ಬಾಲಶಂಕರರ ಲೀಲೆಗಳು

ಬಾಲಶಂಕರರ ಲೀಲೆಗಳು
  ಲೇಖನ - ಶ್ರೀ ಬೇಲೂರು ರಾಮಮೂರ್ತಿ

1.       ತಂದೆ ಶಿವಗರು ಮನೆಯಲ್ಲಿ ಸಂಭ್ರಮ,ಸಡಗರ. ಪುತ್ರ ಸಂತಾನದ ಸಂತಸ ಹಂಚಿಕೊಳ್ಳಲು ಅನ್ನ ಸಂತರ್ಪಣೆ.ಅನಿರೀಕ್ಷಿತವಾಗಿ ಎದ್ದ ಸುಂಟರಗಾಳಿ ಸಂತಸದ ವಾತಾವರಣಕ್ಕೆ ಭಂಗ ತಂದಿತ್ತು. ನೊಡು ನೋಡುತ್ತಿದ್ದಂತೆ ತೊಟ್ಟಿಲಲ್ಲಿದ್ದ ಬಾಲಶಂಕರ ಆಗಸಕ್ಕೆ ಹಾರಿದ ದೃಶ್ಯ ಕಂಡು ಜನ ಹೌಹಾರಿದರು. ಕೂಡಲೇ ಮಗುವನ್ನು ಹುಡುಕಿ ತರಲು ಎಂಟು ದಿಕ್ಕಿಗೂ ಎಂಟು ತಂಡಗಳನ್ನು ಕಳುಹಿಸಲಾಯಿತು. ಕೆಲವು ಗಂಟೆಗಳಲ್ಲಿ ಎಂಟು ದಿಕ್ಕಿಗೆ ಹೋದ ಎಂಟೂ ತಂಡಗಳು ಒಂದೊಂದು ಮಗುವನ್ನು ಕರೆತಂದರು. ಎಂಟೂ ಮಕ್ಕಳು ಬಾಲಶಂಕರನನ್ನೇ ಹೋಲುತ್ತಿದ್ದೆವು. ಇವುಗಳಲ್ಲಿ ನಮ್ಮ ಮಗು ಯಾವುದೆಂದು ತಿಳಿಯದೇ  ಶಿವಗುರು ಆರ್ಯಾಂಬೆ ಜೊತೆಗೆ ನೆರೆದಿದ್ದವರೂ ದಿಗ್ಭ್ರಮೆಗೊಂಡಿದ್ದರು. ಕುತೂಹಲದ ಕ್ಷಣಗಳಲ್ಲಿ ಬಂದ ಒಬ್ಬ ಬ್ರಾಹ್ಮಣನ ಕೈಯಲ್ಲಿ ಮತ್ತೊಂದು ಮಗು. ಅದಕ್ಕೂ ಬಾಲಶಂಕರನ ಹೋಲಿಕೆ. ಬ್ರಾಹ್ಮಣ ಈ ಮಗು ಗುರುವಾಯೂರು ಕೃಷ್ಣನ ದೇಗುಲದಲ್ಲಿತ್ತು. ನಿಮ್ಮ ಮಗು ಇರಬಹುದೆಂದು ಕರೆತಂದೆ ಎಂದರು. ಶಿವಗುರು ದಂಪತಿಗಳಿಗೆ ನಿಜವಾದ ಪರೀಕ್ಷೆ ಶುರುವಾಗಿತ್ತು. ಒಂದೊಂದೇ ಮಗುವಿನ ಬಳಿ ಬಂದು ಅದನ್ನು ಎತ್ತಿ ಮುದ್ದಾಡಿಸಿ ಮುಂದೆ ಹೋಗುತ್ತಾ ಒಂಭತ್ತನೆಯ ಮಗುವಿನ ಬಳಿ ಬಂದು ಅದನ್ನು ಮುದ್ದಿಸುತ್ತಿರುವಾಗ ಮೊದಲಿಗೆ ಬಂದು ಎಂಟೂ ಮಕ್ಕಳು ಅಂತರ್ಧಾನವಾದವು. ಕಡೆಗೆ ಬಂದು ಬಾಲಶಂಕರನ ಮೊಗದಲಿ ಮುಗ್ಧ ಮಂದಹಾಸ ಕಂಡು ಶಿವಗುರು ದಂಪತಿಗಳಿಗೆ ತಮ್ಮ ಮಗು ‌ಸಾಕ್ಷಾತ್ ಶಿವಸ್ವರೂಪಿ ಎನ್ನೋದು ಖಚಿತವಾಯಿತು  



ಜೈ ಜೈ‌ಶಂಕರ ಹರಿಹರ ಶಂಕರ

2.       ಒಂದು ದಿನ ಮನೆಯವರೆಲ್ಲರೂ ಸಂಭ್ರಮದಲ್ಲಿರುವಾಗ ಬಾಲಶಂಕರನು ತೊಟ್ಟಿಲಲ್ಲಿರಲು ಆರ್ಯಾಂಬೆ ನಿತ್ಯಕಾಯಕದಲ್ಲಿರಲು ವಿಶ್ವಗುರು ಕಾರ್ಯನಿಮಿತ್ತ ಹೊರಗೆ ಹೋಗಿದ್ದವನು ಹಿಂದಿರುಗಿ ಬಂದಾಗ ತೊಟ್ಟಿಲಿನಲ್ಲಿ ಮಗು ಇಲ್ಲದಿದುದನ್ನು ಕಂಡು ಗಾಬರಿಯಿಂದ ಕಿರುಚಲು ಆರ್ಯಾಂಬೆ ಬಂದು ನೋಡಿ ನಾನೇ ಮಗುವನ್ನು ಮಲಗಿಸಿ ಹೋಗಿದ್ದೆ ಎಂದು ಆತಂಕದಿಂದ ಮನೆಯೆಲ್ಲಾ ಹುಡುಕಿದರೂ ಬಾಲಶಂಕರ ಕಾಣಲಿಲ್ಲ. ನಮಗೆ ಇದೆಂಥಾ ಅಗ್ನಿ ಪರೀಕ್ಷೆ ಅಂತ ಮನೆಯಿಂದ ಹೊರಗೆ ಬಂದು ನಿಂತರು. ಶಿವಗುರು ಮನೆ ಮಗು ಕಾಣುತ್ತಿಲ್ಲ ಅಂತ ಊರಿನ ಜನರೆಲ್ಲಾ ಬಂದರು. ಇವರ ಆತಂಕದ ನಡುವೆ ಬ್ರಾಹ್ಮಣನೊಬ್ಬ ಬಂದು ಮೂರು ದಿನದಿಂದ ಉಪವಾಸ. ಏನಾದರೂ ಕೊಡಿ ಎಂದು ಬೇಡಿದ. ಮನೆಯ ಪರಿಸ್ಥಿತಿ ಅವನಿಗೆ ಅರ್ಥವಾಗಲಿಲ್ಲ. ಅವನು ಬೇಡಿಕೆ ಹೆಚ್ಚಾದಾಗ ‌ಸಂಕಟದ ಪರಿಸ್ಥಿತಿಯಲ್ಲೂ ಕೊಡಲು ಏನಿದೆ ಎಂದು ಮನೆಯಲ್ಲಿ ನೋಡಿದಾಗ ದಪ್ಪ ಕುಂಬಳಕಾಯಿ ಒಂದೇ ಕಂಡಿದ್ದು. ನನ್ನ ಮನೆಯಲ್ಲಿ ಸದ್ಯಕ್ಕೆ ಇರುವುದು ಇದೇ. ಇದನ್ನೇ ಕೊಡುತ್ತೀನಿ ತೆಗೆದುಕೊ ಎಂದು ದಪ್ಪ ಕುಂಬಳಕಾಯಿಯನ್ನು ಎತ್ತಿ ಬ್ರಾಹ್ಮಣನಿಗೆ ಕೊಡುವಾಗ  ಕುಂಬಳಕಾಯಿ ಕೆಳಗೆ ಬಿದ್ದು ಒಡೆಯಿತು. ಅಯ್ಯೋ ಕುಂಬಳಕಾಯಿ ಒಡೆದು ಹೋಯ್ತಲ್ಲ ಅಂತ ಶಿವಗುರು ಗುರು ಚಿಂತೆಯಲ್ಲಿದ್ದಾಗ ಎಲ್ಲರಿಗೂ ಅಚ್ಚರಿಯಾಗುವಂತೆ ಒಡೆದ ಕುಂಬಳಕಾಯಿಂದ ಬಾಲಶಂಕರ ಹೊರಬಂದಾಗ ಶಿವಗುರು ಆರ್ಯಾಂಬೆ ಆನಂದಕ್ಕೆ ಪಾರವೇ ಇಲ್ಲ. ನಮ್ಮ ಮಗು ದೈವಾಂಶ ಸಂಭೂತನೆನ್ನುವುದರಲ್ಲಿ ಅನುಮಾನವೇ ಇಲ್ಲ ಅಂದು ಅವರು ಸಂತಸಪಡುತ್ತಿದ್ದಾಗ ಕುಂಬಳಕಾಯಿ ಪಡೆಯಲು ನಿಂತಿದ್ದ ಬ್ರಾಹ್ಮಣ ಕೂಡಾ ಅದೃಶ್ಯನಾದಾಗ ಇನ್ನಷ್ಟು ಬೆರಗಾದರು

ಜೈ ಜೈ‌ಶಂಕರ ಹರಿಹರ ಶಂಕರ

3.       ಬಾಲಶಂಕರನನ್ನು ತೊಟ್ಟಿಲಿನಲ್ಲಿ ಮಲಗಿಸಿ ದಂಪತಿಗಳು ಕಾಯಕದಲ್ಲಿ ಮಗ್ನರಾಗಿದ್ದಾಗ ತೊಟ್ಟಿಲಿಗೆ ಕಟ್ಪಿದ ಹಗ್ಗದಿಂದ ಹಾವೊಂದು ನಿಧಾನವಾಗಿ ಕೆಳಗಿಳಿದು ಬಂದು ಬಾಲಶಂಕರನ ಕಡೆ ಹೆಡೆ ಎತ್ತಿನೋಡುತ್ತಿತ್ತು. ಅಚಾನಕ್ಕಾಗಿ ಹೊರಗೆ ಬಂದ ಶಿವಗುರು ಈ ದೃಶ್ಯ ಕಂಡು ಬೆರಗಾದ. ಆರ್ಯಾಂಬೆಯನ್ನು ಕರೆದ. ಅವರಿಬ್ಬರೂ ಗಾಬರಿಯಿಂದ ಹಾವಿನ ಕಡೆಯೇ ನೋಡುತ್ತಿದ್ದರು. ಹಾವು ಅಲ್ಲಿಂದ ಸರಿದು ಹೋಗಲಿ. ನಿಮ್ಮ ಮಗುವಿಗೆ ಏನೂ ಆಗದಿರಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಇದ್ಯಾವುದರ ಅರಿವೇ ಇಲ್ಲದೆ ಬಾಲಶಂಕರರು ನಿದ್ರೆಯಲ್ಲಿದ್ದರು. ಹಾವು ಕದಲುವ ಸೂಚನೆಯೇ ಕಾಣದ್ದರಿಂದ ಶಿವಗುರು ಅಕ್ಕಪಕ್ಕದ ಮನೆಯವರನ್ನು ಕರೆದ. ಅವರೆಲ್ಲಾ ಹಾವನ್ನು ಓಡಿಸುವುದು ಹೇಗೆಂದು ಚಿಂತಿಸುತ್ತಿರುವಾಗ ಹಗ್ಗದಿಂದ ನಿಧಾನವಾಗಿ ಕೆಳಗಿಳಿದ ಹಾವು ಬಾಲಶಂಕರನ ಕೊರಳು ಸುತ್ತಿಕೊಂಡಾಗ ಇವತ್ತು ನನ್ನ ಮಗನ ಆಯಸ್ಸು ಮುಗಿಯಿತು ಅಂತ ಆರ್ಯಾಂಬೆ ರೋಧಿಸುತ್ತಿರುವಾಗ ಬಾಲಶಂಕರರ ಕೊರಳು ಸುತ್ತಿದ್ದ ಹಾವು ರುದ್ರಾಕ್ಷಿ ಮಾಲೆಯಾಗಿ ಬದಲಾದಾಗ ಎಲ್ಲರಿಗೂ ಅಚ್ಚರಿ,ಆನಂದ, ದಿಗ್ಭ್ರಮೆ ಎಲ್ಲಾ ಏಕಕಾಲಕ್ಕೆ ಉಂಟಾಗಿ ಈ ನಿಮ್ಮ ಬಾಲಕ ಅವತಾರ ಪುರುಷ ಎಂದು ಆನಂದದ ಕಣ್ಣೀರು ಸುರಿಸಿದರು.
ಜೈ ಜೈ‌ಶಂಕರ ಹರಿಹರ ಶಂಕರ

4              ಶಿವಗುರುವಿನ ಮನೆಯಲ್ಲಿ ಯಜ್ಞವೊಂದರ ತಯಾರಿ ನಡೆದಿತ್ತು. ಸಂತರ್ಪಣೆಯೂ ಆಗಬೇಕಿದ್ದರಿಂದ ತರಕಾರಿಗಳೂ  ಸಮೃದ್ಧವಾಗಿದ್ದವು. ಅವುಗಳ ನಡುವೆ ವಿಪರೀತ ದಪ್ಪವಾಗಿದ್ದ ಕುಂಬಳಕಾಯಿ ಇತ್ತು. ತರಕಾರಿ ವೀಕ್ಷಿಸುತ್ತಿದ್ದ ಅನೇಕರು ಕುಂಬಳಕಾಯಿ ಇಷ್ಟು ದಪ್ಪ ಇದೆಯಲ್ಲಾ ಇನ್ನು ಇದರೊಳಗೆ ಎಷ್ಟು ಬೀಜಗಳಿರಬಹುದು ಎನ್ನುವುದರ ಕುರಿತು ಚರ್ಚೆ ಆಗಿ ಕೆಲವರು ನೂರು ಬೀಜ, ಇನ್ನೂರು ಬೀಜ ಇರಬಹುದು ಅಂತ ಮಾತಾಡಿಕೊಂಡರು. ಕೆಲವರು ಅಲ್ಲೇ ಇದ್ದ ಬಾಲಶಂಕರನನ್ನೂ ಕೇಳೋಣವೆಂದರು. ಬಾಲಶಂಕರನನ್ನು ಕುಂಬಳಕಾಯಿಯ ಬಳಿ ಕರೆತಂದು ನೋಡು ಶಂಕರ ಇಷ್ಟು ದೊಡ್ಡ ಕುಂಬಳಕಾಯಿಯಲ್ಲಿ ಎಷ್ಟು ಬೀಜ ಇರಬಹುದು ಅಂತ ಒಂದು ಅಂದಾಜಿನಲ್ಲಿ ಹೇಳು. ಕೆಲವರು ನೂರು ಅಂದಿದ್ದಾರೆ ಮತ್ತೂ ಕೆಲವರು ಇನ್ನೂರು ಅಂದಿದಾರೆ ಅಂದರು. ಬಾಲಶಂಕರ ನೆರೆದಿದ್ದವರನ್ನೂ ಕುಂಬಳಕಾಯಿಯನ್ನೂ ನೋಡಿ ಅರೆಕ್ಷಣ ಕಣ್ಣುಮುಚ್ಚಿ ಈ ಕುಂಬಳಕಾಯಿಯಲ್ಲಿ ಒಂದೇ ಬೀಜ ಇರುವುದು ಎಂದನು. ಅಲ್ಲದ್ದವರೆಲ್ಲಾ ನಕ್ಕರು. ಹುಡುಗು ಬುದ್ಧಿ. ಕುಂಬಳಕಾಯಿ ಒಂದು ಅಂದರೆ ಬೀಜವೂ ಒಂದೇನೇ ಅಂತ ಆಡಿಕೊಂಡರು. ಬಾಲಶಂಕರ ವಿಚಲಿತನಾಗದೇ ಬೇಕಾದರೆ ಕುಂಬಳಕಾಯಿ ಒಡೆದು ನೋಡಿ ಅದರಲ್ಲಿರುವುದು ಒಂದೇ‌ ಬೀಜ ಅಂದ. ಈ ಹುಡುಗನಿಗೆ ಭ್ರಮೆ ಅಂದುಕೊಂಡು ದಪ್ಪ ಕುಂಬಳಕಾಯಿ ಒಡೆದರೆ ಅದರಲ್ಲಿದ್ದುದು ಒಂದೇ ಬೀಜ. ಜನ ಎಲ್ಲಾ ದಿಗ್ಭ್ರಮೆಗೊಂಡರು. ಇದು ಹೇಗೆ ಸಾಧ್ಯ ಎನ್ನುವುದು ಯಾರಿಗೂ ಅರಿವಾಗಲಿಲ್ಲ. ಬ್ರಹ್ಮಾಂಡ ದೊಡ್ಡದಿರಬಹುದು. ಆದರೆ ಅದನ್ನು ನಡೆಸುವವನನೊಬ್ಬನೇ. ಅವನೇ ನಮ್ಮೊಳಗಿರುವ ಪರಮಾತ್ಮ. ಅವನೆಂದಿಗೂ ಒಬ್ಬನೇ ಎನ್ನುವ ಅದ್ವೈತ ತತ್ವ ಪ್ರಚಾರವನ್ನು ಬಾಲ್ಯದಲ್ಲಿಯೇ ಮಾಡಿದ ಶಂಕರರು ಸನಾತನ ಧರ್ಮಕ್ಕೆ ಭದ್ರವಾದ ಬುನಾದಿಯನ್ನು ಹಾಕಿಕೊಟ್ಟರು.
ಜೈ ಜೈ‌ಶಂಕರ ಹರಿಹರ ಶಂಕರ
5              ಪೊನ್ನರ್ ತೊಡಕ ಎನ್ನುವುದೊಂದು ಊರು. ಶಂಕರರು ಭಿಕ್ಷಾಟನೆಗೆ ಒಂದು ಮನೆಯ ಮುಂದೆ ನಿಂತು ಕೂಗಿದಾಗ ಅಸಹಾಯಕ ಮಹಿಳೆ ಮನೆಯೊಳಗಿಂದ ಬಂದು ನಿನಗೆ ಕೊಡಲು ಮನೆಯಲ್ಲಿ ಏನೂ ಇಲ್ಲ ಏನು ಮಾಡಲಿ ಎಂದಾಗ‌ ಶಂಕರರು ಮನೆ ಅಂದ ಮೇಲೆ ಏನಾದರೂ ಇರಲೇಬೇಕು ತಾಯಿ ಹೋಗಿ ನೋಡು. ಏನು ಕೈಗೆ ಸಿಕ್ಕಿದರೆ ಅದನ್ನು ತಂದುಕೊಂಡು ಸಂಕೋಚ ಬೇಡ ಎಂದರು. ಮಹಿಳೆ ಮನೆಯೊಳಗೆ ಬಂದು ಹುಡುಕಿದಾಗ ಸಿಕ್ಕಿದ್ದು ಒಂದು ಒಣನೆಲ್ಲೀಕಾಯಿ. ಸಂಕೋಚದಿಂದ ಅದನ್ನೇ ಶಂಕರರಿಗೆ ಕೊಟ್ಟು ನಮಸ್ಕರಿಸಿದಳು. ಶಂಕರರು ಮಹಾಲಕ್ಷ್ಮಿಯನ್ನು ಕನಕಧಾರಾ ಸ್ತೋತ್ರ ಪಠಿಸಿ ಮಹಿಳೆಗೆ ಧನಸಹಾಯ ಮಾಡುವಂತೆ ಬೇಡಿದರು. ಪ್ರಕಟವಾದ ಮಹಾಲಕ್ಷ್ಮಿ ಈಕೆ ಹಿಂದಿನ ಜನ್ಮದಲ್ಲಿ ಯಾವ ಪುಣ್ಯದ ಕೆಲಸವನ್ನೂ ಮಾಡಿಲ್ಲ. ದಾನ ಧರ್ಮದ ಪರಿಚಯವೇ ಇಲ್ಲದವಳು. ಈಗ ಯಾವ ಸಹಾಯಕ್ಕೂ ಅರ್ಹತೆ ಪಡೆದಿಲ್ಲ, ಬೇಡಿದವರಿಗೆ ಕಿಂಚಿತ್ತಾದರೂ‌ ನೀಡಬೇಕೆನ್ನುವುದು ಜಗದ ನಿಯಮ. ಆದರೆ ಇವಳು ಅಂಥಾ ನಿಯಮಗಳೊಂದನ್ನೂ ಪಾಲಿಸಿಲ್ಲ ಎಂದಳು. ಶಂಕರರು ಮತ್ತೆ ತಾಯಿ ಪುಣ್ಯದ ಕೆಲಸ ಮಾಡಿದವರಿಗೆ, ದಾನ ಮಾಡಿದವರಿಗೆ ಸಿಗಬೇಕು ಶೀಘ್ರಫಲ. ಇವಳು ಕೊಟ್ಟಿರುವ ನೆಲ್ಲಿಕಾಯಿಗಾದರೂ ಶೀಘ್ರ ಸಿಗಲಿ ಪುಣ್ಯ ಎಂದರು. ಶಂಕರರು ಆಡಿದ ಮಾತಿಗೆ ಮನ್ನಣೆ ಕೊಟ್ಟು ಮಹಾಲಕ್ಷ್ಮಿ ತನ್ನ ಹಸ್ತಕಮಲಗಳಿಂದ ಸುವರ್ಣದ ನೆಲ್ಲಿಕಾಯಿ ವರ್ಷಧಾರೆ ಹಾರಿಸಿದಳು. ಮ‌ಹಿಳೆಗೆ ಆನಂದ. ಶಂಕರರಿಗೆ ಧನ್ಯತಾಭಾವ. ಮಹಿಳೆಗೆ ಆಶೀರ್ವದಿಸಿ ಹೊರಡುವ ಮುನ್ನ ಪೊನ್ನರ್ ತೊಡಕ ಎಂದು ಹೆಸರಿದ್ದ ಈ ಊರು ನೆಲ್ಲಿಕಾಯಿ ಪ್ರಸಂಗದಿಂದಾಗಿ ಸ್ವರ್ಣತಿಲ್ಲಂ ಎಂಬ ಹೆಸರಿನಿಂದ ಪ್ರಸಿದ್ದಿ ಹೊಂದಲಿ ಎಂದು ಆಶೀರ್ವದಿಸಿ ಹೊರಟರು. ಕಾಲಟಿಯ ಸಮೀಪದಲ್ಲಿ ಇಂದಿಗೂ ಸ್ವರ್ಣತಿಲ್ಲಂ ಎಂಬ ಊರು ಇದೆ.

Comments

  1. ಶಂಕರ ಅನುಯಾಯಿಗಳಿಗೆ/ಆಸಕ್ತರಿಗೆ ಅವರ ಬಗ್ಗೆ ಇರುವ ಹಲವು ಲೀಲೆಗಳ ಪರಿಚಯ ಮಾಡಿಸುವಲ್ಲಿ ನಿಮ್ಮ ಬರಹ ಬಹಳ ಉಪಯೋಗವಾಗಿದೆ. ೫ನೆಯ (ಕನಕಧಾರ) ಬಿಟ್ಟು ಇನ್ನಿತರ ಯಾವ ಲೀಲೆಗಳನ್ನೂ ಈ ಮುನ್ನ ನಾನು ಓದಿರಲಿಲ್ಲ/ಕೇಳಿರಲಿಲ್ಲ. ಈ ಲೀಲೆಗಳು ಯಾವ ಗ್ರಂಥದಲ್ಲಿ ಉಲ್ಲೇಖವಾಗಿದೆ ಎಂದು ತಿಳಿಯಲು ಉತ್ಸುಕನಾಗಿದ್ದೀನಿ. - ಬದರಿ ನಾರಾಯಣ

    ReplyDelete
    Replies
    1. Saligrama Srikanta Shastrigala Sri Shankara Vijaya - Sri S Sesha Sharma avara
      Guruvilasa tarangini Pustakagalli I vishayagalu Ullekhavaagive

      Delete
    2. ಮಾಹಿತಿಗೆ ಧನ್ಯವಾದಗಳು ಸರ್. ಉಪಕೃತನಾದೆ - ಬದರಿ ನಾರಯಾಣ

      Delete
  2. Thanks for sharing some untold stories sir

    ReplyDelete

Post a Comment