ಹಾಳು ನಿದ್ದೆ , ಹಾವು ಒದ್ದೆ


ಲಾಕ್ ಡೌನ್ ನಲ್ಲಿ  - ಹಾಳು ನಿದ್ದೆ , ಹಾವು ಒದ್ದೆ  
ಲೇಖನ - ಅಶ್ವಿನ್ ಲಕ್ಷ್ಮಣ್

ಕೋರೋನ  ವೈರಸ್ ಎಂದಿಲ್ಲದ ಹಾಗೆ ಜಗತ್ತಿನಾದ್ಯಂತ ಜನರ ತಾಳ್ಮೆ ಪರೀಕ್ಷೆ ಮಾಡಿದೆ. ಪಾತ್ರೆ ತೊಳೆದು ಅಭ್ಯಾಸ ವಿಲ್ಲದ ಗಂಡನಿಗೆ, ಸತತ ೫೦+ ದಿನಗಳು ತಿಂಡಿ ಊಟ ವೆರೈಟಿ ಮಾಡಿದ ಹೆಂಡತಿಗೆ - ಇಲ್ಲಿ ರೋಲ್ reverse ಆಗಿದ್ರೂ ಓಕೆ, ಯಾಕೆ ಅಂದ್ರೆ ಪರಿಣಾಮ ಒಂದೇ

ಬಳಿದು ಕಸವ, ತೊಳೆದು ನೆಲವ
ಮತ್ತು ತರಕಾರಿ, ಬಳಲಿ ಬಾಯಾರಿ
ತಿಂಡಿಯೂಟವ ಮುಗಿಸಿ ಪವಡಿಸಲು 
ದಿನ ಮುಗಿಯುವುದು ಮಂಕುದಿಣ್ಣೆ ।।

।।ಲೋಕಾ: ಸಮಸ್ತಾ: ತದಾಚರೇತ್ ಭವಂತು।। 
- ಅರ್ಥಾತ್ ಲೋಕದಲ್ಲಿ ಎಲ್ಲರಿಗೂ ಇದೇ ನಿತ್ಯ ಕರ್ಮಾನುಷ್ಠಾನ

ಸರಿ, ಹೋದ ವಾರ ಹೀಗೆ ಒಂದು ದಿನ ಊಟ ಮಾಡಿ ಉಶ್ಶಪ್ಪ ಅಂತ ಕಿವಿಗೆ ಹ್ಯಾಂಡ್ಸ್ ಫ್ರೀ ಹಾಕೊಂಡು youtube ನೋಡ್ತಾ ತೂಕಡಿಸ್ತಾ ಇದ್ದೆ. ಶ್ರೀಮತಿಗೆ ತಲೆನೋವು ಅಂತ ಬೇರೆ ರೂಮ್ ನಲ್ಲಿ ಮೊಬೈಲ್ ಆಫ್ ಮಾಡಿ ಮಲಗಿದ್ದಳು . ಸುಮಾರು ಮಧ್ಯಾನ್ಹ :೩೦ ಅಷ್ಟೊತ್ತಿಗೆ ಬಾಗಿಲು ಬಡಿದ ಶಬ್ದ. ಅರೆ ನಿದ್ದೆಯಲ್ಲಿ ಇದ್ದ ನಾನು "ಲೇ, ನೋಡೇ ಯಾರದು " ಅಂತ ಅಂದೆ . ನೋ ರಿಪ್ಲೈ. ಆಮೇಲೆ "ಅಯ್ಯೋ ಇವಳಿಗೆ ತಲೆನೋವು ಅಲ್ವ. ನಾನೇ ನೋಡ್ತೀನಿ" ಅಂತ ಎದ್ದೆ. ಅಷ್ಟ್ರಲ್ಲಿ ಅವಳು ಎದ್ದಿದ್ದಳು. ಬಂದು ಬಾಗಿಲು ತೆಗೆದ್ರೆ -ಎದುರುಮನೆ ,ಪಕ್ಕದಮನೆಯವ್ರು  ಎಲ್ಲರು ನಿಂತಿದ್ದಾರೆ. ನಾವು ಏನಿದು, ಮೋದಿ ಏನಾದ್ರು ಹೇಳಿದ್ದು ಮರೆತುಬಿಟ್ಟವ ಅಂತ ಮುಖ ಮುಖ ನೋಡ್ಕೊಂಡ್ವಿ




ಪಕ್ಕದ್ಮನೆ ರಮೇಶ "ಸಾರ್, ಹಾವು ಬಂದಿದೆ ಅಂತೇ" ಅಂದ್ರು. "ಹಾ..." ಎದೆ ಧಸಕ್ ಅಂತು. ಚೀವ್ ಚೀವ್ ಚೀವ್ ಅಂತ ನಿದ್ರಾ ಪಕ್ಷಿ ಹಾರಿ ಹೋಯಿತು. ರಮೇಶನ ಮಗ ಕಾಂಪೌಂಡ್ ಹತ್ತಿ ಕೂತಿದ್ದ. ಎದುರು ಮನೆ ದೀಪಕ್ "ಸರ್ , ನಾನೇ ನೋಡಿದ್ದು. ನಿಮ್ಮ ಗೇಟ್ ಕೆಳಗೆ ಬಾಲ ಹೋಗಿದ್ದು ಕಾಣಿಸ್ತು. ಒಳಗೆ ಇರ್ಬೇಕು ನೋಡಿ" ಅಂತ ಹೇಳಿದ್ರು. ಅಲ್ಲಿ ಬೈಕ್ ಪಕ್ಕ ಹಳೆ ಸಾಮಾನ್ ಹಾಗೆ ಇತ್ತು. ಅದರಲ್ಲಿ ಒಂದು ಒಡೆದ commode ಬೇರೆ. ಬಾತ್ರೂಮ್ ರೆನೊವಷನ್ ಮಾಡ್ಸಿ ಅದು ಹಳೇದು ಅಲ್ಲೇ ಉಳಿದಿತ್ತು.
ಛೆ , ಕೆಲ್ಸದವರು ಬಿಸಾಕೋಕೆ ಕಷ್ಟ ಅಂತ, ಇನ್ನೊಂದ್ ರೂಮ್ ಕಟ್ಟಸಿದ್ರೆ ಉಪಯೋಗ ಆಗತ್ತೆ ಬಿಡಿ ಸರ್ ಅಂತ ಅಲ್ಲೇ ಇಟ್ಟು ಹೋಗಿದ್ರು.  ಬಿಸಾಕಿದ್ರೆ ಹಾವು commode ಗೆ ಎಂಟ್ರಿ ನೇ ಕೊಡ್ತಾ ಇರ್ಲಿಲ್ಲ. ಸರಿ, ಈಗ ಏನ್ ಮಾಡೋದು ಸರ್ ಅಂತ ರಮೇಶ್ ಮತ್ತೆ ದೀಪಕ್ ಮುಖ ನೋಡಿದೆ. ರಮೇಶ "ಸರ್, ಇಲ್ಲೇ ಒಬ್ಬ ಹಾವು ಹಿಡಿಯೋನು ಇದ್ದಾನೆ, ಅವನ ನಂಬರ್ ಗೆ ಕಾಲ್ ಮಾಡಿ" ಅಂದ. ಕಾಂಪೌಂಡ್ ಹತ್ತಿದ ಮಗ ನಂಬರ್ ಕೊಟ್ಟ. ನಾನು ಡಯಲ್ ಮಾಡಿದೆ

ಕಾಲರ್ ಟ್ಯೂನ್ ಶುರು ಆಯಿತು - "ನಾಗಲೋಕದಲ್ಲಿ ನಾರಾಯಣ ಮಲಗ್ಯಾನೆ ನಾಗ ಕನ್ನಿಕೆಯರು ತೂಗಿರೇ " ಅಂತ. ಪರ್ವಾಗಿಲ್ಲ, ವೃತ್ತಿಗೆ ತಕ್ಕಂತೆ ಭಕ್ತಿ ಇದೆ ಅಂತ ಅನ್ಕೊಂಡೆ. "ಹಲೋ" ಅಂತ ಒಂದು ದನಿ. "ನಮಸ್ಕಾರ ಕುಶಾಲ್, ನೀವು ಹಾವು ಹಿಡೀತೀರಂತೆ, ನಮ್ಮ ಮನೇಲಿ ಒಂದು ಬಂದಿದೆ ಬರ್ತೀರಾ ಈಗ?" ಅಂತ ಕೇಳ್ದೆ. "ಸರ್, ನಾನು ಈಗಿನ್ನು ಎದ್ದೆ, ಸ್ನಾನ ಮಾಡ್ಕೊಂಡು ಬರ್ತೀನಿ. ಅದು ಎಲ್ಲೂ ಹೋಗಲ್ಲ. ನೀವು ಶಬ್ದ ಮಾಡದೆ ನೋಡತಾ ಇರಿ, ಬರ್ತೀನಿ" ಅಂತ ಫೋನ್ ಇಟ್ಟ. ಕಾಲರ್ ಟ್ಯೂನ್ ನಲ್ಲೆ clue ಕೊಟ್ಟಿದ್ನಲ್ಲ ಮನುಷ್ಯ ಭಾರಿ ಶೋಕಿ ಇರ್ಬೇಕು ಅಂತ ಅನ್ಕೊಂಡೆ. ಎಲ್ಲಾರು "ಯಾವಾಗ ಬರ್ತಾನೆ" ಅಂತ ನೋಡ್ತಾ ಇದ್ರು. "೧೦ ನಿಮಷದಲ್ಲಿ ಬರ್ತಾನಂತೆ" ಅಂದೆ . ೧೫ ನಿಮಿಷ ಆಯಿತು. ಇನ್ನು ಬರ್ಲಿಲ್ಲ. ಛೆ, ಎಲ್ಲಿಂದ ಬರಬೇಕೋ ಏನೋ, ಟ್ರಾಫಿಕ್  ಇರ್ಬೇಕು ಅಂತ ಅನ್ನೋಷ್ಟರಲ್ಲಿ - ಅಯ್ಯೋ, ಈಗ ಎಲ್ಲಿ ಟ್ರಾಫಿಕ್ , lockdown ಅಲ್ವ. ಸರಿ, ಇನ್ನೊಂದ್ಸಲ ಫೋನ್ ಮಾಡಿದೆ. "ಸರ್, ಹೊರಟಿದ್ದೀನಿ ೧೦ ನಿಮಷದಲ್ಲಿ ಬಂದೆ" ಅಂತ ಇಟ್ಟಇವೆಲ್ಲ ಸರಿ, ಆದ್ರೆ ಹಾವು ಎಂತದ್ದು - ವಿಷವೋ , ಅಲ್ಲವೋ ಯಾರಿಗೆ ಗೊತ್ತು ? ಕೇವಲ ಬಾಲದಿಂದ ಕಂಡು ಹಿಡಿಯೋದು ಕಷ್ಟನೇ

ಒಂದು ಯಮಹ ಬೈಕ್ ನಲ್ಲಿ ಇಬ್ಬರು ಬಂದು ನಿಂತರು. ಗುಂಗುರು ಕೂದಲು, ಗಡ್ಡ ಮೀಸೆ ಕೂಡ ಗುಂಗುರು ಆಗುವಷ್ಟು ಉದ್ದ ಬೆಳಿಸಿದ್ದ. ಅವನ ಹಿಂದೆ ಒಬ್ಬ ಅಸಿಸ್ಟೆಂಟ್ ಬೇರೆ, ಮಾಸ್ಕ್ ಹಾಕೊಂಡು.  ಸರಿ ಬಂದನಲ್ಲ ಅಂತ ಜಾಗ ತೋರಿಸಿ "ಇನ್ನು ಅಲ್ಲೇ ಇದ್ಯೇನೋ ನೋಡಪ್ಪ" ಅಂದೆ. ಅವನು ಬಗ್ಗಿ ಕೈ ಹಾಕಿದ. "ಸರ್, ಇಲ್ಲೇ ಇದೆ. ಬಾಲ ಸಿಕ್ತು, ತಪ್ಪಿಸ್ಕೊಂಡು ಹೋಯಿತುಅಂದ. ಬಾಲ ಸಿಕ್ಕಿದ್ದು ಖುಷಿನೋ, ಮತ್ತೆ ಎಲ್ಲೋ ಹೋಗಿದ್ದು ದುಗುಡನೋ ಸೈಲೆಂಟ್ ಆಗಿ ನೋಡ್ತಾ ಇದ್ದ್ವಿ. ಅಷ್ಟರಲ್ಲಿ "ಸರ್, ಇಲ್ಲೊಂದು ಬಿಲ ಇದೆ. ಅದೊರಳಗೆ ಹೋಗಿದೆ, ಕಾಂಪೌಂಡ್ ಇಂದ ಡ್ರೈನ್ ಕಡೆ ಹೋದ್ರೆ ಸಿಕ್ಕಂಗೆ ಬಿಡಿ " ಅಂದ. "ಅದು ಹೇಗ್ರೀ ಸಾಧ್ಯ. ಕಾಂಪೌಂಡ್ ಅಡಿಗೆ ಪಾಯ ಕೊರೆಯೋಷ್ಟು ಹಾವಿಗೆ ತಾಕತ್ತಾ?". ಇಲಿಗೆ, ಹೆಗ್ಗಣಕ್ಕೆ ಕೊಟ್ಟಿರೋ ಶಕ್ತಿ ಅದನ್ನ ತಿನ್ನೋ ಹಾವಿಗೆ ಟ್ರಾನ್ಸ್ಫರ್ ಆಗತ್ತಾ? ಏನಪ್ಪಾ ಇದು ವಿಚಿತ್ರಪ್ರಪಂಚ ನಮ್ ಕಣ್ಮುಂದೆ ಹೀoಗೆ ಬದಲಾಗಿ ಹೋಯಿತು. ಕಣ್ಣಿಗೆ ಕಾಣಿಸದೆ ಇರೋ ವೈರಸ್ ಎಲ್ಲರನ್ನು ಮನೇಲಿ ಕೂಡಿಸಿತು. ಸಿಮೆಂಟ್ ಕೊರೆಯೋ ಹಾವು ಉದ್ಭವ ಆಗಿಹೋಯಿತಾ ಅಷ್ಟರಲ್ಲೇ? ಸಧ್ಯ - ಅವನು "ಇಲ್ಲ ಬಿಡಿ ಸರ್. ಸ್ವಲ್ಪ ಮಣ್ಣು ತೆಗೆದು ಜಾಗ ಮಾಡಿದೆ. ಬಿಲ ಅಲ್ಲ ಇದು" ಅಂದ. ನಾನು ಊಹಾಲೋಕದಿಂದ ವಾಪಸ್ ಇಹಲೋಕಕ್ಕೆ ಬಂದೆ

"ಮುಂದೇನು?" ಅಂದೆ. ನೀರು ಇಲ್ಲ ಪೆಟ್ರೋಲ್ ಹಾಕ್ಬೇಕು ಅಂದ. ಒಂದು ಬಕೆಟ್ ಕೊಡಿ ಅಂದ. ಅವನ ಅಸಿಸ್ಟೆಂಟ್ ಸ್ವಲ್ಪ ಸೋಂಬೇರಿ. ಅಲ್ಲೇ ಇದ್ದ ಹೋಸ್ ಪೈಪ್ ನೋಡಿ, "ಇದರಲ್ಲಿ ನೀರು ಬಂದ್ರೆ ಹಂಗೆ ಹಾಕ್ತಿವಿ" ಅಂದ. ಸರಿ ನಲ್ಲಿಗೆ ಜೋಡಿಸಿ ನೀರು ಬಿಟ್ಟೆ. "ಸರ್, ಇದು ತುಂಬಾ ನಿಧಾನ ಫೋರ್ಸ್ ಇಲ್ಲ. ಬಕೆಟ್ ಇಂದ ಕೂಡ ಹಾಕ್ತಿವಿ" ಅಂದ. "ಸರಿ" ಅನ್ನದೆ ವಿಧಿ ಇಲ್ಲ. ಒಂದು ಸೆಕೆಂಡ್ ನೋಡೋಷ್ಟ್ರಲ್ಲಿ ಅವನ ಕೈಗೆ ಹಾವು ಸಿಕ್ಕೇ ಬಿಡ್ತು. "ನೋಡಿ ಸರ್, ಅಡಿ ಉದ್ದ ಇದೆ. ಕೆರೆ ಹಾವು ಅಷ್ಟೇ". "ವಿಷ ನಾ ಕಚ್ಚಿದ್ರೆ?" ಅಂತ ಕೇಳ್ದೆ. ಅದಿಕ್ಕೆ "ಎಲ್ಲ ಪ್ರಾಣಿಗಳು ಕಚ್ಚುತ್ವೆ ಸರ್. ಕೆಲವರಿಗೆ ಬೊಬ್ಬೆ ಆಗ್ಬಹುದು, ಕೆಲವರಿಗೆ ಏನೂ ಆಗಲ್ಲ" ಅಂದ. "ನಾವು ಮಲ್ಲಿಗೆ ಹೂವು ಹಿಡಿದಂಗೆ ಹಿಡ್ಕೋತೀವಿ - ಅದಿಕ್ಕೆ ಟಚ್ ನಲ್ಲೆ ಗೊತ್ತಾಗತ್ತೆ. ಹೂ... " ಅಂದ. ಅದೇ ಬಕೆಟ್ನಲ್ಲೇ ಮಿಕ್ಕ ನೀರಿನಲ್ಲಿ ಮುಳಿಗಿಸಿ ಹಾವನ್ನು ನೀಟಾಗಿ ಪಡುವಲಕಾಯಿ ತೊಳೆದಂಗೆ ತೊಳೆದ. ಹಾವು ಝಳ ಝಳ ಆಯಿತು.  ಹಾವಿಗೂ ಲಾಕ್ಡೌನ್ ನಲ್ಲೆ ಗಂಗಾ ಸ್ನಾನದ ಪುಣ್ಯ ಸಿಕ್ಕಿತು (ಕಾವೇರಿ ಕನೆಕ್ಷನ್ ಇಲ್ಲ, ಬೋರ್ವೆಲ್ ನೀರೇ ನಮಗೆ ಗಂಗಾ ಸಮಾನ).

  


ಇನ್ನೇನು ಪ್ಯಾಂಟ್ಗೆ ಬೆಲ್ಟ್ ಥರ ಹಾಕ್ಕೊಂಡೇ ಬಿಡ್ತಾನೇನೋ ಅನ್ಸ್ತು. ಅವನ ಅಸಿಸ್ಟೆಂಟ್ ಒಂದು ಚೀಲ ಎಸೆದ . ಅದರಲ್ಲಿ ಬೆಲ್ಟ್ ಸುತ್ತಿದ ಹಾಂಗೆ ಹಾವನ್ನ ಸುತ್ತಿ ಇಟ್ಟ. ಮುಂದಿನ ಕ್ರಾಸ್ ನಲ್ಲೆ ಬಿಟ್ಟು ಹೋದರೆ ಮತ್ತೆ ನಮ್  ಮನೆಗೆ ಬರತ್ತೆ ಅಂತ ಡೌಟ್ ಬಂತು. "ಎಲ್ಲಿ ಬಿಡ್ತೀರಾ ?" ಪ್ರಶ್ನೆ. "ಬೇರೆಯವರು ಬನ್ನೇರ್ಘಟ್ಟ ದಲ್ಲಿ ಬಿಡ್ತಾರೆ ಅಂತ ಹೇಳ್ತಾರೆ ಸಾರ್.   ಆದರೆ ನಾವು ಸರ್ಕಾರ ಆದೇಶದಂತೆ - ಕಿಲೋಮೀಟರು ಒಳಗೆ ಖಾಲಿ ಜಾಗದಲ್ಲಿ ಬಿಡ್ತಿವಿ. ಸಿಟಿ ಹಾವುಗಳಿಗೆ ದಿನ ಊಟ ಸಿಗತ್ತೆ, ತಿಂದು ತಿಂದು ಕಾಡಿನಲ್ಲಿ ಬದುಕೋಕೆ ಆಗಲ್ಲ ಅವಕ್ಕೆ. ಒಂದೆರಡು ದಿನ ಊಟ ಸಿಗದೇ ಇದ್ರೆ  ಸತ್ತೇ ಹೋಗುತ್ತವೆ, ಅದಿಕ್ಕೆ..." ಅಂತ ಉದ್ದೇಶ ತಿಳಿಸಿದ. ಇಲ್ಲೇ ಹತ್ತಿರದಲ್ಲಿ ಬಿಟ್ಟರೆ ಒಳ್ಳೆ sustainable ಬಿಸಿನೆಸ್ ಮಾಡೆಲ್ ಅನ್ಸ್ತು. ಆಗಾಗ ಯಾರಾದ್ರೂ ಕರೀತಾನೆ ಇರ್ತಾರೆ, ಅಲ್ವಾ. ಸರಿಅವನಿಗೆ "ಹಾವು-ವೀಳ್ಯ" ದಕ್ಷಿಣೆ ಕೊಟ್ಟು ಕಳಿಸಿದ್ದಾಯಿತು.
ನಾವು ತಿನ್ನೋ ಆಹಾರ ತಿಂದು  ಸಿಟಿ ಹಾವುಗಳಿಗೆ ಡಯಾಬಿಟಿಸ್, ಬಿಪಿ ಖಾಯಿಲೆಗಳು ಇರಬಹುದಾ ಅಂತ ವಾಪಸ್ ನನ್ನ ಊಹಾಲೋಕಕ್ಕೆ ತೆರಳಿ ನನ್ನ ಮಾಧ್ಯಾಹ್ನಿಕ ಮುಂದೆವರೆಸಲು ಹೊರಟೆ

Comments

  1. ಭಾರತದ ಹೊಸಾ ಅನುಭವ...

    ReplyDelete
  2. ಸ್ವಾರಸ್ಯವಾದ ಘಟನೆ, ಮನಮುಟ್ಟುವ ಶೈಲಿ.

    ReplyDelete
  3. ಲಾಕ್ದೌನ್ ಸಮಯದಲ್ಲಿ ಎಲ್ಲಾ ಮನೇಲಿ ಇದ್ದದ್ದೂ ಒಂದುರೀತಿ ಅನುಕೂಲವಾಯ್ತು ಅನ್ನಿ. ಸಧ್ಯ ಅಷ್ಟರಲ್ಲೇ ಮುಗಿತಲ್ಲ. ಲೇಖನ ಸ್ವಾರಸ್ಯಕರವಾಗಿದೆ. ಹಾವಿನ ಜೊತೆಗೆ ಅದನ್ನು ಹಿಡಿಯುವವರ ವರ್ಣನೆ ಕೂಡಾ ಓದಲು ಮಜಾ ಇದೆ. ನಮ್ಮೂರಿನಲ್ಲಿ ಈ ರೀತಿಯ ವಿಷಯಗಳು, ಸನ್ನಿವೇಶಗಳು ಕಥೆಗಳಿಗೆ ಬರವಿಲ್ಲ, ಬರೆಯುತ್ತಿರಿ ಅಶ್ವಿನ್

    ReplyDelete
    Replies
    1. ಖಂಡಿತ ಸರ್,  ಧನ್ಯವಾದ 

      Delete
  4. Good narration added humor and looks like this happened in our home land ?

    ReplyDelete

Post a Comment