಗೆ ಅನುಮತಿ ಇರದ ಕಷ್ಟದ ದಿನಗಳು. ಹೊಸಮನೆಗೆ ಸೇರುವ ಹಲ್ಲಿಯಂತೆಅಡುಗೆಮನೆಯ ದೊಡ್ಡ ಮೂಟೆಯ ಹಿಂದಿನ ಸಣ್ಣ ಸಂದಿಯಲ್ಲಿ ಸೇರುವ ಇಲಿಯಂತೆಮಸ್ಕಿಟೋ ಮೆಷ್ ಹಾಕಿದ್ದರೂ ಒಳಸೇರಿ ಬೀಗುವ ಸೊಳ್ಳೆಯಂತೆಕೋವಿಡನ ಸಂಚಾರ ನಿರ್ಬಂಧವನ್ನು ಧಿಕ್ಕರಿಸಿ ಅದಾವುದೋ ಮಾಯದಲ್ಲಿ ಪಕ್ಕದ ಮನೆಗೆ ಮಗುವೊಂದು ಸೇರಿಬಿಟ್ಟಿತು. ಅದು ಸೇರಿತೆಂದು ತಿಳಿದುದು ಮುಖದರ್ಶನದಿಂದಲ್ಲಕಂಠಘೋಷದಿಂದ.
ರಾತ್ರಿಯ ನೀರವತೆದಿಂಬನ್ನು ಕುತ್ತಿಗೆಗೆ ಬೇಕಾದ ಕೋನದಲ್ಲಿ ಪೇರಿಸಿಕೊಂಡುಹೊದಿಕೆ ಸರಿಮಾಡಿಕೊಂಡುಪವಡಿಸಿಹಾಸಿಗೆಯ ಬಳಿಯೇ ತೂಗಾಡುತ್ತಿರುವ ಸ್ವಿಚ್ ಆರಿಸುತ್ತೀರಿ. ಕ್ರ್...ಕ್ರ್...ಕ್ರ್... ಎನ್ನುವ ಸದ್ದು ಶುರುವಾಗುತ್ತದೆ. ಲೈಟ್ ಹಾಕಿದರೆ ಸದ್ದು ನಿಲ್ಲುತ್ತದೆ. ಸದ್ದು ಬೆಳಕುಗಳ ಈ ಆಟದಲ್ಲೇ ರಾತ್ರಿ ಕಳೆದು ಬೆಳಗ್ಗೆ ಏನೋ ಬರೆಯಲೆಂದು ಟೇಬಲ್ ಬಳಿ ಹೋದರೆ ಕೆಳಗೆ ಕೇರಮ್ ಬೋರ್ಡ್ಗೆ ಬಳಸಲು ಯೋಗ್ಯವಾದಂತಹ ಬಿಳಿಯ ಪುಡಿ ಬಿದ್ದಿರುತ್ತದೆ. ಸೂಕ್ಷö್ಮವಾಗಿ ಗಮನಿಸಿದರೆ ಟೇಬಲ್ಲಿನ ಡ್ರಾಯರ್‌ನಲ್ಲಿ ಸಣ್ಣ ತೂತಿನಿಂದ ಪುಡಿ ಉದುರುತ್ತಿರುವುದು ತಿಳಿಯುತ್ತದೆ. ರಾತ್ರಿ ನಿಮ್ಮ ನಿದ್ರೆಗೆ ಪಕ್ಕವಾದ್ಯ ನುಡಿಸಿದ್ದು ಕುಟ್ಟೆಹುಳ ಎಂದು ತಿಳಿಯುವುದೇ ಆಗ.

ಕೊಂಚ ಹಿಂದಿನ ಕಾಲಕ್ಕೆ ಧಾವಿಸಿ. ಆಗ ನೀವು ಎಲ್ಲಿ ಬೇಕೋ ಅಲ್ಲಿಗೆಬೇಕೆನಿಸಿದಾಗ ಹೋಗುವ

ಸ್ವಾತಂತ್ರ್ಯವಿತ್ತು. ಸಿಟಿ ಬೋರು. ರೆಸಾರ್ಟಿಗೆ ಹೋಗೋಣ’ ಎಂದು ಹೋದರೆ ಯಾವುದೋ ಕೀಟ ಕರ್ಣಕಠೋರವಾದ ಸದ್ದನ್ನು ಹೊರಡಿಸುತ್ತಲೇ ಇರುತ್ತದೆ. ಸಂಗೀತವನ್ನು ಆಗಷ್ಟೇ ಕಲಿಯಲು ಆರಂಭಿಸಿದ ವಿದ್ಯಾರ್ಥಿಯಂತೆ ಅಪರಿಮಿತ ಉತ್ಸಾಹದಿಂದ ದನಿಗಾರಿಕೆ ನಡೆಸುವ ಕೀಟವನ್ನು ಚಚ್ಚಿಹಾಕಲು ಕೋವಿಯನ್ನು ಬಳಸಲೂ ನೀವು ಸಿದ್ಧ. ಆದರೆ ಅದು ಕಣ್ಣಿಗೆ ಬಿದ್ದರಲ್ಲವೆ! ಜೀರುಂಡೆಗಳೇ ಹಾಗೆ!
ಪಕ್ಕದ ಮನೆಯ ಮಗು ಕುಟ್ಟೆಹುಳದಂತೆ ಅಳು ಆರಂಭಿಸಿ ಜೀರುಂಡೆಯಂತೆ ಆಲಾಪ ಮಾಡಿ ವೇಗವಾಗಿ ಚಲಿಸುತ್ತಿರುವ ಕಾರಿಗೆ ಸಡನ್ ಬ್ರೇಕ್ ಹಾಕಿದಾಗ ಹೊರಡುವ ಸ್ಕ್ರೀಚ್ ಸದ್ದಿನ ತಿಲ್ಲಾನಕ್ಕಿಳಿಯುತ್ತಿತ್ತು. ಕುಟ್ಟೆಯ ಮಂದ್ರದಿಂದ ಜೀರುಂಡೆಯ ಕೇದಾರಕ್ಕೇರಿ ಬ್ರೇಕಿನ ತಾರಕಕ್ಕೆ ಸೇರುವ ಅದರ ಪರಿಗೆ ಇನ್ನಾವ ಕರ್ಕಶತೆಯೂ ಸಾಟಿಯಿಲ್ಲ. ಕಾಲವೂ ಅಷ್ಟೆ. ಮುದ್ದಾಡಿ ರಮಿಸಲು ಬಂದಾಗ ಒಂದನೆಯ ಕಾಲದಲ್ಲಿ ಅಳುತ್ತಿದ್ದ ಅದು ಗದರಿದಾಗ ಎರಡನೆಯ ಕಾಲಕ್ಕೆ ದಾಟಿ ಅಮ್ಮನ ಕೈಬೆರಳು ಬೆನ್ನನ್ನು ಚುರುಗುಟ್ಟಿಸಿದಾಗ ಮೂರನೆಯ ಕಾಲವನ್ನು ತಲುಪಿ ಅಲ್ಲೇ ಹಲವಾರು ನಿಮಿಷ ಉಳಿಯುತ್ತಿತ್ತು. ಒಂದು ಗಂಟೆ ರೋದನ ಕಚೇರಿಒಂದು ಗಂಟೆ ನಿದ್ರೆಮತ್ತೊಂದು ಗಂಟೆ ರೋದನ ಕಚೇರಿಯ ಟೈಮ್‌ಟೇಬಲ್ ಇಟ್ಟುಕೊಂಡಿದ್ದ ಆ ಮಗು ಕೆಲವೊಮ್ಮೆ ನಿದ್ರೆಯನ್ನು ಕಡಿಮೆ ಮಾಡುತ್ತಿತ್ತೇ ವಿನಹ ಅಳುವಿನಲ್ಲಿ ವಿಳಂಬಕಾಲ ಇಲ್ಲವೇ ಇಲ್ಲ.
ನನಗೆ ಅಚ್ಚರಿ ಆಗುತ್ತಿದ್ದುದು ಆ ಮಗುವಿನ ಟೈಮ್ ಸೆನ್ಸ್. ಈಗತಾನೇ ಅಳು ಆರಂಭಿಸಿದೆ. ಒಂದು ಗಂಟೆ ಹೊರಗೆ ಸುತ್ತಾಡಿ ಬರುತ್ತೇನೆ’ ಎನ್ನುತ್ತಾ ಸ್ಯಾನಿಟೈಝರ್ ಹಸ್ತನಾಗಿಮುಖವಾಡಮುಖಿಯಾಗಿ ಹೊರಬಿದ್ದರೆ ಇತ್ತ ಮಗುವೂ ಕೂಡಲೆ ನಿದ್ರೆಗೆ ಜಾರುತ್ತಿತ್ತಂತೆ. ಪೊಲೀಸರ ಕಣ್ಣು ತಪ್ಪಿಸಿದಪ್ಪನೆಯ ಮುಖವಾಡವನ್ನು ತೂರಿಕೊಂಡು ಬರುವ ದುರ್ಗಂಧವನ್ನು ಬೀರುವ ಸಂದಿಗಳಲ್ಲಿ ಕ್ರಮಿಸಿಹಾಗೂ ಹೀಗೂ ಒಂದು ಗಂಟೆ ಕಳೆದುಮನೆಯ ಗೇಟ್ ತಲುಪಿದರೆಕುಟ್ಟೆಹುಳದ ಸದ್ದು ಆರಂಭವಾಗುತ್ತಿತ್ತು. ಕೆಲವೊಮ್ಮೆ ಮನೆಯಲ್ಲೇ ಸ್ಕಿಪಿಂಗ್ ಮಾಡಿಗಸಗಸೆ ಪಾಯಸ ಕುಡಿದುನಿದ್ರೆಗೆ ಜಾರಿಕನಸಿನ ಲೋಕದ ದ್ವಾರದಲ್ಲಿ ನಿಂತು ಅಪ್ಸರೆಯರ ಮೊದಲ ಸುತ್ತಿನ ನೃತ್ಯದ ಆರಂಭವನ್ನು ನೋಡಲು ಉತ್ಸುಕನಾಗಿ ನಿಂತುಕಾಳಿದಾಸನ ವರ್ಣನೆಯ ತುಂಡೊಂದು ಮೈದಾಳಿಮೊದಲ ಹೆಜ್ಜೆಯನ್ನಿಟ್ಟು ನೂಪರುವನ್ನು ಝಲ್ ಎನಿಸುವ ಸಮಯಕ್ಕೆ ಸರಿಯಾಗಿ ಮಗು ಎರಡನೆಯ ಕಾಲದಿಂದಲೇ ರೋದನ ಆರಂಭಿಸಿ ನನ್ನನ್ನು ಸಗ್ಗದಿಂದ ಪಾತಾಳಕ್ಕೆ ದಿಢೀರನೆ ಉರುಳಿಸಿಬಿಡುತ್ತಿತ್ತು. ಏದುಸಿರಿನ ವ್ಯಕ್ತಿಯೊಬ್ಬ ಮೊದಲೇ ಕೆಟ್ಟಿರುವ ನೆಟ್‌ವರ್ಕ್ನಲ್ಲಿ ಏನೋ ಒಳ್ಳೆಯ ಆಫರ್’ ಕೊಡಲು ತೊಡಗಿದ್ದುಆಫರನ್ನು ಸರಿಯಾಗಿ ಕೇಳಲು ಕಿವಿ ನಿಮಿರಿಸಿಕೊಂಡಾಗ ಆ ಏದುಸಿರಿನವನ ಸದ್ದನ್ನು ಸಂಪೂರ್ಣವಾಗಿ ಅಡಗಿಸುವ ಮಟ್ಟಕ್ಕೆ ರೋದಿಸಲು ತೊಡಗುತ್ತಿತ್ತು ಕೂಸು. ಟಿವಿಯಲ್ಲಿ ರುದ್ರಭೀಕರವಾಗಿ ಬ್ರೇಕಿಂಗ್ ನ್ಯೂಸ್’ ಒದರುವ ಗಾರ್ದಭಕಂಠಿಗಳ ಘೋಷವನ್ನೂ ಹಿಂದಿಕ್ಕುತ್ತಿದ್ದುದೊಂದೇ ಈ ರೋತಿಯಿಂದ ನನಗಾಗುತ್ತಿದ್ದ ಪ್ರಯೋಜನ.


ಗೀತೆ ಎಷ್ಟೇ ಕರ್ಕಶವಿರಲಿಅದಕ್ಕೊಂದು ಪಕ್ಕವಾದ್ಯ ಜೋಡಿಸುವುದು ಸಂಗೀತದ ಸಂಪ್ರದಾಯ. ಇದಕ್ಕೆ ಈ ಮಗುವಿನ ರೋದನವೂ ಹೊರತಾಗಿರಲಿಲ್ಲ. ಆ ದಿನ! ಅದೆಂತು ಮರೆಯಲು ಶಕ್ಯವು ಅದನ್ನು! ಮಗುವಿನ ರೋದವನ್ನು ಪಕ್ಕವಾದ್ಯವಾಗಿಸಿ ತಾಯಿಯು ಪಾಡತೊಡಗಿದ ಪರಿಯನ್ನು!
ಯಾಕಳುವೆ ಎಲೆಕಂದ ಬೇಕಾದ್ದು ನಿನಗೆ
ಬೇಬ್ಲೇಡು ಬಗರ‍್ರು ಚಾಕ್ಲೇಟೂಊಊಊ
ಬೇಬ್ಲೇಡು ಬಗರ‍್ರು ಚಾಕ್ಲೇಟು ಚಿಪ್ಸನು
ನೀ ಕೇಳಿದಾಗ ಕೊಡುವೇನೂಊಊಊಊ
ಎಂದು ಅವಳು ಹಾಡಲಾರಂಭಿಸಿದಾಗ ಹಿಟ್ಲರ್‌ನ ಕಾನ್ಸೆಂಟ್ರೇಷನ್ ಕ್ಯಾಂಪಿನಲ್ಲೇ ಇದ್ದಂತಹ ಅನುಭವವಾಗುತ್ತಿತ್ತು. ಹೈ ಸ್ಪೀಡ್ ಗರಗಸದ ಜೊತೆಗೆ ರಬ್ಬರ್ ಸಡಿಲವಾದ ಕಾರಣ ನೀರುಗುಳುತ್ತಾ ಶಿಳ್ಳೆ ಹೊಡೆಯುವ ಕುಕ್ಕರ್‌ನ ಸದ್ದು ಮಿಳಿತವಾಗುವುದನ್ನು ಊಹಿಸಿಕೊಳ್ಳಿ. ನಾನು ಊಹಿಸಬೇಕಾಗಿರಲಿಲ್ಲ!
ಅತ್ತರೇ ಅಳಲವ್ವ ಈ ಕೂಸು ನನಗಿರಲಿ
ಕೆಟ್ಟರೇ ಕೆಡಲಿ ಮನೆಗೆಲಸ
ಎಂದು ಮುಂದುವರೆಸುತ್ತಿದ ಆ ಮಾತೆ ಬಂದಿದ್ದದ್ದೇ ಬೇರೆ ಮನೆಗಾದ್ದರಿಂದ ಅಲ್ಲಿ ಕೆಡಲು ಆಕೆಗೆ ಯಾವ ಕೆಲಸವೂ ಇರಲಿಲ್ಲ. ಆದರೆ ಬೇರೆಯ ಮನೆಗಳಲ್ಲಿ? ‘ಕೆಟ್ಟರೇ ಕೆಡಲಿ ಮನೆಗೆಲಸ’ ಎಂದಾಗ ಯಾರ ಮನೆಯ ಕೆಲಸ’ ಎಂದೇನೂ ಹೇಳಿರಲಿಲ್ಲವಲ್ಲ! ನಮ್ಮ ಮನೆಯಲ್ಲಿ ವರ್ಕ್ ಫ್ರಂ ಹೋಂ’ ಮಾಡುತ್ತಿದ್ದ ಮಕ್ಕಳ ಕೆಲಸ ಅಷ್ಟೂ ಕೆಟ್ಟಿದ್ದಂತೂ ದಿಟ. ಕೂಸಿನ ಕರ್ಕಶತೆಯು ಮಗಳು ಹಾಕಿಕೊಂಡಿದ್ದ ಇಯರ್‌ಫೋನಿನ ಸಂದಿಗೆ ರಭಸದಿಂದ ನುಗ್ಗಿ ಅವಳ ಆಲಿಸುವಿಕೆಗೆ ಭಂಗ ತಂದ ಕಾರಣ ಬಾಸ್ ಕೇಳಿದ್ದೇನೋಇವಳು ಉತ್ತರಿಸಿದ್ದೇನೋ ಎಂಬ ಪ್ರಸಂಗಗಳು ಆಗಾಗ್ಗೆ ನಡೆದು, ‘ರಿಮಾರ್ಕೆಬಲ್’ ಎನ್ನಿಸಿಕೊಳ್ಳುತ್ತಿದ್ದವಳು ರಿಮಾರ್ಕ್ಸ್’ ಪಡೆಯುವ ಮಟ್ಟ ತಲುಪಿದಾಗ ಈ ಕ್ಯಾಕೋಫೋನಿಯಿಂದ ದೂರವಿರಲು ಕ್ವಾರಂಟೈನೇ ವಾಸಿ. ಕುಡ್ ಯೂ ಪ್ಲೀಸ್ ಅರೇಂಜ್ ಒನ್ ಆಫೀಸ್ ಕ್ವಾರಂಟೈನ್ ಫಾರ್ ಮಿ?’ ಎಂದು ಕೇಳುವ ಮಟ್ಟಕ್ಕೆ ರಂಪಾಟ ಹಬ್ಬಿಸಿತ್ತು ಆ ಲಿಟಲ್ ಡೆವಿಲ್. ಕೆಲವೊಮ್ಮೆ ಮಗು ನಿದ್ರಿಸಿದಾಗ ನಾವು ನೆಮ್ಮದಿಯ ಉಸಿರು ಬಿಡುವುದನ್ನು ಸಹಿಸದ ಆ ಅಮ್ಮ ಹಾಡಿನ ರಿಹರ್ಸಲ್‌ಗೆ ತೊಡಗುತ್ತಿದ್ದಳು. ನನ್ನಾಕೆ ಕುಕ್ಕರ್ ಕೂಗಿತೆಂದು ಅಡುಗೆಮನೆಗೆ ಎಡತಾಕಿದಾಗಲೇ ಅದು ಆಕೆಯ ಹಾಡು ಎಂದು ತಿಳಿಯುತ್ತಿದ್ದದ್ದು.
ಒಂದು ದಿನ ಧೈರ್ಯವಹಿಸಿ ಆ ಮಾತೆಯ ಬಳಿ ಸಾಗಿ ಮಗು ಯಾಕಷ್ಟೊಂದು ಅಳತ್ತೆ?’ ಎಂದೆ. ಮಕ್ಕಳು ಅತ್ತರೆ ಲಂಗ್ಸ್ ಸ್ಟ್ರಾಂಗ್ ಆಗತ್ತಂತೆ ಅಂಕಲ್. ಈಗ ಕೋವಿಡ್ ಇದೆ. ಮುಂದೆ ಇನ್ನೇನೇನೋ... ಆದಷ್ಟೂ ಲಂಗ್ಸ್ ಸ್ಟ್ರಾಂಗ್ ಆಗಲಿ ಅಂತ ಆಗಾಗ್ಗೆ ಮಗೂನ ಚುವುಟ್ತೀನಿ’ ಎಂದಳಾಕೆ.
ಮತ್ತೆ ಜೋಗುಳ?’
ನನಗೆ ನಿದ್ರೆ ಮಾಡಬೇಕು ಅನ್ನಿಸಿದಾಗ ಜೋಗುಳ ಹಾಡ್ತೀನಿ. ಮೊದಲಿನಿಂದಲೂ ನನ್ನ ಹಾಡಿಗೆ ನನಗೇ ನಿದ್ರೆ ಬಂದ್ಬಿಡತ್ತೆ’ ನುಡಿದಳಾ ಮಾತೆ.
ಈಗ ಮತ್ತೊಂದು ಸುದ್ದಿ ಅಪ್ಪಳಿಸಿದೆ. ಆ ಮಗುವಿಗೆ ಒಂದು ತಮ್ಮ ಇದೆಯಂತೆ. ಅದರ ಮುಂದೆ ಇದರ ಧ್ವನಿ ವೀಣೆಯಂತೆ. ಸಧ್ಯದಲ್ಲಿ ಜೋಡಿನಗಾರಿ ಯೋಗ ಎಂದು ನನ್ನ ವಾರಭವಿಷ್ಯ ನುಡಿದಿದೆ. ಅಕಟಕಟಾ.... ಡಬ್ಬಲ್ ಅಕಟಕಟಾ.....!

Comments

  1. Comparing is amazing in this article sounds & music mixed with humor . My god I felt like roller coaster ride while reading too many lol instances. Little brother`s introduction at the end has hilarious can imagine how horrible it can be.

    ReplyDelete
  2. ಲೇಖನ ಸಖತ್ತಾಗಿದೆ ಸಾರ್
    ಎಲ್ಲಿಂದೆಲ್ಲಿಗೆ connection ಸಾರ್ ? ha ha ಕೋವಿಡಿನಿಂದ - ವಚನ - ಸಂಗೀತ - TV ಕಡೆಗೆ ಡಬಲ್ ಅಕಟಕಟಾ !! ಅಬ್ಬಾ ಅವನ ಸಹೋದರ ಬೇರೆ ಇದಾನೆ ಅಂತ ತಿಳಿದು ನಗುವಿನ ಜೊತೆ ಹುಬ್ಬೇರಿತು
    ರಿಸಾರ್ಟ್ ಜೀರುಂಡೆ ಶಬ್ದ, ಬ್ರೇಕು ಶಬ್ದ , ಟಿ ವಿ ಗಾರ್ದಭಕಂಠಿಗಳ ಘೋಷ ಇವೆಲ್ಲಾ ಅಪರಿಮಿತ ಹೋಲಿಕೆಗಳು.
    ಚೆನ್ನಾಗಿದೆ ಸಾರ್

    ReplyDelete

Post a Comment