ಭಗೀರಥನ ಮೋಕ್ಷದ ಕಥೆ


ಯೋಗವಾಸಿಷ್ಠರ ಕಥೆಗಳು - 
ಭಗೀರಥನ ಮೋಕ್ಷದ ಕಥೆ
ಲೇಖನ - ಬೇಲೂರು ರಾಮಮೂರ್ತಿ 



ಸಂಪೂರ್ಣವಾಗಿ ಶಾಂತವಾಗಿರುವ ಮನಸ್ಸುಳ್ಳವನಿಗೆ, ಯಾರಿಗೆ ಆಸೆಗಳೆಲ್ಲವೂ ಪರಿಪೂರ್ಣವಾಗಿರುವುವೋ ಅಂಥವನಿಗೆ, ಯಾವಾಗಲೂ ಸುಖಮಯಾತ್ಮನಾದ ಬ್ರಹ್ಮನಲ್ಲಿ ಸ್ಥಿತಿಯುಳ್ಳವನಿಗೆ, ಇತರರಿಗೆ ದುರ್ಲಭತರವಾದ ವಾಂಛಿತಾರ್ಥಗಳೆಲ್ಲವೂ ಸಾಗರವನ್ನು ಅಗೆದು ಸಗರ ಪುತ್ರರನ್ನು ಉದ್ಧಾರ ಮಾಡಿದ ಗಂಗೆಯ ಅವತಾರವು ಸಿದ್ಧಿಸಿದಂತೆ ಸಿದ್ಧಿಸುವುವು. ಇದಕ್ಕೆ ಪೂರಕವೋ ಎನ್ನುವಂತೆ ಇನ್ನೊಂದು ಕಥೆಯನ್ನೂ ವಸಿಷ್ಠರು ಶ್ರೀರಾಮನಿಗೆ ಹೇಳಿದರು.
ಭಗೀರಥನೆಂಬ ಒಬ್ಬ ರಾಜನಿದ್ದನು. ಆತ ಬಹಳ ಧಾರ್ಮಿಕ. ಸಮುದ್ರ ಪರ್ಯಂತವಾಗಿರುವ ಭೂಮಂಡಲಕ್ಕೆಲ್ಲಾ ತಿಲಕದಂತಿದ್ದನು. ಆತನಿಂದ ಏನಾದರೂ ಸಹಾಯ ಪಡೆಯಬೇಕೆಂದು ಬರುವವರನ್ನು ಭಗೀರಥನು ಕರೆದು ಕೂರಿಸಿ, ಸಮಾಧಾನ ಮಾಡಿ ಪ್ರಸನ್ನವದನನಾಗಿ, ಕೇಳಿದುದನ್ನು ಕೊಟ್ಟು ಕಳಿಸುತ್ತಿದ್ದನು. ಭಗೀರಥನು ಒಬ್ಬ ಪರಿಪಕ್ವ ರಾಜ ಎಂದು ಹೇಳಬಹುದು. ಹೇಗೆಂದರೆ ಸಾಧುಗಳಿಗೆ ಅವನು ಕೇಳಿದುದನ್ನು ಕೊಡುವನು. ಯಾರಿಗೆ ಏನು ಅವಶ್ಯಕವೋ ಅದನ್ನು ಖಂಡಿತಾ ಕೊಡುವನು. ಒಬ್ಬ ರಾಜನಾಗಿ ರಾಜ್ಯಕ್ಕೆ ಬರಬೇಕಾದುದನ್ನು ಬಿಡದೇ ತೆಗೆದುಕೊಳ್ಳುವನು. ತನ್ನ ರಾಜ್ಯದಲ್ಲಿ ದುರ್ಜನರ ವ್ಯವಹಾರಗಳು ಕಂಡುಬಂದರೆ ಕೂಡಲೇ ಅವುಗಳನ್ನು ನಾಶ ಪಡಿಸುವನು. ಪ್ರಜಾ ಪಾಲನ ಕ್ರಿಯೆಯಲ್ಲಿ ಅವನು ಶಾಂತನಾಗಿದ್ದರೂ ಪ್ರತಿಯೊಬ್ಬ ಪ್ರಜೆಯ ಮನೆಯಲ್ಲಿ ಕತ್ತಲನ್ನು ಕಳೆದು ಬೆಳಕನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದ್ದನು. ಹಾಗೆಯೇ ಸಜ್ಜನರನ್ನು ಕಂಡರೆ ಅವನು ಮಂಜಿನಂತೆ ಕರಗಿಹೋಗುವನು. ಭಗೀರಥನು ತನ್ನ ಮನಸ್ಸಿದ್ಧಿಗಾಗಿ ಬ್ರಹ್ಮನನ್ನೂ, ಶಂಕರನನ್ನೂ, ಜುಹ್ನುವನ್ನೂ ತಪಸ್ಸಿನಿಂದ ಆರಾಧಿಸಿ ಸಿದ್ಧಿಯನ್ನು ಪಡೆದನು.
ಇಂತಹ ಭಗೀರಥನಿಗೆ ಇನ್ನೂ ಯೌವನದಲ್ಲಿರುವಾಗಲೇ ಸಂಸಾರದ ಬಗೆಗೆ ವೈರಾಗ್ಯ ಮೂಡಿತು. ಏಕಾಂತದಲ್ಲಿ ಕುಳಿತುಕೊಂಡು ಜಗತ್ತಿನ ಸಂಸಾರವನ್ನು ಕುರಿತು ಇದು ಅಸಮಂಜಸವಾಗಿಯೂ ದು:ಖಾಕುಲವಾಗಿಯೂ ಇರುವುದಲ್ಲಾ ಎಂದು ಚಿಂತಿಸುತ್ತಿದ್ದನು. ಮತ್ತೆ ಹುಟ್ಟು, ಮತ್ತೆ ಸಾವು, ಮತ್ತೆ ನೋವು, ಮತ್ತೆ ನಲಿವು ಹೀಗೆ ಒಂದು ನೂರು ಸಾರಿ ಚಕ್ರ ಸುತ್ತಿದಂತೆ ಮರುಹುಟ್ಟು ಸಾಗುತ್ತಿದ್ದರೂ ನಾವು ತಲುಪುತ್ತಿರುವುದು ಎಲ್ಲಿಗೆ ಎಂದು ತಿಳಿಯುತ್ತಿರಲಿಲ್ಲ. ಯಾವುದನ್ನು ಪಡೆದರೆ ಲೋಕದಲ್ಲಿ ಪಡೆಯಬೇಕಾದುದು ಇನ್ನೇನು ಇಲ್ಲ ಎನಿಸುವುದೋ ಅಂಥದನ್ನು ಪಡೆಯುವುದನ್ನು ಬಿಟ್ಟರೆ ಮಿಕ್ಕಿದ್ದೆಲ್ಲವೂ ವ್ಯರ್ಥಸಂಪಾದನೆ ಎನಿಸಿತು.

ಇಂಥಾ ಭಗೀರಥನು ಒಮ್ಮೆ ಏಕಾಂತದಲ್ಲಿ ಕುಳಿತು ತನ್ನ ಗುರುವಾದ ತ್ರಿತಲನನ್ನು ಸ್ಮರಿಸಿದನು. ಗುರು ಎದುರಿಗೆ ಪ್ರತ್ಯಕ್ಷವಾದಾಗ ತನ್ನ ಮನಸ್ಸಿನ ಆತಂಕವನ್ನು ಹೊರಗೆಡಹಿ ಗುರುವೇ, ಜೀವಕ್ಕೆ ಅಂತ್ಯ ಎನ್ನೋದು ಯಾವಾಗ? ಮರುಹುಟ್ಟು ಮರುಸಾವಿನ ಚಕ್ರದ ಸುಳಿಯಿಂದ ತಪ್ಪಿಸಿಕೊಳ್ಳುವುದು ಹೇಗೆ? ಎಂದು ಕೇಳಿದನು. ಅದಕ್ಕೆ ತ್ರಿತಲನುಅದು ಬಹಳ ಸುಲಭ, ಯಾವನು ಜ್ಞಾನದಾಹವನ್ನು ತೀರಿಸಿಕೊಳ್ಳುತ್ತಾನೋ, ಯಾವನು ಕರ್ಮಫಲದಲ್ಲಿ ಆಸಕ್ತಿ ಇಟ್ಟುಕೊಳ್ಳುವುದಿಲ್ಲವೋ, ಯಾವನು ಪತ್ನಿ, ಸಂತಾನ, ಮುಂತಾದ ದೈನಂದಿನ ಸಂಬಂಧಗಳಲ್ಲಿ ಅತಿಯಾದ ಆಸಕ್ತಿ ಇಟ್ಟುಕೊಂಡಿರುವುದಿಲ್ಲವೋ, ಯಾವಾಗಲೂ ಎಲ್ಲಾ ವಿಚಾರಗಳಲ್ಲೂ ಸಮಚಿತ್ತನಾಗಿರುತ್ತಾನೋ ಅವನು ಮರುಹುಟ್ಟಿಗೆ ಬದ್ಧನಲ್ಲ. ಇದು ಸೂಕ್ಷ್ಮವಾಗಿ ಹೇಳಿರುವುದು. ಇನ್ನೂ ಆಳವಾಗಿ ಯೋಚಿಸಿದರೆ ಯಾವನು ಬೇರೆ ಯಾವುದರಲ್ಲೂ ಮನಸ್ಸಿಡದೇ ಕೇವಲ ಬ್ರಹ್ಮದಲ್ಲಿ ಮನಸ್ಸಿಡುವುದು, ನಿರ್ಜನ ಪ್ರದೇಶದಲ್ಲಿರುವುದು, ಜನಗಳ ಗುಂಪಿನಲ್ಲಿ ಇರುವುದನ್ನು ಇಷ್ಟ ಪಡದಿರೋದು, ಆಧ್ಯಾತ್ಮ ಜ್ಞಾನದಲ್ಲಿ ನಿರತನಾಗಿರುವುದು, ರಾಗದ್ವೇಷಗಳಿಂದ ದೂರಾಗಿರುವುದು. ಇವುಗಳನ್ನು ನೀನು ಅಭ್ಯಾಸ ಮಾಡಿಕೊಂಡಿದ್ದೇ ಆದರೆ ನಿನ್ನ ಆತಂಕಕ್ಕೆ ಸರಿಯಾದ ಉತ್ತರ ದೊರೆಯುವುದುಎಂದರು.
ಗುರುಗಳು ಹೇಳಿದ ಮಾತನ್ನು ಜೀರ್ಣಿಸಿಕೊಂಡ ಭಗೀರಥ ಕೆಲ ಕಾಲ ಮೌನವಾಗಿದ್ದು ನಂತರಗುರುಗಳೇ, ಭೂಮಿಯಲ್ಲಿ ಕಂಡ ಕಂಡ ಕಡೆ ಹುಲ್ಲು ಬೆಳೆದಿರುವಂತೆ ಶರೀರದಲ್ಲಿ ಬೇಕಾಗಿಯೋ ಬೇಡವಾಗಿಯೋ ಅಹಂಕಾರ ಎಂಬ ಹುಲ್ಲು ಬೆಳೆದು ನಿಂತಿರುತ್ತದೆ. ಅಹಂಭಾವವನ್ನು ಬಿಡುವುದು ಹೇಗೆ? “ ಎಂದು ಕೇಳಿದ. ಮತ್ತೆ ತ್ರಿತಲನು  ನೋಡು ಭಗೀರಥ, ಸಾಮಾನ್ಯ ಮಾನವರು ತಮ್ಮ ಪೌರುಷದಿಂದ, ಪ್ರಯತ್ನಗಳಿಂದ ತಮಗೆ ಬೇಕಾದ ಭೋಗಗಳನ್ನು ಪಡೆಯುತ್ತಲೇ ಇರುತ್ತಾರೆ. ಯಾರು ಭೋಗಲಾಲಸೆಯನ್ನು ಬಿಟ್ಟು ಕೇವಲ ಆತ್ಮಸತ್ತೆಯನ್ನು ಅನುಸರಿಸಿ ತನ್ಮೂಲಕ ಮನೋವಿಕಾಸಕ್ಕೆ ಪ್ರಯತ್ನ ಪಡುತ್ತಾರೋ ಅಂಥವರಲ್ಲಿ ಅಹಂಕಾರ ಎಂಬುದು ಇರುವುದಿಲ್ಲ. ಶರೀರಕ್ಕೆ ಲಜ್ಜೆ ಎಂಬುದೇ ಇಲ್ಲ. ಕೇವಲ ತನ್ನ ಮನೋಭಿಲಾಷೆಗೆ ವಿಧವಿಧವಾದ ಲಜ್ಜಾವತಾರಗಳನ್ನು ಇದು ತಾಳುತ್ತದೆ. ಯಾರು ಇಂಥಾ ಲಜ್ಜಾವತಾರಗಳಿಂದ ದೂರ ಉಳಿಯುತ್ತಾರೋ ಅವರಲ್ಲಿ ಅಹಂಕಾರ ಎಂಬುದಕ್ಕೆ ಜಾಗವಿಲ್ಲ. ಯಾವಾಗ ಮನುಷ್ಯನಲ್ಲಿ ಅಹಂಕಾರ ಲಯವಾಗುವುದೋ ಆಗ ಅವನು ಪರಮಪದಕ್ಕೆ ಯೋಗ್ಯನಾಗುವನುಎಂದರು.
ಗುರುಗಳ ಮಾತನ್ನು ಕೇಳಿದ ಭಗೀರಥ ಕೆಲವು ಕಾಲ ಅದೇ ಮಾತುಗಳನ್ನು ಮನದಲ್ಲಿ ಗುನುಗಿಕೊಂಡು ನಂತರ ಸರ್ವತ್ಯಾಗವೆಂಬ ಸಿದ್ದಿಯನ್ನು ಪಡೆಯಲು ಅಗ್ನಿಷ್ಟೋಮವೆಂಬ ಯಜ್ಞವನ್ನು ಮಾಡಿದನು. ಯಜ್ಞದ ಕಡೆಯಲ್ಲಿ ತನ್ನಲ್ಲಿದ್ದ ಗೋವು, ಭೂಮಿ, ಅಶ್ವ, ಸೈನ್ಯ, ಹಿರಣ್ಯಾದಿಗಳನ್ನು ದ್ವಿಜರಿಗೂ, ನಿಜಬಂಧುಗಳಿಗೂ ದಾನಮಾಡಿಬಿಟ್ಟನು. ನಂತರ ತನ್ನಲ್ಲಿದ್ದ ಧನವನ್ನೆಲ್ಲಾ ತ್ಯಾಗ ಮಾಡಿದನು. ತನ್ನ ರಾಜ್ಯದ ಪ್ರಜೆಗಳು ಖಿನ್ನರಾಗಿದ್ದರೂ ಗಮನಿಸದೇ ತನ್ನ ರಾಜ್ಯವನ್ನು ತನ್ನ ರಾಜ್ಯದ ಪಕ್ಕದಲ್ಲಿಯೇ ಇದ್ದ ಶತೃರಾಜನಿಗೆ ಕೊಟ್ಟುಬಿಟ್ಟನು.
ತನ್ನ ರಾಜ್ಯವನ್ನೂ ಅರಮನೆಯನ್ನೂ ತ್ಯಜಿಸಿ ಕೇವಲ ಒಂದು ಕೌಪೀನವನ್ನು ಕಟ್ಟಿಕೊಂಡು ದೇಶ ಬಿಟ್ಟು ಹೊರಟು ತನಗೆ ಪರಿಚಯವೇ ಇಲ್ಲದ ಕಡೆ ಅಲೆದನು. ಎಲ್ಲಾ ಆಸೆಗಳನ್ನೂ ಬಿಟ್ಟು ಮನಸ್ಸಿಗೆ ಪರಮ ಶಾಂತಿಯನ್ನು ಕಂಡುಕೊಂಡನು. ಹೀಗೆ ಭೂಮಂಡಲವನ್ನೆಲ್ಲಾ ಅಲೆಯುತ್ತಿದ್ದ ಭಗೀರಥನು ಹಿಂದೆ ತನ್ನದಾಗಿದ್ದ ರಾಜ್ಯಕ್ಕೆ ಬಂದನು. ಅಲ್ಲಿ ಪ್ರಜೆಗಳು ತಮ್ಮ ರಾಜನನ್ನು ಗುರುತಿಸಿ ಇವರು ಹೀಗೇಕೆ ಆಗಿದ್ದಾರೆ ಎಂದು ಬೇಸರಿಸಿದರು. ಶತೃ ರಾಜನು ಬಂದು ನಿಮ್ಮ ರಾಜ್ಯವನ್ನು ನೀವು ಹಿಂದಕ್ಕೆ ತೆಗೆದುಕೊಳ್ಳಿ ಎಂದು ಬೇಡಿದನು. ಯಾವುದಕ್ಕೂ ಮನಸ್ಸು ಕೊಡದ ಭಗೀರಥ ಕೇವಲ ಒಂದು ಭೋಜನವನ್ನು ಸ್ವೀಕರಿಸಿ ಅಲ್ಲಿಂದ ಹೊರಟನು.  ಕೆಲವು ಕಾಲ ಅಲ್ಲಲ್ಲಿ ಅಲೆಯುತ್ತಿದ್ದು ನಂತರ ತನ್ನ ಗುರುಗಳ ಬಳಿಗೆ ಬಂದನು. ತ್ರಿತಲನು ಭಗೀರಥನನ್ನೂ, ಅವನು ಮನೋಸಂಕಲ್ಪವನ್ನೂ ಕಂಡು ಮೆಚ್ಚಿ ಅವನನ್ನು ಜೊತೆಯಲ್ಲಿಯೇ ಇಟ್ಟುಕೊಂಡು ಸಂಚಾರ ಮಾಡಿದರು.
ಹೀಗೆ ಗುರು ಶಿಷ್ಯ ಇಬ್ಬರೂ ಜೊತೆಜೊತೆಯಾಗಿ ಸಂಚಾರ ಮಾಡುತ್ತಾ ದೇಹವನ್ನು ಧರಿಸಿರುವುದರಿಂದ ನಮಗಾಗಬೇಕಿರುವುದು ಏನು? ದೇಹ ಬಿದ್ದು ಹೋದರೆ ನಮಗಾಗುವ ನಷ್ಟವೇನು ಎಂದು ಚಿಂತಿಸಿ ಯಾವುದಕ್ಕೂ ಆಸೆ ಪಡದೇ, ಯಾವುದನ್ನೂ ಬೇಕು ಎಂದು ಅಪೇಕ್ಷಿಸಿದೆ ದಿನಗಳೆಯುತ್ತಾ ಇದ್ದರು. ಸಮಯದಲ್ಲಿ ಇವರಿಬ್ಬರ ಮನೋಸ್ಥೈರ್ಯವನ್ನು ಪರೀಕ್ಷೆಗೆ ಒಳಪಡಿಸಿದ ಸಿದ್ದ ಪುರುಷರ ಮನವೊಲಿಸಿದರು. ಹೀಗೆ ಗುರುಶಿಷ್ಯರು ಇಬ್ಬರೂ ಸುಖಭೋಗಗಳನ್ನು ತ್ಯಜಿಸಿ ಪಾರಮಾರ್ಥಿಕ ಸುಖದತ್ತ ಹೆಜ್ಜೆ ಹಾಕುತ್ತಿದ್ದರು.

ಇದರಲ್ಲಿ ಬಹುಮುಖ್ಯವಾದ ಅಂಶ ಎಂದರೆ ನಮಗೆ ಅನಂತವಾದ ಸುಖ ಲಭಿಸಬೇಕಾದರೆ ನಮ್ಮಲ್ಲಿ ಇರುವುದನ್ನೆಲ್ಲಾ ಬಿಟ್ಟುಕೊಡುವುದರ ಜೊತೆಗೆ ಯಾವುದೂ ನಮ್ಮದಲ್ಲ ಯಾವುದಕ್ಕೂ ನಾವು ಬಾಧ್ಯರಲ್ಲ ಎನ್ನುವ ಭಾವನೆ ಇಟ್ಟುಕೊಂಡು, ಕೇವಲ ಅನಂತ ಸುಖ, ನೆಮ್ಮದಿ ಕೊಡುವಂಥಾ ಕೆಲಸದಲ್ಲಿ ತಲ್ಲೀನರಾಗಿದ್ದರೆ ಅಂತಹವರಿಗೆ ಮೋಕ್ಷ ಪ್ರಾಪ್ತಿ ಎನ್ನುವುದು.
ಒಂದಾನೊಂದು ದೇಶದಲ್ಲಿ ಇದ್ದಕ್ಕಿದ್ದಂತೆ ರಾಜನು ಅಸ್ತಂಗತನಾದನು. ಕಕ್ಕಾಬಿಕ್ಕಿಯಾದ ರಾಜ ಪರಿವಾರದವರು ಮತ್ತು ಸಾಮಂತರು, ಮಂತ್ರಿಗಳು ಎಲ್ಲರೂ ಸಮರ್ಥನಾದ ರಾಜನ ಹುಡುಕಾಟದಲ್ಲಿ ತೊಡಗಿದರು. ಅದೇ ಸಮಯಕ್ಕೆ ಭಿಕ್ಷಾಚಾರನಾಗಿ ಅಲೆಯುತ್ತಿದ್ದ ಭಗೀರಥನನ್ನು ಕಂಡು ಇವನೇ ನಮ್ಮ ರಾಜನಾಗಲು ಯೋಗ್ಯನಾದವನು ಎಂದು ಅವನನ್ನು ಕರೆದುಕೊಂಡು ಹೋಗಿ ತಮ್ಮ ರಾಜ್ಯದಲ್ಲಿ ನಿಲ್ಲಿಸಿ ಅವನಲ್ಲಿಎಲೈ ಮಹಾನುಭಾವನೇ ನಮ್ಮ ರಾಜನನ್ನು ಅಚಾನಕವಾಗಿ ಮೃತ್ಯುವು ನುಂಗಿಬಿಟ್ಟಿತು. ಈಗ ನೀನೇ ನಮ್ಮ ರಾಜನಾಗಿ ನಮ್ಮ ರಾಜ್ಯವನ್ನು ಕಾಪಾಡಬೇಕು. ನಿನ್ನನ್ನು ಹುಡುಕಿಕೊಂಡು ಬಂದಿರುವ ಐಶ್ಚರ್ಯ ಲಕ್ಷ್ಮಿಯನ್ನು ಬೇಡ ಎನ್ನಬೇಡಎಂದು ಬೇಡಿದರು. ಕೆಲ ಕಾಲ ಯೋಚಿಸಿದ ಭಗೀರಥನು ಅವರ ಮಾತಿಗೆ ಒಪ್ಪಿ ರಾಜನಾದನು. ಅಚಾನಕವಾಗಿ ಬಂದ ರಾಜ ಪದವಿಯಿಂದ ಭಗೀರಥನು ಬದಲಾಗದೇ ಯಾವ ಸಮಯದಲ್ಲಿ ಯಾವ ಕೆಲಸವನ್ನು ಹೇಗೆ ಮಾಡಬೇಕೋ ಹಾಗೆ ಮಾಡಿಕೊಂಡು ತೃಪ್ತನಾಗಿದ್ದನು.

ಕೆಲ ಕಾಲದ ನಂತರ ಸಾಗರವನ್ನು ಅಳೆಯಲು ಹೋಗಿ ಕಪಿಲರ ಕೋಪಾಗ್ನಿಗೆ ತುತ್ತಾಗಿದ್ದ ತನ್ನ ಪೂರ್ವಜರ ಸಗರ ಪುತ್ರರನ್ನು ಗಂಗೋದಕವು ಉದ್ಧಾರ ಮಾಡುವುದು ಹೇಗೆ ಎಂದು ಚಿಂತಿಸಿದನು. ಆಗ ದೇವನದಿಯು ಭೂಮಿಯಲ್ಲಿ ಪ್ರವಹಿಸುತ್ತಿರಲಿಲ್ಲ. ಆದ್ದರಿಂದ ದೇವನದಿಯಾದ ಗಂಗೆಯನ್ನು ಭೂಮಿಗೆ ಕರೆತರಬೇಕೆಂದು ಸಂಕಲ್ಪಿಸಿದನು. ಅಂತೆಯೇ ರಾಜ್ಯವನ್ನು ಮಂತ್ರಿಗಳ ಸುಪರ್ದಿಗೆ ಒಪ್ಪಿಸಿ ಗಂಗೆಯನ್ನು ಭೂಮಿಗೆ ತಂದೇ ತೀರಬೇಕೆಂದು ತಪಸ್ಸಿಗೆ ಕುಳಿತನು. ಸಾವಿರಾರು ವರ್ಷಗಳು ತಪಸ್ಸು ಮಾಡಿ ಬ್ರಹ್ಮನನ್ನೂ, ಗಂಗೆಯನ್ನೂ, ಶಿವನನ್ನೂ ಒಲಿಸಿ ಗಂಗೆಯನ್ನು ಭೂಮಿಗೆ ತಂದನು. ಅಂದಿನಿಂದ ಗಂಗಾದೇವಿಯು ಮಹಾತ್ಮರ ಬಹುಗುಣಗಳ ಸಂತತಿಯೋ ಎಂಬಂತೆ ತರಂಗ ಭಂಗಗಳಿಂದ ಸೊಗಸಾಗಿ ಹಗತ್ಪತಿಯಾದ ಚಂದ್ರಶೇಖರನ ಅಂಗಸಂಗವುಳ್ಳವಳಾಗಿ ಆಕಾಶದಿಂದ ತ್ರಿಮಾರ್ಗಗಾ ಆದ ಗಂಗೆಯು ಭೂಮಿಗೆ ಇಳಿದಳು. ಆವಳು ಇಳಿದದ್ದು ಭಗೀರಥ ಮಹಾಋಷಿಯ ತಪಸ್ಸನ್ನು ಸಾರ್ಥಕ ಪಡಿಸುವಂತಿತ್ತು.

ರಾಜನಾಗಲೀ, ಸಾಮಂತನಾಗಲೀ, ಮಂತ್ರಿಯಾಗಲೀ ಇಲ್ಲಾ ಸಾಮಾನ್ಯ ಪ್ರಜೆಯಾಗಲೀ ಯಾವ ಕೆಲಸವನ್ನು ಮಾಡಬೇಕೆಂದು ಸಂಕಲ್ಪ ಮಾಡುವನೋ ಆಗ ಕೆಲಸದ ಮೇಲೆ ತನ್ನ ಸಂಪೂರ್ಣ ಹಿಡಿತವನ್ನು ಇಟ್ಟುಕೊಂಡು ಎಷ್ಟೇ ಕಷ್ಟವಾದರೂ ನಿಷ್ಠೆ ಬದಲಿಸದೇ ಇರಬೇಕು. ರಾಜನಾಗಿರುವ ಸಂದರ್ಭದಲ್ಲಿ ಸಮದೃಷ್ಟಿ ಇರಬೇಕಾದುದು ಅತ್ಯಂತ ಅವಶ್ಯಕ. ಅವನ ಉದ್ಧೇಶ ಸ್ವಾರ್ಥರಹಿತವಾಗಿರಬೇಕು, ಸಮಾಜಮುಖಿಯಾಗಿರಬೇಕು, ಪ್ರಜೆಗಳ ಉದ್ಧಾರಕ್ಕಾಗಿರಬೇಕು. ಹೀಗಿರುವ ಪ್ರಯತ್ನಕ್ಕೆ ಯಶಸ್ಸು ಸದಾ ಕಟ್ಟಿಟ್ಟ ಬುತ್ತಿ ಎಂದರು. ಅಯ್ಯಾ ರಾಮ, ನೀನೂ ಭಗೀರಥನಂತೆಯೇ ಸಮದೃಷ್ಟಿ ಇಟ್ಟು ಆಯಾ ಕಾಲಕ್ಕೆ ಪ್ರಾಪ್ತವಾಗುವ ಕಾರ್ಯಗಳನ್ನು ಮಾಡಿಕೊಂಡು ಅವನಂತೆಯೇ ಶಾಶ್ಚತ ಹೆಸರನ್ನು ಪಡಿ ಎಂದರು.

Comments