ಪರಿಚಯ


ಪರಿಚಯ
ಹಾಸ್ಯ ಹರಟೆ - ಶ್ರೀ  ಅಣುಕು ರಾಮನಾಥ್  


ಪರಿಯೋ... ಚಯವೋ... ಪರಿಚಯದ ಪರಿಪರಿಯೋ....!
ಪ್ರೊಫೆಸರ್  ಅ  ರಾ ಮಿತ್ರ 
ತಮ್ಮ ಪರಿಚಯ?
ಹೀಗೆ ಕೇಳಿದವರಿಗೆ ಥಟ್ಟನೆ ನಿಮ್ಮ ಹೆಸರನ್ನು ಹೇಳಿಬಿಡುವಿರಿ. ಪರಿಚಯ ಎಂದರೆ ಇರುವ ಅರ್ಥಗಳೂ ಗುರುತು, ಸಲಿಗೆ, ಅರಿವು ಎಂದು. ಪೂರ್ಣ ಪದಕ್ಕೇನೋ ಇಷ್ಟೇ ಅರ್ಥ. ಆದರೆ ನನ್ನ ಗುರುಗಳು ಪ್ರೊಫೆಸರ್ .ರಾ. ಮಿತ್ರರು. ನಾನು ಅವರಿಗೆ ನನ್ನ ಹೆಸರನ್ನು ಹೇಳಿದ ಮೂರು ದಿನಗಳ ನಂತರ ಮತ್ತೆ ನಮ್ಮಿಬ್ಬರ ಭೇಟಿ. ‘ರಾಮನಾಥ, ರಾಮನಾಥ್, ರಾಮ್ನಾಥ್, ರಾಮ್ನಾಥ; ಇವುಗಳಲ್ಲಿ ನಿನ್ನ ಹೆಸರು ಯಾವುದು?’ ಎಂದರು. ‘ಹೇಗಾದರೂ ಕರೆಯಿರಿ ಸರ್ಎಂದರೆ, ‘ಹಾಗಲ್ಲಯ್ಯ. ನಾನು ಛಂದಸ್ಸಿಗೆ ಹೆಸರಾದವನು. ಹೆಸರುಗಳಲ್ಲಿ ಕ್ರಮವಾಗಿ 6, 5, 4, 5 ಮಾತ್ರೆಗಳು ಬರುತ್ತವೆ. ಸರಿಯಾದ ಮಾತ್ರೆ ತಿಳಿಯದಿದ್ದರೆ ನನ್ನ ಮನಸ್ಸಿಗೆ ಕಿರಿಕಿರಿಯಾಗಿ ಅದಕ್ಕೊಂದಿಷ್ಟು ಮಾತ್ರೆ ತೊಗೋಬೇಕಾಗತ್ತೆಎಂದರು. ಅಕ್ಷರಮಾಲೆ, ವೃತ್ತ, ಹಳೆಗನ್ನಡ, ವ್ಯಾಕರಣಗಳಲ್ಲಿ ಸಿಲುಕಿರುವ ಜನರು ಸಾಮಾನ್ಯ ವಿಷಯವನ್ನು ಹೇಳಬೇಕಾದರೂ ತಮ್ಮ ಪರಿಧಿಯಲ್ಲೇ ಸಿಲುಕಿ ಒದ್ದಾಡುವುದನ್ನು ಅವರಪಂಡಿತನ ಪರದಾಟಲೇಖನವನ್ನು ಓದಿಯೇ ತಿಳಿಯಬೇಕು, ಸವಿಯಬೇಕು. ಮಿತ್ರರದು ಛಂದಸ್ಸಿನ ಬದ್ಧತೆಯಾದರೆ ನನ್ನದು ಪದಗಳನ್ನು ಒಡೆದೊಡೆದು ಹೊಸ ಅರ್ಥಗಳನ್ನು ಹುಡುಕುವ ಪನ್ ಬದ್ಧತೆ.  ಆದ್ದರಿಂದಲೇ ಪರಿಚಯಪದ ನನಗೆ ಗೊಂದಲದ ಗೂಡಾಗಿ ಕಾಣಿಸಿದ್ದು.
ಪರಿಚಯ ಎನ್ನುವ ಪದದಲ್ಲಿ ಎರಡು ಪದಗಳಿವೆ. ಪರಿ ಮತ್ತು ಚಯ. ಪರಿಗೆ ನಾಮಪದವಾಗಿ ಆರು ಅರ್ಥಗಳು, ಕ್ರಿಯಾಪದವಾಗಿ 13. ಚಯ ಎನ್ನುವುದಕ್ಕೆ 13 ಅರ್ಥಗಳು. ಪರಿ+ಚಯ=ಪರಿಚಯ ಎನ್ನುವುದಾದರೆ 19ಕ್ಕೆ 13ರನ್ನು ಸೇರಿಸಬೇಕಲ್ಲವೆ. ಯಾವುದನ್ನು ಎಲ್ಲಿಗೆ ಸೇರಿಸುವುದು? ಪರಿ=ಪ್ರಮುಖ ಉದ್ದೇಶ; ಚಯ=ರಾಶಿ ಎಂದರೆ ನಿಮ್ಮ ಪ್ರಮುಖ ಉದ್ದೇಶದ ರಾಶಿ ಏನು ಎಂದು ಕೇಳಿದಂತಾಯಿತೆ? ರಾಶಿ ಎಂದರೆ ಒಟ್ಟಲು, ಗುಂಪು ಎಂಬ ಅರ್ಥದಲ್ಲಿ ತೆಗೆದುಕೊಳ್ಳಬೇಕೋ, ಮೇಷ, ವೃಷಭ, ಮಿಥುನ, ಕಟಕ, ಇತ್ಯಾದಿ ರಾಶಿಗಳನ್ನು ತೆಗೆದುಕೊಳ್ಳಬೇಕೋ ಎಂಬುದೇ ಗೊಂದಲವಾದ್ದರಿಂದ ಅದನ್ನು ಬಿಟ್ಟು ಮುಂದುವರಿದೆ.
ಪರಿಯ ಎರಡನೆಯ ಅರ್ಥಪ್ರೀತಿಸುವವನು’. ‘ಚಯಪದದಗುಂಪುವಿಗೆ ಅದನ್ನು ಸೇರಿಸಿದರೆಪರಿಚಯ ಅರ್ಥಪ್ರೀತಿಸುವವನ ಗುಂಪುಎಂದಾಗುವುದಲ್ಲ; ಹಾಗೆಂದರೆ ಅವನು ಗುಡ್ ಓಲ್ಡ್ ಪ್ರೇಮಿಗಳಾದ ಲೈಲಾ-ಮಜನೂ, ಹೀರ್-ರಾಂಜಾ, ಗುಂಪಿಗೆ ಸೇರಿದವನು ಎಂದಾಗುವುದೋ, ಅಥವಪ್ರೀತ್ಸೇ ಪ್ರೀತ್ಸೇಎಂದು ಮೋರಿ, ಕುಪ್ಪೆ, ತಿಪ್ಪೆಗಳಲ್ಲಿ ಎದ್ದುಬಿದ್ದಾಡುವವರ ಗುಂಪಿಗೆ ಸೇರಿದವನೋ ಎಂದು ಅರ್ಥವಾದೀತೇನು? ‘ಪರಿಪದದ ನಾಮಪದದಲ್ಲಿನ ಇನ್ನೂ ನಾಲ್ಕು ಅರ್ಥಗಳನ್ನುಚಯ ಇನ್ನೂ ಹನ್ನೊಂದಕ್ಕೆ ಹೋಲಿಸಿದರೆ ತಲೆ ಕೆಟ್ಟು ಮೊಸರಿನ ಗಡಿಗೆ ಆಗುವುದು ಖಂಡಿತ.
ಪರಿ ಎಂಬ ಕ್ರಿಯಾಪದದ 13 ಅರ್ಥಗಳೊಡನೆ ಚಯ ಎಂದರೆ ಗುಂಪು ಎಂಬ ಒಂದೇ ಅರ್ಥವನ್ನು ಸೇರಿಸುವುದೆಂದು ತೀರ್ಮಾನಿಸಿದರೂ ಎಷ್ಟೊಂದು ವೈವಿಧ್ಯತೆ ಮೂಡುತ್ತದೆ ನೋಡಿ. ‘ಪರಿಎಂದರೆಪರಿಹರಿಸುಎಂದು ತೆಗೆದುಕೊಂಡಾಗಪರಿಚಯಎಂದರೆ ಪರಿಹರಿಸುವವರ ಗುಂಪು ಎಂದಾಯಿತು. ನೀರು ನುಗ್ಗಿ, ಗುಡ್ಡ ಕುಸಿದು, ಬೆಳೆ ಹಾಳಾಗಿರುವ ದಿನಗಳಲ್ಲಿ ಪರಿಹರಿಸುವ ಗುಂಪು ಎಂದರೆ ಪರಿಹಾರ ನೀಡುವವರ ಗುಂಪು ಎಂದು ಒಂದು ಅರ್ಥವಾದರೆನೆರೆ ಪರಿಹಾರ’, ‘ಬರ ಪರಿಹಾರಗಳಿಗಾಗಿಯೇ ಕಾದು ಕುಳಿತಿದ್ದು, ಅವನ್ನು ಬಡಿದು ಬಾಯಿಗೆ ಹಾಕಿಕೊಳ್ಳುವ ಗುಂಪೂಪರಿಚಯವೇ ಆಗುವುದಲ್ಲ.
ಪರಿಎಂದರೆ ಚಲಿಸು. ಚಲಿಸುವ ಗುಂಪು ಎಂದರೆ ರೇಸ್ ಕುದುರೆಗಳ ಗುಂಪೇ? ಕೈ ತೋರಿಸಿದ ತಕ್ಷಣ ನಿಲ್ಲದೆ ಚಲಿಸುತ್ತಲೇ ಸಾಗುವ ಆಟೋದವರ ಗುಂಪೆ? ‘ಚಲ್ನಾ ಜೀವನ್ ಕೀ ಕಹಾನಿ; ರುಕ್ನಾ ಮೌತ್ ಕೀ ನಿಶಾನಿಎಂದ ರಾಜ್ಕಪೂರನ ಗುಂಪೆ? ಅಥವಚಲ್ ಚಲ್ ಚಲ್ ಮೇರೆ ಸಾಥಿಎನ್ನುತ್ತಾ ಜನಮನಸೆಳೆದ ರಾಜೇಶ್ ಖನ್ನನ ಗುಂಪೆ?
ಮೂರನೆಯ ಅರ್ಥವಾದ ಓಡು ಎಂಬುದನ್ನು ತೆಗೆದುಕೊಂಡರೆ ಮತ್ತಷ್ಟು ಪ್ರಶ್ನೆಗಳು! ಓಡು ಎಂದರೆ ವೇಗವಾಗಿ ಚಲಿಸು ಎಂದೂ, ತಲೆಬುರುಡೆ ಎಂದೂ ಅರ್ಥಗಳಿವೆ. ತಲೆಹೋಗುವ ಬುರುಡೆಯ ಕಥೆಯನ್ನು ಅತ್ತ ಬಿಟ್ಟು ರನ್ನಿಂಗನ್ನೇ ತೆಗೆದುಕೊಂಡರೂ (ರನ್ ಎಂದರೆ ಓಡು, ಪ್ರಕಾರ, ಸೀಳಿರುವ ಭಾಗ ಎಂದೆಲ್ಲ ಇದೆ. ಅರ್ಥಕ್ಕೆ ಇನ್ನೆಂದಾದರೂ ಬರೋಣ. ಸದ್ಯಕ್ಕೆ ವೇಗವಾಗಿ ಹೋಗುವುದು ಎಂಬ ಅರ್ಥವನ್ನೇ ಇಟ್ಟುಕೊಳ್ಳೋಣ) ಓಡುವ ಗುಂಪು ಎಂದರೆ ಮಾರ್ನಿಂಗ್ ಜಾಗರ್ಸೂ ಆಗಬಹುದು, ಬೋಲ್ಟೂ ಆಗಬಹುದು. ಓಹ್! ಬೋಲ್ಟ್ ಎಂದಾಗಲೂ ಎರಡು ಅರ್ಥಗಳು ಬಂದವಲ್ಲಚಿಲಕ ಮತ್ತು ವೇಗವಾಗಿ ಓಡು ಎನ್ನುವುದು! ‘ವೇಗವಾಗಿ ಓಡುಎಂಬ ಅರ್ಥದ ಹೆಸರನ್ನೇ ಇಟ್ಟುಕೊಂಡ ಉಸೇನ್ ಬೋಲ್ಟ್ ರನ್ನಿಂಗ್ನಲ್ಲಿ ಮೆಡಲ್ಗಳನ್ನು ಬಾಚಿಕೊಂಡದ್ದು (ಬಾಚಿಕೊಳ್ಳಲು ಅದೇನು ಅವನ ತಲೆಯ ಕೂದಲೆ ಎಂದು ಕೇಳಬೇಡಿ ಮತ್ತೆ) ಕಾಕತಾಳೀಯವೇ ಸರಿ.
ಬೋಲ್ಟನ್ನು ಅತ್ತ ಬಿಟ್ಟುಪ್ರವಹಿಸುಎಂಬ ಮತ್ತೊಂದು ಅರ್ಥವನ್ನು ತೆಗೆದುಕೊಂಡರೆ ಪ್ರವಹಿಸುವ ರಾಶಿಯನ್ನು ಫ್ಲೋಟಿಂಗ್ ವಂಡರ್ ಎಂದೂ, ಪ್ರವಾಹದಲ್ಲಿ ಕೊಚ್ಚಿ ಬರುವ ಮೊಸಳೆ, ಹಾವುಗಳನ್ನು ಫ್ಲೋಟಿಂಗ್ ಪಾಪ್ಯುಲೇಷನ್ ಎಂದೂ ಕರೆಯಬಹುದೇ ಎಂಬ ಪ್ರಶ್ನೆ ಮೂಡೀತು. ಈಜುವುದರಲ್ಲಿ ಬ್ಯಾಕ್ ಸ್ಟ್ರೋಕ್ ಹೊಡೆಯುತ್ತಾ ಅಂಗಾತ ತೇಲುತ್ತಾ ಸಾಗುವವರನ್ನೂ ಫ್ಲೋಟಿಂಗ್ ಪಾಪ್ಯಲೇಷನ್ ಎಂದು ಕರೆಯಬಹುದೇನೋ. ಹಿಂದೊಮ್ಮೆ ರಾಜೀವಗಾಂಧಿಯವರು ಬೆಂಬಲ ನೀಡಿದ್ದರಿಂದ ಕೇವಲ 35 ಜನ ಎಂಪಿಗಳಿದ್ದ ಸರ್ಕಾರವನ್ನು .ಕೆ. ಗುಜ್ರಾಲ್ ರಚಿಸಿದ್ದರು. ಕಾಂಗ್ರೆಸ್ ಕಾಲೆಳೆದ ತಕ್ಷಣ ಬೀಳುವುದು ಖಚಿತವಾಗಿದ್ದ ಸರ್ಕಾರವನ್ನೂ ಫ್ಲೋಟಿಂಗ್ ವಂಡರ್ ಎಂದೇ ಕರೆಯಲಾಗುತ್ತಿತ್ತು. ಪ್ರವಾಹದ ರಾಶಿಯಿಂದ ಬರೀ ನಷ್ಟ, ರಗಳೆ, ಗೋಳುಗಳೇ ಇದ್ದು, ಅಂತಹದ್ದನ್ನು ಯಾರೂಪರಿಚಯಮಾಡಿಕೊಳ್ಳಲು ಬಯಸುವುದಿಲ್ಲವಾದ್ದರಿಂದ ಅದನ್ನೂ ಅತ್ತ ಬಿಡೋಣ.
ಪರಿ ಮತ್ತೆರಡು ಅರ್ಥಗಳಂತೂ ಪರಸ್ಪರ ವಿರುದ್ಧವಾಗಿವೆ ಎಂದು ನನ್ನ ಅಭಿಪ್ರಾಯ. ‘ಚಂಚಲವಾಗುಮತ್ತುಅಭಿವೃದ್ಧಿಗೆ ಬರುಎಂಬ ಅರ್ಥಗಳು ಒಂದಕ್ಕೊಂದು ಪೂರಕ ಹೇಗಾದೀತು? ದೃಢ ನಿರ್ಧಾರವಿದ್ದರೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಚಂಚಲತೆ ಒಂದು ದೌರ್ಬಲ್ಯ ಎಂದು ನಾನೆಂದರೆಊಹೂಂ. ದೃಢ ಎಂದರೆ ಸ್ಥಿರ, ಸ್ಥಾವರ. ಚಂಚಲ ಎಂದರೆ ಜಂಗಮ. ಸ್ಥಾವರಕ್ಕಳಿವುಂಟು. ಜಂಗಮಕ್ಕಳಿವಿಲ್ಲ. ಆದ್ದರಿಂದ ಚಂಚಲತೆಗೆ ಜೈ ಎಂದನೊಬ್ಬ ಜಂಗಮಭಕ್ತ. ನನ್ನ ಸ್ನೇಹಿತನಾದ ಎಂಕ ಸೆಟ್ಟರೂಚಂಚಲವಾಗೋದು ಅಂದ್ರೆ ಲಕ್ಷ್ಮಿಯ ಅಪರಾವತಾರವೇ ಆಗೋದು ಅಂತ ಅರ್ಥ ಕಣಯ್ಯ. ಚಂಚಲೆ ಅಂದರೆ ಲಕ್ಷ್ಮಿ....’ ಎಂದು ಸಮರ್ಥನೆ ನೀಡಿದ. ಆದರೆ ಪರಿ-ಚಯ ಎಂದರೆ ಚಂಚಲತೆಯ ಗುಂಪು ಮತ್ತು ಅಭಿವೃದ್ಧಿಯ ಗುಂಪುಗಳಲ್ಲವೇ. ಅಭಿವೃದ್ಧಿಯ ಗುಂಪಿನಲ್ಲಿ ಎರಡು ಗುಂಪುಗಳಿದ್ದು ಸ್ವಾಭಿವೃದ್ಧಿ, ದೇಶಾಭಿವೃದ್ಧಿ ಎಂಬ ಗುಂಪುಗಳಾಗಿ ಒಡೆದು ಒಂದರದು ದೇಶತ್ಯಾಗ, ಸ್ವಾರ್ಥಪ್ರೇಮ; ಇನ್ನೊಂದರದು ಸ್ವಾರ್ಥತ್ಯಾಗ, ದೇಶಪ್ರೇಮ ಇರುತ್ತವಂತೆ. ಚಂಚಲತೆಯ ಗುಂಪಿಗೆ ಪೋತೀಸ್ನಂತಹ ಷೋರೂಮ್ಗಳಲ್ಲಿ ದುಶ್ಯಾಸನನಿಗಿಂತ ಹೆಚ್ಚು ಸೀರೆಗಳನ್ನು ರಪರಪನೆ ಎಳೆಯುವ ಸೇಲ್ಸ್ಮನ್ಗಳ ಮುಂದೆ ಅನಿಶ್ಚಿತತೆಯೇ ಮೂರ್ತಿವೆತ್ತಂತೆ ಕುಳಿತ ಸ್ತ್ರೀಪಡೆಯೇ ಉತ್ತಮ ಪ್ರತೀಕವೇನೋ.

ಪರಿಚಯಪದದ ಬಗ್ಗೆ ಇನ್ನಷ್ಟು ಬರೆದರೆ ನನ್ನ ಪರಿಚಯ ಮಾಡಿಕೊಳ್ಳುವುದನ್ನೇ ನೀವೆಲ್ಲರೂ ತಪ್ಪಿಸಿಕೊಳ್ಳಲು ಬಯಸುವುದು ನಿಶ್ಚಿತವಾದ್ದರಿಂದಗುರುತು, ಸಲಿಗೆ, ಅರಿವುಎಂಬ ಅರ್ಥಗಳಲ್ಲಿನಗುರುತುಅರ್ಥಕ್ಕೇಪರಿಚಯವನ್ನು ಸೀಮಿತಗೊಳಿಸೋಣ. ಹಾಂ. ಗುರುತು ಎಂದರೆ ಮಾರ್ಕ್(ಛೆ! ಮಾರ್ಕ್ ಅಂದರೆ ಅಂಕ ಅಲ್ಲ ಕಣ್ರೀ.... ಅಕಟಕಟಾ... ಅಂಕ ಅಂದರೂ ವೇದಿಕೆ, ತೊಡೆ, ರಣರಂಗ ಅಂತೆಲ್ಲ ಅರ್ಥ ಅಲ್ಲ ರೀ...), ಮಚ್ಚೆ, ಅಂತೆಲ್ಲ ಇದ್ದರೂ ಲೇಖನದ ಕೊನೆಯವರೆಗೆಪರಿಚಯಕ್ಕೆ ಚಹರೆ ಎಂಬ ಅರ್ಥಕ್ಕೇ ಅಂಟಿಕೊಂಡಿರುವುದಕ್ಕೆ ವಚನ(ಬಸವಣ್ಣ, ಸರ್ವಜ್ಞ, ಇತ್ಯಾದಿಗಳ ವಚನವಲ್ಲ, ವಚನವೆಂದರೆ ಮಾತು)ಬದ್ಧನಾಗಿರುತ್ತೇನೆ.
ಮಾಸ್ಟರ್ ಹಿರಣ್ಣಯ್ಯ 
ಸಭೆ, ಸಮಾರಂಭಗಳಲ್ಲಿ ಅತಿಥಿಗಳನ್ನು ಪರಿಚಯ ಮಾಡಿಕೊಡುವುದು ಅವಶ್ಯವಾದ ಕ್ರಮ. ಅಂತಹ ಅತಿಥಿಗಳಿಗೆ ಸನ್ಮಾನ ಮಾಡಬೇಕಾದರಂತೂ ಪರಿಚಯ ಅತ್ಯವಶ್ಯವಷ್ಟೇ ಅಲ್ಲದೆ ಅನಿವಾರ್ಯವೂ, ಕಡ್ಡಾಯವೂ ಆಗಿರುತ್ತದೆ. ಇಂತಹದ್ದೇ ಒಂದುಪರಿಚಯ ಪ್ರಸಂಗಕ್ಕೆ ಒಳಗಾದ ಮಾಸ್ಟರ್ ಹಿರಣ್ಣಯ್ಯನವರು ವಿಶೇಷ ಸಂದರ್ಭವನ್ನು ತಮ್ಮ ಕೊನೆಯ ದಿನಗಳವರೆಗೆ ನೆನೆಸಿಕೊಳ್ಳುತ್ತಿದ್ದರು. ಆಹಾ! ಅದೇನು ಪರಿಚಯದ ಪರಿ ಅದು!
ಮೈಸೂರಿನಿಂದ ಸುಮಾರು ಒಂದು ಗಂಟೆಯ ಕಾಲ ಕಾರಿನಲ್ಲಿ ಹೋದರೆ ಸಿಗುವಂತಹ ಹಳ್ಳಿಯೊಂದರಲ್ಲೊಂದು ಸರ್ಕಾರಿ ಕಚೇರಿ. ಕಚೇರಿಯ ಅಧಿಕಾರಿ ತಿಮ್ಮಯ್ಯನವರು ಮೈಸೂರಿನಲ್ಲಿ ಮಾಸ್ಟರ್ ಹಿರಣ್ಣಯ್ಯನವರ ನಾಟಕವನ್ನು ನೋಡಿ ಪ್ರಭಾವಿತರಾಗಿ, ನಾಟಕ ಮುಗಿದ ನಂತರ ಮಾಸ್ಟರರ ಬಳಿ ಬಂದುದಯಮಾಡಿ ನಮ್ಮ ಇಲಾಖೆಗೆ ಬಂದು ನಮ್ಮ ಸನ್ಮಾನವನ್ನು ಸ್ವೀಕರಿಸಬೇಕುಎಂದರು. ‘ಒಂದು ತೊಗೊಂಡ್ರೆ ಮೂರು ಫ್ರೀಸ್ಕೀಂನಲ್ಲಿ ಇವರೊಡನೆ ಶ್ರೇಷ್ಠ ಕವಿ ಕಣಗಾಲ್ ಪ್ರಭಾಕರಶಾಸ್ತ್ರಿಗಳು, ಶ್ರೇಷ್ಠ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮತ್ತು ಶ್ರೇಷ್ಠ ಕಾದಂಬರಿಕಾರ ಚದುರಂಗ ಅವರನ್ನೂ ಕರೆತರಬೇಕೆಂದು ಇವರನ್ನು ವಿನಂತಿಸಿಕೊಂಡು, ಮೂವರನ್ನು ಒಪ್ಪಿಸಿದರು. ಅಂದಿನಿಂದ ಎರಡು ವಾರಗಳ ನಂತರ ಬರುವ ಶನಿವಾರದಂದು ಮಧ್ಯಾಹ್ನ ಮೂರು ಗಂಟೆಗೆ ಸನ್ಮಾನವೆಂದು ಸರ್ವಾನುಮತದಿಂದ ತೀರ್ಮಾನವಾಯಿತು.
ಕಾಲ ಸನ್ಮಾನ ಸ್ವೀಕಾರವನ್ನು ಒಂದು ದೊಡ್ಡ ಗೌರವವೆಂದು ಪರಿಗಣಿಸುತ್ತಿದ್ದ ಕಾಲ. ಅಷ್ಟೇ ಅಲ್ಲದೆ, ಈಗಿನಂತೆ ಅರ್ಜಿ ಗುಜರಾಯಿಸಿಯೋ, ಗುಪ್ತವಾಗಿ ಹಣ ನೀಡಿಯೋ ಸನ್ಮಾನ ಮಾಡಿಸಿಕೊಳ್ಳುವುದು ಇನ್ನೂ ವಾಡಿಕೆಯಲ್ಲಿಲ್ಲದ ಕಾಲ. ನಿಗದಿತ ದಿನದಂದು ಮಾಸ್ಟರ್ ಹಿರಣ್ಣಯ್ಯನವರೇ ತಮ್ಮ ಕಾರಿನಲ್ಲಿ ಕೆಟ್ಟ ಪುಟ್ಟ ಸೊಟ್ಟ ರಸ್ತೆಯ ಗುಂಟ ನಿಗದಿತ ಸ್ಥಳದತ್ತ ಉಳಿದ ಮೂವರೊಡನೆ ಹೊರಟರು. ನಿಗದಿತ ಹಳ್ಳಿ ಸಿಕ್ಕಿತು. ಸರ್ಕಾರಿ ಕಚೇರಿಯೂ ಸಿಕ್ಕಿತು. ಆದರೆ ಅಧಿಕಾರಿ? ಕಚೇರಿಯಲ್ಲಿನ ಜನ?
ಮಾಸ್ಟರ್ ಹೊರಬಂದರು. ಸುಮಾರು ಎರಡು ಫರ್ಲಾಂಗ್ ದೂರದಲ್ಲಿ ಕುರಿ ಕಾಯಿಸುವ ಹುಡುಗರು ಗುರಿಯಿಟ್ಟು ಚೆಂಡು ಬೀಸುತ್ತಾ ಲಗೋರಿ ಆಡುತ್ತಿದ್ದರು. ಮಾಸ್ಟರ್ ಅವರ ಬಳಿ ಹೋಗಿಏನ್ರಪ್ಪಾ, ಇಲ್ಲಿ ತಿಮ್ಮಯ್ಯನವರು ಅಂತ ಒಬ್ಬರು ಅಧಿಕಾರಿ ಇದ್ದಾರಲ್ಲ, ಅವರ ಕಚೇರಿ ಯಾವುದು ಗೊತ್ತಾ?’ ಎಂದು ಕೇಳಿದರು.
ಕಚೇರ್ಯಾ? ಅವರು ಕಚೇರಿ ಗಿಚೇರಿ ಮಾಡಾಕಿಲ್ಲ ಸ್ವಾಮಿ. ಅವ್ರು ಆಪೀಸ್ರು. ಆಪೀಸ್ನಾಗಿ ಇರ್ತಾರೆ ಆಟೇಯಎಂದನೊಬ್ಬ ಲಗೋರಿಗ.
ಅವರು ಯಾವ ಪೀಸ್ನಲ್ಲಾದರೂ ಇರಲಿ, ಅವರ ಆಫೀಸು ಯಾವುದು ತೋರಿಸುಎಂದರು. ಹುಡುಗ ಇವರು ಕಾರು ನಿಲ್ಲಿಸಿದ್ದ ಆಫೀಸನ್ನೇ ಬೊಟ್ಟುಮಾಡಿ ತೋರಿಸಿದ.
ಯಾರೂ ಇಲ್ಲವೇ ಇಲ್ಲವಲ್ಲಾ...?’
ಶನ್ವಾರ ಹಾಪ್ ಡೇ.... ಮನೆಗೋದ್ರು.... ನೀವು ಯಾರು?’
ಮಾಸ್ಟರ್ಗೆ ಮನದಲ್ಲೇ ಗೊಂದಲ ಆರಂಭವಾಯಿತು. ದಿನಗಳಲ್ಲಿ ಸರ್ಕಾರದ ದೊಡ್ಡವರು ಯಾರಾದರೂ ಸತ್ತರೆ ದಿಢೀರ್ ರಜ ಘೋಷಿಸಬೇಕಾದರೂ ಟ್ರಂಕ್ ಕಾಲ್ ಮಾಡಬೇಕಿತ್ತು, ಸಾರ್ವಜನಿಕರಿಗೆ ಸಾವಿನ ಬಗ್ಗೆ ತಿಳಿಸಬೇಕಾದರೆ ರೇಡಿಯೋ ಒಂದೇ ಮಾರ್ಗವಾಗಿತ್ತು. ‘ಅಕಸ್ಮಾತ್ ಇವತ್ತು ಹತ್ತು ಗಂಟೆಗೆ ಯಾರೋ ಒರಗಿಕೊಂಡಿದ್ದು, ಅದು ಒಂದು ಗಂಟೆಗೆ ರೇಡಿಯೋದಲ್ಲಿ ಬಂದಿದ್ದು, ಇವರೆಲ್ಲ ಕಾರ್ಯ (ಶ್ರಾದ್ಧ) ಮಾಡೋ ದಿನ ಕಾರ್ಯಕ್ರಮ ಮಾಡಬಾರದು ಅಂತ ಹೊರಟುಹೋದರೋ ಏನೋ... ನಾನು ಬರಕ್ಕೆ ಮುಂಚೆ ರೇಡಿಯೋನೂ ಕೇಳಲಿಲ್ಲವಲ್ಲಎಂದು ಪೇಚಾಡಿಕೊಳ್ಳುತ್ತಲೇ, ‘ಅಧಿಕಾರಿಗಳೇನೋ ಹೋದರು. ಜವಾನನಾದರೂ ಇರಬೇಕಲ್ಲ ಮರಿಎಂದರು.
ಜವಾನ ಇದ್ದಾರೆ. ಹಿಂದಿನ ವೋಟೌಸ್ನಲ್ಲಿ (ಔಟ್ ಹೌಸ್)’ ಎಂದು ಅವನು ಕೈ ತಿರುಗಿಸಿದ ಜಾಗಕ್ಕೆ ಇವರು ಹೋದರು. ಜವಾನ ಜವರಯ್ಯ ಶನಿವಾರದ ಹಾಫ್ ಡೇ ಡ್ಯೂಟಿ ಮುಗಿಸಿ, ಫುಲ್ ಮೀಲ್ಸ್ ಹೊಡೆದು, ಸೌಂಡ್ ಸ್ಲೀಪ್ (ಸೌಂಡೇ- ಗೊರಕೆ ಇತ್ತಲ್ಲ) ಮಾಡುತ್ತಿದ್ದ. ಹಿರಣ್ಣಯ್ಯನವರ ಜೊತೆ ಇದ್ದ ಮೂವರೂ ಸೇರಿಚತುರ್ಕಂಠರೋದನಮಾಡಿದ ಮೇಲೆ ಎದ್ದುಬಂದುಯಾರ್ಬೇಕಿತ್ತು?’ ಅಂದ.
ಇವತ್ತು ಇಲ್ಲಿ ನಾಲ್ಕು ಜನಕ್ಕೆ ಸನ್ಮಾನ ಇತ್ತಲ್ಲಾ...’
ಹೂಂ. ಅಧಿಕಾರಿಗಳು ಹೇಳಿದ್ರು. ನೀವೇನಾ ನಾಲ್ಕು ಜನ? ಬಂದೇಬಿಟ್ರಾ...?’
ಅವರು ಕರೆದಿದ್ದರಲ್ಲಾ...’
ಅದೇನೋ ಸರಿ. ಆದರೆ ಕರೆದ್ರೂ ಅಂತ ಬಂದೇಬಿಡೋದಾ.... ಆಯ್ತು ಕರೀತೀನಿ ಇರಿಎಂದು ಸೈಕಲ್ಲೇರಿ ಹೋಗಿ, ಮೋಟರ್ಸೈಕಲ್ ಪಿಲಿಯನ್ ಆಗಿ ಹಿಂತಿರುಗಿದ. ಬೈಕ್ ಇಳಿದ ಅಧಿಕಾರಿಗಳೂಚೆನ್ನಾಯ್ತು ಬಿಡಿ. ಅಂತೂ ಬಂದೇಬಿಟ್ರಲ್ಲಾ...’ ಎನ್ನುತ್ತಾ ಜವಾನನೆಡೆಗೆ ತಿರುಗಿಸಭೆಗೆ ಜನ ಸೇರಿಸಯ್ಯ. ಹಾಗೆಯೇ ಬೀರೂಲಿರೋ ಶಾಲು ತೆಗಿ. ಬರ್ತಾ ಹಾಗೇ ಚೆಲುವಿ ಮನೆಯಿಂದ ನಾಲ್ಕು ಹಾರ ಇಸ್ಕೊಂಡ್ಬಾಎಂದರು.
ಸಭೆಗೆ ಬಂದಂತಹ ಸಭಿಕರು ಅದೇ ಲಗೋರಿ ಹುಡುಗರೇ. ಅವರ ಜೊತೆಗೆ ದನ ಕಾಯುವವರು ಇಬ್ಬರು, ಕಿವಿಯ ಮೇಲೆಯೇ ತಮಟೆ ಇಟ್ಟು ಬಾರಿಸಿದರೂ ಕೇಳಿಸದ ವೃದ್ಧರೊಬ್ಬರು..... ಅಂತೂ ಎಲ್ಲಿಯೂ ಸಲ್ಲದವರು ಅಲ್ಲಿ ಸಲ್ಲಿದ್ದರು. ಅಂತೂ ಇಂತೂ ನಾಲ್ಕೂ ಜನರು ಆಸೀನರಾಗಿ, ಜವಾನ ಆಕಡೆ, ತಿಮ್ಮಯ್ಯನವರು ಕಡೆ ನಿಂತು (ಇದ್ದದ್ದೇ ನಾಲ್ಕು ಕುರ್ಚಿಗಳು. ಸಭಿಕರೆಲ್ಲ ಡೌನ್ ಟು ಅರ್ತ್ಮಣ್ಣಿನ ನೆಲದಲ್ಲೇ ಮಂಡಿಯೂರಿದ್ದರು) ಮೈಕು, ಲೈಟು, ಪಾಶ್ರ್ವಸಂಗೀತ, ಇತ್ಯಾದಿಗಳಿಲ್ಲದೆಯೇ ಸರಳ ಸಮಾರಂಭ ಆರಂಭವಾಗಿಯೇಬಿಟ್ಟಿತು.
ಜವರಯ್ಯ, ಹಾರ ಕೊಡುಎಂದ ತಿಮ್ಮಯ್ಯನವರು ಹಾರ ಕೈಗೆ ಬಂದಾಕ್ಷಣಮೊದಲಿಗೆ ನಾಟಕಗಳಲ್ಲಿ ಬಹಳ ದೊಡ್ಡ ಹೆಸರು ಮಾಡಿರುವ, ಸರ್ಕಾರದ ತಪ್ಪುಗಳನ್ನ ಧೈರ್ಯದಿಂದ ಖಂಡಿಸುವ ಕಡೆಗಾಲ ಪ್ರಭಾಕರಶಾಸ್ತ್ರಿಗಳಿಗೆ ಸನ್ಮಾನ. ಯಾರ್ರೀ ನೀವು ನಾಲ್ಕು ಜನರಲ್ಲಿ ಪ್ರಭಾಕರಶಾಸ್ತ್ರಿ? ಹಿಡಿಯಿರಿ ಹಾರಎಂದರು.
ಪ್ರಭಾಕರಶಾಸ್ತ್ರಿಗಳು ಕಡೆಗಾಲ ಪ್ರಭಾಕರಶಾಸ್ತ್ರಿಗಳಾಗಿ ಸನ್ಮಾನ ಸ್ವೀಕರಿಸಿದರು.
ಈಗ ಜನಪ್ರಿಯ ಕಾದಂಬರಿಕಾರ ಪುಟ್ಟಯ್ಯ ಕಣ್ಣಗಲ ಅವರಿಗೆ ಸನ್ಮಾನ. ಯಾರ್ರೀ ನೀವು ಮೂವರಲ್ಲಿ? ಮುಂದೆ ಬನ್ನಿಪುಟ್ಟಣ್ಣ ಕಣಗಾಲ್ ಪುಟ್ಟಯ್ಯ ಕಣ್ಣಗಲರಾಗಿ ಸನ್ಮಾನ ಸ್ವೀಕರಿಸಿದರು.
ಪ್ರಸಿದ್ಧ ಗೀತರಚನೆಕಾರ ಚದುರ್ಬಲರವರಿಗೆ ಈಗ ಸನ್ಮಾನ. (ದನಿ ತಗ್ಗಿಸಿ) ಇಷ್ಟೊಳ್ಳೆ ಶಾಲು ಯಾಕೋ ತಂದೆ? ದೊಡ್ಡ ಸಾಹೇಬರಿಗೆ ಅಂತ ಇಟ್ಟಿದ್ದೆ. ಹುಂ... ಕೊಡಿಲ್ಲಿ (ದನಿ ಏರಿಸಿ) ಬನ್ನಿ, ಮುಂದೆ ಬನ್ನಿ. ಹಾರ ಹಾಕಿಸ್ಕೊಳಿ
ಚದುರಂಗರು ಚದುರ್ಬಲರಾಗಿ ಸನ್ಮಾನ ಸ್ವೀಕರಿಸಿದರು.
ಮಾಸ್ಟರ್ ಹಿರಣ್ಣಯ್ಯ 
ಕಡೆಯದಾಗಿ ಬೆಳ್ಳಿಮೋಡ, ಶರಪಂಜರ ಮುಂತಾದ ಚಿತ್ರಗಳ ನಿರ್ದೇಶಕರಾದ ಹಿರಣ್ಣಯ್ಯ ಮಾಸ್ಟರ್ಗೆ ಹಾರ ಸಮರ್ಪಣೆ
ಇದ್ದಿದ್ದರಲ್ಲಿ ಕಡಿಮೆ ಹೆಸರು ಕೆಡಿಸಿಕೊಂಡವನು ನಾನೇ ಸಾರ್ ಅನ್ನುತ್ತಿದ್ದರು ಮಾಸ್ಟರ್ಜೀ.
ಎಲ್ಲರಿಗೂ ಹಾರ ಹಾಕಿದ್ದು ಮುಗಿಯುತ್ತಿದ್ದಂತೆಯೇಹೂಂ. ಇವರೆಲ್ಲ ಹೋದಮೇಲೆ ಆಫೀಸ್ ಲಾಕ್ ಮಾಡಿಬಿಡು ಜವರಯ್ಯಎನ್ನುತ್ತಾ ತಿಮ್ಮಯ್ಯನವರು ಹೊರನಡೆದರು.
ಅವತ್ತೇ ನಿರ್ಧಾರ ಮಾಡಿದೆ ಸಾರ್. ನನ್ನ ಪರಿಚಯವನ್ನ ಯಾರಾದರೂ ಕೇಳಿದರೆ ನನ್ನ ಫೋಟೋ ಸಮೇತ ನನ್ನ ಬಯ್ಯೋ ಡಾಟಾನ ನಾನೇ ಕೊಟ್ಬಿಡ್ತಿದ್ದೆ. ಬೇರೆಯವರ ಹೆಸರಿಂದ ನನಗೆ ಸನ್ಮಾನವಾದರೆ ನನಗೇನೂ ಮುಜುಗರವಿಲ್ಲ. ಆದರೆ ಎಷ್ಟೋ ಪಂಡಿತರು, ಯೋಗ್ಯರಿಗೆ ನನ್ನ ಹೆಸರಲ್ಲಿ ಸನ್ಮಾನ ಆಗೋದು ಅವರ ಘನತೆಗೆ ಧಕ್ಕೆ ಬಂದಂತಾಗುತ್ತದೆ. ಅದು ಆಗಬಾರದು. ಪರಿಚಯ ವ್ಯಕ್ತಿಯನ್ನ ಇದಮಿತ್ಥಂ ಅಂತ ಹೇಳಬೇಕೇ ಹೊರತು ಯಾವ ಪರಿಯೋ, ಯಾವ ಚಯವೋ ಅನ್ನೋ ಹಾಗೆ ಆಗಬಾರದುಎಂದರು ಮಾಸ್ಟರ್ ಹಿರಣ್ಣಯ್ಯನವರು.
ಪರಿಚಯದ ಪರಿಗಳೇ ವಿಚಿತ್ರ. ಬಯೋಡೇಟಾ ಆಗಿ, ರೆಸ್ಯೂಮೆ ಆಗಿ, ಕರಿಕ್ಯುಲಮ್ ವಿಟಾಯ್ ಆಗಿರುವ ಪರಿಚಯ ಇನ್ನೂ ಏನೇನಾಗುವುದೋ... ಅವುಗಳ ಪರಿಚಯ ಇರೋವ್ರ ಪರಿಚಯ ನಿಮಗೇನಾದರೂ ಇದೆಯಾ?

Comments

  1. Article has extraordinary humor. ತುಂಬಾ ಸೊಗಸಾಗಿದೆ
    ಹಿರಣ್ಣಯ್ಯನವರ ಪರಿಚಯದ ಪ್ರಸಂಗ ತುಂಬಾ ಹಾಸ್ಯಮಯವಾಗಿದೆ.

    ReplyDelete
    Replies
    1. ಧನ್ಯವಾದಗಳು. ಹರಟೆಯ ಪ್ರಕಾರವೂ ನನಗೆ ಒಗ್ಗುತ್ತದೆ ಎಂದು ತಿಳಿದಿರಲಿಲ್ಲ. ಬರೆಯುವ ಸಮಯದಲ್ಲೇ ಈ ಲೇಖನಗಳು ಸಂತೋಷ ಕೊಡುತ್ತವೆ. ಓದುಗರ ಮೆಚ್ಚುಗೆಯಾದರಂತೂ ಸ್ವರ್ಗ ಮಟಾಷ್ - ಕಿಚ್ಚು ಹಚ್ಚಿರುತ್ತೇವಲ್ಲ!

      Delete
  2. I liked the master`s incident. Very nice humor. ಕೆಟ್ಟ ಪುಟ್ಟ ಸೊಟ್ಟ ರಸ್ತೆ reminds our road condition. Lots of current issues included with humor. Very nice article

    ReplyDelete

Post a Comment