ಮೌಂಟ್ ಕೋಸಿಯೋಸ್ಕೋ

ಮೌಂಟ್ ಕೋಸಿಯೋಸ್ಕೋ
Mount Kosciuszko

ಪ್ರವಾಸ ಲೇಖನ - ನಾಗಶೈಲ ಕುಮಾರ್ 

                                                                             •    ಮೌಂಟ್ ಕೋಸಿಯೋಸ್ಕೋ.
ನಮ್ಮ ಹಿಮಾಲಯ ಪರ್ವತ ಶ್ರೇಣಿಯೆಂದರೆ ಏನೋ ಹೆಮ್ಮೆ, ರೋಮಾಂಚನ, ಗೌರವ, ಕುತೂಹಲ, ಭಯ ಈ ಎಲ್ಲಾ ಭಾವನೆಗಳೂ ಮನಸ್ಸಿನಲ್ಲಿ ಮೂಡುತ್ತದೆ. ಅದರ ಬಗ್ಗೆ ಓದುವ, ಕೇಳುವ, ತಿಳಿದುಕೊಳ್ಳುವ ದಾಹವಂತೂ ತಣಿಯುವುದೇ ಇಲ್ಲ. ಇನ್ನು ಅಲ್ಲಿಗೇ ಹೋಗಿ ನೋಡುವುದೆಂದರೆ! ಅದರ ಆನಂದ, ಸೊಬಗನ್ನಂತೂ ವರ್ಣಿಸಲಸಾಧ್ಯ.



ಇಷ್ಟೆಲ್ಲಾ ಹೇಳಿದ ಮೇಲೆ ನೋಡಲೇಬೇಕಲ್ಲ. ಬದರಿ, ಕೇದಾರನಾಥಗಳು, ಕುಲು ಮನಾಲಿ ಮುಂತಾದೆಡೆ ಹೋಗಿಬಂದ ಮೇಲೆ, ಇನ್ನೂ ಹೆಚ್ಚಿನ ಕುತೂಹಲ.
ಹೀಗೇ ಒಮ್ಮೆ ಎವರೆಸ್ಟ್, ಕಾಂಚನಜುಂಗಾ ಎಂದೆಲ್ಲಾ ಓದುತ್ತಿರುವಾಗ, ಏಳು ಖಂಡಗಳು- ಏಳು ಶಿಖರಗಳು ಎಂಬ ಶೀರ್ಷಿಕೆ ಗಮನ ಸೆಳೆಯಿತು. ಏಷ್ಯಾ ಖಂಡದ ಎವರೆಸ್ಟ್ ನಿಂದ ಆರಂಭವಾಗಿ ಮಿಕ್ಕ ಖಂಡಗಳೂ ಅವುಗಳಲ್ಲಿನ ಅತ್ಯಂತ ಎತ್ತರದ ಶಿಖರಗಳ ಬಗ್ಗೆ ಲೇಖನ. ಕುತೂಹಲದಿಂದ ಓದಿದೆ, ಅವುಗಳ ಪಟ್ಟಿಯಲ್ಲಿ 'ಮೌಂಟ್ ಕೋಸಿಯೋಸ್ಕೋ' ಹೆಸರು ನೋಡಿ ಆಶ್ಚರ್ಯಚಕಿತನಾದೆ.
ಆಸ್ಟ್ರೇಲಿಯಾ ದೇಶದ, ನ್ಯೂ ಸೌತ್ ವೇಲ್ಸ್ ರಾಜ್ಯದ ಸ್ನೋಯಿ ಮೌಂಟೇನ್ಸ್ ಸಾಲಿನಲ್ಲಿ ಇರುವುದು ಈ ಮೌಂಟ್ ಕೋಸಿಯೋಸ್ಕೋ. ನಮ್ಮ ಮುಳ್ಳಯ್ಯನಗಿರಿ ಶಿಖರಕ್ಕಿಂತ ತುಸು ಎತ್ತರವಿರುವ ಈ ಪರ್ವತ ಈ ಪಟ್ಟಿಗೆ ಸೇರಿದೆಯೆಂದರೆ ಆಶ್ಚರ್ಯವೇ.
8848 ಮೀಟರ್ ಎತ್ತರವಿರುವ ಎವರೆಸ್ಟ್ ಜೊತೆಗೆ 2228 ಮೀಟರ್ ಎತ್ತರದ ಮೌಂಟ್ ಕೋಸಿಯಾಸ್ಕೋ, ಒಂದು ಪುಟ್ಟ ಮಗುವೇ ಸರಿ. ಎವರೆಸ್ಟ್ ನಂತೆ ರುದ್ರ ಭೀಕರವೂ ಅಲ್ಲ, ಏರಲು ಜೀವಭಯವೂ ಇರುವುದಿಲ್ಲ. ಹೇಳ ಬೇಕೆಂದರೆ ಏಳು ಖಂಡಗಳ ಏಳು ಶಿಖರಗಳಲ್ಲಿ, ಅತ್ಯಂತ ಸುಲಭವಾಗಿ ತುದಿ ಮುಟ್ಟಬಹುದಾದ ಶಿಖರವು ಇದು.


ಹಾಗೆಂದು ಇದನ್ನು ಕುಬ್ಜವೆಂದು ಹೀಯಾಳಿಸಲಾಗದು, ಇದಕ್ಕೂ ಅದರದೇ ಆದ ಹಿರಿಮೆಯಿದೆ. ಆಸ್ಟ್ರೇಲಿಯಾದ ' ದಿ ಗ್ರೇಟ್ ಡಿವೈಡಿಂಗ್ ರೇಂಜ್'  ಹಿಮಾಲಯ ಪರ್ವತ ಸಾಲಿಗಿಂತಲೂ ಪ್ರಾಚೀನವಾದ, ಹಿಮಾಲಯ ಪರ್ವತ ಸಾಲಿಗಿಂತಲೂ  ಉದ್ದವಾದ ಬೆಟ್ಟಗಳ ಸಾಲು. ಅದರಲ್ಲಿ ನ್ಯೂ ಸೌತ್ ವೇಲ್ಸ್ ನ ಇರುವ ಅನೇಕ ಎತ್ತರದ ಶಿಖರಗಳ ನಡುವಲ್ಲಿ ಮೆರೆಯುತ್ತಿದೆ ಮೌಂಟ್ ಕೋಸಿಯೋಸ್ಕೋ. ಬಹಳ ಹಿಂದಿನಿಂದಲೂ ಈ ದೇಶದ ಆದಿವಾಸಿಗಳಿಗೆ ಇದೊಂದು ಪವಿತ್ರ ತಾಣ,  ವ್ಯಾಪಾರ ಮಾರ್ಗ, ಮತ್ತು ಪಶುಗಳ ಮೇವಿನ ತಾಣ.
ಈ ದಿನಗಳಲ್ಲಿ, ಚಳಿಗಾಲದಲ್ಲಿ ಹಿಮಾಚ್ಛಾದಿತವಾಗಿ, ಹಿಮ ಕ್ರೀಡೆಗಳಿಗೆ, ಮತ್ತು ಬೇಸಿಗೆಯಲ್ಲಿ ಚಾರಣಿಗರಿಗೆ, ಕುದುರೆ ಸವಾರಿಗೆ, ಮತ್ತು ಸಾಹಸವನ್ನರಸಿ ಬರುವವರಿಗೆ ನೆಚ್ಚಿನ ತಾಣವಾಗಿದೆ.
ಏಳು ಖಂಡದ ಏಳು ಶಿಖರಗಳಲ್ಲಿ ಆಸ್ಟ್ರೇಲಿಯಾ ದೇಶದ ಅತ್ಯುನ್ನತ ಶಿಖರ ಸುಲಭವಾಗಿ ಕೈಗೆಟಕಬಲ್ಲದು ಎಂದಾಗ ಹೋಗಬೇಕೆಂದು ಕನಸು ಕಾಣತೊಡಗಿದ್ದೆ. ಕೆಲಸದಲ್ಲಿ ನನ್ನ ಸ್ನೇಹಿತ ಬ್ರಿಯಾನ್, ಮತ್ತು ಮತ್ತೊಬ್ಬ ಸ್ನೇಹಿತ ನರಸಿಂಹ ಮೂರ್ತಿ ಹೋಗಿ ಬಂದ ಫೋಟೋಗಳನ್ನು ತೋರಿಸಿದಾಗ, ಆ ಬಯಕೆ ಇನ್ನೂ ಹೆಚ್ಚಾಗಿತ್ತು.


ಈ ಸಲದ ಬೇಸಿಗೆ ರಜಾದಲ್ಲಿ ಮೌಂಟ್ ಕೋಸಿಯಾಸ್ಕೋ ಗೆ ಹೋಗೋಣ ಎಂದಾಗ, ಅಷ್ಟಾಗಿ ಕೇಳೇ ಇಲ್ಲದ ಯಾವುದೋ ಹೊಸ ಜಾಗ ಎಂದು ಮನೆ ಮಂದಿಯೆಲ್ಲ ಖುಷಿಯಾಗಿ ಹೊರಟೆವು . ಅಲ್ಲಿಗೆ ಹೋಗುವುದು ಅನೇಕ ರೀತಿಯಲ್ಲಿ ಬೇರೆ ಜಾಗಗಳಿಗಿಂತ ಅನುಕೂಲಕರವಾಗಿತ್ತು. ಮೊದಲನೆಯದಾಗಿ ಬೇಸಿಗೆಯಲ್ಲಿ ಅಲ್ಲಿಗೆ ಹೋಗಬಹುದೆಂಬ ಅರಿವಿರುವವರೇ ತುಂಬಾ ಕಡಿಮೆ, ಹಾಗಾಗಿ ಬೇರೆ ಜನಪ್ರಿಯ ಪ್ರವಾಸೀ ತಾಣಗಳಿಗಿಂತ ಜನಸಂದಣಿ ಕಡಿಮೆ. ಎರಡನೆಯದಾಗಿ ಇಳಿದುಕೊಳ್ಳಲು ವಸತಿ ಸೌಕರ್ಯ ದೊರೆಯುವುದೂ ಸುಲಭ, ಬೆಲೆಯೂ ವಿಪರೀತ ಇರುವುದಿಲ್ಲ.ಮೂರನೆಯದಾಗಿ ನಮ್ಮ ಮನೆಯಿಂದ ಕೇವಲ ಐದಾರು ಗಂಟೆಗಳ ಪ್ರಯಾಣ ಅಷ್ಟೇ. ಸರಿ, Snowy mountains ನಡುವಿನ ಕಣಿವೆಯಲ್ಲಿರುವ ಥ್ರೆಡ್ಬೋ (Thredbo) ಎಂಬ ಹಳ್ಳಿಯಲ್ಲಿ ಮೂರು ದಿನಗಳಿಗೆ ವಸತಿ ಕಾದಿರಿಸಿದೆ.

             ಇರುವುದರಲ್ಲಿ, ಕ್ರಿಸ್ಮಸ್ ಹಬ್ಬಕ್ಕೆ ಮುಂಚೆಯೇ ಹೋಗಿ ಬಂದರೆ ಒಳ್ಳೆಯದೆಂದು ಡಿಸೆಂಬರ್ 22 ರಿಂದ 25 ರವರೆಗೆ ಮೂರು ದಿನಗಳ ಪ್ರವಾಸ. ಆದರೆ ದಿನಗಳು ಹತ್ತಿರ ಬಂದಂತೆ ಭಾರಿಯಾದ ವಿಪತ್ತೇ ಎದುರಾಗಿತ್ತು. ಸುಮಾರು ತಿಂಗಳಿಂದ ಅಲ್ಲಲ್ಲಿ ಕಂಡಿದ್ದ ಕಾಡ್ಗಿಚ್ಚು ಹೆಚ್ಚಾಗಿ, ಸುತ್ತ ಮುತ್ತಲಿನ ಕಾಡುಗಳೆಲ್ಲವೂ ಹತ್ತಿ ಉರಿಯತೊಡಗಿತ್ತು. ನೀಲಾಗಸ ಕಾಣುವುದೇ ಅಪರೂಪವಾಗಿ, ಬರೀ ಹೊಗೆ ತುಂಬಿ ಹೋಗಿತ್ತು. ನಾವು ಹೊರಡಬೇಕಾಗಿದ್ದ ಎರಡು ದಿನಗಳ ಮುಂಚೆ, ನಮಗೆ ಸಮೀಪವೇ ಇದ್ದ ಬಾರ್ಗೋ ಎಂಬ ಊರಿನ ಸುತ್ತ ಮುತ್ತ ಕಾಡು ಹೊತ್ತಿ ಉರಿದು, ಅಪಾರ ಹಾನಿಯಾಗಿತ್ತು. ಆ ಕಾರಣ ನಾವು ಪಯಣಿಸಬೇಕಾಗಿದ್ದ ಹೆದ್ದಾರಿ, ಹ್ಯೂಮ್ ಹೈವೇಯಲ್ಲಿ ವಾಹನಗಳ ಓಡಾಟವನ್ನು ಸ್ಥಗಿತಗೊಳಿಸಿದ್ದರು. ಇನ್ನೊಂದು ಬಳಸು ದಾರಿಯಲ್ಲಿ ಹೋಗೋಣವೆಂದರೆ ಅದೂ ಕೂಡ ಮುಚ್ಚಿತ್ತು. ದಿನದಿನಕ್ಕೂ ಕಾಡ್ಗಿಚ್ಚು ಹೆಚ್ಚಾಗುತ್ತಲೇ ಇತ್ತು. ಸರಿ 22 ರ ಬೆಳಗಿನವರೆಗೂ ನೋಡುವುದು, ಪರಿಸ್ಥಿತಿ ಉತ್ತಮಗೊಳ್ಳದಿದ್ದರೆ ಪ್ರವಾಸವನ್ನೇ ರದ್ದುಗೊಳಿಸುವುದು ಎಂದುಕೊಂಡೆವು. ಆದರೂ ಮನೆಯವರಂತೂ, ಕೋಡುಬಳೆ, ಶಂಕರಪೋಳಿ, ಚಪಾತಿ, ದೋಸೆ ಹಿಟ್ಟು, ಚಟ್ನಿ, ಪಲ್ಯ ಎಲ್ಲಾ ಸಿದ್ಧ ಮಾಡಿದ್ದರು.22 ರ ಬೆಳಿಗ್ಗೆ ಇಂಟರ್ನೆಟ್ ನಲ್ಲಿ ಚೆಕ್ ಮಾಡಿದರೆ, ಹ್ಯೂಮ್ ಹೈವೇ ವಾಹನಗಳ ಓಡಾಟಕ್ಕೆ ತೆರವಾಗಿದೆ ಎಂದಿತ್ತು, ಮತ್ತೆ ಮತ್ತೆ ನೋಡಿ ಸಮಾಧಾನವಾಗದೆ ಲೈವ್ ಟ್ರಾಫಿಕ್ ಗೆ ಕರೆಮಾಡಿ, ಆಪರೇಟರ್ ಸ್ವತಃ ಏನೂ ತೊಂದರೆ ಇಲ್ಲ ಎಂದು ತಿಳಿಸಿದ ಮೇಲೆ, ಹೊರಡುವುದು ಎಂದು ತೀರ್ಮಾನ ಮಾಡಿದೆ.


ಮನೆ ಬಿಡುವ ವೇಳೆಗೆ ಬೆಳಗ್ಗೆ 9 ಗಂಟೆ. ಬಿಸಿಲು, ಸೂರ್ಯ ಕಾಣದಂತ ಹೊಗೆ. ರಸ್ತೆಯಲ್ಲಿ ವಾಹನಗಳ ಓಡಾಟ ಅಷ್ಟಾಗಿ ಇರಲಿಲ್ಲ. ಎಲ್ಲಿ ಏನು ತೊಂದರೆ ಆಗಬಹುದೋ ಎಂಬ ಅಳುಕಿನಿಂದಲೇ ಮುಂದೆ ಸಾಗಿದೆವು. ಕೊಂಚ ದೂರ ಹೋದ ನಂತರ ರಸ್ತೆಯ ಬದಿಯಲ್ಲಿ ಉದ್ದಕ್ಕೂ ಸುಟ್ಟ ಮರಗಳ ಸಾಲು, ಹೊಗೆಯ ವಾಸನೆ, ಆದರೆ ಸ್ವಲ್ಪ ದೂರವಷ್ಟೇ. ನಂತರ ಏನೂ ಆಗೇ ಇಲ್ಲವೇನೋ ಎಂಬಂತೆ ಎಲ್ಲವೂ ಸ್ವಚ್ಛ.
ದೂರ ದೂರ ಹೋದಂತೆ ಆತಂಕ ನಿವಾರಣೆಯಾಗಿ ಪ್ರಯಾಣ ಸುಲಲಿತವಾಗಿ ಸಾಗಿತು.

ಸಿಡ್ನಿಗೆ 500 ಕಿಮೀ ದೂರ, ಆದರೆ ನಮ್ಮ ಮನೆಯಿಂದ ಸುಮಾರು 450 ಕಿಮೀ. ತಿಂಡಿ ಊಟ, ವಿಶ್ರಾಂತಿ ಎಂದೆಲ್ಲಾ ನಿಲುಗಡೆಗಳು ಸೇರಿ ಸುಮಾರು ಏಳು ಗಂಟೆಗಳ ಪ್ರಯಾಣ. ಜಿಂಡಾಬೈನ್ ಎಂಬ ಊರಿನಾಚೆಯಿಂದ ಅಲ್ಪೈನ್ ರೋಡ್ ನಲ್ಲಿ ಸಾಗುವಾಗ ಸ್ನೋಯೀ ಮೌಂಟೇನ್ ಗಳ ನಡುವೆ ತೂರಿ ಹಾದಿ ಸಾಗಿತ್ತು. ಸುತ್ತಲೂ ಹಸಿರು ತುಂಬಿದ ಬೆಟ್ಟಗಳ ಸಾಲು, ಮಕ್ಕಳು ಅಲ್ಲಿ ನೋಡು ಇಲ್ಲಿ ನೋಡು ಎಂದು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಿದ್ದರೆ, ನನಗೆ ಹಾವಿನಂತೆ ಬಳುಕುತ್ತಾ, ಏರಿಳಿಯುತ್ತಿದ್ದ ರಸ್ತೆಯನ್ನು, ಸರ್ಕಸ್ ಮಾಡುತ್ತಾ ನಿಭಾಯಿಸುವುದೇ ಆಗಿತ್ತು.
ಥ್ರೆಡ್ ಬೋ ನಲ್ಲಿ ನಾವು ಮಾಡಿದ್ದ ವಸತಿ ಸಾಕಷ್ಟು ಅನುಕೂಲಕರವಾಗಿ, ಚೆನ್ನಾಗಿತ್ತು. ಸಂಜೆ ಒಂದು ಸುತ್ತು ಹೊರ ಹೋಗಿ, ಪ್ರಶಾಂತ ವಾತಾವರಣದಲ್ಲಿ ಪ್ರಕೃತಿ ಸೌಂದರ್ಯ ಸವಿಯುತ್ತಾ, ಮಾರನೆಯ ದಿನ ಬೆಳಿಗ್ಗೆ ಎಲ್ಲಿಗೆ ಹೋಗಬೇಕು, ಎಷ್ಟು ಹೊತ್ತಿಗೆ ಎಂದೆಲ್ಲಾ ವಿವರಗಳನ್ನು ನೋಡಿಕೊಂಡು ಬಂದೆವು. ನಗರದ ಗದ್ದಲಕ್ಕೆ ವಿರುದ್ಧವಾಗಿ ಹಸಿರು ಕಣಿವೆಯಲ್ಲಿ, ತೊಟ್ಟಿಲಿನಂತಿದ್ದ ಊರು, ಜೋಜೋ ಹಾಡುವಂತೆ ಜುಳು ಜುಳು ಹರಿಯುವ ನೀರು, ಬಣ್ಣ ಬಣ್ಣದ ಗಿಳಿ, ಮೊಲ, ಬಾತುಕೋಳಿಗಳು, ಎಲ್ಲವೂ ಸೇರಿ ಯಾವುದೋ ಕನಸಿನ ಲೋಕದಲ್ಲಿ ಇದ್ದಂತಿತ್ತು. ಹೊಗೆಯಿಂದ ಕಡುಗೆಂಪಾದ ಸೂರ್ಯನ ಇಳಿ ಬಿಸಿಲಿನಿಂದ ಇಡೀ ವಾತಾವರಣವೇ ಕಲಾವಿದನ ಅದ್ಭುತ ವರ್ಣಚಿತ್ರದಂತೆ ಇತ್ತು. ಆ ಪರಿಸರದಲ್ಲಿ ಸೂರ್ಯಾಸ್ತದ ಒಂದೊಂದು ಕ್ಷಣವನ್ನೂ ಸವಿಯುತ್ತಾ ಕುಳಿತಾಗ, ಈ ಅನುಭವವೇ ಇಷ್ಟು ದೂರ ಬಂದದ್ದನ್ನು ಸಾರ್ಥಕಗೊಳಿಸಿದೆ ಎಂದೆನಿಸಿತ್ತು.



ಮಾರನೆಯದಿನ ಬೆಳಿಗ್ಗೆ ನಮ್ಮ ಮುಖ್ಯ ಗುರಿಯಾದ ಮೌಂಟ್ ಕೋಸಿಯೋಸ್ಕೋ ಏರಲು ಸಿದ್ದರಾಗಿ ಹೊರಟೆವು. ನಮ್ಮೆದುರಿಗೆ ಅಡ್ಡವಾಗಿ ಹಸಿರಿನ ಗೋಡೆಯಂತೆ ಎದ್ದು ನಿಂತಿದ್ದ ಬೆಟ್ಟವನ್ನು ಚೇರ್ ಲಿಫ್ಟ್ ನಲ್ಲಿ ಏರಬೇಕಿತ್ತು. ಎರಡು ದಿನಗಳ ಕಾಲ ಎಷ್ಟು ಸಲ ಬೇಕಾದರೂ ಅದರಲ್ಲಿ ಓಡಾಡುವಂತಾ ಟಿಕೆಟ್ ತೆಗೆದುಕೊಂಡೆವು. ಸೈಕಲ್ ಚಕ್ರದ ಹಾಗೆ ಸುತ್ತುತ್ತಲೇ ಇರುತ್ತದೆ ಚೇರ್ ಲಿಫ್ಟ್ ಗಳು. ಪಾರ್ಕ್ ಗಳ ಬೆಂಚ್ ಗಳಂತಿರುವ ಅದರಲ್ಲಿ ನಾಲ್ಕು ಜನ ಕುಳಿತು ಹೋಗಬಹುದು.
ಮೇಲೇರಲಾರಂಭಿಸಿದಾಗ, ಒಂದು ಕೈಯಲ್ಲಿ ಜೋತಾಡುತ್ತಾ ಸಾಗುವಂತೆ ಇರುವ ಚೇರ್ ಲಿಫ್ಟ್ ಗಳು ಕೊಂಚ ಭಯ ಮೂಡಿಸಿತ್ತು. ಆದರೆ ಸುತ್ತಮುತ್ತಲಿನ ಭವ್ಯ ನೋಟ ನೋಡುತ್ತಾ ಮೈಮರೆತು ಭಯ ಮಾಯವಾಗಿತ್ತು. ಎದುರಿಗಿರುವ ಗೋಡೆಯಾಚೆಗೆ ಹೇಗಿರಬಹುದು ಎಂಬ ಕುತೂಹಲ ಹೆಚ್ಚಾಗುತ್ತಿತ್ತು.

                                        ಕಾಲು ಗಂಟೆ ಪ್ರಯಾಣದಲ್ಲಿ, ಲಂಬವಾಗಿ ಸುಮಾರು 560 ಮೀಟರ್ ಗಳಷ್ಟು ಎತ್ತರ, 1.6 ಕಿ.ಮೀಟರ್ ಗಳಷ್ಟು ದೂರವನ್ನು ಕ್ರಮಿಸಿರುತ್ತೇವೆ. ಆ ವೇಳೆಗಾಗಲೇ ಸಮುದ್ರ ಮಟ್ಟದಿಂದ ಸುಮಾರು 1900 ಮೀಟರ್ ಗಳಷ್ಟು ಮೇಲೆ ಇರುತ್ತೇವೆ. ಇಲ್ಲಿಂದ ಮೌಂಟ್ ಕೋಸಿಯೋಸ್ಕೋ ಶಿಖರದ ಚಾರಣ ಆರಂಭ, ಶಿಖರಕ್ಕೆ ಹೋಗಿಬರಲು ಒಟ್ಟು 13 ಕಿಮೀ ನಡೆಯಬೇಕು. ಸ್ವಲ್ಪ ಮುಂದೆ ಹೋದಾಗ ಕಾಲುದಾರಿ ಸಿಗುತ್ತದೆ. ಕಾಲುದಾರಿಯಲ್ಲಿ ಮುಂದೆ ನಡೆದಂತೆ, ಬೇರೆಯದೇ ಲೋಕಕ್ಕೆ ಬಂದಂತೆನ್ನಿಸಿತು. ಅಲ್ಲಿಯವರೆಗೂ ಇದ್ದ ಪರಿಸರವೇ ಬೇರೆ, ಇಲ್ಲಿನದೇ ಬೇರೆ. ಹಸಿರು ಕಾನನ ಸಂಪೂರ್ಣ ಮರೆಯಾಗುವುದಿರಲಿ, ಒಂದಾದರೂ ಗಿಡಮರಗಳು ಕಾಣುವುದಿಲ್ಲ. ನೆಲಮಟ್ಟದಲ್ಲಿ ಎಲ್ಲೆಲ್ಲೂ ಹರಡಿದ್ದ ವಿವಿಧ ಪ್ರಭೇದಗಳ, ಬಿಳಿ, ಹಳದಿ, ಕೆಂಪು ಬಣ್ಣದ ಸಣ್ಣ ಸಣ್ಣ ಹೂಗಳ ಸಸ್ಯ ಸಮೂಹ. ನೆಲಕ್ಕೆ ಹಾಸು ಹಾಸಿದಂತೆ ಕಾಣುತ್ತಿತ್ತು.

   ಬರೀ ಕಲ್ಲು, ಮಣ್ಣುಗಳ ಬಯಲು ಪ್ರದೇಶದಲ್ಲಿ ಅಲ್ಲಲ್ಲಿ ಎದ್ದು ನಿಂತ ಗುಡ್ಡಗಳು. ಚಿತ್ರ ವಿಚಿತ್ರ ಆಕಾರದ ಹೆಬ್ಬಂಡೆಗಳು. ವಿಚಿತ್ರವೆಂದರೆ ಕತ್ತೆತ್ತಿ ನೋಡಬೇಕಾದ ಒಂದು ಶಿಖರವೂ ಇಲ್ಲ. ಸುಮಾರು ಒಂದೂವರೆ ಕಿಮೀ ನಡೆದ ನಂತರ ಮೌಂಟ್ ಕೋಸಿಯೋಸ್ಕೋ ಲುಕ್ ಔಟ್ ಎಂಬಲ್ಲಿಂದ ನಾವು ಹೋಗಬೇಕಾದ ಶಿಖರ ಕಾಣುತ್ತದೆ. ಆದರೆ ಅಲ್ಲಿ ಹೋದಾಗ ಎದುರಿಗೆ ಹಲವಾರು ಎತ್ತರದ ಪರ್ವತಗಳು ಕಾಣುತ್ತವೆ, ಎಲ್ಲವೂ ಸುಮಾರು ಒಂದೇ ಎತ್ತರ!! ಯಾವುದು ಮೌಂಟ್ ಕೋಸಿಯೋಸ್ಕೋ ಎಂಬ ಪ್ರಶ್ನೆ ಮಾತ್ರ ಹಾಗೇ ಉಳಿದಿತ್ತು.
ಕಾಲು ದಾರಿಯಂತೂ, ನೋಡಿದಷ್ಟು ಉದ್ದಕ್ಕೂ ಚಾಪೆ ಹಾಸಿದಂತೆ ಕಾಣುತ್ತಿತ್ತು. ಎಲ್ಲೂ ಮೆಟ್ಟಿಲುಗಳು ಇಲ್ಲ. ಕಣಿವೆಗಳ ನಡುವೆ ಬಳುಕುತ್ತಾ, ಏರಿಳಿಯುತ್ತಾ ಸಾಗಿತ್ತು. ನಾವಿರುವ ಕಣಿವೆಯ ಅಂಚಿನಲ್ಲಿ ಚುಕ್ಕಿಯಂತೆ ಮರೆಯಾಗುತ್ತಿದ್ದ ದಾರಿ, ಅಲ್ಲಿಗೆ ತಲುಪಿದಾಗ ಮತ್ತೊಂದು ಕಣಿವೆಗೆ ತೆರೆದುಕೊಂಡು ಮತ್ತದೇ ಪುನರಾವರ್ತನೆಯಾಗುತ್ತಿತ್ತು.
ಕಡುಬೇಸಿಗೆಯಾದರೂ, ಇನ್ನೂ ಅಲ್ಲಲ್ಲಿ ಉಳಿದಿದ್ದ ಹಿಮದ ರಾಶಿ, ಚುಂಬಕದಂತೆ ಮನ ಸೆಳೆಯುತ್ತಿತ್ತು. ಒಂದೆರಡು ಸಲ
ತ್ರಿವೇಣಿ (ನನ್ನಾಕೆ) " ನನಗೆ ಸುಸ್ತಾಯಿತು, ಇನ್ನು ನನ್ನಿಂದಾಗುವುದಿಲ್ಲ, ನೀವು ಹೋಗಿ ಬನ್ನಿ, ನಾನಿಲ್ಲೇ ಕುಳಿತಿರುತ್ತೇನೆ" ಎಂದಳು. ಆದರೆ ನಾನೂ, ಚೈತ್ರ, ಕಾರ್ತಿಕ್ ( ಮಕ್ಕಳು )
ಬಿಡದೆ, " ಆಗದೆ ಏನು, ಇಷ್ಟು ದೂರ ಬಂದಾಗಿದೆ, ಇನ್ನೂ ಸ್ವಲ್ಪ ದೂರ ಕಷ್ಟ ಪಟ್ಟು ನಡೆದರೆ, ಒಂದು ದೊಡ್ಡ ಸಾಧನೆ ಮಾಡಿದಂತಾಗುತ್ತದೆ, ನಡಿ" ಎಂದು ಕರೆದುಕೊಂಡು ನಡೆದೆವು.
ಅಲ್ಲಲ್ಲಿ ಶಿಖರಕ್ಕೆ ಇನ್ನೂ ಎಷ್ಟು ದೂರ ಎಂದು ಹಾಕಿರುತ್ತಾರೆ. ಇನ್ನು ಎರಡೂವರೆ ಕಿಮೀ ಇರುವಾಗ, Lake Cootapatamba ಎಂಬ ಹಿಮದ ನೀರಿನ ಸರೋವರ ಸಿಗುತ್ತದೆ.  ಆಸ್ಟ್ರೇಲಿಯಾದ ಅತ್ಯಂತ ಎತ್ತರದ ಸಿಹಿ ನೀರಿನ ಸರೋವರ ಇದು. ಇದರ ಪಕ್ಕದಲ್ಲಿರುವ ಎತ್ತರದ ಶಿಖರದ ಮೇಲೆ ಜನರ ಓಡಾಟ ಕಂಡಾಗ ಅದೇ ಮೌಂಟ್ ಕೋಸಿಯೋಸ್ಕೋ ಎಂದು ಖಾತ್ರಿಯಾಯಿತು, ಆದರೂ ಇನ್ನೂ ಎರಡೂವರೆ ಕಿಮೀ ನಡೆಯಬೇಕು.
ಮತ್ತೊಂದಿಷ್ಟು ದೂರ ಸಾಗಿದ ನಂತರ ಸಿಗುವ ರಮಣೀಯ ತಾಣ Rawson pass. ಎರಡು ಸಾಲು ಶಿಖರಗಳ ನಡುವಿನ ಸುಂದರ ಕಣಿವೆ ಪ್ರದೇಶ. ಎಲ್ಲವೂ ಸುಮಾರು ಒಂದೇ ಎತ್ತರವಿರುವಂತೆ ತೋರುವ ಪರ್ವತಗಳ ಸಾಲು ಎರಡೂ ಬದಿಗು. ಅವುಗಳ ಮೇಲೆ ಅಲ್ಲಲ್ಲಿ ಇನ್ನೂ ಉಳಿದುಕೊಂಡಿರುವ ಹಿಮದ ಹೊದಿಕೆ. ಕಣಿವೆಯ ತಳದಲ್ಲಿ ಸಣ್ಣಗೆ, ಸೂರ್ಯನ ಬಿಸಿಲಿಗೆ ಫಳ ಫಳ ಹೊಳೆಯುತ್ತಾ ಹರಿವ ಸಣ್ಣ ಸಣ್ಣ ಝರಿಗಳು. ಈ ಝರಿಗಳಲ್ಲಿ ಒಂದು Snowy River. ಈ ನದಿಗೆ ಮುಂದೆ ಭಾರೀ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುವ ಸ್ಥಾವರವಿದೆ.



Rawson Pass ಬಳಿ ಹಾದಿ ಮೂರ್ನಾಲ್ಕು ಕವಲುಗಳಾಗುತ್ತವೆ. ಅದರಲ್ಲಿ ಒಂದು ಶಿಖರದ ತುದಿಗೆ ಹೋಗುವ ಮಾರ್ಗ. 1.6 ಕಿಮೀ ದೂರ ಹೋಗಬೇಕು. ಸ್ಪಟಿಕದಂತ ತಿಳಿ ನೀರಿನ ಹರಿವುಗಳು, ಬೆಟ್ಟಕ್ಕೆ ಹೊದ್ದಿಸಿದಂತೆ ಕಾಣುವ ಹಿಮದ ರಾಶಿ, ಚಿತ್ರ ವಿಚಿತ್ರ ವಿನ್ಯಾಸಗಳ ಕಲ್ಲುಬಂಡೆಗಳು. ಇವೆಲ್ಲವನ್ನೂ ಆಸ್ವಾದಿಸುತ್ತಾ ಮುಂದೆ ಸಾಗಿ, ಶಿಖರದ ತುದಿ ತಲುಪಿದಾಗ ಏನೋ ಮಹತ್ವವಾದುದನ್ನು ಸಾಧಿಸಿದ ಅಪೂರ್ವ ಆನಂದ. ಸೂರ್ಯ ನಮ್ಮ ನೆತ್ತಿಯ ಮೇಲೆ ಬರುವ ವೇಳೆಗೆ ನಾವು ಆಸ್ಟ್ರೇಲಿಯಾ ದೇಶದ ನೆತ್ತಿಯನ್ನು ಹತ್ತಿದ್ದೆವು. ಅತಿ ಎತ್ತರದ ಜಾಗವನ್ನು ಗುರುತಿಸಲು, ಅಲ್ಲೊಂದು ಕಟ್ಟೆಯನ್ನು ಕಟ್ಟಿ, ಅದರ ಮೇಲೊಂದು ಫಲಕವನ್ನಿರಿಸಿದ್ದಾರೆ. ಆ ಕಟ್ಟೆಯ ಮೇಲೆ ನಿಂತು, ಫೋಟೋ ತೆಗೆಸಿಕೊಂಡು ಸಂಭ್ರಮಿಸುತ್ತಾರೆ ಇಲ್ಲಿಗೆ ಬಂದ ಜನ.
ಬಿರು ಬೇಸಿಗೆ, ಮಧ್ಯಾಹ್ನ 12 ಗಂಟೆಯಾದರೂ, ತಂಗಾಳಿಯ ತಂಪು, ನಿರ್ಮಲ ವಾತಾವರಣ, ಬಹಳ ಹಿತವಾಗಿತ್ತು.
ಸಾಕಷ್ಟು ಫೋಟೋಗಳನ್ನು ತೆಗೆದುಕೊಂಡು, ಕಂಗಳ ತುಂಬಾ ರಮಣೀಯ ನಿಸರ್ಗದ ದೃಶ್ಯಾವಳಿ, ಮನಸ್ಸಿನ ತುಂಬಾ ಒಂದು ಪುಟ್ಟ ಸಾಧನೆಗೈದ ಸಂತಸ, ಹೊಟ್ಟೆಯ ತುಂಬಾ ಚಿತ್ರಾನ್ನ, ಮೊಸರನ್ನ, ಒಬ್ಬಟ್ಟಿನೂಟವ ತುಂಬಿಕೊಂಡು, ಮನಸ್ಸಿಲ್ಲದ ಮನಸ್ಸಿನಿಂದ ಹಿಂದಿರುಗಿದೆವು. ಸಂಜೆ ನಾಲ್ಕೂಕಾಲು ಗಂಟೆಗೆ ಕೆಳಗಿಳಿಯಲು ಕಡೆಯ ಚೇರ್ ಲಿಫ್ಟ್, ಹಾಗಾಗಿ ಸಮಯದ ಮಿತಿ ಇರುತ್ತದೆ. ಈ ಚಾರಣಕ್ಕೆ ಹೋಗಿ ಬರಲು ಸುಮಾರು ಐದು ಗಂಟೆಗಳು ಆಗುತ್ತದೆ.
( ಮಾರನೆಯ ದಿನವೂ, ನಾನು ಮತ್ತು ಮಕ್ಕಳು ಮತ್ತೊಮ್ಮೆ ಶಿಖರದ ಚಾರಣ ಮಾಡಿ ಬಂದೆವು).
ನಮ್ಮ ಪ್ರವಾಸದಲ್ಲಿ ಎಲ್ಲೆಲ್ಲೂ ಕಂಡ ಸ್ವಚ್ಛತೆ, ಅನುಕೂಲಗಳು ಮತ್ತು ಪರಿಸರದ ಬಗ್ಗೆ ತೋರುವ ಕಾಳಜಿ ಅಚ್ಚರಿ ಮೂಡಿಸುತ್ತದೆ. ಪೇಪರ್, ಬಾಟಲ್, ಕವರ್ ಗಳು ಎಲ್ಲೂ ಕಾಣವು.
ಆ ಪ್ರದೇಶಕ್ಕೆ ಸೀಮಿತವಾದ ಸಸ್ಯ ಪ್ರಭೇದಗಳು ಜನರ ಕಾಲ್ತುಳಿತದಿಂದ ವಿನಾಶವಾಗಬಾರದೆಂದು, ನಡೆದುಕೊಂಡು ಹೋಗಲು, ಕಾಲು ಹಾದಿಯುದ್ದಕ್ಕೂ ನೆಲದಿಂದ ಎತ್ತರಿಸಿ, ಕಬ್ಬಿಣದ ಪಟ್ಟಿಗಳ ಹಾದಿಯನ್ನು ನಿರ್ಮಿಸಿದ್ದಾರೆ. ಅವುಗಳನ್ನು ಆಗಾಗ್ಗೆ ಪರೀಕ್ಷಿಸಿ, ಜನರಿಗೆ ಎಲ್ಲೂ ತೊಂದರೆಯಾಗದಂತೆ ಎಚ್ಚರ ವಹಿಸುತ್ತಾರೆ. ಯಾರ ಸಹಾಯವೂ ಇಲ್ಲದೆ ಹೋಗಿ ಬರಲು, ಅಲ್ಲಲ್ಲಿ ಸೂಚನಾ ಫಲಕಗಳು.
ಪ್ರಶಾಂತ ವಾತಾವರಣ, ನಿರ್ಮಲ ಗಾಳಿ, ಮತ್ತು ನಡಿಗೆ ಇವುಗಳೆಲ್ಲವೂ ಒಳಗೊಂಡ ಈ ಪ್ರವಾಸ, ನೀವೇ ನಿಮ್ಮಆರೋಗ್ಯಕ್ಕೆ ನೀಡಿದ ಉಡುಗೊರೆಯಂತೆ.


ವಿಶೇಷ ಟಿಪ್ಪಣಿ:-  ಆಸ್ಟ್ರೇಲಿಯಾ ದೇಶದ ಮುಖ್ಯ ಭೂಪ್ರದೇಶವನ್ನು ಮಾತ್ರ ಪರಿಗಣಿಸಿದಾಗ ಮೌಂಟ್ ಕೋಸಿಯೋಸ್ಕೋ ಇಲ್ಲಿನ ಅತ್ಯಂತ ಎತ್ತರದ ಶಿಖರವೆನಿಸಿಕೊಳ್ಳತ್ತದೆ.
ಆಸ್ಟ್ರೇಲಿಯಾದಿಂದ ದೂರವಿರುವ ಆಡಳಿತ ಪ್ರದೇಶಗಳೂ, ಅಥವಾ ಆಸ್ಟ್ರೇಲೇಷ್ಯಾ ಎಂದು ಪರಿಗಣಿಸಿದಾಗ, ಇದಕ್ಕಿಂತಲೂ ಎತ್ತರದ ಕೆಲವು ಶಿಖರಗಳು ಇವೆ.








Comments

  1. Very well written article, inspires me to visit mount Kosciuszko. "ಪ್ರಶಾಂತ ವಾತಾವರಣ, ನಿರ್ಮಲ ಗಾಳಿ, ಮತ್ತು ನಡಿಗೆ ಇವುಗಳೆಲ್ಲವೂ ಒಳಗೊಂಡ ಈ ಪ್ರವಾಸ, ನೀವೇ ನಿಮ್ಮಆರೋಗ್ಯಕ್ಕೆ ನೀಡಿದ ಉಡುಗೊರೆಯಂತೆ." Well said.

    ReplyDelete
    Replies
    1. ಸ್ಥಳದ ಮಾಹಿತಿ ಕೂಡಾ ಚೆನ್ನಾಗಿದೆ.

      Delete
    2. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಖಂಡಿತಾ ಒಮ್ಮೆ ಹೋಗಿ ಬನ್ನಿ.

      Delete
  2. ಶ್ರೀಯುತ ನಾಗಶೈಲ ತಮ್ಮ ಲೇಖನದಲ್ಲಿ ಪ್ರಕೃತಿ ವಿವರಣೆ ಸೊಗಸಾಗಿದೆ. "ಹಿಮದ ಹೊದಿಕೆ. ಕಣಿವೆಯ ತಳದಲ್ಲಿ ಸಣ್ಣಗೆ, ಸೂರ್ಯನ ಬಿಸಿಲಿಗೆ ಫಳ ಫಳ ಹೊಳೆಯುತ್ತಾ ಹರಿವ ಸಣ್ಣ ಸಣ್ಣ ಝರಿಗಳು" ಈ ಸಾಲು ಓದಿಯಾದಾಗ ಅಲ್ಲಿಗೊಮ್ಮೆ ಹೋಗಲೇ ಬೇಕು ಅನಿಸುತ್ತಿದೆ. ಧನ್ಯವಾದಗಳು.

    ReplyDelete
    Replies
    1. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಖಂಡಿತಾ ಒಮ್ಮೆ ಹೋಗಿಬರಬೇಕಾದ ತಾಣ.

      Delete
  3. ನಿಮ್ಮ ಪ್ರವಾಸ ಕಥನದ ಶೈಲಿ ಮೆಚ್ಚುಗೆಯಾಗುತ್ತೆ. "ಸ್ನೋವಿ ಮೌಂಟೈನ್" ಅಂದರೆ ಬರೀ ಚಳಿಗಾಲದ ಹಿಮಾಚ್ಛಾದಿತ ಪರ್ವತ ಶ್ರೇಣಿ ಎನ್ನುವ ನನ್ನೊಳಗಿನ ಚಿತ್ರಣವನ್ನು ಬದಲಿಸಿದ ಬರಹವಿದು. ನಿಮ್ಮ ನಿರೂಪಣೆಯೇ ಚೆನ್ನ. ಸ್ಥಳದ ಬಗ್ಗೆ ಒಂದಷ್ಟು ತಿಳಿಸಿ, ನಿಮ್ಮ ತಯಾರಿ, ಪ್ರಯಾಣದ ಸಮಯದ ಅನುಭವ, ವಸ್ತು ಸ್ಥಿತಿ ಇತ್ಯಾದಿಗಳನ್ನು ಚೊಕ್ಕಟವಾಗಿ ಜೋಡಿಸಿರುತ್ತೀರಿ. ವಿಷಯದ ಸ್ಪಷ್ಟತೆ, ಆಯಾ ಜಾಗದ ಬಗೆಗಿನ ಹೆಚ್ಚೆಚ್ಚು ಮಾಹಿತಿ ಕೊಟ್ಟಿರುವುದು ಬಹಳ ಉಪಯುಕ್ತವಾಗಿದೆ. ಇಂತಹ ಬರಹ ಓದುವುದು ಕಾವ್ಯಸದೃಶದಂತೆ.

    ReplyDelete
    Replies
    1. ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಅನಂತ ಧನ್ಯವಾದಗಳು. ಲೇಖನದ ಪ್ರತಿಯೊಂದು ವಿವರಗಳನ್ನೂ, ಹಿನ್ನೆಲೆಯನ್ನೂ ಸೂಕ್ಷ್ಮವಾಗಿ ಗಮನಿಸಿ, ಅದಕ್ಕೆ ಸ್ಪಂದಿಸಿರುವ ನಿಮ್ಮ ಅಭಿರುಚಿಗೆ ನನ್ನ ನಮನಗಳು. ಈ ರೀತಿಯ ಪ್ರತಿಕ್ರಿಯೆಗಳು ಇನ್ನೂ ಆಸಕ್ತಿಯಿಂದ ಲೇಖನಗಳನ್ನು ಬರೆಯಲು ಪ್ರೋತ್ಸಾಹ ನೀಡುವುದರಲ್ಲಿ ಸಂಶಯವಿಲ್ಲ.
      ಮತ್ತೊಮ್ಮೆ ಧನ್ಯವಾದಗಳು.

      Delete

Post a Comment