ನರಸಿಂಹ ಜಯಂತಿ ಆಚರಣೆ ವೃತ್ತಾಂತ

ನರಸಿಂಹ ಜಯಂತಿ ಆಚರಣೆ ವೃತ್ತಾಂತ

ಲೇಖನ - ಶ್ರೀ ಬೇಲೂರು ರಾಮಮೂರ್ತಿ

ಅದಿಶಂಕರರು ತಮ್ಮ ಯಾತ್ರೆಯಲ್ಲಿ ಅನೇಕ ದುರ್ಮತಗಳ ಆಚರಣೆಗಳನ್ನು ಖಂಡಿಸಿ ಆ ಮತದವರನ್ನು ಸರಿಯಾದ ಆಚರಣೆಯ‌ ದಾರಿಗೆ ತಂದರು. ಇದರಲ್ಲಿ ಮುಖ್ಯವಾದುದು ಕಾಪಾಲಮತ. ಶಿಷ್ಯರುಗಳೆಲ್ಲಾ ಆದಿಶಂಕರರ ಮಾತುಗಳಿಗೆ ಒಪ್ಪಿ ಅವರ ಶಿಷ್ಯರಾದರು. ಆದರೆ ಕಾಪಾಲಿಕರ ಮತದ ಹಿರಿಯ ಉಗ್ರಭೈರವ ಮಾತ್ರ ಅವಮಾನದಿಂದ ಕುದ್ದು ಏನಾದರೂ ಮಾಡಿ ಆದಿಶಂಕರರ ಪ್ರಾಣ ತೆಗೆಯಬೇಕು ಅಂದುಕೊಂಡ. ಅದಕ್ಕೊಂದು ಉಪಾಯ ಮಾಡಿದ. ಒಂದು ದಿನ ಭೈರವ ಆದಿಶಂಕರರ ಮುಂದೆ ಬಂದು ಭಯ,ಭೀತಿ,ಗೌರವದಿಂದ ನಮಸ್ಕರಿಸಿ ಗುರುಗಳೇ ನಾನು ಸಶರೀರವಾಗಿ ಕೈಲಾಸಕ್ಕೆ ಹೋಗಬೇಕೆಂದು ಶಿವನ ಕುರಿತು ತಪಸ್ಸು ಮಾಡಿದೆ. ಶಿವ ಪ್ರತ್ಯಕ್ಷನಾಗಿ ನಿನ್ನ ಕೋರಿಕೆ ಈಡೇರಬೇಕಾದರೆ ಒಬ್ಬ ಚಕ್ರವರ್ತಿಯ ತಲೆಯನ್ನಾಗಲೀ ಇಲ್ಲಾ ಒಬ್ಬ ಸನ್ಯಾಸಿಯ ತಲೆಯನ್ನಾಗಲೀ ತಂದು ಅದನ್ನು ಅಗ್ನಿಮುಖೇನ ನನಗೆ ಪೂರ್ಣಾಹುತಿಯ ಮುಖಾಂತರ ಅರ್ಪಿಸಿದರೆ ನಿನಗೆ ಸಶರೀರ ಪ್ರಾಪ್ತಿಯಾಗುವುದು ಎಂದು ಹೇಳಿದ್ದಾನೆ. ಇಲ್ಲಿ ನನಗೆ ಯಾವ ಚಕ್ರವರ್ತಿಯ ತಲೆ ಸಿಗುವುದು ಕಷ್ಟ. ಹೀಗೆ ಸುತ್ತಾಡುತ್ತಿರುವಾಗ ನೀವು ನನ್ನ ಕಣ್ಣಿಗೆ ಬಿದ್ದಿರಿ. ನೀವು ಕೃಪೆ ಮಾಡಿ ನಿಮ್ಮ ತಲೆಯನ್ನು ಕೊಟ್ಟರೆ ನಾನು ಸಶರೀರವಾಗಿ ಕೈಲಾಸಕ್ಕೆ ಹೋಗಲು ಅವಕಾಶ ಆಗುತ್ತದೆ ಎಂದ. ಭೈರವನ ಅಂತರಾತ್ಮ ಅರಿತು ಆದಿಶಂಕರರು ಆಗಬಹುದು ಆದರೆ ಈಗ ಬೇಡ. ನನ್ನ ಎಲ್ಲಾ ಶಿಷ್ಯರು ಇಲ್ಲೇ ಇದ್ದಾರೆ. ಅವರು ನಿನ್ನನ್ನು ಸುಮ್ಮನೆ ಬಿಡುವುದಿಲ್ಲ. ಅದಕ್ಕೆ ನಾನು ನಾಳೆ ಸಂಜೆ ಬೆಟ್ಟದ ಬುಡದಲ್ಲಿ ತಪಸ್ಸು ಮಾಡುತ್ತಿರುತ್ತೇನೆ. ಅಲ್ಲಿ ಬಂದು ನನ್ನ ತಲೆಯನ್ನು ತೆಗೆದುಕೊಂಡು ಹೋಗು ಎಂದರು. ಭೈರವ ಖುಷಿಯಿಂದ ಹೊರಟ.

ಮರುದಿನ ಸಂಜೆ ಆದಿಶಂಕರರು ತಪಸ್ಸು ಮಾಡುತ್ತಿರುವಾಗ ಉಗ್ರಭೈರವ ದೊಡ್ಡ ಕತ್ತಿ ಎತ್ತಿಕೊಂಡು ಇನ್ನೇನು ಆದಿಶಂಕರರ ತಲೆಗೆ ಕತ್ತಿ ಝಳಪಿಸಬೇಕು ಎನ್ನುವಾಗ ದೂರ ಪ್ರದೇಶದಲ್ಲಿ ಸಮಾಧಿ ಸ್ಥಿತಿಯಲ್ಲಿರುವ ಸನಂದನಾಚಾರ್ಯರಿಗೆ ತಮ್ಮ ಗುರುಗಳು ಅಪಾಯದಲ್ಲಿ ಇರುವುದು ಅರಿವಾಗಿ ಕೂಡಲೇ ತಮ್ಮ ಆರಾಧ್ಯದೈವ
ನರಸಿಂಹನನ್ನು ಪ್ರಾರ್ಥಿಸಲು ಉಗ್ರನರಸಿಂಹನು ಸನಂದನರ ಮೇಲೆ ಆವಾಹಿತನಾದಾಗ ಸನಂದನರು ವಾಯುವೇಗದಲ್ಲಿ ಬಂದು ಇನ್ನೇನು ಭೈರವ ಆದಿಶಂಕರರ ತಲೆ ಕತ್ತರಿಸುವ ಸಂದರ್ಭದಲ್ಲಿ ಸನಂದನರು ಭೈರವನ ಮೇಲೆ ಬಿದ್ದು ಅವನ ಕೈನಿಂದ ಕತ್ತಿಯನ್ನು ಕಿತ್ತುಕೊಂಡು ಅದೇ ಕತ್ತಿಯಿಂದ ಭೈರವನ ತಲೆಯನ್ನು ಕತ್ತರಿಸುತ್ತಾರೆ. ಈ ಸದ್ದಿನಿಂದ ಎಚ್ಚರಗೊಂಡ ಆದಿಶಂಕರರು ಉಗ್ರಸ್ವರೂದಿಂದೊಡಗೂಡಿ ಏದುಸಿರು ಬಿಡುತ್ತಾ ಇರುವ, ನರಸಿಂಹ ಆವಾಹನೆಯಾಗಿರುವ ಸನಂದನರನ್ನು ನೋಡಿ ನರಸಿಂಹ ಸ್ತೋತ್ರವನ್ನು ಜಪಿಸಿದ ಮೇಲೆ ನಿಧಾನವಾಗಿ ನರಸಿಂಹ ಆವಾಹನೆಯ ಶಕ್ತಿ ಕಡಿಮೆಯಾಗಿ ಸನಂದನರು ಸತ್ತುಬಿದ್ದಿರುವ ಭೈರವನನ್ನೂ ಗುರುಗಳನ್ನೂ ನೋಡಿ ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಆದಿಶಂಕರರು ಸನಂದನಾ, ಭೈರವನ ಕುತಂತ್ರ ನಿನಗೆ ತಿಳಿದಿದ್ದು ಹೇಗೆ ಮತ್ತು ನರಸಿಂಹನನ್ನು ನೀನು ಹೇಗೆ ಒಲಿಸಿಕೊಂಡೆ ಅಂತ ಕೇಳಿದರು. ಸನಂದನರು ಹೀಗೆ ವಿವರಣೆ ನೀಡಿದರು. ಗುರುಗಳೇ ಒಂದು ಸಾರಿ ನಾನು ನರಸಿಂಹನನ್ನು ಒಲಿಸಿಕೊಳ್ಳಲು ಉಗ್ರ ತಪವನ್ನಾಚರಿಸಿದೆ. ಬಹಳ ದಿನಗಳ ನಂತರ ನರಸಿಂಹ ನನ್ನ ಮುಂದೆ ಪ್ರತ್ಯಕ್ಷನಾದಾಗ ನಾನು ಕಣ್ಣು ಬಿಟ್ಟೆ. ಅವನ ಉಗ್ರ ರೂಪಕ್ಕೆ, ಪ್ರಖರತೆಗೆ,ಬೆಳಕಿನ ಝಳಕ್ಕೆ ಅಂದು ನನ್ನ ಕಣ್ಣು ಮುಚ್ಚಿಕೊಂಡಿತು. ಜೊತೆಗೆ ಭಯವೂ ಆಯಿತು. ಕೆಲವು ಕ್ಷಣಗಳ ನಂತರ ಕಣ್ಣು ತೆರೆದಾಗ ನರಸಿಂಹ ಇರಲಿಲ್ಲ. ನನಗೆ ಬಹಳ ಬೇಸರವೂ ನನಗೆ ನನ್ನ ಮೇಲೆ ಬೇಸರವೂ ಉಂಟಾಯಿತು. ನರಸಿಂಹನನ್ನು ಮತ್ತೆ ಒಲಿಸಿಕೊಳ್ಳಲು ನಾನು ಮತ್ತೆ ಉಗ್ರತಪಸ್ಸಿಗೆ ಕೂತೆ. ಆದರೆ ಈ ಬಾರಿ ಎಷ್ಟು ದಿವಸಗಳಾದರೂ ನರಸಿಂಹ ನನಗೆ ಪ್ರತ್ಯಕ್ಷನಾಗಲಿಲ್ಲ. ಒಂದು ದಿನ ಬೇಟೆಗಾರನೊಬ್ಬ ಬಂದು ಬಹಳ ದಿವಸದಿಂದ ತಪಸ್ಸು ಮಾಡ್ತಿದೀಯಲ್ಲ, ಯಾರನ್ನು ಒಲಿಸಿಕೊಳ್ಳೋಕೆ ಅಂತ ಕೇಳಿದ. ನಾನು ನರಸಿಂಹನನ್ನು ಒಲಿಸಿಕೊಳ್ಳಲು ಎಂದೆ. ಬೇಟೆಗಾರ ನರಸಿಂಹ ಅಂದರೆ ಮುಖ ಸಿಂಹದ ಹಾಗಿದೆ, ಶರೀರ ಮನುಷ್ಯನ ಹಾಗಿದೆಯಲ್ಲ ಅವನಾ ಅಂತ ಕೇಳಿದ. ನಾನು ಹೌದು ಅಂದೆ. ಬೇಟೆಗಾರ, ಅಯ್ಯೋ ಅವನನ್ನು ಒಲಿಸಿಕೊಳ್ಳೋಕೆ ಇಷ್ಟು ಕಷ್ಟ ಪಡಬೇಕಾ. ನಾನು ಕರೆದರೆ ಸಾಕು ಅವನು ಓಡಿಬರ್ತಾನೆ. ನೀನು ಇಲ್ಲೇ ಇರು ನಾನು ಅವನನ್ನು ಕರ್ಕೊಂಡು ಬರ್ತೀನಿ ಅಂದು ಹೋದವನು ಕೆಲವೇ ಘಂಟೆಗಳಲ್ಲಿ ನರಸಿಂಹನನ್ನು ಬಳ್ಳಿಗಳಿಂದ ಕಟ್ಟಿ ತಂದು ನನ್ನ ಮುಂದೆ ನಿಲ್ಲಿಸಿದ. ನನಗೆ ನಂಬಲು ಅಸಾಧ್ಯವಾಗಿತ್ತು. ನಾನು ನರಸಿಂಹನಿಗೆ ನಮಿಸಿ ಪರಮಾತ್ಮಾ ನಾನು ಅನೇಕ ದಿನಗಳಿಂದ ಕಟ್ಟುನಿಟ್ಟಿನ ತಪಸ್ಸು ಮಾಡಿದರೂ ಒಲಿಯದವನು ಈ ಬೇಡನಿಗೆ ಒಲಿದು ಅವನ ಬಂಧಿಯಾಗಿ ಬಂದೆಯಲ್ಲಾ ಏನಿದಚ್ಚರಿ ಎಂದು ಕೇಳಿದೆ. ಅದಕ್ಕೆ ಪರಮಾತ್ಮ ಈತನದು ನಿಷ್ಕಲ್ಮಷ ಭಕ್ತಿ. ಭಕ್ತಿಯಲ್ಲಿ ಅಪನಂಬಿಕೆ ಇಲ್ಲ. ಯಾರು ನನ್ನನ್ನು ನಂಬಿ ಭಕ್ತಿ ಸಮರ್ಪಣೆ ಮಾಡುತ್ತಾರೋ ಅವರಿಗೆ ನಾನು ಒಲಿದು ಅಂಥವರ ಸ್ನೇಹಿತನಾಗಿ ಅವರು ಕರೆದಾಗ ಹಿಂದೆಮುಂದೆ ನೋಡದೇ ಬಂದುಬಿಡುತ್ತೀನಿ. ಈಗ ಬರೋಲ್ಲ ಅಂದಿದ್ದಕ್ಕೆ ಬಳ್ಳಿಗಳಿಂದ ನನ್ವನ್ನು ಕಟ್ಟಿ ಕರೆತಂದ. ಇದು ಭಕ್ತನ ಕಳಕಳಿ,ಅಕ್ಕರೆ. ಇಂದಿನಿಂದ ನೀನು ಯಾವ ಸಂದರ್ಭದಲ್ಲಿ, ಆಪತ್ತಿನಲ್ಲಿರುವಾಗ ನನ್ನನ್ನು ಸ್ಮರಿಸಿಕೊಂಡರೆ ನಿನ್ನ ಮುಂದೆ ಹಾಜರಾಗ್ತೀನಿ ಎಂದು ಆಶೀರ್ವದಿಸಿ ಅಂತರ್ಧಾನನಾದ.


ಅವತ್ತಿನಿಂದ ನಾನು ಆಪತ್ತಿನಲ್ಲಿರುವಾಗ ನರಸಿಂಹನನ್ನು ನೆನೆಸಿಕೊಂಡರೆ ನನ್ನ ಮುಂದೆ ಪ್ರತ್ಯಕ್ಷನಾಗುತ್ತಾನೆ. ಗುರುಗಳೇ ನೀವು ಇವತ್ತು ಆಪತ್ತಿನಲ್ಲಿರುವುದು ತಿಳಿದು ತಕ್ಷಣ ನರಸಿಂಹನನ್ನು ಪ್ರಾರ್ಥಿಸಲು ಉಗ್ರನರಸಿಂಹನು ನನ್ನ ಮುಂದೆ ಪ್ರತ್ಯಕ್ಷನಾಗಿ ನನ್ನನ್ನು ವಾಯುವೇಗದಿಂದ ಇಲ್ಲಿಗೆ ಕರೆದುಕೊಂಡು ಬಂದ ಎಂದರು. ಆದಿಶಂಕರರು ನರಸಿಂಹನಿಗೆ‌ ಮತ್ತೊಮ್ಮೆ ನಮಸ್ಕರಿಸಿ ಇಂದಿನಿಂದ ನಿನ್ನ ಆರಾಧನೆಯನ್ನು ಎಲ್ಲರೂ ನರಸಿಂಹ ಜಯಂತಿ ಎಂದು ಆಚರಿಸಲಿ ಎಂದು ಆಶೀರ್ವದಿಸಿದರು. ನರಸಿಂಹ ಜಯಂತಿಯ ಬಗೆಗೆ ಹೀಗೊಂದು ಐತಿಹ್ಯ ಆದಿಶಂಕರರ ಜೀವನ ಚರಿತ್ರೆ ಗುರುವಿಲಾಸ ತರಂಗಿಣಿ ಯಲ್ಲಿ ದಾಖಲಿಸಲ್ಪಟ್ಟಿದೆ.


Comments

  1. ಶಂಕರರ ನರಸಿಂಹ ಕರಾವಲಂಬನ ಸ್ತೋತ್ರ ಓದಿ ಅರ್ಥೈಸಿಕೊಳ್ಳುವುದೇ ಚೆನ್ನ. ನರಸಿಂಹ ಜಯಂತಿ ಸನಿಹದಲ್ಲಿರುವ ಈ ಹೊತ್ತಿನಲ್ಲಿ ಅಂತಹ ಸ್ಮರಣೆಗೆ ಪ್ರೇರೇಪಿಸಿತು ನಿಮ್ಮ ಲೇಖನ. ಧನ್ಯವಾದಗಳು.

    ReplyDelete
  2. Nice article to read about Adishankaracharya his birthday was celebrated recently. Your narration is excellent.

    ReplyDelete
  3. ಶಂಕರಜಯಂತಿ ಸಮಯಕ್ಕೆ ಸರಿಯಾಗಿ ಶಂಕರರನ್ನು ಸ್ಮರಿಸುವ ಒಳ್ಳೆಯ ಲೇಖನ ಕೊಟ್ಟಿದ್ದೀರಿ. ಧನ್ಯವಾದಗಳು ರಾಮಮೂರ್ತಿಯವರೇ. ಶಂಕರರ ಬಗ್ಗೆ ಎರಡು ಮೂರು ಭಾಷೆಗಳಲ್ಲಿ ಸಿನಿಮಾಗಳು ಬಂದಿವೆ. ಅವುಗಳಲ್ಲಿ ಇಂತಹ ಸನ್ನಿವೇಶಗಳನ್ನು ಅಳವಡಿಸಿಲ್ಲ. ವಿವರವಾಗಿ ಲೇಖನದ ಮೂಲಕ ತಿಳಿಸಿಕೊಟ್ಟಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು

    ReplyDelete
  4. ತುಂಬಾ ಚೆನ್ನಾಗಿ ಕಥೆಯ ವಿವರಣೆ ಇದೆ.

    ReplyDelete

Post a Comment