ನೂರರ ಗಡಿಯಲ್ಲಿ ಬೇಲೂರು ರಾಮಮೂರ್ತಿ
ವರದಿ
ಒಬ್ಬ ಲೇಖಕ ತನ್ನ ಸಾಹಿತ್ಯ ಜೀವಿತದಲ್ಲಿ ಒಂದು ನೂರು ಕೃತಿಗಳನ್ನು ರಚಿಸುವುದು, ಅದಕ್ಕೆ ಪ್ರಕಾಶಕರು ದೊರೆಯುವುದು, ಓದುಗರು ಕೃತಿಗಳನ್ನು ಮೆಚ್ಚಿಕೊಳ್ಳುವುದು ಇವೆಲ್ಲಾ ಒಂದು ರೀತಿ ದೈವದತ್ತವಾದುದು ಎನಿಸುತ್ತದೆ. ಪ್ರಸ್ತುತ ನನ್ನ ಆತ್ಮೀಯ ಬರಹಗಾರರಾದ ಶ್ರೀ ಬೇಲೂರು ರಾಮಮೂರ್ತಿಯವರು ಇದೀಗ ನೂರರ ಗಡಿ ದಾಟಿದ್ದಾರೆ. ಬೇಲೂರು ರಾಮಮೂರ್ತಿಯವರು ಬರವಣಿಗೆ ಪ್ರಾರಂಭಿಸಿದ್ದು
1970ರಲ್ಲಿ. ಅದೇ ತಾನೇ ಅವರ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿದಿತ್ತು. ಓದುವ ಚಟವಂತೂ ಇದ್ದ ಹಾಗಿರಲಿಲ್ಲ. ಅವರ ಮನೆಗೆ ಪತ್ರಿಕೆಗಳನ್ನು ಕೂಡಾ ತರಿಸುವ ಶಕ್ತಿ ಇರಲಿಲ್ಲ. ಆದರೆ ಅವರು ಹೈಸ್ಕೂಲ್ ಓದುತ್ತಿದ್ದಾಗ ಐಚ್ಚಿಕ ಸಂಸ್ಕೃತ ಭಾಷೆಯನ್ನು ತೆಗೆದುಕೊಂಡಿದ್ದಾಗ ಅವರ ಅಧ್ಯಾಪಕರು ಎಲ್ಲ ವಿದ್ಯಾರ್ಥಿಗಳೂ ದಿನಕ್ಕೊಂದು ಸುಭಾಷಿತವನ್ನು ಬರೆದುಕೊಂಡು ಬರಬೇಕು ಎಂದು ಕಟ್ಟಪ್ಪಣೆ ಮಾಡಿದ್ದರು. ಆದರೆ ನಮ್ಮ ಬೇಲೂರರಿಗೆ ಸುಭಾಷಿತಗಳು ಎಲ್ಲಿ ಸಿಗುತ್ತವೆ, ಯಾರ ಮನೆಯಲ್ಲಿ ಪುಸ್ತಕ ಇದೆ ಎನ್ನುವುದು ತಿಳಿದಿರಲಿಲ್ಲ. ಆಗ ಬೇಲೂರಿನಲ್ಲಿ ಗ್ರಂಥಾಲಯ ಕೂಡಾ ಇರಲಿಲ್ಲ. ಅವರ ಪಕ್ಕದ ಪಕ್ಕದ ಮನೆಗೆ ಪ್ರಜಾವಾಣಿ ಬರುತ್ತಿತ್ತು. ಅದರಲ್ಲಿ ಸಂಪಾದಕೀಯ ಪುಟದಲ್ಲಿ ಮೇಲುಗಡೆ ಒಂದು ಸುಭಾಷಿತ ಅಚ್ಚು ಮಾಡಿರುತ್ತಿದ್ದರು. ನಮ್ಮ ಬೇಲೂರರು ಅವರ ಮನೆಗೆ ಹೋಗಿ ಅಲ್ಲಿ ಅಚ್ಚಾಗಿದ್ದ ಸುಭಾಷಿತವನ್ನು ಬರೆದುಕೊಂಡು ಶಾಲೆಗೆ ಹೋಗುತ್ತಿದ್ದರು. ಹೀಗೆ ಪ್ರತಿಯೊಬ್ಬ ವಿದ್ಯಾರ್ಥಿಯಿಂದ ತರಿಸಿಕೊಂಡ ಸುಭಾಷಿತಗಳನ್ನು ಆರಿಸಿ ಪ್ರತಿಯೊಬ್ಬ ವಿದ್ಯಾರ್ಧಿಯ ಒಂದೊಂದು ಸುಭಾಷಿತವನ್ನು ಆಯ್ಕೆ ಮಾಡಿ ಒಂದು ಕಿರು ಹೊತ್ತಿಗೆ ಮಾಡಿ ಅದಕ್ಕೆ ಪುನರ್ನವ ಎಂದು ಹೆಸರಿಟ್ಟಿದ್ದರು. ನಮ್ಮ ಬೇಲೂರರ ಹೆಸರು ಪ್ರಥಮವಾಗಿ ಅಚ್ಚಾಗಿದ್ದುದು ಹೀಗೆ. ಅಲ್ಲಿಂದ ಮುಂದೆ ಅವರ ಕೈಗೆ ಆಗಾಗ ಸಿಗುತ್ತಿದ್ದ ಎನ್. ನರಸಿಂಹಯ್ಯನವರ ಪತ್ತೇದಾರಿ ಕಾದಂಬರಿಗಳನ್ನು ಓದಲಾರಂಭಿಸಿದರು. ಅವರು ಪ್ರಥಮವಾಗಿ ಓದಿದ ಸಾಮಾಜಿಕ ಕಾದಂಬರಿ ತುಂಗ-ಭದ್ರ. ಅದಂತೂ ಅವರ ಮನಸ್ಸಿನ ಮೇಲೆ ಬಹಳ ಪರಿಣಾಮ ಬೀರಿತ್ತು. ಆಮೇಲೆ ಅವರಿಗೆ ಅನಿಸಿದ್ದು ಏನೆಂದರೆ ಅವರ ಅಮ್ಮ ಆಗಿನ ಕಾಲಕ್ಕೆ ಅವರು ಕೇಳಿದಂಥಾ ಕಥೆಗಳನ್ನು ಹೇಳುತ್ತಿದ್ದರು. ಆಗೆಲ್ಲಾ ಮಲೆನಾಡಿನ ಬೇಲೂರಿನಲ್ಲಿ ಮಳೆಗಾಲ ಎಂದರೆ ಮೂರು ದಿನ ಆರು ದಿನ ಹೀಗೆ ಸುರಿಯುತ್ತಿತ್ತು. ಅಂಥಾ ದಿನಗಳಲ್ಲಿ ಮನೆಯಲ್ಲಿ ಪತ್ರಿಕೆ ಇಲ್ಲ, ರೇಡಿಯೋ ಇಲ್ಲ, ಟಿವಿ ಬಂದಿರಲೇ ಇಲ್ಲ. ಸಮಯ ಕಳೆಯುವುದು ಹೇಗೆ. ಅಮ್ಮನ ಕಥೆ ಕೇಳುವುದು ಒಂದು ಹವ್ಯಾಸವಾಗಿ ಬೆಳೆಯಿತು. ಹೀಗಿರುವಾಗ ಹಾಸನದಿಂದ ಪ್ರಕಟವಾಗುತ್ತಿದ್ದ ಜನಮಿತ್ರ ಪತ್ರಿಕೆಯವರು ದೀಪಾವಳಿ ಹಬ್ಬದ ಪ್ರಯುಕ್ತ ಒಂದು ಪ್ರಬಂಧ ಸ್ವರ್ಧೆ ಏರ್ಪಾಡು ಮಾಡಿದ್ದರು. ಅದರ ಹೆಸರು ನನ್ನ ವಾಚು ಕೈ ಕೊಟ್ಟಾಗ. ಅಂದರೆ ಕೈಗೆ ಕಟ್ಟಿಕೊಂಡಿರುವ ವಾಚು ಕೈ ಕೊಟ್ಟರೆ ಏನೇನು ಆಗಬಹುದು ಅಂತ. ಸರಿ ನಮ್ಮ ಬೇಲೂರರಿಗೆ ಅಲ್ಲಿಂದ ಕಲ್ಪನೆ ಪ್ರಾರಂಭವಾಯಿತು. ಅವರು ಬರೆದು ಕಳಿಸಿದ ಪ್ರಬಂಧಕ್ಕೆ ಎರಡನೇ ಬಹುಮಾನ ಬಂತು. ಮೊದಲನೇ ಬಹುಮಾನ ಯಾರಿಗೂ ಇಲ್ಲ. ಎರಡನೇ ಬಹುಮಾನ ಎಂದರೆ ಒಂದು ವರ್ಷ ಜನಮಿತ್ರ ಪತ್ರಿಕೆ ಅವರ ಮನೆಗೆ ಉಚಿತವಾಗಿ ಅಂಚೆಯಲ್ಲಿ ಬರುತ್ತಿತ್ತು. ದೀಪಾವಳಿ ಸಂಚಿಕೆ ಬಂದ ಮೇಲೆ ಬೇಲೂರರು ಬೇಲೂರಿನಲ್ಲಿ ಇನ್ನಷ್ಟು ಪರಿಚಿತರಾದರು. ನಮ್ಮ ಸುಬ್ಬಲಕ್ಷಮ್ಮನವರ (
ತಾಯಿ) ಮಗನಂತೆ ಅಂತ ಜನ ಮಾತಾಡಿಕೊಂಡಾಗ ಬಲು ಖುಷಿಯಾಗೋದು.
ಅಲ್ಲಿಂದ ಮುಂದೆ ಬೇಲೂರರು ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೆ ಬಂದರು. ಬರವಣಿಗೆಯ ಧಾವಂತವಂತೂ ಇತ್ತು. ಅವರು ಕೆಲಸಕ್ಕೆ ಸೇರಿಕೊಂಡ ಒಂದು ಕಂಪನಿಯ ಪಕ್ಕದ ಕಟ್ಟಡದಲ್ಲಿಯೇ ನಾಡಿಗೇರರು ಸಂಪಾದಕರಾಗಿದ್ದ ಮಲ್ಲಿಗೆ ಮತ್ತು ಜನಪ್ರಗತಿ ಪತ್ರಿಕೆಗಳು ಪ್ರಕಟವಾಗುತ್ತಿದ್ದವು. ಬೇಲೂರರು ಒಂದು ಕಥೆ ಬರೆದು ಮಲ್ಲಿಗೆ ಕಛೇರಿಗೆ ತಲುಪಿಸಿ ನಾಡಿಗೇರರನ್ನು ಪರಿಚಯ ಮಾಡಿಕೊಂಡರು. ಒಂದೆರಡು ತಿಂಗಳ ನಂತರ ಒಂದು ಪತ್ರಿಕೆ ಅಂಗಡಿಯಲ್ಲಿ ನೇತುಹಾಕಿದ್ದ ಮಲ್ಲಿಗೆ ಪತ್ರಿಕೆಯನ್ನು ಕೈಗೆ ತೆಗೆದುಕೊಂಡು ನೋಡಿದರೆ ಅದರಲ್ಲಿ ಬೇಲೂರರ ಕಥೆ ಪ್ರಕಟವಾಗಿರಬೇಕೇ? ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಒಂದು ಕೊರಗೂ ಕಾಡಿತ್ತು. ಏನೆಂದರೆ ಕಥೆಯ ಹೆಸರು ಬರೆದವರು ಬೇಲೂರು ರಾಮಮೂರ್ತಿ ಎನ್ನುವುದರ ಬದಲಿಗೆ ಬೇ.ರಾಮಮೂರ್ತಿ ಅಂತ ಅಚ್ಚುಮಾಡಿಬಿಟ್ಟಿದ್ದರು. ಮರುದಿನವೇ ಬೇಲೂರರು ಮಲ್ಲಿಗೆ ಕಛೇರಿಗೆ ಹೋಗಿ ನಾಡಿಗೇರರನ್ನು ಇದ್ಯಾಕೆ ಸರ್ ಅಂತ ಕೇಳಿದಾಗ ಅವರು ಕೆಲವರು ಕನ್ನಡ ಇನಿಷಿಯಲ್ ಇಟ್ಟುಕೊಂಡಿರ್ತಾರೆ ನೀವೂ ಹಾಗೇ ಅಂದುಕೊಂಡಿದ್ದೆ. ಮುಂದೆ ಪ್ರಕಟವಾಗುವ ಲೇಖನಗಳಲ್ಲಿ ಬೇಲೂರು ರಾಮಮೂರ್ತಿ ಅಂತನೇ ಅಚ್ಚು ಮಾಡುತ್ತೀವಿ ಎಂದು ಭರವಸೆ ಕೊಟ್ಟರು. ಅಲ್ಲಿಂದ ಮುಂದೆ ಅನೇಕ ಕಥೆಗಳು ಮಲ್ಲಿಗೆ ಜನಪ್ರಗತಿ ಪತ್ರಿಕೆಗಳಲ್ಲಿ ಪ್ರಕಟವಾದವು.
ಆದರೆ ನನ್ ಕಥೆಗಳು ಸುಧಾ, ಮಯೂರ, ಪ್ರಜಾಮತ ಮುಂತಾದ ಪತ್ರಿಕೆಗಳಲ್ಲಿ ಬೆಳಕು ಕಾಣಬೇಕು ಅಂತ ಹಂಬಲ ಉಂಟಾಯಿತು. ಆದರೆ ಕಳಿಸಿದ ಕಥೆಗಳೆಲ್ಲಾ ಹಿಂದಕ್ಕೆ ಬರುತ್ತಿದ್ದವು. ಇಂದು ಒಂದು ಕಥೆಯನ್ನು ಬರೆದು ಪ್ರಜಾಮತಕ್ಕೆ ಕೊಟ್ಟು ಬರೋರು. ಆಗ ಸಂಪಾದಕರಾಗಿದ್ದವರು ಮ.ನ.ಮೂರ್ತಿಯವರು. ಇನ್ನೊಂದೆರಡು ದಿನ ಬಿಟ್ಟು ಇನ್ನೊಂದು ಕತೆಯನ್ನು ಬರೆದು ಮತ್ತೆ ತೆಗೆದುಕೊಂಡು ಹೋಗಿ ಕೊಟ್ಟಾಗ ಮ.ನ.ಮೂರ್ತಿಯವರು ನೀವು ಕಥೆಯನ್ನು ಬರೆಯುತ್ತಿಲ್ಲ ಉತ್ಪಾದನೆ ಮಾಡುತ್ತಿದ್ದೀರಿ ಎಂದು ತಮಾಷೆ ಮಾಡಿದ್ದರು. ಮುಂದೆ ಪ್ರಜಾಮತದಲ್ಲಿಯೂ ಅವರ ಕಥೆಗಳು ಪ್ರಕಟವಾದವು.
ಸುಧಾ ಪತ್ರಿಕೆಯಲ್ಲಿ ಅವರ ನಗೆ ಲೇಖನ ಪ್ರಪ್ರಥಮವಾಗಿ ಪ್ರಕಟವಾಯಿತು. ಅದರ ಹೆಸರು ಅಭ್ಯಾಸ ಆಭಾಸ. ಅಲ್ಲಿಂದ ಮುಂದೆ ಸುಧಾದಲ್ಲಿಯೂ ಕಥೆ ಹಾಸ್ಯ ಲೇಖನಗಳು ಪ್ರಕಟವಾದವು. ಹಾಗೆಯೇ ಪ್ರಜಾವಾಣಿ, ಕನ್ನಡಪ್ರಭ, ಉದಯವಾಣಿ ಪತ್ರಿಕೆಗಳ ಭಾನುವಾರದ ಪುರವಣಿಯಲ್ಲಿ ಕಥೆಗಳು ಪ್ರಕಟವಾದವು.
ಕಾದಂಬರಿ ಬರೆಯಬೇಕೆಂಬ ಹುಮ್ಮಸ್ಸು ಬೇಲೂರರಲ್ಲಿ ಹುಟ್ಟಿದಾಗ ಸಿದ್ಧವಾದದ್ದೇ ಅಭಿನೇತ್ರಿ ಕಾದಂಬರಿ. ಇದು ಪ್ರಜಾಮತದಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು. ಅಗ ಬೇಲೂರಿನಲ್ಲಿ ನಮ್ಮ ಬೇಲೂರರು ಇದ್ದ ಬೀದಿಯಲ್ಲಿ ಜನ ಓಡಾಡುವಾಗ ಮನೆ ಕಡೆ ನೋಡಿಕೊಂಡು ಅಭಿನೇತ್ರಿ ಬರೆದಿರೋರ ಮನೆ ಇದು ಎಂದು ಹೇಳಿಕೊಂಡು ಹೋಗುತ್ತಿದ್ದರಂತೆ. ಇದು ಅವರಿಗೆ ಹೆಮ್ಮೆ ತರುವ ವಿಷಯ.
ಹೀಗೆ ಸಾಗಿತ್ತು ಅವರ ಸಾಹಿತ್ಯ ಯಾನ. ಮೊದಲು ಕಥೆ ಬರೆಯಬೇಕು, ನಂತರ ಕಾದಂಬರಿ ಬರೆಯಬೇಕು, ನಂತರ ಅದು ಪುಸ್ತಕ ರೂಪದಲ್ಲಿ ಪ್ರಕಟವಾಗಬೇಕು ಹೀಗೆ ಆಸೆ ಗರಿಗೆದರಿತು. ಆದರೆ ಪ್ರಕಟವಾದ ಅಭಿನೇತ್ರಿ ಕಾದಂಬರಿಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಯಾರೂ ಮುಂದೆ ಬರಲಿಲ್ಲ. ಬೇಲೂರರು ಬಳೇಪೇಟೆಗೆ ಅಲೆದದ್ದೂ ಅಲೆದದ್ದೇ. ಮುಂದೆ ಅವರೇ ಹಣ ಹಾಕಿ ಬಾಪ್ಕೊ ಪ್ರಕಾಶನದ ಸಹಕಾರದಿಂದ ಅಭಿನೇತ್ರಿ ಪ್ರಕಟವಾಯಿತು. ಮುಂದೆ ಅದು ಮರುಮುದ್ರಣವೂ ಆಯಿತು.
ಹೀಗೆ ಒಂದೊಂದೇ ಪುಸ್ತಕಗಳು ಪ್ರಕಟವಾಗುತ್ತಾ ಬಂದು ಇದೀಗ ಬೇಲೂರರು ನೂರರ ಗಡಿಯಲ್ಲಿದ್ದಾರೆ. ಅವರ ಪುಸ್ತಕಗಳನ್ನು ಸಪ್ನ ಬುಕ್ ಹೌಸ್, ಅಂಕಿತ ಪಸ್ತಕ, ಹೇಮಂತ ಸಾಹಿತ್ಯ, ಐ.ಬಿ.ಎಚ್ ಪ್ರಕಾಶನ, ಮುಂತಾದವರು ಪ್ರಕಟಿಸಿದ್ದಾರೆ. ಸಿರಿಗೆರೆ ಸ್ವಾಮಿಗಳು ಸಿರಿಗೆರೆಯಲ್ಲಿ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಬೇಲೂರರ ನಗೆತೇರು ಹಾಸ್ಯ ಸಂಕಲವನ್ನು ಪ್ರಕಟಿಸಿದ್ದು ಅವರ ಭಾಗ್ಯ ಎಂದು ನೆನೆಯುತ್ತಾರೆ. ಮೊದಲಿಗೆ ಅವರ
120 ಹಾಸ್ಯ ಲೇಖನಗಳ ಸಂಗ್ರಹ ಸಮೃದ್ದ ಹಾಸ್ಯ ಗ್ರಂಥವನ್ನು ಪ್ರಕಟಿಸಲು ಯಾರೂ ಮುಂದೆ ಬಾರದಿದ್ದಾಗ ಅವರೇ ದುಡ್ಡು ಹಾಕಿ ಪ್ರಕಟಿಸಿ ಅದನ್ನು ಹಾಸ್ಯೋತ್ಸವದಲ್ಲಿ ಬಿಡುಗಡೆಗೊಳಿಸಿದಾಗ ಒಂದೇ ದಿನ
200 ಪತ್ರಿಗಳು ಮಾರಾಟವಾದ ದಾಖಲೆ ಇದೆ. ಮುಂದೆ ಅದೇ ರೀತಿಯ ಇನ್ನೊಂದು ಸಂಕಲನ ಸಮೃದ್ಧ ಹಾಸ್ಯ ಗ್ರಂಥವನ್ನು ಸಪ್ನ ಸಂಸ್ಥೆಯವರು ಪ್ರಕಟಿಸಿದರು.
ಬೇಲೂರರ ಕೆಲವು ಕೃತಿಗಳಿಗೆ ಸಂದಿರುವ ಪ್ರಶಸ್ತಿಗಳು :
ಹಾಸ್ಯ ಗಂಗೋತ್ರಿ ಹಾಸ್ಯ ಸಂಕಲನಕ್ಕೆ
2012ನೇ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ
ಮಹಾಕವಿ ಮುದ್ದಣ ಕೃತಿಗೆ –
ಗೊರೂರು ಪ್ರಶಸ್ತಿ –
ರನ್ನ ಪ್ರಶಸ್ತಿ
ಹಾಸ್ಯ ಸಾಹಿತ್ಯಕ್ಕೆ –
ಕೇಫ ಪ್ರಶಸ್ತಿ - ಪರಮಾನಂದ ಪ್ರಶಸ್ತಿ
ಅರವತ್ತಾದ ಮೇಲೆ ಆಧ್ಯಾತ್ಮ ಎನ್ನುವಂತೆ ಇತ್ತೀಚೆಗೆ ಬೇಲೂರರ ಆಧ್ಯಾತ್ಮದಲ್ಲಿ ಆಸಕ್ತಿ ಬೆಳೆಸಿಕೊಂಡು ಲೇಖನಗಳನ್ನು ಬರೆಯುತ್ತಿದ್ದಾರೆ, ಈ ಲೇಖನಗಳು ವಿಜಯವಾಣಿಯ ಮನೋಲ್ಲಾಸ, ವಿಶ್ವವಾಣಿಯ ಗುರು ಪುರವಣಿ, ಮತ್ತು ಬೋಧಿವೃಕ್ಷ ಪತ್ರಿಕೆಗಳನ್ನು ಪ್ರಕಟವಾಗುತ್ತಿವೆ. ಆಧ್ಯಾತ್ಮ ವಿಷಯಗಳ ಬಗೆಗೆ ಬೇಲೂರರು ಉಪನ್ಯಾಸಗಳನ್ನು ಕೊಡುತ್ತಿದ್ದಾರೆ. ಇದರ ಪರಿಣಾಮವೇ ಆದಿ ಶಂಕರರ ಜೀವನವನ್ನು ಅಧ್ಯಯನ ಮಾಡಿ ಸರಳ ಚೌಪದಿಗಳಲ್ಲಿ ಬರೆದ ಶ್ರೀ ಶಂಕರ ಚರಿತಾಮೃತಮ್ ಕಾವ್ಯ. ಈ ಗ್ರಂಥವನ್ನು ಬೇಲೂರರ ಅಭೀಪ್ಸೆಯಂತೆ ಶೃಂಗೇರಿ ಸಂಸ್ಥಾನದಲ್ಲಿ ನವರಾತ್ರಿಯ ಸಂದರ್ಭದಲ್ಲಿ ಉಭಯ ಜಗದ್ಗುರುಗಳೂ ಲೋಕಾರ್ಪಣೆಗೊಂಡಿದ್ದು ನನ್ನ ಪರಮ ಸೌಭಾಗ್ಯ ಎಂದು ಬೇಲೂರರು ನೆನೆಯುತ್ತಾರೆ. ನಂತರ ಸಿದ್ದವಾದದ್ದೇ ಇದೀಗ ಪ್ರಕಟವಾಗುತ್ತಿರುವ ಯೋಗವಾಸಿಷ್ಠ ಕಥೆಗಳು. ದೇವಡು ಅವರು ಸಂಸ್ಕøತದಿಂದ ಕನ್ನಡಕ್ಕೆ ಅನುವಾದಿಸಿರುವ
32,000 ಶ್ಲೋಕಗಳಲ್ಲಿ ಅಡಕವಾಗಿರುವ ಕಥೆಗಳನ್ನು ಆಯ್ದು ಅವುಗಳಿಗೆ ಗದ್ಯ ರೂಪ ಕೊಟ್ಟಿರುವುದು ಬೇಲೂರರ ಹೆಗ್ಗಳಿಕೆ.
ಇಲ್ಲಿಯವರೆಗೆ ಬೇಲೂರರು
22 ಕಾದಂಬರಿಗಳನ್ನೂ, 24 ಕಿರುಕಾದಂಬರಿಗಳ ಗುಚ್ಚವನ್ನೂ,
30 ಹಾಸ್ಯ ಸಂಕಲನಗಳನ್ನೂ
14 ಕಥಾ ಸಂಕಲಗಳನ್ನೂ 2
ಶಿಶು ಸಾಹಿತ್ಯವನ್ನೂ, ಪ್ರವಾಸ ಕಥನ, ವಿಚಾರಧಾರೆ ಮುಂತಾದ ಪ್ರಾಕಾರಗಳಲ್ಲಿ 8
ಗ್ರಂಥಗಳನ್ನೂ ಪ್ರಕಟಿಸಿದ್ದಾರೆ.
ಇದೀಗ ಬೇಲೂರರ
100ನೇ ಗ್ರಂಥವನ್ನು ಸಾಹಿತ್ಯ ಲೋಕ ಪಬ್ಲಿಕೇಷನ್ಸ್ ಅವರು ಪ್ರಕಟಿಸಿದ್ದಾರೆ. ಅದು
21.9.2019 ರಂದು ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ವಲ್ಡ್ ಕಲ್ಚರ್ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡಿದೆ. ಮಹಾಮಹೋಪಾಧ್ಯಾಯ ಡಾ. ಕೆ.ಜಿ. ಸುಬ್ರಾಯಶರ್ಮ, ಮಹಾಮಹೋಪಾದ್ಯಾಯ ಡಾ. ಎಸ್. ರಂಗನಾಥ್, ಮತ್ತು ಪ್ರೊ. ಮಲ್ಲೇಪುರಂ ವೆಂಕಟೇಶ್ ಅವರುಗಳು ಭಾಗವಹಿಸಿ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದ್ದಾರೆ.
Good write up. His foray into organizing field too could have been mentioned.
ReplyDeleteಅಭಿನಂದನೆಗಳು ಶ್ರೀಯುತ ರಾಮ ಮೂರ್ತಿ ರವರಿಗೆ. ವರದಿ ಸೊಗಸಾಗಿದೆ. ತಮ್ಮ ನೂರರ ಗಡಿ ದಾಟಿದ ಸಂಭ್ರಮ ಮುಂದೆ ಸಾಗುತ್ತಾ ಹತ್ತರರು ನೂರುಗಳಾಗಲಿ ಎನ್ನುವುದು ನಮ್ಮ ಆಶಯ. ಅಭಿನಂದನೆಗಳು
ReplyDeleteCongratulations for your achievement
ReplyDelete