ಶೋಣಿತದ ಸೆಳವಿನಲ್ಲಿ.....


ಶೋಣಿತದ ಸೆಳವಿನಲ್ಲಿ.....
ಹಾಸ್ಯ ಲೇಖನ - ಅಣುಕು ರಾಮನಾಥ್ 

ರೆಡ್ ಸಿಗ್ನಲ್ ಬಂತು.
ಸಾಮಾನ್ಯ ಜನಕ್ಕೆ ಹಸಿರು, ಹಳದಿ ಸಿಗ್ನಲ್ಗಳು ಬಂದರೆ ಖುಷಿ. ನನಗೆ ಕೆಂಪೇ ಇಷ್ಟ. ಹಳದಿಯಲ್ಲಿ ಝುಮ್ಮನೆ ಸಾಗುವ, ಹಸಿರಿದ್ದರಂತೂ ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡವರು ದೇಶದಿಂದ ಪರಾರಿಯಾಗುವ ಸ್ಪೀಡಿನಲ್ಲಿ ಮುಂದೋಡುವ ಮಂದಿ, ಕೆಂಪು ಬಿದ್ದಾಗ, ರೈಡ್ ಆದ ಹಗರಣದ ಮಂತ್ರಿಯಂತೆ ಚಡಪಡಿಸುತ್ತಾ ನಿಂತಿರುವುದನ್ನು ನೋಡುವುದೇ ಒಂದು ಮೋಜು.
ಆದರೆ ಎಲ್ಲರೂ ಚಡಪಡಿಸುತ್ತಾ ನಿಲ್ಲುವುದಿಲ್ಲ ಬಿಡಿ. ಕೆಂಪು ಸಿಗ್ನಲ್ ಕಂಡಾಕ್ಷಣ ಜೇಬಿಗೆ ಕೈಹಾಕಿ ವ್ಯಾಟ್ಸ್ಯಾಪ್ ಅಪ್ಡೇಟ್ ಮಾಡಿಕೊಳ್ಳುವ ನೆಟ್ ಪೀಡಿತರು; ಕಾರಿನಲ್ಲಿ ಕುಳಿತೇ ಕೆನ್ನೆ ಕೆಂಪಾಗಿಸಿಕೊಳ್ಳುವ ಚೆಲುವೆಯರು (ಊಹೂಂ. ನಾಚಿಕೆಯಿಂದಲ್ಲ; ಅಶೋಕವೃಕ್ಷದ ಟೊಂಗೆಗಳಂತೆ ಸುಂದರವಾದ ಹಿತಗೆಂಪಿನ ಬಣ್ಣದ ಬೆರಳುಗಳಿಂದ ರೌಜ್ ಹಚ್ಚಿಕೊಳ್ಳುವುದರಿಂದ!); ರೇರ್ ವ್ಯೂ ಮಿರರ್ನಲ್ಲಿ ಕಂಡ ಚೆಲುವೆಯನ್ನು, ಅವಳಿಗೆ ತಿಳಿಯದಂತೆಯೇ ಸೇರಿಸಿಕೊಂಡು, ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಬೈಕಿಗರು; ಇವರುಗಳ ವ್ರತಭಂಗಕ್ಕೆಂದೇ ಇರುವ ವಿವಿಧ ನಿರುಪಯುಕ್ತ ವಸ್ತುಗಳನ್ನು ಹಿಡಿದಿರುವಮಾರ್ಕೆಟಿಂಗ್ ಮೇನಕೆಯರು’; ದೊಡ್ಡ ಕಾರಿನ ಹಿಂದೆ ಹೆಲ್ಮೆಟ್ಟಿಲ್ಲದ ತಲೆಯನ್ನು ಮರೆಯಿಸಲು ಯತ್ನಿಸುವತ್ರಿಬಲ್ ರೈಡ್ಪಡ್ಡೆಗಳು; ಚಿಟಿಕೆ ಹೊಡೆಯುವಷ್ಟರಲ್ಲಿ ಅಲ್ಲದಿದ್ದರೂ ಚಪ್ಪಾಳೆ ತಟ್ಟುವಷ್ಟರಲ್ಲೇ ನೂರಾರು ರೂಪಾಯಿಗಳನ್ನು ಸಂಪಾದಿಸುವ ಅದ್ವಿತೀಯ ತೃತೀಯರು, ಇವರೆಲ್ಲರ ಎಲ್ಲ ಚಟುವಟಿಕೆಗಳಿಗೂಗ್ರೀನ್ ಸಿಗ್ನಲ್ಕೊಡುವುದು ರೆಡ್ ಸಿಗ್ನಲ್ಲೇ.
ಒಂದು ವೇಳೆ ಕೆಂಪೇ ಬೀಳದಿದ್ದರೆ ಕಾರಿನ ಚೆಲುವೆಯ ಕೆನ್ನೆ ಕೆಂಪಾಗುತ್ತಿರಲಿಲ್ಲ, ಪಡ್ಡೆಗೆ ಸೆಲ್ಫಿ ಸಿಗುತ್ತಿರಲಿಲ್ಲ, ತೃತೀಯಿಯ ಹೊಟ್ಟೆ ಹೊರೆಯುತ್ತಿರಲಿಲ್ಲ. ಕೆಂಪು ಫುಲ್ಸ್ಟಾಪ್ ಅಲ್ಲ, ಜೀವನೋತ್ಸಾಹದ ಕಾಮಾ
ಕೆಂಬಣ್ಣದ ಹುಚ್ಚು ಇಂದು ನೆನ್ನೆಯದಲ್ಲ. ಸಮುದ್ರಮಂಥನದ ಕಾಲದಿಂದಲೂ ಕೆಂಪು ಬಣ್ಣವು ಸೊಗಸು ಎನ್ನಲು ಹಲವಾರು ಉದಾರಹಣೆಗಳು ಕಂಡುಬರುತ್ತವೆ. ಸಮುದ್ರವನ್ನು ಕಡೆದಾಗ ದೊರೆತ ವಸ್ತುಗಳಲ್ಲಿ ಒಂದಾದ ಪಾರಿಜಾತ ಕೆಂಪು-ಬಿಳಿಗಳ ಸೊಗಸಾದ ಮಿಶ್ರಣ. ಗಿಡದ ಒಂದೇ ಒಂದು ಹೂ ದ್ವಾಪರದಲ್ಲಿ ದ್ರೌಪದಿಯ ಮೂಗಿಗೆ ಬಡಿದು (ಹೂವೋ, ವಾಸನೆಯೋ ಬಲ್ಲವರೇ ಹೇಳಬೇಕು) ‘ಕುಸುಮದ ಜಾಡು ಹಿಡಿದು ಮತ್ತಷ್ಟನ್ನು ತಾರೈ ಮರುತಪುತ್ರನೆಎಂದು ಸಾಫ್ಟ್ವೇರ್ ಮಂದಿಯನ್ನುವಿತ್ ಇಮ್ಮೀಡಿಯಟ್ ಎಫೆಕ್ಟ್ಪರದೇಶಕ್ಕೆ ಅಟ್ಟುವಂತೆಯೇ ಭೀಮನನ್ನು ದ್ರೌಪದಿ ಅಂದು ಅಟ್ಟಿದ ಉಲ್ಲೇಖವಿದೆ. ಪಾರಿಜಾತವನ್ನು ನಾರದನು ಇಂದ್ರಲೋಕದಿಂದ ತಂದು ಕೃಷ್ಣನಿಗಿತ್ತು, ಕೃಷ್ಣ ರುಕ್ಮಿಣಿಗಿತ್ತು, ರುಕ್ಮಿಣಿ ಸತ್ಯಭಾಮೆಯರಲ್ಲಿ ವಿರಸವಾಗಿ, ಸಂಸಾರದಲ್ಲಿ ಸಮರಸ ಮತ್ತೆ ತರಲು ಕೃಷ್ಣ ಇಂದ್ರನೊಡನೆ ಹೋರಾಡಿ ಮರವನ್ನು ಭೂಮಿಗೆ ತರುವ ವಿವರಣೆಯು ಶ್ರೀಕೃಷ್ಣ ಪಾರಿಜಾತ ಕೃತಿಯಲ್ಲಿ ದೊರಕುತ್ತದೆ. ಪಾರಿಜಾತದ ಹೂವಿನಲ್ಲಿ ಇನಿತೇ ಕೆಂಪು ಇದ್ದರೂ ಅದರಿಂದ ಮತ್ಸರದ ಕೆಂಪು, ಯುದ್ಧದ ಕೆಂಪು ಹರಡಿದ್ದುಕಮಲೇ ಕಮಲೋತ್ಪತ್ತಿಃಎನ್ನುವಂತೆಯೇಲೋಹಿತೇ ಲೋಹಿತೋತ್ಪತ್ತಿಃಎಂಬ ಚತುರೋಕ್ತಿಗೆ ಕಾರಣವಾಗಬಹುದೇನೋ.
ಸಮುದ್ರಮಥನದಲ್ಲಿ ಹೊರಬಂದ ಸಮುದ್ರರಾಜನ ಮಗಳಾದ ಲಕ್ಷ್ಮಿಯಂತೂ ಕೆಂಪೋ ಕೆಂಪು. ಅದು ನನಗೆ ಹೇಗೆ ತಿಳಿಯಿತು ಎನ್ನುವಿರೆ? ನನ್ನ ಜೀವನದಲ್ಲಿ ಕಂಡ ಮೊದಲ ಕ್ಯಾಲೆಂಡರ್ನಲ್ಲಿದ್ದ ಲಕ್ಷ್ಮಿ ಕುಂಕುಮದ ಬಣ್ಣದ ಸೀರೆ ತೊಟ್ಟು, ಮ್ಯಾಚಿಂಗ್ ಬ್ಲೌಸ್ ಧರಿಸಿ, (ನನಗೆ ಅಂದಿನಿಂದ ಇಂದಿನವರೆಗೆ ವಿಷಯದಲ್ಲಿ ಅಚ್ಚರಿಯೇ ಅಚ್ಚರಿ! ಸಮುದ್ರದ ಒಳಗಿದ್ದ ಲಕ್ಷ್ಮಿಗೆ ಮ್ಯಾಚಿಂಗ್ ಬ್ಲೌಸ್ ಪೀಸ್ ಸಿಕ್ಕಿದ್ದು ಹೇಗೆ ಎಂಬ ವಿಸ್ಮಯ ಒಂದಾದರೆ, ಆಗಿನ ಕಾಲದಲ್ಲಿಯೇ ಡಿಸೈನರ್ ಬ್ಲೌಸ್ ಹೊಲೆಯುವÀ ಟೈಲರ್ ಇದ್ದುದೊಂದು ಅಚ್ಚರಿ. ಮತ್ತೂ ದೊಡ್ಡ ಅಚ್ಚರಿಯೆಂದರೆ ಲಕ್ಷ್ಮಿ ತವರಿನಿಂದ ಭೂಮಿಗೆ ಹೊರಡುವ ಸಮಯಕ್ಕೆ ಸರಿಯಾಗಿ ಬ್ಲೌಸ್ ಹೊಲೆದುಕೊಟ್ಟದ್ದು! ನನಗೆ ತಿಳಿದಂತೆ ಹಬ್ಬಕ್ಕೆಂದು ಹೊಲೆಸುವ ಬ್ಲೌಸ್ ಹಬ್ಬದ ಮರುದಿನ, ಮದುವೆಮನೆಗೆ ಹೋಗುವಾಗ ತೊಡಲೆಂದು ಹೊಲೆಸುವ ಬ್ಲೌಸ್ ನೂತನದಂಪತಿಗಳು ಹನಿಮೂನಿನಿಂದ ಹಿಂತಿರುಗಿದ ದಿನ ದೊರಕುವುದು ಸಹಜ.) ಚಿಗುರುಗೆಂಪಿನ ಕೈಗಳಿಂದ ಆಶೀರ್ವಾದ ಮಾಡುತ್ತಿದ್ದುದು ನನಗೆ ಇನ್ನೂ ನೆನಪಿದೆ. ಕ್ಯಾಲೆಂಡರಿನ ಲಕ್ಷ್ಮಿಯ ಕೆಂದುಟಿ ಈಗಿನ ಮೇಕಪ್ರಹಿತ ಮತ್ತು ಮೇಕಪ್ಸಹಿತ ಬಾಲಿವುಡ್ ನಟಿಯರಲ್ಲೂ ಕಂಡುಬರುವುದಿಲ್ಲ. ನನಗೆ ದೇವರೆಂದರೆ ಕ್ಯಾಲೆಂಡರಲ್ಲಿ ಕಂಡಿರುವುದು ಅಥವ ತೆಲುಗು ಚಿತ್ರಗಳಲ್ಲಿ ನೋಡಿರುವುದೇ. ಆದ್ದರಿಂದ ನನ್ನ ಕಲ್ಪನೆಯಲ್ಲಿ ಕೃಷ್ಣ ಎಂದರೆ ಎನ್ಟೀಆರೇ, ಲಕ್ಷ್ಮಿ ಎಂದರೆ ಕ್ಯಾಲೆಂಡರ್ ಲಕ್ಷ್ಮಿಯೇ
ಜಗತ್ತಿನಲ್ಲಿ ಇರುವ ಮೂಲ ಬಣ್ಣಗಳು ಮೂರೇ - ಹಳದಿ, ನೀಲಿ ಮತ್ತು ಕೆಂಪು. ಪ್ರಕೃತಿಮಾತೆಯ ಬಣ್ಣವೆಂದು ಕರೆಯಲ್ಪಡುವ ಹಸಿರು ಸಹ ನೀಲಿ ಮತ್ತು ಹಳದಿಯ ಮಿಶ್ರಣವೇ. ಜಗದ ಮೂಲ ಬಣ್ಣಗಳಲ್ಲಿ ನೀಲಿಯನ್ನು ವಿಷ್ಣುವು ಕಾಯದಲ್ಲಿಯೂ, ಶಿವನು ಕಂಠದಲ್ಲಿಯೂ ಧರಿಸಿದುದರಿಂದ ಮತ್ತು ಹಳದಿಯನ್ನು ಪೀತಾಂಬರದಲ್ಲಿ ವಿಷ್ಣುವು ಹೊಂದಿದುದರಿಂದಮನುಜನಿಗೇನೀವುದು?’ ಎಂದು ಪಾರ್ವತಿ ಶಿವನನ್ನು ಕೇಳಿದಳಂತೆ. ಶಿವನು ವಿಷ್ಣುವಿನೊಡನೆ ಸಮಾಲೋಚನೆ ನಡೆಸಿ, ಮನುಜರ ಅರಿಷಡ್ವರ್ಗಗಳಲ್ಲಿ ಕಾಮ, ಮೋಹಗಳಲ್ಲಿ ಮೊದಮೊದಲು ಕಂಡುಬರಬಹುದಾದ ಲಜ್ಜೆಗೂ;  ಕ್ರೋಧ, ಮದ, ಮತ್ಸರ, ಲೋಭಗಳಲ್ಲಿ ಹಂತಹಂತವಾಗಿ ಕಂಡುಬರುವ ಕ್ರೋಧಕ್ಕೂ, ಮ್ಯಾಚಿಂಗ್ ಆಗುವ ಕೆಂಪನ್ನೇ ಕೊಡುವುದೆಂದು ತೀರ್ಮಾನಿಸಿದರಂತೆ. ಅಂದಿನಿಂದ ಮನುಜವರ್ಗಕ್ಕೆ ಕೆಂಪಿನ ನಂಟು ಉಂಟಾಯಿತೆಂದು ಬುರುಡೆ ಪುರಾಣ ಉಲ್ಲೇಖಿಸುತ್ತದೆ. 
ಬುರುಡೆ ಪುರಾಣದಲ್ಲಿ ಮತ್ತೊಂದು ಉಲ್ಲೇಖವಿದೆ. ಒಂದಾನೊಂದು ಕಾಲದಲ್ಲಿಈಶ್ವರನಿಗೊಂದು ಹೆಣ್ಣು ಜೊತೆ ಹೊಂದಿಸಬೇಕುಎಂದು ದೇವತೆಗಳೆಲ್ಲ ತೀರ್ಮಾನಿಸಿದಾಗ ಕಾಮನ ಬಿಲ್ಲಿನಿಂದ ಚಿಮ್ಮಿದ ಬಾಣದಲ್ಲಿ ಕೆಂಪು ಇದ್ದಿರಲೇಬೇಕು. ಆದರೆ ಈಶ್ವರನುಮುಳ್ಳನ್ನು ಮುಳ್ಳಿಂದಲೇ ತೆಗೆಯಬೇಕುಎಂಬ ಗಾದೆಯತಾಯಿಗಾದೆಯಾದಪ್ರೇಮದ ಕೆಂಪನ್ನು ಕೋಪದ ಕೆಂಪಿನಿಂದಲೇ ನಂದಿಸಬೇಕುಎಂಬ ತೀರ್ಮಾನಕ್ಕೆ ಬಂದುದರಿಂದ ಜಗದಲ್ಲಿ ಬಿಳಿಯ ತುಂಬೆಯೇ ಹೆಚ್ಚಾಗಿ, ಕೆಂಪು ಹೂಗಳು ಅದೃಶ್ಯವಾಗಿದ್ದವೆಂದು ಬೊಗಳೇಶ್ ಟಿವಿಯ ಪೆಕ್ರೇಶ್ ಭವಿಷ್ಯಣ್ಣನವರ್ ಹೇಳಿದ್ದಾರೆ. ನಂತರ ಎಷ್ಟು ವರ್ಷಗಳು ಕೆಂಪು ಇರಲಿಲ್ಲವೋ ಅಥವ ಇದ್ದರೂ ಅದರ ಉಲ್ಲೇಖ ಇರಲಿಲ್ಲವೋ ತಿಳಿಯದು.
ಆದರೆ 1660 ದಶಕದಲ್ಲಿ ಒಬ್ಬ ಆಂಗ್ಲಕವಿಯು ಗುಲಾಬಿ ಏಕೆ ಕೆಂಪಾಯಿತೆಂದು ಕಂಡುಹಿಡಿದುಬಿಟ್ಟ.




Previously all the roses in the world were white
But when the princes of the land
Came to the garden 
And when the roses saw her beauty
They blushed and became red!


(ಪ್ರಪಂಚದಲ್ಲಿ ಎಲ್ಲೆಡೆಯೂ ಕೇವಲ ಬಿಳಿ ಗುಲಾಬಿಗಳೇ ಇದ್ದವು. ಆದರೆ ದೇಶದ ರಾಜಕುವರಿಯು ತೋಟಕೆ ಬರಲು, ಬಿಳಿಯ ಬಣ್ಣಕೆ ಹೊಸದೆ ವ್ಯಾಖ್ಯಾನವನು ನೀಡುವ ಅವಳ ಬಿಳುಪಿಗೆ ನಾಚಿ ಕೆಂಪಾದವೋ ಗುಲಾಬಿಗಳ್). ಅಂದು ಕೆಂಪಾದ ಗುಲಾಬಿಗಳು ಇಂದಿಗೂ ಕೃಕತವಾಗಿಯಾದರೂ ಕೆಂಪುಕೆಂಪಾಗುವ ಬಾಯ್-ಗರ್ಲ್ ಫ್ರೆಂಡ್ಗಳ ಪರಸ್ಪರ ಕಾಣಿಕೆಯಾಗಿ ಪ್ರತಿ ಫೆಬ್ರವರಿ 14ರಂದು ರಾರಾಜಿಸುತ್ತಿವೆ.
ಕೆಂಪಿನ ಸೊಬಗನ್ನು ಬಣ್ಣಿಸದ ಕವಿಗಳೇ ಇಲ್ಲ. ಒಂದು ಕಾಡು. ಅಲ್ಲೊಂದು ಮರ. ಮರದ ಮೇಲೆ ಗಿಳಿಗಳ ಗೂಡು. ದೊಡ್ಡ ಗಿಳಿಗಳು ಹೊರಹಾರಿವೆ. ಬೇಡರ ಗುಂಪೊಂದು ಪಕ್ಷಿಗಳ ಬೇಟೆಗೆ ಬಂದಿದೆ. ಅದರಲ್ಲೊಬ್ಬ ಮುದಿ ಬೇಡಬೇಟೆಯೇ ಬೇಡಎನ್ನುತ್ತಾ ಇದೇ ಮರದ ಕೆಳಗೆ ಕುಳಿತಿದ್ದಾನೆ. ಮೇಲೆ ಗಿಳಿಮರಿಗಳ ಕಲರವ ಕೇಳಿ ತಲೆಯೆತ್ತಿ ನೋಡುತ್ತಾನೆ. ಕವಿ ಬಾಣನ ಕೃತಿಯಲ್ಲಿನ ಪದ್ಯವನ್ನು ಕವಿ ನಾಗವರ್ಮ ಕನ್ನಡಕ್ಕೆ ಅನುವಾದಿಸಿರುವ ಪರಿ ಹೇಗಿದೆ ನೋಡಿ:
ಜಳಜದ ಮೊಗ್ಗೆಯಂತೆ ಮುಗುಳಂತೆಳೆಯಕ್ಕೆಯ ಕಾಯ್ಗಳಂತೆ ಶಾ
ಲ್ಮಲಿ ಕುಸುಮಂಗಳಂತೆ ತರುನೀಡನಿಕಾಯದಿನೆಲ್ಲವಾಗಳಾ
ಗಳೆ ಗರಿವೊಯ್ವ ಕಂದೆರೆವ ತುಪ್ಪಳೊಡರ್ಚುವ ಕೆಂಪನಾಳ್ವ ಕೋ
ಮಳ ಶಿಶುಶಾಬಕ ಪ್ರಕರಮಂ ತೆಗೆದಂ ದಯೆಗೆಟ್ಟು ಲುಬ್ಧಕಂ
ಜಳಜವೆಂದರೆ ತಾವರೆ; ತಾವರೆಯ ಮೊಗ್ಗಿನ ಕೆಂಪಾಗಲಿ, ನಸು ಅರಳಿದ ಹೂವಿನ ಕೆಂಪಾಗಲಿ ಮನಕ್ಕೆ ಮುದ ನೀಡುವುವೇ. ಎಕ್ಕೆಯ ಕಾಯಿಗಳ ಕೆಂಪು ಕಣ್ಗೆ ತಂಪು; ಬೂರುಗದ ಕೆಂಪುಕೆಂಪಾದ ಹೂಗಳನ್ನು ಹೊತ್ತು ಹರಡಿರುವ ರೆಂಬೆಕೊಂಬೆಗಳ ಅಂದ ವರ್ಣಿಸಲಸದಳ. ಇವೆಲ್ಲದರ ಸೊಗಸಾದ ಕೆಂಪನ್ನು ಆಗತಾನೇ ಮೂಡುತ್ತಿದ್ದ ತುಪ್ಪಳದಲ್ಲಿ ಬೇಡನು ಕಂಡನೆಂಬುದು ಕವಿಯ ವರ್ಣನೆ. ಎಳೆಯ ಹಕ್ಕಿಗಳ ಮೈಮೇಲೆ ರೆಕ್ಕೆಗಳು ಸಂಪೂರ್ಣ ಮೂಡದಿರುವಾಗ ಮೂಡುವ ಕೆಂಪನ್ನು ವರ್ಣಿಸಲು ಕವಿಯು ಪ್ರಕೃತಿಯ ರಾಗರಂಜಿತತೆಯನ್ನೇ ಹೋಲಿಕೆಗೆ ಐತಂದಿರುವುದು ಕಾವ್ಯದ ಸೊಬಗನ್ನು ಹೆಚ್ಚಿಸಿದೆ.
            ಬೇಡನ ಕೈಯಲ್ಲಿ ಸಿಕ್ಕ ಕೆಂಗಿಳಿಗಳ ಸೊಬಗನ್ನು ನಾಗವರ್ಮನು ವರ್ಣಿಸಿದರೆ ವರಕವಿ ಬೇಂದ್ರೆಯವರು ಹಕ್ಕಿಗಳನ್ನು ವರ್ಣಿಸುವಲ್ಲಿ ತಾವೂ ಸಿದ್ಧಹಸ್ತರೇ ಎಂದುಹಕ್ಕಿ ಹಾರುತಿದೆ ನೋಡಿದಿರಾಕವನದಲ್ಲಿ ಪ್ರದರ್ಶಿಸಿದ್ದಾರೆ.
ಕರಿನೆರೆ ಬಣ್ಣದ ಪುಚ್ಚಗಳುಂಟು
ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು
ಕೆನ್ನನ ಹೊನ್ನನ ಬಣ್ಣ-ಬಣ್ಣಗಳ
ರೆಕ್ಕೆಗಳೆರಡೂ ಪಕ್ಕದಲುಂಟು
ಹಕ್ಕಿ ಹಾರುತಿದೆ ನೋಡಿದಿರಾ....
ಎನ್ನುತ್ತಾ ಬೇಂದ್ರೆಯವರು ಹಕ್ಕಿಗಲ್ಲದೆ ಕಾವ್ಯಕ್ಕೇ ರೆಕ್ಕೆಯನ್ನು ಒದಗಿಸಿದ್ದಾರೆ. ಹಕ್ಕಿಯ ಹಾರಾಟಕ್ಕೆ ಮನಸೋತವರು ಎನಿತೋ, ಹೆಣ್ಣಿನ ಸೌಂದರ್ಯಕ್ಕೆ ಮನಸೋತವರೂ ಅನಿತೇ ಎಂದುಹಕ್ಕಿ ಸಮೀಕ್ಷೆನಡೆಸುವ ಪಡ್ಡೆ ಹುಡುಗರ ಅಭಿಪ್ರಾಯವಂತೆ. ಬೀಚಿಯೂ ತಮ್ಮಅಂದನಾ ತಿಂಮದಲ್ಲಿಕಣ್ಣಲ್ಲಿ ಮೀನು, ಕೊರಳಲ್ಲಿ ಕೋಗಿಲೆ, ನಡೆಯಲ್ಲಿ ಹಂಸ, ಕಟಿಯಲ್ಲಿ ಸಿಂಹ, ನರ್ತನದಲ್ಲಿ ನವಿಲು, ಘರ್ಜಿಸಿದಾಗ ಹೆಣ್ಣುಹುಲಿ; ಪ್ರಾಣಿಗಳು ಆರು ಹೆಣ್ಣಿನಲಿ ತಿಂಮಎಂದಿದ್ದಾರೆ. ಹಂಸ, ಕೋಗಿಲೆಗಳಿಗೆ ಹೋಲಿಕೆಯಿರುವ ಹೆಣ್ಣನ್ನು ವರ್ಣಿಸುವಲ್ಲಿ ಕನ್ನಡದ ಪ್ರೇಮಕವಿ ಕೆಎಸ್ ಎಂದಿಗೂ ಹಿಂದೆ ಬಿದ್ದವರಲ್ಲ. 
ಸಿರಿಗೆರೆ ನೀರಲ್ಲಿ ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನ ಹೆಸರು
ಗುಡಿಯ ಗೋಪುರದಲ್ಲಿ ನೆರೆವ ದೀಪಗಳಲ್ಲಿ ಬೆಳಕಾಗಿ ನಿನ್ನ ಹೆಸರು
ಎಂದು ಹಾಡಿ ಹೊಗಳುವ ಕವಿಯ ಕಾವ್ಯದಲ್ಲಿಯೂಕೆಂಪಾಗಿಅವಳ ಹೆಸರು.
ಕೆಂಪಿನ ಪ್ರೀತಿ, ಪ್ರೀತಿಯ ಕೆಂಪಿಗೆ ಒಂದು ವಿಧವಾದ ಆಕರ್ಷಣೆಗೆ ನಿತ್ಯನೂತನತೆಯನ್ನು ನೀಡುವ ಶ್ಲೋಕವಂತೂ ಪರ್ಮನೆಂಟ್ ವಿರಹಿಗಳ ಟ್ರೇಡ್ಮಾರ್ಕ್ ಆಗಿದೆ.
ಅನುರಾಗವತೀ ಸಂಧ್ಯಾ ದಿವಸಃ ತತ್ಪುರಸ್ಸರಃ|
ಅಹೋ ದೈವಗತೀಹಿಧೃಕ್ ತಥಾಪಿ ಸಮಾಗಮಃ||
ಅನುರಾಗದಿಂದ ಕೆಂಪಾದ ಮುಖವುಳ್ಳ ಸಂಧ್ಯೆಗೆ (ಗೋಧೂಳಿನ ಕೆಂಪಿನವಳು) ಸೂರ್ಯನ ಮೇಲೆ ಅಪಾರ ಪ್ರೇಮ. ಪ್ರತಿದಿನವೂ ಅವನ ನಿರೀಕ್ಷೆಯಲ್ಲಿರುತ್ತಾಳೆ. ಸೂರ್ಯನೂ ಅವಳನ್ನು ಸಂಧಿಸುವ ತವಕದಿಂದ ಬರುತ್ತಾನೆ. ಆದರೆ ಇಂದಿಗೂ ಸೂರ್ಯ, ಸಂಧ್ಯೆಯರ ಮಿಲನ ಆಗಿಯೇ ಇಲ್ಲ ಎಂಬ ಎಟರ್ನಲ್ ಪ್ರಣಯಗೀತೆಯನ್ನುಛಂದೋಮಿತ್ರದಲ್ಲಿ ಓದಿಯೇ ಸವಿಯಬೇಕು.
            ಶೋಣಿತದ ಶ್ರೇಯವನ್ನು ಕಾಣುವಲ್ಲಿ ಇಂದಿನ ಕವಿಗಳೂ ಹಿಂದೆ ಬಿದ್ದಿಲ್ಲ. ಗುಪ್ತ ಪ್ರೇಮಿಯೊಬ್ಬ ಛದ್ಮವೇಷದಲ್ಲಿ ಪ್ರೇಯಸಿಯ ಮನೆಯ ಸಮಾರಂಭವೊಂದಕ್ಕೆ ನುಸುಳಿ ಭೋಜನದ ಸಾಲಿನಲ್ಲಿ ಕುಳಿತಿದ್ದಾನೆ. ಅವನನ್ನು ವೇಷದಲ್ಲಿಯೂ ಗುರುತಿಸಿದ ಪ್ರೇಯಸಿ ಅವನಿಗೆ ಬಡಿಸಲು ಬರುವಷ್ಟರಲ್ಲಿ ಅವಳ ಮುಖ ರಕ್ತರಂಜಿತವಾಗಿದೆ. ಅದನ್ನು ಕಂಡ ಪ್ರೇಮಿಕೆನ್ನೆ ಉಪ್ಪಿನಕಾಯಿ ಆದುದೇತಕೆ ಚೆನ್ನೆಎಂದು ನುಡಿವುದರ ಸೊಬಗು ಚಂದ್ರಶೇಖರ ಐತಾಳ್ ಎಂಬ ಮಂಗಳೂರಿನ ಕವಿಯ ಕವನದಲ್ಲಿ ಕಂಡುಬರುತ್ತದೆ.
ಗೀತೆಯಲ್ಲೇನು, ಚಿತ್ರಗೀತೆಯಲ್ಲಿಯೂ ಹೆಣ್ಣು, ಕೆಂಪುಗಳು ಜೊತೆಜೊತೆಯಾಗಿ ಕಂಡುಬಂದಿವೆ. 1967ಪ್ರೇಮಕ್ಕೂ ಪರ್ಮಿಟ್ಟೇ...’ ಚಿತ್ರದಲ್ಲಿ ನಾಯಕಿಯನ್ನುಕೆಂಪು ರೋಜಾ ಮೊಗದವಳೇ; ಕೆಂಡಸಂಪಿಗೆ ಮುಡಿದವಳೇ; ಕೋಪ ನಟಿಸಿ ಹೋಗುವಳೇ; ನಿಲ್ಲೇ ನಿಲ್ಲೇ ನನ್ನವಳೇಎಂದು ನಾಯಕ ತಡೆದು ನಿಲ್ಲಿಸುವಾಗ ರೋಜಾ, ಕೆಂಡಸಂಪಿಗೆ, ಕೋಪಗಳಲ್ಲಿ ಕೆಂಪೇ ಎದ್ದುಕಾಣುತ್ತದೆ.
1971ಸೋತು ಗೆದ್ದವಳುಚಿತ್ರದಲ್ಲಿ ಗಂಡುಕೆಂಪು ಗುಲಾಬಿಯ ಚೆಂದುಟಿ ಚೆಲುವೆಎಂದು ಹಾಡಿದರೆ, ಹೆಣ್ಣುಕೆಂಪು ಗುಲಾಬಿಯ ಕೆನ್ನೆಯ ಚೆಲುವೆಎಂದು ಹಾಡಿರುವುದು ಕೆಂಬಣ್ಣಕ್ಕೇ ಒಂದು ಡಿe eಣಣeಡಿ ಜಚಿಥಿ ಇರಬಹುದೇನೋ. ಗುಡ್ ಓಲ್ಡ್ ಇಂಗ್ಲಿಷ್ನಲ್ಲಿ ರೆಡ್ ಲೆಟರ್ ಡೇ ಎಂದರೆ ಅವಿಸ್ಮರಣೀಯ ದಿನ ಎಂಬ ಅರ್ಥವಿದೆ. ಆದುದರಿಂದಲೇ ನಾವು ಕ್ಯಾಲೆಂಡರಿನಲ್ಲಿನ ರೆಡ್ ಲೆಟರ್ ಡೇಗಳನ್ನು ಅವಿಸ್ಮರಣೀಯವಾಗಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗುವುದು. ನಮ್ಮ ಹಳೆಯ ಕ್ಯಾಲೆಂಡರ್ ಆದ ಪಂಚಾಂಗಕ್ಕೂ, ಇಂದಿನ ಕ್ಯಾಲೆಂಡರ್ಗೂ ಇರುವ ಪ್ರಮುಖ ವ್ಯತ್ಯಾಸವೆಂದರೆ ಪಂಚಾಂಗ ತಂದಾಗ ಮೊದಲು ಪುಟ ತಿರುಗಿಸಿ ನೋಡುವುದು ಹಿರಿಯರಎಕ್ಸಿಟ್ ಡೇಟ್ಗಳನ್ನು. ಕ್ಯಾಲೆಂಡರ್ನಲ್ಲಿ ತಿರುತಿರುಗಿ ನೋಡುವುದು ಶುಕ್ರವಾರದಂದು ರೆಡ್ ಲೆಟರ್ ಡೇ ಇದೆಯೇ ಎಂದು. ಕೆಂಪಕ್ಷರಿಗಳು ಶುಕ್ರವಾರ ಬಂದರೆ ಗುರುವಾರ ರಾತ್ರಿ ಹೊರಟು ಸೋಮವಾರ ಬೆಳಗಿನವರೆಗೆ ಸುತ್ತಾಡಲು ರಹದಾರಿ ಸಿಕ್ಕಂತೆಯೇ. ಹಬ್ಬ, ಹರಿದಿನಗಳು ಭಾನುವಾರದ ಕೆಂಪಿನೊಡನೆ ಕೋಇನ್ಸೈಡ್ ಆಗಿಬಿಟ್ಟರೆ ಕ್ಯಾಲೆಂಡರ್ ಕೈಯಲ್ಲಿ ಹಿಡಿದೇಹೋಗಿಬಿಟ್ಟರಜೆಗಾಗಿ ಒಂದು ನಿಮಿಷದ ಮೌನದ ಶ್ರದ್ಧಾಂಜಲಿ ಅರ್ಪಿಸುತ್ತೇವೆ. ಕೆಂಪು ದಿನಾಂಕಗಳಿಲ್ಲದ ತಿಂಗಳು ಖಿನ್ನತೆಗೆ ಸೋಪಾನವಕ್ಕು ಮರ್ಮಜ್ಞ.
ಕೆಂಪು ದಿನಾಂಕ ಸೂಚಿಸುವ ರಜೆಯ ಗುಂಗಿನಲ್ಲಿ ಕೆಂಪಿನ ವಿಷಯ ಹೊರಗಿಟ್ಟರೆ ಓದುಗ ಮಹಾಶಯ ಲೇಖನಕ್ಕೆ ರೆಡ್ ಇಂಕ್ನಲ್ಲಿ ರಿಮಾಕ್ರ್ಸ್ ಬರೆದುಬಿಟ್ಟಾನು! ಹಾಗೆ ನೋಡಿದರೆ ನನ್ನ ಓದಿನ ಕಾಲದಲ್ಲಿ ನನ್ನ ಮಾಕ್ರ್ಸ್ಕಾರ್ಡುಗಳಲ್ಲಿ ಢಾಳಾಗಿ ಎದ್ದು ಕಾಣುತ್ತಿದ್ದುದು ಫೇಲ್ ಎನ್ನುವುದನ್ನು ಸೂಚಿಸುವ ಕೆಂಪಂಕಿಗಳು ಮತ್ತು ಅಂತಹ ಸಾಧನೆಗಳನ್ನು ಖಂಡಿಸುವ ಶಿಕ್ಷಕವಿರಚಿತ ಕೆಂಪಕ್ಷರದ ರಿಮಾರ್ಕುಗಳು. ಕೆಂಪಿನಿಂದ ಅಷ್ಟೆಲ್ಲ ತೊಂದರೆಯಾದರೂ ಮಾವಿನ ಚಿಗುರು, ಗಿಣಿಯ ಕೊಕ್ಕು, ನಲ್ಲೆಯ ಚೆಂದುಟಿ, ‘ಅಳುವ ಕಂದನ ತುಟಿಯು ಹವಳದ ಕುಡಿಹಂಗಎನ್ನುವ ಸಾಲುಗಳು ಎದುರಾದಾಗ ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಶೋಣಿತವರ್ಣ ಕರ್ಷಣಂ. ಕೆಂಪು ರಾಮನಿಗೆ ಹಿತವೆನ್ನುವುದು ಪರ್ಣಕುಟಿಯ ಸುತ್ತಮುತ್ತ ಕೆಂಪು ಹೂವಿನ ಗಿಡಗಳ ಬಳಿ ರಾಮನಿರ್ದನೆಂಬ ವರ್ಣನೆಯಲ್ಲಿ ದೊರೆತರೆ, ಕೆಂಪನ್ನು ರಾವಣನ ವರ್ಣನೆಗೂ ಒಗಟೊಂದರಲ್ಲಿ ಬಳಸಲಾಗಿದೆ.
ಹತ್ತುತಲೆ ಕೆಂಪುಂಟು ರಾವಣನಲ್ಲ
ಆರುತಲೆ ಕಪ್ಪುಂಟು ಷಣ್ಮುಖನಲ್ಲ
ಎಂಬಲ್ಲಿ ರಾವಣನ ಬಣ್ಣ ಕೆಂಪು ಎಂಬ ಉಲ್ಲೇಖವಿದೆಯೆಂದು ಮೇಲ್ನೋಟಕ್ಕೆ ತಿಳಿದುಬರುತ್ತದೆ. ಆದರೆ ಒಗಟಿನ ಅರ್ಥ ಅದಲ್ಲ. ಹತ್ತಿಸಿದ ಕೂಡಲೆ ಕೆಂಪನೆಯ ಜ್ವಾಲೆಯನ್ನು ಬೀರುವ ಮತ್ತು ಆರಿಹೋಗುತ್ತಲೆ ಕಪ್ಪಗಾಗುವ ಬೆಂಕಿಕಡ್ಡಿಯ ವರ್ಣನೆ ಇದು.
            ಅಂದಿನ ಲಂಕೇಶನ ಮುಖ ಕೆಂಪೆಂದು ಒಗಟು ಹೇಳಿದರೆ ಇಂದಿನ ಲಂಕೇಶ್ ನಿರ್ದೇಶನದಲ್ಲಿ ಬಂದಎಲ್ಲಿಂದಲೋ ಬಂದವರುಚಿತ್ರದ ಗೀತೆಯಂತೂ ಸರ್ವಂ ಶೋಣಿತಮಯಂ ಕಾವ್ಯಂ.
ಕೆಂಪಾದವೋ ಎಲ್ಲ ಕೆಂಪಾದವೋ
ಹಸಿರಿದ್ದ ಗಿಡಮರ ಬೆಳ್ಳಗಿದ್ದ ಹೂವೆಲ್ಲ
ನೆತ್ತರ ಕುಡಿದ್ಹಾಂಗ ಕೆಂಪಾದವೋ
ಊರು ಕಂದಮ್ಮಗಳು ಕೆಂಪಾದವೋ....
ನಾನೇನೋ ಇದನ್ನುಪ್ರಕೃತಿನಿಷ್ಠಕವಿತೆ ಎಂದು ತಿಳಿದಿದ್ದರೆ. ಆದರೆ ಬಲ್ಲವರೊಬ್ಬರು ಇದು ಕಮ್ಯೂ-ನಿಷ್ಠ ಕವಿತೆ ಎಂದು ತಿಳಿಹೇಳಿದರು. ಅದೆಂತೇ ಇರಲಿ. ಮೊದಲಿಗೆ ಜೈಪುರವನ್ನು ಮಾತ್ರ ಪಿಂಕ್ ಸಿಟಿ ಎಂದು ಕರೆಯುತ್ತಿದ್ದರು. ಈಗ ಅದನ್ನೂ ಒಳಗೊಂಡು ಎಲ್ಲ ನಗರಗಳೂ ಪಿಂಕ್ನಿಂದ ರೆಡ್ನತ್ತ ಸಾಗುವ ನಗರಗಳೇ. ಗುಟ್ಕಾದ ಪ್ರಿಯರೇ ತುಂಬಿರುವ ನಗರಗಳನ್ನು ಈಗ ಹೀಗೆ ಮಾಡಬಹುದೇನೋ:
ಕೆಂಪಾದವೋ ಎಲ್ಲ ಕೆಂಪಾದವೋ
ಹಸಿರಿದ್ದ ಗಿಡಮರ ಕಪ್ಪಗಿದ್ದ ರೋಡೆಲ್ಲ
ಗುಟ್ಕಾದ ಪ್ರಿಯರಿಂದ ಕೆಂಪಾದವೋ
ಮೋರಿ ಫುಟ್ಪಾತುಗಳು ಕೆಂಪಾದವೋ

ಹಲ್ಲು ಬಾಯಿಗಳೆಲ್ಲ ಕೆಂಪಾದವೋ
ಷರ್ಟು ಪೈಜಾಮಗಳು ಕೆಂಪಾದವೋ
ಜೊತೆಜೊತೆಗೆ ನಡೆದಾಗ ಉಗಿದಾಗ ಸಿಡಿದಂಥ
ಕಾಯುತ್ತಾ ಕುಳಿತಾಗ ಬಟ್ಟೇಗೆ ಕವಿದಂಥ
ನುಡಿ ನುಡಿಯ ಹೊರಟಾಗ ಪಿಚ್ಚೆಂದು ಹೊರಬಂದ
ಗುಟ್ಕಾದ ವತಿಯಿಂದ ಕೆಂಪಾದವೋ
ನಗರಗಳೆ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೋ
            ಸ್ವಚ್ಛ್ ಭಾರತ್ ಅಭಿಯಾನ್ಗೆ ಸವಾಲಾಗಿರುವ ಕೆಂಪು ಕೊಂಚ ರೌದ್ರ ಎನಿಸಿತೆ? ಇಷ್ಟೆಲ್ಲ ಉಗಿತವನ್ನು ಸ್ವಚ್ಛಗೊಳಿಸಲು ಜಲವಿಲ್ಲ ಎಂದಿರೆ? ಗುಟ್ಕಾದ ಕೊಳಕಿಂದ ದೂರವಾಗಲು ಬೇಕಾದ್ದು ಜಲದ ಹರಿವಲ್ಲ, ಪ್ರಾಂಜಲ ಮನದ ಹರಿವು. ಒಮ್ಮೆ ನಮ್ಮ ಸಂಸ್ಕøತಿಯತ್ತ ಇಣುಕುನೋಟ ಬೀರಿದರೆ ಸಾಕು. ಕುಟುಂಬದ ವಯಸ್ಕರೆಲ್ಲ ಸೇರಿ ಚಿಗುರೆಲೆಗೆ ಸುಣ್ಣ ಬಳಿದು ಅಡಿಕೆಯೊಡನೆ ಪಿಂಡಿಗಟ್ಟಲೆ ಕವಳ ಜಗಿದು, ನಾಲಿಗೆಯನ್ನು ಹೊರಸೂಸಿದರೆಪೂರ್ಣ ಕೆಂಪಾಗಿದ್ದರೆ ರಸಿಕ; ಕೆಂಪಿನ ತೀವ್ರತೆ ತಗ್ಗಿದ್ದರೆ ಅರಸಿಕಎಂದೆಲ್ಲ ಚುಡಾಯಿಸುತ್ತಿದ್ದ ದಿನಗಳಲ್ಲಿ ರಸಮಯ ಸಮಯವೇ ನಿಜ ಸಮಯ. ಅಂದಿನ ದಿನಗಳ ಮಾತುಗಳು ರಾಮಾಯಣ, ಭಾರತಗಳಿಲ್ಲದಿದ್ದರೆ ಅಪೂರ್ಣವೆನಿಸುತ್ತಿದ್ದವು. ಗದಾಯುದ್ಧದಲ್ಲಿ ಬರುವ
ಕುರುಭೂಬೃಧ್ತೂಲಕೂಲಪವನಂ
ಕೌರವ್ಯಗಂಧೇಭಕೇಸರಿ
ದುಶ್ಯಾಸನರಕ್ತರಕ್ತವದನಂ
ಎಂಬ ವರ್ಣನೆಯಲ್ಲಿ ಭೀಮನು ಕುರುಕುಲವೆಂಬ ಬೆಟ್ಟವನ್ನೇ ನಡುಗಿಸಬಲ್ಲ ಪವನನೆಂದೂ, ದುರ್ಯೋಧನನೆಂಬ ಮದಿಸಿದ ಆನೆಯ ಪಾಲಿಗೆ ಸಿಂಹವೆಂದೂ ವರ್ಣಿಸಿ, ಮೂರನೆಯ ಸಾಲಿನಲ್ಲಿದುಶ್ಯಾಸನರಕ್ತರಕ್ತವದನಂಎಂದಿರುವುದು ಎರಡೆರಡು ಅರ್ಥಗಳನ್ನೀವ ವಿಶಿಷ್ಟ ಸಾಲಾಗಿದೆ. ಹಲವಾರು ಪಂಡಿತರುದುಶ್ಯಾಸನನ ರಕ್ತವನ್ನು ಕುಡಿದುದರಿಂದ ಕೆಂಪಾದ ಮುಖವುಳ್ಳವನುಎಂಬು ಭೀಮಸೇನನನ್ನು ಹೊಗಳಿದರೆ, ‘ರತ್ನನ ಪದಗಳುಖ್ಯಾತಿಯ ಜಿ.ಪಿ. ರಾಜರತ್ನಂರಕ್ತವದನ ಎಂದರೆ ಜಿಗಣೆ. ಭೀಮನು ದುಶ್ಯಾಸನನ ರಕ್ತವನ್ನು ಜಿಗಣೆಯಂತೆ ಹೀರಿದನು ಎಂದು ಇದರ ಅರ್ಥಎಂದು ನುಡಿದಿದ್ದರು.
            ರತ್ನನ ಪದಗಳುಎಂದಾಗ ಎಂಡ್ಕುಡ್ಕರು ನೆನಪಾಗಲೇಬೇಕಲ್ಲ. ವಿ. ಸೀತಾರಾಮಯ್ಯನವರು ಸೂರ್ಯನ ದಿನಚರಿಯ ಬಗ್ಗೆ ಬರೆಯುತ್ತಾಸೂರ್ಯ ಕೆಲಸಕ್ಕೆ ಹಾಜರಾಗುತ್ತಿದ್ದಂತೆಯೇ ಇಡೀ ಜಗತ್ತಿಗೆ ಸುಣ್ಣವನ್ನು ಹೊಡೆಯತೊಡಗುತ್ತಾನೆ. ಮಧ್ಯಾಹ್ನದ ಹೊತ್ತಿಗೆ ತನ್ನ ಸುಣ್ಣದ ಬಕೀಟನ್ನೇ ಪ್ರಪಂಚದ ಮೇಲೆ ಬೋರಲು ಹಾಕಿಬಿಡುತ್ತಾನೆ. ಸಂಜೆ ಮನೆಗೆ ಹೋಗುವಾಗ ಎಲ್ಲ ಮಾಮೂಲಿ ಕಟ್ಟಡ ಕಾರ್ಮಿಕರಂತೆ ಚೆನ್ನಾಗಿ ಕುಡಿದು ಕಣ್ಣುಗಳನ್ನು ಕೆಂಪಾಗಿಸಿಕೊಂಡು ಮನೆಗೆ ತೆರಳಿಬಿಡುತ್ತಾನೆಎನ್ನುತ್ತಾರೆ. ಪಂಪನ ಪರಿಸರ ವರ್ಣನೆಯಲ್ಲಿ ಕೆಂಪು ಕಣಗಿಲೆಯ ವರ್ಣನೆಯಿದ್ದರೆ ಜನಪದದಲ್ಲಿ ದಾಸವಾಳದ ಉಲ್ಲೇಖ ಪದೇ ಪದೇ ಕಂಡುಬರುತ್ತದೆ. ಕೈಲಾಸಂಗಂತೂ ಸೂರ್ಯಮಜ್ಜಿಗೆಯಲ್ಲಿ ಮುಳುಗಿದ ಕೇಸರಿಬಾತ್ನಂತೆ ಕಾಣುತ್ತಾನೆ. 
            ಇವೆಲ್ಲ ಕೆಂಪುಗಳು ಹುಡುಕಿದಾಗ ದೊರೆಯುವ ಕಾವ್ಯಕಂಪುಗಳು. ನಮಗೆ ದಿನನಿತ್ಯ ದೊರೆಯುವ ಕೆಂಪುಗಳೇ ಬೇರೆಕ್ಲಿನಿಕ್, ನರ್ಸಿಂಗ್ ಹೋಂ, ಪ್ರಯೋಗಾಲಯಗಳು, ಮೆಡಿಕಲ್ ಸ್ಟೋರ್ಗಳು ಹೊತ್ತ ಕೆಂಪು ಚಿಹ್ನೆ. ಇವಕ್ಕೆಲ್ಲ ಕೆಂಪು + ಚಿಹ್ನೆ ಇರುವುದೂ ಸಮಂಜಸವೇ. ವೈದ್ಯ+ನರ್ಸಿಂಗ್ ಹೋಂ+ಪ್ರಯೋಗಾಲಯ+ಮೆಡಿಕಲ್ ಸ್ಟೋರ್ = ಆರೋಗ್ಯ. (ಯಾರದು? ರೋಗಿಯದೋ ಅಥವ ವೈದ್ಯವೃಂದದ್ದೋ ಎಂದು ಕೇಳಬೇಡಿ; ಅದು ಸರ್ಜಿಕಲ್ ಸ್ಟ್ರೈಕ್ನಂತೆಯೇ ಚರ್ಚಿಸಬಾರದ ವಿಷಯವಂತೆ). ವೈದ್ಯೋ ನಾರಾಯಣೋ ಹರಿಃ ಎಂದು ಅಂದು ಹೇಳುತ್ತಿದ್ದ ಮಾತು ಇಂದಿಗೂ ಸತ್ಯ. ಕೊಂಚವಷ್ಟೇ ವ್ಯತ್ಯಾಸವೈದ್ಯೋ ನಾರಾಯಣೋ hurryB! ನಾರಾಯಣನಿಗೆ ಭಕ್ತರೊಡನೆ ಕೋ-ಆಪರೇಷನ್ನಿನ ಆತುರ, ವೈದ್ಯರಿಗೆ ರೋಗಿಗಳ ಆಪರೇಷನ್ನಿನ ಆತುರ. ‘ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆಎಂಬ ರೀತಿಯಲ್ಲಿಯೇ ವೈದ್ಯಸಂಬಂಧಿತ ಗಾದೆಯೂ ಒಂದಿದೆ - ಸರ್ಜನರ ಸಹವಾಸ ಹೆಜ್ಜೇನು ಕಡಿದಂತೆ!
            ಚಿತಾ ಪ್ರಜ್ವಲಿತಾಂ ದೃಷ್ಟ್ವಾ ವೈದ್ಯೋ ವಿಸ್ಮಯಮಾಗತಃ
            ನಾಹಂ ಗತಾ ಮೇ ಭ್ರಾತಾ ಕಸ್ಸೈವ ಹಸ್ತಲಕ್ಷಣಂ||
            ಎಂದ ವೈದ್ಯನ ಜಾತಿ ಇಂದಿಗೂ ಇದೆ. ನರ್ಸಿಂಗ್ಹೋಂಗಳವರು ಹೆಚ್ಚು ಬಿಲ್ ಹಾಕುತ್ತಾರೆಂಬ ಅಪವಾದಗಳೂ ಇವೆ. ಆದರೆ ಅವರಾದರೋ ಸಂಪ್ರದಾಯಕ್ಕೆ, ಸಂಸ್ಕøತಿಗೆ ಒತ್ತು ಕೊಡುತ್ತಿದ್ದಾರಷ್ಟೆ ಎಂದು ನಾವು ತಿಳಿಯಬೇಕು. ಸಮುದ್ರಮಂಥನದ ಕಾಲದಲ್ಲಿ ಧನ್ವಂತರಿ ಬಂದುದೇ ಲಕ್ಷ್ಮಿಯೊಂದಿಗೆ. ಅವರವರ ತಂಗಿಯರು ಅವರವರಿಗೆ ಪ್ರೀತಿ. ವಿಷ್ಣುವಿನ ಜೊತೆ ಹೋದ ಲಕ್ಷ್ಮಿಯನ್ನು ತವರಿಗೆ ಕರೆದು ಚೆನ್ನಾಗಿ ನೋಡಿಕೊಳ್ಳುವುದು ಸಹಜಾತನಾದ ಧನ್ವಂತರಿಗೆ ಪ್ರಿಯವಾದರೆ ಅಚ್ಚರಿಯೇನದರೊಳ್? ತಪ್ಪೇನದರೊಳ್?
            ಓಹ್! ಗಂಟೆ ಶಬ್ದ ಕೇಳಿಸುತ್ತಿದೆ. ಇನ್ನೇನು ಬೇವು-ಬೆಲ್ಲ ಹಂಚುತ್ತಾರೆ. ಬೆಲ್ಲ ಕೆಟ್ಟದ್ದು, ಬೇವು ಒಳ್ಳೆಯದು ಎಂದು ಜನ ಹೇಳುತ್ತಾರೆ. ಅದೇನು ಪ್ರಪಂಚದ ವೈಚಿತ್ರ್ಯವೋ ಏನೋ... ನಾಲಿಗೆಗೆ ಒಳಿತಾದುದು ಯಾವುದೂ ದೇಹಕ್ಕೆ ಒಳಿತಲ್ಲ. ಪ್ರಪಂಚದಲ್ಲಿ ಹಲವಾರು ಋಷಿಗಳಿದ್ದಾರೆರಾಜರ್ಷಿ, ಮಹರ್ಷಿ, ರಸ ಋಷಿ, ಇತ್ಯಾದಿ. ನಾನು ರುಚಿಋಷಿ. ಬೇವನ್ನು ನುಂಗಿ, ಕೆಂಪಾಗಿ ಗರಗಾಗಿಸಿದ ಒಬ್ಬಟ್ಟಿನೊಂದಿಗೆ ಒಗ್ಗಟ್ಟಾಗಲು ಹೊರಡುತ್ತೇನೆ. ಮತ್ತೆ ಭೇಟಿಯಾಗೋಣ. ಟಿಲ್ ದೆನ್, ವಿಷ್ ಯೂ ಆಲ್ ಹ್ಯಾಪಿ ಚಾಂದ್ರಮಾನ ಯುಗಾದಿ.

Comments

  1. Wow very nice article. Could not stop laughing. good one

    ReplyDelete
    Replies
    1. Thank you very much. It's an honour to be acknowledged so

      Delete
  2. ಒಂದು ಲೇಖನದಲ್ಲಿ ಅದೆಷ್ಟು ಜನರ ಪರಿಚಯ, ಇತಿಹಾಸ, ಪುರಾಣ ಪಾತ್ರಗಳು ಸಾರ್ ಹಾಸ್ಯಕ್ಕೆ ಕೊನೆಯೇ ಇಲ್ಲದಂತೆ ನಕ್ಕು ನಕ್ಕು ಸಾಕಾಯ್ತು

    ReplyDelete
    Replies
    1. ಬರೆಯುವಾಗಲೇ ಒಂದು ವಿಧದ ಸಂತೋಷ ಸಿಗತ್ತೆ ನಾಣಿ. ಈ ತರಹದ ಬರಹಗಳನ್ನು ಬರೆಯಲು ಅವಕಾಶ ದೊರಕುವುದೇ ಅಪರೂಪ. ಇಂತಹದ್ದನ್ನು ಪ್ರಕಟಿಸುವ, ಓದುವ, ಪ್ರತಿಕ್ರಿಯಿಸುವ ಎಲ್ಲರಿಗೂ ನಾನು ಋಣಿ.

      Delete
  3. Dear Ram, absolutely delighted to read your article sir.
    Only article which touches all time stories including current affairs. Super humor !!!!!!!

    ReplyDelete
  4. Thank you for your encouraging words

    ReplyDelete

Post a Comment