ಪುರಂದರ ಆರಾಧನೆ, ಸಿಡ್ನಿ

ಪುರಂದರ ಆರಾಧನೆ, ಸಿಡ್ನಿ
ವರದಿ -  ಶ್ರೀ ಅಶ್ವಿನ್ ಲಕ್ಷ್ಮಣ್

ಇದೇ ಫೆಬ್ರವರಿ ೧೭ನೇ ತಾರೀಖು ನಗರದ ಎರ್ಮಿಂಗ್ಟನ್ ಸಮುದಾಯ ಭವನದಲ್ಲಿ ಈ ಸಂವತ್ಸರದ ಪುರಂದರ ಆರಾಧನೆ ಆಯೋಜಿಸಲಾಗಿತ್ತು.  ಸಿಡ್ನಿ ನಗರವಾಸಿಗಳಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹನನ್ನು ನೆನೆಯಲು ಒಂದು ಸದವಕಾಶ . ಸತತ ಹತ್ತೊಂಭತ್ತು ವರ್ಷದಿಂದ ಈ  ಆರಾಧನೆಯು ನಡೆಯುತ್ತಿದ್ದು ಸಂಗೀತ ಪ್ರಿಯರಿಗೆ ಹಾಗು ದಾಸ ಸಾಹಿತ್ಯದಲ್ಲಿ ಆಸಕ್ತಿ ಇರುವವರಿಗೆ ತಮ್ಮ ಕ್ಯಾಲೆಂಡರ್ನಲ್ಲಿ ಒಂದು ಭಾನುವಾರ ಇದಕ್ಕೆ ಮುಡಿಪಿಡಿವುದು ವಾಡಿಕೆ ಆಗಿದೆ.  ಪ್ರತಿವರ್ಷದಂತೆ ಈ ಬಾರಿ  ಏನು "ವಿಷಯ" ( theme ) ಎಂಬ ಕುತೂಹಲ ಒಂದು ಕಡೆಯಾದರೆ ಹಾಡುವವರಿಗೆ ಈ ವಿಷಯಕ್ಕೆ ಸುಲಭವಾಗಿ ಹಾಡು ದೊರೆಯುವುದೇ ಎಂಬ ದುಗುಡ ಇನ್ನೊಂದೆಡೆ  !!
 

ಈ ಬಾರಿಯ ವಿಷಯ ನಿರೂಪಣೆ "ನಿಂದಾಸ್ತುತಿ". ವಿಶೇಷವಾಗಿ ಭಗವಂತನನ್ನು ಸ್ತುತಿಸುವ, ಮೇಲ್ನೋಟಕ್ಕೆ ನಿಂದನೆ ಮಾಡಿದಂತೆ ಇರುವ ದಾಸರ ಪದಗಳು. ಹಲವಾರು ಹರಿದಾಸರು ಈ ಶೈಲಿಯಲ್ಲಿ ತಮ್ಮ ನೈಪುಣ್ಯತೆ ತೋರಿದ್ದಾರೆ - ಇನ್ನು ಪುರಂದರ ದಾಸರದ್ದು ಕೇಳಬೇಕೆ? ಪಿಳ್ಳಾರಿ ಗೀತೆ ಹಾಡಿ , ಪ್ರತಿ ವರ್ಷದಂತೆ ಸಿಡ್ನಿ ನಗರದ ಶಾಸ್ತ್ರೀಯ ಸಂಗೀತದ ಗುರುಗಳು, ಶಿಷ್ಯರು, ಕಲಾವಿದರು ಎಲ್ಲರು ನವರತ್ನ ಮಾಲಿಕೆ ಹಾಡಿ ಆರಾಧನೆಗೆ ಚಾಲನೆ ಕೊಟ್ಟರು. ಸಂಗೀತ ಕಲಿವ ಮಕ್ಕಳಿಂದ ದಾಸರಿಗೆ ನಮನ - ಶರಣು ಸಿದ್ಧಿ ವಿನಾಯಕ , ಸ್ವಾಮಿ ಮುಖ್ಯಪ್ರಾಣ , ವೆಂಕಟೇಶ ದಯ ಮಾಡೋ , ವೆಂಕಟರಮಣನೇ ಬಾರೋ , ನಿನ್ನ ಮಗನ, ದೇವಕಿ ಕಂದ ಮುಕುಂದ , ದೃಷ್ಟಿ  ನಿನ್ನ ಪಾದದಲ್ಲಿ - ಮುಂತಾದ ಹಾಡುಗಳಿಂದ ಜನಮನ ಗೆದ್ದರು.

ಮಕ್ಕಳ ಹಾಡುಗಾರಿಕೆಯ ಬಳಿಕ ಡಾ ।। ಅನಂತ್ ರಾವ್ ಅವರು ಈ "ನಿಂದಾಸ್ತುತಿ" ವಿಷಯದ ಬಗ್ಗೆ ಜನರಿಗೆ ಪರಿಚಯ ನೀಡಿ - ಥೀಮ್ ಇದ್ದರೆ ಪುಸ್ತಕ ಹೆಕ್ಕಿ ತೆಗೆಯುವ ಕೆಲಸ ನಡೆದು ಹೊಸ ಶೈಲಿಯ ಪದಗಳು ಹೊರಗೆ ಬರುತ್ತವೆ ಮತ್ತು ಅದರ ಒಳ ಅರ್ಥ ಏನು ಎಂಬ ಜಿಜ್ಞಾಸೆ ಇರುವವರಿಗೆ ತಿಳಿಯುವಿಕೆಗೆ ಇದು ಒಳ್ಳೆಯ ಅವಕಾಶ ತರುತ್ತದೆ ಎಂದು ತಮ್ಮ ಸಂವಾದ ಶೈಲಿಯಲ್ಲಿ ನೆರೆದಿದ್ದ ಜನರನ್ನು ಸಂಭೋದಿಸಿದರು. 



ಇನ್ನು ವಯಸ್ಕರ ಭಾಗದಲ್ಲಿ ಮೊದಲಿಗೆ - ಶ್ರೀಮತಿ ನಿರ್ಮಲಾ ಅವರ ನೇತೃತ್ವದಲ್ಲಿ ಮಧ್ಯಮಾವತಿ ರಾಗದಲ್ಲಿ "ಮರುಳು ಮಾಡಿಕೊಂಡೆಯಲ್ಲೇ ಮಾಯಾದೇವಿಯೇ" ಲಕ್ಷ್ಮೀ ದೇವಿಯ ಮೂಲಕ ನಿಂದನೆ - ತಬಲಾ, ಕರತಾಳ ಮತ್ತು ಕೊಳಲಿನ ನಾದವು ಸೇರಿ  ಸುಂದರವಾಗಿ ಮೂಡಿ ಬಂತು. "ಧರಣಿಗೆ ದೊರೆಯೆಂದು ನಂಬಿದೆ ಇಂಥ ಪರಮ ಲೋಭಿಯೆಂಬುದು ಅರಿಯೆ " -ಅಠಾಣ ರಾಗದಲ್ಲಿ ವಿಷ್ಣುವಿನ ಅವತಾರಗಳ ನಿಂದನೆ - ಉಮಾ ಅಯ್ಯರ್ ಹಾಗು ಸ್ಮಿತಾ ಬಾಲು ಇವರು ಹಾಡಿದರು. "ಮುಯ್ಯಿಗೆ ಮುಯ್ಯಿ" ಪ್ರಸಿಧ್ಧ ಹಾಡು - ಕೇಳದವರು ವಿರಳ. "ಬಿರುದುಗಳ ಬೇಕಾದರೆ ಭಕ್ತರಾಧೀನ ಆಗಬೇಕು" ಎಂದು ಸಲಹುವ ದಾಸರು - ಚಾರು ಅಯ್ಯರ್ ಹಾಗು ಸಂಗಡಿಗರಿಂದ - ರಾಗ ಅಹಿರ್ ಭೈರವ್ ನಲ್ಲಿ ಉತ್ತಮವಾಗಿ ಬಂದಿತು. ಭಾಗವತ ಸನ್ನಿವೇಶಗಳನ್ನ ಉದಾಹರಿಸುವ ಹಾಡು "ನಾನೇನ ಮಾಡಿದೆನೋ ರಂಗಯ್ಯ " ದೇಶ್ ರಾಗದಲ್ಲಿ ನಾಗರಾಜ್ ಮೈಸೂರು ಹಾಗು ಸಂಗಡಿಗರಿಂದ ಸುಶ್ರಾವ್ಯವಾಗಿ ಮೂಡಿ ಬಂತು. ಶ್ರೀಮತಿ ಪ್ರೇಮ ಅನಂದಕೃಷ್ಣನ್ ಹಾಗು ಅವರ ಶಿಷ್ಯೆಯರಿಂದ "ನೀನ್ಯಾಕೋ ನಿನ್ನ ಹಂಗ್ಯಾಕೋ" ಹಾಡು ಕರ್ಣರಂಜಿನಿ ರಾಗದಲ್ಲಿ ಭಾವಪೂರ್ಣವಾಗಿ ಮೂಡಿತು.

ಸಿಡ್ನಿಯ ಖ್ಯಾತ ಕಲಾವಿದರಾದ ಶ್ರೀ ಕೃಷ್ಣ ರಾಮರತಿನಂ ಇವರಿಂದ ಎರಡು ಉಗಾಭೋಗಗಳ ಜೊತೆಗೆ "ಕರುಣಾಕರ ನೀನೆಂಬುವುದ್ಯಾತಕೋ" ರಾಗ ಧನ್ಯಾಸಿಯಲ್ಲಿ -ತಮ್ಮ ಇಬ್ಬರು ಶಿಷ್ಯರನ್ನು ಸೇರಿ ಅತಿ ಉತ್ತಮ ಹಾಡುಗಾರಿಕೆ ತೋರಿದರು. ನಿಂದಾಸ್ತುತಿ ಯಲ್ಲಿ ಹಾಸ್ಯ ಸೇರಿಸಬಹುದು ಎನ್ನುವುದಕ್ಕೆ "ಏನು ಮೆಚ್ಚಿದೆ ಹೆಣ್ಣೇ ಏನು ಮರುಳಾದೆ " ಹಾಡು ವೆಸ್ಟ್ಮೀಡ ಗ್ರೂಪ್ ನವರು ರಾಗ ವಳಚಿ ( ಹಿಂದುಸ್ತಾನಿ ಶೈಲಿಯಲ್ಲಿ ಕಲಾವತಿ ಎಂದು ಈ ರಾಗಕ್ಕೆ ಹೆಸರು) ಯಲ್ಲಿ ಹಾಡಿದರು. "ಆರು ಬದುಕಿದರಯ್ಯ "  - ಮೋಕ್ಷಕ್ಕೆ ಹರಿ ನಾಮ ಸ್ಮರಣೆ ಸಾಕು ಎನ್ನುವ ಪದ - ಸಿಡ್ನಿಯ ಶ್ರೀಮತಿ ಪುಷ್ಪ ಜಗದೀಶ್ ಅವರ ನೇತೃತ್ವದಲ್ಲಿ, ಅವರು ಹಾಗು ಸಂಗಡಿಗರು ಚಕ್ರವಾಕ ರಾಗದಲ್ಲಿ (ಕೇಳುಗರಲ್ಲಿ ಭಕ್ತಿ ಭಾವ ಮೂಡಿಸುವ ರಾಗ) ಅಧ್ಬುತವಾಗಿ ಹಾಡಿದರು. ನಮ್ರತಾ, ಲಕ್ಷ್ಮೀ ಹಾಗು ಸ್ವಾತಿ ಇವರುಗಳು "ಯಾಕೆ ನಿರ್ದಯನಾದಿಯೋ ಹರಿಯೇ" - ರಾಗಮಾಲಿಕೆಯಲ್ಲಿ ಪ್ರಸ್ತುತ ಪಡಿಸಿದರು. ಹಿಂದುಸ್ತಾನಿ ಶೈಲಿಯಲ್ಲಿ ಶ್ರೀಮತಿ ಮೇಧಾ ಪಾಥಕ್ ಸಾರಥ್ಯದಲ್ಲಿ ಮದ್ಮದ್ ಸಾರಂಗ್ ( ಕರ್ನಾಟಕಿ = ಮಧ್ಯಮಾವತಿ) ಇವರು "ಎಂಥ ಚೆಲುವಗೆ ಮಗಳನ್ನು ಕೊಟ್ಟನೋ" ಹಾರ್ಮೋನಿಯಂ ತಬಲ ಜೊತೆ ಭಾವಪೂರ್ಣವಾಗಿತ್ತು. 

ಒಟ್ಟಾರೆ ಗಮನಿಸಿದರೆ ದೇಶ್, ಅಹಿರ್ ಭೈರವ್ ಹಿಂದೂಸ್ತಾನಿಯ ಪ್ರಸಿದ್ಧ ರಾಗಗಳು - ಆದರೆ ಈ ಎರಡು ಕೃತಿಗಳು ಈ ರಾಗಗಳಲ್ಲಿ ಬಹಳ ಪ್ರಚಲಿತವಾಗಿದೆ. ಸಂಪ್ರದಾಯ ಕಛೇರಿ ಮುಗಿಸುವುದು ಮಧ್ಯಮಾವತಿಯಲ್ಲಿ - ಇಲ್ಲಿ ಶುರುವಿನಲ್ಲೂ ಅದೇ, ಕೊನೆಯಲ್ಲೂ ಅದೇ ರಾಗ. ಸಂಪ್ರದಾಯದ ಜೊತೆ ಹೊಸತನದ ಸೂಚಕವೇ ? ಅಥವಾ ಒಂದು ಬಗೆಯ ನಿಂದಾಸ್ತುತಿಯೇ? ☺ನೀವೇ ನಿರ್ಧರಿಸಿ. 

CRPF ನ ೪೦ ಹುತಾತ್ಮರಾದ ಜವಾನರಿಗೆ ಎರಡು ನಿಮಿಶ ಸಭೆಯಲ್ಲಿದ್ದ ಎಲ್ಲರು ಮೌನ ಆಚರಿಸಿ ಗೌರವ ಸೂಚಿಸಿದರು. "ಭಾಗ್ಯದ ಲಕ್ಷ್ಮೀ ಬಾರಮ್ಮ" ಲಿವರ್ಪೂಲ್ ನ ಭಜನ್ ಸಂಧ್ಯಾ ತಂಡದವರು ಮಂಗಳ ಹಾಡಿ ಕಾರ್ಯಕ್ರಮಕ್ಕೆ ಮುಕ್ತಾಯ ತಂದರು. ಇನ್ನು ಹೊಟ್ಟೆಯ ತಾಳಕ್ಕೆ ರುಚಿ ರುಚಿಯಾದ ಬಿಸಿ ಬೇಳೆ ಭಾತ್ ಹಾಗು ಮೈಸೂರು ಪಾಕ್ ಆಸ್ವಾದಿಸುತ್ತ ಮುಂದಿನ ವರ್ಷ ಯಾವ ವಿಷಯವೋ ಎನ್ನುವ ಯೋಚನೆ ಮಾಡುತ್ತಾ, ಬಿಡುತ್ತ ಜನ ಮನೆಗೆ ತೆರಳಿದರು.

Comments


  1. Superb ,no words to express my joy .Hip hip hurray to the organisers

    ReplyDelete
  2. ವಿವರವಾದ ಲೇಖನ ಚೆನ್ನಾಗಿದೆ. ಕೀರ್ತನೆಗಳ ಹೆಸರು ರಾಗಗಳ ಸಮೇತ ವಿವರಣೆ ಸೊಗಸಾಗಿ ವರದಿ ಮಾಡಿದ್ದೀರಿ. ಯಶಸ್ವಿ ಕಾರ್ಯಕ್ರಮಕ್ಕೆ ಅಭಿನಂದನೆಗಳು

    ReplyDelete
  3. ಸೊಗಸಾದ ವರದಿಗೆ ಧನ್ಯವಾದಗಳು ಶ್ರೀ ಅಶ್ವಿನ್

    ReplyDelete
  4. ಅಶ್ವಿನ್ ರವರ ಲೇಖನ ಬಹಳ ಚೆನ್ನಾಗಿ ಮೂಡಿ ಬಂದಿದೆ.

    ReplyDelete
  5. ಸೊಗಸಾದ ಕಾರ್ಯಕ್ರಮ.ವಿವರವಾದ ವರದಿ. ಕಾರ್ಯಕ್ರಮದ ನಿರೂಪಣೆ ಸಹ ಚೆನ್ನಾಗಿತ್ತು

    ReplyDelete

Post a Comment