ಜೀರಿಗೆ - ಆಹಾರವೇ ಔಷಧ


ಜೀರಿಗೆ 

ಆಹಾರವೇ ಔಷಧ
Article by Raji Jayadev
Accredited Practicing Dietitian
Sydney





ಹಲವಾರು ಮಾರಕ ರೋಗಗಳಿಗೆ ಉತ್ತಮ ಜೀವನಶೈಲಿಯೇ ಅತಿ ಪ್ರಭಾವಶಾಲಿಯಾದ ಔಷಧಿ ಎಂದು ನಮಗೆಲ್ಲ ತಿಳಿದಿದೆ. ಇದರಲ್ಲಿ ಅತಿ ಮುಖ್ಯವಾದದ್ದು ಆರೋಗ್ಯಕರವಾದ ಆಹಾರ ಸೇವನೆ. ಉತ್ತಮ ಆಹಾರ ಸೇವನೆಯಿಂದ ಹಲವಾರು ಮಾರಕ ರೋಗಗಳನ್ನು ನಿಯಂತ್ರಣದಲ್ಲಿಡಬಹುದೆಂದು ವೈಜ್ಞಾನಿಕ ಅಧ್ಯಯನಗಳಿಂದ ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಜೀರಿಗೆಯನ್ನು ಔಷಧಿಯಾಗಿ ಬಳಸುವ ಬಗೆಯನ್ನು ತಿಳಿಯೋಣ.

ಹಲವಾರು ದೇಶಗಳಲ್ಲಿ ಜೀರಿಗೆಯನ್ನು ಸಾಂಪ್ರದಾಯಿಕ ಚಿಕಿತ್ಸೆಗೆ ಬಳಸುತ್ತಾರೆ. ಆದರೆ ಜೀರಿಗೆಯನ್ನು ರೋಗ ನಿವಾರಣೆಗೆ ಔಷಧಿಯಾಗಿ ಉಪಯೋಗಿಸಬಹುದು ಎನ್ನುವುದಕ್ಕೆ ಯಾವ ವೈಜ್ಞಾನಿಕ ಪುರಾವೆಯೂ ಇಲ್ಲ.  

ಆಸ್ಪಿರಿನ್ (Aspirin™) ಮಾತ್ರೆಗಳನ್ನು ನೂರಾರು ವರ್ಷಗಳಿಂದ ನೋವು ನಿವಾರಣೆಗೆ, ಜ್ವರ ಮತ್ತು ಉರಿಯೂತದ (inflammatory diseases e.g. heart disease) ಚಿಕಿತ್ಸೆಗೆ ಬಳಸಲ್ಪಟ್ಟಿದೆ. ಆಸ್ಪಿರಿನ್ ಮಾತ್ರೆಯಲ್ಲಿರುವ ಪ್ರಮುಖ ಘಟಕ ಸ್ಯಾಲಿಸಿಲಿಕ್ ಆಸಿಡ್ (salicylic acid). ಬಗೆಬಗೆಯ ಹಣ್ಣುಗಳು, ತರಕಾರಿಗಳು ಮತ್ತು ಸಾಂಬಾರ ಪದಾರ್ಥಗಳು ಸ್ಯಾಲಿಸಿಲಿಕ್ ಆಸಿಡ್ ಅನ್ನು ಹೊಂದಿವೆ. ಅಚ್ಚಕಾರದ ಪುಡಿಯಲ್ಲಿ ಮತ್ತು ಅರಶಿನದ ಪುಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಆದರೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಸ್ಯಾಲಿಸಿಲಿಕ್ ಆಸಿಡ್ ಇರುವುದು ಜೀರಿಗೆಯಲ್ಲಿ. ಒಂದು ಟೀ ಸ್ಪೂನ್ ಜೀರಿಗೆಯಲ್ಲಿ ಒಂದು ಸಣ್ಣ ಆಸ್ಪಿರಿನ್ ಮಾತ್ರೆಯಲ್ಲಿರುವಷ್ಟು ಸ್ಯಾಲಿಸಿಲಿಕ್ ಆಸಿಡ್ ಇದೆ. ಆದ್ದರಿಂದ ನಾವು ಪ್ರತಿದಿನ ಜೀರಿಗೆಯನ್ನು ಉಪಯೋಗಿಸಿದರೆ ನೋವು ನಿವಾರಿಸುವ ಸ್ಯಾಲಿಸಿಲಿಕ್ ಆಸಿಡ್ ನಮ್ಮ ದೇಹಕ್ಕೆ ದೊರೆಯಬಹುದು. ಭಾರತದ ಜನಪ್ರಿಯ ಪಾನೀಯಗಳಾದ ಜೀರಾಪಾನಿ ಮತ್ತು ಲಸ್ಸಿಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಜೀರಿಗೆ ನೀರು
ಅರ್ಧ ಟೀ ಚಮಚೆ ಜೀರಿಗೆ ಕಾಳನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ ರಾತ್ರಿಯಿಡೀ ನೆನೆಯಿಡಿ. ಮಾರನೆಯ ದಿನ ಶೋಧಿಸಿ, ಉಪಯೋಗಿಸಿ. ಇಷ್ಟವಿದ್ದಲ್ಲಿ ಕಾಲು ಚಮಚ ಅಜ್ವಾನವನ್ನು ಸೇರಿಸಬಹುದು.
ಅಥವಾ
ಅರ್ಧ ಟೀ ಚಮಚೆ ಜೀರಿಗೆಪುಡಿಯನ್ನು ಎರಡು ಲೋಟ ಬಿಸಿ ನೀರಿಗೆ ಹಾಕಿಡಿ. ತಣಿದ ಮೇಲೆ ಒಂದು ಟೀ ಸ್ಪೂನ್ ನಿಂಬೆ ರಸ ಮತ್ತು (ಇಷ್ಟವಿದ್ದಲ್ಲಿ) ಜೇನುತುಪ್ಪ ಸೇರಿಸಿ, ಕುಡಿಯಿರಿ.

ಲಸ್ಸಿ
1/2  ಲೋಟ ಕೊಬ್ಬು ರಹಿತ ಮೊಸರು
1/2 ಟೀಸ್ಪೂನ್ ಜೀರಿಗೆ ಪುಡಿ
1/4 ಟೀಸ್ಪೂನ್ ಉಪ್ಪು (ಇಷ್ಟವಿದ್ದಲ್ಲಿ)
1 ½ ಲೋಟ ನೀರು
ಒಂದು ಪಾತ್ರೆಯಲ್ಲಿ ಮೊಸರು, ಜೀರಿಗೆ ಪುಡಿ, ಉಪ್ಪು ಹಾಕಿ, ನೀರು ಸೇರಿಸುತ್ತಾ ಫೋರ್ಕ್ ಅಥವಾ ವಿಸ್ಕ್ ನಿಂದ (whisk) ಕಡೆಯಿರಿ.

ಜೀರಿಗೆ ಪುಡಿಯನ್ನು ತಯಾರಿಸುವ ಬಗೆ
ಒಂದು ದಪ್ಪ ತಳದ ಪಾತ್ರೆಯನ್ನು ಸ್ವಲ್ಪ ಬಿಸಿ ಮಾಡಿ ಜೀರಿಗೆಯನ್ನು ಹಾಕಿ, ಮಂದ ಸುವಾಸನೆ ಬರುವವರೆಗೆ ಹುರಿಯಿರಿ. ಸೀದು ಹೋಗದಂತೆ ಎಚ್ಚರ ವಹಿಸಿ. ತಣ್ಣಗಾದ ಮೇಲೆ ನುಣ್ಣಗೆ ಪುಡಿಮಾಡಿ, ಬಿಗಿಯಾದ ಮುಚ್ಚಳವಿರುವ ಒಂದು ಗಾಜಿನ ಜಾಡಿಯಲ್ಲಿ ಹಾಕಿಡಿ.   

ಎಚ್ಚರಿಕೆ: ವೈದ್ಯರು ನಿಮಗೆ ಆಸ್ಪಿರಿನ್ ಮಾತ್ರೆಗಳನ್ನು ತೆಗೆದುಕೊಳ್ಳಲು ಹೇಳಿದ್ದರೆ, ಅದನ್ನು ನಿಲ್ಲಿಸಬೇಡಿ.

Comments

  1. ದಿನನಿತ್ಯದ ಒಗ್ಗರಣೆ, ಅಕ್ಕಿರೊಟ್ಟಿಯೊಡನೆ, ಜೀರಿಗೆ ಪೆಪ್ಪರ್ಮಿಂಟ್ -- ಹೀಗೆ ಇವುಗಳಿಂದ ಶುರುವಾದ ಜೀರಿಗೆ ಪ್ರೀತಿ, ಇಂದಿಗೂ ಅವಗವಾಗ ಜೀರಿಗೆ ಸೇವನೆ ನಡೆಯುತ್ತಿರುತ್ತದೆ. ಇದರಲ್ಲಿ ಸ್ಯಾಲಿಸಿಲಿಕ್ ಆಸಿಡ್ ಇರುವುದರ ಮಾಹಿತಿ ತಿಳಿಸಿ ಇದರ ಬಗೆಗಿನ ಪ್ರೀತಿಯನ್ನು ಇಮ್ಮಡಿಗೊಳಿಸಿದಿರಿ. ಧನ್ಯವಾದಗಳು.

    ReplyDelete
  2. I remember my mother used to mash this seeds with tamarind and make lollipops.Now I understand the importance of this.Very informative and simple explanation. Thanks Madam

    ReplyDelete
  3. Your articles are very convenient to read and understand. Specially I liked the Lassi recipe. ದಿನ ಬಳಕೆಯಲ್ಲಿ ನಮ್ಮ ಭಾರತೀಯ ಆಹಾರ ಪದ್ಧತಿಯಲ್ಲಿ ಜೀರಿಗೆ ಎಷ್ಟು ಅಡಕವಾಗಿವೆ. ಮೆಣಸಿನಪುಡಿ,ಗೊಜ್ಜು,ಸಾರು, ಸಾಂಬಾರು ಅಲ್ಲದೇ ಒಗ್ಗರಣೆಗೂ ಬಳಸುತ್ತೇವೆ. ಹಿಂದಿನ ಲೇಖನಗಳಂತೆ ಇದೂ ಒಂದು ಅಮೂಲ್ಯ ಮಾಹಿತಿಯ ಲೇಖನ. ತಮ್ಮ ದ್ವಿದಳ ಧಾನ್ಯ ಲೇಖನ ದಿನಕ್ಕೆ ೨೦-೩೦ ಜನ ಪ್ರಪಂಚದ ಮೂಲೆಮೂಲೆಗಳಲ್ಲಿಯೂ ಓದುತ್ತಿದ್ದಾರೆ. ಧನ್ಯವಾದಗಳು

    ReplyDelete
  4. ನಾವು ದಿನನಿತ್ಯ ಬಳಸುವ ಸಾಂಬಾರ ಪದಾರ್ಥಗಳ ಔಷಧೀಯ ಗುಣಗಳನ್ನು ಸರಳವಾಗಿ ತಿಳಿಸಿಕೊಡುವುದಷ್ಟೇ ಅಲ್ಲದೆ, ಅವುಗಳನ್ನು ಬಳಸಬೇಕಾದ ವಿಧಾನ, ಅವುಗಳಿಂದ ಮಾಡಬಹುದಾದ ರುಚಿಕರವಾದ ಅಡುಗೆ ಪದಾರ್ಥಗಳು, ಎಲ್ಲವನ್ನೂ ವಿವರಿಸುವ ಮೂಲಕ ಇದೊಂದು ಬಹಳ ಉಪಯುಕ್ತ ಅಂಕಣವಾಗಿದೆ. ಇದು ಶ್ರೀಮತಿ ರಾಜೇಶ್ವರಿಯವರಿಗೆ ನಮ್ಮ ಸಮುದಾಯದ ಆರೋಗ್ಯದ ಬಗ್ಗೆ ಇರುವ ಕಾಳಜಿಯನ್ನು ಕೂಡ ತೋರುತ್ತದೆ. ವೈಯಕ್ತಿಕವಾಗಿ ನನಗಂತೂ ಬಹಳವೇ ಉಪಯೋಗವಾಗುತ್ತಿದೆ.

    ReplyDelete

Post a Comment