ಕ್ಲೋಸ್ ಎನ್‍ಕೌಂಟರ್ ವಿತ್ ಕರೋನಾ ಬ್ರಿಗೇಡ್


ಕ್ಲೋಸ್ ಎನ್‍ಕೌಂಟರ್ ವಿತ್ ಕರೋನಾ ಬ್ರಿಗೇಡ್
ಹಾಸ್ಯ ಲೇಖನ - ಅಣುಕು ರಾಮನಾಥ್ 

ಸೀನೂ….!
ಇಷ್ಟೇ ಸಾರ್ ನಾನಂದಿದ್ದು. ತಕ್ಷಣ ಮೂರಡಿ ಆರಡಿ (ಇದು ಗೋರಿಯ ಅಳತೆಯಲ್ಲ; ಕೋವಿಡ್ ಯುಗದ ಸೇಫ್ ಡಿಸ್ಟೆನ್ಸ್‍ನ ಸ್ಕೇಲು) ದೂರ ಇದ್ದವರೆಲ್ಲ ತೂಕಾನುಸಾರ ಹಾರಿ, ಹಾರಲೂ ಆಗದಷ್ಟು ದಪ್ಪವಿದ್ದವರು ನಿಂತಲ್ಲೇ ಸ್ಪ್ರಿಂಗ್ ಆಕ್ಷನ್ ಮಾಡಿ, ಕಾಲಿಗೆ ಬುದ್ಧಿ ಹೇಳಿದರು.
‘ಪಬ್ಲಿಕ್ ಪ್ಲೇಸಲ್ಲಿ ಕರೋನಾ ಕಾಲ್ದಲ್ಲಿ ಸೀನೂ ಅಂತ ಕರೀಬಾರ್ದೂಂತ ಗೊತ್ತಿಲ್ವೇನೋ…. ಯಾರೋ ಆಕ್ಷೀ ಅಂತಾರೆ ಅನ್ಕೊಂಡು ಅಷ್ಟೂ ಜನ ಓಡಿದರಲ್ಲ, ಅವರಲ್ಲಿ ಕೆಲವರಾದರೂ ಪೊಲೀಸ್‍ಗೆ , ಆಂಬುಲೆನ್ಸ್‍……’ ಎಂದು ಸೀನು ದುರುದುರು ನೋಡುತ್ತಾ, ದುಡುದುಡು ನಡೆದು ನನ್ನ ಬಳಿ ಬರುವಷ್ಟರಲ್ಲಿ ‘ಹೋ… ದಾ….. ಹೋ… ದಾ….’ ಎನ್ನುವ ರೀತಿಯಲ್ಲಿ ಸೈರನ್ ಕೂಗಿಸುತ್ತಾ ಆಂಬುಲೆನ್ಸೊಂದು ಬಂದೇಬಿಟ್ಟಿತು. ಒಳಗಿನಿಂದ ಕಾರ್ಪೊರೇಷನ್‍ನವರು ನಾಯಿ ಹಿಡಿಯಲು ಬಳಸುವ ಕಾಲರ್ ಒಂದನ್ನು ಹಿಡಿದ ಫ್ಯಾಂಟಮ್‍ನಂತಹ ಮುಖವಾಡ ಧರಿಸಿದ ವ್ಯಕ್ತಿಯೊಬ್ಬ ‘ಹೂ ಈಸ್ ದ ಗೋಸ್ಟ್ ಹೂ ವಾಕ್ಸ್?’ ಎನ್ನುತ್ತಾ ಅತ್ತಿತ್ತ ಕತ್ತಾಡಿಸಿದ. ದಿಕ್ಕಾಪಾಲಾಗಿದ್ದ ಜನರ ಪೈಕಿ ಕ್ರಿಕೆಟ್ ಪಿಚ್‍ನಿಂದ ಥರ್ಡ್‍ ಅಂಪೈರ್ ಇರುವಷ್ಟು ದೂರದಲ್ಲಿ ನಿಂತು ನನ್ನತ್ತಲೇ ‘ಔಟ್’ ಸೂಚಕ ಬೆಟ್ಟನ್ನು ತೋರಿಸುತ್ತಿದ್ದರು.


‘ಬ್ರಿಂಗ್ ದ ಸ್ಟ್ರೆಚರ್’ ಎಂದ ಫ್ಯಾಂಟಮ್. ಎರಡು ಸ್ಪೈಡರ್‍ಮ್ಯಾನ್‍ಗಳು ಸ್ಟ್ರೆಚರ್‍ಹಸ್ತರಾಗಿ ಕರೋನಾ ಟೈಮ್ಸಲ್ಲಿ ಅಮೆರಿಕದ ಕಂಪನಿಯ ಷೇರುಗಳು ಕೆಳಕ್ಕೆ ಧುಮುಕಿದ ಸ್ಪೀಡಿನಲ್ಲಿ ಕೆಳಕ್ಕೆ ಜಿಗಿದರು.
‘ಓಡು….’ ಎನ್ನುತ್ತಾ ‘ಮಿಂಚಿನ ಓಟ’ ಚಿತ್ರದಲ್ಲಿ ಸುತ್ತಲೂ ಪೊಲೀಸರಿದ್ದರೂ ಯಾವುದೋ ಸಂದಿಯಲ್ಲಿ ತೂರಲು ಹೋದ ಶಂಕರ್‍ನಾಗ್‍ನಂತೆ ಫ್ಯಾಂಟಮ್, ಸ್ಪೈಡರ್‍ಮ್ಯಾನ್‍ಗಳ ಸರ್ಕಲ್ಲನ್ನು ಬೈಸೆಕ್ಟ್ ಮಾಡುವ ರೇಖೆಯ ಹಾದಿ ಹಿಡಿದೆ.
‘ಸ್ಟಾಪ್! ನಿನ್ನನ್ನು ಬೆನ್ನಟ್ಟುತ್ತಿರುವುದು ಬೇಟೆನಾಯಿಗಳಲ್ಲ, ಕರೋನಾ ದಳ. ತಪ್ಪಿಸ್ಕೊಳಕ್ಕೆ ಪ್ರಯತ್ನ ಪಟ್ರೆ ಜೈಲಾಗತ್ತೋ ಐಲೂ…’ ಎಂದು ಎಚ್ಚರಿಸಿತು ಮನ. ಓಡುವ ಭಂಗಿಯಲ್ಲೇ ಫ್ರೀಝ್ ಆಗಿ ವಾಟರ್ಲೂನ ಬೋನಪಾರ್ಟ್‍ನಂತೆ ಶರಣಾಗಲು ತಯಾರಾಗುತ್ತಾ, ‘ಸೀನೂ, ವಿ ಹ್ಯಾವ್ ನೋ ಚಾಯ್ಸ್’ ಎಂದೆ.
‘ಚಾಯ್‍ವಾಲಾನೇ ಹೇಳಿರೋದು, ಸೀನೋವ್ರು ಯಾರನ್ನೂ ಬಿಡಕ್ಕಾಗಲ್ಲ’ ನುಡಿದ ಫ್ಯಾಂಟಮ್.
‘ಇಲ್ಯಾರೂ ಸೀನಿಲ್ಲವಲ್ಲ…’
‘ಸೀನೂ ಅಂತ ಈಗ ತಾನೇ ಹೇಳಿದಿರಲ್ಲ… No time for enquiries or explanations. ಹಿಡಿಯೋ ಅವನನ್ನ…. ಹಾಕು ಮೂತಿಗೆ ಮಾಸ್ಕು; ಅವನ ಸಮ್ಮರ್ ಕ್ರಾಪ್ ತಲೆಗೂ ಸ್ನಾನಿಟೈಝರ್ ಸವರು. ಯಾರ್ನೀವು? ಬಕಪ್, ವಿ ಹ್ಯಾವ್ ಮೆನಿ ಕೋವಿಡ್ ಶಾರ್ಕ್ಸ್ ಟು ಕ್ಯಾಚ್’ ಗಡಿಬಿಡಿ ಮಾಡಿದ ಫ್ಯಾಂಟಮ್.
‘ಸೀನು, ಪಾಂಡು. ನನ್ನ ಪೂರ್ಣ ಹೆಸರು….’ಆರಂಭಿಸಿದ ಸೀನು.
What? A Pondful of sneeze? ‘‘ಬೆರಳ ತುದಿಯಷ್ಟು ಸೀನಿಗೇ ಬಾಯ್ಬಡ್ಕೊಳೋ ಪರಿಸ್ಥಿತಿ ಇರುವಾಗ ಒನ್ ಪಾಂಡ್… ಯೂ ಮೀನ್ ಒಂದು ಕೊಳದಷ್ಟು ಕ್ವಾಂಟಿಟಿ ಸೀನುವುದೇ? ವಾಟ್ ಎ ಹಾರಿಬಲ್ ಕ್ರಿಯೇಚರ್ ಹಿ ಈಸ್! ಹಿಡಿಯೋ ಅವನನ್ನೂ. ಹುಷಾರು. ನಾಯಿ ಹಿಡಿಯೋ ಕಾರ್ಪೊರೇಷನ್ನವರಿಗೆ ನಾಯಿ ಕಚ್ಚಿದರೆ ಹದಿನಾಲ್ಕು ಇಂಜೆಕ್ಷನ್ನಷ್ಟೆ. ನಮಗೆ ಇವರ ಸೀನು ತಾಕಿದರೆ ಹದಿನಾಲ್ಕು ದಿನ ಕ್ವಾರಂಟೈನ್…. ದೂರದಿಂದಲೇ ಚಾಚಿ ಹಿಡಿದು ಒಳತಳ್ಳು’ ಎಂದನವ. ಸ್ಟ್ರೆಚರಿಗರಿಗೆ ತೊಂದರೆ ಕೊಡದೆ ನಾವೇ ವ್ಯಾನ್ ಹತ್ತಲು ಹೋದೆವು.
‘ಸ್ಟಾಪ್. ಹ್ಯಾಂಡಲ್ ಮುಟ್ಬೇಡಿ’ ಎನ್ನುತ್ತಾ ವ್ಯಾನಿನ ಡ್ರೈವರ್ ಸಾಗಿಬಂದು ಹ್ಯಾಂಡಲ್‍ಗೆ ಸ್ಯಾನಿಟೈಝರ್ ಬಳಿದು, ವಿಶಾಲವಾಗಿ ಬಾಗಿಲು ತೆಗೆದು ‘ಎಡಗೈಲಿ ಬಲಗೈ ತುರುಕಿಕೊಂಡು ಒಳಗೆ ಹತ್ತಿ ಅಲ್ಲಾಡದೆ ಕೂತ್ಕೊಳಿ’ ಎನ್ನುತ್ತಾ ಮ್ಯಾಜಿಕ್ ಜಾನ್ಸನ್ ದೂರದಿಂದಲೇ ಬಾಲ್‍ಅನ್ನು ಬ್ಯಾಸ್ಕೆಟ್‍ನೊಳಗೆ ಬೀಳುವಂತೆ ಎಸೆಯುತ್ತಿದ್ದ ಪರಿಣತಿಯಲ್ಲಿ ಮಾಸ್ಕನ್ನು ಟಾಸ್ ಮಾಡಿದ. ಮಾಸ್ಕ್ ಸೀನು ಮತ್ತು ನನ್ನ ತಲೆಯಿಂದ ಕೆಳಗಿಳಿದು ಮೂತಿಯ ಭಾಗದಲ್ಲಿ ಕಚ್ಚಿಕೊಂಡು ನಿಂತಿತು.
ಹಂಡ್ರೆಡ್ ಮೀಟರ್ ರನ್ನಿಂಗ್‍ನಲ್ಲಿ ಸ್ಟಾರ್ಟ್ ಸಿಗ್ನಲ್ ಸಿಕ್ಕಿದಾಕ್ಷಣ ಜಂಪ್‍ ಸ್ಟಾರ್ಟ್ ಮಾಡುವ ಅಥ್ಲೆಟ್‍ಗಳಂತೆಯೇ ವ್ಯಾನ್ ಒಂದು ಜರ್ಕ್ ಹೊಡೆದು ಮುಂಚಲಿಸಿತು. ಫ್ಯಾಂಟಮ ಹುಲ್ಲೆಗಳನ್ನು ಹುಡುಕುವ ಸಿಂಹದಂತೆ ಅತ್ತಿತ್ತ ನೋಡುತ್ತಾ ಕುಳಿತಿದ್ದ. ಅವನಿಗೆ ವಿವರಿಸುವುದೂ, ಆರ್ನಬ್ ಗೋಸ್ವಾಮಿಯ ಬಳಿ ವಾದಕ್ಕೆ ಕೂರುವಷ್ಟೇ ಫಲಕಾರಿಯೆಂದು ಅರಿತ ನಾವಿಬ್ಬರೂ ಕರೋನಾ ಚೆಕಿಂಗ್ ಪಾಯಿಂಟ್ ಬರುವವರೆಗೆ ಮ್ಯೂಟ್ ಬಟನ್ ಒತ್ತಿದ ಟಿವಿಯಂತೆ ದೃಶ್ಯಕ್ಕುಂಟು ಶ್ರಾವ್ಯಕ್ಕಿಲ್ಲ ಎನ್ನುವಂತೆ ಕುಳಿತಿದ್ದೆವು.


ಚೆಕಿಂಗ್ ಸೆಂಟರ್ ಬರುತ್ತಿದ್ದಂತೆಯೇ ನಾವಿಬ್ಬರೂ ಜೇಬಿನಲ್ಲಿರಿಸಿಕೊಂಡಿದ್ದ ಟಾಪ್ ಕ್ವಾಲಿಟಿ ಮಾಸ್ಕ್ ಹೊರತೆಗೆದು ಧರಿಸಿದೆವು. ನಮ್ಮನ್ನು ನಿರ್ಭಯಾ ಹಂತಕರಿಗೆ ಗಲ್ಲಿಗೆ ಮುಂಚೆ ಹಾಕಿದ್ದ ಕಪ್ಪುಬಟ್ಟೆಯಂತಹ ಮಾಸ್ಕನ್ನು ಧರಿಸಿದ್ದ ವ್ಯಕ್ತಿಯ ಮುಂದೆ ಕೂಡಿಸಿದರು. ವ್ಯಕ್ತಿ ಬಗಲಿನಿಂದ ಗನ್ನೊಂದನ್ನು ತೆಗೆದು ನಮ್ಮ ಹಣೆಗಿಟ್ಟ. ‘ಹ್ಯಾಂಡ್ಸಪ್ ಅನ್ನೋದನ್ನ ಮರೆತರು. ಎಲ್ಲ ಫಿಲ್ಮ್‍ಗಳಲ್ಲೂ ಗನ್ ಹಣೆಗೆ ಬಂದಾಗ ಆ ಡೈಲಾಗ್ ಇರಲೇಬೇಕು’ ಎಂದು ಪಿಸುಗುಟ್ಟಿದೆ.
‘ನೋ ಜೋಕ್ಸ್, ದೀಸ್ ಆರ್ ವೆರಿ ಸೀರಿಯಸ್ ಟೈಮ್ಸ್’ ಎಂದ ನೇಣುಮಾಸ್ಕುಧಾರಿ, ಮುಂದುವರೆದು ‘ಗನ್ ಷೋಸ್ ನೋ ಫೀವರ್. ಏನು ನಿಮ್ಮ ಹೆಸರು?’
‘ಪಾಂಡು’
‘ನೀವು ಹಚ್ಚಿಕೊಂಡ ಪೌಡರ್ ಹೆಸರಲ್ಲ ಕೇಳಿದ್ದು. ಪಾಂಡ್ಸಂತೆ ಪಾಂಡ್ಸು… ಟಾಲ್ಕಮ್ ವಿಷಯ ಬಿಟ್ಟು ಸರಿಯಾಗಿ ಟಾಕ್ ಮಾಡಿ’
‘ಫುಲ್‍ನೇಮ್ ಪಾಂಡುರಂಗರಾವ್ ವೆಂಟರಮಣರಾಜಾರಾವ್ ತಿರುಚಿನಾಪಳ್ಳಿ’ ಎಂದೆ.
‘ಇಡೀ ವಾರ್ಡ್‍ಗಾಗುವಷ್ಟು ಹೆಸರನ್ನ ನಿಮ್ಮೊಬ್ಬರಿಗೇ ಇಟ್ಟಿದ್ದಾರಲ್ರೀ…. ಐ ವಿಲ್ ಟೇಕ್ ಇಟ್ ಆಸ್ ಪಾಂಡು ಫಾರ್ ಶಾರ್ಟ್’ ಎಂದನವ. ಕಟ್ಟೆಯ ಕಲ್ಲು ಕಟ್ಟೆಗೆ ಸೇರಿತು.
‘ಮೈ ನೇಮ್ ಈಸ್ ಸೀನು….’
‘ಸಾರಿ ಡಿಯರ್ ಸರ್. ಆ ಹೆಸರನ್ನು ಕರೋನಾ ವೈರಸ್‍ಗೆ ಲಸಿಕೆ ಕಂಡುಹಿಡಿಯುವವರೆಗೆ ಬ್ಯಾನ್ ಮಾಡಲಾಗಿದೆ. ಒಂದು ಅಫಿಡವಿಟ್ ಕೊಟ್ಟು ಶ್ರೀನಾಥ್ ಅಂತಾನೋ, ಶ್ರೀನಿವಾಸ್‍ ಅಂತಾನೋ ಬದಲಾಯಿಸಿಕೊಳ್ಳಿ’ ಸಿಡುಕಿದನವ. ಆತನ ಹೆಗಲಮೇಲಿದ್ದ ನಾಮಫಲಕ ‘ಶಾಂತಮೂರ್ತಿ’ ಎಂದಿತ್ತು.
‘ನನ್ನ ಹೆಸರು ಶ್ರೀನಿಕೇತನ ಅಂತ ಸಾರ್. ಹಾಗೆ ಹೇಳಿದರೆ ಮನೆ ಹೆಸರು ಅನ್ಕೊಂಡು ಮತ್ತೆ ‘ನಿಮ್ಹೆಸ್ರು?’ ಅಂತಾರೆ. ಆದ್ದರಿಂದ ಸೀನು ಅಂತ ಬದಲಾಯಿಸ್ಕೊಂಡ್ವಿ’
‘ಬಿ ಡಿಫರೆಂಟ್. ಮೊದಲೆರಡು ಅಕ್ಷರ ಬಿಡಿ. ರಿಪೀಟ್ ಆಗಿರೋ ನ ತೆಗೆದರೆ ಕೇತ ಉಳಿಯತ್ತೆ. ಕೇತು ಅಂತ ಇಟ್ಕೊಂಡ್ಬಿಡಿ’ ಸಜೆಸ್ಟಿಸಿದ ಶಾಂತಮೂರ್ತಿ.
‘ನೀವು ರಾಹು ಆಗಿ ನನ್ನ ಜೊತೆಗೆ ಬಂದರೆ ಆಗಬಹುದು’ ಎಂದ ಸೀನು.
‘ಪಕ್ಕದಲ್ಲಿದ್ದಾರಲ್ಲ ನಿಮ್ಮ ಟಾಲ್ಕಂ ಪೌಡರ್ರು, ಅವರನ್ನೇ ರಾಹು ಅಂತ ತೋರಿಸಿ’ ಸಿಡುಕನಲ್ಲೂ ಸೆನ್ಸ್ ಆಫ್ ಹ್ಯೂಮರ್! ಬಾಸ್, ಸರ್ಕಾರಿ ಅಧಿಕಾರಿಗಳು ನಕ್ಕಾಗ ನಾವೂ ನಕ್ಕುಬಿಟ್ಟರೆ ಭವಿಷ್ಯದ ಕರಾಳತೆಯಲ್ಲಿ ಕೊಂಚ ಡಿಸ್ಕೌಂಟ್ ದೊರಕುತ್ತದೆ ಎಂಬ ಅರಿವಿದ್ದ ನಾವು ಕಿಸಕ್ ಎಂದೆವು.
‘ಗುಡ್. ಕರೋನಾ ಸಿಂಪ್ಟಮ್ ಇದ್ದರೂ ನಗ್ತಿರೋದು ನಿಮ್ಮ ಪಾಸಿಟಿವ್ ಆಟಿಟ್ಯೂಡ್ ತೋರಿಸತ್ತೆ. ಕರೋನಾ ಬಗ್ಗೆ ನಿಮಗೇನು ಗೊತ್ತು?’
‘ಕರೋನಾ ವೈದಿಕ ಬ್ರಾಹ್ಮಣರಿಗೆ ಗೊತ್ತಿದ್ದ ವೈರಸ್ ಸಾರ್’
ನೇಣುಮಾಸ್ಕುಧಾರಿಯ ಶರೀರ ಕೌತುಕ ಸೂಚಿಸುವಂತೆ ಮುಂದಕ್ಕೆ ಬಾಗಿತು. ‘ಕ್ವೈಟ್ ಇಂಟರೆಸ್ಟಿಂಗ್. ಟೆಲ್ ಮಿ ಅಬೌಟ್ ಇಟ್’ ಎಂದನವ.
‘ಯಾರಾದರೂ ಸತ್ತರೆ ಹದಿಮೂರು ದಿನ ವಿವಿಧ ತಿಥಿ, ವೈಕುಂಠ ಮಾಡಿ ಹದಿನಾಲ್ಕನೆಯ ದಿನ ಶುಭ ಆಚರಿಸಿದ ನಂತರವೇ ಹೊರಗಿನವರಿಗೆ ಒಳಕ್ಕೆ ಬರಲು ಅವಕಾಶ. ಅಲ್ಲಿಯವರೆಗಿನ ಸೂತಕವೇ ಇಂದಿನ ಕರೋನಾಗೂ ಸೂತಕ… ಕ್ಷಮಿಸಿ… ಸೂಕ್ತವಾದ್ದರಿಂದ ಕರೋನಾ ಎಫೆಕ್ಟೂ ಈಸ್ ಈಕ್ವಲ್ ಟು ಸೂತಕ ಅಂತ ಪ್ರೂವ್ ಆಯಿತಲ್ಲ ಸಾರ್’
‘ಹ್ಹೆಹ್ಹೆ. ಇರಬಹುದು. ಆದರೆ ಮೂರಡಿ, ಆರಡಿ ದೂರ ನಿಲ್ಲೋದು…?’
‘ಆಗಿನವರು ಸೂತಕದವರಿಂದ, ಮೈಲಿಗೆಯವರಿಂದ ಅದಕ್ಕಿಂತಲೂ ದೂರ ನಿಲ್ಲುತ್ತಿದ್ದರು. ಏನಾದರೂ ಕೊಡಬೇಕಾದರೆ ಕ್ಯಾಚ್ ಹಾಕುತ್ತಿದ್ದರು. ಆಗಿನ ಕಾಲದ ರಜಸ್ವಲೆ ಹೆಂಗಸರು ಕ್ರಿಕೆಟ್ ಆಡುವ ಅವಕಾಶವಿದ್ದಿದ್ದರೆ ಒಳ್ಳೆಯ ಸ್ಲಿಪ್ ಫೀಲ್ಡರ್ಸ್ ಆಗುತ್ತಿದ್ದರು’
‘ಅದು ಹೇಗೆ?’
‘ಅವರು ಮೂಲೆಯಲ್ಲಿ ಕೂತಾಗ ಪುಸ್ತಕ, ಪೆನ್ನು, ಚೆಂಬು, ತಟ್ಟೆಗಳಲ್ಲದೆ ಅನ್ನ, ಸಾರು, ಪಲ್ಯಗಳನ್ನೂ ನೆಲಕ್ಕೆ ಬೀಳದಂತೆ ಕ್ಯಾಚ್ ಹಿಡಿಯುತ್ತಿದ್ದರು. ಯಾರೇ ಎಷ್ಟೇ ಸ್ಪೀಡಾಗಿ, ಯಾವುದೇ ಕೋನದಲ್ಲಿ ಎಸೆದರೂ ಹಿಡಿಯುವ ಎಕ್ಸ್‍ಪರ್ಟೀಸ್ ಇರುತ್ತಿತ್ತು ಅವರಲ್ಲಿ. ಕರೋನಾಗೂ ಅದೇ ಸಿಸ್ಟಮ್ಮೇ ಸರಿ’
‘ಮುಖಕ್ಕೆ ಮಾಸ್ಕ್ ಧರಿಸುವ ಕಾರಣ ಗೊತ್ತೆ?’
‘ಗೊತ್ತು ಸರ್.  ಸ್ನೀಝಿಂಗು ಸ್ಪ್ರಿಂಕಲ್ ಆಗದಿರಲಿ ಅಂತ. ನಮ್ಮ ಹಿಂದಿನವರು ಇನ್ನೂ ಮುಂದು’
‘ಹೇಗೆ?’
‘ಸ್ನೀಝು ಇರಲಿ, ಎಂಜಲೂ ಹಾರುವಂತಿರಲಿಲ್ಲ. ಕೆಲವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮುಖವೇ ಕಾಣುವಂತಿಲ್ಲ ಎನ್ನುತ್ತಿದ್ದರು. ರಜಸ್ವಲೆಯ ಕೋಣೆಯಿಂದ ದನಿ ಕೇಳಿದರೂ ಮಡಿ ಎನ್ನುತ್ತಿದ್ದವರ ಕಾಲದಲ್ಲಿ ಕರೋನಾ ಅಪ್ಪನಂತಹದ್ದು ಬಂದರೂ ಬಾಲ ಮುದರಿಕೊಂಡು ಹೋಗುತ್ತಿತ್ತು. ಹರಡಲು ಎದುರಿಗೊಂದು ಮೂತಿಯೇ ಸಿಗುತ್ತಿರಲಿಲ್ಲವಲ್ಲಾ…!’
‘ಹದಿನಾಲ್ಕು ದಿನದ ಕ್ವಾರಂಟೈನ್ ಏನೋ ಹೇಳಿದಿರಿ. ಮೋದಿಯವರು 21 ದಿನ ಲಕ್ಷ್ಮಣರೇಖೆ ಹಾಕಿದುದರ ಕಾರಣ ಗೊತ್ತೆ?’
‘ಗೊತ್ತು. ಗಣೇಶ ಸಂಖ್ಯೆ ಇಪ್ಪತ್ತೊಂದರ ಪ್ರಿಯ. ಗರಿಕೆಯಿಂದ ಮೋದಕದವರೆಗೆ ಎಲ್ಲವೂ 21 ಮತ್ತು ಮಲ್ಟಿಪಲ್ಸ್ ಆಫ್ 21. ಕರೋನಾ ವಿಘ್ನ. ವಿಘ್ನ ತೊಲಗಬೇಕಾದರೆ ವಿಘ್ನವಿನಾಯಕ ಸಂಪ್ರೀತನಾಗಬೇಕು. ಅದಕ್ಕೆ ಮಿನಿಮಮ್ ಪೀರಿಯಡ್ 21 ದಿನವೆಂದು ಪ್ರಧಾನಿಗೆ ಗೊತ್ತಿದೆ’
‘ಇಷ್ಟೆಲ್ಲ ವಿಷಯ ತಿಳಿದಿರುವ ನಿಮಗೆ ಕೋವಿಡ್ ಸಿಂಪ್ಟಂಪ್ಸ್ ಹೇಗೆ ಬಂತು? ಎನಿ ಫಾರಿನ್ ಇನ್ವೇಷನ್?’
‘ನನಗೆ ಗೊತ್ತಿರುವುದು ರಿನ್ ಒಂದೇ ಸರ್. ಫಾರಿನ್ ತಿಳಿಯದು’
‘ಮತ್ತೆ ಸೀನು?’
‘ಸೀನು ಉರುಫ್ ಶ್ರೀನಿಕೇತನ್ ನನ್ನ ಸ್ನೇಹಿತ. ಅವನನ್ನು ಕಂಡು ಬಹಳ ದಿನವಾಗಿತ್ತು. ಅಚಾನಕ್ಕಾಗಿ ಕಂಡುಬಂದ ಅವನನ್ನು ಸೀನೂ ಅಂತ ಕೂಗಿದೆ. ನಿಮ್ಮ ಫ್ಯಾಂಟಮ್ ಹಿಡ್ಕೊಂಡು ಬಂದ. ನಮಗೆ ಯಾವುದೇ ಸಿಂಪ್ಟಂಪ್ಸ್ ಇಲ್ಲ ಸಾರ್’
‘ಛೆ! ಯೂ ಆರ್ ವೇಸ್ಟಿಂಗ್ ಅವರ್ ಟೈಮ್. ಎನಿವೇ, ಒನ್ ಲಾಸ್ಟ್ ಕೊಶ್ಚೆನ್. ಏಪ್ರಿಲ್ 14ರ ಡೆಡ್‍ಲೈನ್ ಕೊಟ್ಟಿರೋದು ಯಾಕೆ?’
‘ಕರೋನಾ ಎಫೆಕ್ಟ್ ಆದವರು, ಅದರ ಭಯದಲ್ಲಿ ಬದುಕುತ್ತಿರುವವರು ಎಲ್ಲರೂ ಒಂದು ವಿಧದಲ್ಲಿ ಡೌನ್ ಟ್ರಾಡನ್ ಸರ್. ಅವರ ಅಪ್‍ಲಿಫ್ಟ್‍ಮೆಂಟ್ ಆಗಬೇಕು’
‘ಅದಕ್ಕೂ ಏಪ್ರಿಲ್ 14ಕ್ಕೂ ಏನು ಸಂಬಂಧ?’
‘ಅಂಬೇಡ್ಕರ್ ಸರ್. ಅಪ್‍ಲಿಫ್ಟ್‍ಮೆಂಟ್ ಆಫ್ ದ ಡೌನ್‍ಟ್ರಾಡನ್‍ಗೆ ಅಂತ ಜೀವ ಸವೆಸಿದ ಅವರ ಹುಟ್ಟುಹಬ್ಬ ಏಪ್ರಿಲ್ 14 ಸರ್. ಡೌನ್‍ಟ್ರಾಡನ್ನು ಅಪ್‍ಲಿಫ್ಟು ಆಗಕ್ಕೆ ಅದೇ ಮೋಸ್ಟ್ ಸೂಟೆಬಲ್ ಡೇಟು ಸರ್’
ಶಾಂತಮೂರ್ತಿ ‘ಯೂ ಕ್ಯಾನ್ ಗೋ’ ಎಂದ.
‘ಜಸ್ಟ್ ಒನ್ ಪ್ರಾಬ್ಲಂ ಸರ್. ನಾವು ಇಲ್ಲಿ ಬಂದದ್ದಕ್ಕೆ ಕಾರಣ ಇಲ್ಲ. ಹೋಗುವಾಗ ಪೊಲೀಸ್ ನೋಡಿದರೆ ಅನಗತ್ಯವಾಗಿ ಓಡಾಡ್ತಿದ್ದೀವಿ ಅಂತ ಕೋಲ್ತೊಗೊಂಡ್ಹೊಡೀತಾರೆ. ಎನಿ ಸಲ್ಯೂಷನ್ಸ್?’ ಎಂದೆ.
ಶಾಂತಮೂರ್ತಿ ಪಕ್ಕದಲ್ಲಿದ್ದ ಸ್ಯಾನಿಟೈಝರ್ ಡ್ರಮ್ಮಿನಿಂದ ಎರಡು ‘ಸ್ವಿಗ್ಗಿ ಡೆಲಿವರಿ ಬಾಯ್’ ಡ್ರೆಸ್‍ಗಳನ್ನು  ತೆಗೆದು ನೀಡುತ್ತಾ ‘ಹೋಗೋವಾಗ ನೋ ಸೀನೂ…. ಐದರ್ ಇನ್ ವರ್ಡ್ಸ್ ಆರ್ ಇನ್ ಆಕ್ಷನ್. ಅಂಡರ್‍ಸ್ಟ್ಯಾಂಡ್?’ ಎಂದ.
‘ಬಂದದ್ದೆಲ್ಲಾ ಬರಲೀ…. ಕೋವಿಡ್ಡಿನ ದಯೆ ಒಂದಿರಲಿ’ ಎಂದು ಭಜನೆ ಮಾಡುತ್ತಾ ಸೀನು ಮುನ್ನಡೆದ. ನಾನು ಬಸವನ ಹಿಂದೆ ಬಾಲವಾದೆ.

Comments

  1. ಕೇತ 😂😂😂ಹೆಸರು ಚೆನ್ನಾಗಿದೆ. ಸಾವಿನ ನರ್ತನದ ಜೊತೆ ಹಾಸ್ಯ...ಅದಕ್ಕೂ ಬೇರೆ ರೀತಿ ಯೋಚಿಸುವ ಅಗತ್ಯ ವಿದೆ.

    ReplyDelete
    Replies
    1. ರಾ'ರಾಜಿ'ಸಿದ ನಿಮ್ಮ ಖುದ್ದು ಮನೋ'ರಾಜಿ'ಯಿಂದ ಪ್ರತಿಕ್ರಿಯೆಗೆ ಧನ್ಯವಾದಗಳು

      Delete
  2. ಹಹ😊 ಫನ್ನಿಯಾಗಿ ಇವತ್ತಿನ ಪರಿಸ್ಥಿತಿಯ ಪೂರಾ ಔಟ್ಲೈನ್ ತೋರ್ಸಿದ್ದೀರಾ..
    ಒಂದು ಚಿಕ್ಕ ಪದ ಸೀನೂ(ನಾನೂ ನಿಧಾನಕ್ಕೆ ಪಿಸುಗುಟ್ದೆ😅) ಅನ್ನೋದನ್ನ ಇಟ್ಕೊಂಡು ಎಷ್ಟೆಲ್ಲಾ ಉಪಕಥೆ ಸೃಷ್ಠಿ ಮಾಡಿ ವಿವರಿಸಿದ್ದೀರಾ👏👏

    @ನಾಣಿ ಮಾವಾ ಥ್ಯಾಂಕ್ಸ್ ಫಾರ್ ಸಜೆಸ್ಟಿಂಗ್ ದಿಸ್🤝🤝

    ReplyDelete
    Replies
    1. ನಾಣಿ ಮಾಮನಿಗೆ ನನ್ನದಂತೂ ಲೆಕ್ಕವಿಲ್ಲದಷ್ಟು ಥ್ಯಾಂಕ್ಸ್. ಸದಭಿರುಚಿಯ ಓದುಗರನ್ನು ಒದಗಿಸುವ ಓಯಸಿಸ್ ಈ ಪತ್ರಿಕೆ

      Delete
  3. Wonderful ರಾಮನಾಥ್ Sir! While portraying the situational humour, you have blended the (Scene)u Rasa so well, the reader gets the much needed respite (from corona news:)) while he is locked down without venturing anywhere outside of your article. ಪ್ರತಿಯೊಂದು ದೃಶ್ಯ, ಆ ಹೊಂದಾಣಿಕೆಯ ಸಂವಾದ, ಪಾತ್ರ ನಾಮಗಳು. ಆಹಾ! ಸೊಗಸಾಗಿದೆ. ತುಂಬಾ ಎಂಜಾಯ್ ಮಾಡಿದೆ. Badari

    ReplyDelete
    Replies
    1. ಅಳುವ ಕಡಲೊಳು ತೇಲಿ ಬರುತಿದೆ ನಗೆಯ ಹಾಯಿದೋಣಿ. ಹೊಗೆಯ ಮಧ್ಯೆಯೂ ನಗೆ ದೊರಕುವುದು ನನಗಂತೂ ಅಚ್ಚರಿಯ ಮತ್ತು ಸಂತಸದ ಸಂಗತಿ. What we see as the end many times will just be a bend.

      Delete
  4. ಸೀನು- ಪಾಂಡು ಇಬ್ಬರಿಗೂ ಬಂದ ಪಾಡಿನ ಸೀನ್ ಅನ್ನು ಕಣ್ಣಿಂಗೆ ಕಟ್ಟುವಂತೆ ವರ್ಣಿಸಿದೀರಿ! ಒಂದು ಸಣ್ಣ ಎಳೆ ಹಿಡಿದು ಎಂತಹ ದೊಡ್ಡ ಜಾಲವನ್ನು ನೇಯ್ದು ಓದುಗರನ್ನು ಅದರಲ್ಲಿ ಬಂಧಿಸಿಡುವ ಅಪರೂಪದ ಕಲೆ ನಿಮಗೆ ಸಿದ್ದಿಸಿದೆ. ಕೋವಿಡ್ನ್ ಕರಿಮೋಡದ ಮಧ್ಯೆ ನಗೆಮಿಂಚನ್ನು ತಂದದ್ದಿಕ್ಕೆ ಧನ್ಯವಾದಗಳು. ಸೀನು ಪಾಂಡು ಕ್ಷೇಮವಾಗಿ ಮನೆ ತಲುಪಿದರೆ ಎಂಬ ಕುತೂಹಲ ಈಗ....

    ReplyDelete
    Replies
    1. ಕ್ಷೇಮವಷ್ಟೇ ಅಲ್ಲ, ಕ್ಷಾಮವಾಗಿಯೂ - ಹೊಟೆಲ್ ಇಲ್ಲ, ಪಾನಿಪುರಿ ಗಾಡಿ ಇಲ್ಲ.... ಅವರು ಮನೆ ತಲುಪುವುದು ಅಂತಿರಲಿ, ಲೇಖನ ನಿಮ್ಮ ಮನ ತಲುಪಿದ್ದು, ನೀವು ಪ್ರತಿಕ್ರಿಯೆ ನೀಡಿದ್ದಕ್ಕೆ ನಾನು ಋಣಿ.

      Delete
  5. ರಾಮ್ ಸಾರ್ ಮನೆಯಲ್ಲೇ ಕೂತು ಬೋರಾದ, ಸಮಯ ತಳ್ಳುವ ದಿನಗಳಲ್ಲಿ ಈ ಲೇಖನ ಓದಿ ಸಾವಿನ ಸೋಂಕು ಮಾರಿಯ ಮಧ್ಯೆ ಕಿಸು ಕಿರುನಗೆ ತಂದಿದೆ. ನಿಮ್ಮ ಕಲ್ಪನೆಗೆ ಮಿತಿಯುಂಟೇ ???? ನನಗೆ ತುಂಬಾ ಮೆಚ್ಚುಗೆಯಾದ ತಮ್ಮ ಈ ಲೇಖನದ ಹಾಸ್ಯದ ಸಾಲುಗಳು
    ‘ಹೋ… ದಾ….. ಹೋ… ದಾ….’ ಎನ್ನುವ ರೀತಿಯಲ್ಲಿ ಸೈರನ್, ಫ್ಯಾಂಟಮ್‍, ಎರಡು ಸ್ಪೈಡರ್‍ಮ್ಯಾನ್‍ಗಳು, ಷೇರುಗಳು ಕೆಳಕ್ಕೆ ಧುಮುಕಿದ ಸ್ಪೀಡ್ , ದೂರದಿಂದಲೇ ಚಾಚಿ ಹಿಡಿದು ಒಳತಳ್ಳು, ಮ್ಯಾಜಿಕ್ ಜಾನ್ಸನ್, ಆರ್ನಬ್ ಗೋಸ್ವಾಮಿಯ ಬಳಿ ವಾದ, ಹ್ಯಾಂಡ್ಸಪ್ , ಟಾಲ್ಕಮ್ ವಿಷಯ ಬಿಟ್ಟು ಸರಿಯಾಗಿ ಟಾಕ್ ಮಾಡಿ’ ....... ಬರೀತಾ ಹೋದರೆ ಮತ್ತೆ ಪೂರಾ ಲೇಖನ ಬರೆದಂತಾಗುತ್ತದೆ ಹ್ಹ ಹ್ಹ ಹ್ಹ ಹ್ಹ

    ReplyDelete
  6. ಏಂ ಪೇಳಲಿ ನಾಣಿ! 'ನಾನದಾರೋ, ನೀನದಾರೋ, ಮೊಹೆಂಜೊದಾರೋ' ಎಂದರಂತೆ ಬೇಂದ್ರೆ. ಅಸಮತೆಯಲ್ಲಿ ಸಮತೆಯನ್ನು ತಂದು ಸ್ನೇಹದ ತಂತುವನ್ನು ಪೋಣಿಸಿದ ಈ ಚಿಲುಮೆಗೆ, ಅದರ ಚುಕ್ಕಾಣಿಯಾದ ನಿಮಗೆ ಎಂದಿನಂತೆ ಆತ್ಮೀಯ ನಮೋ.

    ReplyDelete

Post a Comment