ಒಂದು ದಿನ ದಶರಥನ ಆಸ್ಥಾನದಲ್ಲಿ ಶ್ರೀರಾಮನಾದಿಯಾಗಿ ಅನೇಕರು ಸೇರಿರುವ ಸಂದರ್ಭದಲ್ಲಿ ವಸಿಷ್ಠರು ತಪಸ್ಸು, ನಿಷ್ಠೆ ಮತ್ತು ಸಮಾಧಿ ಸ್ಥಿತಿಯ ಬಗೆಗಿನ ಕೆಲವು ದೃಷ್ಟಾಂತಗಳನ್ನು ಹೇಳಿದರು.
1. ದೀಘೃಧೃಕ್ಕುವಿನ ಕಥೆ
“ಉತ್ತರ ದಿಕ್ಕಿನಲ್ಲಿ ಜಿನ ಎಂಬ ಒಂದು ಸಂಪನ್ನವೂ ವಿಸ್ತಾರವೂ ಆಸ ದೇಶವೊಂದಿದೆ. ಅದು ವಲ್ಮೀಕವೆಂಬ ದೇಶದ ಆಚೆಗಿದೆ. ಆ ದೇಶದಲ್ಲಿ ಜನರಿಗೆ ಆಶ್ರಯ ಕೊಟ್ಟಿರುವ ಒಂದು ಜೈನ
ವಿಹಾರವಿದೆ. ಆ ವಿಹಾರದಲ್ಲಿ ತನ್ನದೊಂದು ಕಿರುಮನೆಯಲ್ಲಿ ಕಪಿಲ ವರ್ಣದ ಕೇಶವುಳ್ಳ ಭಿಕ್ಷುವೊಬ್ಬನಿದ್ದಾನೆ. ಅವನ ಹೆಸರೇ ದೀಘೃಧೃಕ್ಕು. ಸಮಾಧಿಯನ್ನು ಅಭ್ಯಾಸ ಮಾಡುತ್ತಿರುವನೋ ಎನ್ನುವಂತಿತ್ತು ಅವನ ಸ್ಥಿತಿ. ಅವನು ತಾನಿದ್ದ ಕಿರುಮನೆಯ ಬಾಗಿಲನ್ನು ಹಾಕಿಕೊಂಡು ಸತತವಾಗಿ ಇಪ್ಪತ್ತೊಂದು ದಿವಸ ಸಮಾಧಿ ಸ್ಥಿತಿಯಲ್ಲಿದ್ದುಬಿಟ್ಟನು. ಭಿಕ್ಷುವಿನ ಧ್ಯಾನಕ್ಕೆ ಭಂಗ ಬಂದೀತೆಂದು ಯಾರೂ ಬಾಗಿಲನ್ನು ತೆರೆಯಲಿಲ್ಲ. ಧ್ಯಾನನಿಷ್ಠನಾಗಿ ಕುಳಿತಿದ್ದ ಅವನಿಗೆ ಇಪ್ಪತ್ತೊಂದು ರಾತ್ರಿಗಳು ಕಳೆದುಹೋದವು. ಆ ಇಪ್ಪತ್ತೊಂದು ರಾತ್ರಿಗಳು ಎಷ್ಟು ದೀರ್ಘವಾಗಿದ್ದವೆಂದರೆ ಚಿತ್ತದ ಆಳದಿಂದ ನೋಡಿದಾಗ ಒಂದು ಸಾವಿರ ವರ್ಷಗಳಾಷ್ಟಾಗಿದ್ದವು. ಅಂತಹ ಇನ್ನೊಬ್ಬ ಭಿಕ್ಷು ಇರುವನೋ ಇಲ್ಲವೋ ಎಂದು ನಾನು ಹುಡುಕಿದೆ.” ಎಂದರು
ವಸಿಷ್ಠರ ಈ ಮಾತುಗಳನ್ನು ಕೇಳಿದ ದಶರಥನು “ ನಮ್ಮ ನಾಯಕರನ್ನು ಕಳಿಸುತ್ತೇನೆ. ಅವರು ಭಿಕ್ಷುವನ್ನು ಎಚ್ಚರಗೊಳಿಸಿ ಇಲ್ಲಿಗೆ ಕರೆತರುತ್ತಾರೆ” ಎಂದನು. ಅದಕ್ಕೆ ವಸಿಷ್ಠರು “ ಮಹಾರಾಜಾ, ಆ ಮಹಾ ಭಿಕ್ಷು ಅಲ್ಲಿದ್ದರೆ ತಾನೇ ನಾಯಕರು ಕರೆತರುವುದು. ಅವನ ದೇಹದಿಂದ ಪ್ರಾಣ ಹೊರಟುಹೋಗಿದೆ. ಇನ್ನು ದೇಹವಾದರೂ ಇದೆಯೇ ಎಂದರೆ ಅದೂ ವಿವರ್ಣವಾಗಿಹೋಗಿದೆ. ಆ ಬಿಕ್ಷುವಿನ ಜೀವವು ಬ್ರಹ್ಮಹಂಸವಾಗಿ ಜೀವನ್ಮುಕ್ತವಾಗಿದೆ. ಹೀಗಾಗಿ ಆ ಜೀವವು ಮತ್ತೆ ಆ ದೇಹಕ್ಕೆ ಹಿಂದಿರುಗುವುದು ಸಾಧ್ಯವೇ ಇಲ್ಲ. ಅಲ್ಲಿ ಆ ಭಿಕ್ಷುವು ಒಂದು ತಿಂಗಳವರೆಗೂ ಬಾಗಿಲನ್ನು ತೆರೆಯಬೇಡಿ ಎಂದು ಹೇಳಿ ಸಮಾಧಿ ಸ್ಥಿತಿಗೆ ತಲುಪಿದ್ದ. ತಿಂಗಳಾದ ಮೇಲೆ ಅವರು ಬಾಗಿಲನ್ನು ತೆರೆಯುವರು. ಭಿಕ್ಷುವಿನ ಸ್ಥಿತಿಯನ್ನು ನೋಡಿ ಅವನ ಶವವನ್ನು ಜಲದಲ್ಲಿ ವಿಸರ್ಜಿಸಿ ಮರದಲ್ಲಿ ಅವನ ಪ್ರತಿಯೊಂದನ್ನು ಮಾಡಿ ಅಲ್ಲಿ ಸ್ಥಾಪಿಸುವರು”.
ಇದರಲ್ಲಿ ನಾವು ಗಮನಿಸಬೇಕಾದ ಮುಖ್ಯ ಅಂಶವೆಂದರೆ ದೀಘೃಧೃಕ್ಕುವಿನ ತಪೋನಿಷ್ಠೆ. ತನ್ನವರಿಗೆ ಒಂದು ತಿಂಗಳವರೆಗೂ ಬಾಗಿಲು ತೆಗೆಯಬೇಡಿ ಎಂದಿದ್ದ. ಅವನಿಗೆ ತಿಳಿದಿದ್ದು ಏನೆಂದರೆ ತನ್ನ ತಪೋನಿಷ್ಠೆಯಿಂದ ಒಂದು ತಿಂಗಳಿನ ಒಳಗಾಗಿ ತನಗೆ ಮುಕ್ತಿ ದೊರೆಯುವುದೆಂದು. ಅದು ತನ್ನ ಮೇಲೆ ತನಗೇ ಇರಬೇಕಾದ ನಂಬಿಕೆ. ನಾನು ಒಂದು ಕೆಲಸವನ್ನು ಹಿಡಿದೆ ಎಂದರೆ ಅದನ್ನು ಇಂತಿಷ್ಟೇ ಸಮಯದಲ್ಲಿ ಪರಿಪಕ್ವವಾಗಿ ಮಾಡಿ ಮುಗಿಸುತ್ತೇನೆ ಎಂಬ ಸಂಕಲ್ಪ ಮತ್ತು ಸಂಕಲ್ಪಕ್ಕೆ ತಕ್ಕ ನಡೆ, ಮತ್ತು ನಡೆಗೆ ತಕ್ಕ ಫಲಿತಾಂಶ.
ಪ್ರತಿಯೊಬ್ಬರೂ ಅಷ್ಟೆ ತಾವು ಮಾಡಬೇಕಾದಂಥ ಕೆಲಸದಲ್ಲಿ ನಿಷ್ಠೆ ಎನ್ನುವುದನ್ನು ಇಟ್ಟು ಬೇರೆ ಯಾವ ಪ್ರಲೋಭನೆಗೂ ಒಳಗಾಗದೇ, ಯಾವುದೇ ಹಂತದಲ್ಲೂ ನಿರಾಶರಾಗದೇ, ಏಕಾಗ್ರಚಿತ್ತರಾಗಿ, ನಾನು ಯಾವುದರ ಕುರಿತು ಕೆಲಸ ಮಾಡುತ್ತಿದ್ದೀನೋ ಅದು ಯಶಸ್ವಿಯಾಗುವವರೆಗೂ ನನ್ನ ನಿಷ್ಠೆ ಬದಲಾಗುವುದಿಲ್ಲ ಎನ್ನುವ ದೃಢ ಮನಸ್ಸಿನಿಂದ ಕಾರ್ಯ ಪ್ರವೃತ್ತನಾದರೆ ಅಂಥವನಿಗೆ ಯಶಸ್ಸು ನಿಶ್ಚಿತ. ಇದು ಸಾಮಾನ್ಯ ಪ್ರಜೆಯಿಂದ ಹಿಡಿದು ಸಾಮಂತನವರೆವಿಗೂ ಅನ್ಚಯವಾಗುತ್ತದೆ” ಎಂದರು.
ಮುಂದಿನ ಸಂಚಿಕೆಗಳಲ್ಲಿ ...........
(2) ವೇತಾಲನ ಅನುಮಾನ ಪರಿಹಾರದ ಕಥೆ
(3) ಭಗೀರಥನ ಮೋಕ್ಷದ ಕಥೆ
Ramamurthy sir Part 1 was informative but too short. awaiting for next articles. Quality article like this bringing values our magazine.
ReplyDelete