ನಾನು ಬಾಣಸಿಗನಾದಾಗ

ನಾನು ಬಾಣಸಿಗನಾದಾಗ

ಹಾಸ್ಯ ಲೇಖನ - ಶ್ರೀ ಅಣಕು ರಾಮನಾಥ್

‘ಹೋಂ ಐಸೊಲೇಷನ್’ ಡಿಕ್ಲೇರಿಸಿತು ವೈದ್ಯಪಡೆ.
ವಿದೇಶದಿಂದ ಹೆಂಡತಿ, ಮಗಳಿಬ್ಬರೂ ‘ಊಟಕ್ಕುಂಟು ನೋಟಕ್ಕಿಲ್ಲ’ ಸ್ಥಿತಿಯಲ್ಲಿ ರೂಮ್ ಸೇರಿದರು. ಅವರಿಬ್ಬರ ಪ್ರಾವೀಣ್ಯತೆಯ ಅಡಿಗೆ ಕೆಲಸ ನನ್ನ ಪಾಲಿಗೆ! ಸಚಿನ್ ತೆಂಡುಲ್ಕರ್‌ಗೆ ಬದಲಿ ಆಟಗಾರನಾಗಿ ಇಶಾಂತ್ ಶರ್ಮಾ ಬ್ಯಾಟಿಂಗಿಗೆ ಬಂದಂತಾಯಿತು.
ಗುಡ್ ಓಲ್ಡ್ ದಿನಗಳಲ್ಲಿ ಅಮ್ಮ ಹೊರಗಾದಾಗ ಈ ತರಹದ ‘ಸಬ್‌ಸ್ಟಿಟ್ಯೂಟ್ ಕುಕ್ಕ’ ಆಗಿದ್ದರೂ, ಆಗ ‘ಡಿಸ್ಟೆನ್ಸ್ ಎಜುಕೇಷನ್’ ಮೂಲಕ ಕುಳಿತಲ್ಲಿಂದಲೇ ಇಷ್ಟೇ ಖಾರ, ಉಪ್ಪು, ಹುಳಿಗಳ ಪಾಠ ನಡೆಯುತ್ತಿತ್ತು. ಈಗ ‘ಸರ್ವತಂತ್ರ ಸ್ವತಂತ್ರ’ನಾಗಿ ‘ಸೌಟೇಶ ಲೋಟೇಶ ಪಾತ್ರೇಶ’ ಆಗುವುದರ ಮೂಲಕ ಜಗ್ಗೇಶನ ಡಿಸ್ಟೆಂಟ್ ಕಸಿನ್ ಆಗಿ ಪಾಕಕೂಪಕ್ಕೆ ಇಳಿದೆ.

ಜಗತ್ತನ್ನು ಅತಿ ಹೆಚ್ಚು ಕಾಡುವ ಪ್ರಶ್ನೆಯಾದ ‘ಏನ್ತಿಂಡಿ ಮಾಡೋದು?’ ಧುತ್ತನೆ ಎದುರಾಯಿತು. ಥಟ್ಟನೆ ಮಹಾಕವಿ ಕಾಳಿದಾಸನೂ ನೆನಪಾಗಿ ಅವನ ಬಿರುದಾದ ‘ಉಪಮಾ ಕಾಳಿದಾಸಸ್ಯ’ದಲ್ಲೇ ಉತ್ತರವೂ ಸಿಕ್ಕಿತು. ಜಗದಲ್ಲಿ ಉಪ್ಪಿಟ್ಟೆಂದರೆ ಕಾಳಿದಾಸನ ಉಪ್ಪಿಟ್ಟೇ. ಅವನ ಕವನಗಳನ್ನು ನಕಲು ಮಾಡಿದವರು ‘ಕಾಳಿದಾಸ’ ಎನ್ನುವುದರ ಬದಲು ‘ಖಾಲಿದೋಸೆ’ ಎಂದು ಬರೆದುದರ ಪರಿಣಾಮವಾಗಿ ಕರುನಾಡಿನ ಎರಡನೆಯ ತಿಂಡಿ ಕಾವಲಿಯೇರಿತ್ತಂತೆ.

ಉಪ್ಪಿಟ್ಟಿಗೆ ಅಗತ್ಯವಾದುದನ್ನು ಅಣಿ ಮಾಡಿಕೊಳ್ಳಬೇಕಲ್ಲ! ಶುರುವಾಯಿತು ಪೀಕಲಾಟ. ಒಂದಾನೊಂದು ಕಾಲದಲ್ಲಿ ಸಾರು ಮಾಡಲೆಂದು ನೀರಿಗೆ ಬೇಳೆ ಸುರಿದು ಬತ್ತಿ ಸ್ಟೌವಿನ ಮೇಲೆ ಇಟ್ಟಿದ್ದೆ. ಸ್ಟೌವಿನ ಎಣ್ಣೆ ಮುಗಿದರೂ ಬೇಳೆ ಹೇಗಿತ್ತೋ ಹಾಗೆಯೇ ಇದ್ದಂತೆ ಕಾಣುತ್ತಿತ್ತು. ಮೂಲೆಯ ‘ಡಿಸ್ಟೆನ್ಸ್ ಎಜುಕೇಷನ್’ ಒಲೆಗೆ ಸೀಮೆಯೆಣ್ಣೆ ಸುರಿಯುವುದನ್ನು ಎಜುಕೇಟ್ ಮಾಡಿದಮೇಲೆ ಮತ್ತೆ ಅರ್ಧ ಗಂಟೆ ಇಟ್ಟರೂ ಬೇಳೆ ‘ನಿಲಯದ ವಾತಾವರಣದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ’ ಎಂಬ ಹವಾಮಾನ ವರದಿಯನ್ನು ಫಾಲೋ ಮಾಡುತ್ತಿರುವಂತೆ ‘ಸ್ಟೇಟಸ್ ಕೋ’ ಮೇಯ್ನ್ ಟೇಯ್ನ್  ಮಾಡಿಕೊಂಡಿತ್ತು.‘ಬೆಂದಿದೆಯಾ ನೋಡು’ ಎಂದಿತು ಡಿಸ್ಟೆನ್ಸ್ ಎಜುಕೇಷನ್ ವಾಣಿ.


ಬೇಳೆಯನ್ನು ತಟ್ಟೆಗೆ ಹಾಕಿ ಬೆರಳಿನಿಂದ ಒತ್ತಿದೆ. ತುಂಬಿದ ಬಸ್ಸಿನಲ್ಲಿ ಮುಂದಿರುವ ಠೊಣಪನನ್ನು ತಳ್ಳಿದರೆ ಸಡಿಲವಾದ ಬೊಜ್ಜು ಮಾತ್ರ ಕೊಂಚ ಒಳಹೋಗುವಷ್ಟು ಒಳಹೋಯಿತು.
‘ಬೆಂದ್ಹಾಗೂ ಇದೆ, ಬೇಯದ್ಹಾಗೂ ಇದೆ’ ಎಂದೆ.
‘ಸರಿ. ಟೈಮಾಯ್ತು. ಉಪ್ಪುಹುಳಿಖಾರ ಹಾಕ್ಬಿಡು’ ಎಂದಿತು ವಾಣಿ.
ಕಡೆಗೆ ಬಾಳೆಯೆಲೆಯೊಂದರ ಮೇಲೆ ಸಾರನ್ನು ಹಾಕಿ ‘ಮೂಲೆಗೆ’ ನೀಡಿದಾಗಲೇ ಅದು ತೊಗರಿಯಲ್ಲ, ಕಡಲೆಬೇಳೆ ಎಂದು ತಿಳಿದದ್ದು.ಈಗ ಅವೇ ಎರಡು ಬೇಳೆಗಳ ಡಬ್ಬಗಳು ನನ್ನ ಮುಂದೆ ಕುಳಿತು ‘ನಾನು ಯಾರು, ಯಾವ ಬೇಳೆ, ಇಲ್ಲಿ ಯಾರೂ ಬಲ್ಲೋವ್ರಿಲ್ಲಾ’ ಎಂದು ‘ಅಂತ’ ಚಿತ್ರದ ‘ಕನ್ವರ್‌ಲಾಲ್’ನಂತೆ ನನ್ನತ್ತಲೇ ನೋಡುತ್ತಾ ಲೇವಡಿ ಹಾಡುತ್ತಿರುವಂತೆ ಭಾಸವಾಯಿತು. ನನ್ನ ತರಬೇತಿರಹಿತ ಕಣ್ಣುಗಳಿಗೆ ಎರಡೂ ‘ಒಂದೇ ರೂಪ, ಎರಡು ಗುಣ’ದಂತೆ ಕಂಡವು. ಗತ್ಯಂತರವಿಲ್ಲದೆ ಸಹಾಯಕ್ಕೆ ಮೊರೆಹೋದೆ.  ಧ್ವನಿಗೆ ‘ಐಸೊಲೇಷನ್’ ಇಲ್ಲವಲ್ಲ! ‘ಇವೆರಡಲ್ಲಿ ತೊಗರಿಬೇಳೆ ಯಾವುದೆಂದು ಕಂಡುಹಿಡಿಯುವುದು ಹೇಗೆ?’ ಎಂದೆ.

‘ನಾನು ಮಾಮೂಲಾಗಿ ಇರುವುದು ತೊಗರಿ ಬಣ್ಣ. ಕೋಪ ಬಂದಾಗ ಕಡಲೆ’ ಎಂದಿತು ಐಸೊಲೇಷನ್ ಧ್ವನಿ. ಆಯ್ಕೆ ಸುಲಭವಾಯಿತು. ಒಂದು ತೊಂದರೆ ಮುಗಿದರೆ ಇನ್ನೊಂದರ ಆರಂಭ! ಸಾಸಿವೆ ಮತ್ತು ಕರಿ ಎಳ್ಳುಗಳ ಡಬ್ಬಗಳೂ ಪಕ್ಕಪಕ್ಕವೇ ಇದ್ದವು! ಒಂದು ಕ್ಷಣ ಉಪ್ಪಿಟ್ಟಿನ ತಯಾರಿಕೆಗೇ ಎಳ್ಳುನೀರು ಬಿಟ್ಟುಬಿಡೋಣ ಎಂದುಕೊಂಡೆ. ಆದರೆ ಅದಕ್ಕೂ ಎಳ್ಳು ಯಾವುದೆಂದು ತಿಳಿಯಬೇಕಲ್ಲ! ಮತ್ತೆ ಐಸೊಲೇಷನ್ ಧ್ವನಿಗೆ ಮೊರೆಹೋದೆ. ‘ಎರಡನ್ನೂ ಸ್ವಲ್ಪಸ್ವಲ್ಪ ತೊಗೊಂಡು ಬೋರಲು ಹಾಕಿದ ಸ್ಟೀಲ್ ತಟ್ಟೆಯ ಮೇಲೆ ಹಾಕಿ. ವ್ಯಾಲೆಂಟೈನ್ಸ್ ಡೇ ಲವರ್ಸ್ ತರಹ ಓಡಿಹೋಗೋದು ಸಾಸಿವೆ. ಸಚಿವಸ್ಥಾನ ಹೋದರೂ ಸಚಿವರ ಕ್ವಾರ್ಟರ್ಸ್ ಬಿಡಲ್ಲ ಅಂತ ಕೂತಲ್ಲೇ ಕೂತ್ಕೊಳ್ಳೋದು ಎಳ್ಳು’ ಎಂದಿತು ಧ್ವನಿ. ಮಿಕ್ಕೆಲ್ಲವನ್ನೂ ಹವಣಿಸಿಕೊಂಡು, ಎಂಟೇ ಬಾರಿ ಲೈಟರ್ ಕ್ಲಿಕ್ಕಿಸಿ, ಗ್ಯಾಸ್ ಸ್ಟೌವ್ ಧಗ್ಗಿಸಿದೆ.
ಹದಿನೈದು ದಿನಗಳಿಂದ ಬಾಂಡಲೆಯ ಸುದ್ದಿಗೇ ಹೋಗಿರದ ಕಾರಣ ಜೇಡವೊಂದು ತನ್ನೆಲ್ಲ ಕೌಶಲ ಪ್ರದರ್ಶನಕ್ಕಾಗಿ ಬಾಂಡಲೆಯ ಎರಡು ಕಿವಿಗಳನ್ನು ಫ್ರೇಮ್ ಆಗಿಸಿಕೊಂಡು ಬಾಂಡಲೆಯಗಲಕ್ಕೂ ಬಲೆ ನೇಯ್ದಿತ್ತು. ಅಕ್ರಮ ಕಟ್ಟಡಗಳ ಅಷ್ಟೇ ಅಕ್ರಮ ನೆಲಸಮ ಕಾರ್ಯವನ್ನು ‘ಸ್ಕ್ರೀಮರ್’ ವಾಹಿನಿಗಳಲ್ಲಿ ನೋಡಿ ಪಳಗಿದ್ದ ನನಗೆ ಒಂದು ಅಕ್ರಮ ಜೇಡರಬಲೆಯನ್ನು ಧೂಳೀಪಟ ಮಾಡಲು ಕಷ್ಟವೇನಾಗಲಿಲ್ಲ. ಬಾಂಡಲೆಯನ್ನು ಚೆನ್ನಾಗಿ ತೊಳೆದು ಕೊಂಚವೇ ಎಣ್ಣೆ ಹಾಕಿ ಅದು ಕಾಯಲೆಂದು ಕುಳಿತೆ. ನಿಧನಿಧಾನವಾಗಿ ಎಣ್ಣೆ ಕಾಯಿತು. ‘ತಿಂಡಿ ಮಾಡ್ರಿ ಅಂದ್ರೆ ಅಭ್ಯಂಜನಕ್ಕೆ ರೆಡಿ ಆಗ್ತಿದ್ದೀರಾ?’ ಎಂದಳು ರೂಮಿನಿಂದಲೇ ಮಡದಿ. ನನ್ನ ಮಡದಿಯ ಮೂಗು ನೋಡಲು ಮೊಂಡು. ಆದರೆ ವಾಸನೆ ಹಿಡಿಯುವುದರಲ್ಲಿ ಶಾರ್ಪು! ನಾನು ಬಾಂಡಲೆಗೆ ಹಾಕಿದ್ದು ಕಡಲೆಕಾಯಿ ಎಣ್ಣೆಯಲ್ಲ, ಹರಳೆಣ್ಣೆ ಎಂದು ಅಲ್ಲಿಂದಲೇ ಸ್ಮೆಲ್ಲಿಸಿ ಎನ್‌ ಕ್ವೈರಿಗೆ ತೊಡಗಿದ್ದಳು!
‘ಪುನರಪಿ ಮಾರ್ಜನಂ ಪುನರಪಿ ತೈಲಂ ಪುನರಪಿ ತೈಲೇ ಮಸ್ಟರ್ಡ್ ಸ್ಪ್ಲಟರಂ’ ಎಂದು ಶ್ಲೋಕ ಹೇಳುತ್ತಾ ಬಾಂಡಲೆಯನ್ನು ತೊಳೆದು ಎಣ್ಣೆ ಹಾಕಿ ಸ್ಟೌವಿನ ಮೇಲಿರಿಸಿದೆ. ಆಹಾ! ಮಹಾರಾಷ್ಟ್ರದ ಸಚಿವರು ಕಾಂಗ್ರೆಸ್ ಪಕ್ಷ ಬಿಟ್ಟು ಹೊರಸಿಡಿದಂತೆ ಬಾಂಡಲೆ ತೊಳೆದ ಪರಿಣಾಮವಾಗಿ ಉಳಿದಿದ್ದ ನೀರಿನ ಕಣಗಳು ಕಾದ ಎಣ್ಣೆಯ ಪದರಗಳಿಂದ ಹೊರಚಿಮ್ಮತೊಡಗಿದವು. ಅದೇಕೆಂದು ನೋಡಲು ಬಾಂಡಲೆಯತ್ತ ಬಾಗಿದೆ. ಪ್ರಥಮ ಪ್ರಯತ್ನೇ ವಕ್ತ್ರದಗ್ಧಂ! ‘ರವೆ ಹುರೀರಿ ಅಂದ್ರೆ ಚರ್ಮಾನೇ ಹುರ‍್ಕೋತಿದೀರೇನ್ರೀ... ನಾನ್‌ವೆಜ್ ಉಪ್ಪಿಟ್ಟು ಆಗತ್ತಷ್ಟೆ’ ಗದರಿತು ಅಶರೀರವಾಣಿ. ಹುಚ್ಚೆದ್ದು ಕುಣಿಯುವ ಶಾಸಕರು ಇರುವ ಸೆಷನ್ ಅನ್ನು ಅಡ್ಜರ್ನ್ ಮಾಡುವಂತೆ ಆ ನೀರೆಣ್ಣೆಯನ್ನು ಹೊರಗೊಯ್ದು ಬಚ್ಚಲಿಗೆ ಸುರಿದೆ. ಬರ್ನಾಲ್ ವದನನಾಗಿ ‘ಮರಳಿ ಯತ್ನವ ಮಾಡು ಮನುಜ’ ವಾಕ್ಯಕ್ಕೆ ಬದ್ಧನಾದೆ.
ಅಂತೂ ಇಂತೂ ಹೊಸರುಚಿ ಕಾರ್ಯಕ್ರಮದ ಶುದ್ಧಕನ್ನಡಿಗರು ಹೇಳುವಂತೆ ಚಿಲ್ಲೀಸ್, ಕೋರಿಯಾಂಡರ್, ದಾಲ್ಸ್, ಮಸ್ಟರ್ಡುಗಳನ್ನು ಆಯಿಲ್ಲಲ್ಲಿ ಫ್ರೈ ಮಾಡಿ ಅವೆಲ್ಲವೂ ಶಕ್ತ್ಯಾನುಸಾರ ಸಳಸಳ, ಚಿಟಿಪಿಟಿ, ಕೆಂಪುಕೆಂಪು, ಕರಿಕರಿ ಆದಮೇಲೆ ನೀರು ಸುರಿದು ಅವುಗಳೆಲ್ಲವುಗಳ ಸದ್ದಡಗಿಸಿ ‘ಸೋಜಿ’ ಫ್ರೈ ಮಾಡಲೆಂದು ಮತ್ತೊಂದು ಬಾಂಡಲೆಯನ್ನು ಈ ಬರ್ನರ್‌ನ ಸಯಾಮೀ ಸಿಸ್ಟರ್ ಆದ ಮತ್ತೊಂದು ಬರ್ನರನ್ನು ಮತ್ತೆಂಟು ಲೈಟರ್ ಕ್ಲಿಕ್ಕುಗಳ ಮೂಲಕ ಲೈಟಿಸಿದೆ.
‘ರವಾ ರೌರವ ಅಗದಂತೆ ನೋಡಿಕೊಳ್ಳಿ. ಚೀನಾದವರ ಮೈಬಣ್ಣದ ಬಿಳಿ ಇರುವ ರವೆ ಅಲ್ಲಲ್ಲಿ ಟ್ರಂಪ್ ಮುಖದಷ್ಟು ಕೆಂಪಾಗಲಿ. ಕರೀನಾ ಕಪೂರಳ ಮೊದಲರ್ಧಭಾಗದ ಪೂರ್ವಾರ್ಧ ಮಾಡಿಬಿಟ್ಟೀರಿ’ ಎಂದು ಎಚ್ಚರಿಸಿದಳು. ಕರೀನಾ ಕಪೂರಳ ಮೊದಲರ್ಧಭಾಗ ಕರೀನಾ; ಅದರ ಪೂರ್ವಾರ್ಧ ಕರಿ!
ಅಂತೂ ಇಂತೂ ಹುರಿದ ರವೆ ಮಿಕ್ಕೆಲ್ಲ ಮಿಶ್ರಣಗಳೊಡನೆ ಅತ್ತೆಯ ಮನೆಗೆ ಸೊಸೆ ಸೇರಿದಂತೆ ಸೇರಿತು – ಸೀರಿಯಲ್‌ಗೆ ಜೊತೆಗುಂಟು, ರಿಯಲ್‌ಗೆ ಜೊತೆಯಿಲ್ಲ ಎನ್ನುವ ರೀತಿ. ಇಕ್ಕಳದ ಕೈಯಲ್ಲಿ ಬಾಂಡಲೆ ಹಿಡಿದು, ಮೊಗಚುವ ಕೈಯಿಂದ ಮಿಶ್ರಣವನ್ನು ಕದಡಿದ್ದೇ ಕದಡಿದ್ದು, ಅದು ವಿರೋಧಪಕ್ಷಗಳು ಕ್ವಾರಂಟೈನಿನಲ್ಲಿ ಇರುವಂತೆ ‘ಸೋಷಿಯಲ್ ಡಿಸ್ಟೆನ್ಸ್’ ಮೇಯ್ನ್ಟೇಯ್ನ್ ಮಾಡಿದ್ದೇ ಮಾಡಿದ್ದು. ಕೋವಿಡ್ ಸೀನಿಗರಾದರೂ ಹತ್ತಿರ ಬಂದಾರು, ಉಪ್ಪಿಟ್ಟಿನ ಅಂಶಗಳು ಬರುತ್ತಿರಲಿಲ್ಲ.
‘ಮುಚ್ಚಳ ಮುಚ್ಚಿ ಬಿಟ್ಟುಬಿಡಿ ಕಾಲ್ಗಂಟೆ’ ಎಂದಿತು ವಾಯ್ಸೋವರ್. ಕಾಲುಗಂಟೆಯ ನಂತರ ಬಾಂಡಲೆಯಲ್ಲಿ ಇಣುಕಿದೆ. ಲೋಟದಲ್ಲಿ ಹಾಕಿಕೊಡುವ ಮಟ್ಟಕ್ಕೆ ‘ಲಿಕ್ವಿಡ್ ಉಪ್ಪಿಟ್ಟು’ ರೆಡಿಯಾಗಿತ್ತು. ಇಪ್ಪತ್ತೈದು ನಿಮಿಷಗಳ ನಂತರ ಗ್ಯಾಸ್ ಉಳಿಸುವ ಏಕೈಕ ಕಾರಣದಿಂದ ಉಪ್ಪಿಟ್ಟಿನ ಬಾಂಡಲೆಯನ್ನು ಕೆಳಕ್ಕಿಳಿಸಿದೆ. ಮೊಗಚುವ ಕೈಯನ್ನು ಉಪ್ಪಿಟ್ಟಿನೊಳಕ್ಕೆ ಇಳಿಬಿಟ್ಟೆ. ಅದು ಕೆಸರುಗದ್ದೆಯಲ್ಲಿ ನೆಟ್ಟ ಗೂಟದಂತೆ ನಿಂತಿತು.
ಕರೆಗಂಟೆ ಧ್ವನಿಸಿತು. ‘ಕೊರೋನಾ ಅವೇರ್‌ನೆಸ್ ಬಗ್ಗೆ ಪೋಸ್ಟರ್ ಅಂಟಿಸಕ್ಕೇಂತ ಬಂದಿದ್ವಿ. ಗಮ್ ಮುಗಿದುಹೋಯ್ತು’ ಎಂದ ಕಾರ್ಪೊರೇಷನಿ.
ಉಪ್ಪಿಟ್ಟಿನ ಬಾಂಡಲೆಯನ್ನು ಹೊರಗಿಟ್ಟೆ.




Comments

  1. ಆಹಾ! ಸೂಪರ್ ಆಗಿದೆ ಸರ್.

    ಉಪ್ಪಿಟ್ಟಿನ ಮೇಲಿನ ನಿಮ್ಮ ಹಾಸ್ಯ ಗದಾ ಪ್ರಹಾರವು ನೋವು ನೀಡದೆ ನಗೆಯುಕ್ಕಿಸುವುದರಲ್ಲಿ ಗೆದ್ದುಬಿಟ್ಟಿತು..
    ನನಗೆ ತುಂಬಾ ಇಷ್ಟವಾದ ಸಾಲುಗಳಿವು.

    ಡಿಸ್ಟೆನ್ಸ್ ಎಜುಕೇಷನ್ ಮೂಲಕ ಕುಳಿತಲ್ಲಿಂದಲೇ ಇಷ್ಟೇ ಖಾರ, ಉಪ್ಪು, ಹುಳಿಗಳ ಪಾಠ ನಡೆಯುತ್ತಿತ್ತು
    ಕಾಳಿದಾಸ ಎನ್ನುವುದರ ಬದಲು ಖಾಲಿದೋಸೆ
    ವ್ಯಾಲೆಂಟೈನ್ಸ್ ಡೇ ಲವರ್ಸ್ ತರಹ ಓಡಿಹೋಗೋದು ಸಾಸಿವೆ. ಸಚಿವಸ್ಥಾನ ಹೋದರೂ ಸಚಿವರ ಕ್ವಾರ್ಟರ್ಸ್ ಬಿಡಲ್ಲ ಅಂತ ಕೂತಲ್ಲೇ ಕೂತ್ಕೊಳ್ಳೋದು ಎಳ್ಳು.
    ಚೀನಾದವರ ಮೈಬಣ್ಣದ ಬಿಳಿ ಇರುವ ರವೆ ಅಲ್ಲಲ್ಲಿ ಟ್ರಂಪ್ ಮುಖದಷ್ಟು ಕೆಂಪಾಗಲಿ

    ಬರಹವು ನಮ್ಮ ಮನಕ್ಕೆ ಚೆನ್ನಾಗಿ ಅಂಟಿಕೊಳ್ಳಲಿ ಎಂದು ಪ್ರಯೋಗಿಸಿರುವ ‘ಕೊರೋನಾ ಅವೇರ್‌ನೆಸ್ ಬಗ್ಗೆ ಪೋಸ್ಟರ್ ಅಂಟಿಸಕ್ಕೇಂತ ಬಂದಿದ್ವಿ. ಗಮ್ ಮುಗಿದುಹೋಯ್ತು’ -- ಇದಂತೂ ಸೂಪರ್ ಎಂಡಿಂಗ್.

    ಎಲ್ಲಕ್ಕಿಂತ ನಾನು ಹೆಚ್ಚು ಒಪ್ಪಿದ್ದು "ಹೊಸರುಚಿ ಕಾರ್ಯಕ್ರಮದ ಶುದ್ಧಕನ್ನಡಿಗರು ಹೇಳುವಂತೆ ಚಿಲ್ಲೀಸ್, ಕೋರಿಯಾಂಡರ್, ದಾಲ್ಸ್, ಮಸ್ಟರ್ಡುಗಳನ್ನು ಆಯಿಲ್ಲಲ್ಲಿ ಫ್ರೈ ಮಾಡಿ"
    ಇದಂತೂ ಅದೆಷ್ಟು ಕಿರಿಕಿರಿ ಮಾಡಿಸುತ್ತೆ ಅಂದ್ರೆ ಆ ಹೊಸರುಚಿಯೇ ಬೇಡ ಅನಿಸುವಷ್ಟು.

    ಮುದದಿಂದ ಓದಿಸಿಕೊಂಡು ಹೋಗಿ ಮಂದಹಾಸ ಬೀರುವಂತೆ ಮಾಡಿಸಿದ ನಿಮಗೆ, ನಿಮ್ಮ ಬರಹಕ್ಕೆ ಥ್ಯಾಂಕ್ಸೋ ಥ್ಯಾಂಕ್ಸು.

    ReplyDelete
    Replies
    1. 'ಗಧಾ' ಎಂದಿಲ್ಲವಲ್ಲಾ.... ಬಚಾವಾದೆ. ಕೆಲವು ಲೇಖನಗಳನ್ನು ನಾವು ಬರೆಯುತ್ತೇವೆ ಬದರಿ. ಕೆಲವು ಬರೆಯಿಸಿಕೊಂಡುಬಿಡುತ್ತವೆ. ಇದು ಅಂತಹ ಒಂದು ಲೇಖನ. ನಿಮ್ಮ ಪ್ರತಿಕ್ರಿಯೆ ನನಗೆ 'ಸಿಹಿ ಉಪ್ಪಿಟ್ಟು'.

      Delete
  2. Its an absolute pleasure to read your humour. all our life experience are picked and included in this article. Can`t stop laughing. This one makes me read again and again. So many laughter moments. Comparison is amazing. thank you

    ReplyDelete
  3. I sent this link to my family n friends, "Whoever wants a hearty laugh - decent, wholesome humour, plz click on the above link to read Anaku Ramanath's hiarious experience of making uppittu.Ahalya plz read this extremely funny story to appa n amma when u visit them.

    ReplyDelete
    Replies
    1. My parents were delighted to hear the story of your uppittu. ಹಿರಿಯರ ಮೊಗದಲ್ಲಿ ನಗೆ ಸೇರಿಸಿದ್ದಕ್ಕೆ ಧನ್ಯವಾದಗಳು 🙏ಅನು ಶಿವರಾಮ್

      Delete
    2. Thank you Mr. Unknown and the known Anu. Such encomiums propel us to greater deeds. I

      Delete
  4. ನಿಮ್ಮ ಲೇಖನ ಓದಿ ನಕ್ಕು, ನಕ್ಕು ಸುಸ್ತಾಗಿ ಉಪ್ಪಿಟ್ಟು ಮಾಡಲು ಹೋದರೆ ಅದು ಇವತ್ತು ಗಂಜಿಯಾಗಿ ಕೂತಿದೆ!!ನಿಮ್ಮ ಲೇಖನದ ಪ್ರಭಾವ 😅😅

    ReplyDelete
    Replies
    1. 'ನಗೆಹನಿ'ಗಳು ನೀರಿನೊಡನೆ ಬೆರೆತು, ನೀರು ಹೆಚ್ಚಾಗಿ ಗಂಜಿಯಾಗಿರಬೇಕು! ಬೆಟರ್ ಲಕ್ ನೆಕ್ಸ್ಟ್ ಟೈಮ್. Thank you for your response.

      Delete
  5. ನೀವು ಮಾಡಿದ ಉಪ್ಪಿಟ್ಟು ನೋಡಿ ನನಗೆ ಸ್ಪೂರ್ತಿ ಉಕ್ಕೇರಿದಾಗ ಬಂದು ಹಾಡು,
    ಉಪ್ಪಿಟ್ಟು ಉಪ್ಪಿಟ್ಟು ಗೋವಿಂದ,
    ಉಪ್ಪಿಟ್ಟು ಉಪಹಾರ ಧ್ವಜಾ,
    ಉಪ್ಪಿಟ್ಟು ಕೇಸರಿಬಾತ್ ಕಾಂತಂ,
    ಪ್ರಭಾತೇ ಉಪ್ಪಿಟ್ಟುಂ ಕುರು.

    ಸರ್, ನೀವ್ಯಾಕೆ ರಾಮ್ಸ್ ಕಿಚನ್ ಎಂದು ಚಾನೆಲ್ ಶುರು ಮಾಡಬಾರದು? ನೀವು ಮಾಡುವ ತಿಂಡಿ ತಿನಿಸುಗಳು ಯಾವುದೋ ಒಂದು ರೀತಿಯಲ್ಲಿ ಉಪಯೋಗವಾಗುವುದಂತೂ ಖಂಡಿತ.
    ಉಪ್ಪಿಟ್ಟು ಗೋಂದಾಗಿ, ಇಡ್ಲಿ, ಯಾರಾದರೂ ಆಕ್ರಮಣ ಮಾಡಿದಾಗ ಅವರು ತಲೆ ಒಡೆಯಲು, ರವೆಉಂಡೆ ಮುಷ್ಕರಗಳಲ್ಲಿ ಕಿಟಕಿ ಗಾಜುಗಳನ್ನು ಒಡೆಯಲು, ಚಕ್ಕುಲಿ ಕೋಡುಬಳೆ ಹಲ್ಲು ಉದುರಿಸಲು, ಹೀಗೆ ಬಹು ಉಪಯೋಗಿ ಪಾಕ ಪ್ರವೀಣರೆಂದು ಬಿರುದು ಕೂಡ ಗಳಿಸಬಹುದು.

    ReplyDelete
    Replies
    1. ರಾಮ್ಸ್ ಕಿಚನ್ Good Idea

      Delete
    2. ರಾಮ್ಸ್ ಕಿಚನ್ ನಲ್ಲಿ ಬೂಂದಿ ಹೇಗೆ ಬಂದೀತೆಂದು ಯೋಚಿಸಿದರೆ ಅರಳುಮಲ್ಲಿಗೆ 'ಹೊರಳು ಮೆಲ್ಲಗೆ' ಎಂದು ಜಾರಿಕೊಳ್ಳುತ್ತಿದ್ದರೇನೋ! ಗೋವಿಂದ ಸ್ಮರಣೆ ಚೆನ್ನಾಗಿದೆ. 'ನಾಣಿಯ ಗ್ಯಾಂಗ್' ಗೆ ನಾನು ಎಂದಿನಂತೆ ಆಭಾರಿ.

      Delete

Post a Comment