ಕನ್ನಡ, ಕರ್ನಾಟಕದ ತೂಕ

ಕನ್ನಡ, ಕರ್ನಾಟಕದ ತೂಕ

ಲೇಖನ - ಬದರಿ ತ್ಯಾಮಗೊಂಡ್ಲು

                                             ಯಾವುದೇ ಮಾಪನವು ಯಥಾರ್ಥತೆಯ ಒಂದು ಪರಿಚಯ ಮಾಡಿಕೊಡುತ್ತದೆ. ನಾವು ಏನ್ನನ್ನೇ ಆದರು ಯಾವುದಾದರು ಒಂದು ಅಳತೆಗೋಲಿಗೆ ಹೋಲಿಸಿ, ಇದು ಸುಮಾರು ಮೂರು ಸೇರು ಇರಬಹುದು, ಅಥವಾ ನಡೆಯಲು ಇನ್ನೂ ಒಂದು ಮೈಲಿ ದೂರ ಇದೆ, ಹತ್ತು ಜನಕ್ಕೆ ಚಟ್ನಿ ಮಾಡಲು ಎಂಟೋ ಹತ್ತೋ ಮೆಣಸಿನಕಾಯಿ ಬೇಕು ಇತ್ಯಾದಿಯಾಗಿ ಹೇಳುತ್ತಿರುತ್ತೇವೆ. ಅರ್ಥಾತ್, ಒಂದು ಪರಿಮಾಣದ ಚೌಕಟ್ಟಿನೊಳಗೆ ನೋಡದ ಹೊರತು ವಸ್ತುವಿನ ಪರಿಚಯ ನಮಗೆ ಮನದಟ್ಟಾಗುವುದು ಸ್ವಲ್ಪ ಕಷ್ಟವೇ ಸರಿ. ಪರಿಚಯದ ಜೊತೆಗೆ ಹೋಲಿಕೆಗೂ ಇದು ಉಪಯೋಗ.
                                          ಇದೇನು, ಭಾಷೆಯನ್ನೂ ಅಳೆದು ನೋಡಿ ಪರಿಚಯ ಮಾಡಿಕೊಳ್ಳಬೇಕೆ ಎಂದೇನಾದರೂ ಪ್ರಶ್ನೆ ಮೂಡುತ್ತಿದ್ದರೆ ಇದಕ್ಕೆ ಉತ್ತರ ಹೌದು ಮತ್ತು ಇಲ್ಲ. ಸುಮ್ಮನೆ ನಾನೂ ಭಾಷೆಯೊಂದನ್ನು ಮಾತನಾಡುವೆ, ಜೀವನ ಸಾಗಿಸುವೆ ಎಂದು ನೋಡುವಿರಾದರೆ, ನಿಮಗೆ ಭಾಷೆಯ ಅಗಾಧತೆಯ ಪರಿಚಯದ ಅವಶ್ಯಕತೆ ಇರುವುದಿಲ್ಲ. ಅದರ ಬದಲಾಗಿ ಭಾಷೆಯ ಉಗಮ, ಸಂಸ್ಕೃತಿಗೆ ಅದರ ಕೊಡುಗೆ ಇತ್ಯಾದಿ ವಿಷಯಗಳು ನಿಮ್ಮನ್ನು ಚಕಿತರನ್ನಾಗಿ ಮಾಡುವುದಾದರೆ, ಭಾಷೆಯನ್ನು ಅಳೆದು ತೂಗಿ ನೋಡಿದಾಗ, ಸೌಂದರ್ಯೋಪಾಸನೆ ಮಾಡುವ ಆನಂದ ಪಡೆಯುತ್ತೀರಿ.

                                  ಕನ್ನಡ ಮತ್ತು ಕರ್ನಾಟಕದ ಬಗ್ಗೆ ಹೇಳುವುದಾದರೆ, ನಮ್ಮ ನಾಡಿನ ಮತ್ತು ನಮ್ಮ ಭಾಷೆಯ ಆಳ, ವಿಸ್ತಾರವನ್ನು ಹಲವು ಮಹನೀಯರು ಅನೇಕ ಕೃತಿಗಳಲ್ಲಿ ಪ್ರಸ್ತುತಪಡಿಸಿದ್ದಾರೆ. ಅಂತಹ ಮುಖ್ಯ ಗ್ರಂಥಗಳಲ್ಲಿ ಕನ್ನಡ ಕುಲಪುರೋಹಿತರೆಂದೇ ಖ್ಯಾತರಾದ ಶ್ರೀ ಆಲೂರು ವೆಂಕಟರಾಯರ “ಕರ್ನಾಟಕ-ಗತವೈಭವ” ಒಂದು ಶ್ರೇಷ್ಠ ಕೃತಿಯೆನ್ನಲಡ್ಡಿಯಿಲ್ಲ. ಈ ಪುಸ್ತಕದ ಒಂದೊಂದು ಪುಟವೂ ನಮ್ಮಲ್ಲಿ ಕನ್ನಡದ ವಿಸ್ತಾರ, ಪ್ರಬುದ್ಧತೆಯನ್ನು ತಿಳಿಸಿಕೊಟ್ಟು ಅಭಿಮಾನದ ಕೆಚ್ಚನ್ನು ತುಂಬುತ್ತದೆ. ಆಲೂರರು ಈ ಪುಸ್ತಕವನ್ನು ಸಮರ್ಪಿಸಿರುವ ರೀತಿಯಲ್ಲೇ ದೇಶಪ್ರೇಮದ ಬೆಸುಗೆಯಿದೆ. ಮೊದಲ ಕೆಲವು ಪುಟಗಳಲ್ಲೇ ಹೇಳುತ್ತಾರೆ. “ಈ ಪುಸ್ತಕವನ್ನು ಕರ್ನಾಟಕ ಹೃದಯದಲ್ಲಿ ವಾಸಿಸುವ ಕರ್ನಾಟಕಾಂತರ್ಯಾಮಿಯಾದ ಭಾರತಭೂಮಾತೆಯ ಅಡಿದಾವರೆಗಳಿಗೆ ಭಕ್ತಿಭಾವದಿಂದ ಸಮರ್ಪಿಸಿದ್ದೇನೆ” ಎಂದು. ರಾಷ್ಟ್ರಕವಿ ಕುವೆಂಪು ಅವರು ನಾಡಗೀತೆಯಾಗಿರುವ “ಜಯ ಭಾರತ ಜನನಿಯ ತನುಜಾತೆ” ಎಂಬಲ್ಲಿ ಕರ್ನಾಟಕವನ್ನು ಭಾರತದ ಮಗಳು ಎಂದು ಸಂಬೋಧಿಸಿದರೆ, ಆಲೂರರು ಕರ್ನಾಟಕದೊಳಗೇ ಭಾರತವನ್ನು (ಕರ್ನಾಟಕಾಂತರ್ಯಾಮಿಯಾದ ಭಾರತಭೂಮಾತೆಯ) ಕಾಣುವ ಮತ್ತೊಂದು ವಿಶೇಷಣವನ್ನು ನಮ್ಮ ಮುಂದಿಡುತ್ತಾರೆ. ಅಂದರೆ ಭಾಷೆಯೆಂಬುದು ದೇಶದ ಸಂಸ್ಕೃತಿಗೆ ಪೂರಕವಾಗಿರಬೇಕು ಎಂಬುದು.




ಕರ್ನಾಟಕವು ಸುಮಾರು ಸಾವಿರ ಸಾವಿರದೈನೂರು ವರ್ಷಗಳ ಕಾಲ ವೈಭವದಿಂದ ಮೆರೆದ ರಾಷ್ಟ್ರ (ಕೇವಲ ರಾಜ್ಯವಲ್ಲ ನೆನಪಿಡಿ) ಎಂದು ಆಲೂರರು ತಿಳಿಸಿಕೊಡುತ್ತಾರೆ. ಭಾರತೀಯ ಇತಿಹಾಸದಲ್ಲಿ ಕರ್ನಾಟಕವು ಕೈಗೊಂಡ ಪಾತ್ರದ ಪರಿಚಯವಂತೂ ಅದೆಷ್ಟು ತೂಕ ತಂದುಕೊಡುತ್ತದೆ ಅಂದರೆ ಕರ್ನಾಟಕದ ಬಗ್ಗೆ ಇನ್ನಿಲ್ಲದ ಹೆಮ್ಮೆ ಮೂಡುತ್ತದೆ. ಅವರು ಹೇಳುತ್ತಾರೆ “ಹಿಂದಕ್ಕೆ ಕರ್ನಾಟಕ ಮತ್ತು ಕನ್ನಡ ಭಾಷೆಯ ಪ್ರದೇಶ, ಇವೆರಡೂ  ಸಮಾನಾರ್ಥಕ ಶಬ್ಧಗಳಾಗಿರಲಿಲ್ಲ. ಕನ್ನಡ ಭಾಷೆಯನ್ನಾಡುವ ಪ್ರದೇಶಗಳಲ್ಲಿ ಕರ್ನಾಟಕ, ಮಹಾರಾಷ್ಟ್ರ, ಲಾಟ, ಕುಂತಳ, ಕೊಂಕಣ, ಇವೆ ಮೊದಲಾದ ಭಾಗಗಳಿದ್ದವು. ಪುರಾತನವಾಗಿ ನೋಡಿದರೂ ಮಹಾಭಾರತದಲ್ಲಿಯೂ ಕರ್ನಾಟಕದ ಉಲ್ಲೇಖವು ಬರುತ್ತದ ”. ಹಾಗೆಯೇ ಚಾಲುಕ್ಯ ಅರಸರ ದಂಡಿಗೆ “ಕರ್ನಾಟಕ ಬಲ” ವೆಂಬ ಹೆಸರು ಇರುವುದಾಗಿ ಶಿಲಾಲಿಪಿಗಳು ತಿಳಿಸಿಕೊಡುತ್ತವೆ. ಅಂತೆಯೇ ವಿಜಯನಗರ ಸಾಮ್ರಾಜ್ಯ ಸ್ಥಾಪಕರಾದ ವಿದ್ಯಾರಣ್ಯರಿಗೆ “ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ” ಎಂಬ ಬಿರುದಿತ್ತು. ಮತ್ತೂ ಹೇಳುತ್ತಾ ಈಗ ಸರ್ವವಿದಿತವಾಗಿರುವ ನೃಪತುಂಗನ ಕವಿರಾಜಮರ್ಗದಲ್ಲಿನ  “ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್” ಉದಾಹರಿಸುತ್ತ ಕಾವೇರಿಯಿಂದ ಗೋದಾವರಿವರೆಗೂ ಹಬ್ಬಿತ್ತು ಎಂದು ಬಲಪಡಿಸುತ್ತಾರೆ. ಇನ್ನೂ ಗಟ್ಟಿಗೊಳಿಸಲು ಬುಕ್ಕರಾಯನ ಸೊಸೆ ಗಂಗಾದೇವಿಯ ಕಾವ್ಯದಿಂದಾಯ್ದ ಭಾಗವನ್ನು ತಿಳಿಸಿ “ಐದು ದಿವಸ ದಾರಿಯನ್ನು ನಡೆದ ಬಳಿಕ ಕಂಪಮಹೀಪಾಲನು ಕರ್ನಾಟಕವನ್ನು ದಾಟಿದನು” ಎಂದು ವಿಸ್ತಾರದ ಚಿತ್ರಣವನ್ನು ತೋರಿಕೊಡುತ್ತಾರೆ. ಅಂತೆಯೇ ತಮಿಳು ಕವಿ ‘ಮಾಮೂಲನಾರ್’ ಬರೆದ ‘ಕುರುಂಟೋಕಾಯಿ’ ಎಂಬ ಪುಸ್ತಕದಲ್ಲಿ ತಮಿಳು ಭಾಷೆಯ ಸೀಮೆಯ ವರ್ಣನೆಯ ಬಗ್ಗೆ ಹೇಳಿ ಕನ್ನಡ ಭಾಷೆಯ ಇನ್ನೊಂದು ಗಡಿ ಪುಲಿಕೋಟ್ (ಪಳವೇರ್ಕಾಡು – ಈಗಿನ ಚೆನ್ನೈ ಹತ್ತಿರ) ತನಕವೂ ಇತ್ತೆಂದು ತಿಳಿಯುವುದಕ್ಕೆ ಆಸ್ಪದವಿದೆ ಎಂದು ವಿಮರ್ಶಿಸುತ್ತಾರೆ. 

ಇನ್ನು, ಮಹಾರಾಷ್ಟ್ರ, ಗೋವೆಯಲ್ಲಿ ಕನ್ನಡವೇ ಇಲ್ಲ ಎಂದು ತಿಳಿದಿರುವ ಅನೇಕರಿಗೆ ಅವರು ಕೊಡುವ ಉದಾಹರಣೆಗಳು ಅಚ್ಚರಿ ಮೂಡಿಸುತ್ತವೆ. ಮಹಾರಾಷ್ಟ್ರದ ‘ಜ್ಞಾನೇಶ್ವರಿ’ಯಲ್ಲಿ ಅನೇಕ ಕನ್ನಡ ಶಬ್ಧಗಳಿವೆಯೆಂದೂ, ಗೋವೆಯಲ್ಲಿನ ಲೆಕ್ಕ ಪತ್ರಗಳು ಮೊನ್ನೆಮೊನ್ನಿವರೆಗೂ (೧೯೦೦) ಕನ್ನಡದಲ್ಲಿಯೇ ಇದ್ದುವೆಂದೂ, ಪಂಢರಪುರದ ವಿಠಲನು ಕನ್ನಡ ಜನರ ದೇವತೆಯೆಂದೂ ಹೇಳುತ್ತಾರೆ. ಜೊತೆಗೆ ‘ಕೆಂದೂರು’ ಎಂಬ ಅಚ್ಚಕನ್ನಡದ ಊರು ಪುಣೆಯ ಬಳಿ, ಅಲ್ಲದೇ ಕುಲಾಬಾ, ರತ್ನಗಿರಿ ಮುಂತಾದ ಮರಾಠ ಜಿಲ್ಲೆಯಲ್ಲಿಯೂ ಕನ್ನಡ ಹೆಸರಿನ ಗ್ರಾಮದ ಬಗ್ಗೆ ಬೆಳಕು ಚೆಲ್ಲುತ್ತಾರೆ. ಉದಾಹರಣೆಗೆ – ಪೊಯನಾಡು, ಶಿರೋಳ, ಕಲ್ಲಮಠ, ದೇವರಕೊಪ್ಪ, ಅಕ್ಕಲಕೊಪ್ಪ, ಉಳವಿ, ಅತ್ತೀಗೆರೆ, ಮೊಸಳೆ, ನೇರೂರು, ಪಾಳೆ, ದೇವೂರು, ನಿರ್ಗುಡೆ, ಕಣಕವಲ್ಲಿ, ಬ್ರಹ್ಮನಾಳ, ಗಾಣಗಾಪೂರ, ಕುರಡೀವಾಡೀ, ಕಳಸ ಇತ್ಯಾದಿ. ಹಾಗೆಯೇ ಹೆಸರುಗಳಲ್ಲಿ ಅಣ್ಣಂಭಟ್ಟ, ಕೃಷ್ಣಂಭಟ್ಟ ಮುಂತಾದ ಹೆಸರಿನಲ್ಲಿರುವ ಮಕಾರವೂ ಕನ್ನಡದ್ದಾಗಿದೆ ಎನ್ನುವ ವಾದವನ್ನು ಮುಂದಿಡುತ್ತಾರೆ. ಸತಾರ ಮುಂತಾದ ಕಡೆ ಇರುವ ಜೈನರ ಬಸದಿಯಲ್ಲೂ ಕನ್ನಡ ಭಾಷೆಯ ಉಳಿವನ್ನು ತೋರಿಸಿಕೊಡುತ್ತಾರೆ. 
                                        ಕರ್ನಾಟಕದ ಹಲವು ಮನೆತನದ ಕುಲದೇವತೆಗಳು ಮಹಾರಾಷ್ಟ್ರದಲ್ಲಿದೆ. ಧೌಮನರಸಿಂಹ, ನೀರಾನರಸಿಂಹ, ಕೋಹಳೆನರಸಿಂಹ, ತುಳಜಾ ಭವಾನಿ ಇವೇ ಅವು. ಮುಂಬೈ ಸುತ್ತಮುತ್ತಲಿನ ಪ್ರದೇಶವನ್ನು ಅಳುತ್ತಿದ್ದ ಶಿಲಾಹಾರ ಅರಸರು ಕನ್ನಡದವರು ಎಂದು ಮುಂಬಯಿಯ ಗ್ಯಾಜೆಟಿಯರ್ ನಲ್ಲಿ ಉಲ್ಲೇಖವಿದೆ. ಕೊಲ್ಲಾಪುರದ ಅರಸುಮನೆತದ ಲಗ್ನಗಳಲ್ಲಿ ‘ಬಿಸಿಲೂಟ’ ಎಂಬ ಪದ್ಧತಿ ಇದೆ. ಸಾವಂತವಾಡಿಯಿಂದ ಕೊಂಕಣಕ್ಕೆ ಹೋಗುವ ಮಾರ್ಗಕ್ಕೆ ದೋಡಮಾರ್ಗ್ (ದೊಡ್ಡ ಮಾರ್ಗ) ಎಂದು ಈಗಲೂ ಹೇಳುತ್ತಾರೆ. ಮಣೆ, ನಿಚ್ಚಣೆ ಎಂಬ ಭಾಷಾ ಪ್ರಯೋಗವಿದೆ. ಜಕಣಾಚಾರ್ಯ ಕಟ್ಟಿದೆ ದೇವಾಲಯಗಳೂ ಇವೆ. ಇನ್ನೂ ಮಹತ್ವವುಳ್ಳ ಸಂಗತಿ ಎಂದರೆ, ನಡುಮಹಾರಾಷ್ಟ್ರದಲ್ಲಿ ಕನ್ನಡ ಶಿಲಾಶಾಸನಗಳು, ವೀರಗಲ್ಲುಗಳೂ ದೊರೆತಿವೆ. ಇವೆಲ್ಲದರಿಂದ ಕನ್ನಡದ ಭಾಷಾ ವಿಸ್ತಾರವು ಮನದಟ್ಟಾಗುತ್ತದೆ. ಹೀಗೆ ಕನ್ನಡದ ಬಗ್ಗೆ ಬೆಳಕನ್ನು ಕೊಡುತ್ತಾ “ಕನ್ನಡಿಗರೇ, ಉಜ್ವಲವಾದ ನಿಮ್ಮ ಭಾಷೆಯು ಒಂದಾನೊಂದು ಕಾಲಕ್ಕೆ ಉತ್ತರದಲ್ಲಿ ಬಹುದೂರದವರೆಗೆ ಮನೆಮಾಡಿಕೊಂಡಿತ್ತೆಂಬ ಸಂಗತಿಯು ನಿಮ್ಮ ಹೃದಯವನ್ನು ಸ್ಪೂರ್ತಿಗೊಳಿಸಲಿ” ಎಂದು ಹೇಳಲು ಮರೆಯುವುದಿಲ್ಲ.



ಹೀಗೆ ಕನ್ನಡ ನಾಡಿನ ವಿಸ್ತಾರವನ್ನು ನಮ್ಮ ಮುಂದಿಟ್ಟಾದ ನಂತರ, ಈ ಭೂಭಾಗ ಸ್ಪರ್ಶಿಸಿದ ಮಹನೀಯರ ಬಗ್ಗೆ ವಿಷಯ ಪ್ರಸ್ತಾಪ ಮಾಡುತ್ತಾರೆ. ಪುರಾಣಕಾಲದ ಶ್ರೀರಾಮನನ್ನು ಪ್ರಸ್ತಾಪಿಸುತ್ತ, ಆತ ಸುಗ್ರೀವನೊಡನೆ ಸಖ್ಯ ಬೆಳೆಸಿದ ಸ್ಥಳವಾದ ಕಿಷ್ಕಿಂಧೆಯು (ಆನೆಗೊಂದಿ) ಕರ್ನಾಟಕದಲ್ಲಿಯೇ ಇರುವುದು. ಅಂತೆಯೇ ಮಹಾಭಾರತದ ಚಂದ್ರಹಾಸನು ಈ ಕುಂತಲದೇಶದಲ್ಲೇ (ಬನವಾಸಿ) ರಾಜ್ಯಭಾರ ಮಾಡಿದನು ಎಂದು ನೆನಪಿಸುತ್ತಾರೆ. ಈ ಪರಿಚಯ ಕನ್ನಡ ನಾಡಿನ ಬಗ್ಗೆ ಅಭಿಮಾನಹೀನರಲ್ಲಿ ಹೆಮ್ಮೆ ಮೂಡಿಸುವುದಕ್ಕೆ ಹೊರತು, ಎಲ್ಲವೂ ಇಲ್ಲೇ ಆಯಿತು ಎನ್ನುವ ಒಣ ಜಂಭ ತೋರಲು ಅಲ್ಲ. ಪೌರಾಣಿಕ ಕಾಲ ಬಿಟ್ಟು ಇತ್ತೀಚಿನ ಕ್ರಿಸ್ತಶಕ ಕಾಲಮಾನವನ್ನು ಪರಿಗಣಿಸಿದರೂ ಕದಂಬ ಮುಂತಾದ ಶಕ್ತಿವಂತ ರಾಜವಂಶಗಳು ದಕ್ಷಿಣ ಹಿಂದೂಸ್ಥಾನವೆಲ್ಲ ವೈಭವದಿಂದ ಆಳಿರುವ ಅಂಶ ಗೊತ್ತಾಗುತ್ತದೆ. ದಕ್ಷಿಣವಲ್ಲದೆ ಉತ್ತರದಲ್ಲಿ ನೇಪಾಳ, ಪಶ್ಚಿಮದಲ್ಲಿ ಗುಜರಾಥ, ಪೂರ್ವದಲ್ಲಿ ಅಸ್ಸಾಮ ಬಂಗಾಳದ ತನಕ ರಾಜ್ಯವನ್ನು ಹಬ್ಬಿಸಿದ್ದರು. ಬಾದಾಮಿಯ ಚಾಲುಕ್ಯ ಅರಸ ಪುಲಿಕೇಶಿಯು ಉತ್ತರದ ಸಾರ್ವಭೌಮ ಎನಿಸಿದ್ದ ಹರ್ಷವರ್ಧನನ್ನು ಸೋಲಿಸಿರುವುದು ಸರ್ವವಿದಿತ. ಕರ್ನಾಟಕದವರು ಪ್ರತಿನಿತ್ಯ ಸ್ಮರಿಸಬಹುದಾದಂತಹ ನೃಪತುಂಗನು ಯಾವ ದೇಶಕ್ಕೂ ಭೂಷಣನೇ ಸರಿ ಎಂದು ತಿಳಿಸುತ್ತ ಅವನು ಬರೆದ ‘ಕವಿರಾಜ ಮಾರ್ಗ’ ಎಂಬ ಅಲಂಕಾರಿಕ ಗ್ರಂಥದ ಪ್ರಾಮುಖ್ಯತೆಯನ್ನು ವಿವರಿಸುತ್ತಾರೆ. ಹಕ್ಕಬುಕ್ಕರ ಬಗ್ಗೆ ಪ್ರಸ್ತಾಪಿಸುತ್ತ ಉತ್ತರವನ್ನು ತಮ್ಮ ಕಪಿಮುಷ್ಟಿಯಲ್ಲಿ ಹಿಡಿದ ಮುಸಲ್ಮಾನ ದೊರೆಗಳು ಗರ್ವದಿಂದ ದಕ್ಷಿಣಕ್ಕೂ ಪದಬೆಳೆಸಿದಾಗ ತಡೆದ ವೀರರು ಕನ್ನಡದ ಹಕ್ಕಬುಕ್ಕರು ಎಂದು ಇತಿಹಾಸವನ್ನು ನೆನಪುಮಾಡಿಕೊಡುತ್ತಾರೆ. ಇಷ್ಟಿದ್ದೂ ಕನ್ನಡದ ಬಗ್ಗೆ, ಕರ್ನಾಟಕದ ಬಗ್ಗೆ ಹೆಮ್ಮೆ ಏಕಿಲ್ಲ ಎಂದು ನಮ್ಮನ್ನು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತಾರೆ. ಅಷ್ಟದಿಗ್ಗಜಗಳೆಂದು ಪಂಡಿತರಿಗೆ ಮನ್ನಣೆ ಕೊಟ್ಟ ವಿಜಯನಗರದ ಕೃಷ್ಣದೇವರಾಯನು ನಮ್ಮ ಅರಸನು. ಹಾಗೆಯೇ, ಗಂಗ, ಕದಂಬ, ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ, ಯಾದವರು ಬೇರೆ ಬೇರೆ ಕಾಲಕ್ಕೆ ನಮ್ಮನ್ನು ಆಳಿದರೂ, ಅವರ ನುಡಿ ಕನ್ನಡದ್ದಾಗಿತ್ತು. ಇಂತಹ ವೀರರ ನಾಡಿನಲ್ಲಿ ನಿರ್ವೀರ್ಯರಾಗಿ ಕನ್ನಡದ ಬಗ್ಗೆ ಹೆಮ್ಮೆಯನೇಕೆ ಕಳೆದುಕೊಳ್ಳುವಿರಿ ಎಂದು ತೂಕದ ಮಾತನಾಡುತ್ತಾರೆ.


ಮತ್ತೂ ವಿಸ್ತರಿಸುತ್ತಾ ಹೇಳುತ್ತಾರೆ. ಅದ್ವೈತ, ದ್ವೈತ, ವಿಶಿಷ್ಟಾದ್ವೈತದ ಪ್ರಮುಖರ ಕಾರ್ಯಕ್ಷೇತ್ರವೂ ಈ ಕನ್ನಡ ನಾಡಿನಲ್ಲೇ ಆದದ್ದು. ಚೋಳರ ಕಿರುಕುಳವನ್ನು ತಪ್ಪಿಸಿಕೊಂಡು ರಾಮಾನುಜರು ಕನ್ನಡ ಅರಸ ವಿಷ್ಣುವರ್ಧನನ ಆಶ್ರಯ ಪಡೆದರು. ವೀರಶೈವ ಬಸವಣ್ಣನವರಂತೂ ಶುದ್ಧಾತಿ ಶುದ್ಧ ಕನ್ನಡದವರು. ಜೈನ ಮತದ ಪೂಜ್ಯಪಾದ, ಜಿನಸೇನ, ಗುಣಭದ್ರ ಕನ್ನಡನಾಡಿನಲ್ಲೇ ಬಾಳಿ ಬದುಕಿದವರು. ಚಾಲುಕ್ಯವಿಕ್ರಮಾದಿತ್ಯನ ದರಬಾರಿನಲ್ಲಿ ‘ವಿದ್ಯಾಪತಿ’ಯಾಗಿದ್ದ ಬಿಲ್ಹಣ, ಧರ್ಮಶಾಸ್ತ್ರಕಾರ ವಿಜ್ಞಾನೇಶ್ವರ, ವೇದಾಂತಿಯಾದ ಸಾಯಣ, ಪ್ರಖ್ಯಾತ ಜ್ಯೋತಿಷಿ ಭಾಸ್ಕರಾಚಾರ್ಯ, ‘ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ’ರೆಂಬ ಬಿರುದುಳ್ಳ ವಿದ್ಯಾರಣ್ಯರು, ರನ್ನ, ಪಂಪ, ಜನ್ನ ಮೊದಲಾದ ವಾಙ್ಮಯ ಪ್ರತಿಭೆಗಳು, ಪುರಂದರ, ಕನಕದಾಸರು ಕನ್ನಡದ ಮುದ್ದು ಮಕ್ಕಳೇ ಅಲ್ಲವೇ. ಇದರ ಜೊತೆಗೆ ಅರಸರೂ ಸ್ವತಃ ಕವಿಗಳು ಎಂಬುದನ್ನು ಎತ್ತಿ ತೋರಿಸುತ್ತಾರೆ. ಗಂಗರಸರಾದ ಮಾಧವ, ದುರ್ವನೀತಿ ಮುಂತಾದ ಅನೇಕರು ಅಶ್ವಶಾಸ್ತ್ರ, ಗಜಶಾಸ್ತ್ರ, ಕಿರಾತಾರ್ಜುನಟೀಕೆ, ದತ್ತಕಸೂತ್ರ ಎಂಬುದನ್ನು ಬರೆದಿರುತ್ತಾರೆ. ಚಾಲುಕ್ಯವಂಶದ ಸೋಮೇಶ್ವರನ ‘ಮಾನಸೋಲ್ಲಾಸ ಅಥವಾ ಅಭಿಲಾಷಿತಾರ್ಥ ಚಿಂತಾಮಣಿ’ಯು ಒಂದು ಉಲ್ಲೇಖನೀಯ ರಾಜಕೀಯ ಗ್ರಂಥ ಎನ್ನುತ್ತಾರೆ. ಇಷ್ಟಕ್ಕೆ ನಿಲ್ಲಿಸದೆ, ಕನ್ನಡ ನಾಡಿನ ಸ್ತ್ರೀಯರ ಬಗ್ಗೆ ಸುವರ್ಣಾಕ್ಷರದಲ್ಲಿ ಬರೆಯಬೇಕು ಎನ್ನುತ್ತಾರೆ. ಸುಪ್ರಸಿದ್ಧ ಪುಲಕೇಶಿ ಮಹಾರಾಜನ ಹಿರಿಸೊಸೆ ‘ವಿಜಯಮಹಾದೇವಿ’ಯು ಅಬಲೆಯಾದರೂ ಬಹು ಚತುರತೆಯಿಂದ ರಾಜ್ಯಭಾರ ತೂಗಿಸಿದವಳು. ಪಶ್ಚಿಮಚಾಲುಕ್ಯರ ‘ಮೈರಳಾದೇವಿ’ ಮುಂಬೈ ಪ್ರಾಂತದಷ್ಟು ದೊಡ್ಡದಾದ ಬನವಾಸಿಯನ್ನು ಆಳಿರುವುದು ಕರ್ನಾಟಕ ಸ್ತ್ರೀಸಮಾಜಕ್ಕೆ ಎಷ್ಟು ಗೌರವ ಅಲ್ಲವೇ. ಕಂತಿ, ನೀಲಮ್ಮ, ಹೊನ್ನಮ್ಮ, ಗಿರಿಯಮ್ಮ ರಚಿಸಿದ ‘ಪ್ರಸಾದಸಂಪಾದನೆ’, ’ಹದಿಬದೆಯ ಧರ್ಮ’’, ‘ಚಂದ್ರಹಾಸ ಚರಿತ್ರೆ’ ಮುಂತಾದವು ಕನ್ನಡಿಗರಿಗೆ ಆದರ್ಶವಾಗಬೇಕು ಎನ್ನುತ್ತಾರೆ. ಇಂತಹ ಮಹಾಪುರುಷ, ಮಹಾಸತಿಯರಿಂದ ಕನ್ನಡ ನಾಡಿನ ಚರಿತ್ರೆ ತುಂಬಿಕೊಂಡಿರುವಾಗ ಇದನ್ನು ಕೇವಲ ಒಂದು ಕಾದಂಬರಿಯಂತೆ ಸಮಯ ಕಳೆಯಷ್ಟೇ ಅವರ ವಿಷಯ ಉಪಯೋಗಿಸುತ್ತಿರುವುದು ಎಂತಹ ದುರ್ವಿಧಿ ಎಂದು ನೊಂದುಕೊಳ್ಳುತ್ತಾರೆ.

ಇನ್ನು ಇವನ್ನೆಲ್ಲ ಕಥೆ ಕಟ್ಟಲು ಹೇಳುತ್ತಿಲ್ಲ ಎಂದು ಗಟ್ಟಿಯಾಗಿಯೇ ಹೇಳಿ ಕರ್ನಾಟಕದಲ್ಲಿ ಸಿಕ್ಕಿರುವ ಶಿಲಾಲೇಖಗಳನ್ನು, ತಾಮ್ರಪತ್ರಗಳನ್ನೂ ಉದಾಹರಿಸುತ್ತಾರೆ. ಇತಿಹಾಸದ ಬಗ್ಗೆ ಆಸಕ್ತಿ ಇರುವ ಯಾರೇ ಆಗಲಿ, ಈ ಶಿಲಾಲಿಪಿ, ತಾಮ್ರಲಿಪಿಗಳ ಮಹತ್ವವನ್ನು ಬಲ್ಲರು. ಅವುಗಳ ತೂಕವೆಷ್ಟು ಎಂದು ಅವರು ತಿಳಿದಿರುತ್ತಾರೆ. ಇವಿಷ್ಟೇ ಅಲ್ಲದೇ ಸಿಕ್ಕಿರುವ ಅನೇಕಾನೇಕ ವೀರಗಲ್ಲು, ಮಹಾಸತಿಕಲ್ಲು, ನಾಣ್ಯಗಳು, ಕೋಟೆ ಕೊತ್ತಲಗಳಲ್ಲಿನ ಬರಹಗಳು, ತಾಳೆಗರಿ ಇತ್ಯಾದಿಗಳ ಬಗ್ಗೆ ಬೆಳಕು ಚೆಲ್ಲುತ್ತ ನಮ್ಮ ಕರ್ನಾಟಕದಲ್ಲಿ ಮಾಹಿತಿಯನ್ನು ಅದೆಷ್ಟು ಚೊಕ್ಕವಾಗಿ ಸಂಗ್ರಹಿಸುತ್ತಿದ್ದರು ಎಂದು ಮನನ ಮಾಡಿಸುತ್ತಾರೆ. ಅಂತೆಯೇ, ಸಂಪ್ರದಾಯವಾಗಿ ನಡೆದುಕೊಂಡು ಬಂದಿರುವ ಪರಂಪರಾಗತ ಕಥೆಗಳು, ಜನಪದ ನುಡಿಗಳು, ಸ್ಥಳಪುರಾಣಗಳು – ಇವುಗಳನ್ನು ಅರಿತುಕೊಂಡು ಕನ್ನಡವನ್ನು ಶೋಧಿಸಿಕೊಂಡರೆ ನಮ್ಮ ಭಾಷೆಯ ಬಗ್ಗೆ ಅದೆಷ್ಟು ಮಾಹಿತಿ ಬೇಕೋ ಅದಕ್ಕಿಂತ ಹೆಚ್ಚೇ ಸಿಗುವುದು ಎಂದು ವಾದಿಸುತ್ತಾರೆ. ಕೊನೆಗೆ ವಿಷಾದದಿಂದ, ಇಂತಹ ಆಸಕ್ತಿಯಿಂದ ಗೌರವ ಪ್ರಾಪ್ತಿ, ಹಣ ಪ್ರಾಪ್ತಿ ಇಲ್ಲ. ಜೊತೆಗೆ ಈಗ ಶಾಲೆಯಲ್ಲಿ ಕಲಿಯುವ ವಿದ್ಯೆ ಕನ್ನಡದ ಮಹತ್ವದ ಬಗ್ಗೆ ಇಲ್ಲ. ಸಂಶೋಧನೆಗೆ ದಾರಿಯೂ ಮಾಡಿಕೊಡುವುದಿಲ್ಲ ಎಂದು ನೊಂದು ನುಡಿಯುತ್ತಾರೆ (ನೆನಪಿಡಿ ಇದನ್ನು ಅವರು ೧೯೨೦ ರ ಹೊತ್ತಿಗೇ ಹೇಳಿದ್ದರು). ಹೀಗೆ ನೊಂದುಕೊಂಡು ಸುಮ್ಮನಾಗುವುದಿಲ್ಲ. ಅದರ ಬದಲು ನಮ್ಮ ಕನ್ನಡವನ್ನು ಅರಿಯಲು ಏನು ಮಾಡಬೇಕು ಎಂದೂ ತಿಳಿಸುತ್ತಾರೆ. ಅವರು ಕಟ್ಟಿಕೊಡುವ ರೂಪು ನೋಡಿ. ಅದೆಷ್ಟು ಸೊಗಸಿದೆ.



“ಭಾಷೆಯ ಅಭಿಮಾನದಿಂದ ಮಾತ್ರ ಪ್ರೇರಿತರಾಗಿ, ಯಾವೊಂದೂ ಮೂರ್ತ ಪರಿಣಾಮವನ್ನು ಪಡೆಯುವೆ ಎಂಬ ಆಸೆ ಹಿಡಿಯದೆ, ದುಡಿಯುವಂತವರೇ ಮೊದಲ ಮುಂದಾಳುವಾಗಿ (ನೋಡಿ: ಸಮಯ ಸಿಗುವುದಿಲ್ಲ ಎಂದು ಹೇಳುವ ಹಾಗಿಲ್ಲ), ಇತಿಹಾಸಮಂದಿರಕ್ಕೆ ತಳಹದಿಯನ್ನು ಹಾಕಬೇಕು. ಅದರ ಮೇಲೆ ಕಟ್ಟಡವೇರಿಸುವ ಕಾರ್ಯ ಯಾರಾದರೂ ಕೈಗೊಳ್ಳಬಹುದು. ಇಂತಹ ಸ್ವಾರ್ಥತ್ಯಾಗಿಗಳ ಸಂಖ್ಯೆಯು ಕರ್ನಾಟಕದಲ್ಲಿ ನೂರ್ಮಡಿಯಾಗಿ ಬೇಗನೇ ಬೆಳೆಯಲೆಂದು ಹರಕೆಯಿಡುವೆವು.”

ಅದೆಷ್ಟು ಚೆಂದವಿದೆ ಅವರ ಆಶಯ. ಕನ್ನಡ ಕುಲಪುರೋಹಿತ ಎಂದು ಅವರನ್ನು ಕರೆದದ್ದು ಸಾರ್ಥಕವೆನಿಸುವುದು. ಊರಿಗೆ ಹಿತ ಬಯಸುವವ ಪುರೋಹಿತ ಎನ್ನುವಂತೆ ನಮ್ಮ ಕನ್ನಡ ಪುರಕ್ಕೆ ಹಿತಬಯಸುವ ಯಾರೇ ಆದರೂ ಅವರೂ ಕನ್ನಡ ಪುರೋಹಿತರೆನ್ನಲ್ಲಡ್ಡಿಯಿಲ್ಲ. ಇಂತಹ ತೂಕವುಳ್ಳ, ಸವಿಸ್ತಾರವುಳ್ಳ ಕನ್ನಡ, ಕನ್ನಡನಾಡಿನ ಬಗ್ಗೆ ನಮ್ಮನಮ್ಮಲ್ಲಿ ತಿಳಿವಳಿಕೆ ಬೆಳೆಸಿಕೊಂಡು, ಸಿಕ್ಕ ಮಾಹಿತಿಯನ್ನು ಮತ್ತಷ್ಟು ಜನರೊಂದಿಗೆ ಹಂಚಿಕೊಂಡರೆ, ಪದೇ ಪದೇ ತೂಕ ನೋಡಿಯೇ ಭಾಷೆಯನ್ನು ಅಳೆಯುವ ಪ್ರಮೇಯವು ಬರುವುದಿಲ್ಲ. 

[ಸೂಚನೆ: ಇಲ್ಲಿ ಪ್ರಸ್ತುತಪಡಿಸಿರುವ ವಿಚಾರಗಳಲ್ಲಿನ ಅಂಶಗಳು ಸಂಕ್ಷಿಪ್ತರೂಪದಲ್ಲಿವೆ. ಹೆಚ್ಚಿನ ಮಾಹಿತಿಯನ್ನು ಬಯಸುವ ಆಸಕ್ತರು ಮೂಲ ಪುಸ್ತಕವನ್ನು (ಕರ್ನಾಟಕ-ಗತವೈಭವ) ಓದಿಕೊಳ್ಳಿರೆಂದು ಮನವಿ ಮಾಡುವೆ]

Comments

  1. ದಿವಂಗತ ಆಲೂರ ವೆಂಕಟರಾಯರ ಕರ್ಣಾಟಕ ಗತ ವೈಭವ ಎಂಬ ಮೇರು ಕೃತಿಯನ್ನು ಪರಿಚಯ ಮಾಡಿಕೊಟ್ಟ ಶ್ರೀ ಬದರಿಯವರಿಗೆ ಅನಂತ ವಂದನೆಗಳು. ಈ ಉತ್ತಮ ಲೇಖನವನ್ನು ಓದಿದ ನಂತರ ನಮ್ಮಲ್ಲಿ ಕೆಲವರಾದರೂ ಮೂಲ ಕೃತಿಯನ್ನು ಓದಲು ಉತ್ಸುಕರಾಗುವುರು ಎಂಬಲ್ಲಿ ಸಂದೇಹವಿಲ್ಲ

    ReplyDelete
  2. ಶ್ರೀ ಬದರಿ ತ್ಯಾಮಗೊಂಡ್ಲು ಅವರಿಗೆ ಹೃತ್ಪೂರ್ವಕ ಧನ್ಯವಾದಗಳು!. ಎಷ್ಟೋ ವರ್ಷಗಳ ನಂತರ ಕರ್ನಾಟಕ ಗತ ವೈಭವ ಗ್ರಂಥದ ನೆನಪನ್ನು ಮತ್ತೆ ಮುನ್ನೆಲೆಗೆ ತಂದಿರುವಿರಿ. ನಿಮ್ಮ ಲೇಖನ ಬಹಳ ವಿದ್ವತ್ ಪೂರ್ಣವಾಗಿ ಮೂಡಿಬಂದಿದೆ. ಅಲ್ಲಲ್ಲಿ ಅರ್ಥಪೂರ್ಣ ಚಿತ್ರಗಳನ್ನೂ ಸಹ ಕೊಟ್ಟು ವಿವರಿಸಿರುವ ಬಗೆ ನಿಮ್ಮ ಮೆಚ್ಚುವಂತಹದು. ನಿಮ್ಮ ಲೇಖನಿಯಿಂದ ಇನ್ನು ಅನೇಕ ಇಂತಹ ಲೇಖನಗಳು ಬರಲೆಂದು ಆಶಿಸುತ್ತೇನೆ.

    ReplyDelete
  3. Long time since we read about such article. Nice to know NRIs have such a good command on Kannada and knowledge about our language and state. Thanks for wonderful inspiring article Mr Badari.

    ReplyDelete
  4. ಬದರಿ ಬಹುದಿನದ ನಂತರ ತಮ್ಮ ಲೇಖನ ಓದಿ ಬಹಳ ಖುಷಿಯಾಯ್ತು. ಈಗ ಆಲೂರರ ಪುಸ್ತಕ ಓದಲೇ ಬೇಕು ಎನ್ನುವ ಆಸಕ್ತಿ ಬಂದಿದೆ. ನಿಮ್ಮಲ್ಲಿ ಆ ಪುಸ್ತಕ ಲಭ್ಯವಿದ್ದರೆ ತಿಳಿಸಿ . ಕನ್ನಡಿಗ ಎನ್ನುವ ಶಬ್ದಕ್ಕೆ ತಾವು ಕೊಡುವ ನಿಖರವಾದ ಒಟ್ಟು ಒತ್ತು ಎಲ್ಲ ಕನ್ನಡಾಭಿಮಾನಿಗೂ ಬಹಳ ಹೆಮ್ಮೆ ತರುತ್ತದೆ. ಲೇಖನವು ಇತಿಹಾಸ ಮಾಹಿತಿಯೊಂದೇ ಅಲ್ಲದೆ ನಮ್ಮ ಪ್ರಾಂತ್ಯದ ವಿಸ್ತಾರ ಮತ್ತು ಬೇರೆಡೆಯೂ ಬಳಕೆಯಲ್ಲಿದ್ದ ಸತ್ಯ ಹೀಗೆ ಕೆಲವು ಗಮನೀಯ ವಿಷಯ ಹಂಚಿಕೊಂಡಿದ್ದೀರಿ. ಧನ್ಯವಾದಗಳು. ಮತ್ತೆ ಮತ್ತೆ ಓದಬೇಕು ಎನಿಸುತ್ತದೆ ಈ ನಿಮ್ಮ ಲೇಖನ. ತಾವು ಕನ್ನಡನಾಡಿನ ವಿಷಯವಾಗಿ ಮತ್ತಷ್ಟು ವಿಭಿನ್ನ ವಿಚಾರಗಳನ್ನು ಲೇಖನಗಳ ಮೂಲಕ ತಿಳಿಸಿಕೊಡಿ.

    ReplyDelete
  5. ವಿಶಿಷ್ಟ ಶೈಲಿಯ ಪರಿಚಯದೊಡನೆ ಆರಂಭವಾಗಿರುವ ಬದರಿ ತ್ಯಾಮಗೊಂಡ್ಲು ರವರ ಈ ಲೇಖನ ಆರಂಭದಲ್ಲಿಯೇ ಕುತೂಹಲ ಮೂಡಿಸುತ್ತದೆ. ಕನ್ನಡದ ಚಿರಸ್ಮರಣೀಯ ಆಲೂರು ವೆಂಕಟರಾಯರ ಕರ್ನಾಟಕ ಗತವೈಭವದ ಬಗ್ಗೆ ಹಂತಹಂತವಾಗಿ ತಿಳಿಸಿಕೊಟ್ಟು, ಓದುಗರು ಆ ಪುಸ್ತಕವನ್ನು ಓದಲೇಬೇಕು ಎನ್ನುವ ಹಂಬಲ ಮೂಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ತಿಂಗಳ ಸಂಚಿಕೆಗೆ ಈ ಲೇಖನವು ಕಲಶಪ್ರಾಯವೆಂದರೆ ತಪ್ಪಾಗಲಾರದು.

    ReplyDelete

Post a Comment