ರಾಗ-ಲಯ, ಸಂಗೀತ ಸಂಜೆ

ರಾಗ-ಲಯ, ಸಂಗೀತ ಸಂಜೆ
ವರದಿ - ಡಾ ಸಿ ಆರ್ ಅನಂತ ರಾವ್

ಭಾನುವಾರ ಮಾರ್ಚ್ ೧೦ ರ ಮಧ್ಯಾಹ್ನ ಸಿಡ್ನಿಯ ವಾಟ್ಟಲ್ ಗ್ರೋವ್ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಬೆಂಗಳೂರಿನ ವಿದ್ವಾನ್ ಎಸ್ ಶಂಕರ್ ಅವರ ಹಾಡುಗಾರಿಕೆಯನ್ನು ಕೇಳುವ ಸದವಕಾಶ ಸಿಡ್ನಿಯ ಸಂಗೀತರಸಿಕರಿಗೆ ಲಭಿಸಿತ್ತು. ವಿದ್ವಾನ್ ಶ್ರೀ ಶಂಕರ್ ರವರು ಕರ್ನಾಟಕ ಸಂಗೀತದಲ್ಲಿ ಶ್ರೇಷ್ಠ ದರ್ಜೆಯ ಗಾಯಕರಾಗಿ ಸುಪ್ರಸಿದ್ಧರು. ಕಿರಿಯ ವಯಸ್ಕರಾದರೂ ಪ್ರತಿಭೆಯುಳ್ಳ ಅನುಭವಿ ವಯೊಲಿನ್ ವಾದಕರಾದ ಶ್ರೀ ಆರ್ ಅಚ್ಯುತರಾವ್ ಅವರು ಪಕ್ಕವಾದ್ಯಗಾರರಾಗಿ ಶ್ರೀ ಶಂಕರ್ ಅವರೊಡನೆ ಬೆಂಗಳೂರಿನಿಂದ ಬಂದಿದ್ದರು. ಸ್ಥಳೀಯ ಯುವಪ್ರತಿಭೆ ಸುಮುಖ ಜಗದೀಶ್ ರವರು ಕಚೇರಿಗೆ ಮೃದಂಗ ಸಹಕಾರವನ್ನು ನೀಡಿದರು.


ಈ ಕಾರ್ಯಕ್ರಮವನ್ನು ‘ರಾಗ-ಲಯ ಸಿಡ್ನಿ’ ಎಂಬ ಸಂಗೀತ ರಸಿಕರ ಗುಂಪು ಸಿಡ್ನಿ ಕನ್ನಡ ಶಾಲೆಯ ಆಶ್ರಯದಲ್ಲಿ ಯೋಜಿಸಿತ್ತು. ಕರ್ನಾಟಕ ಮತ್ತು ಹಿಂದುಸ್ಥಾನಿ ಪದ್ಧತಿಗಳೆರಡರಲ್ಲೂ ಕರ್ನಾಟಕದಲ್ಲಿ ಊರ್ಜಿತವಾಗಿದ್ದು ಉತ್ತಮ ಕಲಾವಿದರಿದ್ದರೂ ಕಾರಣಾಂತರಗಳಿಂದ ಅವರ ಸಂಗೀತ ಕೇಳುವ ಅವಕಾಶ ವಿಶೇಷವಾಗಿ ಸಿಡ್ನಿ ಹಾಗೂ ಸಾಮಾನ್ಯವಾಗಿ ಆಸ್ಟ್ರೇಲಿಯಾದಲ್ಲಿ ಇಲ್ಲವೆಂದೇ ಹೇಳಬಹುದು. ಕರ್ನಾಟಕದ ಸಂಗೀತಕಲಾವಿದರಿಗೆ ಒಂದು ವೇದಿಕೆ ನಿರ್ಮಿಸುವ ಉದ್ದೇಶದಿಂದ ಇತ್ತೀಚಿಗೆ ಸಿಡ್ನಿನಗರದಲ್ಲಿರುವ ಆಸಕ್ತರು ಮಾಡಿಕೊಂಡಿರುವ ಕೂಟವೇ ‘ರಾಗ-ಲಯ ಸಿಡ್ನಿ’. ಸಂಗೀತಪ್ರೇಮಿಗಳಿಗೆ ಈ ಕೂಟದಲ್ಲಿ ಸೇರುವ ಮತ್ತು ಎಲ್ಲ ರೀತಿಯ ಪ್ರೋತ್ಸಾಹ ನೀಡಲು ಅವಕಾಶವಿದೆ. ಕಾಲಕ್ರಮೇಣ ಇದು ಬೆಳದು ‘ರಾಗ-ಲಯ ಆಸ್ಟ್ರೇಲಿಯಾ’ ಆಗಲಿ ಎಂಬ ದೊಡ್ಡ ಆಸೆಯೂ ಇದೆ.

ರಾಗ-ಲಯ ಸಿಡ್ನಿಯ ಮೊಟ್ಟ ಮೊದಲ ಪ್ರಯತ್ನದ ಫಲವೇ ವಿದ್ವಾನ್ ಶಂಕರ್ ಮತ್ತು ವಿದ್ವಾನ್ ಅಚ್ಯುತ ರಾವ್ ಅವರ ಸಿಡ್ನಿಯಲ್ಲಿ ಶುರುವಾಗಿ ಮೆಲ್ಬೋರ್ನ್ ಅಡಿಲೇಡ್ ನಗರಗಳನ್ನೊಳಗೊಂಡ ಆಸ್ಟ್ರೇಲಿಯಾ ಪ್ರವಾಸ.

ಭಾನುವಾರದ ಕಚೇರಿ ಸಂಪ್ರದಾಯದಂತೆ ಕೇದಾರಗೌಳ ರಾಗ ಆದಿತಾಳದ ವರ್ಣದಿಂದ ಪ್ರಾರಂಭವಾಯಿತು. ಅನಂತರ ಶ್ರೀ ಜಯಚಾಮರಾಜ ಒಡೆಯರ ಅಠಾಣ ರಾಗ ಆದಿತಾಳದ ಶ್ರೀ ಮಹಾಗಣಪತಿಮ್ ಭಜೇಹಂ ಎಂಬ ಭಾವಪೂರ್ಣವಾದ ಕೃತಿ ಕೇಳುಗರಿಗೆ ಒಳ್ಳೆಯ ವಾತಾವರಣವನ್ನು ಮೂಡಿಸಿತು. ರಂಜನಿ ರಾಗದಲ್ಲಿ ಮಹೀಪತಿದಾಸರ ಶಾರದೆಯ ಮೇಲಿನ ದೇವರನಾಮ ನಿರೂಪಿತವಾಯಿತು. ಮೈಸೂರು ವಾಸುದೇವಾಚಾರ್ಯರ ಆಭೇರಿ ರಾಗದ ‘ಭಜರೇ ಮಾನಸ’ ಕಚೇರಿಯ ಮುಖ್ಯ ನಿರೂಪಣೆಗಳಲ್ಲಿ ಒಂದು. ಸಂಸ್ಕೃತದ ಈ ಕೃತಿಯಲ್ಲಿ ಸಾಹಿತ್ಯ-ರಾಗಭಾವಗಳೆರಡೂ ಪರಸ್ಪರ ಪೋಷಕವಾಗಿದ್ದು ವಿದ್ವಾನ್ ಶಂಕರ್ ಅವರ ವಿನಿಕೆ ಬಹಳ ಸೊಗಸಾಗಿ ಮೂಡಿಬಂದಿತು. ಈ ಕೃತಿ ಆಭೇರಿ ರಾಗದ ಶ್ರೇಷ್ಠ ಕೃತಿಗಳೆರಡರಲ್ಲಿ ಒಂದೆನ್ನುವುದು ಅತಿಶಯೋಕ್ತಿಯಲ್ಲ. ತ್ರಿಮೂರ್ತಿಗಳ್ಳಲ್ಲಿ ಒಬ್ಬರಾದ ಶಾಮಾಶಾಸ್ತ್ರಿಗಳ ಪುತ್ರ ಸುಬ್ಬರಾಯಶಾಸ್ತ್ರಿಯವರ ‘ ಜನನೀ ನಿನ್ನುವಿನ’ ರೀತಿಗೌಳ, ಮಿಶ್ರ ಛಾಪು ತಾಳದ ರಚನೆ. ಈ ರಾಗದ ಸಾರವಾದ ಆರ್ತ ಗಾಂಭೀರ್ಯ ಶಂಕರ್ ಅವರ ಹಾಡಿಕೆಯಲ್ಲಿ ಮನಸ್ಸಿಗೆ ತಟ್ಟುವಂತೆ ವ್ಯಕ್ತವಾಗಿತ್ತು.

ರಾಗ ವಿಸ್ತಾರ, ನೆರವಲ್,  ತನಿ ಆವರ್ತನೆಗೆ ಶ್ರೀ ಶಂಕರ್ ಅವರು ತ್ಯಾಗರಾಜರ ಪಂತುವರಾಳಿ ರಾಗ ವಿಳಂಬ ಆದಿತಾಳದ ‘ರಘುವರ ನನ್ನು’ ಕೃತಿಯನ್ನು ಆರಿಸಿಕೊಂಡರು. ಈ ಕೃತಿ ತ್ಯಾಗರಾಜರ ನಾಯಕಿ ಭಾವ ಕೂಡಿದ ಕೃತಿಗಳಲ್ಲಿ ಒಂದು. ನಿರೂಪಣೆ ಅತ್ಯಂತ ಯಶಸ್ವಿಯಾಗಿ ಮೂಡಿಬಂದಿತು. ರಾಗ ಆಲಾಪನೆ ನೆರವಲ್ ಗಳಲ್ಲಿ ಪಾಂಡಿತ್ಯ ಪ್ರದರ್ಶನದ ಜೊತೆಯಲ್ಲಿಯೇ ಅವರ ಧೃಢ ಮನೋಹರ ಧ್ವನಿಯಲ್ಲಿ ಸಾಹಿತ್ಯ ಸಂಗೀತ ಗಳೆರಡೂ ಖಚಿತವಾಗಿ ಹೊರಹೊಮ್ಮಿ ಕಚೇರಿಯ ಮೇರು ಘಟ್ಟವನ್ನು ತಲಪಿತು. ಹಾಗೆಯೆ ಅಚ್ಯುತ ರಾವ್ ಅವರ ವಯೊಲಿನ್ ವಾದನದ ಶೈಲಿ ಸಹ ಮಾಧುರ್ಯ ಬಿಡದ ಧಾರ್ಢ್ಯತೆಯಿಂದ ಕೂಡಿದೆ. ಗಾಯಕರ ಮನೋಧರ್ಮಕ್ಕೆ ತಕ್ಕಂತೆ ಎಲ್ಲ ಅಂಗಗಳಲ್ಲಿಯೂ ಅಚ್ಚುಕಟ್ಟಾಗಿ ಪಕ್ಕವಾದ್ಯ ಸಹಕಾರ ನೀಡಿದರು. ನಮ್ಮವರೇ ಆದ ಯುವ ಮೃದಂಗ ವಾದಕ ಸುಮುಖ ಜಗದೀಶ್ ಅವರು ತನಿ ಆವರ್ತನೆಯಲ್ಲದೆ ಇಡೀ ಕಚೇರಿಯಲ್ಲಿ ಸಮರ್ಥವಾಗಿ ನುಡಿಸಿ ಶೋಭಿಸಿದರು.


ಪ್ರೌಢ ಶಾಸ್ತ್ರೀಯ ಗಾಯನವಲ್ಲದೆ ಶ್ಲೋಕಗಾಯನ, ಭಕ್ತಿ ಸಂಗೀತ, ಲಘು ಶಾಸ್ತ್ರೀಯ ರಾಗಗಳಲ್ಲಿ ಆಧುನಿಕ ಕನ್ನಡ ಕವಿಗಳ ರಚನೆಗಳನ್ನು ಸುಗಮ ಶೈಲಿಯಲ್ಲಿ ಹಾಡುವುದರಲ್ಲಿಯೂ ಶ್ರೀ ಶಂಕರ್ ಅವರು ಎತ್ತಿದ ಕೈ. ಡಿ.ವಿ.ಜಿ. ಯವರ ಬೇಲೂರಿನ ಶಿಲ್ಪಸೌಂದರ್ಯದಿಂದ ಪ್ರೇರಿತವಾದ ಅಂತಃಪುರ ಗೀತೆಗಳು ಸಭ್ಯಶೃಂಗಾರಕ್ಕೆ ಮೈಸೂರು ಮಲ್ಲಿಗೆ ಕವನಗಳ ಹಾಗೆ ಕನ್ನಡಿಗರಿಗೆ ಪ್ರಿಯವಾದುವು. ಈ ಗೀತೆಗಳ ಎರಡು ಸಿಡಿ ಗಳನ್ನು ಶಂಕರ್ ಅವರು ಹೊರತಂದಿದ್ದಾರೆ. ಸಾಧಾರಣವಾಗಿ ಕಚೇರಿಯ ಕೊನೆಯಲ್ಲಿ ಹೆಸರಿಗೆ ಒಂದೋ ಎರಡೋ ದೇವರನಾಮ, ವಚನಗಳನ್ನು ಕೇಳಿ ಅಷ್ಟರಲ್ಲಿಯೇ ತೃಪ್ತಿಪಡಬೇಕಾದ ರಸಿಕರಿಗೆ ಭಾನುವಾರ ಮಧ್ಯಾಹ್ನ ರಸದೌತಣವೇ ಕಾದಿತ್ತು

ಒಂದು ಘಂಟೆಗಿಂತ ಹೆಚ್ಚುಕಾಲ ಹಾಡಿದ ಮನತಟ್ಟುವ ಹಾಡುಗಳಲ್ಲಿ ಕೆಲವನ್ನು ಸೂಚಿಸಬಹುದು. ರಂಗವಿಠಲಾಂಕಿತ ಶ್ರೀಪಾದರಾಜಸ್ವಾಮಿಗಳ ಕೃತಿ ‘ಹರೇ ವೆಂಕಟಶೈಲ ವಲ್ಲಭ’ ಮೋಹನ ರಾಗದಲ್ಲಿ ಅವರದೇ ಒಂದು ಉಗಾಭೋಗದ ಪೀಠಿಕೆಯಿಂದ, ಪುರಂದರದಾಸರ ಶಿವನ ಮೇಲಿನ ಸ್ತುತಿ ‘ಕರುಣಾನಿಧಿಯೇ ಈಶ’, ಪದ್ಮಚರಣ್(ಎ.ವಿ. ಕೃಷ್ಣಮಾಚಾರ್) ಅವರ ಶೃಂಗೇರಿ ಶಾರದೆಯ ಮೇಲಿನ ಕಲ್ಯಾಣಿ ರಾಗದ ‘ಶೃಂಗಪುರಾಧೀಶ್ವರೀ’ ಮುಂತಾದುವು. ಡಿ.ವಿ.ಜಿ ಅವರ ಶಿಲಾಬಾಲಿಕೆಯನ್ನು ಕುರಿತ ಒಂದು ಕವನ, ಮಂಕುತಿಮ್ಮನ ಕಗ್ಗದಿಂದ ಆಯ್ದ ಕೆಲವು ನುಡಿಗಳು ಮೂಡಿಬಂದವು. ಬಾಲಮುರಳಿಕೃಷ್ಣ ಅವರ ಬೃಂದಾವನಿ ರಾಗದ ತಿಲ್ಲಾನದ ನಂತರ ಪುರಂದರ ದಾಸರ ಭಕ್ತಿಮಾರ್ಗದಲ್ಲಿ ಸಂಗೀತದ ಹಿರಿಮೆ ಸಾರುವ ಸಣ್ಣದಾದರೂ ಹೃದಯ ಮುಟ್ಟುವ ಕೃತಿ ‘ತಂಬೂರಿ ಮೀಟಿದವ’ ಸಿಂಧುಭೈರವಿ ರಾಗದ ನಿರೂಪಣೆಯಿಂದ ಕಚೇರಿ ಮುಕ್ತಾಯವಾಯಿತು.


ಮಾರ್ಚ್ ೧೦ ರ ಈ ಕಾರ್ಯಕ್ರಮ ಉಚ್ಛ ಮಟ್ಟದ ಸಂಗೀತ ಸಾಹಿತ್ಯಗಳ ಮೇಳವಾಗಿದ್ದು ಚಿರಕಾಲ ಮನಸ್ಸಿನಲ್ಲಿ ನಿಲ್ಲುವಂಥದ್ದು.  ಇದನ್ನು ಆಗುಮಾಡಿದ ‘ರಾಗ-ಲಯ ಸಿಡ್ನಿ’ ಯ ಮೊದಲ ಕೊಡುಗೆ ತುಂಬಾ ಪ್ರಶಂಸನೀಯ. ಈ ಕೂಟ ಬೆಳೆದು ಬಲಿಷ್ಠವಾಗಿ ಇಂಥ ಅನೇಕ ಅವಕಾಶಗಳನ್ನು ಸಿಡ್ನಿ ಹಾಗು ಆಸ್ಟ್ರೇಲಿಯಾದ ರಸಿಕರಿಗೆ ನೀಡುವಂತಾಗಲಿ. ಇದರ ಸಂಪರ್ಕ ವಿವರಗಳು ಕೆಳಗೆ ಕೊಡಲಾಗಿದೆ. ಆಸಕ್ತರು ಇಮೈಲ್ ಮೂಲಕ ಸಂಪರ್ಕಿಸಿ
sugamakannada@gmail.com





Comments

  1. ಲೇಖನ ತುಂಬಾ ಸೊಗಸಾಗಿದೆ, ಪದಬಳಕೆ, ರಾಗ ವಿಶ್ಲೇಷಣೆ, ಕೀರ್ತನೆಗಳ ವಿವರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಕರ್ನಾಟಕ ಸಂಗೀತದ ಅಭಿರುಚಿ ಇರುವ ನಿಮ್ಮ ಲೇಖನ ಓದುವುದೇ ಸೊಗಸಾದ ಒಂದು ಅನುಭವ ತರುತ್ತದೆ. ತಮ್ಮ ಆಶ್ರಿರ್ವಾದದಂತೆ ರಾಗ - ಲಯ ಬೆಳೆದು ಸಿಡ್ನಿಯಿಂದ ಆಸ್ಟ್ರೇಲಿಯಾ ಆಗಲಿ ಎನ್ನುವುದೇ ನಮ್ಮ ಆಶಯ.

    ReplyDelete
  2. Excellent article. We miss such programs. Feeling so sad after reading the details.thanks for the report

    ReplyDelete

  3. ಹೊರನಾಡ ಚಿಲುಮೆ ಪತ್ರಿಕೆಗೆ ಒಳ್ಳೆಯ ಲೇಖನ ಒದಗಿಸಿದ್ದೀರಿ.ಕಾರ್ಯಕ್ರಮ ವಿವರಣೆ ಕಣ್ಣಿಗೆ ಕಟ್ಟಿದಂತಿದೆ. ಧನ್ಯವಾದಗಳು ಶ್ರೀ ಅನಂತರಾವ್

    ReplyDelete

Post a Comment