ಅವಸ್ಥಾತ್ರಯಾತೀತಃ

ಅವಸ್ಥಾತ್ರಯಾತೀತಃ
ಲೇಖನ - ಡಾ ಆನಂದ ಬುಕ್ಕಾಂಬುಧಿ

ಶ್ರುತಿಪುರಾಣಗಳಲ್ಲಿ ಬರುವ ಅವಸ್ಥಾತ್ರಯಾತೀತಃ ಎಂಬುದರ ಬಗ್ಗೆ ಒಂದು ಸಣ್ಣ ಲೇಖನ, ಸ್ವಾಮೀ ಪರಮಾನಂದ ಭಾರತಿಯವರ ವೇದಾಂತ ಪ್ರಬೋಧವನ್ನಾಧರಿಸಿ. ಸಾಮಾನ್ಯವಾಗಿ ನಮ್ಗೆಲ್ಲಾ ತಿಳಿದಿರುವಂತೆ ಅವಸ್ಥೆಗಳು ಮೂರು - ಜಾಗೃತ್, ಸ್ವಪ್ನ ಮತ್ತು ಸುಷುಪ್ತಿ.


ಜಾಗೃದವಸ್ಥೆ :

ಇದು ಎಚ್ಚರದ ಸ್ಥಿತಿ. ಈ ಸ್ಥಿತಿಯಲ್ಲಿ ಎಲ್ಲ ವಿಷಯಗಳಿಗೂ ಸ್ವಂತ, ಸ್ವತಂತ್ರ ಅಭಿಪ್ರಾಯ, ಕ್ರಿಯೆ ಇರುತ್ತದೆ. ತಾನೊಬ್ಬ ಜೀವಿ ಎಂಬ ಭಾವನೆ ಇರುತ್ತದೆ . ಹೇಗೆ ಬೇಕೋ ಹಾಗೆ ಮನಸ್ಸು ಹೇಳಿದಂತೆ ಆದರೆ ಬುದ್ಧಿಯ ನಿಯಂತ್ರಣದಲ್ಲಿ ಇಂದ್ರಿಯಗಳ ಉಪಯೋಗ ಮಾಡಿಕೊಂಡು ಸ್ಥೂಲ ಶರೀರದ ಬಗ್ಗೆ ಅಹಂಕಾರವಿರುತ್ತದೆ. ಒಳಗಿರುವ ಆತ್ಮವೇ ಹೇಳಿ ಮಾಡಿಸುತ್ತದೆ. ಅರ್ಥ, ಕಾಮ, ಧಾರ್ಮ, ಮೋಕ್ಷ ಸಹಿತ ಎಲ್ಲ ಪುರುಷಾರ್ಥಗಳನ್ನು ಅನುಸರಿಸಿಕೊಂಡು ಹೋಗುವುದು. ಸ್ಥೂಲ, ಸೂಕ್ಷ್ಮ, ಕಾರಣ ಶರೀರಗಳು ಮೂರೂ ಲಭ್ಯವಿರುತ್ತದೆ. ಎಲ್ಲದರ ಅನುಭವವೂ ಆಗುತ್ತದೆ.  ಆದರೆ ನಿದ್ರಾವಸ್ಥೆ ಮತ್ತು ಸುಷುಪ್ತಿ ಅಲಭ್ಯ. ಎಲ್ಲ ಕ್ರಿಯೆಗಳೂ ದೇಹ, ಬುದ್ಧಿ ಇಂದ್ರಿಯಗಳ ವರ್ತುಲದಲ್ಲಿ ಸಾಗುತ್ತವೆ. ಮನಸು ಬುದ್ಧಿಯಲ್ಲಿ ಲೀನವಾಗಿರುತ್ತದೆ.

ಈ ಸ್ಥಿತಿಯಲ್ಲಿ ೧೯ ತತ್ತ್ವಗಳು - ೪ ಅಂತಃಕರಣ, ೫ ಪ್ರಾಣಗಳು ೫ ಜ್ಞಾನೇಂದ್ರಿಯಗಳು ಮತ್ತು ೫ ಕರ್ಮೇಂದ್ರಿಯಗಳು - ಸ್ಥೂಲ ಶರೀರವನ್ನು ಸಕ್ರಿಯವಾಗಿಡುತ್ತವೆ. ಎಲ್ಲ ಕ್ರಿಯೆಗಳು ಜ್ಯೋತಿಯ ಸಹಾಯದಿಂದ ನಡೆಯುತ್ತವೆ - ಸೂರ್ಯ, ನಕ್ಷತ್ರ, ಅಗ್ನಿ ಮತ್ತು  ಅರಿವು. ಕತ್ತಲೆಯಲ್ಲಿ ಕಿವಿಯಿಂದ ಶಬ್ದ ಕೇಳಿದ್ದರಿಂದಲೋ ವಸ್ತುವನ್ನು ಮುಟ್ಟಿನೋಡಿದ್ದರಿಂದಲೋ ರುಚಿವಾಸನೆಗಳಿಂದಲೋ ತಿಳಿಯುತ್ತದೆ. ಎಚ್ಚರದಲ್ಲಿ ಜ್ಞಾನೇಂದ್ರಿಯಗಳು ಬಾಹ್ಯ ವಿಷಯಗಳನ್ನು ತಿಳಿಸಿಕೊಡುತ್ತವೆ ಮತ್ತು ಅವುಗಳನ್ನು  ಸ್ಥೂಲ ಶರೀರವು ಅನುಭವಿಸುತ್ತದೆ. ಈ ಸ್ಥಿತಿಯಲ್ಲಿ ಗ್ರಹಿಸಿದ ವಿಷಯಗಳು ಚಿತ್ತದಲ್ಲಿ ವಾಸನಾರೂಪವಾಗಿ ನೆಲೆಸಿ ಮುಂದಿನ ಕರ್ಮಗಳಿಗೆ ನಾಂದಿಯಾಗುತ್ತವೆ.

ಸ್ವಪ್ನಾವಸ್ಥೆ:

ಇದು ಕನಸಿನ ಲೋಕ - ನಿದ್ದೆ ಮಾಡಿದಾಗ. ಸ್ಥೂಲ ಶರೀರ ಇದ್ದಲ್ಲಿಯೇ ಇದ್ದರೂ ಸೂಕ್ಷ್ಮ ಶರೀರ ಚಟುವಟಿಕೆಯಿಂದ ಕೂಡಿರುತ್ತದೆ. ಆದರೆ ಕ್ರಿಯೆಗಳನ್ನು ಸ್ವಂತ ಮಾಡಿದ ಅನುಭವ. ಎಚ್ಚರವಾಗಿದ್ದಾಗ ನೋಡಿದ, ಮಾಡಿದ ಕೆಲಸಗಳಿಗೆ ಸಂಬಂಧವಿರಬಹುದಾದರೂ ಯಾವುದೂ ಕ್ರಮಬದ್ಧವಾಗಿರಬೇಕಿಲ್ಲ.  ಯಾವ ವಿಷಯವೂ ತರ್ಕಕ್ಕೆ ಸಿಗಬೇಕು ಅಥವಾ ಸಿಗುತ್ತದೆ ಎಂಬ ನಿಯಮವಾಗಲಿ ಭರವಸೆಯಾಗಲಿ ಇಲ್ಲ. ಮನಸ್ಸಿನಲ್ಲಿ ಹುದುಗಿರಬಹುದಾದ ವಿಷಯಗಳಿಗೆ, ಭಾವನೆಗಳಿಗೆ ಪ್ರಕಟವಾಗುವ ಸಂಭವಗಳು ಇರುತ್ತವೆ . ಗಂಭೀರ ವಿಷಯಗಳಿಗೆ, ಸಮಸ್ಯೆಗಳಿಗೆ ಉತ್ತರ ಸಿಗುವ ಸಾಧ್ಯತೆಗಳೂ ಉಂಟು. ಈ ಸಮಸ್ಯೆಗಳು  ವೈಯುಕ್ತಿಕ ಅಥವಾ ಸಮುದಾಯಕ್ಕೆ ಸಂಬಂಧಿಸಿರಬಹುದು. ಈ ಅವಸ್ಥೆಯಲ್ಲಿ ಎಚ್ಚರವಾಗಿದ್ದಾಗ ಆಗುವ ಚಿತ್ತಚಾಂಚಲ್ಯ ಇರುವುದಿಲ್ಲ. ಏನೇ ಅನುಭವ ಆದರೂ ಅದು ಕೇವಲ ಕನಸು ಕಂಡವನಿಗೆ ಮಾತ್ರ. ಕಲ್ಪನೆಗೆ ಮೀರಿದ್ದು ಮಾತ್ರ ಕಾಣಲಾಗುವುದಿಲ್ಲ. ಕೆಲವೊಮ್ಮೆ ಮುಂದೆ ಆಗಲಿರುವ ಘಟನೆಗಳ ಬಗ್ಗೆ ಸುಳಿವು ಸಿಗಬಹುದು.

ಸಾಮಾನ್ಯವಾಗಿ ಎಲ್ಲರಿಗೂ ಸ್ವಪ್ನಾನುಭವ ಆಗುತ್ತದೆ. ಅದು ದೇಶ ಕಾಲಗಳನ್ನು ಮೀರಿದ್ದು. ಕನಸಿನಲ್ಲಿ ಅವನು ತನ್ನೊಂದಿಗೆ ಮಾತ್ರ ವ್ಯವಹಾರ ನಡೆಸುವುದರಿಂದ ಅನ್ಯೋನ್ಯ, ಪರಸ್ಪರ ಪರಿಣಾಮವಾಗಲಿ ಪ್ರಭಾವವಾಗಲಿ ಇಲ್ಲ. ಎದ್ದಾಗ ಸ್ವಪ್ನದ ನೆನಪು ಇರಲೇಬೇಕು ಎಂಬ ನಿಯಮವಿಲ್ಲ. ಇಲ್ಲಿ ನಿಶ್ಶಬ್ದವಾದ ಮನಸ್ಸೇ ದೃಶ್ಯ ಮತ್ತು ದ್ರಷ್ಟಾರ. ಆತ್ಮದಿಂದ ಉಂಟಾದ ಪ್ರಜ್ಞೆಯೇ ಎಚ್ಚರ ಮತ್ತು ಸ್ವಪ್ನ ಎರಡರಲ್ಲೂ ಇರುವುದು. ಮನಸ್ಸು ಹೃದಯವನ್ನು ಸೇರಿದರೂ ಪ್ರಾಣವಾಯುಗಳು ಸ್ಥೂಲಶರೀರವನ್ನು ರಕ್ಷಿಸಿ ಮಂಗಲಕರವಾಗಿಡುತ್ತವೆ. ಇಲ್ಲವಾದಲ್ಲಿ ಶರೀರ ಹೆಣವಾಗಿ ಅಮಂಗಲಕಾರವಾಗಿಬಿಡುತ್ತದೆ.

ಸುಷುಪ್ತಿ:

ಈ ಸ್ಥಿತಿಯಲ್ಲಿ ನಿದ್ದೆ ಮಾಡಿದ್ದೇವೆ ಎಂಬ ಅರಿವೂ ಇರುವುದಿಲ್ಲ. ಸ್ಥೂಲ, ಸೂಕ್ಷ್ಮ, ಕಾರಣ ಶರೀರಗಳು ಕರಗಿಹೋಗಿರುತ್ತವೆಯಾದ್ದರಿಂದ ನಾನು ಎಂಬ ಸ್ವಂತ ಅಸ್ತಿತ್ವ ಇರುವುದಿಲ್ಲ. ನಾನು ಒಬ್ಬ ಜೀವಿ, ಈ ಪ್ರಪಂಚದಲ್ಲಿದ್ದೇನೆ ಎಂಬುದು ಸಹ ಮರೆತೇಹೋಗಿರುತ್ತದೆ. ಆ ಸ್ಥಿತಿಯಿಂದ ಹೊರಬರುವುದು ಸಾಮಾನ್ಯವಾಗಿ ಪ್ರಾರಬ್ಧಕರ್ಮದಿಂದ, ಈ ದೇಹದಿಂದ ಇನ್ನೂ ಮಾಡಬೇಕಾಗಿರುವ ಕಾರ್ಯಗಳಿಗಾಗಿ. ಇದು ಮರಣದ ತರಹವೇ. ವ್ಯತ್ಯಾಸ ಎಂದರೆ ಕೆಲವೇ ಸಮಯದಲ್ಲಿ ಮತ್ತೆ ಪ್ರಜ್ಞೆ ಮೂಡುತ್ತದೆ, ಶರೀರದ ಅರಿವು ಮೂಡಿ ಅನುಭವಗಳನ್ನು ಕಲೆಹಾಕುವಂತೆ ಮಾಡುತ್ತದೆ. ಈ ಅವಸ್ಥೆಯಲ್ಲಿ ಮನಸ್ಸಿನಲ್ಲಿ ಏನೂ ಚಟುವಟಿಕೆಯಿರುವುದಿಲ್ಲ. ಇದು ಮನೋಲಯ ಅವಸ್ಥೆ. ಮನಸ್ಸೇ ಹಾಗಿರುವುದರಿಂದ ಇಂದ್ರಿಯಗಳೂ ಏನೂ ಮಾಡುವುದಿಲ್ಲ. ಶರೀರ ಸಂಬಂಧವಿಲ್ಲದ್ದರಿಂದ ಪ್ರಿಯಾಪ್ರಿಯಗಳಿಂದ  ಅತೀತನಾಗಿರುತ್ತಾನೆ.

ಜಾಗೃದವಸ್ಥೆಯಲ್ಲಿ ಕೆಲಸ ಪ್ರಜ್ಞಾಪೂರ್ವಕವಾಗಿ ನಡೆಯುತ್ತದೆ ಅಂದರೆ ಪ್ರಜ್ಞೆ ಹೊರಮುಖವಾಗಿರುತ್ತದೆ. ಮಲಗಿದ್ದಾಗ ಪ್ರಜ್ಞೆಯಿಲ್ಲದಿರುವುದರಿಂದ ಹಾಗಾಗುವುದಿಲ್ಲ. ಆದರೆ ಪ್ರಯತ್ನದಿಂದ, ಜಾಗೃದವಸ್ಥೆಯಲ್ಲಿದ್ದಂತೆ, ಕನಸು ಕಾಣುವಾಗಲೂ ಪ್ರಜ್ಞೆಯ ಅನುಭವ ಬಂದಲ್ಲಿ ಕನಸಿನ ಜಾಡನ್ನೇ ತಿರುಗಿಸಬಹುದು. ಎಚ್ಚರವಿದ್ದಾಗ ಮನಸ್ಸು ಮತ್ತು ಸ್ವಾಭಾವಿಕ ಸಹಜ ಕ್ರಿಯೆಗಳು ನಮ್ಮ ನಿಯಂತ್ರಣದಲ್ಲಿರುತ್ತವೆ. ಆದರೆ ಕನಸಿನಲ್ಲಿ ಅವು ಸ್ವೇಚ್ಛಾಚಾರಿಗಳು. ಪ್ರಜ್ಞೆ ಒಳಮುಖವಾಗಿರುತ್ತದೆ. ಸುಷುಪ್ತಿಯಲ್ಲಿ ಪ್ರಜ್ಞೆಯು ಮಹತ್ತತ್ವದಲ್ಲಿ ಲೀನವಾಗುವುದರಿಂದ ಏನೂ ಕ್ರಿಯೆ ಪ್ರಕ್ರಿಯೆಗಳಿರುವುದಿಲ್ಲ. ಆದ್ದರಿಂದ ಬಾಹ್ಯಪ್ರಪಂಚದಲ್ಲಿ ಏನೇ ವ್ಯತ್ಯಾಸಗಳಿದ್ದರೂ ಎಲ್ಲ  ಜೀವಿಗಳಿಗೂ ಈ ಅವಸ್ಥೆಯಲ್ಲಿ ಒಂದೇ ಅನುಭವ. ಆದರೆ ಅಲ್ಲಿಂದ ಹಿಂತಿರುಗಿದ ಮೇಲೆ ಎಲ್ಲವೂ ಮತ್ತೆ ಬೇರೆ ಬೇರೆ. ಸುಶ್ಷುಪ್ತಿಯಲ್ಲಿ ಜೀವನು ಹೃದಯದಲ್ಲಿರುತ್ತಾನೆ. ಇದರಲ್ಲಿ ಸಿಗುವ ಆನಂದವೇ ಪರಮಾನಂದವು..

ಆದರೆ ಈ ಪರಮಾನಂದ ದೊರಕಲು ಗಾಢನಿದ್ದೆಯ ಹೊರತು ಬೇರೆ ದಾರಿಯಿಲ್ಲ ಎಂದೆನಿಸಬಾರದು. ಕಾಣುವುದೆಲ್ಲ ಆ ಪರಮ ಚೈತನ್ಯದ ವಿವಿಧ ರೂಪಗಳಾದ್ದರಿಂದ ಅವುಗಳ ಹಿಂದಿರುವ ಏಕೈಕ ಶಕ್ತಿಯನ್ನು ಗುರುತಿಸಿದಾತನಿಗೆ ಭೇದವೆಲ್ಲಿ? ಅಂತಹ ಜ್ಞಾನಿಗಳು ಎಚ್ಚರವಾಗಿದ್ದಾಗಲೂ ಆ ಸುಖವನ್ನು ಅನುಭವಿಸುತ್ತಾರೆ. ಉದಾಹರಣೆಗೆ ಶ್ರೀ ರಾಮಕೃಷ್ಣ ಪರಮಹಂಸರು, ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು, ಶ್ರೀ ರಮಣ ಮಹರ್ಷಿಗಳು, ಶ್ರೀ ಸದಾಶಿವಬ್ರಹ್ಮರು ಇತ್ಯಾದಿ.  ಅವರೆಲ್ಲರೂ ನಾನಾತ್ವ ಬುದ್ಧಿಯನ್ನು ಮೀರಿದವರು. ನಮ್ಮ ಜೀವನಗುರಿಯೂ ಅದಾಗಲಿ. ಇಂದಲ್ಲ ನಾಳೆ ನಾವೂ ಅದನ್ನು ಅನುಭವಿಸುತ್ತೇವೆಯಾದರೂ ಎಷ್ಟು ಸಾಧ್ಯವೋ ಅಷ್ಟೂ ಅದರ ಗತಿಯನ್ನು ತ್ವರೆಮಾಡೋಣ, ದೈವಕೃಪೆಯಿಂದ, ಗುರ್ವಾನುಗ್ರಹದಿಂದ.

Comments

  1. ಡಾ ಆನಂದ್ ತಮ್ಮ ಲೇಖನ ಬಹಳ ಸೊಗಸಾಗಿದೆ. ಅಂತರ್ಮುಖಿಯಾಗಿ ಮನಸ್ಸಿನ ಸೂಕ್ಷ್ಮತೆ ಮತ್ತು ಅದರ ಸ್ಥಿತಿ, ಗತಿಗಳ ವಿವರಣೆ ವಿವರವಾಗಿ ತಿಳಿಸಿದ್ದೀರಿ. ಬರವಣಿಗೆಯ ಶೈಲಿ ಕೂಡಾ ಉತ್ಕೃಷ್ಟವಾಗಿದೆ.

    ReplyDelete

Post a Comment