ಸಿಡ್ನಿ ಶಂಕರ ಜಯಂತಿ 2019

ಸಿಡ್ನಿಯಲ್ಲಿ ಶಂಕರ ಜಯಂತಿ – ೨೦೧೯


ವರದಿಶ್ರೀ ಬದರಿ ತ್ಯಾಮಗೊಂಡ್ಲು 

ಮೇ ೧೧೨೦೧೯ ನೇ ತಾರೀಖಿನಂದು ಸಿಡ್ನಿಯ ಮಿಂಟೋ ಉಪನಗರದಲ್ಲಿರುವ ಶಿವ ಮಂದಿರದಲ್ಲಿ ಶಂಕರ ಜಯಂತಿ ಕಾರ್ಯಕ್ರಮವನ್ನು ಸಿಡ್ನಿ ಶಂಕರ ಸೇವಾ ಸಮಿತಿಯವರು ಹಮ್ಮಿಕೊಂಡಿದ್ದರು. ೨೦೧೭ ರಲ್ಲಿ ಉತ್ಸಾಹದಿಂದ ಶುರುವಾದ ಈ ವಾರ್ಷಿಕ ಆಚರಣೆಯು ಮೂರನೇ ವರ್ಷದಲ್ಲಿ ಉತ್ಸಾಹವು ಮುಮ್ಮಡಿಗೊಂಡುಅಚ್ಚುಕಟ್ಟಾದ ಸಂಯೋಜನೆಯೊಂದಿಗೆ ನಡೆದಿದ್ದು ವಿಶೇಷವಾಗಿತ್ತು.
     
     ಬೆಳಿಗ್ಗೆ ದೇವಸ್ಥಾನದ ಬಾಗಿಲು ತೆರೆಯುವ ಮುನ್ನವೇ ಮಾಗಿಯ ಚಳಿಯಲ್ಲಿ ಸ್ವಯಂಸೇವಕರು ಹೊರಗೆ ಕಾದಿದ್ದರು ಎಂದರೆ ಅದು ಅವರ ಸಮಯಪ್ರಜ್ಞೆಗೆ ದ್ಯೋತಕ. ಬೆಳಿಗ್ಗೆ ೮:೩೦ ರ ಹಾಗೆ ಶ್ರೀ ಅರುಣ ಕುಮಾರ್ ಅವರ ಸಾರಥ್ಯದಲ್ಲಿ ಪೂಜಾ ಕಾರ್ಯಕ್ರಮಗಳು ಶುರುವಾಯಿತು. ಅಷ್ಟು ಹೊತ್ತಿಗಾಗಲೇ ನೆರೆದ ಭಕ್ತವೃಂದವು ಸ್ವಯಂ ಸೇವಕರ ಜೊತೆ ಸೇರಿ ಸುಂದರವಾದ ಪೂಜಾ ಚೌಕಟ್ಟನ್ನು ನಿರ್ಮಿಸಿಶಂಕರರ ಭಾವಚಿತ್ರವಿಟ್ಟುಅಭಿಷೇಕಕ್ಕೆ ಪಂಚಾಯತನ ದೇವತಾ ವಿಗ್ರಹಗಳನ್ನು ಅಣಿಮಾಡಿದ್ದರು. ಈ ಸಲ ಸಮಿತಿಯ ಪ್ರತಿನಿಧಿ ದಂಪತಿಗಳಾಗಿ ಶ್ರೀ ಕನಕಾಪುರ ನಾರಾಯಣ ಮತ್ತು ಶ್ರೀಮತಿ ರಾಜಲಕ್ಷ್ಮಿ ಅವರು ಪೂಜೆಯಲ್ಲಿ ಭಕ್ತಿಯಿಂದ ಪಾಲ್ಗೊಂಡರು. ನಿತ್ಯಪೂಜೆಯಾಗಿ ಲಘುನ್ಯಾಸ ಪೂರ್ವಕ ರುದ್ರಾಭಿಷೇಕ ನಡೆಯಿತು. ವೇದಮಂತ್ರವನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದ ವಿಪ್ರವೃಂದವು ಮಂತ್ರೋಚ್ಛಾರಣೆಗೆ ದನಿಯಾಗಿ ಪೂಜಾಕಾರ್ಯಕ್ಕೆ ಕಳೆಯನ್ನು ತಂದುಕೊಟ್ಟರು.
        
  ಈ ಬಾರಿಯ ವಿಶೇಷವಾಗಿ ಪುಟ್ಟ ಮಕ್ಕಳಿಂದ ಎರಡು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸ್ತೋತ್ರ ಪಠಣವಾಗಿ ಬಿಲ್ವಾಷ್ಟಕ ಮತ್ತು ಒಂದು ಪುಟ್ಟ ನಾಟಕವಾಗಿ ಶಂಕರ-ಚಾಂಡಾಲ ಸಂಭಾಷಣೆಯನ್ನು ಪ್ರಸ್ತುತಪಡಿಸಲಾಯಿತು. ಎರಡೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಪೋಷಕರ ಮತ್ತು ಕಲಿಸಿಕೊಟ್ಟವರ ಪರಿಶ್ರಮ ಎದ್ದು ಕಾಣುತ್ತಿತ್ತು. ನಾಟಕದ ಕೊನೆಯಲ್ಲಿ ನಿರ್ವಾಣ ಅಷ್ಟಕದ ಸಂಗೀತದ ಹಿನ್ನಲೆಯಲ್ಲಿ ಶಂಕರಾಚಾರ್ಯರು ಈಶ್ವರನನ್ನು ಚಾಂಡಲನಲ್ಲಿ ಕಾಣುವ ಪ್ರಯೋಗವು ಎಲ್ಲರ ಮನಸೂರೆಗೊಂಡು ದೈವತಾ ಅನುಭಾವವನ್ನು ಕಣ್ಣಮುಂದೆ ತಂದಿತು. ಆಧ್ಯಾತ್ಮದ ಮೂಲ ಗುರಿಯು ಜಾತಿಮತ ಪಂಥಗಳ ಆಚೆ ಹೋಗಿ ಆತ್ಮೋನ್ನತಿಯು ಮಾತ್ರ ಎಂದು ಸಾರುವ ಈ ನಾಟಕ ಪ್ರಯೋಗವು ಅನೇಕರ ಮನದಲ್ಲಿ ನಿಂದದ್ದು ಅಚ್ಚರಿಯಲ್ಲ. ನಾಟಕದ ಪಾತ್ರಧಾರಿಗಳಿಗೆ ಹೊಂದಿಸಿದ್ದ ಉಡುಗೆ ತೊಡುಗೆಗಳು ಅಲ್ಲಿ ಸೇರಿದ್ದ ಜನರನ್ನು ಶ್ರೀ ಶಂಕರರ ಕಾಲಮಾನಕ್ಕೆ ಕೊಂಡೊಯ್ಯುವಂತಿತ್ತು. ಸಾಂಸ್ಕೃತಿಕ ಸಮಿತಿಯ ಶ್ರೀಮತಿ ಲಕ್ಷ್ಮೀ ಸೋಮಶೇಖರ್ಶ್ರೀಮತಿ ಮತ್ತು ಶ್ರೀ ಶ್ರೀದೇವಿ ರಮೇಶ್ ಮತ್ತು ಶ್ರೀಮತಿ ಪ್ರಿಯ ಅರುಣ್ ಅವರು ವಿಶೇಷವಾಗಿ ಅಭಿನಂದನಾ ಅರ್ಹರು.
      
    ನಂತರ ನಡೆದ ಪ್ರಸಾದವಿನಿಯೋಗವೂ ಬಹಳ ಕ್ರಮಬದ್ಧವಾಗಿ ಮಾಡಿದ್ದರಿಂದ ಎಲ್ಲರೂ ಸಾವಕಾಶವಾಗಿ ಕೂತುಕೊಂಡು ಹರಟೆ ಹೊಡೆಯುತ್ತ ಉಭಯ ಕುಶಲೋಪರಿ ವಿನಿಮಯ ಮಾಡಲು ಕಾರಣವಾಯಿತು. ಊಟದ ಉಸ್ತುವಾರಿಯನ್ನು ಶ್ರೀಮತಿ ಮತ್ತು ಶ್ರೀ ನಾಗಶೈಲ ಅವರು ವಹಿಸಿಕೊಂಡಿದ್ದರು.
ಶಂಕರ ಜಯಂತಿಯಂತಹ ಕಾರ್ಯಕ್ರಮಗಳು ಕೇವಲ ಮತ್ತೊಂದು ಕಾರ್ಯಕ್ರಮವಾಗದೆಜನರಲ್ಲಿ ಶ್ರೀ ಶಂಕರರ ತತ್ತ್ವ ಮಂಥನಕ್ಕೆ ಒಂದು ದಾರಿ ಮಾಡಿಕೊಟ್ಟರೆ ಶಂಕರರ ಧ್ಯೇಯಕ್ಕೆ ಸಾರ್ಥಕತೆ ಒದಗುತ್ತದೆ. ಆತ್ಮಾವಲೋಕನಕ್ಕೆ ಇಂಬು ಕೊಡುತ್ತದೆ. ಇಂತಹ ಒಂದು ಆಶಯದೊಡನೆ ಭರತವರ್ಷದಾಚೆಯ ಹೊರದೇಶದಲ್ಲೂ ಶಂಕರಾಚಾರ್ಯರ  ಸ್ಮರಣೆಯಾಗುತ್ತಿರುವುದಕ್ಕೆ ಅಭಿನಂದಿಸಲೇಬೇಕು. ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲರ ಪರಿಶ್ರಮವನ್ನು ಮೆಚ್ಚಲೇ ಬೇಕು. ಅಹಂ ಬ್ರಹ್ಮಾಸ್ಮಿ” ಎನ್ನುವಲ್ಲಿರುವ ವಿಶ್ವಚೇತನ ಸಂದೇಶವನ್ನರಿತುಕೊಂಡು ಬದುಕನ್ನು ಹಸನು ಮಾಡಿಕೊಳ್ಳಬೇಕು.


Comments

  1. ಕಾರ್ಯಕ್ರಮದ ವರದಿ ಸೊಗಸಾಗಿ ಮೂಡಿ ಬಂದಿದೆ. ಲೇಖಕರು ಸಮಾರಂಭದ ಸಂಭ್ರಮವನ್ನು ಯಥಾವತ್ತಾಗಿ ಕಣ್ಣಿಗೆ ಕಟ್ಟಿಕೊಟ್ಟಿದ್ದಾರೆ. ಅಲ್ಲದೆ, ಕಾರ್ಯಕ್ರಮದ ಧ್ಯೇಯವನ್ನು ಸೂಕ್ತವಾಗಿ ತಿಳಿಸಿದ್ದಾರೆ.

    ReplyDelete
  2. ಅಚ್ಚುಕಟ್ಟಾದ ಸಂಪೂರ್ಣ ವಿವರದ ವರದಿ ಎನ್ನಬಹುದು ಶ್ರೀ ಬದರಿ. ಬಹಳ ಚೆನ್ನಾಗಿದೆ ತಮ್ಮ ಶಂಕರಜಯಂತಿಯ ವರದಿ

    ReplyDelete

Post a Comment