ಹೂವಾಗಿ ಅರಳುವ ನೀರು

ಹೂವಾಗಿ ಅರಳುವ ನೀರು
ಲೇಖನ - ಶ್ರೀ ಅಶೋಕ್ ಕುಮಾರ್

                                               ಭಾರತದಲ್ಲಿರುವ ಎಲ್ಲ ನದಿಗಳಿಗಿಂತಲೂ ಗಂಗಾ ನದಿಯು ತುಂಬಾ ಪ್ರಾಮುಖ್ಯತೆಯನ್ನು ಪಡೆದಿದೆ. ಎಲ್ಲ ನದಿಗಳನ್ನೂ ದೇವರೆಂದೇ ಕಾಣುವ ನಾವು, ನದಿಯ  ಜಲವನ್ನು ತೀರ್ಥವೆಂದು ಪವಿತ್ರ ಭಾವನೆಯಲ್ಲಿ ನೋಡುತ್ತೇವೆ. ಹಿಂದೆ ಋಷಿ ಮುನಿಗಳು ಯಾವಾಗಲೂ ತಮ್ಮ ದಂಡದ ಜೊತೆಗೆ ಕಮಂಡಲುವಿನಲ್ಲಿ ಮಂತ್ರಿಸಿದ ನೀರನ್ನು ಇಟ್ಟುಕೊಂಡಿರುತ್ತಿದ್ದರಂತೆ. ಇದೇ ನೀರನ್ನು ಋಷಿಗಳು ವರ ಕೊಡುವುದಕ್ಕೂ, ಶಾಪ ಕೊಡುವುದಕ್ಕೂ ಉಪಯೋಗಿಸುತ್ತಿದ್ದರಂತೆ.  ಈಗಲೂ ಸ್ನಾನ ಮಾಡುವಾಗ ಗಂಗೆ, ಯಮುನೆ ಮುಂತಾದ ನದಿಗಳ ತೀರ್ಥಗಳನ್ನು ಜ್ಞಾಪಿಸಿಕೊಳ್ಳುವವರು ಕೆಲವರಾದರೂ ಇದ್ದಾರೆ.           
                     
                                             ಸಾಕ್ಷಾತ್ ಗಂಗೆಯ ನೀರನ್ನು "ದೇವ ಗಂಗೆ" ಎಂದೇ ದೇವರ ಮನೆಯಲ್ಲಿಟ್ಟು ಪೂಜಿಸುತ್ತೇವೆ, ಅಷ್ಟು ಪವಿತ್ರ ನಮಗೆ ಈ ತೀರ್ಥಗಳು.  ತೀರ್ಥಗಳು ಎಂದರೆ, ದೇವಸ್ಥಾನಗಳಲ್ಲಿ ಕೊಡುವ ತೀರ್ಥಗಳು ನೆನಪಿಗೆ ಬರುತ್ತದೆ. ಎಲ್ಲಾ ದೇವಸ್ಥಾನಗಳಲ್ಲೂ ಪ್ರಸಾದವಿಲ್ಲದಿದ್ದರೂ ತೀರ್ಥವಂತೂ ದೊರೆಯುತ್ತದೆ. ಉತ್ತರ ಭಾರತದವರು ತೀರ್ಥವನ್ನು "ಚರಣಾಮೃತ" ಎಂದು ಕರೆಯುತ್ತಾರೆ. ಇದೇ ತೀರ್ಥದ ನಿಜವಾದ ಅರ್ಥವೂ ಹೌದು. ದೇವರ ಚರಣ ಸ್ಪರ್ಶ ಮಾಡಿದ ಅಮೃತ ಸ್ವರೂಪಿ ನೀರು ಎಂಬ ಅರ್ಥ ಬರುತ್ತದೆ. ಕೆಲವು ಪವಿತ್ರ ಕ್ಷೇತ್ರಗಳ ತೀರ್ಥಗಳಿಗೆ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯೂ ಇರುತ್ತದೆ. ಇದು ಮೂಢ ನಂಬಿಕೆ ಅಂತ ಅನಿಸುತ್ತದೆಯೇ?                                    

ಇಂತಹ ನಂಬಿಕೆಗಳು ಹಿಂದೂಗಳಿಗೆ ಮಾತ್ರವಲ್ಲ ಇತರ ಧರ್ಮದವರಿಗೂ ಇರುತ್ತದೆ. ಕ್ರಿಶ್ಚಿಯನ್ನರು ಇಂತಹ ಪವಿತ್ರ ನೀರನ್ನು "ಹೋಲಿ ವಾಟರ್" ಎಂದು ಕರೆಯುತ್ತಾರೆ, ಅಲ್ಲದೇ ಅವರುಗಳ ನೂತನ ಗೃಹಪ್ರವೇಶದ ಸಮಯದಲ್ಲಿ ಈ ನೀರನ್ನು ಇಡೀ ಮನೆಗೆ ಪ್ರೋಕ್ಷಿಸುತ್ತಾರೆ. ಮುಸ್ಲಿಂ ಮತ್ತಿತರ ಸಮುದಾಯಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ನೀರಿಗೆ ಈ ರೀತಿಯ ಪಾವಿತ್ರ್ಯತೆಯನ್ನು ಕೊಡುವುದು ಕಾಣಬಹುದು. ಏನಿದು ಶಾಸ್ತ್ರಗಳು? ನೀರು ಅಂದರೆ ನೀರೇ ಅಲ್ವ? ಜಲಜನಕ, ಆಮ್ಲಜನಕದ ಮಿಶ್ರಣ (H2O) ಎಂದು ಒಬ್ಬ ಸಾಮಾನ್ಯ ವಿದ್ಯಾರ್ಥಿಗೂ  ಗೊತ್ತಿರುವ ವಿಷಯ. ಒಂದು ನೀರಿಗಿಂತ ಇನ್ನೊಂದು ನೀರು ಬೇರೆಯಾಗಿರಲು ಹೇಗೆ ಸಾಧ್ಯ? ಗಂಗೆಯ ನೀರು ಅಂದರೆ ಬೇರೆಯೇ ಗುಣವುಳ್ಳದ್ದು ಅಂದರೆ ಏನರ್ಥ? ಮಂತ್ರಿಸಿದ ನೀರು ಅಥವಾ ಚರಣಾಮೃತ ಅಂದರೆ ಹೇಗೆ ಅದು ಬೇರೆಯಾಗುತ್ತದೆ? ಇವೆಲ್ಲಾ ಅರ್ಥವಿಲ್ಲದ ಭಾವನೆಗಳೇ? ಇವು ವಿಚಾರವಂತರನ್ನು ಒಂದಲ್ಲ ಒಂದು ಸಾರಿ ಕಾಡುವ ವಿಷಯ ಅಂದರೆ ತಪ್ಪಾಗಲಾರದು.  ಇತ್ತೀಚೆಗೆ ನಮ್ಮ ಸ್ನೇಹಿತರೊಬ್ಬರು "Message from Water" ಅಂತ  ಅಂತರ್ಜಾಲ ಕ್ಷೇತ್ರದಿಂದ ದೊರಕಿದ ಮಾಹಿತಿಯನ್ನು ತಂದುಕೊಟ್ಟರು. ಅದರಲ್ಲಿ ಜಪಾನ್ ದೇಶದ ವಿಜ್ಞಾನಿಯೊಬ್ಬರು ನೀರಿನ ಬಗ್ಗೆ ಸಂಶೋಧನೆ ಮಾಡುತ್ತಾರೆ. ಅವರ ಪ್ರಕಾರ "ಎಲ್ಲಾ ನೀರು ಒಂದೇ ಅಲ್ಲ, ನೀರಿನಿಂದ ನೀರಿಗೆ ವ್ಯತ್ಯಾಸ ಇದೆ. ನೀರಿನ ಭೌತಿಕತೆಯಲ್ಲಿ ವ್ಯತ್ಯಾಸ ಕಂಡುಬರದೇ ಇದ್ದರೂ ಸೂಕ್ಷ್ಮಾತಿ ಸೂಕ್ಷ್ಮವಾಗಿ ಗಮನಿಸಿದರೆ ವ್ಯತ್ಯಾಸ ಇರಲೇಬೇಕು" ಎಂದು ಬೇರೆ ಬೇರೆ ಕಡೆಗಳ ನೀರನ್ನು ಇಟ್ಟುಕೊಂಡು ಅದನ್ನು ಹೆಪ್ಪುಗಟ್ಟಿಸಿ ಅದನ್ನು ಸೂಕ್ಷ್ಮದರ್ಶಕ ಯಂತ್ರದ ಮೂಲಕ ಆರು ತಿಂಗಳುಗಳ ಕಾಲ ಪರೀಕ್ಷಿಸಿ ಒಂದು ದಿನ ವಿಸ್ಮಯಕಾರಿ ಫಲಿತಾಂಶಗಳು ಬಂದೇ ಬಿಟ್ಟಿತಂತೆ. -೨೦ ಡಿಗ್ರಿಗೆ ಘನೀಕರಿಸಿದ ಮಂಜುಗಡ್ಡೆಗಳು ಸುಮಾರು -೫ ಡಿಗ್ರಿ ಯಿಂದ ನೀರಾಗುವ ತನಕ ಒಂದು ರೀತಿಯ ಷಡ್ಭುಜಾಕೃತಿಯ ಸ್ಫಟಿಕದಂತಿರುವ ಹರಳುಗಳಾಗುತ್ತವಂತೆ. ಅದರಲ್ಲೂ ಅದು ಎಲ್ಲಾ ನೀರಿನಲ್ಲಿ ಆಗುವುದಿಲ್ಲವಂತೆ. ಕೆಲವು ದೇಶಗಳ ನೀರಿನಲ್ಲಿ, ನೀರು ಎಷ್ಟೇ ಶುದ್ಧವಾಗಿದ್ದರೂ  ಯಾವ ರೀತಿಯ ಹರಳುಗಳೂ ಮೂಡುವುದಿಲ್ಲವಂತೆ. ಹೆಚ್ಚಾಗಿ ನೈಸರ್ಗಿಕವಾಗಿ ಸಿಗುವ ತೊರೆ, ನದಿ, ಜಲಪಾತಗಳ ನೀರಿನಲ್ಲಿ ಈ ಹರಳುಗಳು ಚೆನ್ನಾಗಿ ಮೂಡುವುದು ಮಾತ್ರವಲ್ಲದೇ ಆ ಹರಳುಗಳ ಮೂಲೆಗಳಲ್ಲಿ ಒಂದು ರೀತಿಯ ಹೂವಾಗಿ ಅರಳಿರುವುದನ್ನು ಚಿತ್ರೀಕರಿಸಿದ್ದಾರೆ. ಒಂದೊಂದು ನೀರು ಒಂದೊಂದು ರೀತಿಯ ಹರಳುಗಳನ್ನು ಸಿದ್ಧಪಡಿಸುವುದು ಮಾತ್ರವಲ್ಲ, ಅವುಗಳ ಮುಂದೆ ವಾದ್ಯ ಮೇಳಗಳನ್ನು ಹಾಕಿ ಅದನ್ನು ಹೆಪ್ಪುಗಟ್ಟಿಸಿದರೆ ಬೇರೆ ಬೇರೆ ಸಂಗೀತಕ್ಕೆ ಬೇರೆ ಬೇರೆ  ರೀತಿಯಲ್ಲಿ ಅರಳುತ್ತವಂತೆ. ನಾವು ಒಳ್ಳೆಯ ಮನಸ್ಥಿತಿಯ ಭಾವನೆಗಳಿಂದ ಹರಳುಗಳನ್ನು ನೋಡಿದರೆ ಅವು ಬೇರೆಯಾಗಿಯೇ ತೋರುತ್ತದಂತೆ. ನಾವು  ಕೋಪ, ತಾಪಗಳಿಂದ ನೋಡಿದರೆ ಯಾವ ಹರಳುಗಳೂ ಮೂಡುವುದಿಲ್ಲವಂತೆ. ಅಂದರೆ ನಮ್ಮ ಭಾವನೆಗಳಿಗೆ ನೀರು ಸ್ಪಂದಿಸುವುದು ಎಂದು ರುಜುವಾತು ಪಡಿಸಿದಂತಾಯಿತು.                             ನೀರನ್ನು ಹೆಪ್ಪುಗಟ್ಟಿಸಿದಾಗ ಬರುವ ಹರಳುಗಳು ಕಾಣದ ಸ್ವರೂಪದಲ್ಲಿ ನೀರಿನಲ್ಲಿ ಯಾವಾಗಲೂ ಇರುತ್ತದೆ ಎಂದು ಹೇಳುತ್ತಾರೆ. ಹೀಗೆ ಯಾವುದೇ ವ್ಯಕ್ತಿ ಎಷ್ಟೇ ದೂರದಲ್ಲಿದ್ದರೂ ಅವರಲ್ಲಿ ದೈಹಿಕವಾಗಿ ಏನಾದರೂ ತೊಂದರೆ ಇದ್ದರೆ ಬರೀ ನೀರಿನಿಂದಲೇ ಸರಿ ಮಾಡಬಹುದು ಎನ್ನುತ್ತಾರೆ. ಮನುಷ್ಯನ ದೇಹದಲ್ಲಿರುವುದು ೭೦% ಬರೀ ನೀರು ಮತ್ತೆ ಇದರಲ್ಲಿ ಕಾಣದಂತಿರುವ, ಭಾವನೆಗಳಿಗೆ ಸ್ಪಂದಿಸುವ ಸ್ಫಟಿಕದಂತಿರುವ ಹರಳುಗಳು ಸಿದ್ಧವಾದರೆ, ಮನುಷ್ಯನ ವ್ಯಾಧಿಗಳೂ ದೂರವಾಗುತ್ತವೆ ಎಂದು ಸಾವಿರಾರು ಯಶಸ್ವೀ ಪ್ರಯೋಗಗಳನ್ನು ಮಾಡಿದ್ದಾರಂತೆ. ಅವರ ಸಂಶೋಧನಾ ಸಂಸ್ಥೆಯು ಬಹಳ ದೊಡ್ದ ಪ್ರಮಾಣದಲ್ಲಿ ಬೆಳೆದಿದೆ.                             ಇದರಿಂದಾದರೂ ಸ್ಪೂರ್ತಿ ತೆಗೆದುಕೊಂಡು ನಮ್ಮ ದೇಶದ ವಿಜ್ಞಾನಿಗಳು ನೀರಿನ ಮೇಲೆ ವೇದ ಮಂತ್ರಗಳ ಪ್ರಭಾವ, ಗಂಗೆಯ ನೀರು, ತೀರ್ಥಗಳು ಇದನ್ನೆಲ್ಲಾ ಪರೀಕ್ಷಿಸಿ ಅದರಲ್ಲಾಗುವ ಪರಿಣಾಮಗಳನ್ನು ಪ್ರಯೋಗ ಮಾಡಿ ನಿರೂಪಿಸಿದರೆ ವಿದ್ಯಾವಂತರಿಗೂ, ಬುದ್ಧಿವಂತರಿಗೂ ನಮ್ಮ ಧರ್ಮ ಮತ್ತು ಆಚರಣೆಗಳ ಬಗ್ಗೆ ಗೌರವ ಮೂಡುವ ಕಾಲ ದೂರವಿಲ್ಲ!!

Comments

  1. ತುಂಬ ಸ್ವಾರಸ್ಯವಾದ ಲೇಖನ. ಇದರಲ್ಲಿ ಚಿಂತನಾರ್ಹವಾದ ವಿಷಯಗಳು ಹಲವಾರು. ಲೇಖಕರಿಗೆ ಧನ್ಯವಾದಗಳು.

    ReplyDelete
  2. Nice mixture of science and Adhyathma which is most needed these days for new generation.

    ReplyDelete
  3. ಶ್ರೀಯುತ ಅಶೋಕ್ ತಮ್ಮ ಲೇಖನದ ಮೌಲಗಳು ನಮ್ಮ ಧರ್ಮ ಮತ್ತು ಆಚರಣೆಗಳ ಬಗ್ಗೆ ಗೌರವ ಹಾಗೂ ಆಳವಾದ ಚಿಂತನೆ ಮೂಡಿಸುತ್ತದೆ. ಧನ್ಯವಾದಗಳು

    ReplyDelete
  4. ಬಹುಶಃ ಮುಂದೆ ಇದೇ ಒಂದು ಹೊಸ ವಿಜ್ಞಾನ ವಾಗಿ ಬೆಳೆಯಬಹುದು ಅಂತ ಅನಿಸುತ್ತದೆ.

    ReplyDelete
    Replies
    1. ನಿಜ ಸಾರ್, ಹಿಂದೆ ಕವಿಗಳು ಲೇಖಕರು ಹೇಳಿದಮಾತು ಕೆಲವು ಸತ್ಯವಾಗಿವೆ. ಹೊರನಾಡ ಚಿಲುಮೆ ಓದಿ ಪ್ರೋತ್ಸಾಹಿಸುತ್ತಿರುವ ತಮಗೆ ಧನ್ಯವಾದಗಳು.

      Delete

Post a Comment