ಯುಗಾದಿಯ ಸಂಭ್ರಮ !
ಹಾಸ್ಯ ಲೇಖನ - ಸ್ಮಿತಾ ಮೇಲ್ಕೋಟೆ
ಏನ್ರೀ ಈ ವರ್ಷ ಯುಗಾದಿ ಶನಿವಾರ ಬಂದಿದೆ ಅಂತ ಹೆಂಡತಿ ರಾಗವಾಗಿ ಉಳಿದಳು. ಬೆಳಿಗ್ಗೆ ಬೆಳಿಗ್ಗೆ ಬೇಗ ಎದ್ದು ಕೊಂಚ ಎಕ್ಸರ್ಸೈಜ್ ಮಾಡಿ, ಆರಾಮವಾಗಿ ಕೂತು ಬಿಸಿ ಬಿಸಿ ಕಾಪಿ ಹೀರುತಿದ್ದ ಗಂಡ , ಏನೀಗ ? ಅಂತ ಮರು ಪ್ರಶ್ನೆ ಹಾಕಿದ. ಅಲ್ಲರೀ ಮಾರ್ಚ್ ಕೊನೆ ಬಂದ್ರೂ ಯಾವ ಗೆಳೆಯರೂ ಯುಗಾದಿ ಜೊತೆಗೆ ಮಾಡೋ ಬಗ್ಗೆ ಮಾತೇ ಇಲ್ಲ . ಜೀವನದಲ್ಲಿ ಏನ್ ಬಿಜಿ ನೋ ಏನ್ ಕಥೇನೋ ಅಂತ ಜೋರಾಗಿ ನಿಟ್ಟುಸಿರು ಬಿಟ್ಟಳು.
ಭಾರತದ ಹೊರಗೆ ಬಂದ ಮೇಲೆ, ಎಲ್ಲಾ ಹಬ್ಬಗಳೂ ಶನಿವಾರ ಭಾನುವಾರಗಳೇ. ಅದೂ potluck ಪಾರ್ಟಿ ಹೆಸರಿನಲ್ಲಿ. ಒಬ್ಬರು ಕೋಸಂಬರಿ, ಇನ್ನೊಬ್ಬರು ಪಲ್ಯ, ವಾಂಗೀಬಾತ್, ಪಾಯಸ , ಜಾಮೂನ್ ಅಂತ ಹಂಚಿಕೊಂಡು ಜೊತೆಗೆ ಕೂತು ಊಟ ಮಾಡೋದು. ಒಬ್ಬಟ್ಟು, ಚಿರೋಟಿ , ಚಕ್ಲಿ ಕೋಡುಬಳೆ ಇಂಥಾ ಕಷ್ಟಕರವಾದ ತಿಂಡಿಗಳಿಗೆ ಇನ್ನೂ ಯಾರೂ ಕೈ ಹಾಕಿಲ್ಲ . ಹಬ್ಬ ಹರಿದಿನ ಜೋಕು ನಗೆಯಲ್ಲಿ ಪಾಯಸವೂ ಕೂಡ ಚಿರೋಟಿ ರುಚಿ. ಅದು ಬೇರೆ ಕಥೆ.
ಈ ಸಾರಿ ಯಾರೂ ಜೊತೆಗೆ ಹಬ್ಬ ಮಾಡೋ ವಿಷಯ ಮಾತಾಡೇ ಇಲ್ಲ ಅಂದ್ರೆ ನನ್ನ ಹೆಂಡತಿ ಎಲ್ಲಿ ಇಡೀ ಹಬ್ಬದ ಅಡಿಗೆ ತಾನೇ ಮಾಡ್ಬೇಕಲ್ಲ ಅಂತ ತಲೆ ಬಿಸಿ ಮಾಡಿ ಕೊಂಡಿದ್ದಾಳೆ. ಮನೇಲಿ ಇರೋದು ಮೂರು ಮತ್ತೊಂದು ಜನ, ನಮ್ಮ ಅಮ್ಮ ಇಡೀ ದೊಡ್ಡ ಸಂಸಾರಕ್ಕೆ ಎಷ್ಟೊಂದು ಒಬ್ಬಟ್ಟು , ಪುಳಿಯೋಗರೆ ಮಾಡಿ ಬಡಿಸುತ್ತಾ ಇದ್ದಳು ಅಂತ ಸಣ್ಣ ದನಿಯಲ್ಲಿ ಹೇಳಿದೆ. ಆಹಾ ಆಹಾ ಅಮ್ಮನ ಹೊಗಳೋದು ನಾನೇನು ಬೇಡ ಅಂದ್ನಾ.. ಅವರು ನನ್ನ ಹಾಗೆ ನೂರೆಂಟು ಕಡೆ ಕ್ರಿಕೆಟ್ಟು ಮ್ಯೂಸಿಕ್ , ಡಾನ್ಸ್ ಪ್ರಾಕ್ಟೀಸ್ ಅಂತ ಮಕ್ಕಳನ್ನು ಕರೆದುಕೊಂಡು ಅಲೀತಾ ಇದ್ರಾ ? ಪಾಪ ಆ ಹೆಂಗಸು ಅಡಿಗೆ ತಿಂಡಿ , ನೆಂಟರು ಇಷ್ಟರು ಅಂತಾನೆ ಜೀವನ ತೇಯ್ದರು .
ಗಂಡ ಸ್ವಲ್ಪ ಧೈರ್ಯ ತಂದುಕೊಂಡು, ಹೋಗಲಿ ಬಿಡೆ , ನಾವೇ ಗ್ರಾಂಡ್ ಆಗಿ ಯುಗಾದಿ ಮಾಡೋಣ . ಸ್ವಲ್ಪ ಬೇಗ ಎದ್ದರೆ ಎಲ್ಲಾ ಆಗುತ್ತೆ. ಎರಡು ಬೇಳೆ ಸೇರಿಸಿ ಒಂದು ಕೋಸಂಬರಿ, ಮೂರು ನಾಲಕ್ಕು ತರಕಾರಿ ಸೇರಿಸಿ ಪಲ್ಯ , ಎಂಟಿಆರ್ ಅಥವಾ ಮೈಯ್ಯ ಬ್ರಾಂಡ್ ಪುಳಿಯೋಗರೆ, ನಾನು ಮಕ್ಕಳು ನಿನಗೆ ಸಹಾಯ ಮಾಡಿದ್ರೆ ೧೦ ಬೇಳೆ ಒಬ್ಬಟ್ಟು ಮಾಡಕ್ಕೆ ಕಷ್ಟಾನೇ ?
ಬೆಳಿಗ್ಗೆ ತಿಂಡಿ ಏನೂ ಮಾಡಕ್ಕೆ ಹೋಗಬೇಡ, ಒಂದೇ ಸಾರಿ ಭಾರಿ ಭೋಜನ ಅಂತ ಗ್ರಾಂಡ್ ಪ್ಲಾನ್ ನಡೀತು ಕಾಫಿ ಕುಡೀತಾ..
ಗಂಡ ಹೆಂಡತಿ ಭಾರಿ ಜೋಷ್ನಲ್ಲಿ ಇಂಡಿಯನ್ ಶಾಪಿಗೆ ಹೋಗಿ ಎಲ್ಲಾ ದಿನಸಿ ತಂದು ತಮ್ಮ ಅಡಿಗೆ ಮನೇಲಿ ಗುಡ್ಡೆ ಹಾಕಿಕೊಂಡರು. ಹಬ್ಬ ಅಂತ ಅಂಗಡಿಯವನು ಮಲ್ಲಿಗೆ ಹೂವು, ಬಾಳೆ ಎಲೆ ತರಿಸಿ ಫ್ರೀಜರ್ ನಲ್ಲಿ ಇಟ್ಟಿದ್ದಾ. ಬೇವಿನ ಹೂವು ಕೂಡ ಫ್ರಿಡ್ಜ್ ಒಳಗಿಂದ ಕೈ ಬೀಸಿ ಕರೆಯಿತು. ಬಾಳೆ ಎಲೆ ನೋಡಿದ್ದೇ, ಗಂಡಂಗೆ ಭಾರತದ ಫುಲ್ ಮೀಲ್ಸ್ ಜ್ಞಾಪಕ ಬಂದು ಬಾಯಲ್ಲಿ ನೀರೊರಿತು. ಎಲ್ಲಾ preparation ಪಾಂಗಿತವಾಗಿ ನಡೀಡಿತು. ಮಾವಂಗೆ ಫೋನ್ ಮಾಡಿ ಪಂಚಾಂಗ ಪೋಸ್ಟ್ ಮಾಡಿಬಿಡಿ ಅಂತಾನೂ ಹೇಳಾಯ್ತು. ಮಾವ ಮರೀಬೇಡಿ ಎಕ್ಸ್ಪ್ರೆಸ್ ಪೋಸ್ಟ್ ನಲ್ಲಿ ಕಳಿಸಿದ್ರೇ ಬೇಗಾನೆ ತಲುಪುತ್ತೆ ಅಂತನೂ ಹೇಳಾಯ್ತು.
ಹರಳೆಣ್ಣೆ ಒತ್ತಿ ಮಕ್ಕಳಿಗೆ ಸೀಗೆಪುಡಿ ಕಲೆಸಿ ನೀರ್ ಹಾಕ್ಬೇಕು , ಶಾಂಪೂ ಗಿಂಪು ಅಂತ ಕೂದಲೆಲ್ಲಾ ಹಾಳಾಗಿದೆ. ಯುಗಾದಿಯ ಯೋಜನೆ ಮಾತಾಡಿಕೊಂಡು ಗಂಡ ಹೆಂಡತಿ ಸಂಭ್ರಮ ಪಟ್ಟರು. ಇನ್ ಮೇಲೆ ಆಫೀಸ್ ಗೆ ರಾಜ ಹಾಕಿಯಾರು ಹೊಸವರ್ಷ ಬರಮಾಡಿಕೊಳ್ಳಬೇಕು ರೀ .. ನೀವು ಇಷ್ಟೊಂದು ಸಪೋರ್ಟ್ ಮಾಡತೀರಾ ಅಂತ ಅಂದುಕೊಳ್ಳೆ ಇಲ್ಲಾರೀ ಅಂತ ರಾಗ ಹಾಡಿದ್ಲು. ರೀ ಪಂಚಾಂಗ ಶ್ರವಣ ಕೂಡ ಮಾಡ್ಬೇಕೂ ರೀ ಅಂತ ನೆನಪಿಸಿದಳು. ಮಕ್ಕಳಿಗೆ, ತಾವು ಚಿಕ್ಕವರಾಗಿದ್ದಾಗ ಬೇವು ಬೆಲ್ಲ ತಿಂದು , ಬೇವಿನ ಕಹಿ ತಾಳಲಾಗದೆ ಮುಖ ಕಿವುಚುತ್ತಿದ್ದನ್ನ ಹೇಳಿದಳು. ಜೀವನಲ್ಲಿ ಬರೋ ಕಷ್ಟ ಸುಖ ಸಮನಾಗಿ ಸ್ವೀಕರಿಸೋ ಬುದ್ದಿ ಬರುತ್ತೆ. ಬೇವಿನ ಕಹಿ ಸವಿದಾಗ , ಬೆಲ್ಲದ ಸಿಹಿ ಅಧಿಕವಾಗುತ್ತೆ ಅಂತ ಪಾಠ ಕೂಡ ಮಾಡಿದಳು.
ಶುಕ್ರವಾರ ಬಂತು, ತಿಂಗಳಲ್ಲಿ ಒಂದು ದಿನ ವಿಷ್ಣು ಸಹಸ್ರನಾಮದ ಗುಂಪು ಈ ಸಾರಿ ನಿಮ್ಮ ಮನೇಲಿ ಅಂತ ವಾಟ್ಸಪ್ಪ್ ನಲ್ಲಿ ಜ್ಞಾಪಕ ಮಾಡಿದ್ರು , ಯುಗಾದಿಗೆ ಅಂತ ತಂದ ಸಾಮಾನು ಉಪಯೋಗಿಸಿ ಸ್ವಲ್ಪ ಪ್ರಸಾದ ತಯಾರಿಸಿ ಆಯಿತು. ಸಾಯಂಕಾಲ ಆಫೀಸ್ ಇಂದ ಬಂದು, ಇದ್ದ ಅಲ್ಪ ಸ್ವಲ್ಪ ತುಪ್ಪದಲ್ಲಿ ಬೇಗ ಕೇಸರಿಬಾತ್, ತರಕಾರಿ ಉಪ್ಪಿಟ್ಟು , ಕೋಸಂಬರಿ ಮಾಡಿ ಹೆಂಗೋ ಬಚಾವ್ ಆದ್ವಿ. ೩೦-೪೦ ಜನ ಬಂದು ಮಂತ್ರ ಪಠಿಸಿ ಪ್ರಸಾದ ತಿಂದು ಹೋಗೋ ಹೊತ್ತಿಗೆ ರಾತ್ರಿ ಹತ್ತಾಗಿತ್ತು.
ಮನೆಯೆಲ್ಲಾ ತಿಪ್ಪೆ , ಸಿಂಕ್ನಲ್ಲಿ ಪಾತ್ರೆ ತುಂಬಿ ಹರೀತಾ ಇದ್ದವು.
ಬೆಳಿಗ್ಗೆ ಲೇಟ್ ಆಗಿ ಎದ್ದ ಹೆಂಡತಿ , ರೀ ಇವತ್ತು ಅನಿರುದ್ಧನಿಗೆ ಕ್ರಿಕೆಟ್ ಮ್ಯಾಚ್ ಇದೆ ರೀ. ಫೈನಲ್ಸ್ ಅಂತೆ , ಬೇಗ ರೆಡಿ ಮಾಡ್ಕೊಂಡು ಹೊರಡಿ ಅಂತ ಅವಾಂತರ ಮಾಡಿದ್ಲು . ಅಷ್ಟೊತ್ತಿಗೆ ಮಗಳು ಅಮ್ಮ ನಮ್ಮ ಡಾನ್ಸ್ ಟೀಚರ್ ಇವತ್ತು ಎಕ್ಸ್ಟ್ರಾ ಪ್ರಾಕ್ಟೀಸ್ ಗೆ ಬನ್ನಿ ಯುಗಾದಿ ಕನ್ನಡ ಕೂಟದಲ್ಲಿ performance ಇದೆ ಎಂದು ಹೇಳಿದ್ದಾರೆ. ಸರಿ ಹೆಂಡತಿ ಕೂಡ ಬೇಗ ಬೇಗ ಮನೆಯಿಂದಾಚೆ ದೌಡಾಯಿಸಿದಳು. ಈ ಧಾವಂತದಲ್ಲಿ ಎಲ್ಲರೂ sandwich ತಿಂದರು.
ಸಾಯಂಕಾಲ ಎಲ್ಲರೂ ಬಿಸಿ ಟ್ರಾಫಿಕ್ ನಲ್ಲಿ ಮನೆಗೆ ಬರೋ ಹೊತ್ತಿಗೆ ಸುಸ್ತೋ ಸುಸ್ತು! ಹಬ್ಬದ ಅಡಿಗೆ ಇರಲಿ, ಏನಾರು ಬೇಯಿಸಿಕೊಂಡು ತಿನ್ನೋ ಅಷ್ಟು ಶಕ್ತಿ ಕೂಡ ಉಳಿದಿರಲಿಲ್ಲ.
ದೇವರಿಗೆ ಮಾತ್ರ ಪಾಂಗಿತವಾಗಿ ಬೇವು ಬೆಲ್ಲ ನೈವೇದ್ಯ ಇಟ್ಟು, ಕುಟುಂಬದವರೆಲ್ಲಾ ನಮಗೆ ಒಳ್ಳೇದು ಮಾಡಪ್ಪಾ. ಈ ಧಾವಂತದ ಬದುಕಿನಲ್ಲಿ ನೆಮ್ಮದಿ ತೋರಿಸು ಎಂದರು.
ಫ್ರಿಡ್ಜ್ ಓಪನ್ ಮಾಡಿ ಹಿಂದಿನ ದಿನದ ಉಪ್ಪಿಟ್ಟು ಮೈಕ್ರೋವೇವ್ ನಲ್ಲಿ ಚೆನ್ನಾಗಿ ಬಿಸಿ ಮಾಡಿ ಮೇಲೆ ತುಪ್ಪ ಸುರಿದು, ಯುಗಾದಿ ಊಟ ಮಾಡಿದ್ರು .
ಗಂಡ ಕೀಟಲೆಗೆ, ಎಲ್ಲೇ ಯುಗಾದಿ ಒಬ್ಬಟ್ಟು ಅಂದಾಗ, ಹೆಂಡತಿ ಬನ್ನಿ ತೋರಿಸುತ್ತೇನೆ ಅಂತ , ದೊಡ್ಡ ಟಿವಿ ಸ್ಕ್ರೀನ್ ನಲ್ಲಿ, ಯೌಟ್ಯೂಬ್ ಹಾಕಿ, ಒಬ್ಬಟ್ಟು ರೆಸಿಪಿ ಅಂತ ಟೈಪ್ ಮಾಡಿದಾಗ , ವಿಧ ವಿಧವಾದ ಒಬ್ಬಟ್ಟು ಮಾಡೋ ವಿಡಿಯೋ ಗಳು ಲಿಸ್ಟ್ ಆದವು. ನಿಮಗೆ ಯಾವ ಒಬ್ಬಟ್ಟು ಇಷ್ಟಾರೀ , ಬೇಳೆ ಒಬ್ಬಟ್ಟು ತಾನೇ , ಒಂದು ನಿಮಿಷ ಇಲ್ಲೇ ಕೂತಿರಿ ಅಂತ ಅಡಿಗೆ ಮನೆ ಹೊಕ್ಕಿ, ಬೌಲ್ ನಲ್ಲಿ ತೊಗರಿಬೇಳೆ ಹಾಕಿ ಗಂಡನ ಕೈಯಲ್ಲಿ ಕುಕ್ಕಿ, ಯೌಟ್ಯೂಬ್ ವಿಡಿಯೋ ಪ್ಲೇ ಮಾಡಿದ್ಲು ಜಾಣ ಹೆಂಡತಿ!!
ಬೆಪ್ಪು ಬಡಿದ ಗಂಡ ಬೌಲ್ ನಲ್ಲಿರೋ ಬೇಳೆ , ಟಿವಿ ಸ್ಕ್ರೀನ್ ಮೇಲೆ ಬರುತ್ತಾ ಇರೋ ಗರಿ ಗರಿ ಒಬ್ಬಟ್ಟು ನೋಡಿಕೊಂಡು ಗಪ್ ಚುಪ್ಪ್ !!

This happens most of the times.Nicely written. Good humor.
ReplyDeleteತಮ್ಮ ಲೇಖನ ಹೊರದೇಶದಲ್ಲಿರುವವರು ಓದಿದರೆ ಒಂಥರಾ ಮಜಾ, ಕರ್ನಾಟಕದಲ್ಲೇ ಇದ್ದು ಓದಿದವರಿಗೆ ಒಂಥರಾ ಮುದ ನೀಡುತ್ತದೆ. ಕಡೆಯಲ್ಲಿ ಒಬ್ಬಟ್ಟನ್ನು ನೋಡಿದ ಬಗೆ ಪಾಪ ಅನಿಸುತ್ತದೆ.
ReplyDeleteThank you Sir. We can see the trouble of making obbattu only in overseas. India nalli bekadashtu holigemanegalu rescue maaduttave🙏
DeleteBisibisi belle obbattinashte ruchiyaagide ugadi lekhana.
ReplyDelete