ನಗೆರತ್ನಾಕರದ ಹವಳಗಳು


ನಗೆರತ್ನಾಕರದ ಹವಳಗಳು
ಲೇಖನ - ಅಣುಕು ರಾಮನಾಥ್ 

ಸುಧಾ: ನಮಸ್ಕಾರ ನಟರತ್ನಾಕರರೇ, ನಿಮ್ಮನ್ನು ಕಂಡ ದಿನದಿಂದಲೂ ನನ್ನನ್ನು ಒಂದು ಪ್ರಶ್ನೆ ಕಾಡ್ತಾ ಇದೆ.
ಮಾಹಿ: ಕಾಡಕ್ಕೇಂತ್ಲೇ ಹುಟ್ಟಿರೋ ಜನರ ಮಧ್ಯೆ ಇದ್ದೂ, ಮದುವೆ ಆಗಿದ್ದೂ, ಇನ್ನೂ ನಿಮ್ಮನ್ನ ಬರೀ ಪ್ರಶ್ನೆ ಮಾತ್ರ ಕಾಡ್ತಾ ಇದೇಂದ್ರೆ ನಿಮಗಿನ್ನೂ ಬದುಕಿನ ಕಾವು ಮುಟ್ಟಿಲ್ಲಾಂತಾಯ್ತು. ಅದ್ಯಾವ್ದೂ ನಿಮ್ಮನ್ನ ಕಾಡ್ತಾ ಇರೋ ಪ್ರಶ್ನೆ?
ಸುಧಾ: ನಿಮ್ಮ ವಾಮನಾವತಾರ! ಹಾಸ್ಯಕ್ಕೆ ಅಧಿಪತಿಯಾದ ಗಣಪತಿ ಕುಳ್ಳು, ಹಾಸ್ಯಕ್ಷೇತ್ರದ ದಿಗ್ಗಜಗಳಾದ ನರಸಿಂಹರಾಜು, ಕೈಲಾಸಂ, ಚಾಪ್ಲಿನ್, ಬಾಬ್ ಹೋಪ್, ನೀವು, ಎಲ್ಲರೂ ಗಿಡ್ಡರೇ. ಗಿಡ್ಡತನಕ್ಕೂ, ಹಾಸ್ಯಕ್ಕೂ ಏನು ಸಂಬಂಧ?
ಮಾಹಿ: ಬ್ರಹ್ಮ ಮಾಮೂಲಾಗಿ ತನ್ನ ಜನೋತ್ಪಾದನಾ ಕೇಂದ್ರದಲ್ಲಿ ಉತ್ಪಾದನೆ ಮಾಡ್ತಾ ಕೂತಿದ್ದ. ಅವನ ಹೆಂಡ್ತಿ ಸರಸ್ವತಿ ಅಲ್ಲೇ ಇದ್ದಳು. ಗಂಡನ ಜೊತೆ ಮಾತಾಡ್ತಾ ಆಡ್ತಾ ಆಕೆ ಯಾವುದೋ ಜೋಕ್ ಹೇಳಿದ್ಳು. ಜೋಕ್ ಕೇಳಿದ ಬ್ರಹ್ಮ, ಈಗಿನ ಕಾಲದವ್ರು ಜೋಕ್ ಕೇಳಿದಾಗ ಜೋರಾಗಿ ನಗ್ತಾ ಪಕ್ಕದಲ್ಲಿ ಕೂತವರ ತೊಡೆಗೆ ಬಾರಿಸಿ ನಗೋ ಹಾಗೆ, ತಾನೇ ಮಾಡ್ತಾ ಇದ್ದ ಬೊಂಬೆಯ ತಲೆ ಮೇಲೆ ಬಾರಿಸಿ ನಕ್ಕ. ಬಾರಿಸಿದ ರಭಸಕ್ಕೆ ಬೊಂಬೆ ಕುಳ್ಳಾಯ್ತು, ಆದರೆ ಹಾಗೆ ಕುಳ್ಳಾಗೋಕೆ ಮುಂಚೆ ಬ್ರಹ್ಮ ನಕ್ಕ ನಗೆಯನ್ನೂ ತನ್ನೊಳಗೆ ಸೇರಿಸಿಕೊಳ್ತು. ಬೊಂಬೆಗಳೇ ಮುಂದೆ ಜಗತ್ತಿನಲ್ಲಿ ಮನುಷ್ಯಜನ್ಮ ತಾಳಿ ನಗೆ ಹಂಚ್ತಾಯಿವೆ.
ಸುಧಾ: ಕುಳ್ಳರಲ್ಲೇ ಬ್ರಹ್ಮ ಇಷ್ಟು ಹಾಸ್ಯ ತುಂಬಿರಬೇಕಾದರೆ, ಎತ್ತರದವರಲ್ಲಿ ತುಂಬಿದ್ದರೆ ಇನ್ನೂ ಎಷ್ಟು ತುಂಬಬಹುದಾಗಿತ್ತಲ್ವಾ...?
ಮಾಹಿ: ಗುಡ್ ಥಿಂಗ್ಸ್ ಕಮ್ ಇನ್ ಸ್ಮಾಲ್ ಪ್ಯಾಕೇಜಸ್ ಅಂತ ಒಂದು ಮಾತಿದೆ. ಒಂದು ಗ್ರಾಂ ಚಿನ್ನದ ಬೆಲೆ ನೂರು ಕೆಜಿ ಹತ್ತಿಗಿಂತಲೂ ಹೆಚ್ಚಿರತ್ತೆ.ಹಾಗೆಯೇ ಇದೂ ಸಹ. ಎತ್ತರದ ಹಾಸ್ಯಗಾರರು ಇದ್ದರೂ ಅದು ಬಹಳ ವಿರಳ. ಅಂಶ ಪ್ರಾಂತ್ಯಗಳಿಗೂ ಒಪ್ಪತ್ತೆ. ಉದಾಹರಣೆಗೆ ಬಯಲುಸೀಮೆಯಲ್ಲಿ ಬರೀ ಹಾರಿಝಾಂಟಲ್ ಗ್ರೋಥ್, ಅಂದ್ರೆ ಅಡ್ಡಡ್ಡ ಬೆಳವಣಿಗೆ- ಇಲ್ಲಿ ಹಾಸ್ಯರಸಿಕರು ಹೆಚ್ಚು. ಕರಾವಳಿಯಲ್ಲಿ ವರ್ಟಿಕಲ್ ಗ್ರೋಥ್- ಎಂದರೆ ಅಪಾರ್ಟ್ಮೆಂಟ್ ಕಲ್ಚರ್. ಇಲ್ಲಿ ಹಾಸ್ಯರಸಿಕರು ಕಡಿಮೆ; ಇಲ್ಲಿನ ಜನ ನಗುವುದೇ ಕಡಿಮೆ. ಹಾಸ್ಯಗಾರರೂ ಹಾಗೆಯೇ- ಕುಳ್ಳಗೆ ಅಡ್ಡಡ್ಡಲಾಗಿ ಬೆಳೆಯುವುದೇ ಹೆಚ್ಚು.
ಸುಧಾ: ನೀವು ಅಡ್ಡಡ್ಡಲಾಗಿ ಬೆಳೆದಿರಿ, ಹಾಸ್ಯ, ನಾಟಕ ಕ್ಷೇತ್ರದಲ್ಲಿ ಎತ್ತರಕ್ಕೂ ಬೆಳೆದಿರಿ. ನಿಮ್ಮ ಸಂಸಾರ ಉದ್ದಕ್ಕೂ ಬೆಳೀತು; 5 ಮಕ್ಕಳ ತಂದೆಯಾದ ನೀವುಮಿತಸಂತಾನನಾಟಕ ಮಾಡಿ, ಮಿತಸಂತಾನದ ಬಗ್ಗೆ ಮಾತಾಡಿದ್ದೀರಲ್ಲಾ, ಒಳ್ಳೇ ತಮಾಷೆ ನಿಮ್ದು!
ಮಾಹಿ: ! ನಾನಲ್ದೇ ಇನ್ಯಾರು ಹೇಳ್ಬೇಕು ಮಿತಸಂತಾನದ ಪ್ರಯೋಜನಗಳನ್ನ? ಉಪವಾಸ ಇದ್ದವನಿಗೇ ಊಟದ ರುಚಿ ತಿಳಿಯೋದು, ಒಂಟಿಯಾಗಿರುವವನಿಗೇ ಸ್ನೇಹದ ಬೆಲೆಯ ಅರಿವು ಇರೋದು, ಅತಿ ಸಂತಾನ ಇರುವವನಿಗೇ ಮಿತಸಂತಾನದ ಉತ್ತಮಾಂಶಗಳು ತಿಳಿಯೋದು. ಮಿತಸಂತಾನ ಇರುವವನಿಗೆ ಅತಿಸಂತಾನದ ಬಗ್ಗೆ ಏನೇನೂ ತಿಳಿದಿರಲ್ಲ. ಕುಡಿತ ಗೊತ್ತಿಲ್ಲದೇ ಇದ್ದ ರಾಜರತ್ನಂ ಕುಡುಕರ ಪದ್ಯಗಳನ್ನ ಬರೆಯಲಿಲ್ವೇ ಹಾಗೇ ವಿಷಯವೂ!
ಸುಧಾ: ಮಿತಸಂತಾನ ಇದ್ದರೆ ರಾಜಕಾರಣಿಗಳಿಗೆ ಕಷ್ಟ ಆಗಲ್ವಾ?
ಮಾಹಿ: ರಾಜಕಾರಣಿಗಳೂಂದ್ಮೇಲೆ, ಪಾಪ, ರಾಸಲೀಲೆ ಇದ್ದರೇನೇ ಭೂಷಣ. ಆದ್ದರಿಂದ ಅಲ್ಲಲ್ಲಿ ಕೆಲವು ಮಕ್ಕಳು ಇದ್ರೂ ಇರತ್ವೆ. ಅದು ಬಿಡಿ, ಅಫಿûಷಿಯಲ್ಲಾಗಿ ಕರೆಕ್ಟಾಗಿ ಎಲೆಕ್ಟಾಗಿರೋ ಹೆಂಡ್ತಿಯಿಂದ ಆದ ಮಕ್ಕಳಿಗೆ ಅಭಿಮನ್ಯುವಿಗೆ ಗರ್ಭದಲ್ಲೇ ಬಿಲ್ವಿದ್ಯೆ ಕಲಿಸಿದ ರೀತಿ ಹುಟ್ತಾನೇ ಯಾರೇನು ಬೈದ್ರೂ ನಗುನಗುತ್ತಾ ಸ್ವೀಕರಿಸೋ ಗುಣ, ಬೈದದ್ದು ತಮಗೆ ಅಲ್ಲವೇ ಅಲ್ಲ ಎನ್ನುವ ರೀತಿ ಇರುವ ಗುಣ ಕಲಿಸೋದಲ್ದೆ ಸಿಕ್ಕ ಸಿಕ್ಕ ರೀತೀಲಿ ಸಂಪಾದ್ಸಿ, ರೌಡಿಗಳನ್ನ ಸಾಕಿಕೊಂಡು ಬದುಕು ಸಾಗಿಸಿ, ಮಕ್ಕಳನ್ನೂ, ನಂತರ ಸೊಸೆಯಂದಿರನ್ನೂ ತಮ್ಮ ದಾರಿಗೇ ತರ್ತಾರೆ. ಇಂತಹವರಿಗೆ ಮಿತಸಂತಾನ ಇದ್ರೆ, ಪಾಪ, ಒಂದೋ ಎರಡೋ ಕ್ಷೇತ್ರದಿಂದ ಸ್ಪರ್ಧಿಸಬಹುದಷ್ಟೆ. ಆದರೆ ಮೂವತ್ತಿದ್ರೆ... ಕರ್ನಾಟಕದ ಮೂವತ್ತೂ ಜಿಲ್ಲೆಗಳಿಂದಲೂ ಸ್ಪರ್ಧಿಸಬಹುದೋ... ಇವರಿಗೆ ಮಿತಸಂತಾನ ಆಗ್ಬರಲ್ಲ. ಆದರೆ ರಾಜ್ಯದ ಹಿತದೃಷ್ಟಿಯಿಂದ ಅವರಿಗೆ ಮಿತಸಂತಾನ ಅಥವಾ ಶೂನ್ಯಸಂತಾನವೇ ಸೂಕ್ತ.
ಸುಧಾ: ಅವರ ಸಂತಾನ ಹೇಗಿದ್ರೆ ಚೆನ್ನಾಂತ ಹೇಳೋ ನೀವು ಅವರ ಇಡೀ ಖಾನ್ದಾನ್ದೇ ಜನ್ಮ ಜಾಲಾಡ್ಬಿಡ್ತೀರಲ್ಲಾ, ಸಂಸ್ಕೃತಭಾಷೆ ಬೇಕೆ?
ಮಾಹಿ: ಸುಸಂಸ್ಕೃತರಿಗೆ ದೇವನಾಗರಿ, ಸಂಸ್ಕೃತರಿಗೆ ನನ್ನದೇ ಭಾಷೆಯ ನಗಾರಿ. ಅವರಿಗೆ ಭಾಷೆಯೇ ಸರಿ. ಹಸೂನ ಅಂಬಾ ಅಂತ್ಲೇ ಕೂಗ್ಬೇಕು, ನಾಯೀನ ತ್ಚು ತ್ಚು ತ್ಚು ಅಂತ್ಲೇ ಕರೀಬೇಕು, ರಾಜಕಾರಣಿಗಳಿಗೆ ನನ್ನಸಂಸ್ಕೃತವೇ ಆಗ್ಬೇಕು. ಆದ್ರೂ ಈಗಿನವರ ಮೇಲೆ ಅದರ ಪರಿಣಾಮ ಏನೇನೂ ಇಲ್ಲ ಬಿಡಿ.
ಸುಧಾ: ಏಕೆ ಹಾಗೆ?
ಮಾಹಿ: ಹಿಂದಿನ ಕಾಲದಲ್ಲಿದ್ದ ಲೀಡರ್ಗಳಿಗೆ ಮಾನ ಮರ್ಯಾದೆ ಇರ್ತಿತ್ತು. ಈಗ.............
ಸುಧಾ: ಮಾನ ಕಡಿಮೆ ಇದ್ರೂ ಸನ್ಮಾನಗಳೇನೂ ತಪ್ಪಿಲ್ಲವಲ್ಲ. ಎಲೆಕ್ಷನ್ಗೆ ನಿಂತಾಗಲಿಂದ ಹಿಡಿದು ಕಲೆಕ್ಷನ್ ಮುಗಿಯೋವರೆಗೂ ಸನ್ಮಾನವೇ ಸನ್ಮಾನ. ಮಾಸ್ಟರ್ಜೀ, ನಿಮ್ಮ ಜೀವನದಲ್ಲೂ ಹಲವಾರು ಸನ್ಮಾನಗಳಾಗಿವೆ. ಅವರಿಗೆ ಆಗೋ ಸನ್ಮಾನಗಳು ದುಡ್ಡಿರೋದ್ರಿಂದ ಬಂದಿದ್ದು, ನಿಮಗೆ ದುಡಿದಿರೋದ್ರಿಂದ ಬಂದದ್ದು. ಅವೆಲ್ಲಾ ನಿಮ್ಮ ಅರ್ಹತೆಗೆ ಸಂದ ರಸೀತಿಯೇ ಸರಿ. ಆದರೆ ಸನ್ಮಾನ ಅಂದ್ರೆ ಕೆಲವೊಮ್ಮೆ ಏರುಪೇರುಗಳಾಗತ್ವೆ. ಅಂತಹ ಯಾವುದಾದರೂ ಪ್ರಸಂಗ ಇದೆಯೇ?
ಮಾಹಿ: ಇಲ್ದೇ ಏನು! ನನಗೆ ಗುಬ್ಬಿವೀರಣ್ಣ ಪ್ರಶಸ್ತಿಪ್ರದಾನ ಸಮಾರಂಭ ಮರೆತ್ರೂ ಮರೆತೀತು, ಹುಣಸೂರಿನ ಸನ್ಮಾನ ಮಾತ್ರ ಎಂದೂ ಮರೆಯಲ್ಲ!

ಸುಧಾ: ಹುಣಸೂರಿನ ಸನ್ಮಾನವೇ? ಏನು ಅದರ ಸ್ಪೆಷಾಲಿಟಿ?
ಮಾಹಿ: ಸುಮಾರು 1961-62ರಲ್ಲಿ ನಡೆದ ಪ್ರಸಂಗ ಇದು. ಆದರೂ ನೆನ್ನೆ ಮೊನ್ನೆ ನಡೆದಂತಿದೆ. ಹುಣಸೂರಿನ ತಾಲ್ಲೂಕು ಪ್ರೆಸಿಡೆಂಟರೊಬ್ಬರು ಮೈಸೂರಿನಲ್ಲಿ ನಮ್ಮ ನಾಟಕ ನಡೆಯುವ ಸ್ಥಳಕ್ಕೇ ಬಂದರು. ಗ್ರೀನ್ರೂಮಿನಲ್ಲಿ ನಾನು, ಕಣಗಾಲ್ ಪ್ರಭಾಕರಶಾಸ್ತ್ರಿ ಮತ್ತು ಚದುರಂಗರು ಕುಳಿತಿದ್ದೆವು. ಆತ ಬಂದವರೇಹುಣಸೂರಿನ ಟೌನ್ಹಾಲ್ನಲ್ಲಿ ನೀವು ಮೂವರಿಗೂ ಸನ್ಮಾನ ಮಾಡಬೇಕೆಂದಿದ್ದೇವೆ. ದಯವಿಟ್ಟು ಬರಬೇಕುಎಂದು ವಿನಂತಿಸಿಕೊಂಡರು. ನಿಗದಿತ ದಿನ, ನಿಗದಿತ ವೇಳೆಗೆ ನಾವು ಮೂವರೂ ಹೋದರೆ ಸನ್ಮಾನ ನಡೆಯಬೇಕಾದ ಜಾಗ ಖಾಲಿಖಾಲಿ! ಚಪ್ಪರ, ತೋರಣ, ಮೈಕ್, ಬ್ಯಾನರ್ಗಳಿರಲಿ, ವೇದಿಕೆ, ಕುರ್ಚಿಗಳು ಸಹ ಇರಲಿಲ್ಲ. ಇಡೀ ಟೌನ್ಹಾಲ್ ಬಳಿ ಇದ್ದವರೆಂದರೆ ಕುಂಟೆಬಿಲ್ಲೆ ಆಡುತ್ತಿದ್ದ ಮಕ್ಕಳು ಮಾತ್ರ.
ಸುಧಾ: ತಪ್ಪು ಅಡ್ರಸ್ಗೆ ಹೋಗಿಬಿಟ್ಟಿದ್ರೇನೋ?
ಮಾಹಿ: ನಾವೂ ಹಾಗೇ ಅಂದ್ಕೊಂಡ್ವಿ. ಯಾವುದಕ್ಕೂ ಇರಲೀಂತ ಅಲ್ಲಿದ್ದ ಜವಾನನ್ನಏನಪ್ಪಾ, ಇಲ್ಲೇನಾದ್ರಾ ಯಾರಿಗಾದ್ರೂ ಸನ್ಮಾನ ಸಮಾರಂಭ ಇದೆಯಾ?” ಅಂತ ಕೇಳಿದ್ವಿ. “ಯಾರ್ಗೋ ಐತೆ ಅಂತ ನೆನ್ನೆ ಪೆಸ್ಟಿಂಟ್ರು ಅಂತಿದ್ರುಅಂದ. ಅವನ ಕೈಗೆ ಎರಡು ರೂಪಾಯಿ ತುರುಕಿ ಹತ್ತಿರವೇ ಇದ್ದ ಪ್ರೆಸಿಡೆಂಟರಿಗೆ ನಾವು ಬಂದಿರುವ ವಿಷಯ ತಿಳಿಸಕ್ಕೆ ಕಳಿಸಿದ್ವಿ. ಸುಮಾರು ಒಂದು ತಾಸು ಕಳೆದು ಬಂದ ಅವರು ಏನನ್ಬೇಕೂ...
ಸುಧಾ: ಏನಂದ್ರು?
ಮಾಹಿ:! ವಿರಣ್ಣಯ್ಯನವ್ರು! ಬಂದೇಬಿಟ್ರಾ?” ಎನ್ನೋದೇ. ನಾನುನೀವೇ ಸನ್ಮಾನ ಮಾಡ್ತೀವಿ, ಜನ ತುಂಬ ಸೇರಿರ್ತಾರೆ. ಬರದೇ ಇದ್ರೆ ಅವರಿಗೆ ಬೇಜಾರಾಗತ್ತೆ ಅಂದಿದ್ರಿಅಂದೆ. “ಹೌದ್ಹೌದು. ಸನ್ಮಾನ...... ಮಾಡೋಣ ತೊಗೊಳಿಎಂದು ಹೇಳಿ, ಜವಾನಂಗೆ! ಒಂದು ನಾಲ್ಕು ಚೇರ್ ಹಾಕೋ, ಹಾಗೇ ಅಲ್ಲಿ ದನ ಕಾಯೋ ಹುಡುಗರು, ಕುಂಟೆಬಿಲ್ಲೆ ಆಡ್ತಿರೋ ಪಿಳ್ಳೆಗಳು, ಅವರನ್ನೆಲ್ಲಾ ಓಡಿಸುಎಂದರು. ಕಣಗಾಲ ಪ್ರಭಾಕರ ಶಾಸ್ತ್ರಿಗಳುಸಭಿಕರು ಅಂತ ಇರೋವ್ರೇ ಅವ್ರು. ಇರಲಿ ಬಿಡಿಎಂದಾಗಹ್ಞೂಂ! ಇರಲಿ ಬಿಡು. ಸರಿ, ಮನೇಗ್ ಹೋಗಿ ಇವರಿಗೆ ಬರೆದಿರೋ ಸನ್ಮಾನಪತ್ರಗಳಿವೆ ತೊಗೊಂಬಂದು ಒಳಗೆ ದಪ್ಪ ರೊಟ್ಟಿದೆ. ಅದಕ್ಕೆ ಅಂಟಿಸಿಕೊಡುಅಂದ್ರು. ಎಲ್ಲಿಂದಲೋ ಮೂರು ಹಾರ ತರಿಸಿ, ಅವರೇ ನಾವು ಮೂರು ಜನಕ್ಕೂ ಹಾಕಿನಾಟಕಕಾರರಾದ ಕಣಗಾಲಪ್ರಭಾಕರಶಾಸ್ತ್ರಿಗಳಿಗೆ’, ‘ಕಾದಂಬರಿಕಾರ ಮಾಸ್ಟರ್ ಹಿರಣ್ಣಯ್ಯನವರಿಗೆ’, ‘ಕವಿ ಚದುರಂಗರಿಗೆಸ್ವಾಗತ ಕೋರಿ, ಯಾರ ಸನ್ಮಾನ ಪತ್ರವನ್ನೋ ಯಾರಿಗೋ ಕೊಟ್ಟು ನಾವು ಮೂವರೂ ಅವರಿಗೆ ತಿಳಿದೇ ಇಲ್ಲ ಅನ್ನೋದನ್ನ ಕೃತಿಯಲ್ಲಿ ತೋರಿಸಿಕೊಂಡ್ರು. ನನ್ನನ್ನ ವಿರಣ್ಣಯ್ಯ ಅಂದ್ರು, ಪರವಾಗಿಲ್ಲ; ಚದುರಂಗನ್ನ ಚಾಂದ್ರಂಗ ಅಂದ್ರು, ಹೋಗ್ಲಿ ಪಾಪ; ಆದರೆ ಕಣಗಾಲರಿಗೆ ಕಡೆಗಾಲ ಅನ್ನೋದೇ ಪ್ರೆಸಿಡೆಂಟು. ಸನ್ಮಾನ ಮಾತ್ರ ನಾನು ಎಂದಿಗೂ ಮರೆಯಕ್ಕೆ ಸಾಧ್ಯವೇ ಇಲ್ಲ.
ಸುಧಾ: ನಿಮ್ಮ ಜೀವನವೇ ಒಂದು ಮಹಾನ್ ರಸೋತ್ಸವ. ನವರಸಗಳನ್ನೂ ಅಭಿನಯಿಸಿದ್ದಲ್ಲದೆ ಸ್ವಂತ ಅನುಭವಿಸಿದ್ದೂ ಹೌದು. ನವರಸಗಳ ಜೊತೆ ಮತ್ತೊಂದು ರಸ - ಸೋಮರಸ ಉರು¥sóï ಮದ್ಯವೂ ನಿಮ್ಮ ಬಾಳಿನಲ್ಲಿ ದೀರ್ಘಕಾಲ ಇದ್ದ ಸಂಗಾತಿ. ಮದ್ಯಸಂಬಂಧಿತವಾದ ಒಂದೆರಡು ರಸಮಯ ಘಟನೆಗಳನ್ನ ಹೇಳ್ತೀರಾ?
ಮಾಹಿ: ಹ್ಞಾಂ! 60ನೇ ಇಸವಿಯ ಆಸುಪಾಸು; ಕುಂದಾಪುರದಲ್ಲಿ ಕ್ಯಾಂಪು. ಹತ್ತುದಿನದ ಕ್ಯಾಂಪಿನ ಕೊನೆಯ ದಿನ. ಸಂಜೆ ನಾಟಕ ಇತ್ತು. ಬೆಳಗ್ಗೆ ಗುಂಡುಪ್ರಿಯರಾದ ನಾನು, ಮುಸುರಿ, ಪರಮಿ, ಗಡಾರಿ ಸೀತಾರಾಮ, ಪಾರ್ಥಸಾರಥಿ ಕುಂದಾಪುರದಿಂದ 20 ನಿಮಿಷದ ದೋಣಿಪ್ರಯಾಣವಾದ ಗಂಗ್ವಳ್ಳೀಲಿ ಗೇರುಹಣ್ಣಿನ ಕಳ್ಳಭಟ್ಟಿ ಸಿಗೋ ಸುದ್ದಿ ಕೇಳಿ ಅದನ್ನ ಹುಡುಕಿಕೊಂಡು ಹೋದ್ವಿ. ಅಲ್ಲಿನ ಒಂದು ಗುಡಿಸಿಲಲ್ಲಿ ಒಂದು ಮುದುಕಿ ಕಳ್ಳಭಟ್ಟಿ ಮಾರ್ತಿತ್ತು. ಯಾವತ್ತೂ ಗೇರುಬೀಜದ ಮದ್ಯ ಸೇವಿಸದೇ ಇದ್ದ ನಾವು ಮೊದಲು ಒಂದೊಂದು ಗ್ಲಾಸ್ ಏರಿಸಿದ್ವಿ. ಆದರೆ ಕಿಕ್ ಇರಲಿ, ಒಂದಿಷ್ಟು ಜೋಷ್ ಆದ್ರೂ ಬೇಡ್ವಾ? ‘ಕಪ್ಪಿರುವೆ ಕಡಿದ್ರೂ ಗೊತ್ತಾಗೋ ಹಾಗೇ ಇದ್ದೇವಲ್ಲೋ. ಇದು ಬಹಳ ಮೈಲ್ಡ್ ಇರ್ಬೇಕುಎಂದರು ಮುಸುರಿ. ಸರಿ, ಇನ್ನೊಂದು ರೌಂಡ್ ಹಾಕಿ ನೋಡೋಣಾಂದ್ರೆ ಜಪ್ಪಯ್ಯಾಂದ್ರೂ ಕೊಡಲ್ಲಾನ್ನತ್ತೆ ಮುದುಕಿ! ‘ಯಾಕವ್ವಾ?’ ಅಂದ್ರೆ! ಇಡೀ ಗಿಲಾಸ್ ಹಾಕಿವ್ರಿ ಮಾರಾಯ್ರೆ. ಅದೇ ಜಾಸ್ತಿ. ಬೇಡ, ನನ್ನ ಮಾತು ಕೇಳಿಅಂತು. ಕೇಳೋ ಬಾಬ್ತೇ ನಮ್ದೂ? ಹಾಗೂ ಹೀಗೂ ಇನ್ನೂ ಒಂದೊಂದು ಗ್ಲಾಸ್ ಬಂತು. ಪರಿಣಾಮ ಸೊನ್ನೆ! ಮತ್ತೆ ಇನ್ನೊಂದು ರೌಂಡ್ಗಾಗಿ ಗೋಗರೆದು ಅರ್ಧರ್ಧ ಗ್ಲಾಸ್ ತೊಗೊಂಡ್ವಿ. ಊಹೂÐ! ನೋ ¥sóÉಕ್ಟ್! ಟೈಮ್ ನೋಡ್ಕೊಂಡ್ರೆ ಆಗಲೇ 4:30! ಸರಿ, ವಾಪಸ್ಸು ಹೋಗೋಣಾಂತ ಹೊರಟ್ವಿ. ಮೇಲೆ ಉರಿಬಿಸಿಲು, ಸಮುದ್ರದವರೆಗೂ ನಡೆದು ಹೊರಟ ನಮಗೆ ಬಿಸಿಲಿನ ಝಳದಲ್ಲಿ ಗೇರುಹಣ್ಣು ತನ್ನ ಪ್ರಭಾವದ ಗೇರುಗಳನ್ನ ಬದಲಾಯಿಸಕ್ಕೆ ಶುರು ಮಾಡ್ತು. ದಡದ ಹತ್ರ ಬರೋಹೊತ್ಗೆ ಅವರೆಲ್ಲಾ ಔಟ್! ಅಲ್ಲಿಂದ ಕುಂದಾಪುರಕ್ಕೆ ದೋಣಿ ನಡೆಸ್ತಿದ್ದ ಒಬ್ಬನೇ ಅಂಬಿಗನೂ ನಮ್ಮ ಸ್ಥಿತಿ ನೋಡಿನೀವು ಎಷ್ಟೇ ಹಣ ಕೊಟ್ರು ಬೇಡ ಸ್ವಾಮಿ. ಕರ್ಕೊಂಡ್ಹೋಗಲ್ಲ. ಕುಡಿದ ಜ್ಞಾನದಲ್ಲಿ ಎದ್ದು ತೂರಾಡಿದ್ರೆ ದೋಣಿ ಮುಳುಗತ್ತೆ. ನೀವೂ ಬೇಡ, ನಿಮ್ಮ ಹಣವೂ ಬೇಡಅಂತ ಕೂತ್ಬಿಟ್ಟ. ‘ಆರು ಗಂಟೆಗೆ ನಾಟಕ, ಡಿ.ಸಿ.ನೇ ಅಧ್ಯಕ್ಷರು, ನಾವೇ ಮುಖ್ಯ ಪಾತ್ರಧಾರಿಗಳು, ಮಾನ ಕಾಪಾಡುಅಂತ ಗೋಗರೆದ ಮೇಲೆಸರಿ. ಅವರು ನಾಲ್ವರೂ ಮಲಗಲಿ. ನೀವು ಕೂತಿರಿ. ನಿಮ್ಮ ಕೈಗೆ ಒಂದು ಹುಟ್ಟು ಕೊಡ್ತೀನಿ. ಯಾರೇ ಎದ್ರೂ ಅವರನ್ನ ಹುಟ್ಟಲ್ಲಿ ಹೊಡೆದು ಮಲಗಿಸಿಅಂದ. ಅವನು ಹೇಳಿದ ಹಾಗೇ ಆಯ್ತು. ಒಬ್ಬೊಬ್ರಾಗಿಏಯ್ಅಂತಾನೋ, ‘ಯಜಮಾನಸ್ಯಾಅಂತಾನೋ ಏಳೋವ್ರು, ತಕ್ಷಣ ಅವರ ತಲೆಗೆ ಹುಟ್ಟಲ್ಲಿ ಮೊಟಕಿ ಮಲಗಿಸ್ತಿದ್ದೆ. ದೋಣಿ ಸಾಗಿದ ಇಪ್ಪತ್ತು ನಿಮಿಷದಲ್ಲಿ ತಲಾ ನಾಲ್ಕಾದ್ರೂ ಏಟುಗಳು ಬಿದ್ದಿದ್ವು. ಹಾಗೂ ಹೀಗೂ ನಾಟಕ ಆಡಿದ್ವಿ, ಆದರೆ ಅವರು ನಾಲ್ವರ ತಲೆಗಳ ಬೋರೆ ಇಳೀಬೇಕಾದ್ರೆ ವಾರ ಕಳೀತು!
ಸುಧಾ: ಸ್ವಲ್ಪ ವ್ಯತ್ಯಾಸವಾದ್ರೂ ನಾಟಕ ನಡೀದೇ ಬಹಳವೇ ಆಭಾಸ ಆಗ್ತಿತ್ತಲ್ಲ ಮಾಸ್ಟರ್ಜೀ...!
ಮಾಹಿ: ನಿಜವೇ. ಹೊಸಪೇಟೆ ಪ್ರಸಂಗದಲ್ಲಂತೂ ಹಾಗೇ ಆಗ್ಬೀಡೋದು. ನಾಟಕ ನಡೆಯತ್ತೋ ಇಲ್ವೋಂತ ಯೋಚನೆ ಆಗಿತ್ತು.
ಸುಧಾ: ಯಾವುದದು ಹೊಸಪೇಟೆ ಪ್ರಸಂಗ?
ಮಾಹಿ: 1957 ಬಳ್ಳಾರಿ ಲಲಿತಮ್ಮನ ಕಂಪನಿ ನಾಟಕ. ಹೊಸಪೇಟೇಲಿ ಆಗ ಪ್ರಾಹಿಬಿಷನ್. ಮದ್ಯ ಮಾರಾಟ ನಿಷೇಧವಾಗಿತ್ತು. ಪಕ್ಕದಲ್ಲೇ ಇದ್ದ ಮುನರಾಬಾದಲ್ಲಿ ಕಳ್ಳಭಟ್ಟಿ ಇತ್ತು. ನಾನು, ಮುಸುರಿ, ಪರಮಿ ಹೋದ್ವಿ. ಗುಂಡು ಹಾಕಿ, ಶರ್ಟ್ ಒಳಭಾಗದಲ್ಲಿ ಒಂದಷ್ಟು ಬಾಟಲ್ಗಳನ್ನ ತುಂಬಿಕೊಂಡು ಹೊರಟ್ವಿ. ಮುನರಾಬಾದ್ಗೂ ಹೊಸಪೇಟೆಗೂ ಮಧ್ಯೆ ಇದ್ದ ಚೆಕ್ಪೋಸ್ಟ್ನಲ್ಲ್ಲಿದ್ದ ಪೇದೆಬಾಟಲ್ ಇಟ್ಕೊಂಡು ಗೆರೆ ದಾಟಿದ್ರೆ ಅರೆಸ್ಟ್ ಮಾಡ್ತೀನಿಅಂತ ಕೂತ್ಬಿಟ್ಟ. ಮಾತು ಕೇಳಿದ್ದೇ ತಡ, ಮುಸುರಿ ಕೈಲಿ ಬಾಟಲ್ ಹಿಡ್ಕೊಂಡು ಎರಡೂ ಪ್ರಾಂತ್ಯಗಳ ಮಧ್ಯೆ ಇದ್ದ ಗೆರೆ ದಾಟೋದುಹಿಡಿ ನೋಡೋಣಅನ್ನೋದು, ಪೇದೆ ಓಡಿ ಬಂದು ಹಿಡಿಯುವಷ್ಟರಲ್ಲಿ ಚಂಗ್ ಅಂತ ಹಾರಿ ಆಕಡೆ ಸರಹದ್ದಿಗೆ ಸೇರೋದು, ಪೇದೆಯ ಮುಂದೆಯೇ ಒಂದಿಷ್ಟು ಏರ್ಸೋದು, ಮತ್ತೆಹಿಡಿ ನೋಡೋಣಅನ್ನೋದು ಆರಂಭಿಸಿದರು. ಪರಮೀನೂ ಮುಸುರಿಗೆ ಸಾಥ್ ಕೊಡಕ್ಕೆ ಆರಂಭಿಸಿದ್ರು. ಪೇದೆ ಕೋಪದಿಂದ ಹುಚ್ಚನಾಗಿನೀವು ಕಡೇ ಬರಲೇಬೇಕಲ್ಲ. ನೀವು ಯಾವಾಗ ಬಂದ್ರೂ ಹಿಡಿದೇ ಹಿಡೀತೀನಿ. ಅದ್ಹೇಗೆ ಹೋಗ್ತೋರೋ ನಾನೂ ನೋಡೇಬಿಡ್ತೀನಿಅಂತ ರಸ್ತೆಗಡ್ಡಲಾಗಿ ಕುರ್ಚಿ ಹಾಕ್ಕೊಂಡು ಕೂತೇಬಿಟ್ಟ. ‘ನಾಟಕಕ್ಕೆ ಹೊತ್ತಾಗ್ತಿದೆ, ಬಿಡಪ್ಪಅಂತ ನಾನು ಗೋಗರೆದೆ. ‘ನೀವು ಬೇಕಾದರೆ ಹೋಗಿ. ನನ್ನನ್ನೇ ಆಡಿಸ್ತಾರಾ ಅವ್ರೂ, ಏನು ಮಾಡಿದ್ರೂ ಬಿಡಲ್ಲ ಅವರನ್ನ, ನೀವು ಹೋಗಿ ಪರವಾಗಿಲ್ಲಅಂದ ಪೇದೆ. ನಾಟಕದಲ್ಲಿ ಅವರಿಬ್ಬರದೂ ಪ್ರಮುಖವಾದ ಪಾತ್ರಗಳೇ, ಬಿಟ್ಟು ನಾಟಕ ಆಡೋಹಾಗಿರ್ಲಿಲ್ಲ. ಅವತ್ತು ಇವರಿಬ್ಬರಿಗೂ ಸಮಾಧಾನ ಮಾಡಿ, ಪೇದೆಯ ಕಾಲುಕೈ ಹಿಡಿದು ಅಲ್ಲಿಂದ ಹೊರಟುಬರೋ ಹೊತ್ಗೆ ನಾನು ಪಟ್ಟ ಪಾಡು ಭಗವಂತನಿಗೇ ಪ್ರೀತಿ.
ಸುಧಾ: ಭಗವಂತ ಅಂದ್ರಿ. ಸ್ಟೇಜ್ ಮೇಲೆ ಭಗವಂತ ನಿಮ್ಮ ನಾಲಿಗೆಗೆ ಸಿಕ್ಕಿ ನರಳ್ತಾನೆ. ಮನೇಲೀ ದಿನವೂ ಪೂಜೆ ತಪ್ಪಿಲ್ಲ. ಏಕೆ ಹೀಗೆ?
ಮಾಹಿ: ನಾನು ಭಗವದ್ವಿರೋಧಿ ಅಲ್ಲ. ಅವನ ಹೆಸರಲ್ಲಿ ಮಾಡುವ ವ್ಯಾಪಾರಕ್ಕೆ ವಿರೋಧಿ. ದೇವರನ್ನು ಮುಂದಿಟ್ಟುಕೊಂಡು, ವಾಸ್ತುವನ್ನು ಹೇಳಿಕೊಂಡು ಅದರ ಮೂಲಕ ಜನರ ಸುಲಿಗೆ ಮಾಡುವುದನ್ನ ನಾನು ದ್ವೇಷಿಸ್ತೀನಿ. ಜ್ಯೋತಿಷ್ಯ, ವಾಸ್ತು, ದೇವರು ಇವೆಲ್ಲಾ ಒಂದು ಮಟ್ಟದವರೆಗೂ ಬೇಕು. ಅತಿರೇಕ ಎಲ್ಲೆಡೆಯೂ ವಜ್ರ್ಯ.
ಸುಧಾ: ನೀವು ಐದು ದಶಕಗಳಿಗೂ ಮೀರಿ ಕನ್ನಡರಂಗದಲ್ಲಿದ್ದೀರಿ. ಬೇಂದ್ರ, ಅನಕೃ, ಡಿವಿಜಿ ಇಂತಹ ದಿಗ್ಗಜಗಳನ್ನು ಹತ್ತಿರದಿಂದ ಕಂಡಿದ್ದೀರಿ. ಅಂತಹ ಮೇರುದಿನಗಳಿಗೂ ಈಗಿನ ಖನ್ನಡದ ಹನೌನ್ಸರ್ಗಳ ಕೈಲಿ ಕನ್ನಡ ನಲುಗುತ್ತಿರುವ  ಸ್ಥಿತಿಗೂ ಹೋಲಿಸಿದರೆ ಹೇಗನ್ನಿಸುವುದು?
ಮಾಹಿ: ಆಗಲೂ ಹೀಗೆ ಹೇಳುವ ಜನರಿದ್ದರು. ಖ್ಯಾತ ನಾಟಕಕಾರ ಬಿ.ಪುಟ್ಟಸ್ವಾಮಯ್ಯನವರು ಮಹಾಭಾರತದ ಗದಾಯುದ್ಧ ದೃಶ್ಯದ ರಿಹರ್ಸಲ್ ನಡೆಸ್ತಿದ್ರು. ದೃಶ್ಯದಲ್ಲಿನ ಭೀಮನ ಪಾತ್ರಧಾರಿನಿನ್ನ ಊರುಭಂಗ ಮಾಡದಿದ್ದರೆ ನಾನು ಭೀಮನೇ ಅಲ್ಲಎನ್ನಬೇಕೆ. ಆದರೆ ಅವನಿಗೆ ಮಹಾಪ್ರಾಣ ಹೊರಡದು. ‘ಊರುಬಂಗ, ಬೀಮಗಳೇ ಹೊರಡ್ತಿದ್ವು. ಪುಟ್ಟಸ್ವಾಮಯ್ಯನವರುಊರುಭಂಗಬದಲಿಸಿತೊಡೆಯನ್ನು ಮುರಿಯದೆಯಿದ್ದರೆಎಂದೇನೋ ಬರೆದುಕೊಟ್ಟರು. ಆದರೆಭೀಮ?’ ತೋರಿಸಿಕೊಡಲು ಅವರ ನಾಲಿಗೆಯಲ್ಲೂ ಮಹಾಪ್ರಾಣ ಹೊರಡದು. “ಏಯ್, ಅದಲ್ವೋ, ಇನ್ನೊಂದು, ದೊಡ್ಡದು, ಬಿ ಹೇಳೋಎಂದರೆ ಅವನುಬೀ.......’ ಎಂದು ಲಂಬಿಸುತ್ತಿದ್ದ ಅಷ್ಟೆ. ಅಲ್ಲೇ ಇದ್ದ ನಾನುಭೀಮಎಂದು ಹೇಳಿಕೊಟ್ಟೆ. ‘ಹಾ! ನರಸಿಂಹಮೂರ್ತಿ ಬಾಯಲ್ಲಿರೋ ಬೀಮನ್ನ ಹೇಳುಎಂದು ಅವನಿಗೆ ಹೇಳಿ ನನಗೆನೋಡು ನರಸಿಂಹಮೂರ್ತಿ, ಬರೆಯೋವಾಗ ಸರಿಯಾದ ಬೀಮಾನೇ ಬರತ್ತೆ, ತಲೇಲೂ ಸರಿಯಾದ್ದೇ ಇದೆ. ಆದರೆ ಹಾಳಾದ್ದು ನಾಲಿಗೇಲಿ ಬರಲ್ಲ ಕಣೋಅಂದಿದ್ರು. ಕೆಲವರ ನಾಲಿಗೆಯೇ ಹಾಗೆ. ಆದರೆ ಅಕಾರ-ಹಕಾರ ಹೊರಟೂ, ಅಲ್ಪ-ಮಹಾಪ್ರಾಣಗಳ ಉಚ್ಚಾರ ಸಾಧ್ಯವಾಗೂ ಅದರ ಬಗ್ಗೆ ಅಸಡ್ಡೆ ತೋರಿಸಿದರೆ ಅದು ತಪ್ಪು.
ಸುಧಾ: ಮೂರ್ಖರ ದಿನಾಚರಣೆಯ ಅಂಗವಾಗಿ ಸಂದರ್ಶನ ಮಾಡಿದೆವು. ನಿಮ್ಮ ದೃಷ್ಟಿಯಲ್ಲಿ ನಿಜವಾದ ಮೂರ್ಖರು ಯಾರು?
ಮಾಹಿ: ಒಮ್ಮೆ ಆಸ್ಕರ್ ವೈಲ್ಡ್ ಅಲ್ಲಿನ ಮಂತ್ರಿಮಂಡಲವನ್ನು ಕುರಿತುಇಲ್ಲಿ ನೆರೆದಿರುವ ಎಲ್ಲಾ ಮೂರ್ಖರಿಗೂ ನನ್ನ ನಮಸ್ಕಾರಎಂದ. ಎಲ್ಲರೂ ಅವನನ್ನು ಖಂಡಿಸಹೊರಟಾವನೀವುಗಳು ಮೂರ್ಖರಲ್ಲದೆ ಇನ್ನೇನು? ಜಗದ ಅತಿ ದೊಡ್ಡ ಮೂರ್ಖನಾದ ನನ್ನ ಭಾಷಣ ಕೇಳಲು ಸೇರಿರುವ ನಿಮ್ಮನ್ನು ಇನ್ನು ಹೇಗೆತಾನೆ ಸಂಬೋಧಿಸಲಿಎಂದಿದ್ದ. ಯಾವುದೋ ಕೆಲವು ವಿಷಯಗಳ ಹೊರತಾಗಿ ಮನುಷ್ಯ ಇತರ ವಿಷಯಗಳಲ್ಲೆಲ್ಲಾ ಮೂರ್ಖನೇ. ನಹಿ ಸರ್ವಃ ಸರ್ವೇ ಜಾನಾತಿ.
ಸುಧಾ: ವಿರೋಧಿ ನಾಮ ಸಂವತ್ಸರ; ಹೆಸರಿನಲ್ಲೇ ವಿರೋಧಿ, ನಾಮ, ssum, ವತ್ಸ ಎಲ್ಲವೂ ಇದೆ. ಸಂವತ್ಸರದಲ್ಲಿ ಜನಕ್ಕೆ ನಿಮ್ಮ ಹಾರೈಕೆ ಏನು?
ಮಾಹಿ: ಸರ್ವಧಾರಿ ಸಂವತ್ಸರದಲ್ಲಿ ನಾವು ಎಲ್ಲವನ್ನೂ ಧರಿಸಿದೆವು, ವಿರೋಧಿಯಲ್ಲಿ ಎಲ್ಲಾ ದುಷ್ಟವಸ್ತುಗಳನ್ನೂ ವಿರೋಧಿಸೋಣ. ಇದುವೇ ಶಾಂತಜೀವನಕ್ಕೆ ದಾರಿ, ರಹದಾರಿ.

Comments

  1. ಹಿರಣ್ಣಯ್ಯ ಅವರ ಬಗ್ಗೆ ಎಷ್ಟು ಓದಿದ್ರೂ ಸಾಲದು. ಅವರನ್ನು ಕಳಕೊಂಡಿಲ್ಲ. ನಮ್ಮ ನಿಮ್ಮಲ್ಲಿ ಇನ್ನೂ ಜೀವಂತವಾಗಿದ್ದಾರೆ.

    ReplyDelete
  2. ನಿಜ ರಾಜಿಯವರೆ. ಹಾಸ್ಯದ ಹೊಳೆ ಹರಿಯುತ್ತಿರುವವರೆಗೆ, ವಿಡಂಬನೆಯ ಶಿಲ್ಪಿ ಅಮರರೇ

    ReplyDelete

Post a Comment