ಯುಗಾದಿ ಹಬ್ಬ 2019 ಶಾಲೆಯ ಕಾರ್ಯಕ್ರಮ

ಯುಗಾದಿ ಹಬ್ಬ 2019 ಶಾಲೆಯ ಕಾರ್ಯಕ್ರಮ
ವರದಿ - ಶ್ರೀಮತಿ ರಾಜಲಕ್ಷ್ಮಿ ನಾರಾಯಣ

Photos link - https://photos.app.goo.gl/bXVusCtgTodv1ofQA

ಹೊರನಾಡಿನ ಸಿಡ್ನಿ ಕನ್ನಡ  ಶಾಲೆಯ ಆಶ್ರಯದಲ್ಲಿ ನಡೆದ ಯುಗಾದಿ ಹಬ್ಬದ ಪುಟ್ಟ ವರದಿ ಇಲ್ಲಿದೆ. ಹೊಸವರುಷದ ಆಗಮನ ಸಂಭ್ರಮದ ಸಮಯ ಏಪ್ರಿಲ್ ೧೩ರಂದು ವಾಟಲ್  ಗ್ರೋವ್ ಶಾಲೆಯ ಆವರಣದಲ್ಲಿ ಬಗೆಬಗೆ ವೇಷಧಾರಿಗಳಾಗಿ ಮಕ್ಕಳು ಅಲ್ಲಿಂದಿಲ್ಲಿಗೆ ಓಡಾಡುತ್ತಾ ಕಣ್ ಸೆಳೆಯುವ ನೋಟ,  ಸಮಯಕ್ಕೆ ಸರಿಯಾಗಿ  ಬಂದು ಕುಳಿತ ಪ್ರೇಕ್ಷಕರು ಆಹ್ವಾನಿತರು ಎಲ್ಲರನ್ನು ಉದ್ದೇಶಿಸಿ ಕು ಸಿಂಚನ ಸ್ವಾಗತದೊಂದಿಗೆ ಬರಮಾಡಿಕೊಂಡರೆ ಕಾರ್ಯಕ್ರಮದ ನಿರ್ವಹಣೆ ಸೊಗಸಾಗಿ ಪ್ರಾರಂಭಿಸಿ ಕಾರ್ಯಕ್ರಮದುದ್ದಕ್ಕೂ ಚುರುಕಾಗಿ ಸುಂದರ ನಿರೂಪಣೆ ಮಾಡಿದವರು ಶ್ರೀಮತಿ ದೀಪ್ತಿ ಜಿತೇಂದ್ರ. ದೀಪ ಬೆಳಗುವ ಕಾರ್ಯಕ್ರಮ ಶ್ರೀಮತಿ ರಾಜೇಶ್ವರಿ ಜಯದೇವ್ ಅವರಿಂದ ನಾಂದಿಯಾಗಿ ಚಿ। ನಮಿತ್ ಹಾಡಿದ ಜೇನಿನ ಹೊಳೆಯೋ ಚಿತ್ರಗೀತೆ ನಂತರ ಕು ಸಿಮ್ರನ್ ಹಾಡಿದ ಚನ್ನವೀರ ಕಣವಿಯವರ ರಚನೆ ವಿಶ್ವ ವಿನೂತನ ವಿದ್ಯಾ ಚೇತನ ಒಳ್ಳೆಯ ಆರಂಭದ  ಹಾಡು ಎನಿಸಿಕೊಂಡವು. ಆನಂತರ ಚಿ ಮಾಧುರ್ ಎಂಬ ಪುಟ್ಟ ಬಾಲಕ ಮಾಡಿದ  ನೃತ್ಯ ಸೊಗಸಾಗಿತ್ತು. ಭಾರತಿಂದ ಈಗಷ್ಟೆ ಸಿಡ್ನಿಗೆ ಬಂದಿರುವ ಖ್ಯಾತ ಗಾಯಕ ದಂಪತಿಗಳಾದ ಶ್ರೀಮತಿ ಮತ್ತು ಶ್ರೀ ಮಹಾಲಕ್ಷ್ಮಿ ಕೇಶವ್ ವೇದಿಕೆಗೆ ಬರುವ ಮುನ್ನ ಅವರ ಬಗ್ಗೆ ಕೇಳಿದ ಅವರ ಕಲಾನುಭವದ ಹೊಗಳಿಕೆಯನ್ನು ಮೀರಿಸುವಂತೆ ಎರಡು ಯುಗಳ ಗೀತೆಗಳನ್ನು ಹಾಡಿದರು. ಕೇಳುಗರ ಅಪಾರ ಮೆಚ್ಚುಗೆ ವ್ಯಕ್ತವಾದುವು. "ಮಾನಸ ಸರೋವರ" ಮತ್ತು "ಈ ಸಂಭಾಷಣೆ"  ಎರಡೂ ಚಿತ್ರಗೀತೆಗಳನ್ನು  ಸುಮಧುರವಾಗಿ ಈ ದಂಪತಿಗಳು  ಹಾಡಿದರು. 

ಆ ನಂತರ ಜನರ ಮನಸ್ಸನ್ನು ಸೂರೆಗೊಂಡ ಕಾರ್ಯಕ್ರಮ "ಕರ್ನಾಟಕ ಇತಿಹಾಸ ವೈಭವ" ಎಂಬ ಲಾವಣಿ ಶೈಲಿಯ ಹಾಡನ್ನು ಸುಮಾರು ಹದಿನಾಲ್ಕು ಜನ ಹಿರಿಯರು ಹಾಡಿದ ಹಾಡು. ಕಳೆದ ಇಪ್ಪತ್ತು ಶತಮಾನಗಳಲ್ಲಿ ಕಂಡ ಪ್ರಮುಖ ಗಣ್ಯರ ಹೆಸರುಗಳನ್ನೂ ಸೇರಿಸಿ ಇತಿಹಾಸ ಪೂರ್ವದಲ್ಲಿನ ರಾಮಾಯಣದ ಕಾಲದ ರಾವಣ - ಗಣಪರ ಶಿವನ ಆತ್ಮಲಿಂಗವ ಕಸಿದುಕೊಂಡ ಗೋಕರ್ಣದ ಕಥೆಯಿಂದ ಹಿಡಿದು ಇತ್ತೀಚಿನ ಸಾಲು ಮರದ ತಿಮ್ಮಕ್ಕನ ವರೆಗೂ ನೆನೆಯಲಾಗಿದೆ.  ಸಾಧ್ಯವಾದವರನ್ನೆಲ್ಲರ ಹೆಸರುಗಳನ್ನೂ ಆಯಾ ಶತಮಾನದ ಸಾಲಿನಲ್ಲಿ ಹಾಡುತ್ತಾ ಪ್ರತಿ ಶತಮಾನದ ಹಾಡಿನ ಚರಣಕ್ಕೂ  ನಿಲ್ಲಿಸಿ ಅಲ್ಲಿ ಬರುವ ವ್ಯಕ್ತಿಗಳ ಪಾತ್ರವನ್ನು ಕನ್ನಡ ಶಾಲೆಯ ಮಕ್ಕಳು ವೇಷ ಧರಿಸಿ ಅರ್ಧನಿಮಿಷ ನಟಿಸಿ ಕೊಟ್ಟ  ಮಾತುಗಳನ್ನು ಅಚ್ಚುಕಟ್ಟಾಗಿ ನುಡಿದು ಪ್ರೇಕ್ಷಕರ ಶಿಳ್ಳೆ ಚಪ್ಪಾಳೆ ಗಿಟ್ಟಿಸಿದರು. ಮೊದಲು ಬಂದ  ಹನುಮ, ರಾವಣ-ಗಣಪ ಪೌರಾಣಿಕ ವೇಷವಾದರೆ, ನಂತರ ಬಂದ ಮಕ್ಕಳು ಪುಲಿಕೇಶಿ, ನೃಪತುಂಗ,ಹಕ್ಕಾ-ಬುಕ್ಕಾ, ಕೃಷ್ಣದೇವರಾಯ,ವಿಷ್ಣುವರ್ಧನ - ಶಾಂತಲೆ, ಹೌಯ್ಸಳ, ಕೆಂಪೇಗೌಡ  ರಾಜವಂಶದ ವೇಷ ಧರಿಸಿ ಮೆರೆಸಿದರು. ಕನ್ನಡಕ್ಕೆ ವಚನ ದಾಸ ಸಾಹಿತ್ಯದ ಕೊಡುಗೆಯಿತ್ತ ಬಸವಣ್ಣ,ಅಕ್ಕ,ಸರ್ವಜ್ಞ, ಮಧ್ವಾಚಾರ್ಯ, ಕನಕ ಪುರಂದರ  ವಿಜಯದಾಸರು,ಹೆಳವನ ಕಟ್ಟೆ  ಗಿರಿಯಮ್ಮ,  ಸಂಚಿಯ ಹೊನ್ನಮ್ಮ ಇವರುಗಳ ವೇಷ ಭೂಷಣಗಳಿಂದ ರಂಜಿಸಿದರು.ಕೆಚ್ಛೆದೆಯ  ಕನ್ನಡದ  ವೀರ ರಾಣಿಯರಾದ  ಕಿತ್ತೂರ ಚೆನ್ನಮ್ಮ,ಬೆಳವಾಡಿ ಮಲ್ಲಮ್ಮ, ಕೆಳದಿಯ ಚೆನ್ನಮ್ಮ ವೇದಿಕೆಯ ಮೇಲೆ ಬಂದು ತಮ್ಮ ಸಂಭಾಷಣೆಗಳಿಂದ ಶಿಳ್ಳೆಚಪ್ಪಾಳೆಗಳ ಸುರಿಮಳೆಗರೆದರು. ಕೆಲವು ಮಕ್ಕಳು ವೇದಿಕೆಗೆ ಬಂದು ತಮ್ಮ ಸಾಲು ಮರೆತರೂ ನೋಡಲು ಚೆನ್ನಾಗಿತ್ತು.   ಸಾಹಿತಿಗಳು, ಗಾಯಕರು, ಜ್ಞಾನಪೀಠ ಪಡೆದವರು ಕಡೆಯದಾಗಿ ನೆಚ್ಚಿನ ವರನಟ ಡಾ ರಾಜ್ ಮತ್ತು ಸಾಲುಮರದ ತಿಮ್ಮಕ್ಕನ ಪಾತ್ರಧಾರಿಗಳು ಬಂದಾಗ ಮತ್ತೊಮ್ಮೆ ಪ್ರೇಕ್ಷಕರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.  ಈ ಹಾಡನ್ನು ಬರೆದ ಗೌರವ ಕನಕಾಪುರ ನಾರಾಯಣ ಅವರಿಗೆ ಸಲ್ಲತಕ್ಕದ್ದು.
ಶ್ರೀಮತಿ ನಿವೇದನ ಹಾಡುಗಾರಿಗೆ ಮತ್ತು ಅವರ ಜೊತೆ ಶ್ರೀ  ಉದಯ್  ತಬಲಾ ಪಕ್ಕ ವಾದ್ಯದಲ್ಲಿ ಮೂಡಿಬಂದ, ಹಾಗೂ ಶ್ರೀಯುತ ರಾಜೇಶ್ ಮತ್ತು ಕಾರ್ತಿಕ್ ಸಮೂಹದೊಡನೆ ಪಕ್ಕ ವಾದ್ಯದಲ್ಲಿ ಮನೀಶ್ ಅವರುಗಳ  ಭಾವ ಹಾಗೂ ಜಾನಪದ ಗೀತೆಗಳ ಗಾಯನ  ಕಾರ್ಯಕ್ರಮದ ಗುಣಮಟ್ಟ ಮೇಲೇರಿಸಿತು. 
ಭಾರತ ನಾಟ್ಯ ಕಲಾವಿದರಾದ ಶ್ರೀಮತಿ ಶ್ರುತಿ ರಾಮ ಮೂರ್ತಿ ಮತ್ತು ಶ್ರೀಮತಿ ಸಂಧ್ಯಾ ಅವರು ಹುಬ್ಬೇರಿಸುವ ಹಾಗೆ ನರ್ತಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ಶೋಭೆ ತಂದರು. ಕನ್ನಡ ಶಾಲೆಯಲ್ಲಿ ಇತ್ತೀಚಿಗೆ ನಡೆದ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಶ್ರೀಮತಿ ಸೀತಾ ಕೇಶವ್ ಅವರಿಂದ ಮಕ್ಕಳ ಉತ್ತರ ಪತ್ರಿಕೆಗಳನ್ನು ನೀಡಲಾಯಿತು. ಶ್ರೀಮತಿ ಸೀತಾ ಅವರು ಮಕ್ಕಳನ್ನು ಎರಡು ಪ್ರೋತ್ಸಾಹದ ನುಡಿಗಳಿಂದ ಉತ್ತೇಜಿಸಿದರು.

ಶ್ರೀಮತಿ ರಾಜೇಶ್ವರಿ ಜಯದೇವ್ ಅವರು ನಮ್ಮ ಕನ್ನಡ ಸಮುದಾಯಕ್ಕೆ ನೀಡುತ್ತಿರುವ ಸಮಯ ಮತ್ತು ಸಹಕಾರಗಳನ್ನು
ಗಮನಿಸಿ ಸಿಡ್ನಿ ಕನ್ನಡ ಶಾಲೆಯ ವತಿಯಿಂದ  ಅವರಿಗೆ "ಸ್ಫೂರ್ತಿ ಸರಸ್ವತಿ" ಎಂಬ ಬಿರುದು ಕೊಟ್ಟು ಹೂವು-ಅರಿಶಿನ-ಕುಂಕುಮ ಸಮೇತ ಶಾಲು ಹೊದಿಸಿ ಸನ್ಮಾನ ಮಾಡಿದರು. ಶ್ರೀಮತಿ ರಾಜೇಶ್ವರಿ ಅವರು ನಡೆಸಿಕೊಟ್ಟ ಉಚಿತ ಆರೋಗ್ಯ ಕಾರ್ಯಕ್ರಮಗಳು ಅವರ ಇತ್ತೀಚಿನ ಆರೋಗ್ಯಲೇಖನಗಳನ್ನು ಇಲ್ಲಿ ನೆನೆಯಬಹುದು. ಕಾರ್ಯಕ್ರಮ ಅಂತ್ಯದಲ್ಲೂ ರುಚಿಕರ ಭೋಜನಕ್ಕೂ ಮೊದಲು ಶ್ರೀಮತಿ ಗೌರಿ ಪೈ ಮಾಡಿದ ನೃತ್ಯವೂ ಸಹ ಚೆನ್ನಾಗಿ ಮೂಡಿಬಂದಿತು. ಶಾಲೆಯ ಪೋಷಕರು ಎಡಬಿಡದೆ ಉತ್ಸಾಹದಿಂದ ಎಲ್ಲ ಜವಾಬ್ದಾರಿಗಳನ್ನೂ ನಿಭಾಯಿಸಿ ಸೈ ಎನಿಸಿದರೂ. ಬಗೆಬಗೆಯ ಊಟ ಕೋಸಂಬರಿ, ಹಣ್ಣು ಸಿಹಿತಿಂಡಿಗಳು ಸಾಕಷ್ಟು ಮಾಡಿ ತಂದಿದ್ದರು. ಎಲ್ಲರಿಗು ಬಡಿಸಿದರೂ ಉಳಿಯುವಷ್ಟು ತಯಾರಿ ಆಗಿತ್ತು. ರಾತ್ರಿ ಹತ್ತರೊಳಗೆ ಎಲ್ಲ ಸ್ವಚ್ಛ ಗೊಳಿಸಿ ಸಭಾಂಗಣ ಖಾಲಿಯಾಯಿತು. ಆದರೆ ಲಾವಣಿ ಹಾಡು ಮಾತ್ರ ಮನೆಮಾತಾಯಿತು. ಕಳೆದೆರೆಡು ವಾರಗಳಲ್ಲಿ ಕೆಲವರನ್ನು ಭೇಟಿಮಾಡಲು ಹೋದಾಗ ಅವರ ಮಕ್ಕಳು ಮನೆಯಲ್ಲಿ ಆಡುತ್ತಾ ಕರ್ನಾಟಕ ಕರ್ನಾಟಕ ಎಂದು ಗುನುಗುತ್ತಿದ್ದರು. ಅದನ್ನು ನೋಡಿ ಆನಂದ ಮತ್ತು ಸಾರ್ಥಕತೆಯ ಅನುಭವವಾಯಿತು.   

Comments

  1. ಯುಗಾದಿ ಕಾರ್ಯಕ್ರಮದ ವರದಿ ವಿವರವಾಗಿ, ಚೆನ್ನಾಗಿ ಮೂಡಿಬಂದಿದೆ. ಮನೆ ಸೂರೆಗೊಳ್ಳುವ ಚಿಣ್ಣರಿಗೂ, ಮತ್ತು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಏರ್ಪಡಿಸುವ ಕನ್ನಡ ಶಾಲೆಯ ಸಮಿತಿಯವರಿಗೂ ಹಾರ್ದಿಕ ಅಭಿನಂದನೆಗಳು.
    ನಮ್ಮ ಸಮುದಾಯಕ್ಕೆ ವಿಶಿಷ್ಟ ಹಾಗೂ ಅತ್ಯವಶ್ಯಕ ವಿಷಯದಲ್ಲಿ ಮಾರ್ಗದರ್ಶನ ಮಾಡುತ್ತಿರುವ ಶ್ರೀಮತಿ ರಾಜೇಶ್ವರಿಯವರಿಗೆ "ಸ್ಪೂರ್ತಿ ಸರಸ್ವತಿ" ಬಿರುದು ನೀಡಿ ಸನ್ಮಾನಿಸಿರುವುದು ಬಹಳ ಸಂತೋಷದ ವಿಷಯ. ಬಹುಮುಖ ಪ್ರತಿಭೆಯಾಗಿರುವ ಅವರಿಗೆ ಅದು ತಕ್ಕುದಾಗಿದೆ. ಅವರಿಗೂ ಹಾರ್ದಿಕ ಅಭಿನಂದನೆಗಳು.

    ReplyDelete
  2. thanks for very detailed and nice article. photos are too good.

    ReplyDelete

Post a Comment