ಜೈ ಟ್ರಾಫಿಕ್ ಕಂಜೆಷನ್

ಜೈ ಟ್ರಾಫಿಕ್ ಕಂಜೆಷನ್
ಹಾಸ್ಯ ಲೇಖನ - ಅಣುಕು ರಾಮನಾಥ್


‘ಬೆಂಗಳೂರಲ್ಲಿ ಪ್ರಪಂಚದಲ್ಲೇ ಅತಿ ಹೆಚ್ಚು ಟ್ರಾಫಿಕ್ ಕಂಜೆಷನ್ ಅಂತಲ್ಲೋ ಸೀನೂ...’ ಎಂದ ಪಾಂಡು.
‘ಹೌ ವಂಡರಫುಲ್. ವಿ ಮಸ್ಟ್ ಥ್ಯಾಂಕ್ ಅವರ್ ಬೈಕ್, ಆಟೋ & ವೋಲಾ ಫೆಲೋಸ್. ಅವರೆಲ್ಲ ಡ್ರೈವರ್‌ಗಳು ಆಗಿಲ್ಲದಿದ್ದರೆ ಒಳ್ಳೆಯ ಕಾರ್ಪೆಂಟರ್‌ಗಳಾಗುತ್ತಿದ್ದರು’ ಎಂದ ಸೀನು.
‘ಎತ್ತಣಿಂದೆತ್ತಣ ಸಂಬಂಧ?  Why yaar?
‘ಆ ಬಾಗಿಲಿನ ಚೌಕಟ್ಟನ್ನು ಗಮನಿಸು. ನಿನಗೇ ತಿಳಿಯುತ್ತದೆ’
ಸೀನು ತೋರಿಸಿದ ಬಾಗಿಲಿನತ್ತ ನೋಡಿದ ಪಾಂಡು. ಮತ್ತೆ ಸೀನುವಿನತ್ತ ನೋಡಿದ.
‘ಏನು ಕಾಣಿಸಿತು?’ ಕೇಳಿದ ಸೀನು.

‘ಕೆಲವು ನಟರು ನೆನಪಿಗೆ ಬಂದರು. ‘ಕೆಲವರು ಹಾಲಿವುಡ್ ನಟರಂತೆ ಇರುತ್ತಾರೆ. ಇನ್ನು ಕೆಲವರು ಹಾಲಿ ‘ವುಡನ್’ ಆಕ್ಟರ್ಸ್. ಸುತ್ತಮುತ್ತಲಿನ ಜಡ ಮರಗಳಲ್ಲಿ ಕಾಣಿಸುವಷ್ಟು ಭಾವವೂ ಅವರ ಮುಖದಲ್ಲಿ ಇರುವುದಿಲ್ಲ’ ಎನ್ನುತ್ತಿದ್ದರು ವೈ.ಎನ್.ಕೆ. ಈ ಬಾಗಿಲವಾಡದ ಮರ ಎಕ್ಸ್ ಪ್ರೆಷನ್‌ನಲ್ಲಿ ಎಷ್ಟೋ ಆಕ್ಟರ್‌ಗಳಿಗಿಂತ ಅಮರ’. ‘ಪಾಂಡೂ, ಟ್ರಾಫಿಕ್ ದೃಷ್ಟಿಯಿಂದ ನೋಡೋ ಅಂದ್ರೆ ಟ್ರಾಜಿಕ್ ದೃಷ್ಟಿಯಿಂದ ನೋಡ್ತೀಯಲ್ಲೋ... ಆ ಚೌಕಟ್ಟನ್ನೇ ಗಮನವಿಟ್ಟು ನೋಡು. ಮೊದಲಿಗೆ ಉದ್ದದ ಮರದ ತುಂಡಿನಲ್ಲಿ ಒಂದು ತೂತು ಕೊರೆದು, ಅಡ್ಡಪಟ್ಟಿಯ ತುದಿಯನ್ನು ಆ ತುದಿಯಲ್ಲಿ ಸಿಕ್ಕಿಕೊಳ್ಳುವ ಆಕಾರಕ್ಕೆ ತೋಪಡಾ ಹೊಡೆದು ಕೂಡಿಸುತ್ತಾರೆ. ಉದ್ದಪಟ್ಟಿಯೇ ಟ್ರಾಫಿಕ್‌ನ ಬಸ್ಸು/ಲಾರಿ. ಅದು ಅಲ್ಲಾಡದೆ ನಿಂತಲ್ಲೇ ನಿಲ್ಲುವಂತೆ ಮಾಡುವುದು ಅದರ ಅಕ್ಕಪಕ್ಕ ಬಂದು ನಿಲ್ಲುವ ಕಾರ್‌ಗಳು ಉರುಫ್ ಅಡ್ಡಪಟ್ಟಿಗಳು. ಕಾರ್ಪೆಂಟರ್‌ಗಳು ಈ ಉದ್ದ-ಅಡ್ಡಪಟ್ಟಿಗಳನ್ನು ಜೋಡಿಸಿದ ನಂತರವೂ ಚೌಕಟ್ಟಿನಲ್ಲಿ ಕೊಂಚ ಅಲುಗಾಟ ಇದ್ದೇ ಇರುತ್ತದೆ. ಆ ಅಲುಗಾಟ ಹೋಗಲಾಡಿಸಲು ಉದ್ದಡ್ಡಪಟ್ಟಿಗಳು ಸೇರುವ ಕಡೆಗಳಲ್ಲಿ ವೆಡ್ಜ್ಗಳನ್ನು ಸೆಕ್ಕಿಸಿ ಹೊಡೆಯುತ್ತಾರೆ. ನಮ್ಮಲ್ಲಿನ ಬೈಕ್, ಆಟೋ, ವೋಲಾಗಳೇ ಆ ಬೆಣೆಗಳು. ಕಾರು, ಬಸ್ಸುಗಳ ಚಕ್ರಗಳು ಒಂದಿನಿತೂ ಅಲುಗಾಡದಂತಹ ರೀತಿಯಲ್ಲಿ ಇವು ‘ವೆಡ್ಜ್’ ಮಾಡುತ್ತವೆ. ‘ವೆಡ್ಜ್’ ಆಗಿರುವುದು ‘ನಾನ್ ವೆಡ್ಜ್’ ಆಗಬೇಕಾದರೆ ಬೆಂಗಳೂರಿನ ಬೆಳಗು ಅಮೆರಿಕದ ಬೆಳಗಾಗಿರುತ್ತದೆ. ಆದರೂ, ಹ್ಯಾಟ್ಸ್ ಆಫ್ ಟು ಟ್ರಾಫಿಕ್. ವೇರ್ ದೇರ್ ಈಸ್ ಟ್ರಾಫಿಕ್ಕೂ, ದೇರ್ ಈಸ್ ನೋ ಸ್ಟ್ರೈಕು’ ಹೊಸ ಸಿದ್ಧಾಂತವನ್ನೇ ಮುಂದಿಟ್ಟ ಸೀನು.
‘ಸೀನೂ... ನೀನು ಹೇಳಿದುದನ್ನು ಅರ್ಥವಾಗುವಂತಹ ರೀತಿಯಲ್ಲಿ ವಿವರಿಸದಿದ್ದರೆ ನಿನ್ನ ತಲೆ ಒಡೆದು ಸಾವಿರ ಹೋಳಾಗುತ್ತದೆ’ ಬೆದರಿಸಿದ ಪಾಂಡು.
‘ಹ್ಹ! ‘ಬೆಂಕಿಪುರಾವೆ’, ‘ಪುತ್ರಿ ವೈದೇಹಿ’, ‘ಚೈಲ್ಡ್ ಪಾರ್ವತಿ ಮ್ಯಾರೇಜ್’ಗಳಂತ ಸೀರಿಯಲ್‌ಗಳನ್ನು ನೋಡಿ ಗಟ್ಟಿಯಾಗಿರುವ ತಲೆ ಇದು. ಹೋಳಾಗಲು ನನ್ನ ತಲೆಯೇನು ಚುನಾವಣಾ ನಂತರದ ‘ಅತೃಪ್ತ’ ಕೂಟವೇ? ಆದರೂ, ಸೆಲ್ಫಿ ತೆಗೆದುಕೊಂಡು ತಮ್ಮ ಮೂತಿಯನ್ನು ತಾವೇ ನೋಡಿ ಸಂತೋಷಿಸುವ ‘ಸೆಲ್ಫಿ ಸರ್ವೀಸ್’ ಮಂದಿಯಂತೆ ನಾನೂ ನನ್ನ ಸಂತೋಷಕ್ಕೆಂದೇ ಹೇಳಿಕೊಳ್ಳುತ್ತೇನೆ. ಮುಂದೆ ಅನಿವಾರ್ಯ ಕಿವಿಯಾಗಿರುವ ನೀನು ಕೇಳುವಂಥವನಾಗು. ಟ್ರಾಫಿಕ್ ಕಂಜೆಷನ್ ಇದ್ದೆಡೆ ವಾಹನಗಳು ವೆಡ್ಜ್ ಆಗಿರುತ್ತವೆ. ಆ ವಾಹನಗಳ ಮಧ್ಯೆ ನಾಯಿಗಳು ಹೋಗುವುದೇ ಕಷ್ಟವಾಗಿರುವಾಗ ನಾಯಕರು ಹೋಗುವುದು ಅಸಂಭವ. ಒಬ್ಬ ಹೋಗುವುದೇ ಅಸಾಧ್ಯವಾದಾಗ ಬ್ಯಾಂಕಿನ ರ‍್ಯಾಲಿ, ಪೌರತ್ವವಿರೋಧಿ ಮೆರವಣಿಗೆ, ಸರ್ಕಾರವಿರೋಧಿ ಹರತಾಳ, ಇವುಗಳು ‘ನಡೆಯುವುದು’ ಇಂಪಾಸಿಬಲ್ಲು. ಜೊತೆಗೆ ಇನ್ನೊಂದು ಕಾರಣವೂ ಇದೆ; ಹಾರ್ನು’
‘ಏನೋ ಹಾಗಂದ್ರೆ?’ ಕೊಂಚ ಶ್ರಮ ವಹಿಸಿದರೆ ಅಮೆರಿಕದ ಅಧ್ಯಕ್ಷ ಟ್ರಂಪ್‌ನ ಮಾತನ್ನು ಅರ್ಥ ಮಾಡಿಕೊಳ್ಳಬಹುದು; ಕರೋನಾ ವೈರಸ್‌ಗೆ ಕೇವಲ ನೆಗಡಿ ಮಾತ್ರೆಯನ್ನು ಬಳಸಿಯೇ ತಡೆ ಒಡ್ಡಬಹುದು. ಆದರೆ ಸೀನುವಿನ ಒಗಟನ್ನು ಸೀನುವೇ ಬಿಡಿಸಬೇಕು.
‘ಹಾರ್ನು ಅಂದ್ರೆ ವಾಹನಗಳ ಡ್ರೈವರ್‌ಗಳು ಟ್ರಾಫಿಕ್ ಜ್ಯಾಂ ವಿರುದ್ಧ ಕೈಗೊಳ್ಳುವ ‘ಸೌಂಡ್ ಪ್ರೊಟೆಸ್ಟ್’. ಕುರುಕ್ಷೇತ್ರ ಯುದ್ಧದಲ್ಲಿ ಹದಿನೆಂಟು ಅಕ್ಷೋಹಿಣಿ ಸೈನ್ಯದವರು ಒಂದೇ ಕಾಲದಲ್ಲಿ ತಮ್ಮೆಲ್ಲ ಶಂಖಗಳನ್ನು ಮೊಳಗಿಸಿದ್ದರೆ ಮೂಡಿರಬಹುದಾದ ಸದ್ದಿನ ನಾಲ್ಕು ಪಟ್ಟು ಸದ್ದು ಪ್ರತಿ ಸಿಗ್ನಲ್ ಲೈಟಲ್ಲೂ ಇರುತ್ತದೆ. ಟ್ರಾಫಿಕ್ ಕಂಜೆಷನ್ ಇರುವಲ್ಲಿ ಸಿಗ್ನಲ್‌ನಲ್ಲಿರುವ ಸದ್ದಿನ ಆರು ಪಟ್ಟು ಸದ್ದು ಇರುತ್ತದೆ. ಅಂತಹ ಘನಘೋರ ಸದ್ದಿನ ಮುಂದೆ ಈ ರ‍್ಯಾಲಿ, ಹರತಾಳಗಳವರ ‘ಡೌನ್ ಡೌನ್’ ಕೂಗುಗಳು ಏರೋಪ್ಲೇನ್ ಟೇಕಾಫ್ ಸಮಯದ ಸದ್ದಿನ ಮುಂದೆ ಗುಬ್ಬಿಯ ಚಿಂವ್‌ಚಿಂವ್‌ನಂತಿರುತ್ತದಷ್ಟೆ. ದೇರ್‌ಫೋರ್, ವೇರ್ ದೇರ್ ಈಸ್ ಟ್ರಾಫಿಕ್ಕೂ, ದೇರ್ ಈಸ್ ನೋ ಸ್ಟ್ರೈಕು’ ಸಮರ್ಥಿಸಿಕೊಂಡ ಸೀನು.
‘ಆದರೂ... ವಾಹನಗಳು ಇನಿತೂ ಚಲಿಸುವುದಿಲ್ಲವೆಂದರೆ...’ ಗೊಣಗಿದ ಪಾಂಡು.
‘ಈ ಪರಮ ಪ್ರಚಂಡ ನಿಧಾನಕ್ಕೂ ಸಹ ಎರಡು ವಲಯಗಳಿಂದ ಪ್ರಶಂಸೆ ವ್ಯಕ್ತವಾಗಿದೆ’ ಎಂದ ಸೀನು.
‘ಅಖಿಲ ಭಾರತ ಆಲಸಿಗಳ ಸಂಘ ಮತ್ತು ಒಡ್ಡು ಚಾಲಕ ವಿರೋಧಿ ಸಂಘಗಳೇನು?’
‘ಊಹೂಂ. ಒಡ್ಡು ಚಾಲಕ ವಿರೋಧಿ ಸಂಘಗಳ ನೇತಾರರು ಟ್ರಾಫಿಕ್ ಕಂಜೆಷನ್ ಅನ್ನು ವಿರೋಧಿಸಿದ್ದಾರೆ. ‘ಇಷ್ಟೊಂದು ಟ್ರಾಫಿಕ್ ಇದ್ದರೆ ಒಬ್ಬನೂ ಒಡ್ಡಾಗಿ ಓಡಿಸಲಾಗದು. ಹಾಗೆ ಓಡಿಸದಿದ್ದರೆ ನಾವು ವಿರೋಧಿಸಲಾಗದು. ಹಾಗೆ ವಿರೋಧಿಸದಿದ್ದರೆ ನಮ್ಮ ಸಂಘ ಇದ್ದೂ ಇಲ್ಲದಂತೆ! ನಮ್ಮ ಸಂಘದ ಅಸ್ಥಿತ್ವಕ್ಕೆ ಧಕ್ಕೆ ತರುವ ಟ್ರಾಫಿಕ್ ಕಂಜೆಷನ್‌ಗೆ ಧಿಕ್ಕಾರ’ ಎಂದಿದ್ದಾರವರು. ನಿಧಾನವನ್ನು ಪ್ರಶಂಸಿಸಿದ್ದು ‘ಅಖಿಲ ಕರ್ನಾಟಕ ಆಮೆ ಮತ್ತು ಬಸವನಹುಳ ಅಭಿಮಾನಿಗಳ ಸಂಘ’ ಮತ್ತು ‘ಅಖಿಲ ಭಾರತ ವಾಹನ ವಿಮಾ ಸಂಘ’ಗಳು’
‘ವಿಮಾ ಕಂಪನಿಗಳ ಸಂತೋಷಕ್ಕೆ ಕಾರಣ?’
‘ಮೋರ್ ದ ಜ್ಯಾಮ್, ಲೆಸ್ಸರ್ ದ ಕ್ಲೈಮ್ ಎನ್ನುವ ಸತ್ಯವನ್ನು ಕಂಡುಕೊಂಡಿದ್ದಾರೆ. ಈಗ ಆ ವಿಮಾ ಕಂಪನಿಗಳು ಹಸು, ಗೂಳಿ, ಶುನಕ ಸಾಕಣಿಕೆ ಕೇಂದ್ರಗಳನ್ನು ಸ್ಥಾಪಿಸಲು ಯೋಚಿಸುತ್ತಿದ್ದಾರೆ’
‘ಏಕೆ?’
‘ನಗರದ ಆಯಕಟ್ಟು ಸ್ಥಳಗಳನ್ನು ಗುರುತಿಸಿ, ಅಂತಹ ಸ್ಥಳಗಳಿಗೆ ತಕ್ಕಂತಹ ಪ್ರಾಣಿಗಳನ್ನು ಕೂಡಿಸಲು’
‘ಯಾವ ಯಾವ ಸ್ಥಳಗಳಿಗೆ ಯಾವ ಯಾವ ಪ್ರಾಣಿಗಳಂತೆ?’
‘ಕೊಂಚ ಒರಟು ಜನರಿರುವ ಸ್ಥಳಗಳಲ್ಲಿ ಭೀತಿ ಮೂಡಿಸುವಂತಹ ಚೂಪಾದ ಕೊಂಬಿನ ಗೂಳಿಗಳನ್ನು ಕೂಡಿಸಿಬಿಟ್ಟರೆ ಅದನ್ನು ಯಾರೂ ಓಡಿಸುವುದಿಲ್ಲ, ಅದು ತಾನೇ ಓಡಿಹೋಗುವುದಿಲ್ಲ. ದೇವಸ್ಥಾನಗಳು ಹೆಚ್ಚಾಗಿ ಇರುವ ಬಡಾವಣೆಗಳ ಆಯಕಟ್ಟು ಸ್ಥಳಗಳಲ್ಲಿ ಹಸುಗಳನ್ನು ಕೂಡಿಸಿದರೆ, ಗೋಮಾತೆಯನ್ನು ಮುಟ್ಟಿ ನಮಸ್ಕರಿಸಿ ಹೋಗುವವರು ವೆಹಿಕಲ್‌ಗಳ ಸ್ಟ್ಯಾಂಡ್ ಹಾಕಿ ನಿಲ್ಲಿಸುವ ಸಾಧ್ಯತೆ ಇರುವುದರಿಂದ ಕಂಜೆಷನ್ ಏರುತ್ತದೆ. ಅಂತಹ ಕಂಜೆಷನ್‌ನಲ್ಲೂ ತೂರುವ ಬುದ್ಧಿ ತೋರುವವರಿದ್ದರೆ ಅವರ ಹಿಮ್ಮಡಿಯ ರುಚಿ ನೋಡುವಂತಹ ‘ಟ್ಟ್ರೈನ್ಡ್ ಡಾಗ್’ಗಳನ್ನು ಬಿಟ್ಟರೆ ಆ ಆತುರಗಾರರ ವೇಗ ಮಟ್ಟವಾಗುತ್ತದೆ. ಇವೆಲ್ಲದರ ಜೊತೆಗೆ ಅಡಿಷನಲ್ ಸೆಕ್ಯೂರಿಟಿಯಾಗಿ ಅಲ್ಲಲ್ಲಿ ಎಮ್ಮೆಗಳನ್ನು ನಿಲ್ಲಿಸುತ್ತಾರಂತೆ. ಆ ಎಮ್ಮೆಗಳ ಕಿವಿಗಳಿಗೆ ಹತ್ತಿ ತುರುಕಿದರೆ ಪರವಾಯಿಲ್ಲವೇ ಎಂದು ಪ್ರಾಣಿದಯಾ ಸಂಘದವರನ್ನು ವಿಮಾ ಸಂಘದವರು ಕೇಳಿದ್ದಾರಂತೆ. ಅಲ್ಲಿಂದ ಕ್ಲಿಯರೆನ್ಸ್ ಸಿಕ್ಕರೆ ಎಮ್ಮೆಗಳಿಗೆ ಹಾರ್ನ್ಗಳೆಲ್ಲ ಮ್ಯೂಟ್ ಆದಂತಾಗಿ, ಇಡೀ ಗದ್ದಲದ ಪರಿಸರವನ್ನು ಅವು ಮೂಕಿ ಚಿತ್ರದಂತೆ ನೋಡುತ್ತಾ ಆನಂದಿಸಬಹುದು.’ ವಿವರಿಸಿದ ಸೀನು.
‘ವಾಹ್! ಇಡೀ ನಗರಕ್ಕೆ ಎಮ್ಮೆ ತರುವಂತಹ... ಕ್ಷಮಿಸು.... ಹೆಮ್ಮೆ ತರುವಂತಹ ಕೆಲಸವಿದು’ ಎಂದ ಪಾಂಡು.
‘ನಿಜ. ಕಂಜೆಷನ್‌ನಿಂದ ಪಶುಸಂಗೋಪನೆ ವೃದ್ಧಿಯಾಗುತ್ತದೆ ಎಂದು ಇಷ್ಟು ಹೊತ್ತಿಗೆ ನಿನಗೆ ಹೊಳೆದಿರಬಹುದು. ಮುಧೋಳದಂತಹ ಊರುಗಳಲ್ಲಿ ಹೆಚ್ಚು ‘ಕೆನೆಲ್’ಗಳು ಆರಂಭವಾಗುತ್ತವೆ. ವಾಹನಗಳು ‘ಸ್ಟಾö್ಯಂಡ್ ಸ್ಟಿಲ್’ ಆಗಿದ್ದರೂ, ಹೆಚ್ಚಿನ ಕಾಲ ಧೂಳು, ಹೊಗೆಯಲ್ಲಿ ಸಿಲುಕುವ ಮಂದಿಗೆ ‘ಇನ್‌ಸ್ಟೆಂಟ್ ಆಕ್ಷೀ ಕ್ಯೂರರ್’ ಮೊದಲಾದ ‘ಸ್ಟಾರ್ಟ್ ಅಪ್’ ಮೆಡಿಕಲ್ ಕಂಪನಿಗಳು ಹುಟ್ಟಿಕೊಳ್ಳುತ್ತವೆ. ಇಂತಹ ಕಂಪನಿಗಳು ಹೆಚ್ಚುತ್ತಿದ್ದಂತೆ ನಿರುದ್ಯೋಗ ತಗ್ಗುತ್ತದೆ, ದೇಶದ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಬೆಂಗಳೂರಿಗೆ ದೊರಕಿರುವ ‘ನಂಬರ್ ಒನ್ ಸಿಟಿ’ ಬಿರುದು ಹಾಗೆಯೇ ಉಳಿಯುತ್ತದೆ. ಹೆಸರು ಪಡೆಯುವುದು ಸುಲಭ; ಉಳಿಸಿಕೊಳ್ಳುವುದೇ ಕಷ್ಟ. ಆದ್ದರಿಂದ ವಿ ಮಸ್ಟ್ ಎನ್ಕರೇಜ್ ಕಂಜೆಷನ್’ ಆವೇಶದಿಂದ ನಾನ್‌ಸ್ಟಾಪ್ ಮಾತನಾಡಿದ ಸೀನು
‘ಯೂ ಆರ್ ರೈಟ್ ಸೀನು. ಜೈ ಟ್ರಾಫಿಕ್ ಕಂಜೆಷನ್’ ಎಂದ ಪಾಂಡು.

Comments

  1. Mr Ramnath you and your articles have excellent imagination but why women are become victimised for fun. Do you see more humour surrounding women? for example TV serials and makeup etc.. but its nice to read on your perspective

    ReplyDelete
    Replies
    1. I have the high regards for women. I have observed that women too make fun of themselves and enjoy jokes at their expense. Men are but a distant second in this regard. As for makeup, I quote a poem penned in 1660, though not in to-to: 'Previously all the roses in the world were white; But when the princess of the land; came to the garden; the roses at her beauty gawked; blushed; and became red.
      I am all for natural beauty and not the excessively tinkered and painted lot.

      Delete
  2. ರಾಮಣ್ಣೋರೆ ಈ ಲೇಖನದಲ್ಲಿ ಕೆಲವು ದೇಸೀ ಪದಬಳಕೆ ಸೂಪರ್ ಇದೆ. ತೋಪಾಡ, ಬೆಣೆಗಳು ಇತ್ಯಾದಿ. ಇನ್ನು ತಮ್ಮ ಆ ಹೊಳೆಯುವ ತಲೆಯೊಳಗೆ ಈ ಥರದ ಹಾಸ್ಯ ಅದೆಷ್ಟು ಹೊಳೆಯುತ್ತದೋ ತಿಳಿಯದು. ಪ್ರಸ್ತುತ ಟಿವಿ ನೋಡಿದವರಿಗೆ ಈ ಸಾಲು ಹೊಟ್ಟೆ ಬಿಗಿಯಾಗುವಷ್ಟು ನಗಿಸುತ್ತದೆ - ‘ಬೆಂಕಿಪುರಾವೆ’, ‘ಪುತ್ರಿ ವೈದೇಹಿ’, ‘ಚೈಲ್ಡ್ ಪಾರ್ವತಿ ಮ್ಯಾರೇಜ್’ಗಳಂತ ಸೀರಿಯಲ್‌ಗಳನ್ನು ನೋಡಿ ಗಟ್ಟಿಯಾಗಿರುವ ತಲೆ ಇದು. ಯಪ್ಪಾ ....

    ReplyDelete

Post a Comment