ನಿಧಿ ದೊರಕಿತು
ಹಾಸ್ಯ ಲೇಖನ - ಅಣುಕು ರಾಮನಾಥ್
ಅಜ್ಜನ ಮನೆಯ ಅಟ್ಟದ
ಮೇಲೆ ಹಳೆಯದೊಂದು ಟ್ರಂಕ್ ಸಿಕ್ಕಿತು.
‘ನಿಧಿ ಇರಬಹುದೇನೋ’ ಎಂದೆ.
‘ನಿಧಿ ಎಲ್ಬಂದೀತು ಬಿಡು. ನಿಮ್ತಾತ್ನಿಗೆ ಪ್ರಾಣಿಗಳೂಂದ್ರೆ ಬಹಳ ಇಷ್ಟ. ಎಲ್ಲ ದುಡ್ಡು
ಪ್ರಾಣಿಗಳಿಗೆ ಕೊಟ್ಬಿಟ್ರು’
‘ಈ ವಿಷಯಾನೇ ನನಗೆ ಗೊತ್ತಿರಲಿಲ್ಲ ಅಜ್ಜಿ. ಯಾವ ಪ್ರಾಣಿಗಳು ಇಷ್ಟವಿತ್ತು ತಾತನಿಗೆ?’
‘ಕೋಳಿ, ಕುದುರೆ’
‘ಸಾಕಿದ್ರೇನು?’
‘ಸಾಕೋವ್ರ್ನ ಉದ್ಧಾರ ಮಾಡಿದರು; ಕೋಳಿ ಜಗಳಕ್ಕೆ ಪಂಥ ಕಟ್ಟಿ ಹತ್ತಾರು ರೂಪಾಯಿ ಸುರಿಯೋವ್ರು, ಕುದುರೆ ರೇಸಿಗೆ
ಹೋಗಿ ನೂರಾರು ರೂಪಾಯಿ ಸುರಿಯೋವ್ರು’
‘ನಿಮಗೆ ಕೋಪ ಬರ್ಲಿಲ್ವೇನು? ಬಯ್ಲಿಲ್ವಾ ನೀವು?’
‘ಎಲ್ಬಂತು ಬಿಡು. ಮಾತ್ನಲ್ಲಿ ಬಹಳ ಜಾಣ ನಿಮ್ತಾತ. ‘ಪಾಪ, ಆ ಕೋಳಿ ಮಂಜಣ್ಣ ಕೋಳಿಗೆ ಕಾಳ್ಹಾಕಕ್ಕೂ ಕಾಸಿಲ್ಲಾಂತ
ಗೋಳಾಡ್ತಿದ್ದ. ಸ್ವಲ್ಪ ಸಹಾಯ ಮಾಡೋಣಾಂತಿದೀನಿ. ಏನಂತೀಯ?’ ಅಂತಲೋ, ‘ಕುದುರೆಗೆ ಹುರುಳಿ ಇಲ್ಲ ಅಂತ ಕ್ಯಾತ್ನಳ್ಳಿ ಕೊರಗಪ್ಪ
ಪೇಚಾಡ್ತಿದ್ದ. ಸ್ವಲ್ಪ ಹಣ ಕೊಟ್ಬಂದೆ’ ಅಂತಲೋ ನನ್ನ ಮುಂದೆ ಹೇಳ್ಕೊಳ್ತಿದ್ರು. ನಮ್ಮೆಜ್ಮಾನ್ತು
ಎಷ್ಟೊಳ್ಳೇಯವ್ರು... ಪ್ರಾಣಿಗಳ ಮೇಲೆ ಎಷ್ಟೊಂದು ಪ್ರೀತಿ ಅಂತ ನಾನೂ ಒಳಗೊಳಗೇ ಉಬ್ತಿದ್ದೆ.
ನಿಮ್ಚಿಕ್ತಾತ ವಿವರಿಸಿದ್ಮೇಲೇ ನನಗೆ ವಿಷಯ ಅರ್ಥ ಆಗಿದ್ದು’
ಟ್ರಂಕ್
ಇಳಿಸಿದೆವು. ಮೊಮ್ಮಕ್ಕಳೆಲ್ಲ ಅದರ ಸುತ್ತ ಸೇರಿದೆವು. ಟ್ರಂಕ್ ತೆಗೆಯೋಣವೆಂದರೆ ಅದಕ್ಕೊಂದು
ಬೀಗ!
‘ಅಜ್ಜಿ, ಯಾವುದೋ ಒಳ್ಳೇ ಕಂಪನಿ ಬೀಗ!’ ನಿರಾಶೆಯಿಂದ ನುಡಿದ ಪ್ರಭಾಸ್.
ಅಜ್ಜಿ ಹತ್ತಿರ
ಬಂದು, ಬೀಗವನ್ನು ದಿಟ್ಟಿಸಿ, ‘ಓ! ಈ ಬೀಗವಾ? ಒಳ್ಳೆ ಅಡ್ವರ್ಟೈಸ್‍ಮೆಂಟ್
ಇತ್ತು ಕಣ್ರೋ ಇದಕ್ಕೆ. ಯಾವುದೇ ಕಳ್ಳ ಯಾವುದೇ ಕೀ ಬಳಸಿದರೂ ತೆಗೆಯಕ್ಕಾಗಲ್ಲ, ಅದಕ್ಕೆ ಅದರದೇ ಕೀ
ಬೇಕು ಅಂತ ಅಂಗಡಿಯವನು ಹೇಳಿದ್ದ. ನಾನು...’ ಎನ್ನುತ್ತಾ ಅಜ್ಜಿ ಹೆರಳಿಗೆ ಸಿಕ್ಕಿಸಿಕೊಂಡಿದ್ದ ಹೇರ್‍ಪಿನ್
ತೆಗೆದು, ‘...ಹೀಗೆ ಬೆಂಡ್ ಮಾಡಿ...’ ಎನ್ನುತ್ತಾ ಪಿನ್ ಬೆಂಡಿಸಿ, ಬೀಗದ ಕಿಂಡಿಗೆ ಪಿನ್ ತೂರಿಸಿ, ತಿರುಗಿಸಿ, ‘ಹೀಗೆ ತೆಗೆದೆ’ ಎನ್ನುತ್ತಾ ಕ್ಲಕ್
ಸದ್ದಿನೊಡನೆ ಬೀಗ ತೆಗೆದು, ‘ಹೇಗಿದೆ ನನ್ನ ಮಲ್ಪಿಪರ್ಪಸ್ ಹೇರ್‍ಪಿನ್ನು?’ ಎಂದು ಬೀಗಿದರು.
‘ಮಲ್ಟಿಪರ್ಪಸ್ಸೇ?’
‘ಹೂಂ. ನನ್ನ ಪ್ರಾಯಕಾಲದಲ್ಲಿ ಈ ಪಿನ್‍ನಿಂದಲೇ ಮೈಮೇಲೆ ಬೀಳಕ್ಬಂದ ಪಡ್ಡೆಗಳಿಗೆ ಸರಿಯಾದ
ಇಂಜೆಕ್ಷನ್ ಕೊಟ್ಟಿದ್ದೀನಿ. ನಿಮ್ಮಪ್ಪ ಚಿಕ್ಕವನಾಗಿದ್ದಾಗ ಯಾವುದೋ ಹೆಣ ನೋಡಿ ಬಂದು, ಅದೊಂದು ಆಟ
ಅನ್ಕೊಂಡು, ಮೂಗಿಗೆ ಹತ್ತಿ
ತುರುಕಿಕೊಂಡು ಮಲಗಿ ಒದ್ದಾಡ್ತಿದ್ದಾಗ, ಹತ್ತಿ ತೆಗೆದದ್ದೂ ಈ ಪಿನ್ನಿನಿಂದಾನೇ. ಚಟ್ನಿಪುಡಿ ಡಬ್ಬದ
ಮುಚ್ಚಳದಿಂದ ಹಿಡಿದು ಬ್ಯಾಂಕ್ ಲಾಕರ್ ಡಬ್ಬಿಯವರೆಗೆ ಎಲ್ಲವನ್ನೂ ಓಪನ್ ಮಾಡಬಲ್ಲೆ ಈ ಪಿನ್ನಿನಿಂದ’ ಬೀಗಿದರು ಅಜ್ಜಿ.
ಟ್ರಂಕ್ ತೆರೆದರೆ
ಅದರ ಭರ್ತಿ ತಾತ ಆ ಕಾಲದಲ್ಲಿ ಬಳಸುತ್ತಿದ್ದ ಬಟ್ಟೆಗಳ ರಾಶಿ! ‘
‘ಇದೇನಜ್ಜೀ ಜೀನ್ಸೂ....?’ ಪಿಂಕಿ ಅಚ್ಚರಿಭರಿತ ದನಿಯಲ್ಲಿ ಉದ್ಗರಿಸಿದಳು.
‘ಭಾಳ ಷೋಕೀವಾಲ ಕಣೇ ನಿಮ್ಮಜ್ಜ. ಅದ್ಯಾವುದೋ ಟೆಕ್ಸಾಸ್ ಅಂತೆ. ಅಲ್ಲಿಂದಲೇ ಬಟ್ಟೆ
ತರಿಸ್ಕೋತಿದ್ರು...’ ನುಡಿದರು ಅಜ್ಜಿ.
ಮೊಬೈಲಲ್ಲಿ ಪಬ್ಜಿ
ಆಡುತ್ತಿದ್ದ ಕಿರಣನಿಗೆ ‘ಜೀನ್ಸ್’ ಎಂಬ ಪದ ಟ್ರಾಫಿಕ್ ಜಾಂ ಮಧ್ಯವೂ ತೂರಿ ಸಾಗುವ ಮಂತ್ರಿಯ ಕಾರಿನಂತೆ
ತಲೆಗೆ ಸೇರಿತು. ಪಬ್ಜಿ ಪಡೆಯಿಂದ ಬ್ರೇಕ್ ತೆಗೆದುಕೊಂಡು, ತಾತನ ಜೀನ್ಸ್ ಕೈಯಲ್ಲಿ ಹಿಡಿದು ‘ಹೌ ವಂಡರ್‍ಫುಲ್’ ಎಂದ.
‘ಏನ್ವಂಡರ್ರಿದೆಯೋ ಅದ್ರಲ್ಲಿ? ಹರಿದಿದೆ, ಸವೆದಿದೆ, ಬಣ್ಣ ಹೋಗಿದೆ’ ಎಂದಳು ಅಜ್ಜಿ.
‘ಯೂ ಡೋಂಟ್ ನೋ ಅಜ್ಜಿ... ನೋಡಿಲ್ಲಿ... ಮಂಡಿ ಹತ್ರ ಎಷ್ಟು ಪರ್ಫೆಕ್ಟಾಗಿ ಹರಿದಿದೆ...
ಪ್ರಭಾಸ್, ನೋಡೋ ಇಲ್ಲಿ, ಹಿಪ್ಸ್ ಹತ್ರ
ಐಡಿಯಲ್ಲಾಗಿ ಫೇಡ್ ಆಗಿದೆ, ತುದಿಗಳು ಜೂಲುನಾಯಿ ಕಚ್ಚಿದಹಾಗೆ ಸಿಂಪ್ಲಿ ಸೂಪರ್ಬಾಗಿ ಹರಿದಿವೆ...
ವಾವ್! ತೊಡೆ ಭಾಗದಲ್ಲಿ ಸೊಳ್ಳೆಪರದೆ ತರಹ ಟೋರ್ನ್ ಆಗಿದೆ...’ ಗುಡ್ ಓಲ್ಡ್ ಕಾಲದ ಹೆಣ್ಣಿಗೆ ಚಿನ್ನ ತೆಗೆದುಕೊಟ್ಟರೆ
ಆಗುತ್ತಿದ್ದ ಸಂತೋಷಕ್ಕಿಂತ ಹೆಚ್ಚಿನ ಸಂತೋಷ, ಸಂಭ್ರಮ ಕಿರಣನ ದನಿಯಲ್ಲಿ,
ಮುಖದಲ್ಲಿ
ಗೋಚರಿಸುತ್ತಿದ್ದವು.
ಟ್ರಂಕಿನ
ಮೂಲೆಯಲ್ಲಿ ಕೆಂಪನೆಯ ವಸ್ತ್ರವೊಂದು ಕಾಣಿಸಿತು. ‘ಓಹ್! ಇದು ನನ್ನ ಬ್ಲೌಸ್ ಕಣೇ... ಆಗ ತ್ರೀ ಫೋರ್ತ್
ಅಂತ ಹೊಲೆಸ್ತಿದ್ವಿ. ಮುಂಗೈವರೆಗೆ ಬರೋದು. ನಿಮ್ತಾತ ಬಹಳ ರಸಿಕ. ನನ್ನ ಕೈಹಿಡಿದು ಡ್ಯುಯೆಟ್
ಹಾಡೋಣ ಬಾ ಅಂತ ಕರೆದ. ನನಗೋ ನಾಚಿಕೆ. ತಪ್ಪಿಸ್ಕೊಳಕ್ಕೇಂತ ಹೋದೆ. ಬ್ಲೌಸ್ ಹರಿದೇಹೋಯ್ತು. ಅವರ
ತುಂಟಾಟದ ನೆನಪಿಗೇಂತ ಇಟ್ಟಿದ್ದೆ’ ಈ ವಯಸ್ಸಿನಲ್ಲಿಯೂ ಕೆಂಪುಕೆಂಪಾಯಿತು ಅಜ್ಜಿ.
‘ಅಜ್ಜೀ... ಬ್ಲಷ್ ಮಾಡೋದನ್ನ ಹೇಳ್ಕೊಡು ಅಜ್ಜಿ ನನಗೂನೂ.... ಯಾರೇನೇ ಹೇಳಿದರೂ ನನ್ನ ಮುಖ
ಕೆಂಪೇ ಆಗಲ್ಲ ಗೊತ್ತಾ....’ ಪ್ಲೀಡ್ ಮಾಡಿಕೊಂಡಳು ಮಾಡ್ರನ್ ಮೊಮ್ಮಗಳು ಮಾಧುರಿ.
ಹಳೆಯ ಕಾಲದ ಬ್ಲೌಸ್
ಹೊರಬಂತು. ಎಡಗೈ ತೋಳು ಹರಿದಿತ್ತು. ಬೆನ್ನಿನ ಭಾಗದಲ್ಲಿ ನುಸಿಯಿಂದಲೋ, ರೇಷ್ಮೆ
ಹಳತಾದುದರಿಂದಲೋ, ಬಟ್ಟೆ ಮಾಯವಾಗಿ ದಾರದಷ್ಟು ಅಗಲ ಮಾತ್ರ ಉಳಿದಿತ್ತು.
‘ಆಗ ನಿನ್ನ ಮೆಷರ್‍ಮೆಂಟ್ಸ್ ಎಷ್ಟಿದ್ದವು ಅಂತ ನೆನಪಿದೆಯಾ ಅಜ್ಜಿ?’
‘ಹೆಣ್ಣಿಗೆ ತನ್ನ ಸೌಂದರ್ಯದ ನೆನಪಿರಲ್ವೇನೆ... ಚೆನ್ನಾಗೇ ನೆನಪಿದೆ. ಝೀನತ್ ಅಮಾನ್‍ಗಿಂತ
ತೆಳುವಾದ ಸೊಂಟ ಇತ್ತು ಕಣೇ ನನಗೆ...’ ಎಂದ ಅಜ್ಜಿ ತನ್ನ ಅಂದಿನ ಅಳತೆ ಹೇಳಿದಳು.
‘ಸಿಂಪ್ಲಿ ಆಸಮ್! ನನ್ನ ಸೈಝೂ ಅದೇ.... ಈ ಬ್ಯಾಕ್‍ಲೆಸ್ ಸೆಮಿಟೋರ್ನ್ ಬ್ಲೌಸ್ ನನಗಿರಲಿ’ ಎಂದಳು ಮಾಧುರಿ.
ಟ್ರಂಕಿನಿಂದ ತೆಗೆದ
ಪ್ರತಿ ಹರಕಲು, ಪರಕಲು, ಸವೆದದ್ದು, ಜಾಳಾದದ್ದು ಎಲ್ಲಕ್ಕೂ ಮೊಮ್ಮಕ್ಕಳಿಂದ ಡಿಮ್ಯಾಂಡ್ ಏರಿ ಏರಿ ಬಂದವು. ಒಂದೇ ಬಟ್ಟೆಯ ಬಗ್ಗೆ
ಇಬ್ಬರಲ್ಲಿ ಜಗಳ ಹತ್ತಿ, ಬಟ್ಟೆ ಹಿಡಿದು ಎಳೆದಾಡಿ, ‘ಫರ್ದರ್ ಟೋರ್ನ್’ ಬಟ್ಟೆ ಮತ್ತಷ್ಟು ಡಿಮ್ಯಾಂಡ್ ಪಡೆಯಿತು. ಟ್ರಂಕಿನಲ್ಲಿ
ಸೇರಿದ್ದ ಬಿಳಿ ಹುಳಗಳ ಬಾಯ್ವಾಡದಿಂದ (ಕೈವಾಡವೆನ್ನಲು ಅವಕ್ಕೆ ಕೈ ಇರುವುದಿಲ್ಲವಲ್ಲ!) ಟೀ
ಸೋಸುವ ಜಾಲರಿಯಂತಾದ ‘ಟಾಪ್’ ಅಂತೂ ಷೋಡಷಿ ಶಬ್ನಮ್‍ಗೆ ಬಹಳವೇ ಮೆಚ್ಚುಗೆಯಾಯಿತು. ಅಜ್ಜ
ಧರಿಸುತ್ತಿದ್ದ ಕೋಟಿನಲ್ಲಿ ಜಿರಳೆಗಳ ಪ್ರಭಾವದಿಂದ ಬುಲೆಟ್ ಹೋಲ್ಸ್‍ನಂತಹ ತೂತುಗಳು ಮೂಡಿದ್ದವು.
‘ಐ ವಿಲ್ ಯೂಸ್ ದಿಸ್
ಕೋಟ್ ಅ್ಯಸ್ ಎ ಸಿಂಗ್ಲೆಟ್’ ಎಂದ ಮೊಮ್ಮಗ ರಿಷಭ್. ಬೆಲ್ಟ್ ಆ್ಯಂಟಿಕ್ ಪೀಸ್ ಆಗಿ ಮೆಚ್ಚುಗೆ
ಗಳಿಸಿದರೆ, ಷೂಗಳನ್ನು ಮೂಸಿ
ನೋಡುತ್ತಾ ‘ಹೌ ರೊಮಾಂಟಿಕ್....
ಗೈಸ್ ವಿಲ್ ಸಿಂಪ್ಲಿ ಸ್ವೂನ್ ಓವರ್ ದಿಸ್’ ಎನ್ನುತ್ತಾ ಪ್ರಭಾಸನ ತಮ್ಮ ಪ್ರಭಂಜನ್ ಸೆವೆಂತ್
ಹೆವೆನ್‍ನಲ್ಲಿ ತೇಲಾಡಿದ. ಅಜ್ಜನ ಟೈ ಅನ್ನು ಪಿಂಕಿ ತನ್ನ ವೇಯ್ಸ್ಟ್ ಬೆಲ್ಟ್ ಆಗಿ ಧರಿಸುತ್ತೇನೆ
ಎಂದರೆ, ಮಾಧುರಿ ‘ನೋ... ಐ ವಿಲ್
ಯೂಸ್ ಇಟ್ ಆ್ಯಸ್ ಮೈ ಹೇರ್‍ಬ್ಯಾಂಡ್’ ಎನ್ನುತ್ತ ಕಿತ್ತುಕೊಂಡಳು. ಅಜ್ಜಿಯ ಒಂಬತ್ತು ಗಜದ ದಪ್ಪನೆಯ ರೇಷ್ಮೆ
ಸೀರೆ ಈಗ ಲಿವಿಂಗ್ ರೂಂನಲ್ಲಿ ಕಿಟಕಿಯ ಪರದೆಯಾಗಿ ಶೋಭಿಸುತ್ತಿದೆ. ಅಂದು ಅಜ್ಜಿ ಬಳಸಿ, ತುದಿ ಮುರಿದ, ಒಂದು ಹಲ್ಲು
ಕಿತ್ತುಹೋದ ಹೇರ್‍ಕ್ಲಿಪ್‍ಗಳು ‘ಮಾಡ್ರನ್ ಹೇರ್‍ಡೂ’ವಿನ ಅಂಗವಾಗಿ ರಾರಾಜಿಸುತ್ತಿವೆ.
ಆ, ಈ ವಸ್ತ್ರಗಳ ಮಾತು
ಅಂತಿರಲಿ, ಆ ಬಟ್ಟೆಗಳನ್ನು
ಕಟ್ಟಲೆಂದು ಬಳಸಿದ್ದ ಮೂರಿಂಚು ಅಗಲದ ನೈಲಾನ್ ಪಟ್ಟಿಗೂ ಈಗ ಡಿಮ್ಯಾಂಡ್... ಅದನ್ನು ಎರಡು
ತುಂಡಾಗಿಸಿ, ತುದಿಗಳನ್ನು ಮತ್ತೂ ತೆಳ್ಳಗಾಗಿಸಿ, ಬಿಕಿನಿಯಾಗಿ ಧರಿಸಲು ಅಮೆರಿಕದಿಂದ ಬಂದಿರುವ ಮೊಮ್ಮಗಳು
ಕೇಳುತ್ತಿದ್ದಾಳೆ!
ಅಂತೂ ಟ್ರಂಕ್ ಕಂಡ
ತಕ್ಷಣ ನಾನು ಹೇಳಿದ ಮಾತು ನಿಜವಾಯಿತು.
ಮೊಮ್ಮಕ್ಕಳಿಗೆ
ಭರ್ಜರಿ ನಿಧಿ ದೊರಕಿತು!
"ನಿಧಿ"ಯಲ್ಲಿನ ಹಾಸ್ಯ ಬ್ಲೌಸ್ ನೊಂದಿಗೆ ಶುರುವಾಗಿ ಬಿಕಿನಿಗೆ ತಂದು ನಿಲ್ಲಿಸಿದ್ದೀರಾ. ಅದೇನು ಕಲ್ಪನೆ ಸಾರ್ ನಿಮ್ಮದು.
ReplyDeleteಈ ರೀತಿಯ ತಿಳಿ ಹಾಸ್ಯ ಓದುವುದೂ ನಿಧಿ ದೊರತಂತೆಯೇ! 👏👏👏
ReplyDelete