ನುಡಿಗೊಂದಲಂ ಗೆಲ್ಗೆ


ನುಡಿಗೊಂದಲಂ ಗೆಲ್ಗೆ
ಹಾಸ್ಯ ಲೇಖನ - ಅಣುಕು ರಾಮನಾಥ್ 

ಕೂತ್ಕೊಳಿ. ಕಡುಬು ಕೊಡ್ತೀನಿಎಂದರು ಗೆಳೆಯ ಮದ್ದೂರಾಯರು. ತೀವ್ರ ಡಯಾಬಿಟಿಸ್ ಇರ್ದೊಡಂ ನೆನೆವುದೆನ್ನ ಮನಂ ಸಿಹಿತಿಂಡಿ ರುಚಿಗಳಂ. ಇಂತಿಪ್ಪ ಕಾಲದೊಳ್ ಕಡುಬಂ ಒಲ್ಲೆನೆಂಬುದು ಶಕ್ಯಮೇ? ‘ಅಸ್ತುಎಂದೆ. ಮನದ ಸ್ಕ್ರೀನಿನ ಮೇಲೆ ಕರಿಗಡುಬಿನ ಚಿತ್ರ ಮೂಡಿತು. ಆಹಾ! ಸಿರಿವಂತಿಕೆಯ ಬಣ್ಣಗಳ ಮಿಶ್ರಣವದು. ಹದವಾಗಿ ಕರಿದುದರಿಂದ ಹೊರಗೆ ಚಿನ್ನ; ಹಿತವಾದ ಸಕ್ಕರೆ-ಕೊಬ್ಬರಿ ಮಿಶ್ರಣದಿಂದ ಒಳಗೆ ಬೆಳ್ಳಿ. ತಟ್ಟೆಯಲ್ಲಿ ತಲೆಕೆಳಗಾಗಿ ಕುಳಿತಾಗ ಸುಂದರ ತುಟಿಯನ್ನು ಹೋಲುವ ಆಕಾರ. ಏಂ ಪೇಳಲಿ ಕರಿಗಡುಬ ಸೊಬಗಂ! ಅದು ಮನವನಾವರಿಸುವ ಪರಿಯಂ

ಸ್ವಲ್ಪ ತಣ್ಣಗಿದೆಎಂದರು ಮದ್ದೂರಾಯರು. ಬೀರುವಿನಲ್ಲಿ ತಣ್ಣಗೆ ಕುಳಿತ ಚಿನ್ನದಂತೆ ಇರುತ್ತದೆ. ಪರವಾಯಿಲ್ಲ ಎಂದಿತು ಮನಸ್ಸು. ಅದನ್ನೇ ತುಟಿಯೂ ಒದರಿತು.
ಒಳಗಿನಿಂದ ಬಂದ ಪ್ಲೇಟಿನಲ್ಲಿ ಎಲೆಯೊಂದರ ಮೇಲೆ ಪುಟ್ಟ ಬಿಳಿಯ ಆಕಾರವೊಂದು ಮಲಗಿತ್ತು. ನರ್ಸಿಂಗ್ ಹೋಮಿನ ಹಸಿರು ಬೆಡ್ಷೀಟ್ ಮೇಲೆ ಬಿಳಿಹೊದಿಕೆ ಹೊದಿಸಿ ಮಲಗಿಸಿದ ದೇಹವನ್ನೇ ಕಂಡಂತಾಯಿತು. “ಓಹ್! ಇದು ಕರಿಗಡುಬಲ್ಲ. ನಾಗರ ಪಂಚಮಿಯಂದು ಮಾಡುವಬಟ್ಟೆ ಕಡುಬು’. ಒಳಗೆ ಬೆಲ್ಲದ ಹೂರಣ ಇರುವುದು ಖಚಿತಎಂದಿತು ಮನಸ್ಸು. ಕೈ ಚಾಚಿ ಮೆಲ್ಲಗೆ ತುಣುಕನ್ನು ಸವರಿದೆ. ಕಡುಬು ಈಜಿಪ್ಟಿನ ಹಲವಾರು ವರ್ಷಗಳ ಹಳೆಯ ಮಮ್ಮಿಗಳಷ್ಟು ತಣ್ಣಗೆ ಕೊರೆಯುತ್ತಿತ್ತು. ‘ಏನಿದು?’ ಎಂದೆ.
ಕೊಟ್ಟೆ ಕಡುಬು
ನೀವು ಕೊಟ್ಟಿರಿ. ನಾನೂ ತೊಗೊಂಡೆ. ಆದರೆ ಇದು ಕಡುಬೇ?’
ಇದರ ಹೆಸರೇ ಕೊಟ್ಟೆ ಕಡುಬುವಿವರಿಸಿದರು ಮದ್ದೂರಾಯರು. ಅದರ ಗಟ್ಟಿತನವನ್ನು ಪರೀಕ್ಷಿಸಲು ತೋರುಬೆರಳಿನಿಂದ ಮೆಲ್ಲಗೆ ಒತ್ತಿದೆ. ನಂತರ ಜೋರಾಗಿ ಒತ್ತಿದೆ. ತದನಂತರ ಹೆಬ್ಬೆಟ್ಟಿನಿಂದ ಬಲ ಬಿಟ್ಟು ಒತ್ತಿದೆ. ಆಹಾ! ಗಟ್ಟಿತನದಲ್ಲಿ ಡಬ್ಲ್ಯೂಡಬ್ಲ್ಯೂಎಫ್ ದೈತ್ಯ ಕಾಲಿಯ ರಟ್ಟೆಯಷ್ಟೇ ಗಟ್ಟಿ ಕೊಟ್ಟೆ!
ಕೊಟ್ಟೆ ಕೊಡುವುದಕ್ಕೇ ಒಂದು ರೀತಿ ಇದೆಯಂತೆ. ಅದನ್ನು ಯಾವುದೋ ಎಲೆಯಲ್ಲಿ ಬಂಧಿಸಿ, ಎಲೆಗೆ ಕಡ್ಡಿಗಳನ್ನು ಸ್ಟಾಪ್ಲರ್ಗಳಂತೆ ಸಿಕ್ಕಿಸಿರುತ್ತಾರಂತೆ. ಇವರೇ ಕೊಟ್ಟೆಕಡುಬನ್ನು ಕಡ್ಡಿಮುಕ್ತ, ಎಲೆಮುಕ್ತ ಮಾಡಿ ನನ್ನ ಎದುರಿಗೆ ಇರಿಸಿದ್ದಂತೆ. ಬೆಂಗಳೂರಿನ ಸಕ್ರ್ಯುಲರ್ ಇಡ್ಲಿ ಮಂಗಳೂರಿಗೆ ಹೋಗಿ ಶೇಪ್ ಕಳೆದುಕೊಂಡು, ಶೀರ್ಷಾಸನ ಹಾಕಿದ ಲೋಟದ ಆಕಾರ ಪಡೆದುಕೊಟ್ಟೆಕಡುಬುಆಗಿತ್ತು. ಕರಿಗಡುಬಿನೊಡನೆಯ ನನ್ನ ಮಾನಸಿಕ ರೋಮಾನ್ಸ್ಗೆ ಕೊಟ್ಟೆಕಡುಬು ಅನಾರ್ಕಲಿಗೆ ಕಟ್ಟಿದ ಗೋಡೆಯಂತಾಗಿತ್ತು.
ಮದ್ದೂರಾಯರಿಗೆಪ್ರಾಜೆಕ್ಟ್ ಕಡುಬುಫೇಲ್ಯೂರ್ ಆದದ್ದು ತಿಳಿಯಿತು. ‘ಬಿಡಿ. ಅದು ಮೂರು ದಿನ ಫ್ರಿಜ್ಜಲ್ಲಿ ಇದ್ದದ್ದರಿಂದ ಕೊಂಚ ಗಟ್ಟಿ ಆಗಿರಬಹುದು. ನಿಮಗೆ ಬಾಯಾರಿಕೆಗೆ ಬೋಂಡ ಆಗಬಹುದೆ?’ ಎಂದರು.
ಬಾಯಾರಿಕೆಗೆ ಬೋಂಡ? ವಡೆ, ಬಜ್ಜಿಗಳ ಕಸಿನ್ ಆದ ಬೋಂಡವನ್ನು ತೃಷೆ ಆದಾಗ ತಿನ್ನುವರೆ? ಬೋಂಡ ತಿಂದಮೇಲೆ ಖಾರ ಆರಿಕೆಗೆ ಅರ್ಥಾತ್ ಖಾರ ತಗ್ಗುವುದಕ್ಕೆ ಏನಾದರೂ ಕುಡಿದೇವು. ‘ತೃಷೆಗೆ ಬೋಂಡಎಂದರೆ ಕಡುಬಿನಂತಹದ್ದೇ ಏನೋಮೀನಿಂಗ್ ಡಿಫೆಕ್ಟ್ಇರಬಹುದು ಎನಿಸಿ, ‘ಬೋಂಡ ಎಲ್ಲಿಯದು?’ ಎಂದೆ.
ಮನೆಯದೇ.’
ಜಾಸ್ತಿ ಬೇಡ. ನಾಲ್ಕೈದು ಸಾಕು. ಒಂದು ಪ್ಲೇಟಲ್ಲಿ ತನ್ನಿ
ಎಂಥದು ಮಾರಾಯ್ರೇ.... ಐದು ಬೋಂಡ ಕುಡಿಯೋದು ಉಂಟಾ? ನಿಮಗೆ ಮಂಡೆ ಸಮ ಉಂಟಾ? ಐದು ಬೋಂಡ ಒಂದು ಪ್ಲೇಟಲ್ಲಿ ಕೂರ್ತದಾ? ಅದಕ್ಕೊಂದು ಪರಾತವೇ ಬೇಕಾದೀತುಕಿಡಿಕಾರಿದರು ಮದ್ದೂರಾಯರು.
ಕುಡಿಯುವ ಬೋಂಡಾ? ಹೇಗಿರತ್ತೆ ಅದು?’
ತೆಂಗಿನ ಮರ ಕಂಡಿಲ್ಲವಾ ನೀವು? ತೆಂಗು ಮೆಚ್ಯೂರ್ ಆಗಕ್ಕೆ ಮುಂಚೆ ಬೋಂಡ ಅಲ್ಲವಾ....’
ಗುಡ್ ಓಲ್ಡ್ ಎಳನೀರು ಅಥವ ಸೀಯಾಳವನ್ನು ಇವರು ಬೊಂಡ ಅನ್ನುತ್ತಾರೆ. ದೀರ್ಘಾಕ್ಷರಿ ಮದ್ದೂರಾಯರ ಬಾಯಲ್ಲಿ ಅದು ಬೋಂಡ ಆಗಿತ್ತು.
ಅವರಿಗೆ ಎಂಥ ಪಿರಿಪಿರಿ ಮಾಡ್ತೀರಿ ಮಾರಾಯ್ರೇ... ಅವರಿಗೆ ಬಾಯಾರಿಕೆ ಅಂದ್ರೆ ತಿಳೀವಲ್ದು... ಕುಡೀಲಿಕ್ಕೆ ಅಂತ ಕೇಳ್ಬೇಕು. ನಿಮಗೆ ಕುಡೀಲಿಕ್ಕೆ ಕಷಾಯ ಆದೀತಾ?’ ಎಂದರು ಮಿಸೆಸ್ ಮದ್ದೂರಾಯ.

ಬಾಲ್ಯದಲ್ಲಿಇದೆಂತದ್ದು ಮಾಡಿದ್ದೀಯೇ? ಸಕ್ಕರೆ ಹಾಕೋದೇ ಮರೆತೆಯೇನು? ಕಪ್ಪಟ್ಟ ಕಷಾಯ ಇದ್ದಹಾಗಿದೆಎನ್ನುತ್ತಾ ಮುಖವನ್ನು ಹರಳೆಣ್ಣೆ ಕುಡಿದವರಿಗಿಂತ ಹುಳ್ಳಗೆ ಮಾಡಿಕೊಂಡಿದ್ದ ಅಜ್ಜನ ಮುಖ ನೆನಪಿಗೆ ಬಂತು. ‘ಕಷಾಯ ಅಂದರೆ?’ ಎಂದೆ. ಮಿಸೆಸ್ ಮದ್ದೂರಾಯ ಇಡೀ ರೆಸಿಪಿಯನ್ನೇ ಮುಂದಿರಿಸಿದಾಗಲೇ ನನಗೆ ಅದು ಕುಡಿಯೆಬಲ್ ಡ್ರಿಂಕು ಅನಿಸಿದ್ದು.
ನಿಮಗೆ ತೊಡೆದೇವು ಸರಿಯಾದೀತೇ?’ ಎಂದರು ಮಿಸೆಸ್ ಮದ್ದೂರಾವ್. ನನಗೆ ಮಹದೇವು, ಪ್ರಭುದೇವು, ಲಿಂಗದೇವುಗಳು ಗೊತ್ತು. ಆದರೆ ತೊಡೆದೇವು? ಮಹಿಳೆಗೆ ಉತ್ತರಿಸುವುದಕ್ಕೆ ಮುನ್ನಫೋನ್ ಫ್ರೆಂಡ್ಆಪ್ಷನ್ ತೆಗೆದುಕೊಳ್ಳಲು ನಿರ್ಧರಿಸಿ, ನನ್ನ ಸ್ನೇಹಿತನೂ, ಮಾನವ ಗೂಗಲ್ಲೂ ಆದ ಗೋಪಿಯನ್ನು ಕೇಳಿದೆ. ‘ತೊಡೆದೇವು? ಲಿಂಗಾಯಿತರು ಕೈಯಲ್ಲಿ ಲಿಂಗವನ್ನು ಇಟ್ಟುಕೊಂಡು ಪೂಜೆ ಮಾಡೋ ತರಹಾನೇ ಇನ್ಯಾರೋ ತೊಡೆಯ ಮೇಲೆ ದೇವರನ್ನ ಇಟ್ಕೊಂಡು ಪೂಜೆ ಮಾಡ್ತಾರೆ ಅನ್ಸತ್ತೆ. ನನಗೆ ಅದರ ಬಗ್ಗೆ ಮಾಹಿತಿ ಇಲ್ಲಎಂದನವ. ‘ಕೋಟ್ಯಧಿಪತಿಕಾರ್ಯಕ್ರಮದಲ್ಲಿ ಇಲ್ಲದೆ ಹೊರಗಿದ್ದುದರಿಂದಫೋನ್ ಅನದರ್ ಫ್ರೆಂಡ್ಅನ್ನು ಆಯ್ಕೆ ಮಾಡಿದೆ. ನಮ್ಮ ಗುಂಪಿನ ವ್ಯಾಕರಣ ಪಂಡಿತನಾದ ವಾಸಣ್ಣತೊಡೆದೇವು ಅಂದರೆ ಲೇಪಿಸಿಯೇವು, ಪರಿಹರಿಸಿಯೇವು ಎಂದೆಲ್ಲ ಅರ್ಥಗಳಿವೆಎಂದ. ಆದರೆ ಮಿಸೆಸ್ ಮದ್ದೂರಾಯನಿಮಗೆ ಲೇಪನವು ಸರಿಯಾದೀತೇ?’ ಎಂದೋ, ‘ನಿಮಗೆ ಪರಿಹಾರವು ಸರಿಯಾದೀತೇ?’ ಎಂದು ಕೇಳಲು ಕಾರಣಗಳೇ ಇಲ್ಲವಲ್ಲ. ಕಡೆಗೆ ಆಕೆಯೇತೊಡೆದೇವು ಎಂದರೆ ಕಬ್ಬಿನ ಹಾಲಿನಿಂದ ಮಾಡಿದ ಸ್ವೀಟ್ ಕಣ್ರೀಎಂದು ರಹಸ್ಯ ಸ್ಫೋಟಿಸಿ ಬಾಯಿ ಸಿಹಿ ಮಾಡಿಸಿದರು.
ನಾಳೆ ನಮ್ಮ ಮನೆಯಲ್ಲಿ ಚೂಡಾಕರ್ಮ ಇದೆಎಂದರೆ ಹಳೆ ಮೈಸೂರಿನ ಕಡೆಯವರು ಮಗುವಿಗೆ ಕೂದಲು ತೆಗೆಯುವ/ತಲೆ ಬೋಳಿಸುವ ಸಮಾರಂಭವೆಂದು ಅರಿಯುತ್ತಾರೆ. ಆದರೆ ಉತ್ತರಕನ್ನಡಿಗರುಚೂಡಾ ಏನೋ ಖರೇ. ಕರ್ಮ ಎಂತದಲೇ ಯಪ್ಪಾ... ಕರ್ಮ ಅಂದ್ರ ಕೆಲಸ ಅನ್ನೂ ಅರ್ಥದಾಗ ಚೂಡಾ ತಯಾರು ಮಾಡದೇನಲೇ?’ ಎಂದು ಕೇಳಿಯಾರು. ದಕ್ಷಿಣಕನ್ನಡಿಗರು ಗಡ್ಡಮೀಸೆಗಳನ್ನು ಶೇವ್ ಮಾಡಿಸಿಕೊಂಡರೆ ಉತ್ತರಕನ್ನಡಿಗರುಕಷ್ಟಮಾಡಿಸಿಕೊಳ್ಳುತ್ತಾರೆ. ಬೆಂಗಳೂರಿಗಸೀಟುಎಂದರೆ ಬಸ್ಸೋ, ವಿದ್ಯಾಸಂಸ್ಥೆಯೋ, ಇನ್ನೆಲ್ಲೋ ಸೀಟ್ ಬುಕ್ ಮಾಡಿಸುವ ಸಂಬಂಧದ ಮಾತನಾಡಿದ್ದಾನು. ಆದರೆಸೀಟುಎನ್ನುವುದಕ್ಕೆಬಳಿಎಂದೂ ಅರ್ಥವಿದೆ. ‘ಪ್ರಸಾದ ತಿಂದ ಕೈಯನ್ನು ತೊಳೆದುಕೊಳ್ಳಕ್ಕೆ ನೀರೇ ಇಲ್ಲವಲ್ಲೋಎಂದು ಪೇಚಾಡಿದಾಗ ಭಕ್ತಶಿರೋಮಣಿಯೊಬ್ಬನೋ ಪ್ರಾಬ್ಲಂ. ನಿನ್ನ ಕೈಯನ್ನು ದೇವಸ್ಥಾನದ ಕಂಬಕ್ಕೆ ಸೀಟು. ನಂಬಳ್ಕು ಕಂಬಮೇ ತಣ್ಣಿಎಂದು ನುಡಿದಿದ್ದ. ಗಂಗಾವತಿಯಲ್ಲಿ ರಗಡ್ ಮಂದಿ ಸೇರಿದ್ದಾರೆ ಎಂದು ಬೆಂಗಳೂರಿಗನಿಗೆ ಹೇಳಿದರೆ ಅದು ಅವನಿಗೆ ಇಂಗ್ಲಿಷ್ರಗೆಡ್ಅನ್ನಿಸಿ ಅಲ್ಲಿ ಸೇರಿರುವವರೆಲ್ಲ ಒರಟು ಜನರೇ ಎಂದು ತಿಳಿದುಕೊಂಡಾನು. ‘ಅವನಿಗೆ ತಿಂಡಿ ಜಾಸ್ತಿ ಆಗ್ಯದಎಂದರೆ ಉತ್ತರಕನ್ನಡಿಗರುತೆವಲು ಹೆಚ್ಚಾಗಿದೆಎಂದೂ, ಹಳೆ ಮೈಸೂರಿನವರುಅಜೀರ್ಣವಾಗಿದೆಎಂದೂ ತಿಳಿದಾರು.
ಕರುನಾಡಿನಲ್ಲಿ ಪ್ರತಿ ಐವತ್ತು ಕಿಲೋಮೀಟರ್ ದೂರಕ್ಕೆ ಭಾಷೆ ಬದಲಾಗುತ್ತದಂತೆ. ಒಂದು ಪ್ರಾಂತ್ಯದಲ್ಲಿಸಲಅನ್ನುವುದು ಇನ್ನೊಂದೆಡೆಬಾರಿ’, ಮತ್ತೊಂದೆಡೆದಪ’, ಮಗದೊಂದೆಡೆಕಿತ’. ಒಂದು ಕಡೆ ಬಟ್ಟೆ ಒಗೆದರೆ ಬಟ್ಟೆ ಕ್ಲೀನ್ ಆಗುತ್ತದೆ; ಇನ್ನೊಂದು ಕಡೆ ಬಟ್ಟೆ ಒಗೆದರೆ ಒಗೆದುದನ್ನು ಕ್ಯಾಚ್ ಹಿಡಿಯಲು ಜನ/ಮಂದಿ ನಿಂತಿರುತ್ತಾರೆ. ಚಾಮರಾಜನಗರದಿಂದ ಬೀದರ್ಗೆ ಹೋದ ಕನ್ನಡಿಗ ಅಲ್ಲಿನ ಭಾಷೆ ಕನ್ನಡ ಅಲ್ಲವೇ ಅಲ್ಲ ಎಂದು ಅಫಿಡವಿಟ್ ಕೊಡಲು ತಯಾರಾಗುವ ಮಟ್ಟಕ್ಕೆ ಭಾಷೆಯಲ್ಲಿ ವ್ಯತ್ಯಾಸವಿದೆ. ಬೀದರಿನವ ಉಡುಪಿಗೆ ಹೋದರೂ ಅದೇ ಪರಿಸ್ಥಿತಿಯೇ. ಎತ್ತಣಿಂದೆತ್ತಣಕ್ಕೂ ನುಡಿಯಾಟ, ನುಡಿಮಾಟ, ನುಡಿಯೋಟಗಳಲ್ಲಿ ಗೊಂದಲವೇ.... ಹ್ಞಾಂ. ಗೊಂದಲ ಎಂದರೂ ನಾಟ್ಯವೆಂದರ್ಥವಲ್ಲವೇ.... ತಪ್ಪೇನಿಲ್ಲ. ಇವೆಲ್ಲವೂ ಪದಗಳ ನಾಟ್ಯಗಳೇ.... ಚಟುಲ ಲಲಿತ ಉಲಿತಕೆ ಉಘೇ... ನುಡಿಗೊಂದಲಂ ಗೆಲ್ಗೆ.

Comments

  1. ಭಾಷೆಗಳಲ್ಲಿ ಗೊಂದಲಕ್ಕೆ ಬರವೇ? ಆದರೆ ಅದನ್ನು ಸನ್ನಿವೇಶಕ್ಕನುಗುಣವಾಗಿ ಕೂಡಿಸಿ ಸೇರಿಸಿ ಹಾಸ್ಯ ಬೆರಸಿ ಚೆನ್ನಾಗಿ ಬರೆದಿದ್ದೀರ ಸಾರ್. ಕಡುಬು ಮತ್ತು ಬೊಂಡ ನಿರೀಕ್ಷಿಸುವ ಕಲ್ಪನೆ ವರ್ಣನೆ ಬಲು ಸೊಗಸಾಗಿದೆ.

    ReplyDelete
  2. ಬರಹಗಾರ ಎಂದಿಗೂ ಅಂಬೆಗಾಲಿನವನೇ. ಪ್ರೋತ್ಸಾಹದ ನುಡಿ, ಮೆಚ್ಚುಗೆಯ ಮಾತುಗಳೇ ನಮಗೆ ಟಾನಿಕ್. ಈ ಟಾನಿಕ್ ಡೌನ್ ಅಂಡರ್ ನಲ್ಲಿ ಯಥೇಚ್ಛ. ಧನ್ಯೋಸ್ಮಿ.

    ReplyDelete
  3. How do you come up with these super humor thoughts Mr Ramnath. Your writing style and vocabulary bank is amazing. Do you write for any other news letters or magazines?

    ReplyDelete
  4. I have been writing for Sudha magazine since 11 years. As to how I come up with such thoughts, it's a mystery to me too. It just happens. Thank you for your kind comments.

    ReplyDelete

Post a Comment