ಪುರಾಣ ಪಾತ್ರಗಳ ಚುನಾವಣಾ ತಯಾರಿ




ಪುರಾಣ ಪಾತ್ರಗಳ ಚುನಾವಣಾ ತಯಾರಿ


  ಹಾಸ್ಯ ಲೇಖನ - ಅಣಕು ರಾಮನಾಥ್ 


ತ್ರೇತಾ-ದ್ವಾಪರದ ದುರುಳರ ಮತ್ತು ರಕ್ಕಸರ ಸಮ್ಮಿಶ್ರ ಸಭೆ ಸೇರಿತ್ತು.
ಭೂಲೋಕದಲ್ಲಿ ಮತ್ತೆ ಚುನಾವಣಾ ಕಾಲ ಪ್ರಾಪ್ತವಾಗಿದೆ. ನಮ್ಮ ಅಂಶಗಳನ್ನು ಅವರಲ್ಲಿ ಸೇರಿಸಲು ಇದೇ ಸಕಾಲನುಡಿದ ಸಭೆಯ ಅಧ್ಯಕ್ಷತೆ ವಹಿಸಿದ್ದ ಕುಂಭಕರ್ಣ.
ರಾಕ್ಷಸರಾದರೇನು, ಮನುಷ್ಯರಾದರೇನು, ಮಕ್ಕಳನ್ನು ಅಧಿಕಾರಕ್ಕೆ ತರಬೇಕೆಂಬುದು ಎಲ್ಲ ತಾಯಂದಿರ ಆಸೆ. ಮಾರೀಚ ಮತ್ತು ಸುಬಾಹುವಿಗೆ ಅಧಿಕಾರ ಕೊಡಿಸುವ ಆಸೆ ಇದ್ದ ನನಗೆ ಆಗ ಅದು ಈಡೇರದಿದ್ದರೂ, ಈಗ ತಾಯಿಯೊಬ್ಬಳು ಮಗನಿಗೆ ಪಕ್ಷಾಧ್ಯಕ್ಷನ ಪಟ್ಟ ಕಟ್ಟಿರುವುದನ್ನು ಕಂಡು ಬಹಳ ಸಂತೋಷವಾಗಿದೆ. ತಾಯಿಗೆ ನನ್ನಲ್ಲಿರುವ ರಾಕ್ಷಸತ್ವವನ್ನು ಧಾರೆಯೆರೆಯಲು ಸಿದ್ಧಳಿದ್ದೇನೆಎಂದಳು ತಾಟಕಿ

ಚುನಾವಣೆ ಎಂದಮೇಲೆ ಹಣದ ಕಟ್ಟುಗಳಿಂದ ಹಿಡಿದು ಮಚ್ಚು ಲಾಂಗುಗಳವರೆಗೆ ಎತ್ತಲು ಒಳ್ಳೆಯ ಬಾಹುಗಳುಳ್ಳ ಜನರೇ ಬೇಕು. ಅಂತಹ ಬಾಹುಗಳನ್ನು ಅವರಿಗೆ ಒದಗಿಸುವ ಜವಾಬ್ದಾರಿಯನ್ನು ನಾನು ಹೊರುತ್ತೇನೆಎಂದ ಸುಬಾಹು.
ಮಾನ ಮನ್ನಾ, ಮರ್ಯಾದೆ ಮನ್ನಾ, ನಾಚಿಕೆ ಮನ್ನಾ ಆಗಿರುವವರಿಂದ ಸಾಲ ಮನ್ನಾ ಎಂಬ ಮಾಯಾಮೃಗವನ್ನು ಜನರ ಮುಂದೆ ಹರಿದಾಡಿಸುವ ಕೆಲಸವನ್ನು ನಾನು ಮಾಡುತ್ತೇನೆಎಂದ ಮಾರೀಚ


ನಾನು ಏಮಾರಿದ್ದರಿಂದ ಕಂಬದಿಂದ ಬಂದ ಉಗ್ರ ನರಸಿಂಹನು ಅಂದು ನನ್ನನ್ನು ಬಗೆದ. ಈಗ ಕಂಬದೊಳಗೆ ಅಡಗಿದ್ದು, ಸರಿಯಾದ ಸಮಯಕ್ಕೆ ಆಕ್ರಮಣ ಮಾಡುವ ಉಪಾಯವನ್ನು ನಾನು ತಿಳಿದಿದ್ದೇನೆ. ಚುನಾವಣೆಗೆ ಹೆಸರು ಕೊಡಲು ಕಡೆಯ ಕ್ಷಣ ಇನ್ನೇನು ಪ್ರಾಪ್ತವಾಯಿತು ಎನ್ನುವಾಗ ಥಟ್ಟನೆ ಸರ್ಪ್ರೈಸ್ ಕ್ಯಾಂಡಿಡೇಟೊಬ್ಬನನ್ನು ಮರೆಯಿಂದ ಹೊರಬಿಟ್ಟು ವಿಪಕ್ಷದ ಮತೋದರವನ್ನು ಸೀಳಿಬಿಡುತ್ತೇನೆಗರ್ಜಿಸಿದ ಹಿರಣ್ಯಕಶಿಪು.
ಚುನಾವಣೆ ಎಂದರೆ ಪ್ರತಿ ಪಕ್ಷಕ್ಕೂ ದಾನದ ಅಗತ್ಯವಿರುತ್ತದೆ. ಭೂಗತ ಲೋಕದಿಂದಲೇ ಇದಕ್ಕೆ ದಾನಗಳು ದೊರಕುವುದು ಹೆಚ್ಚು. ಪ್ರತಿ ಅಂಡರ್ವಲ್ಡ್ ಡಾನ್ ಗೂ ಇಂತಹ ಮಹತ್ತರ ಸಮಯದಲ್ಲಿ ನನ್ನ ಕೈಲಾದ ಸಹಾಯ ಮಾಡಲು ಪಾತಾಳದಲ್ಲಿರುವ ಏಕೈಕ ಕಾರಣದಿಂ ಭೂಗತಲೋಕಿ ಆದ ನಾನು ಇದಿಗೋ ಈಗಲೇ ಪೊರಮೊಡುತ್ತೇನೆಎಂದ ಬಲಿ ಚಕ್ರವರ್ತಿ.
‘ಚುನಾವಣಾ ಪ್ರಚಾರದಲ್ಲಿ ‘ವಾಟ್ ಫಾರ್ ಅವರ್ ಪಾರ್ಟಿ ಎಂದು ಅತ್ಯಂತ ಕರ್ಕಶವಾದ ಕತ್ತೆಗಳನ್ನೂ ಮೀರಿಸುವ ದನಿಯಲ್ಲಿ ಕೂಗಬೇಕಾಗುತ್ತದೆ. ಹೆಸರಿನಲ್ಲಿಯೇ ಖರ ಅರ್ಥಾತ್ ಕತ್ತೆಯನ್ನು ಹೊಂದಿರುವ ನಾನು ಕ್ಯಾಂಪೇಯ್ನಿಂಗ್ ಮಂದಿಯ ಗಂಟಲಿಗೆ ಖರದ ಶಕ್ತಿಯನ್ನು ಧಾರೆಯೆರೆಯುತ್ತೇನೆಎಂದ ಕುಂಭಕರ್ಣನ ತಮ್ಮ ಖರ.

ಚುನಾವಣೆಯಲ್ಲಿ ಹೇಳಿಕೊಳ್ಳಲು ಸ್ವಂತ ಸಾಧನೆಗಳಿಲ್ಲದವರೆಲ್ಲ ವಿರೋಧಪಕ್ಷದವರ ಮೇಲೆ ದೂಷಣೆ ಮಾಡುತ್ತಾ ಸಾಗುತ್ತಾರೆ. ಹಾಗೆ ದೂಷಣೆ ಮಾಡುವ ಬುದ್ಧಿಯನ್ನು ತೀವ್ರಗೊಳಿಸುವ ಮತ್ತು ಅದಕ್ಕೆ ಅಗತ್ಯವಾದ ತಾಕತ್ತನ್ನು ನೀಡುವ ಕೆಲಸವನ್ನು ನಾನು ಇಲ್ಲಿಂದಲೇ ನಿರ್ವಹಿಸುತ್ತೇನೆಎಂದ ಖರನ ತಮ್ಮ ದೂಷಣ.
ಇಕೋ ಸೀರೆ ಹಿಡಿ; ತಕ್ಕೋ, ಹಣದ ಥೈಲಿ ಹಿಡಿದುಕೋ, ಗುಡಿಸಲಿಗೆ ಒಯ್ಯಲು ವಾಷಿಂಗ್ ಮೆಷೀನನ್ನು ಹಿಡಿ... ಎನ್ನುತ್ತಾ ಇಡಿಇಡಿಯಾಗಿಯೂ, ಹಿಡಿಹಿಡಿಯಾಗಿಯೂ ಹಂಚುವ ಮಂದಿಗೆ ಒತ್ತಾಸೆಯಾಗಿ ನಾನು ಇರುತ್ತೇನೆಎಂದ ಹಿಡಿಂಬಾಸುರ.
ಈಗಿನ ರಾಜಕಾರಣಿಗಳು ಬಚ್ಚಾಗಳು. ವೈರಿಗಳನ್ನು ಸರಿಯಾಗಿ ಬೈಯುವುದಕ್ಕೂ ಬರುವುದಿಲ್ಲ. ದ್ವಾಪರದಲ್ಲಿ ಶ್ರೀಕೃಷ್ಣನನ್ನೇ ನೂರು ವಿಧದಲ್ಲಿ ಗಳಹಿದ ಕೀರ್ತಿ ಹೊಂದಿರುವ ನಾನು ಚುನಾವಣೆಯಲ್ಲಿ ವಿಪಕ್ಷಗಳಿಗೆ ಹೊಸಹೊಸ ಬೈಗುಳಗಳನ್ನು ಹೇಳಿಕೊಡುವುದಲ್ಲದೆ ಚುನಾವಣೆಯ ನಂತರ ಅತಿ ಹೇಯವಾದ ಹೇಳಿಕೆಗಳನ್ನು ನೀಡಿದ ಮುಖಂಡನಿಗೆನಿಂದಾಪ್ರವೀಣ ಪ್ರಶಸ್ತಿಸಹ ನೀಡಲು ನಿರ್ಧರಿಸಿದ್ದೇನೆ. ನನ್ನ ಬೆಂಬಲ ಎಂದೆಂದಿಗೂ ಒಡಕು ಬಾಯಿಗೇಎಂದು ಘೋಷಿಸಿದ ಶಿಶುಪಾಲ.
ತಂದೆಯ ಯುದ್ಧವನ್ನು ಮಗನು ಮಾಡಬೇಕೆಂಬುದು ತ್ರೇತಾಯುಗದ ಪದ್ಧತಿ. ಇಂದಿನ ಚುನಾವಣೆಯಲ್ಲಿಯೂ ಮಗನನ್ನು ಮುಂದೆ ಮಾಡಿಕೊಂಡು, ಕಡೆಯಲ್ಲಿ ತಾನೂ ಯುದ್ಧಕ್ಕಿಳಿಯುವ ತಂತ್ರವನ್ನು ಅಪ್ಪ-ಮಕ್ಕಳ ಜೋಡಿಗಳು ಅಲ್ಲಲ್ಲಿ ಕೈಗೊಳ್ಳುತ್ತಿವೆ. ಅಂತಹ ಜೋಡಿಗಳಿಗೆ ಒತ್ತಾಸೆಯಾಗಿ ನಾನು ನನ್ನ ಅಂಶವನ್ನು ಅವರಲ್ಲಿ ಹಂಚಿಕೊಳ್ಳುತ್ತೇನೆಎಂದ ರಾವಣಪುತ್ರ ಅಕ್ಷಯಕುಮಾರ

ಎಲೆಕ್ಷನ್ ಕಾಲವು ಇದು ವಿಚಿತ್ರ ಪಾರ್ಟಿಗಳಿವು
ಮತಗಳ ಬೇಟೆಗೆ ಇವು ಎಲ್ಲಕ್ಕು ಸಿದ್ಧ ನೋಡು
ಹಹಹ್ಹಹಹಹಹ್ಹ ಹಹಹ್ಹಹಹಹಹ್ಹ ಹಹಹ್ಹಹಹಹಹ್ಹ ಹಹಹ್ಹಹಹ್ಹಹಾ...

ಅಹಾರೆ ಭಂಡ ಪಡೆಯು ಓಹೋರೆ ಮೊಂಡು ತಲೆಯು
ಭಳೀರೆ ದಂಡಪಿಂಡ; ಇವ್ರೆಲ್ಲ ಕ್ಯಾಂಡಿಡೇಟ್ಸು
ಎಲೆಕ್ಷನ್ ಕಾಲವು ಇದು ವಿಚಿತ್ರ ಪಾರ್ಟಿಗಳಿವು
ಮತಗಳ ಬೇಟೆಗೆ ಇವು ಎಲ್ಲಕ್ಕು ಸಿದ್ಧ ನೋಡು
ಹಹಹ್ಹಹಹಹಹ್ಹ ಹಹಹ್ಹಹಹಹಹ್ಹ ಹಹಹ್ಹಹಹಹಹ್ಹ ಹಹಹ್ಹಹಹ್ಹಹಾ...

ಭಳೀರೆ ಫಂಡು ಸಾಲು ಅಹ ಗೋಣಿ ಜೋಳಿಗೆಗಳು
ಭಲೆ ಲಿಕ್ಕರ್ಲಾಬಿ ಮೊದಲು; ಇವ್ರೆಲ್ಲ ಬೆಂಬಲಿಗರು
ಎಲೆಕ್ಷನ್ ಕಾಲವು ಇದು ವಿಚಿತ್ರ ಪಾರ್ಟಿಗಳಿವು
ಮತಗಳ ಬೇಟೆಗೆ ಇವು ಎಲ್ಲಕ್ಕು ಸಿದ್ಧ ನೋಡು
ಹಹಹ್ಹಹಹಹಹ್ಹ ಹಹಹ್ಹಹಹಹಹ್ಹ ಹಹಹ್ಹಹಹಹಹ್ಹ ಹಹಹ್ಹಹಹ್ಹಹಾ...

ಮಜಾರೆ ಘೋಷಣೆಗಳು ಹುಳಿಮೋರೆ ಹುಬ್ಗಂಟುಗಳು
ವಹಾರೆ ವಾಯಸಗಳು; ಇವ್ರ್ದೆಲ್ಲ ಕಳ್ಳ pose
ಎಲೆಕ್ಷನ್ ಕಾಲವು ಇದು ವಿಚಿತ್ರ ಪಾರ್ಟಿಗಳಿವು
ಮತಗಳ ಬೇಟೆಗೆ ಇವು ಎಲ್ಲಕ್ಕು ಸಿದ್ಧ ನೋಡು
ಹಹಹ್ಹಹಹಹಹ್ಹ ಹಹಹ್ಹಹಹಹಹ್ಹ ಹಹಹ್ಹಹಹಹಹ್ಹ ಹಹಹ್ಹಹಹ್ಹಹಾ...

ಎಂದು ಹಾಡುಹಾಡುತ್ತಲೇ ರಂಗಕ್ಕೆ ಧುಮುಕಿದ ಘಟೋತ್ಕಜ.
ಮಹಾಭಾರತದ ಕಾಲಕ್ಕೂ ಈಗಿನ ಕಾಲಕ್ಕೂ ವ್ಯತ್ಯಾಸವೇನೆಂದರೆ ಅಂದು 11 ಅಕ್ಷೋಹಿಣಿ ಇದ್ದೂ 7 ಅಕ್ಷೋಹಿಣಿಗೇ ಜಯವಾಯಿತು. ಆದರೆ ಈಗ ಪ್ರಜಾಪ್ರಭುತ್ವದ ಕಾಲವಾದ್ದರಿಂದ ಹನ್ನೊಂದು ಅಕ್ಷೋಹಿಣಿಯ ಸಪೋರ್ಟ್ ಇರುವವನೇ ರಾಜನೆಂದು ಘೋಷಿಸತಕ್ಕ ಕಾಲ. ಆದ್ದರಿಂದ ಒಂದು ಪಕ್ಷದ ವಿರುದ್ಧ ಮಿಕ್ಕೆಲ್ಲ ಕುಟುಂಬಗಳನ್ನು ಎತ್ತಿಕಟ್ಟಿಬಿಟ್ಟರೆ ಜಯಂ ಮನದೇಎಂದು ಸಾರಿದ ದುರ್ಯೋಧನ.
ಹ್ಹ! ದುರ್ಯೋಧನನು ತನ್ನ ಕಾಲವನ್ನೇ ಸರಿಯಾಗಿ ಅರಿಯಲಿಲ್ಲವೆಂದಾಯಿತು. ಇತ್ತ ದ್ರೋಣ ಪದ್ಮವ್ಯೂಹ ರಚಿಸಿ, ಅತ್ತ ಅರ್ಜುನನನ್ನು ಸಂಶಪ್ತಕರು ಯುದ್ಧದಲ್ಲಿ ತೊಡಗಿಸಿಕೊಂಡಾಗ ಅಭಿಮನ್ಯು ವಧೆಯ ಮೂಲಕ ಕೌರವರಿಗೆ ಜಯ ಲಭಿಸಿದ ಮಹತ್ತರವಾದ ದಿನವೇಸಮ್ಮಿಶ್ರವಿದ್ದಲ್ಲಿ ಜಯ ಖಚಿತಎಂದು ಯುದ್ಧತಂತ್ರಜ್ಞರು ಜಗತ್ತಿಗೆ ಸಾರಿದ ದಿನ. ಇಂದಿಗೂ ನನ್ನನ್ನು ಮೀರಿಸುವ ಮಂದಿ ಭಾರತದಲ್ಲಿದ್ದು ಸಮ್ಮಿಶ್ರದ ಶ್ರೇಷ್ಠತೆಯನ್ನು ಸಾರುತ್ತಿದ್ದಾರೆ. ಅಂತಹ ಸಮ್ಮಿಶ್ರಿಗಳಿಗೆ ನನ್ನ ಸಕಲ ಕುಟಿಲತೆಯನ್ನು ಧಾರೆಯೆರೆಯಬೇಕೆಂದಿದ್ದೇನೆ. ಆದರೆ ಕುಟಿಲತೆ ಅವರಲ್ಲಿ ಹೆಚ್ಚಿದೆಯೋ, ನನ್ನಲ್ಲಿ ಹೆಚ್ಚಿದೆಯೋ ಎಂಬುದೊಂದೇ ಸಂದೇಹ. ಎಂತಾದರೂ ಇರಲಿ, ಅಧಿಕಸ್ಯ ಅಧಿಕಂ ಮಹತ್ಎಂದ ಶಕುನಿ.
ಅಮೃತ ಹಂಚುವ ಸಮಯದಲ್ಲಿ ನಮ್ಮನ್ನು ಮೋಹಿನಿ ರುಂಡಮುಂಡವಾಗಿ ಬೇರ್ಪಡಿಸಿದಳಲ್ಲವೆ... ಚುನಾವಣಾ ಸಮಯದಲ್ಲಿ ಮತದಾರರ ಪೈಕಿ ರುಂಡವನ್ನು ಪ್ರತಿನಿಧಿಸುವ ವಿದ್ಯಾವಂತರಲ್ಲಿ ಪಿಕ್ನಿಕ್ ಬಯಕೆ ಮೂಡಿಸಿ ರುಂಡವನ್ನು ದೂರವಾಗಿಸಿ, ಮುಂಡವನ್ನು ಪ್ರತಿನಿಧಿಸುವ ತಲೆಯಿಲ್ಲದ ಜನರಿಗೆ ಹೆಂಡಕ್ಕೆ ಮತ ಮಾರಿಕೊಳ್ಳುವಂತೆ ಪ್ರೇರಣೆ ನೀಡಿ ಬುದ್ಧಿಯನ್ನು ದೂರವಾಗಿಸಿ, ಜನತೆಯಲ್ಲಿ ನಮ್ಮೀರ್ವರ ಅಂಶವನ್ನು ಹಂಚುವುದರ ಮೂಲಕ ಕೇವಲ ರುಂಡ ಮತ್ತು ಕೇವಲ ಮುಂಡಗಳಾ ನಾವು ಸರಿಯಾಗಿ ಸೇಡು ತೀರಿಸಿಕೊಳ್ಳುತ್ತೇವೆಎಂದರು ರಾಹುಕೇತುಗಳು.
‘ಎದೆಹಾಲು ಉಣಿಸಿ ಕೃಷ್ಣನನ್ನು ಕೊಲ್ಲುವಲ್ಲಿ ಅಂದು ಸೋತಿರಬಹುದು; ಆದರೆ ದೇಶಕ್ಕೆ ಹಂಚಿಯೂ ಮಿಕ್ಕು ಸ್ರವಿಸುವಷ್ಟು ಭ್ರಷ್ಟಾಚಾರವೆಂಬ ಹಾ(ಲಾಹ)ಲ(ವ)ನ್ನು ಎದೆಯಲ್ಲಿ ತುಂಬಿಕೊಂಡು ಮುಖಂಡರಿಗೆ ಹಂಚಲು ಕಾತುರಳಾಗಿದ್ದೇನೆ’ ಎನ್ನುತ್ತಾ ಸಂಭ್ರಮಿಸಿದಳು ಪೂತನಿ.
‘ಪಕ್ಷೇತರನಾಗಿ ನಿಲ್ಲುವುದೂ ಮುಂದೊಮ್ಮೆ ಸಿಕ್ಕಾಪಟ್ಟೆ ಕಬಳಿಸಲು ಅಸ್ತ್ರವಾಗುತ್ತದೆ. ಹೀಗೆ ಪಕ್ಷೇತರರಾಗುವ ಬುದ್ಧಿ ಮೂಡಿಸಿ, ನಂತರ ಬಾಲಂಗೋಚಿಯಿಲ್ಲದ ಗಾಳಿಪಟದಂತೆ ಅತಂತ್ರ ಪರಿಸ್ಥಿತಿ ಆದಾಗ ಮೋಸ್ಟ್ ಕಾಸ್ಟ್ಲಿ ಬಾಲಂಗೋಚಿಯಾಗುವ ಪ್ರೇರಣೆಯನ್ನು, ತಲೆಯಿಲ್ಲದಿದ್ದರೂ ಬಾಚಿಕೊಳ್ಳಲು ಕೈಯಿರುವವರ ಮನದಲ್ಲಿ ಮೂಡಿಸುವುದೇ ನನ್ನ ಏಕೈಕ ಗುರಿ’ ಗಹಗಹಿಸಿದ ಕಬಂಧಾಸುರ.
‘ಬೇಸಿಗೆ ಇದೆ. ವರ್ಲ್ಡ್ ಕಪ್ ಇದೆ, ಐಪಿಎಲ್ ಇದೆ; ಈಗ ಕರೆಂಟ್ ಇಲ್ಲವಾಗಿಸುವುದರ ಮೂಲಕ ಸರ್ಕಾರದ ಮೇಲೆ ಜನರ ಕ್ರೋಧ ಉಕ್ಕಲು ಪ್ರಚೋದನೆ ನೀಡಲು ಇದು ಸಕಾಲ. ಇದೋ ಹೊರಟೆ’ ಎಂದ ಅಂಧಕಾಸುರ.
‘ನಾನು ರೌಡಿಗಳ ಪಡೆಯಲ್ಲಿ, ಭಿನ್ನಮತೀಯರ ಚಿಂತನೆಗಳಲ್ಲಿ ಮತ್ತು ಸ್ಲಮ್ಮಿಗರ ಮನದಲ್ಲಿ ಹೊಕ್ಕುಬಿಡುತ್ತೇನೆ. ಎಷ್ಟೇ ಕೊಟ್ಟರೂ ಮತ್ತಷ್ಟು ಬೇಕೆಂಬ ಹಸಿವನ್ನು ಮೂಡಿಸಿಬಿಟ್ಟರೆ ಚುನಾವಣೆಗೆ ಕಳೆಯೋ ಕಳೆ’ ಎನ್ನುತ್ತಾ ಗಹಗಹಿಸಿದ ಬಕಾಸುರ.
‘ಮಾಯಾಯುದ್ಧದಲ್ಲಿ ನಿಪುಣನಾದ ನಾನು ಉಮೇದುವಾರರಿಗೆ ಹಣ, ಜನ, ಪದಾರ್ಥಗಳನ್ನು ಮಾಯ ಮಾಡಲು ಮತ್ತು ಎಲ್ಲಿ ಬೇಕೆಂದರಲ್ಲಿ ಪ್ರತ್ಯಕ್ಷಗೊಳಿಸಿಕೊಳ್ಳಲು ಸಹಾಯ ಮಾಡುವುದರ ಮೂಲಕ ಚುನಾವಣಾ ರಣರಂಗದಲ್ಲಿ ವಿಶೇಷ ಸಂಭ್ರಮ ಮೂಡಿಸುತ್ತೇನೆ. ಅಂದು ಲಕ್ಷ್ಮಣನಿಗೇ ಮೂರ್ಛೆ ತಪ್ಪಿಸಿದ ನನಗೆ ಇಂದಿನ ಪ್ರಜಾಪ್ರಭುತ್ವದ ಪ್ರಜ್ಞೆ ತಪ್ಪಿಸುವುದು ಮಕ್ಕಳಾಟ’ ಎಂದು ಸಂಭ್ರಮಿಸಿದ ರಾವಣನ ಮತ್ತೊಬ್ಬ ಪುತ್ರ ಮೇಘನಾದ.
‘ನೀನೇನು ಮಾಡಲಿದ್ದೀಯ ಅಣ್ಣ?’ ಎಂದು ಕುಂಭಕರ್ಣನನ್ನು ಪ್ರಶ್ನಿಸಿದರಳು ದುರುಳ-ರಕ್ಕಸ ಸಮ್ಮಿಶ್ರ ಸಂಘದ ಸೆಕ್ರೆಟರಿ ಶೂರ್ಪನಖಿ.
‘ನನ್ನದು ಈಗ ಎದ್ದಿರುವ ಕಾಲ. ಸಿಕ್ಕಸಿಕ್ಕವರ ಹೆಸರನ್ನು ನಾಶ ಮಾಡುವುದರಲ್ಲೇ ತೃಪ್ತಿಪಡುತ್ತಾ, ಚುನಾವಣೆ ಮುಗಿದ ನಂತರ ಗೆದ್ದವರೆಲ್ಲರಿಗೂ ಐದು ವರ್ಷಗಳ ನಿದ್ರಾವರವನ್ನು ಕರುಣಿಸಿ ಪವಡಿಸುತ್ತೇನೆ’ ಎಂದ ಕುಂಭಕರ್ಣ.
‘ಅನುಜ ವಿಭೀಷಣ?’
‘ನಮಗಿಂತ ಮೊದಲೇ ಕಾರ್ಯಗತನಾಗಿದ್ದಾನಲ್ಲ. ಹಸ್ತಪಕ್ಷದಿಂದ ಕಮಲಕ್ಕೆ, ಕಮಲದಿಂದ ಆನೆಮೂತಿಗೆ, ಸೈಕಲ್ಲಿನಿಂದ ತೆನೆ ಹೊತ್ತಗಳ ತೆಕ್ಕೆಗೆ, ಹೀಗೆ ವಿಧವಿಧವಾದ ಪಕ್ಷಾಂತರದ ಕಲ್ಪನೆಗಳನ್ನು ಬಿತ್ತುವುದಕ್ಕೆ ಪ್ರಪಂಚದ ಮೊಟ್ಟಮೊದಲ ಪಕ್ಷಾಂತರಿಯಾದ ಅವನಲ್ಲದೆ ಇನ್ನಾರೂ ಸೂಕ್ತವಲ್ಲ’ ನುಡಿದ ಕುಂಭಕರ್ಣ
‘ಲಂಕಾಧೀಶನೆಲ್ಲಿ?’
‘ಹ್ಹ! ಘಟಬಂಧನವೆಂದರೆ ಇನ್ನೇನೆಂದುಕೊಂಡೆ? ದೇಹವೊಂದೇ; ತಲೆಗಳು ಹತ್ತು. ಕಡೆಯ ತಲೆ ಮಧ್ಯಕ್ಕೆ ಬರಲು ಹವಣಿಸುವಂತೆ, ಮಧ್ಯದ್ದು ಮಧ್ಯದಲ್ಲೇ ಇರಲೆಂದು ತಹತಹಿಸುವಂತೆ ಮಾಡಲು ಆಗಲೇ ಭುವಿಯಲ್ಲಿ ವಿಭೀಷಣನೊಡನೆ ಹೋದುದನ್ನು ಮರೆತೆಯೇನು?’
‘ಅಹುದಲ್ಲವೆ! ನಾವಾದರೂ ಇನ್ನು ತಡಮಾಡುವುದು ಬೇಡ. ನಡೆಯಿರಿ ಎಲ್ಲರೂ ಭಾರತದತ್ತ ಸಾಗೋಣ’ ಎಂದು ದನಿಯೇರಿಸಿದಳು ಶೂರ್ಪನಖಿ.
ರಕ್ಕಸ-ದುರುಳ ಪಡೆ ಕೇಕೆ ಹಾಕುತ್ತಾ, ಅಟ್ಟಹಾಸಗೈಯುತ್ತಾ, ಗಹಗಹಿಸುತ್ತಾ, ಅಡ್ಡ ಬಂದುದೆಲ್ಲವನ್ನೂ ಧ್ವಂಸ ಮಾಡುತ್ತಾ ಭುವಿಯತ್ತ ಹೊರಟಿತು.  

Comments

  1. ದುಷ್ಟರಿಂದ ಸಿಕ್ಕಾಪಟ್ಟೆ ವರ ‌ಕೊಡಿಸಿ ಬಿಟ್ಟಿದ್ಧೀರ. ರಾಹುಲನೇ ಗತಿ!!

    ReplyDelete
  2. ರಾಮನಾಥ್ ಸರ್,

    ಒಂದು ಉತ್ಕೃಷ್ಟ ವಿಡಂಬನಾತ್ಮಕವಾದ ಬರಹವನ್ನು ಕಳುಹಿಸಿಕೊಟ್ಟಿದ್ದೀರಿ.
    ನೀವು ಇಲ್ಲಿಗೆ ಬಂದಿದ್ದಾಗ ಸಭಿಕರ
    ಯಾವುದೇ ಪ್ರಶ್ನೆಗೆ ರಾಮಾಯಣದ ಲಿಂಕ್ ತಿಳಿಸುವ ಚತುರತೆಯನ್ನು ನೀವು ಪ್ರಸ್ತುತಪಡಿಸಿದ್ದಿರಿ.
    ಇಂದು ಈ ಬರಹವನ್ನು ಓದುತ್ತಾ, ನಿಮ್ಮ ವಿಶಾಲ ವಾಙ್ಮಯದರ್ಶನವನ್ನು ಮತ್ತೆ ಪಡೆದುಕೊಂಡೆ.
    ತುಂಬಾ ತುಂಬಾ ಚೆನ್ನಾಗಿದೆ,

    ನಿಮ್ಮ ವಿಶ್ವಾಸಿ,
    ತಲೆ ಕೆದರಿಕೊಂಡರೂ ರಾಮಾಯಣವನ್ನು ಪೂರ್ಣವಾಗಿ ಅರಿಯಲಾರದ ಮನೆ ಮನೆ ರಾಮಾಯಣದಲ್ಲಿ ಮುಳುಗಿಹೋಗಿರುವ ಬದರಿ

    ReplyDelete
  3. ಚುನಾವಣೆ ಸಮಯಕ್ಕೆ ಸೂಕ್ತ ಲೇಖನ ಕಳಿಸಿದ್ದೀರಿ.
    ಅಬ್ಬ ಅದೇನು ಕಲ್ಪನೆ ಸಾರ್ ತಮ್ಮದು. ಕುಂಭಕರ್ಣ, ವಿಭೀಷಣ, ಶೂರ್ಪನಖಿ .......ವಾವ್
    ರಾಜಕೀಯ ವಿಡಂಬನೆ ಸೂಗಸಾಗಿದೆ, ರಾಜಕಾರಿಣಿಗಳ ಹುಳುಕುಗಳನ್ನು ಹಾಸ್ಯ ದೃಷ್ಟಿಯಲ್ಲಿ ಬರೆದು ರಂಜಿಸಿದ್ದೀರಿ. Very nice

    ReplyDelete

Post a Comment