ಹೊಯ್ಸಳ ದೇವಾಲಯಗಳು - ಭಾಗ ೧


ಹೊಯ್ಸಳ ದೇವಾಲಯಗಳು - ಭಾಗ ೧

ಲೇಖನ - ಶ್ರೀಯುತ  ಶ್ರೀನಿವಾಸ ಪುಟ್ಟಿ 



ಪೀಠಿಕೆ
ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಹರ್ಷಾ ನಂದ ರವರು ಹೇಳುವಂತೆ, ದೇವನೊಬ್ಬ ನಿದ್ದಾನೆ, ಅವನೇ ಜಗತ್ತಿನ ಸೃಷ್ಟಿಕರ್ತ ಮತ್ತು ನಿಯಂತೃ, ಅವನು ಒಲಿದರೆ ಸುಖ ಮತ್ತು ಮುನಿದರೆ ಅನಾಹುತ ಕಾದಿಟ್ಟದ್ದು ಎಂದು ನಮ್ಮಲ್ಲಿ ಅಸಂಖ್ಯರ ನಂಬಿಕೆ. ಆದ್ದರಿಂದ ಇಂತಹ ದೇವರ ಬಳಿ ಸಾಗಲು, ಪ್ರಾರ್ಥಿಸಲು ಒಂದು ಸ್ಥಳ ಬೇಕು. ನಂಬಿರುವ ನಮ್ಮ  ದೇವರು ನಮಗಾಗಿ ಈ ಭೂಲೋಕಕ್ಕೆ ಬಂದಿದ್ದಾನೆ ಎಂದೂ ಈ  ಜನ ಭಾವಿಸಿದ್ದಾರೆ. ನಮಗಾಗಿ ಬಂದಿರುವ ಈ ದೇವರಿಗಾಗಿ  ಒಂದು ಬಿಡಾರ ಕಟ್ಟುತ್ತಾರೆ. ಈ ಬಿಡಾರವೇ   ದೇವಸ್ಥಾನ ಅಥವಾ ದೇವಾಲಯ. ಪ್ರಾಸಾದ, ತೀರ್ಥ ಎಂಬುದೂ ದೇವಾಲ ಯದ  ಹೆಸರುಗಳೇ. ದೇವಾಲಯಗಳು  ಸುಂದರವಾಗಿರಬೇಕೆಂದು  ದೈವಾರಾಧಕರು ಸಹಜವಾಗಿ ಬಯಸುತ್ತಾರೆ. ಭಾರತದಲ್ಲಿ ಬಹಳ ಹಿಂದಿನಿಂದಲೂ ದೇವಾಲಯಗಳ ನಿರ್ಮಾಣ ನಡೆದುಕೊಂಡು ಬಂದಿದೆ.
ದೇವಸ್ಥಾನದ ಶೈಲಿಗಳು.
ಭಾರತದ ದೇವಾಲಯಗಳನ್ನು ಅವುಗಳ ರಚನಾಶೈಲಿಯ ಮೇಲೆ ಮೂರು ಬಗೆಗಳಾಗಿ ವಿಂಗಡಿಸಲಾಗುತ್ತದೆ. ಅವೆಂದರೆ-
೧.ನಾಗರ ಶೈಲಿ 
೨.ದ್ರಾವಿಡ ಶೈಲಿ  
೩.ವೇಸರ ಶೈಲಿ 
 ಅರೆಗಂಬ ಮತ್ತು ಸಣ್ಣಗೋಪುರ Someshwara Temple, Nuggehalli
ನಾಗರ ಶೈಲಿಯ ದೇವಸ್ಥಾನಗಳನ್ನು ಪ್ರಮುಖವಾಗಿ ಭಾರತದ ಪೂರ್ವ ಮತ್ತು ಉತ್ತರ ಭಾಗಗಳಲ್ಲಿ ಕಾಣಬಹುದು.ಈ ಶೈಲಿಯಲ್ಲಿ ಗರ್ಭಗುಡಿ (sanctum)ಯ ಮೇಲಿನ ಗೋಪುರ (ಇದನ್ನು ವಿಮಾನ ವೆನ್ನುತ್ತಾರೆ) ವಕ್ರರೇಖಾಕೃತಿಯನ್ನು ಹೊಂದಿದ್ದು, ಎತ್ತರವಾಗಿರುತ್ತದೆ.

ದ್ರಾವಿಡ ಶೈಲಿಯ ದೇವಾಲಯಗಳನ್ನು ಪ್ರಮುಖವಾಗಿ ದಕ್ಷಿಣ ಭಾರತದಲ್ಲಿ ಕಾಣಬಹುದು. ಈ ದೇವಾಲಯಗಳ ಗರ್ಭಗುಡಿಗಳ ಮೇಲಿನ ಗೋಪುರವು ಛಿನ್ನಾಗ್ರ ಪಿರಮಿಡ್ಡಿನಂತೆ (pyramid) ಇರುತ್ತದೆ. ಅಲ್ಲದೇ, ದ್ರಾವಿಡ ಶೈಲಿಯ ದೇವಸ್ಥಾನಗಳು  ಅನೇಕ ಭಾಗಗಳನ್ನು ಹೊಂದಿರುತ್ತವೆ.

ವೇಸರ ಶೈಲಿಯು ನಾಗರ ಮತ್ತು ದ್ರಾವಿಡ ಶೈಲಿಗಳ ಮಿಶ್ರಣ. ಈ ಶೈಲಿಯನ್ನು ಹೊಯ್ಸಳರು ಅಳವಡಿಸಿಕೊಂಡು, ಪ್ರಸಿದ್ಧಿಗೆ ತಂದದ್ದರಿಂದ ಇದು ಹೊಯ್ಸಳ ಶೈಲಿಯೆಂದೇ ಪ್ರಖ್ಯಾತವಾಗಿದೆ.

 ಹೊಯ್ಸಳ ಶೈಲಿಯ ದೇವಾಲಯಗಳು

ಹೊಯ್ಸಳ ಮನೆತನದ ಹದಿನಾಲ್ಕು ಅರಸರು, ಸುಮಾರು ೩೫೦ ವರ್ಷಗಳ ಕಾಲ (ಸುಮಾರು ೧೦ ನೇ ಶತಮಾನದ ಅಂತ್ಯದಿಂದ ೧೪ನೇ ಶತಮಾನದ ಮಧ್ಯ ಭಾಗದವರೆಗೆ) ಕರ್ನಾಟಕದ ವಿವಿಧ ಭಾಗಳನ್ನು ಆಳಿದರು. ಹೊಯ್ಸಳರ ಆಳ್ವಿಕೆಯ ಕಾಲದಲ್ಲಿ ಮತ್ತು  ರಾಜ್ಯದಲ್ಲಿ ನಿರ್ಮಾಣಗೊಂಡ ಧಾರ್ಮಿಕ ಕಟ್ಟಡಗಳು ವೇಸರ ಶೈಲಿಯಲ್ಲಿದ್ದು, ಹೊಯ್ಸಳ ಶೈಲಿಯ ಕಟ್ಟಡಗಳೆಂದು ಪ್ರಸಿದ್ಧವಾಗಿವೆ. ಹೊಯ್ಸಳ ದೇವಸ್ಥಾನ ಎಂದಾಕ್ಷಣ, ಅದು ಈ ಮನೆತನದ ರಾಜನೊಬ್ಬನ ಸಹಾಯದಿಂದಲೇ ನಿರ್ಮಾಣವಾದದ್ದು ಎಂದೇನಲ್ಲ, ಹೊಯ್ಸಳರ ಕಾಲದಲ್ಲಿ ಮತ್ತು ಅದೇ ಶೈಲಿಯಲ್ಲಿ ನಿರ್ಮಾಣವಾದದ್ದು ಎಂದಷ್ಟೇ ಅದರ ಅರ್ಥ. ಹೊಯ್ಸಳ ಶೈಲಿಯು, ಚಾಲುಕ್ಯ ಶೈಲಿಯಿಂದ ತುಂಬಾ ಪ್ರಭಾವಿತವಾಗಿದೆ ಎಂಬುದು ಗಮನದಲ್ಲಿರಬೇಕಾದ ಅಂಶ.

ಹೊಯ್ಸಳ ಶೈಲಿಯ ಪ್ರಮುಖ ಲಕ್ಷಣಗಳು

ಹೊಯ್ಸಳ ಶೈಲಿಯ ದೇವಾಲಯಗಳು  ಕೆಳಗೆ ತಿಳಿಸಿರುವ ಒಂಬತ್ತು ಲಕ್ಷಣಗಳನ್ನು ಹೊಂದಿರುತ್ತದೆ.
೧. ಶಿಲಾ ನಿರ್ಮಾಣ : ಹೊಯ್ಸಳ ದೇವಸ್ಥಾನಗಳನ್ನು ಬಳಪದ ಕಲ್ಲಿನಿಂದ ನಿರ್ಮಿಸಿರುತ್ತಾರೆ.

೨. ಎತ್ತರ : ಹೊಯ್ಸಳ ದೇವಾಲಯಗಳ ಎತ್ತರ ಕಡಿಮೆ ಇರುತ್ತದೆ. ಈ ದೇವಸ್ಥಾನಗಳ  ಎತ್ತರ ಸುಮಾರು ೨೦ ಅಡಿಗಳಿಂದ  ೩೫ ಅಡಿಗಳಷ್ಟು ಮಾತ್ರ ಇರುತ್ತದೆ. ಅಲ್ಲದೆ ಬಹುತೇಕ ದೇವಾಲಯಗಳು ಸುಮಾರು ೩.೫ ಅಡಿಯಿಂದ ೫ ಆಡಿ ಎತ್ತರದ ಜಗತಿ (platform) ಯ ಮೇಲೆ ನಿರ್ಮಾಣವಾಗಿರುತ್ತದೆ, ಈ ಜಗತಿಯೇ ದೇವಸ್ಥಾನದ ಪ್ರದಕ್ಷಿಣಪಥವೂ (circumambulatory path) ಆಗಿರುತ್ತದೆ. ಹೊಯ್ಸಳ ದೇವಾಲಯಗಳ ಗರ್ಭಗುಡಿಗೆ ಪ್ರತ್ಯೇಕವಾಗಿ ಪ್ರದಕ್ಷಿಣೆ ಹಾಕಲು ಸಾಧ್ಯವಿರುವುದಿಲ್ಲ; ಬದಲಾಗಿ ಇಡೀ ದೇವಾಲಯಕ್ಕೇ ಪ್ರದಕ್ಷಿಣೆ ಅನಿವಾರ್ಯ.

೩. ಹೊರಗೋಡೆ - ಹೊಯ್ಸಳ ದೇವ ಸ್ಥಾನದ ಹೊರಗೋಡೆಗಳು ಮೂರು ರೀತಿಯದಾಗಿರುತ್ತದೆ. ಅವೆಂದರೆ:
ಅ. ಅಲಂಕಾರ ರಹಿತ ಗೋಡೆಗಳು (plain walls)
ಆ. ಅರೆಗಂಬ, ಗೂಡು ಮತ್ತು ಸಣ್ಣ ಗೋಪುರಗಳನ್ನೊಳಗೊಂಡ ಗೋಡೆಗಳು (plain walls with pilasters, niches and turrets bearing miniature towers) 
LakshmiNarasimha Temple Javagal

ಇ. ಸರ್ವಾಲಂಕೃತ ಗೋಡೆಗಳು (very ornate walls) ಸರ್ವಾಲಂಕೃತ ಗೋಡೆಗಳನ್ನು ಮತ್ತೆ ಮೂರು ಭಾಗಗಳಾಗಿ ವಿಂಗಡಿಸಬಹುದು. ಈ ಭಾಗಗಳೆಂದರೆ, ಗೋಡೆಯ ಕೆಳಭಾಗ, ಮಧ್ಯ ಭಾಗ ಮತ್ತು ಮೇಲ್ಬಾಗ.
ಸರ್ವಾಲಂಕೃತ ಗೋಡೆಯ ಕೆಳಭಾಗವನ್ನು ಅಧಿಷ್ಟಾನ (basement) ಎನ್ನುತ್ತಾರೆ. ಈ ಭಾಗವನ್ನು ೫-೮ ಅಡ್ಡ ಪಟ್ಟಿಕೆ ಗಳಾಗಿ ( bands) ವಿಭಾಗಿಸಿ, ಅವುಗಳಲ್ಲಿ ಕೆಳಗಿನಿಂದ ಕ್ರಮವಾಗಿ ಆನೆ, ಅಶ್ವಸ್ಯೆನ್ಯ ( cavalry ) , ಲತೆ  (scrolls),  ಪೌರಾಣಿಕ ಕಥೆಗಳು, ಯಾಳಿ, ಹಂಸ, ಸಿಂಹ ಮತ್ತು ಕುದುರೆಗಳ ಉಬ್ಬು ಶಿಲ್ಪಗಳ ರಚನೆ ಮಾಡಿರುತ್ತಾರೆ.
ಅಲಂಕೃತ ಗೋಡೆಗಳ ಮಧ್ಯಭಾಗದಲ್ಲಿ ದೇವತಾ ವಿಗ್ರಹಗಳನ್ನು ಕಾಣಬಹುದು
ಹೊರಗೋಡೆಯ ಮೇಲ್ಭಾಗದಲ್ಲಿ ವಿವಿಧ ಬಗೆಯ ಸ್ತಂಭ ಹಾಗೂ ಗೋಪುರಗಳ ಮಾದರಿಗಳನ್ನು ಕಾಣಬಹುದು.

೪. ವಿನ್ಯಾಸ - ಹೊಯ್ಸಳ ದೇವಸ್ಥಾನಗಳ ಜಗತಿಯು ದೇವಾಲಯದ ಹೊರಗೋಡೆಗಳ ಚಾಚುಗಳನ್ನು ಅನುಕರಿಸುತ್ತದೆಯಾಗಿ, ಅದು  ನಕ್ಷತ್ರಾಕಾರವನ್ನು ಹೊಂದುತ್ತದೆ.

೫. ಶಿಖರ -‌ ಇದು ಗರ್ಭ ಗುಡಿಯ ಮೇಲಿನ ಗೋಪುರ. ಇದನ್ನು ವಿಮಾನ ವೆಂದು ಕರೆಯಲಾಗುತ್ತದೆ. ಶಿಖರದ ತುದಿಯಲ್ಲಿ ಕಳಶ ವಿರುತ್ತದೆ. ಈ ಶಿಖರಗಳು ಅತ್ಯಂತ ಸುಂದರವಾಗಿದ್ದು, ಅನೇಕ ಮುಖಗಳನ್ನು ಹೊಂದಿರುತ್ತದೆ.

೬.ಗೂಡುಗಳು (niches) ಗೂಡುಗಳು ಹೊಯ್ಸಳ ದೇವಸ್ಥಾನಗಳ ವಿಶೇಷ. ಸಾಮಾನ್ಯವಾಗಿ ಇವು ಗರ್ಭ ಗುಡಿಯ ಅಕ್ಕ ಪಕ್ಕ (ಉತ್ತರ ಹಾಗೂ ದಕ್ಷಿಣ ಮುಖ ) ಹಾಗೂ ಹಿಂಬದಿ (ಪಶ್ಚಿಮ) ಯ ಗೋಡೆಗಳಿಗೆ ಅಂಟಿಕೊಂಡಿದ್ದು, ವಿಮಾನಕ್ಕೆ ಆಸರೆಯಾಗಿರುತ್ತದೆ. ಕೆಲವು ದೇವಾಲಯಗಳಲ್ಲಿ ಇಂತಹ ಗೂಡುಗಳನ್ನು ಮೆಟ್ಟಿಲುಗಳ ಅಕ್ಕಪಕ್ಕಗಳಲ್ಲೂ ಕಾಣಬಹುದು. ಈ ಗೂಡುಗಳು ಸುಂದರ ರಚನೆಗಳಾಗಿದ್ದು,  ರಥವನ್ನು ಹೋಲುತ್ತದೆ.

೭. ಸಳ ಲಾಂಛನ - ಕೆಲವು ಹೊಯ್ಸಳ ದೇವಾಲಯಗಳಲ್ಲಿ ಹುಲಿ ಅಥವಾ ಸಿಂಹವನ್ನು ಇರಿಯುತ್ತಿರುವ ಸಳನ ವಿಗ್ರಹವನ್ನು ದೇವಾಲಯದ ಪ್ರವೇಶ ದ್ವಾರದ ಬಳಿ ಅಥವಾ ಶಿಖರದ ಮುಂಚಾಚುವಿನಲ್ಲಿ ಕಾಣಬಹುದು.
ಹೊಯ್ಸಳ ಲಾಂಛನ 

೮.ದೇವಾಲಯದ ದ್ವಾರ -  ದೇವಾಲಯವು ಪೂರ್ವಾಭಿಮುಖವಾಗಿದ್ದು ಅದನ್ನು ಪ್ರವೇಶಿಸಲು ಒಂದು ಬಾಗಿಲು ಇರುತ್ತದೆ. ಈ ಬಾಗಿಲಿನ ಇಕ್ಕೆಲಗಳಲ್ಲಿ ದ್ವಾರಪಾಲಕರ ವಿಗ್ರಹಗಳನ್ನು ಕಾಣಬಹುದು. ಬಾಗಿಲಿನ ಅಕ್ಕಪಕ್ಕದ ಗೋಡೆಗಳಲ್ಲಿ ವಿವಿಧ ಬಗೆಯ ಜಾಲಂದ್ರ (perforated wall screens) ಗಳನ್ನು ಕಾಣಬಹುದು.ಈ ಜಾಲಂದ್ರಗಳು  ಸೂರ್ಯನ ಬೆಳಕು ದೇವಾಲಯದೊಳಗೆ  ಬರಲು ಅನುವು ಮಾಡಿಕೊಡುತ್ತದೆ.

೯. ಒಳಭಾಗ - ದೇವಾಲಯವನ್ನು ಪ್ರವೇಶಿ ಸುತ್ತಿದ್ದಂತೆ ಕಾಣುವ ಚಿಕ್ಕ ಭಾಗವೇ ಮುಖಮಂಟಪ. ಇದರ ನಂತರದ ದೊಡ್ಡ ಸಭಾಂಗಣಕ್ಕೆ ನವರಂಗ ಎಂದು ಹೆಸರು ; ಇದು ಒಂಬತ್ತು ಅಂಕಣಗಳುಳ್ಳ ದೊಡ್ಡ ಕೋಣೆ. ನವರಂಗದ ಮಧ್ಯ ಭಾಗದಲ್ಲಿ ಒಂದು ಉಬ್ಬಿದ ವೇದಿಕೆಇರುತ್ತದೆ. ದೇವರಿಗೆ ಸಂಗೀತ, ನೃತ್ಯ ಸೇವೆಗಳನ್ನು ಮಾಡುವವರು ಈ ವೇದಿಕೆಯನ್ನು ಬಳಸುತ್ತಾರೆ. ಈ ಸೇವೆಗಳನ್ನು ನೋಡುವವರಿಗಾಗಿ ನವರಂಗ ಮತ್ತು ಮುಖಮಂಟಪಗಳಲ್ಲಿ,  ಕಲ್ಲಿನ ಆಸನದ ವ್ಯವಸ್ಥೆಯೂ ಇರುತ್ತದೆ. ನವರಂಗದ ಮೇಲ್ಛಾವಣಿಯಲ್ಲಿ ಬುಟ್ಟಿಯೊಂದನ್ನು ಮೇಲಿನಿಂದ ಬೋರಲು ಹಾಕಿರುವಂತೆ ಕಾಣುವ ರಚನೆಗಳನ್ನು ಗುರುತಿಸಬಹುದು. ಅತ್ಯಂತ ಕಲಾತ್ಮಕವಾದ ಈ ರಚನೆಗಳನ್ನು ಭುವನೇಶ್ವರಿ ಎಂದು ಕರೆಯುತ್ತಾರೆ. ನವರಂಗದ ಒಂಬತ್ತು ಅಂಕಣದಲ್ಲಿಯೂ ಒಂದೊಂದು ಭುವನೇಶ್ವರಿಯಿದ್ದು, ಮಧ್ಯದ ಭುವನೇಶ್ವರಿಯು ಅತ್ಯಂತ ಭವ್ಯ ಹಾಗೂ  ಸುಂದರವಾಗಿರುತ್ತದೆ. ನವರಂಗದಲ್ಲಿ ಅನೇಕ ಬಗೆಯ ಸ್ತಂಭಗಳನ್ನೂ ಕಾಣಬಹುದು.
ನವರಂಗದ ನಂತರದ ಪುಟ್ಟ ಕೋಣೆಗೆ ಶುಕನಾಸಿ ಎನ್ನುತ್ತಾರೆ. ಇಲ್ಲಿ ದೇವಸ್ಥಾನದ ಪೂಜಾ ಸಾಮಗ್ರಿಗಳನ್ನೂ, ಉತ್ಸವ ಮೂರ್ತಿಗಳನ್ನೂ ಇಡಲಾಗುತ್ತದೆ.

ಶುಕನಾಸಿಯ ನಂತರದ ಕೋಣೆಯೇ ಗರ್ಭಗೃಹ (sanctum). ಇದೇ ದೇವಸ್ಥಾನದ ಅತ್ಯಂತ ಮುಖ್ಯ ಭಾಗ. ಇದಕ್ಕೆ ಮುಂಭಾಗದ ಬಾಗಿಲು ಹೊರತಾಗಿ ಮತ್ತಾವ ಕಿಟಕಿಯಾಗಲೀ, ಕಿಂಡಿಯಾಗಲೀ ಇರುವುದಿಲ್ಲ. ಗರ್ಭ ಗುಡಿಯಲ್ಲಿಯೇ ಅರ್ಚಾ ಮೂರ್ತಿಯ ಸ್ಥಾಪನೆಯಾಗುವುದು.  ದೇವಸ್ಥಾನವು ತ್ರಿಕೂಟವಾದರೆ, ನವರಂಗದ ಉತ್ತರ, ದಕ್ಷಿಣಗಳಲ್ಲೂ ಒಂದೊಂದು ಗರ್ಭಗುಡಿಯನ್ನು ಕಾಣುತ್ತೇವೆ. ಸಾಮಾನ್ಯವಾಗಿ ಈ ಉತ್ತರ-ದಕ್ಷಿಣದ ಗರ್ಭಗುಡಿಗಳಿಗೆ ಶುಕನಾಸಿ ಇರುವುದಿಲ್ಲ. ದೇವಸ್ಥಾನದ ಮೂಲಮೂರ್ತಿಯ ಗರ್ಭಗುಡಿಯ ಅಕ್ಕಪಕ್ಕದ ಗೋಡೆಗಳಿಗೆ ಅಂಟಿಕೊಂಡಂತೆ, ಅತ್ಯಂತ ಕಲಾತ್ಮಕವಾದ ಮಂಟಪಗಳನ್ನು ನಿರ್ಮಿಸಿ ಅದರಲ್ಲೂ ಸಹಾ ದೇವತಾ ವಿಗ್ರಹಗಳನ್ನು ಇಟ್ಟಿರುತ್ತಾರೆ. 

ನನ್ನಿಂದ ಅರಳುಗುಪ್ಪೆ ಪ್ರವಾಸಿಗರಿಗೆ ಪರಿಚಯ 

ಮೇಲೆ ಹೇಳಿರುವ ಒಂಬತ್ತು ಭಾಗಗಳಲ್ಲದೇ, ದೇವಾಲಯದ ಆವರಣದಲ್ಲಿ ಮೂಲಮೂರ್ತಿಯ ಎದುರಿಗೆ ಬಲಿಪೀಠ ಇರುತ್ತದೆ. ಮೂಲ ವಿಗ್ರಹದ ದೃಷ್ಟಿ ಈ ಬಲಿಪೀಠದ ಮೇಲೆ ಬೀಳುವಂತಿರಬೇಕು ಎಂದು  ಶಾಸ್ತ್ರಗಳು ಹೇಳುತ್ತವೆ. ಬಲಿಪೀಠದ ಮೇಲೆ ಸಾಮಾನ್ಯವಾಗಿ ಮೂಲಮೂರ್ತಿಯ ಲಾಂಛನ ಅಥವಾ ಪಾದುಕೆಗಳನ್ನು ಕೆತ್ತಲಾಗಿರುತ್ತದೆ.
ಬಲಿಪೀಠದ ಹಿಂದೆ ಧ್ವಜಸ್ತಂಭ ವಿದ್ದು, ಅದರ ತಳಭಾಗದಲ್ಲಿ ದೇವಾಲಯದ ಪ್ರಧಾನ ದೇವತೆಯ ವಾಹನವನ್ನು ಕಾಣಬಹುದು.

ದೇವಾಲಯದ ಪ್ರಾಕಾರದ ಒಳಗೋಡೆಗಳಿಗೆ ಅಂಟಿಕೊಂಡಂತೆ   ಪರಿವಾರ ದೇವತೆಗಳಿಗೆ ಸ್ಥಳಾವಕಾಶ  ಮಾಡಿ ಕೊಟ್ಟಿರಲಾಗುತ್ತದೆ. ಕೆಲವು ದೇವಸ್ಥಾನಗಳ ಅಂಗಳದಲ್ಲಿ ಕಲ್ಯಾಣಿ, ಯಾಗಶಾಲೆ, ಪಾಕಶಾಲೆಗಳನ್ನೂ ಕಾಣಬಹುದು. ಪ್ರಾಕಾರದ ಗೋಡೆಗೆ ಹೊಂದಿಕೊಂಡಂತೆ, ಪೂರ್ವಾಭಿಮುಖವಾಗಿ ದೇವಾಲಯದ ಅಂಗಳವನ್ನು ಪ್ರವೇಶಿಸಲು ಒಂದು ದ್ವಾರ ಮತ್ತು ಅದರ ಮೇಲೆ ಗೋಪುರವನ್ನೂ ಕಾಣಬಹುದು. 
ಮೊಸಳೆಯ ಅವಳಿ ದೇವಾಲಯ, ಚನ್ನಕೇಶವ, ನಾಗೇಶ್ವರ ದೇವಾಲಯಗಳು

ಭಾಗ ೨ ರಲ್ಲಿ ಲೇಖನ  ಮುಂದಿನ ಸಂಚಿಕೆಯಲ್ಲಿ ಮುಂದುವರೆಯುವುದು .......

Comments

  1. ಶ್ರೀನಿವಾಸ್, ತಮ್ಮ ಆಸಕ್ತ ವಿಷಯ ಹೊಯ್ಸಳ ವಾಸ್ತುಶಿಲ್ಪದ ಬಗ್ಗೆ ಬರೆದಿರುವ ನಮ್ಮೊಂದಿಗೆ ಹಂಚಿಕೊಂಡಿರುವ ಲೇಖನ ಮಹತ್ತರವಾದುದು. ದೇಗುಲ ನಿರ್ಮಾಣದ ವಿವರವಾದ ನಿಖರವಾದ ಮಾಹಿತಿ ಚೆನ್ನಾಗಿದೆ. ಆಯಾ ಸ್ಥಳಗಳ ವಿಶೇಷ ಸೂಕ್ಷ್ಮ ಕೆತ್ತೆನೆಯ ಕೆಲವು ವಿವರಣೆ ಮುಂದಿನ ಲೇಖನದಲ್ಲಿ ದಯವಿಟ್ಟು ನೀಡಿ. ಪ್ರವಾಸಿಗರು ಮರೆಯದೆ ಅಲ್ಲಿಗೆ ಹೋದಾಗ ಖಂಡಿತ ನೋಡುತ್ತಾರೆ. ತಮ್ಮ ಸಂಗ್ರಹದ ಛಾಯಾಚಿತ್ರಗಳು ಅಪರೂಪದ್ದು ಹಾಗೂ ಸೊಗಸು

    ReplyDelete
  2. Its really nice to read the details of Hoysala style architecture.All these days we watched those temple in simple manner, from now we see the same different perspective.Thanks for posting this special article

    ReplyDelete
  3. Beautiful narration and quality pictures .Thanks for sharing your collections.

    ReplyDelete
  4. ದೇವಸ್ಥಾನ - ಇದರ ಬಗೆಗಿನ ಒಂದೊಳ್ಳೆ ಮಾಹಿತಿಯ ಬರಹ. ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ.

    ReplyDelete

Post a Comment