ಖನ್ನಢಮ್ಮಣ ಅಬ್ಬ...


ಖನ್ನಢಮ್ಮಣ ಅಬ್ಬ...
ಹಾಸ್ಯ ಲೇಖನ - ಅಣುಕು ರಾಮನಾಥ್ 

                    ಲೇಟ್ ಲತೀಫ್ ಗೊತ್ತಲ್ಲ ನಿಮಗೆ. ಅವನಿಗೆ ಲೇಟಾಗಿ ಹೋದುದಕ್ಕೆ ಎಂದೂ ಬೇಸರವಿರಲಿಲ್ಲ. ‘ಕಾಯ್ತಾರೇ ಬಿಡೋಎಂಬುದೇ ಧೋರಣೆ. ಆದರೆ ಅವನ ಮಗನದು?
ಅಬ್ಬ, ಝರಾ ಜಲ್ದೀ ಜಾವೋ ನಾ... ನನಗೆ ನಿನ್ನನ್ನ ಜನರು ಲೇಟ್ ಲತೀಫ್ ಅನ್ನೋದು ಬಹಳ ಕಷ್ಟ, ಸಂಕಟ ಆಗತ್ತೆಮಗ ಇಮ್ರಾನ್ ನುಡಿದ.
ನಾನು ಲೇಟಾಗಿ ಹೋದರೆ ನಿನಗೇನು ಕಷ್ಟಾನೋ?’
ಅಪ್ಲಿಕೇಷನ್ನಲ್ಲಿ ಇಮ್ರಾನ್, ಸನ್ ಆಫ್ ಲೇಟ್ ಲತೀಫ್, ಅಂತ ಬರೀಬೇಕಲ್ಲಪ್ಪ... ಲೇಟ್ ಅಂದ್ರೆಹೋಗ್ಬಿಟ್ರುಅನ್ನೋ ಅರ್ಥ ಬರತ್ತಲ್ಲ... ಹಾಗೆ ಬರೆಯಕ್ಕೆ ನನಗೆ ಸಂಕಟ ಆಗತ್ತಪ್ಪಮಗ ಅಲವತ್ತುಕೊಂಡ.
ಲತೀಫನನ್ನು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕರೆದರು. ಸತ್ತರೂ ಹೋಗದ ಹುಟ್ಟುಗುಣ ಸಮ್ಮೇಳನಕ್ಕೆ ಕರೆದಾಗ ಹೋದೀತೇ? ಕೋಳಿ ಕೂಗುವ ಸಮಯಕ್ಕೆ ಬಾರಯ್ಯ ಎಂದರೆ ಗೂಬೆ ಏಳುವ ಸಮಯಕ್ಕೆ ಬಂದ.
ಯಾಕೋ ಲೇಟು?’
ಅದು ನಮ್ಮ ಪರಂಪರೆ
ಅಲ್ಲ. ಇದು ನನ್ನ ಹೆಸರಿಗೆ ಕಳಂಕ ತರಲು ನೀಡಿದ ಹೇಳಿಕೆಎಂದರಂತೆ ಉಪಮುಖ್ಯಮಂತ್ರಿ ಪರಂ. ಆದರೆ ಸಮಯಕ್ಕೆ ಸರಿಯಾಗಿ ಕನ್ನಡದ ಕಹಳೆಯನ್ನು ಯಾರೋ ಊದಿದ್ದರಿಂದ ಇವರ ಕೂಗು ಸಮ್ಮಿಶ್ರದಲ್ಲಿ ಮುಚ್ಚಿಹೋಯಿತಂತೆ.
ಕನ್ನಡದ ಜಾತ್ರೆ ನಡೆಯುತ್ತಿತ್ತು.  

ಎಟ್ ಎನಿ ಕಾಸ್ಟ್ ವಿ ವಾಂಟ್ ಕನ್ನಡಎಂದು ಸ್ಕ್ರೀಮಿದನೊಬ್ಬಪಾಸಾಪಿಮಾನಿ’. ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದರ ಹಿನ್ನೆಲೆಯೇ ಬಲು ಚೆನ್ನ.
ಸಮ್ಮೇಳನ ಕಂಡಕ್ಟ್ ಮಾಡ್ತಿದೀವಿ. ಸ್ಟಾಲ್ ಹಾಕ್ತೀರಾ ಸಾರ್?’ ಪ್ರಕಾಶಕರನ್ನು ಕೇಳಿದವರು ಮತ್ತಾರೂ ಅಲ್ಲ, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳೇ. ‘ಸ್ಟಾಲ್ಗೆಮಳಿಗೆಎನ್ನಲು ಪರಿಷತ್ತಿನಧಿಕಾರಿಗೇ ಮೈಲಿಗೆ!
ಸಮ್ಮೇಳನಗಳು ಎಲ್ಲೆಲ್ಲೋ ಎಂದೆಂದೋ ನಡೆದಿವೆ. ಧಾರವಾಡವೆಂದಮೇಲೆ ಭಾಷೆಯ ಸವಿಗೆ ಕೊರತೆಯೇ ಇರದೆಂಬುದು ನಿಶ್ಚಿತವಲ್ಲವೆ! ಧಾರವಾಡದ ಕುಂದ, ಕರದಂಟು, ಲೈನ್ ಬಝಾರ್ ಪೇಡಗಳನ್ನು ಸವಿಸವಿಯುತ್ತಾ ನುಡಿಯುವಾಗ ಎಲ್ಲ ಸೊಲ್ಲೂ ಜೇನ್ನುಡಿಯೇ. ಅದಕ್ಕೆ ಸಾಕ್ಷಿ? ‘ಲೈನ್ಇಂಗ್ಲಿಷ್, ‘ಬಝಾರ್ಉರ್ದು,  ಪೇಡಹಿಂದಿ. ಮೂರೂ ಸೇರಿದಾಗಕನ್ನಡದ ಸಿಹಿಆಗಿರುವುದೇ ಸರ್ವಭಾಷೆಯೂ ಧಾರವಾಡದಲ್ಲಿ ಕನ್ನಡವಾಗಿ ಕನ್ವರ್ಟ್ ಆಗಿ ನುಡಿನಲಿವನ್ನು ಹೊಮ್ಮಿಸಿತ್ತದಂತೆ.
ಕನ್ನಡ ಸಮ್ಮೇಳನದಲ್ಲಿ ಎಲ್ಲೆಲ್ಲೂ ಚೂಡಾ, ಬೋಂಡಾ, ಇತರೆ ತಿನಿಸುಗಳ ಅಂಗಡಿಗಳೋ ಅಂಗಡಿಗಳು. ಅಂಗಡಿಗಳಾಗಸಕ್ಕೆ ಹೋಲಿಸಿದರೆ ಮಬ್ಬು ಆಗಸದಲ್ಲಿ ಅಲ್ಲಲ್ಲಿ ಮಿನುಗುವ ಅಂಗಡಿಗಳು ಕನ್ನಡದ ಪುಸ್ತಕದ ಮಳಿಗೆಗಳು. ಮಳಿಗೆಗಳ ಸಂದಿಯಿಂದ ಮೈಕ್ ಹಿಡಿದ ಕೈಯೊಂದು ತೂರಿಬಂತು.
ಕನ್ನಡಮ್ಮನ ತೇರನ್ನು ಹೆಳೆಯುವ ಹೀ ಅಬ್ಬಕ್ಕೆ ಬಂದಿರುವ ನಿಮಗೇ ಹೇನೆನಿಸುತ್ತದೆಎಂದಳುಭಾಷಾಮಾಲಿನ್ಯಕ್ಕೆ ಶಕ್ತಿಮೀರಿ ಕೊಡುಗೆ ನೀಡಿರುವ ಟಿವಿ ನಿರೂಪಕಿ.
ಈಗಲೂ ಕನ್ನಡಮ್ಮನಿಗೆ ತೇರೇ ಏಕೆ? ಕನ್ನಡಮ್ಮನನ್ನು ಮರ್ಸಿಡಿಸ್ ಬೆಂಝಲ್ಲೋ, ಖಾಸಗಿ ಬುಲೆಟ್ ಟ್ರೈನಲ್ಲೋ ಕರೆದೊಯ್ದು ಮೆರೆಸಲು ಇದೇ ಸುಸಮಯ
ಔದು. ಲತೀಪೌರು ಕನ್ನಡ ಮರೆಸಲು ಇದೇ ಸುಸಮಯ ಅಂತಿದಾರೆಎಂದು ಮೈಕಿನಲ್ಲಿ ಅರಚಿದಳು ನಿರೂಪಕಿ.
ನಿರೂಪಕಿಯ ಭುಜ ತಟ್ಟಿ ಗಮನ ಸೆಳೆಯಲು ಯತ್ನಿಸಿದ ಲತೀಫನಿಗೆಡೋಂಟ್ ಟಚ್ ಹರ್. ಬೆರಳು ಸೋಕಿದರೂ ಮೀ ಟೂ ಎಂದಾಳು ಎಚ್ಚರಎಂದು ಯಾರೋ ಸಹೃದಯಿ ಎಚ್ಚರಿಸಿದಳು. ಹೆಣ್ಣಿನ ಬಗ್ಗೆ ಹೆಣ್ಣಲ್ಲದೆ ಮತ್ತಾರು ಅರಿತಾರು.
ಲತೀಫ್ ದನಿಯೇರಿಸಿಕನ್ನಡ ಮೆರೆಸಲು ಎಂದದ್ದು... ಮರೆಸಲು ಅಲ್ಲಎಂದ.
ಔದೌದು. ಹದೇ ನಾನೂ ಏಳಿದ್ದುಎಂದು ಸಮರ್ಥಿಸಿಕೊಂಡ ಆಕೆಇಂಗ್ಲಿಷ್ ಬೇಕೋ ಬೇಡವೋ?’ ಎಂದು ಮತ್ತೊಂದು ಪ್ರಶ್ನೆ ಎಸೆದಳು.
ಇರಲಿಎಂದಾಕ್ಷಣಬ್ರೇಕಿಂಗ್ ನೂಸ್... ಖನ್ನಡದ ಕೆಟ್ಟಾಳು.... ಸ್ಸಾರಿ.... ಕಟ್ಟಾಳು ಆದ ಲತೀಪೌರು ಇಂಗ್ಲಿಷ್ ಇರಲಿ ಎಂದು ಸಮ್ಮೇಳನದಲ್ಲಿ ಏಳಿದ್ದಾರೆ. ಖನ್ನಡಮ್ಮನಿಗೆ ಖನ್ನಡ ಸಮ್ಮೇಳನದಲ್ಲೇ ಹವಾಮಾನ...’ ಎನ್ನುತ್ತಿದ್ದಂತೆಯೇಮೀಟೂ ಬಿ ಡ್ಯಾಮ್ಡ್ಎನ್ನುತ್ತಾ ಆಕೆಯ ಕೈಹಿಡಿದು, ಮೈಕ್ ತನ್ನತ್ತ ತಿರುಗಿಸಿಕೊಂಡುಬಡಾವಣೆಯ ನಿರ್ಮಿಪುದಕೆ ಮುಖ್ಯರಸ್ತೆಯೊಡನೆ ಬೇಕು ಅಡ್ಡರಸ್ತೆ. ಜೀವನದ ಬಡಾವಣೆಗೆ ಕನ್ನಡವೇ ಮುಖ್ಯರಸ್ತೆ, ಇತರ ಭಾಷೆಗಳು ಅಡ್ಡರಸ್ತೆ. ಇಂಗ್ಲಿಷ್ ಬೇಕು. ಆದರೆ ಅಡ್ಡರಸ್ತೆಯಾಗಿಎಂದು ತನ್ನ ನಿಲುವನ್ನು ಸಮರ್ಥಿಸಿಕೊಂಡ. ಕೈಯಲ್ಲಿ ಕಲ್ಲು ಹಿಡಿದು ಲತೀಫನ್ ಬುರುಡೆಗೆ ಗುರಿ ಇಟ್ಟಿದ್ದ ಕನ್ನಡದಉಟ್ಟು ಓರಾಟಗಾರನೊಬ್ಬಛೆ! ಒಂದು ಕ್ಷಣ ತಡ ಮಾಡಿದ್ದಿದ್ದರೆ ಅಶ್ಮಕ್ಷಿಪಣಿ ಪ್ರಯೋಗಿಸಬಹುದಿತ್ತು. ಕನ್ನಡ ಮುಖ್ಯರಸ್ತೆಯೆಂದು ಬಚಾವಾಗಿಬಿಟ್ಟಎಂದು ಗೊಣಗುತ್ತಾ ಅಶ್ಮಾಸ್ತ್ರತ್ಯಾಗ ಮಾಡಿದ.
ಲತೀಫ ಹೇಳಿಕೇಳಿ ಕವಿ. ಅದರಲ್ಲೂ ಚುಟುಕು ಕವಿ. ಇರಲೆರಡು ಪದ ಪ್ರಾಸ ಹನಿಕನವನಕಿಲ್ಲ ತ್ರಾಸ ಎನ್ನುವುದೇ ಅವನ ವೇದವಾಕ್ಯ. ಆರು ಮಂದಿ ಕವಿಗಳ ಪೈಕಿ ಇವನೂ ರಂಗವೇರಿದ.
ಎಲ್ಲೆಲ್ಲು ಸಾಫ್ಟ್ವೇರು ಅಲ್ಲಲ್ಲಿ ಹಾರ್ಡ್ವೇರು
ಕನ್ನಡವ ಹುಡುಕಿದೆನು ಹಿಯರ್ ದೇರ್ ಸಮ್ವೇರು
ಆದರೂ ಸಿಗಲಿಲ್ಲ ಎನಿವೇರು ಕನ್ನಡಿಗನೆ ಬೀವೇರು
ಎಂದನೊಬ್ಬ ಮಾಡ್ರನ್ ಕವಿ.
ಕುಂದ ಕರದಂಟ್ ಧಾರ್ವಾಡ
ಕನ್ನಡ ಬೇಡ ಅನಬೇಡ
ಲೈನ್ ಬಝಾರಿನ ಸಿಹಿಪೇಡ
ಎಮ್ಮಯ ಕನ್ನಡ ನುಡಿ ನೋಡ
ಎಂದ ಹನಿ-ಚುಟುಕು-ಮಿನಿ ಕವಿ.
ಕನ್ನಡದ ರಸ್ತೆಯಲಿ ತಮಿಳ್ತೆಲುಗು ಪಾಟ್ಹೋಲು
ಫಾಸ್ಟಾಗಿ ಹೋಗಲಡ್ಡಿ ಹಿಂದಿ ಇಂಗ್ಲಿಷ್ ಹಂಪುಗಳು
ಸಾಹಿತ್ಯ ಜಾತ್ರೆಯಲಿ ಕನ್ನಡವ ಕೇಳುವೆವು
ಬೆಂಗ್ಳೂರು ತಲುಪುತಲೆ ಎಲ್ಲವನು ಮರೆಯುವೆವು
ವಾಸ್ತವವನ್ನು ತೆರೆದಿಟ್ಟ ಬೆಂಗಳೂರಿನ ಕವಿ.
ಲತೀಫನ ಸರದಿ ಬಂತು.
ಕಟ್ಟಿ ಕನ್ನಡವೆಂದು ಕುಟ್ಟಿದರೆ ಮೇಜನ್ನು
ಕುಟ್ಟೆಹುಳ ಹಿಡಿದಂತೆ ಉದುರೀತು ಹಲಗೆ
ಮಟ್ಟವರಿತಾಡುತಿಹ ಮೇಷ್ಟ್ರುಗಳ ವಾಚಕರ
ದಟ್ಟಣೆಯ ನಿರಮಿಸಲು ಇಂದೆ ಸತ್ಕಾಲವೈ
ಕವನ ಮಂಡಿಸಿ ಅತ್ತಿತ್ತ ನೋಡಿದ ಲತೀಫ್. ಸಾಹಿತ್ಯ ಸಮ್ಮೇಳನಕ್ಕೆ ಮೇಜುಗಳನ್ನು ಒದಗಿಸಿದ್ದ ಕಂಟ್ರಾಕ್ಟರ್ ವೇದಿಕೆಯ ಮೇಲಿದ್ದವರಿಗೆ ಅದೇನೋ ಸನ್ನೆ ಮಾಡಿದ. ಲತೀಫನನ್ನು ಕೂಡಲೆ ಹೊರಕ್ಕೆ ಕರೆತರಲಾಯಿತು. ‘ಟೇಬಲ್ ಲೋ ಕ್ವಾಲಿಟಿ ಅಂತ ಕವನ ಬರೀತೀಯಾ? ನಿನಗೇನು ಗೊತ್ತು ಎಷ್ಟು ಕಿಕ್ಬ್ಯಾಕ್ ಕೊಡಬೇಕೂಂತ. ನಿಕಲ್ ಜಾ ಯಹಾ ಸೇಕುಂಭಕರ್ಣ-ಕೀಚಕರ ಕೊಲಾಬೊರೇಷನ್ನಂತಿದ್ದ ಒಬ್ಬ ದಾಂಡಿಗ ತೋಳೇರಿಸಿ ನುಡಿದ.
ನಾನು ಹೇಳಹೊರಟಿದ್ದೂ...’ ಎಂದು ಉತ್ತರಿಸಹೊರಟ ಲತೀಫ್. ‘ಛುಪ್! ಮೊದಲೇ ಲೇಟ್ ಲತೀಫ್. ಕನ್ನಡದಲ್ಲೂ ದಿವಂಗತ ಲತೀಫ್ ಅನ್ನಿಸಿಕೊಳ್ಳಬೇಕಾದರೆ ಮಾತನಾಡುಎಂದು ಬ್ರೇಕಿಂಗ್ ನ್ಯೂಸ್ ರೀಡರ್ನಷ್ಟು ಕೀರಲು ದನಿಯಲ್ಲಿ ಅರಚಿದ ಧಡಿಯ.
ವೇದಿಕೆಯ ಆಸೆ ಬಿಟ್ಟು ಸಮ್ಮೇಳನದ ಜನರ ಮಧ್ಯದಲ್ಲಿ ತೂರಿ ಅವರ ಮಾತುಗಳನ್ನು ಕೇಳುತ್ತಾ ಕುಳಿತ ಲತೀಫ್.
ಮೈ ಸನ್ ಈಸ್ ಇನ್ ನ್ಯೂ ಹೊರೈಝನ್ ಸ್ಕೂಲ್. ಡಾಟರ್ ಈಸ್ ಇನ್ ಸೇಂಟ್ ಬರ್ನಾಡ್ರ್ಸ್ಎಂದನೊಬ್ಬ ಪ್ರಖ್ಯಾತ ಕನ್ನಡ ಸಾಹಿತಿ.
ಕನ್ನಡದ ಶಾಲೆಗೇಕೆ ಸೇರಿಸಲಿಲ್ಲ?’ ಕನ್ನಡದ ಮಣ್ಣ ವಾಸನೆ ಹೊಂದಿರುವ ಕವನ ಬರೆವ ಕವಿ ಕೇಳಿದ.
ವಾಟ್ ನಾನ್ಸೆನ್ಸ್. ನೀವು ಕೈಲಾಸಂ ಕೃತಿಗಳನ್ನು ಓದಿಲ್ಲವೇನು? ‘ಡೂ ಆ್ಯಸ್ ಸೇ ಮೈ ಬಾಯ್ ಅಂಡ್ ನಾಟ್ ಆ್ಯಸ್ ಡೂಅನ್ನೋದು ಕಾಲದಂತೆ ಕಾಲಕ್ಕೂ ಪರ್ಟಿನೆಂಟೇ. ಹೇಳಿದ್ದನ್ನೇ ನಾವೂ ಆಚರಿಸಬೇಕಂದ್ರೆ ಹೇಗೆ? ಹೈ ಲೆವೆಲ್ ಪೀಠ ಸಿಗಕ್ಕೆ ಇಂಗ್ಲಿಷ್ ಬೇಕಲ್ಲ. ಕನ್ನಡದಲ್ಲಿ ಜ್ಞಾನ, ಇಂಗ್ಲಿಷ್ನಲ್ಲಿ ಪೀಠ. ಜ್ಞಾನವೇ ಬೇರೆ, ಪೀಠವೇ ಬೇರೆಎಂದನೊಬ್ಬ ಬುದ್ಧಿಜೀವಿ.
ಸಮ್ಮೇಳನ ಅಂತೂ ಇಂತೂ ಮುಗಿಯುವ ಹಂತಕ್ಕೆ ಬಂತು. ಕನ್ನಡದ ಹಬ್ಬದಲ್ಲಿ ಹೊಟೇಲ್ ಹಾಕಿದ್ದವರು ಪದಾರ್ಥ ಖಾಲಿ ಮಾಡಿ, ಪರ್ಸ್ ಫುಲ್ ಮಾಡಿಕೊಂಡು ತೆರಳಿದರು.
ಕನ್ನಡದ ಪ್ರಕಾಶಕರು ಪರ್ಸ್ ಖಾಲಿ ಮಾಡಿಕೊಂಡು ಪದಾರ್ಥ ತುಂಬಿಕೊಂಡು ಹೊರಬಿದ್ದರು

Comments

  1. ‘ಮೈ ಸನ್ ಈಸ್ ಇನ್ ನ್ಯೂ ಹೊರೈಝನ್ ಸ್ಕೂಲ್. ಡಾಟರ್ ಈಸ್ ಇನ್ ...... ನೂರು ನೂರು ಸತ್ಯ ನುಡಿ, ಹಾಸ್ಯದ ಲೇಪನ ಕೊಟ್ತು ಸರಿಯಾಗಿ ಹೇಳಿದ್ದೀರಿ ರಾಮನಾಥ್ ಸಾರ್

    ReplyDelete

Post a Comment