ಆಹಾರವೇ ಔಷಧಿ - ಶುಂಠಿ


ಆಹಾರವೇ ಔಷಧಿ - ಶುಂಠಿ

Article by - ಶ್ರೀಮತಿ ರಾಜೇಶ್ವರಿ ಜಯದೇವ್ 

Accredited Practicing Dietitian, Sydney 


ಹಲವಾರು ಮಾರಕ ರೋಗಗಳಿಗೆ ಉತ್ತಮ ಜೀವನಶೈಲಿಯೇ ಅತಿ ಪ್ರಭಾವಶಾಲಿಯಾದ ಔಷಧಿ ಎಂದು ನಮಗೆಲ್ಲ ತಿಳಿದಿದೆ. ಇದರಲ್ಲಿ ಅತಿ ಮುಖ್ಯವಾದದ್ದು ಆರೋಗ್ಯಕರವಾದ ಆಹಾರ ಸೇವನೆ. ಉತ್ತಮ ಆಹಾರ ಸೇವನೆಯಿಂದ ಹಲವಾರು ಮಾರಕ ರೋಗಗಳನ್ನು ನಿಯಂತ್ರಣದಲ್ಲಿಡಬಹುದೆಂದು ವೈಜ್ಞಾನಿಕ ಅಧ್ಯಯನಗಳಿಂದ ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಶುಂಠಿಯನ್ನು ಔಷಧಿಯಾಗಿ ಬಳಸುವ ಬಗೆಯನ್ನು ತಿಳಿಯೋಣ.
 ಆಯುರ್ವೇದ ಚಿಕಿತ್ಸೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಶುಂಠಿಗೆ ‘ಮಹಾ ಔಷಧಿ’ ಎಂದು ಕರೆಯುತ್ತಾರೆ.
 ಗರ್ಭಿಣಿಯರಿಗೆ ಮತ್ತು  ಪ್ರಯಾಣ ಮಾಡುವಾಗ ಉಂಟಾಗುವ ವಾಕರಿಕೆ ಮತ್ತು ವಾಂತಿಯಾಗುವುದನ್ನು ತಡೆಯಲು,  ಋತುಸ್ರಾವದ (ಮುಟ್ಟಿನ) ತೊಂದರೆಗಳಿಗೆ ಮತ್ತು ತೀವ್ರ ತಲೆಶೂಲೆಯ (migraine) ನೋವಿಗೆ ಶುಂಠಿ ಬಲು ಉಪಯುಕ್ತ. ಫಾರ್ಮಸಿಗಳಲ್ಲಿ ದೊರೆಯುವ ಮಾತ್ರೆಗಳಷ್ಟೇ ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳಿಂದ ಸಾಬೀತಾಗಿದೆ. ಯಾವ ಅಡ್ಡ ಪರಿಣಾಮಗಳೂ ಇರುವುದಿಲ್ಲ. 

ವಾಕರಿಕೆ ಮತ್ತು ವಾಂತಿಯಾಗುವುದನ್ನು ತಡೆಯಲು ಮತ್ತು ಋತುಸ್ರಾವದ (ಮುಟ್ಟಿನ) ತೊಂದರೆಗಳಿಗೆ:
     ಅರ್ಧ ಟೀ ಚಮಚ ಉತ್ತಮ ಗುಣಮಟ್ಟದ ಶುಂಠಿ ಪುಡಿಯನ್ನು ಅರ್ಧ ಲೋಟ ಬಿಸಿ ಅಥವಾ ತಣ್ಣೀರಿನಲ್ಲಿ ಕಲಕಿ. ಅಥವಾ
     ಒಂದು ಲೋಟ ನೀರಿಗೆ ಒಂದು ಟೀ ಚಮಚ ತುರಿದ ಹಸಿ ಶುಂಠಿಯನ್ನು ಹಾಕಿ, ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಸಿ. ಮುಕ್ಕಾಲು ಲೋಟದಷ್ಟಾದಾಗ, ಕೆಳಕ್ಕಿಳಿಸಿ, ಶೋಧಿಸಿ. 
ತಲೆಶೂಲೆಯ (migraine) ನೋವನ್ನು ಹೋಗಲಾಡಿಸಲು:
     1/8 ಅಥವಾ 1/4 ಟೀ ಚಮಚ ಉತ್ತಮ ಗುಣಮಟ್ಟದ ಶುಂಠಿ ಪುಡಿಯನ್ನು ಅರ್ಧ ಲೋಟ ಬಿಸಿ ಅಥವಾ ತಣ್ಣೀರಿನಲ್ಲಿ ಕಲಕಿ. ತಲೆನೋವು ಶುರುವಾದ ಕೂಡಲೆ ಕುಡಿಯಿರಿ. 30 ನಿಮಿಷಗಳಲ್ಲಿ ತಲೆನೋವು ದೂರವಾಗುತ್ತದೆ ಎಂದು ಕೆಲವು ಅಧ್ಯಯನಗಳಿಂದ ತಿಳಿದು ಬಂದಿದೆ.   
ವಿಶೇಷ ಸೂಚನೆ: ಖಾಲಿ ಹೊಟ್ಟೆಯಲ್ಲಿ ಶುಂಠಿ ನೀರನ್ನು ಕುಡಿಯಬೇಡಿ. ದಿನಕ್ಕೆ ಒಂದರಿಂದ ನಾಲ್ಕು ಬಾರಿ  ಕುಡಿಯಬಹುದು. ಹೆಚ್ಚಾದರೆ ಅಪಾಯವಿದೆ.  ಮೇಲೆ ಹೇಳಿದ ಅಳತೆಗಿಂತ ಹೆಚ್ಚು ಶುಂಠಿ ಪುಡಿಯನ್ನು ಉಪಯೋಗಿಸಬೇಡಿ. ಶುಂಠಿಪುಡಿ ಮಾತ್ರೆಗಳನ್ನು ಬಳಸಬೇಡಿ. ಏಕೆಂದರೆ ಅವುಗಳಲ್ಲಿರುವ ಶುಂಠಿ ಪುಡಿಯ ಪ್ರಮಾಣ ಮತ್ತು ಗುಣಮಟ್ಟ ನಮಗೆ ತಿಳಿದಿಲ್ಲ.  
ಪ್ರತಿದಿನ ಶುಂಠಿ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಹಿಂದಿನ ರಾತ್ರಿ ಒಂದು ಥರ್ಮಾಸ್ ಫ಼್ಲಾಸ್ಕಿನಲ್ಲಿ ಬಿಸಿ ನೀರು ಮತ್ತು ಒಂದು ಸೆಂಟಿಮೀಟರ್ ಜಜ್ಜಿದ ಹಸಿಶುಂಠಿ ಹಾಕಿಡಿ. ಮಾರನೆಯ ದಿನವಿಡೀ ಉಪಯೋಗಿಸಿ.
ಆಹಾರವೇ ನಿನಗೆ ಔಷಧಿಯಾಗಲಿ, ಔಷಧಿಯೇ ನಿನ್ನ ಆಹಾರವಾಗಲಿ - ಹಿಪೋಕ್ರಟಿಸ್* (c. 460-370BCE ) 

Comments

  1. Many thanks to Mrs Rajeshwari for educating with this piece of important information in this small article. Benefits and uses are very helpful.

    ReplyDelete
  2. ಚಿಕ್ಕ ಚೊಕ್ಕ ಲೇಖನ. ಮಾಹಿತಿ ಕೂಡಾ ಅನುಕೂಲವಾಗಿದೆ. ಕನ್ನಡದಲ್ಲಿ ಓದಿದಷ್ಟು ಸಮಾಧಾನ ಮತ್ತೊಂದು ಭಾಷೆಯಲ್ಲಿ ಸಿಗುವುದಿಲ್ಲ. ತಾವು ಆರೋಗ್ಯದ ಮಾಹಿತಿಗಳೆಲ್ಲಾ ಸೇರಿಸಿ ಒಂದು ಪುಸ್ತಕ ಏಕೆ ಬಿಡುಗಡೆ ಮಾಡಬಾರದು. ಸಾಧ್ಯವಿದೆಯೇ ?

    ReplyDelete

Post a Comment