ಆಹಾರವೇ ಔಷಧ - ಅರಿಶಿನ


ಆಹಾರವೇ ಔಷಧ - ಅರಿಶಿನ
Article by Raji Jayadev
Accredited Practicing Dietitian
Sydney

ಹಲವಾರು ಮಾರಕ ರೋಗಗಳಿಗೆ ಉತ್ತಮ ಜೀವನಶೈಲಿಯೇ ಅತಿ ಪ್ರಭಾವಶಾಲಿಯಾದ ಔಷಧಿ ಎಂದು ನಮಗೆಲ್ಲ ತಿಳಿದಿದೆ. ಇದರಲ್ಲಿ ಅತಿ ಮುಖ್ಯವಾದದ್ದು ಆರೋಗ್ಯಕರವಾದ ಆಹಾರ ಸೇವನೆ. ಉತ್ತಮ ಆಹಾರ ಸೇವನೆಯಿಂದ ಹಲವಾರು ಮಾರಕ ರೋಗಗಳನ್ನು ನಿಯಂತ್ರಣದಲ್ಲಿಡಬಹುದೆಂದು ವೈಜ್ಞಾನಿಕ ಅಧ್ಯಯನಗಳಿಂದ ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಅರಿಶಿನವನ್ನು ಔಷಧಿಯಾಗಿ ಬಳಸುವ ಬಗೆಯನ್ನು ತಿಳಿಯೋಣ.
ಅರಿಶಿನದ ಅನೇಕ ಆರೋಗ್ಯಪೂರಕ ಮತ್ತು ಔಷಧೀಯ ಗುಣಗಳಿಗೆ ಕಾರಣ ಅದರಲ್ಲಿರುವ ಹಲವಾರು ರಾಸಾಯನಿಕಗಳು, ಮುಖ್ಯವಾಗಿ ಕರ್ಕ್ಯುಮಿನ್ ಮತ್ತು ಟರ್ಮರೋನ್.
ಮಾರುಕಟ್ಟೆಯಲ್ಲಿ ದೊರಕುವ ಅರಿಶಿನ ಎರಡು ಬಗೆಯದು.
1. ಕೇಸರಿ ಬಣ್ಣದ, ಶೇಕಡಾ 3.5 ರಿಂದ 4 ರಷ್ಟು ಕರ್ಕ್ಯುಮಿನ್ ಹೊಂದಿರುವ ಅಲೆಪ್ಪಿ ಅರಿಶಿನ.
2. ಹಳದಿ ಬಣ್ಣದ, ಶೇಕಡಾ 1.5 ರಿಂದ 1.8 ರಷ್ಟು ಕರ್ಕ್ಯುಮಿನ್ ಹೊಂದಿದ ಮದ್ರಾಸ್ ಅರಿಶಿನ.
ಅತಿ ಹೆಚ್ಚು ಕರ್ಕ್ಯುಮಿನ್ ಹೊಂದಿರುವ ಅಲೆಪ್ಪಿ ಅರಿಶಿನವನ್ನು ಉಪಯೋಗಿಸುವುದು ಆರೋಗ್ಯಕ್ಕೆ ಒಳ್ಳೆಯದು.
ಅರಿಶಿನವನ್ನು ಒಳ್ಳೆಯ ಹೆಸರು ಪಡೆದಿರುವ ಅಂಗಡಿಗಳಲ್ಲೇ ಖರೀದಿಸಿ. ಏಕೆಂದರೆ ಅರಿಶಿನಕ್ಕೆ ಅಗ್ಗಬೆಲೆಯ, ವಿಷಪೂರಿತ ‘ಲೆಡ್ ಆಕ್ಸೈಡ್’,  ‘ಮೆಟಾನಿಲ್ ಯೆಲ್ಲೊ’  ಅಥವಾ ‘ಆಸಿಡ್ ಯೆಲ್ಲೊ’ ಕಲಬೆರಕೆ ಮಾಡಿದ ಹಲವಾರು ಸಂಗತಿಗಳು ವರದಿಯಾಗಿವೆ.   
ಅಲಪ್ಪಿ ಅರಿಶಿನ
ಹಸಿ ಅರಿಶಿನದ ಕೊಂಬನ್ನು 2 - 3 ವಾರಗಳ ಕಾಲ ಫ್ರಿಡ್ಜ್ ನಲ್ಲಿ ಅಥವಾ 6 ತಿಂಗಳುಗಳ ಕಾಲ ಫ್ರೀಜರ್ ನಲ್ಲಿ ಶೇಖರಿಸಿಡಬಹುದು. 
ಮದ್ರಾಸ್ ಅರಿಶಿನ
ಅರಿಶಿನದ ಔಷಧೀಯ ಗುಣಗಳ ಬಗ್ಗೆ, ಈ ವರೆಗೆ ನಡೆದ ಸಂಶೋಧನೆಗಳಿಂದ ಮತ್ತು ಅಧ್ಯಯನಗಳಿಂದ ತಿಳಿದುಬಂದಿರುವುದೇನೆಂದರೆ, ಮುಖ್ಯವಾಗಿ :
1. ಆರ್ಥ್ರೈಟಿಸ್ ನಿಂದ ಉಂಟಾಗುವ ಕೀಲುನೋವನ್ನು ತಗ್ಗಿಸುತ್ತದೆ.
2. ರಕ್ತ ಹೆಪ್ಪುಗಟ್ಟುವುದನ್ನು ತಗ್ಗಿಸಿ, ರಕ್ತ ಪರಿಚಲನೆಯನ್ನು ಸುಗಮಗೊಳಿಸುತ್ತದೆ.
3. ವಸಡಿನ ಉರಿಯೂತವನ್ನು ತಗ್ಗಿಸಲು ಅರಿಶಿನದ ನೀರಿನಿಂದ ಬಾಯಿ ಮುಕ್ಕಳಿಸುವುದು ಇತರ ಔಷಧಿಗಳಷ್ಟೇ ಫಲಕಾರಿ .

ಅರಿಶಿನದಲ್ಲಿ ಆರೋಗ್ಯದಾಯಕ ಗುಣಗಳಿವೆ ಎಂದು ಅನೇಕಾನೇಕ ಅಧ್ಯಯನಗಳಿಂದ ಸಾಬೀತಾಗಿದೆ. ಆದರೆ, ಅಧಿಕ ಸಂಖ್ಯೆಯ ಅಧ್ಯಯನಗಳು ನಡೆದಿರುವುದು ಪ್ರಯೋಗಶಾಲೆಯಲ್ಲಿ ಮತ್ತು ಪ್ರಾಣಿಗಳಲ್ಲಿ. ಮಾನವರಲ್ಲಿ ನಡೆದ ಅಧ್ಯಯನಗಳು ಕೆಲವೇ ಕೆಲವು. ಆದ್ದರಿಂದ ರೋಗ ಚಿಕಿತ್ಸೆಗೆ ಬೇಕಾದ ನಿರ್ದಿಷ್ಟ ಪ್ರಮಾಣ ತಿಳಿದಿಲ್ಲ.

ಆರೋಗ್ಯ ರಕ್ಷಣೆಗೆ ಎಷ್ಟು ಬೇಕು?
ಯುನೈಟೆಡ್ ಸ್ಟೇಟ್ಸ್ ನ ಮೇರಿಲ್ಯಾಂಡ್ ಯೂನಿವರ್ಸಿಟಿ, ಇದುವರೆಗೆ ನಡೆದ ಹಲವಾರು ಅಧ್ಯಯನಗಳನ್ನು ಪರಿಶೀಲಿಸಿ ಈ ರೀತಿ ಹೇಳಿಕೆ ಕೊಟ್ಟಿದೆ. ಆರೋಗ್ಯ ರಕ್ಷಣೆಗೆ ಒಬ್ಬರಿಗೆ, ಒಂದು ದಿನಕ್ಕೆ 1/2 ಅಥವಾ 1 ಟೀಸ್ಪೂನ್ (1 ರಿಂದ 3 ಗ್ರಾಂ) ಅರಿಶಿನದ ಪುಡಿ ಬೇಕು ಮತ್ತು ದಿನವೂ ಸೇವಿಸಬೇಕು.

ಅಪಾಯ ಮತ್ತು ಮುನ್ನೆಚ್ಚರಿಕೆ 
ದಿನಕ್ಕೆ ಒಂದೆರಡು ಟೀಸ್ಪೂನ್  (3 - 6 ಗ್ರಾಂ) ಅರಿಶಿನವನ್ನು ಆಹಾರ ಪದಾರ್ಥಗಳಲ್ಲಿ ಮತ್ತು ಪಾನೀಯಗಳಲ್ಲಿ ಉಪಯೋಗಿಸಬಹುದು. ಆದರೆ ಅರಿಶಿನದ ಮತ್ತು ಕರ್ಕ್ಯುಮಿನ್ ಮಾತ್ರೆಗಳನ್ನು ಸೇವಿಸಬಾರದು.

ಆರೋಗ್ಯದಾಯಕ ಪಾನೀಯ: ಅರಿಶಿನದ ಹಾಲು
ಈ ಪಾನೀಯಕ್ಕೆ ಕೊಬ್ಬುಳ್ಳ ಹಾಲನ್ನೇ ಉಪಯೋಗಿಸಿ. ಏಕೆಂದರೆ ಅರಿಶಿನದಲ್ಲಿರುವ ಕರ್ಕ್ಯುಮಿನ್ ಕೊಬ್ಬಿನಲ್ಲಿ ಮಾತ್ರ ಕರಗುತ್ತದೆ. ಕರ್ಕ್ಯುಮಿನ್ ರಕ್ತಗತವಾಗಲು ಕಾಳುಮೆಣಸಿನಲ್ಲಿರುವ ಪೈಪರಿನ್ ಸಹಕರಿಸುತ್ತದೆ. ಏಲಕ್ಕಿ, ಲವಂಗ, ಚಕ್ಕೆ ಮುಂತಾದ ಮಸಾಲೆ ಪದಾರ್ಥಗಳು ಅತಿಹೆಚ್ಚು ಆಂಟಿ-ಆಕ್ಸಿಡೆಂಟ್ ಗಳನ್ನು ಹೊಂದಿವೆ. ಜೇನುತುಪ್ಪ ಕೆಮ್ಮು ನಿವಾರಕ ಎಂದು ವರ್ಲ್ಡ್ ಹೆಲ್ತ್ ಆರ್ಗನೈಜೇಷನ್ ಹೇಳಿಕೆ ಕೊಟ್ಟಿದೆ. ಕೆಮ್ಮು, ಶೀತ ಮತ್ತು ನೆಗಡಿಯಾದಾಗ ಈ ಪಾನೀಯವನ್ನು ಸೇವಿಸಲು ಮರೆಯದಿರಿ.  

1.   4 ಮೆಣಸಿನ ಕಾಳು, 2 ಏಲಕ್ಕಿ, 2 ಲವಂಗ, ಒಂದು ಸಣ್ಣ ಚೂರು ಚಕ್ಕೆ, ಇವುಗಳನ್ನು ಕುಟ್ಟಿ ಪುಡಿಮಾಡಿ.
2.   ಒಂದು ಸಣ್ಣ ಚೂರು ಜಜ್ಜಿದ ಹಸಿ ಅರಿಶಿನದ ಕೊಂಬು ಅಥವಾ 1/2 ಟೀಸ್ಪೂನ್ ಅರಿಶಿನದ ಪುಡಿ. 
3.   ಒಂದು ಲೋಟ ಹಾಲಿಗೆ, ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಬೆರೆಸಿ, ಸಣ್ಣ ಉರಿಯಲ್ಲಿ 2 - 3 ನಿಮಿಷ ಕುದಿಸಿ. ನಂತರ ಇದನ್ನು ಶೋಧಿಸಿ, ಜೇನುತುಪ್ಪ ಬೆರಸಿ ಕುಡಿಯಿರಿ.  

--------
ಮಸಾಲಾ ಪುಡಿ
12 ಏಲಕ್ಕಿ, 12 ಲವಂಗ, 2 cm ಚಕ್ಕೆ, 1 ಟೀಸ್ಪೂನ್  ಕರಿ ಮೆಣಸಿನ ಕಾಳು.
ಇವೆಲ್ಲವನ್ನು ಕುಟ್ಟಿ ಪುಡಿಮಾಡಿ ಇಟ್ಟುಕೊಂಡರೆ ಒಂದು ವಾರಕ್ಕೆ ಸಾಕಾಗುತ್ತದೆ. ಅರಿಶಿನದ ಹಾಲಿಗೆ ಈ ಪುಡಿಯೊಂದಿಗೆ ಅರಿಶಿನ ಸೇರಿಸಿ, ಮಸಾಲಾ ಟೀ ಗೆ ಶುಂಠಿ ಸೇರಿಸಿ.    

Comments

  1. ಮದ್ರಾಸ್ಅರಿಶಿನ ಹಾಗೂ ಬೇರೆ ಅರಿಶಿನಕ್ಕೆ ವ್ಯತ್ಯಾಸವೇನು ಮತ್ತು ಹೇಗೆ ಕಂಡು ಹಿಡಿಯುವುದು ವಿವರಿಸಿ.

    ReplyDelete
    Replies
    1. ಅಲೆಪ್ಪಿ ಅರಶಿನ ದಟ್ಟ ಕೇಸರಿ ಬಣ್ಣ ಮತ್ತು ಮದ್ರಾಸ್ ಅರಶಿನ ಹಳದಿ ಬಣ್ಣ ಹೊಂದಿರುತ್ತದೆ.
      Herbies online store ನಲ್ಲಿ ಅರಶಿನದ ಪ್ಯಾಕೆಟ್ ಮೇಲೆ ಹೆಸರು ನಮೂದಿಸಿರುತ್ತಾರೆ.
      harris farm market ನಲ್ಲಿ ಹಸಿ ಅರಶಿನದ ಕೊಂಬು ಸಿಗುತ್ತದೆ. ಇದು ಹಾಲಿನಲ್ಲಿ ಮತ್ತು ನೀರಿನಲ್ಲಿ ಚೆನ್ನಾಗಿ ಕರಗುತ್ತದೆ. ಅಲ್ಲದೆ ಇದನ್ನು ಆರು ತಿಂಗಳುಕಾಲ ಫ್ರೀಜರ್ ನಲ್ಲಿಡಬಹುದು.

      Delete
    2. The above reply is from me, Raji Jayadev. I don't know why it is saying unknown though I replied from rajijayadev70@gmail.com account.

      Delete
    3. In fact I was confused. Thanks for clarifying it Madam .

      Delete
  2. ಅರಿಶಿನದ ಮಹತ್ವ ಈಗ ಪಾಶ್ಚಿಮಾತ್ಯದಲ್ಲೂ ಹೆಚ್ಚು ಬಳಕೆ ಮತ್ತು ಪ್ರಸಿದ್ಧಿ ಆಗುತ್ತಿರುವುದು ಕಾಣುತ್ತಿದೆ. ಚಿತ್ರಾನ್ನದಿಂದ ಹಿಡಿದು ಎಲ್ಲ ಮಸಾಲೆಪುಡಿಗಳಲ್ಲಿ ಮನೆಯಲ್ಲಿ ಉಪಯೋಗಿಸುತ್ತರುವುದು ಕಾಣುತ್ತಿದ್ದೇವೆ. ಮಕ್ಕಳಿದ್ದಾಗ ಬಿದ್ದು ಗಾಯವಾದಾಗ ಅರಿಶಿನ ಹಚ್ಚುತ್ತಿದ್ದುದೂ ನೆನೆಪಿಗೆ ಬರುತ್ತದೆ. ತಮ್ಮ ಲೇಖನ ಓದಿದ ನಂತರ ಅದರ ಒಳಗಿನ ವಿಷಯ ತಿಳಿದು ತುಂಬಾ ಖುಷಿಯಾಯ್ತು. ಭಾರತಕ್ಕೆ ಒಂದು ಕಾಲದಲ್ಲಿ ಮಸಾಲೆ ಪದಾರ್ಥಗಳಿಗಾಗೇ ವಿದೇಶಿಯರು ವ್ಯಾಪಾರಕ್ಕಾಗಿ ಬರುತ್ತಿದ್ದುದು ಇಲ್ಲಿ ನೆನೆಯಬಹುದು.

    ReplyDelete

Post a Comment