ಬದಲಿ ಸಿಹಿಯ ಬಗ್ಗೆ ಕಹಿ ಸತ್ಯ


ಬದಲಿ ಸಿಹಿಯ ಬಗ್ಗೆ ಕಹಿ ಸತ್ಯ
Article by - Raji Jayadev, Accredited Practicing Dietitian, Sydney

                          ಕೃತಕ ಸಿಹಿಕಾರಕ ಅಥವಾ ಬದಲಿ ಸಿಹಿ/ಬದಲಿ ಸಕ್ಕರೆ (Artificial sweetener/Sugar substitute). ಇವುಗಳಿಂದ ನಮಗೆ ಪ್ರಯೋಜನವಿದೆಯೇ?

                                          ಮಾರ್ಕೆಟ್ಟಿನಲ್ಲಿ ಹಲವಾರು ಬದಲಿ ಸಕ್ಕರೆಗಳು ಲಭ್ಯವಿವೆ. ರಕ್ತದ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಅಥವಾ ತೂಕ ಇಳಿಸಿಕೊಳ್ಳಲು ಕ್ಯಾಲೋರಿಗಳಿರುವ ಸಕ್ಕರೆಯ ಬದಲು ಕ್ಯಾಲೋರಿಗಳಿಲ್ಲದ ಬದಲಿ ಸಕ್ಕರೆಯನ್ನು ಉಪಯೋಗಿಸಿ ಎಂಬ ವೈವಿದ್ಯಮಯ ಜಾಹೀರಾತು ಹಾಕುತ್ತಾರೆ. ಆದರೆ ಹೇಳಿಕೆ ನಿಜವೇ? ಅಥವಾ ಇವುಗಳ ಸೇವನೆಯಿಂದ  ಅಪಾಯವಿದೆಯೇ?  ಮೆಡ್ ಸ್ಕೇಪ್ಎಂಬ ಮೆಡಿಕಲ್ ಮ್ಯಾಗಜಿನ್ ನಲ್ಲಿ ಹೇಳಿದಂತೆ ಬದಲಿ ಸಕ್ಕರೆಗಳು, ಕುರಿಗಳ ದಿರಿಸಿನಲ್ಲಿರುವ ತೋಳಗಳೇ? ಈಗ ನೋಡೋಣ.


                                  ಮೊಟ್ಟಮೊದಲ ಬದಲಿ ಸಕ್ಕರೆ ಸ್ಯಾಕರಿನ್ (saccharin). ಡಯಾಬಿಟಿಸ್ ಇರುವ ಎಲ್ಲರೂ ಸ್ಯಾಕರಿನ್ ಉಪಯೋಗಿಸುತಿದ್ದರು. ಈಗ ಸನೆಟ್ (Sunett), ಈಕ್ವಲ್  (Equal), ಸ್ಪ್ಲೆಂಡಾ (Splenda), ಶುಗರ್ ಫ್ರೀ (Sugarfree), ನ್ಯಾಟ್ವಿಯಾ ಅಥವಾ ಸ್ಟೀವಿಯಾ (Natvia/Stevia) ಎಂಬ ಅನೇಕ ಬದಲಿ ಸಕ್ಕರೆಗಳು ಮಾರುಕಟ್ಟೆಯಲ್ಲಿವೆ. ಕೆಲವು ಬದಲಿ ಸಕ್ಕರೆಗಳನ್ನು ಸಿಹಿಪದಾರ್ಥಗಳನ್ನು ತಯಾರಿಸಲು ಕೂಡ ಉಪಯೋಗಿಸಬಹುದು. ಪ್ರಪಂಚದಾದ್ಯಂತ ಬಹಳಷ್ಟು ಮಂದಿ, ಡಯಾಬಿಟಿಸ್ ಇಲ್ಲದವರೂ, ದೇಹದ ತೂಕ ಹೆಚ್ಚಿಲ್ಲದವರೂ ಕೂಡ ಬದಲಿ ಸಕ್ಕರೆಯನ್ನು ಉಪಯೋಗಿಸುತಿದ್ದಾರೆ. ಕಾರಣ: ಸಕ್ಕರೆ ದೇಹದ ತೂಕವನ್ನು ಹೆಚ್ಚಿಸುತ್ತದೆ ಎಂಬ ಭಯ!
ನಾವು ಬದಲಿ ಸಕ್ಕರೆಯನ್ನು ಉಪಯೋಗಿಸೋದಿಲ್ಲ, ಸಕ್ಕರೆಯನ್ನೇ ಉಪಯೋಗಿಸುತ್ತೀವಿ ಎಂದು ನೀವು ಹೇಳಬಹುದು. ಆದರೆ ನಿಮಗರಿಯದೆ ನೀವು ಇವುಗಳನ್ನು ಸೇವಿಸುತ್ತಿರಬಹುದು. ಪ್ರಪಂಚದಲ್ಲೆಲ್ಲಾ ಅತಿ ಹೆಚ್ಚಾಗಿ  ಉಪಯೋಗಿಸಲ್ಪಡುವ  ಫುಡ್ ಅಡಿಟಿವ್ (food additive) ಯಾವುದು ಅಂದರೆ ಬದಲಿ ಸಕ್ಕರೆಗಳು. ಅನೇಕ ತಿಂಡಿ ತಿನುಸುಗಳಿಗೆ, ಪಾನೀಯಗಳಿಗೆ ಬದಲಿ ಸಕ್ಕರೆಯನ್ನು ಉಪಯೋಗಿಸುತ್ತಾರೆ. ಡಯಾಬಿಟಿಕ್ ಚಾಕೊಲೆಟ್ (Diabetic chocolate), ಡಯಟ್ ಜ್ಯಾಮ್ (diet jam), ಡಯಟ್ ಕೋಲಾ (diet cola), ಡಯಟ್ ಯೋಗರ್ಟ್  (diet yoghurt), ಫ್ಲೇವರ್ಡ್ ಯೋಗರ್ಟ್ (flavoured yoghurt), ಫ್ಲೇವರ್ಡ್ ಮಿಲ್ಕ್ (flavoured milk), ಶುಗರ್ ಫ್ರೀ ಬಿಸ್ಕೆಟ್ (sugar free biscuits), ಕೇಕ್ಸ್ (cakes) ಮುಂತಾದ ನೂರಾರು ಆಹಾರ ಪದಾರ್ಥಗಳಿಗೆ ಬದಲಿ ಸಕ್ಕರೆಗಳನ್ನು ಹಾಕಿರುತ್ತಾರೆ ಎಂದು ನಿಮಗೆ ಗೊತ್ತಿರಬಹುದು. ಆದರೆಡಯಟ್(diet), ಲೋ ಕ್ಯಾಲೋರಿ (low calorie), ಮತ್ತು ಶುಗರ್ ಫ್ರೀ (sugar free) ಎಂಬ ಲೇಬಲ್ ಇರದಿರುವ ಆಹಾರ ಪದಾರ್ಥಗಳಿಗೆ ಕೂಡ ಬದಲಿ ಸಕ್ಕರೆಗಳನ್ನು ಹಾಕಿರುತ್ತಾರೆ ಎಂದು ನಿಮಗೆ ಗೊತ್ತೇ? ಉದಾಹರಣೆಗೆ ಪ್ರೋಟೀನ್ ಶೇಕ್ಸ್, ಡ್ರಿಂಕ್ಸ್ ಇತ್ಯಾದಿ. ಅಷ್ಟೇ ಏಕೆ? ಒಮ್ಮೆ, ಬೆಂಗಳೂರಿನ ಒಂದು ಆಶ್ರಮದಲ್ಲಿರುವ,  ಆಯುರ್ವೇದದ ಉತ್ಪನ್ನಗಳನ್ನು ಮಾರುವ ಅಂಗಡಿಗೆ ಬೇಟಿ ಕೊಟ್ಟಿದ್ದೆ. ಒಂದು ಲೇಹದ ಪ್ಯಾಕೆಟ್ ಮೇಲಿನ ಪದಾರ್ಥಗಳ (ingredients) ಪಟ್ಟಿಯಲ್ಲಿ ಹೀಗಿತ್ತು: ಅಮ್ಲಾ (ನೆಲ್ಲಿಕಾಯಿ), ನೀಮ್ (ಬೇವು), ಬೇಸಿಲ್ (ತುಳಸಿ) ಇನ್ನೂ ಅನೇಕ ಗಿಡ ಮೂಲಿಕೆಗಳು, ಮತ್ತು ಕೊನೆಯಲ್ಲಿ ಸ್ವೀಟನರ್ (sweetener) ಎಂದಿತ್ತು. ಸಕ್ಕರೆಯಾಗಿದ್ದರೆ ಶುಗರ್ ಎಂದು  ಬರೆದಿರುತಿದ್ದರು,  ಸ್ವೀಟನರ್ (sweetener) ಎಂದಿರುವುದರಿಂದ ಅದು ಖಂಡಿತ ಬದಲಿ ಸಕ್ಕರೆ.
ಬದಲಿ ಸಕ್ಕರೆಗಳನ್ನು ಉಪಯೋಗಿಸುವುದರಿಂದ ಪ್ರಯೋಜನವಿದೆಯೇ?
ಬದಲಿ ಸಕ್ಕರೆಗಳನ್ನು ಉಪಯೋಗಿಸುವುದರಿಂದ ತೂಕವೂ ಇಳಿಯುವುದಿಲ್ಲ, ರಕ್ತದ ಸಕ್ಕರೆ ಅಂಶವನ್ನೂ ನಿಯಂತ್ರಣದಲ್ಲಿಡುವುದಕ್ಕಾಗುವುದಿಲ್ಲ ಎಂದು ಅನೇಕ ಅಧ್ಯಯನಗಳಿಂದ ಸಾಬೀತಾಗಿದೆ. ಮಾರ್ಕೆಟ್ಟಿನಲ್ಲಿ ಅನೇಕಾನೇಕ ಬದಲಿ ಸಕ್ಕರೆಗಳಿದ್ದರೂ, ಹೆಚ್ಚಿನ ಜನರು ಡಯಟ್/ಶುಗರ್ ಫ್ರೀ ಎಂಬ ಹಣೆಪಟ್ಟಿ ಹೊತ್ತ ಪದಾರ್ಥಗಳನ್ನು ಉಪಯೋಗಿಸುತ್ತಿದ್ದರೂ ಕೂಡ ಪ್ರಪಂಚದಲ್ಲೆಲ್ಲಾ ಡಯಾಬಿಟಿಸ್ ಮತ್ತು ಸ್ಥೂಲಕಾಯತೆಯ (obesity) ಪ್ರಮಾಣ ಹೆಚ್ಚುತ್ತಲೇ ಇದೆ. ಇದಕ್ಕೆ ಒಂದು ಕಾರಣ: ಸಕ್ಕರೆರಹಿತ (sugar free), ಸಕ್ಕರೆ ಹಾಕಿಲ್ಲ (no added sugar) ಅಂದರೆ ಕ್ಯಾಲೋರಿಗಳೇ ಇಲ್ಲ (calorie free) ಎಂದು ತಿಳಿದು, ಸಕ್ಕರೆರಹಿತ (sugar free) ಎಂಬ ಹಣೆಪಟ್ಟಿ ಹೊತ್ತ ಆಹಾರ ಪದಾರ್ಥಗಳನ್ನು (ಕೇಕ್ಸ್, ಬಿಸ್ಕಿಟ್ಸ್) ಹೆಚ್ಚು ಸೇವಿಸುವುದು.  ಹಲವಾರು ಅಧ್ಯಯನಗಳಲ್ಲಿ ಸಾಬೀತಾಗಿರುವುದೆನೆಂದರೆ, ಬದಲಿ ಸಿಹಿಕಾರಕಗಳನ್ನು ಉಪಯೋಗಿಸುವವರಿಗೆ ಸಕ್ಕರೆ ಉಪಯೋಗಿಸುವವರಿಗಿಂತ ಹೆಚ್ಚು ಹಸಿವಾಗುತ್ತದೆ ಮತ್ತು ಡಯಾಬಿಟಿಸ್ ಇರುವವರಲ್ಲಿ  ಬದಲಿ ಸಿಹಿಕಾರಕಗಳು ರಕ್ತದ ಸಕ್ಕರೆಯ ಅಂಶವನ್ನು ಹೆಚ್ಚಿಸುತ್ತವೆ ಎಂದು,
ಬದಲಿ ಸಕ್ಕರೆಗಳನ್ನು ಉಪಯೋಗಿಸುವುದರಿಂದ ಅಪಾಯವಿದೆಯೇ?
ಹಲವಾರು ಸಂಶೋಧನೆಗಳಿಂದ ಮತ್ತು ಅಧ್ಯಯನಗಳಿಂದ ಬದಲಿ ಸಕ್ಕರೆಗಳನ್ನು ಉಪಯೋಗಿಸುವುದು ಡಯಾಬಿಟಿಸ್, ಹೃದಯರೋಗಗಳು, ಕ್ಯಾನ್ಸರ್ ಮತ್ತು ಜೀರ್ಣಾಂಗಕ್ಕೆ ಸಂಬಂದಿಸಿದ ಅನೇಕ ಖಾಯಿಲೆಗಳಿಗೆ ಒಂದು ಕಾರಣ ಎಂದು ಸಾಬೀತಾಗಿದೆ. ನಮ್ಮ ಜೀರ್ಣಾಂಗದಲ್ಲಿ ಸ್ನೇಹಿತ/ಒಳ್ಳೆಯ ಬ್ಯಾಕ್ಟೀರಿಯಾ, ಅಸ್ನೇಹಿತ/ಕೆಟ್ಟ ಬ್ಯಾಕ್ಟೀರಿಯಾಗಳಿರುತ್ತವೆ. ಕೆಟ್ಟ ಬ್ಯಾಕ್ಟೀರಿಯಾಗಳ ಸಂಖ್ಯೆ ಜಾಸ್ತಿಯಾಗಿ, ಒಳ್ಳೆಯ ಬ್ಯಾಕ್ಟೀರಿಯಾಗಳ ಸಂಖ್ಯೆ ಕಡಿಮೆಯಾದರೆ ಹಲವಾರು ರೋಗಗಳು ಉಂಟಾಗುತ್ತವೆ. ಬದಲಿ ಸಕ್ಕರೆಗಳು ಅಸ್ನೇಹಿತ/ಕೆಟ್ಟ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ಹೆಚ್ಚಿಸುತ್ತವೆ ಎಂದು ಅನೇಕ ಸಂಶೋಧನೆಗಳಿಂದ ದೃಢಪಡಿಸಲಾಗಿದೆ.
ಬದಲಿ ಸಕ್ಕರೆಯನ್ನು ಉಪಯೋಗಿಸುವುದರಿಂದ ಆರೋಗ್ಯಕ್ಕೆ ಅಪಾಯವಿದೆ. ಆರೋಗ್ಯಕರ ಆಹಾರ ಸೇವನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. ದಿನಕ್ಕೆ ನಾಲ್ಕಾರು ಟೀ ಸ್ಪೂನ್ ಗಳಿಗಿಂತ ಹೆಚ್ಚು ಸಕ್ಕರೆಯನ್ನು ಉಪಯೋಗಿಸಬೇಡಿ. ಹೆಚ್ಚು ಕೊಬ್ಬು ಮತ್ತು ಸಕ್ಕರೆಯುಳ್ಳ ತಿನಿಸುಗಳ ಮತ್ತು ಪಾನೀಯಗಳ ಸೇವನೆಯನ್ನು ಮಿತಿಯಲ್ಲಿಡಿ.

Comments

  1. Many thanks smt Raji Madam. This is very informative.I just bought some recently and just chucked them in the bin after reading this article. thanks again. I shall pass this information to all of my friends.

    ReplyDelete
  2. ಈ ಲೇಖನ ಬಹುಜನರಿಗೆ ಉಪಯೋಗಕಾರಿಯಾಗಿದೆ. ಬದಲಿ ಸಿಹಿಯ ಬಗ್ಗೆ ನಮಗೆ ಇಷ್ಟು ಮುಖ್ಯ ವಿಷಯ ನಮ್ಮ ಭಾಷೆಯಲ್ಲೇ ತಿಳಿಸಿಕೊಟ್ಟಿದ್ದಕ್ಕೆ ನಮ್ಮೆಲ್ಲರ ಪರವಾಗಿ ಧನ್ಯವಾದಗಳು.

    ReplyDelete
  3. Very useful information.. Thanks so much for scientifically explaining it..

    ReplyDelete
  4. Thanks to all of you for your comments. wishing you all health and happiness, Rajeshwari

    ReplyDelete

Post a Comment