ಕನಕ ನಮನ 2019


ಕನಕ ನಮನ 2019
ವರದಿ - ಶ್ರೀಮತಿ ಸುಮಾ ಅಶೋಕ್ 

Photos link - https://photos.app.goo.gl/VsVsVz6g4uvb2PKk7 

                                                  ಭಕ್ತಿಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರಾದ, ಸಾಮಾನ್ಯ ಜನರಿಗೆ ಭಗವಂತನ ಭಕ್ತಿಯನ್ನು ಪ್ರಸಾರ ಮಾಡಿದ ಒಬ್ಬ ಸತ್ಪುರುಷರು ಕನಕದಾಸರು. ಕನಕದಾಸರನ್ನು ಸ್ಮರಿಸಿಕೊಳ್ಳುವುದು ಮಾತ್ರವಲ್ಲದೇ ಇತರ ದಾಸಶ್ರೇಷ್ಠರು ಮತ್ತು ವಚನ ಸಾಹಿತ್ಯಕ್ಕೆ ಮೆರುಗು ಕೊಟ್ಟ ಶಿವಶರಣರನ್ನು ಸ್ಮರಿಸಿಕೊಳ್ಳುವ ಉದ್ದೇಶದಿಂದ ಈ ವರ್ಷದ ಕನಕ ನಮನ ಕಾರ್ಯಕ್ರಮವನ್ನು ಇದೇ ಡಿಸೆಂಬರ್ ತಿಂಗಳ ಎಂಟನೇ ತಾರೀಖಿನಂದು ಶ್ರೀಮತಿ ರಾಜಲಕ್ಷ್ಮಿ ನಾರಾಯಣ ಮತ್ತು ಶ್ರೀ ನಾರಾಯಣ ಕನಕಪುರ ಅವರ ನಿವಾಸದಲ್ಲಿ ಆಯೋಜಿಸಲಾಗಿತ್ತು.

                                                          ಸಂಗೀತಾಸಕ್ತರಿಗೆಂದೇ ಹೇಳಿ ಮಾಡಿಸಿದ, ಚಿಕ್ಕದಾದ ಚೊಕ್ಕದಾದ ಕಾರ್ಯಕ್ರಮ ಅತೀ ಸೊಗಸಾಗಿ ಮೂಡಿ ಬಂತು. ಮೊಟ್ಟ ಮೊದಲನೆಯದಾಗಿ ನಮ್ಮ ಕನ್ನಡ ಶಾಲೆಯ ಅತ್ಯಂತ ಚುರುಕು ಬುಧ್ಧಿಯ ಪುಟ್ಟ ಬಾಲಕ ಸ್ಕಂದ, “ಬಾ ಬಾ ಭಕುತರ ಹೃದಯದಿಂದ” ಎನ್ನುವ ವಿಜಯದಾಸರ ಕೃತಿಯನ್ನು ಮುದ್ದಾಗಿ ಹಾಡಿ ಕಾರ್ಯಕ್ರಮದ ಶುಭಾರಂಭ ಮಾಡಿದನು. ನಂತರ ಕನ್ನಡ ಶಾಲೆಯ ಮತ್ತೊಂದು ಪುಟ್ಟ ಪ್ರತಿಭೆ ಎನ್ನಬಹುದಾದ ಸಿಮ್ರನ್ ಸುನಿಲ್, “ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ” ಎಂಬ ಕನಕದಾಸರ ಭಕ್ತಿಪೂರ್ವಕ ರಚನೆಯನ್ನು ಇಂಪಾಗಿ ಹಾಡಿದಳು. ನಂತರದ ಹಾಡನ್ನು ಮತ್ತೊಬ್ಬ ಉದಯೋನ್ಮುಖ ಗಾಯಕ ಪ್ರಣವ್ ಜಯರಾಮ್ “ಗೋವಿಂದ ಹರಿ ಗೋವಿಂದ” ಯಾರೂ ಅಷ್ಟಾಗಿ ಕೇಳಿರದ ಕನಕದಾಸರ ರಚನೆಯನ್ನು ಸೊಗಸಾಗಿ ಹಾಡಿದನು. ನಮ್ಮ ಸಮುದಾಯದ ಗಾನ ಚತುರೆ ಆಸ್ತಾ ದೇಸಾಯಿ, “ಆವ ಕುಲವೋ ರಂಗಾ” ವಾದಿರಾಜರ ಕೃತಿ, ಭೂಪ್ಕಲಿ ಮಿಶ್ರ ಛಾಪು ತಾಳದಲ್ಲಿ ಸುಶ್ರಾವ್ಯವಾಗಿ ಹಾಡಿದಳು. ಸಂಗೀತ ಕ್ಷೇತ್ರದಲ್ಲಿ ಅರಳುತ್ತಿರುವ ಮತ್ತೊಂದು ಪ್ರತಿಭೆ, ಸಿಂಧು ನಾರಾಯಣ ಅಕ್ಕಮಹಾದೇವಿ ರಚಿತ “ಅಕ್ಕ ಕೇಳವ್ವ” ಎಂಬ ಹಾಡನ್ನು ತನ್ನ ಮಧುರ ಕಂಠದಲ್ಲಿ ಸಮರ್ಪಿಸಿದಳು.

                                             ಪ್ರತೀ ಹಾಡಿನ ಆರಂಭದಲ್ಲಿ ಶ್ರೀ ನಾರಾಯಣ ಅವರು ಅನೇಕ ದಾಸ ಶ್ರೇಷ್ಠ ರ ಬಗ್ಗೆ, ಶಿವಶರಣರ ಬಗ್ಗೆ ಮಾಹಿತಿ ನೀಡುತ್ತಾ, ಜೊತೆಯಲ್ಲಿ ಪ್ರತೀ ಹಾಡುಗಾರರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಹುರಿದುಂಬಿಸಿ, ಸಭಿಕರಿಗೆ ಅವರನ್ನು ಪರಿಚಯಿಸುತ್ತ ಕಾರ್ಯಕ್ರಮಕ್ಕೆ ಮೆರುಗು ನೀಡುತ್ತಿದ್ದರು.

                                                      ಶ್ರೀಮತಿ ಮಹಾಲಕ್ಷ್ಮಿ ಕೇಶವ ಅವರು ತಮ್ಮ ಜೇನಿನಂತೆ ಸಿಹಿಯಾದ ಕಂಠದಲ್ಲಿ “ಗೊಲ್ಲರ ಮನೆಯ ಪೊಕ್ಕು” ಮತ್ತು “ನಾನು ನೀನು ಎನ್ನದಿರು” ಎಂಬ ಎರಡು ಕನಕದಾಸರ ರಚನೆಯನ್ನು ಅದ್ಭುತವಾಗಿ ಹಾಡಿದರು. ನಂತರದ ಹಾಡನ್ನು ಶ್ರೀಮತಿ ಲಕ್ಷ್ಮಿ ಅಳವಂಡಿಯವರು “ಆಡಲು ಪೋಗೋಣ ಬಾರೋ ರಂಗ” ಶ್ರೀಪಾದರಾಯರ ರಚನೆಯನ್ನು ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಇಂಪಾಗಿ ಹಾಡಿದರು. ಅವರ ಹಾಡಿಗೆ ಅವರ ಮಗ ಪ್ರಣವ್ ಅಳವಂಡಿ ತಬಲಾ ನುಡಿಸಿದನು.

                                              ಶ್ರೀ ಅಶೋಕ್ ಅವರು ಕನಕದಾಸರು ದಾಸದೀಕ್ಷೆ ಪಡೆಯುವದಕ್ಕೆ ಮುನ್ನ  ದಂಡನಾಯಕರಾಗಿದ್ದು ಯುದ್ಧದಲ್ಲಿ ಸೋತು, ನಂತರ ಅವರ ಮಡದಿ, ಮತ್ತು ತಾಯಿಯ ವಿಯೋಗದಿಂದ ವೈರಾಗ್ಯವುಂಟಾಗಿ ಹರಿಭಕ್ತರಾದ ಕಥೆ ಹಾಗೂ ಕರ್ನಾಟಕದ ಅಶ್ವಿನಿ ಕುಮಾರರೆನಿಸಿಕೊಂಡ ಪುರಂದರದಾಸರ ಜೊತೆಗಿನ ಕನಕದಾಸರ ಜೀವನದ ಸಾಮ್ಯವನ್ನು ಸೊಗಸಾಗಿ ನಿರೂಪಿಸಿದರು. ನರೇಶ್ ಅವರು ತಾವೇ ಕೀಬೋರ್ಡ್ ನುಡಿಸಿಕೊಂಡು, “ತಾನ್ಯಾರೋ ತನ್ನ ದೇಹವ್ಯಾರೋ” ಎನ್ನುವ ಕನಕದಾಸರ ರಚನೆಯನ್ನು ಕಾನಡ ಆದಿತಾಳದಲ್ಲಿ ಮಧುರವಾಗಿ ಹಾಡಿದರು. ನಂತರದ ಹಾಡನ್ನು ಕನ್ನಡ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ “ಎದೆತುಂಬಿ ಹಾಡುವೆನು” ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಖ್ಯಾತಿಯ ಶ್ರೀ ಕೇಶವ ಅವರು “ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ” ಎನ್ನುವ ಕನಕದಾಸರ ಹೃದಯ ಸ್ಪರ್ಶಿ ರಚನೆಯನ್ನು ಅಷ್ಟೇ ಭಕ್ತಿಪೂರ್ವಕವಾಗಿ ಸಮರ್ಪಿಸಿದರು. ಶಂಕರ ಮಧ್ಯಸ್ಥ ಅವರು, ಶ್ರೀರಾಘವೇಂದ್ರರ ರಚನೆ, “ರಘುವಂಶ ದೀಪ ಶ್ರೀರಾಮಚಂದ್ರ” ಹಾಡನ್ನು ಶ್ರುತಿಬದ್ಧವಾಗಿ ಹಾಡಿದರು. ನಂತರ ಪಲ್ಲವಿ ಅವರು ಮುಪ್ಪಿನ ಷಡಕ್ಷರಿ ಅವರ “ಸಕಲಕೆಲ್ಲಕೆ ನೀನೇ” ರಾಗ ಮಂದಾರಿಯಲ್ಲಿ ಅಚ್ಚುಕಟ್ಟಾಗಿ ಇಂಪಾಗಿ ಹಾಡಿದರು. ಶ್ರೀನಿವಾಸ ಅವರು “ಈತಲಿಂಗ ದೇವ ಶಿವನು ” ಎನ್ನುವ ಹೆಳವನಕಟ್ಟೆ ಗಿರಿಯಮ್ಮ ಅವರ ರಚನೆಯನ್ನು ಅವರದೇ ಆದ ಸ್ವರ ವಿನ್ಯಾಸದಲ್ಲಿ ಸೊಗಸಾಗಿ ಹಾಡಿದರು. ಮತ್ತೋರ್ವ ಶ್ರೀನಿವಾಸ ಅವರು ತಮ್ಮ ಕಂಚಿನ ಕಂಠದಲ್ಲಿ “ಬಾ ಬಾ ಭಕುತರ ಹೃದಯದಿಂದ” ವಿಜಯದಾಸರ ರಚನೆಯನ್ನು ಅದ್ಭುತವಾಗಿ ಹಾಡಿದರು. 
                                  ಶ್ರೀ ಅಶ್ವಿನ್ ಅವರು ನಮಗೆ  ಭಜನ ಸಂಧ್ಯಾ ಬಳಗದಲ್ಲಿ ಪರಿಚಿತರಾಗಿದ್ದು ಕೊಳಲು ನುಡಿಸುತ್ತಿದ್ದರು. ನಾರಾಯಣ ಮತ್ತು ತಂಡದವರ ಜೊತೆಗೂಡಿ ಸಂಗೀತ ಕಾರ್ಯಕ್ರಮಗಳ ಆಯೋಜನೆಯಲ್ಲಿ ಹೆಗಲುಕೊಟ್ಟು ಸಹಾಯ ಮಾಡಿದ್ದರು ಎನ್ನುವುದನ್ನು ಇಲ್ಲಿ ನೆನೆಯಬಹುದು. ಸ್ವಲ್ಪ ಕಾಲವೇ ನಮ್ಮೆಲ್ಲರ ಜೊತೆಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರು ಮತ್ತೆ ಭಾರತಕ್ಕೆ ಮರಳಿ ಹೋಗುವ ಸಂದರ್ಭದಲ್ಲಿ ಶ್ರೀ ನಾರಾಯಣ ಅವರು ಅಶ್ವಿನ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. 


                                     ಕೊನೆಯ ಗೀತೆಯನ್ನು ಚಿ| ಸ್ಕಂದ ಕನಕದಾಸರ ರಚನೆಯಾದ “ಈಶ ನಿನ್ನ ಚರಣ ಭಜನೆ”  ಎಂಬ ಹಾಡನ್ನು ಸೊಗಸಾಗಿ ಎಲ್ಲರಿಗೂ ಹೇಳಿಕೊಡುವ ಮೂಲಕ ಮಂಗಳಾರತಿಯೊಂದಿಗೆ  ಕಾರ್ಯಕ್ರಮಕ್ಕೆ ಮಂಗಳ ಹಾಡಿದನು.
ಕೊನೆಯಲ್ಲಿ ರುಚಿಕರವಾದ ಭೋಜನದ ನಂತರ ಮರಳಿ ಮನೆಗೆ ಹೋಗುವಾಗ ಮನದಲ್ಲಿ ಅಂದು ಹಾಡಿದ ಎಲ್ಲಾ ದೇವರನಾಮಗಳ ಗುಂಗು ಮನದಾಳದಲ್ಲಿ ಹಾಗೇ ಇದ್ದು ಗುನು ಗುನಿಸುವಂತಾಯಿತು.

Comments

  1. ಕನಕದಾಸರಿಗೆ ಮತ್ತು ಅವರ ಸಾಹಿತ್ಯಕ್ಕೆ ಶರಣು.ಕಾರ್ಯಕ್ರಮ ಆಯೊಜೆಸಿದ ನಾಣಿ ದಂಪತಿಗಳಿಗೆ ಶರಣು.

    ReplyDelete
  2. ಕಾರ್ಯಕ್ರಮದ ವಿವರ ಮತ್ತು ತಾವು ನೀಡಿರುವ ವಿವರಣೆ ಎರಡೂ ಸೊಗಸಾಗಿದೆ ತಮ್ಮ ವರದಿಯಲ್ಲಿ. ತಾವು ಉತ್ತಮ ಲೇಖಕಿ ಅಂತಲೂ ಮಾಡಿದ್ದೀರಿ. ಒಳ್ಳೆಯ ಕಾರ್ಯಕ್ರಮಕ್ಕೆ ತಾವು ನೀಡಿರುವ ವರದಿ ಉತ್ತಮ ದಾಖಲೆಯಂತಾಗಿದೆ. ಧನ್ಯವಾದಗಳು ಶ್ರೀಮತಿ ಸುಮಾ

    ReplyDelete

Post a Comment